Wednesday, March 3, 2010

ನೀರ ಕಾರಣದಿಂದ ಊರು ದಾರಿಗೆ ಬಂತು

ವರದು ರಾಜಸ್ಥಾನದ ರಜಪೂತ ಮನೆತನ. ಹಾಗೆ ನೋಡಿದರೆ ಲಕ್ಷ್ಮಣ್ ಸಿಂಗ್ ಎಂಬ ರಾಜವಂಶಸ್ಥರ ಉತ್ತರಾಕಾರಿ ಕಾಲಮೇಲೆ ಕಾಲು ಹಾಕಿಕೊಂಡು ದರ್ಬಾರು ನಡೆಸಬಹುದಿತ್ತು. ಇವತ್ತು ಅವರನ್ನು ನೋಡಿದರೆ ಒಬ್ಬ ಸಾಮಾನ್ಯ ರೈತನಿಗಿಂತ ಹೆಚ್ಚೇನೂ ಆಡಂಬರವಿಲ್ಲದ ಅತ್ಯಂತ ಸರಳ ಬದುಕನ್ನು ಅವರು ಬದುಕುತ್ತಿದ್ದಾರೆ. ಅದು ಅವರ ಸ್ವಯಂ ನಿರ್ಧಾರದ ಆಯ್ಕೆ. ಲಾಪೋಡಿಯಾದ ಸುತ್ತಮುತ್ತಲಿನ ಬರೋಬ್ಬರಿ ೮೦ ಗ್ರಾಮಗಳ ಜಹಗೀರುದಾರಿಕೆ ಅವರ ಮನೆತನಕ್ಕಿತ್ತು. ತೀರಾ ಇತ್ತೀಚೆಗೆ ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳವರೆಗೂ (೧೯೫೦ರವರೆಗೂ) ಅವರ ತಂದೆ ಜಹಗೀರರಾಗಿಯೇ ಇದ್ದವರು. ಇಂದಿಗೂ ಆ ಮನೆತನದ ಮಟ್ಟಿಗೆ ಸುತ್ತಮುತ್ತಲಿನ ಹಳ್ಳಿಗರಲ್ಲಿ ‘ನಮ್ಮ ಒಡೆಯರು’ ಎಂಬ ಸ್ವಾಮಿಭಕ್ತಿ ಮುಂದುವರಿದಿದೆ. ಹಾಗೆ ಪಾಳೇಗಾರಿಕೆ ಮಾಡಿಕೊಂಡು ಇದ್ದು ಬಿಡಲು ಲಕ್ಷ್ಮಣ್ ಸಿಂಗ್ ಮನಸ್ಸು ಅದೇಕೋ ಒಪ್ಪಲೇ ಇಲ್ಲ. ಮುಖದಲ್ಲಿ ಸದಾ ಸುಳಿದಾಡುತ್ತಿರುವ ಬಿಚ್ಚು ನಗೆ. ಅವರ ಮನಸ್ಸಿನಷ್ಟೇ ನಿರ್ಮಲವಾದ ಅಚ್ಚ ಬಿಳಿಯ ಒಂದು ಪಕ್ಕಾ ಖಾದಿಯ ಅಂಗಿ, ಅಂಥದೇ ಒಂದು ಪೈಜಾಮು ಇವು ಬಿಟ್ಟರೆ ಉಳಿದಾವ ಗತ್ತು ಗೈರತ್ತುಗಳೂ ಆ ಮುತ್ತಿನಂಥಾ ವ್ಯಕ್ತಿತ್ವದಲ್ಲಿ ಹುಡುಕಿದರೂ ನಿಮಗೆ ಸಿಗಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿತ್ವ, ಅವರ ದಿಟ್ಟ ನಿಲುವು, ಅವರ ತತ್ವ ಸಿದ್ಧಾಂತ, ಸಂಘಟನಾ ಚಾತುರ್ಯ, ದೂರದರ್ಶಿತ್ವ, ಮಾನವೀಯ ಅಂಶಗಳು ಮಾತ್ರ ರಾಜವಂಶದ ಹೆಸರು ಹೇಳಿಸುತ್ತವೆ.

ಇಷ್ಟು ಹೇಳಿಬಿಟ್ಟರೆ ಅವರು ಎಂಥ ಮನೆತನದ ಹಿನ್ನೆಲೆಯುಳ್ಳವರು ಎಂಬುದು ಬಹುಶಃ ಸ್ಪಷ್ಟಗೊಳ್ಳಲಿಕ್ಕಿಲ್ಲ. ಅದು ಲಕ್ಷ್ಮಣ್ ಸಿಂಗ್‌ರ ಅಜ್ಜನ ಆಡಳಿತದ ಕಾಲ. ಲಾಪೋಡಿಯಾ ಮಧ್ಯಭಾಗದಲ್ಲೊಂದು ಭವ್ಯ ಅಂತಸ್ತಿನ ಕಟ್ಟಡ. ಜಹಗೀರುದಾರರು ಎಂದ ಮೇಲೆ ಹಾಗೂ ಇಲ್ಲದಿದ್ದರೆ. ಅದನ್ನವರು ರಾಜಸ್ಥಾನಿ ಭಾಷೆಯಲ್ಲಿ ಬಸ್ತಿಗಳು ಎನ್ನುತ್ತಾರೆ. ಅದು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಯಾವುದೇ ಸಮಯವಿರಬಹುದು. ಜಹಗೀರುದಾರರು ಆಹಾರ ಸೇವನೆಗೆ ಹೋರಡುವ ಮುನ್ನ ಬಸ್ತಿಗಳ ಮೇಲೆ ಉಪ್ಪರಿಗೆಗೆ ಬಂದು ನಿಲ್ಲುತ್ತಿದ್ದರು. ಅಲ್ಲಿಂದ ನಿಂತು ಕೂಗಿದರೆ ಸರ್ವೇಸಾಮಾನ್ಯ ಇಡೀ ಊರಿಗೆ ಕೇಳುತ್ತಿತ್ತು. ಹಾಗೆ ಬಂದು ನಿಂತ ಜಹಗೀರುದಾರರು ‘ಕೋಯಿ ಭೂಕಾ ಹೈ...?’(ಯಾರಾದರೂ ಹಸಿದಿದ್ದೀರಾ ?) ಎಂದೊಮ್ಮೆ ಗಟ್ಟಿ ಸ್ವರದಲ್ಲಿ ಕೇಳುತ್ತಿದ್ದರು. ಯಾರಿಂದಲೂ ಹಸಿದ ಸ್ವರ ಕೇಳಿಸದಿದ್ದರೆ ಮಾತ್ರವೇ ಅವರು ಊಟಕ್ಕೆ ತೆರಳುತ್ತಿದ್ದುದು. ಒಂದೊಮ್ಮೆ ಯಾರೊಬ್ಬರು ಹಸಿದ ಹೊಟ್ಟೆಯಲ್ಲಿದ್ದರೂ ಅವರಿಗೆ ಉಣಬಡಿಸಿದ ಮೇಲೆಯೇ ಜಹಗೀರುದಾರರ ಊಟ. ಯಜಮಾನ ಎಂಬ ಪದಕ್ಕೆ ಇದಲ್ಲವೇ ಅನ್ವರ್ಥ ?


ಇಂಥ ಸಂಸ್ಕೃತಿಯನ್ನು ನೋಡಿಕೊಂಡೇ ಬೆಳೆದವರು ನಮ್ಮ ಹೀರೋ ಲಕ್ಷ್ಮಣ್ ಸಿಂಗ್. ಊರಿನಲ್ಲಾದರೂ ಅಷ್ಟೇ. ಯಾವುದಕ್ಕೂ ಕೊರತೆ ಇಲ್ಲ ಎನ್ನುವಂಥ ನೆಮ್ಮದಿ. ಸದಾ ಸಮೃದ್ಧಿಯಿಂದ ತುಂಬಿ ತುಳುಕುವ ತಾಲಾಬ್‌ಗಳು. ಬೀಳುವ ಸರಾಸರಿ ೩೦೦-೩೫೦ ಮಿಲಿಮೀಟರ್‌ನಷ್ಟು ಮಳೆಯನ್ನೇ ತಾಲಾಬ್‌ಗಳಲ್ಲಿ ಹಿಡಿದಿಟ್ಟುಕೊಂಡು ಇಡೀ ವರ್ಷ ನಿರ್ವಹಿಸಿಕೊಳ್ಳುವ ಜಾಣ್ಮೆ. ಇರುವ ಜಮೀನಿನಲ್ಲೇ ಮೈ ಮುರಿದು ತಿನ್ನುವ ಜಾಯಮಾನ. ಕೆರೆ ಕಟ್ಟೆಗಳು, ಅರಣ್ಯ ಗುಡ್ಡಗಳು, ಪ್ರಾಣಿಪಕ್ಷಿಗಳನ್ನೊಳಗೊಂಡು ನಿಸರ್ಗವೇ ದೇವರೆಂದು ಪೂಜಿಸುವ ಸಾಂಸ್ಕೃತಿಕ ಶ್ರೀಮಂತಿಕೆ. ಗೋವುಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾಳಜಿ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬಿ ಬದುಕನ್ನೇ ತತ್ತ್ವವನ್ನಾಗಿಸಿಕೊಂಡ ಸದಾಚಾರ ಇವು ಒಂದು ಕಾಲದ ಲಾಪೋಡಿಯಾ ಅಂದರೆ ನೆನಪಿಗೆ ಬರುತ್ತಿದ್ದ ಅಂಶಗಳು. ಅದನ್ನೇ ಮಾದರಿಯಾಗಿಟ್ಟುಕೊಂಡು ಬದುಕಿನ ಕಲ್ಪನೆಯನ್ನು ರೂಪಿಸಿಕೊಂಡಿದ್ದ ಲಕ್ಷ್ಮಣ್ ಸಿಂಗ್ ಜೈಪುರಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ್ದವರು.


ಅದೇನು ದರಿದ್ರ ಗಳಿಗೆಯೋ ಇಡೀ ಲಾಪೋಡಿಯಾಕ್ಕೆ ಲಾಪೋಡಿಯಾದ ಬದುಕೇ ಬೋರಲು ಬಿದ್ದುಬಿಟ್ಟಿತು. ಸ್ವಾಂತಂತ್ರ್ಯಾನಂತರದ ಪ್ರಜಾಪ್ರಭುತ್ವದಲ್ಲಿ ಜಾಗೀರುದಾರಿಕೆ ಅರ್ಥ ಕಳೆದುಕೊಂಡಿತ್ತು. ಅದರ ಜತೆಯಲ್ಲೇ ಆ ಮನೆತನದಲ್ಲಿದ್ದ ನೈತಿಕತೆಯೂ ನೆಲಕಚ್ಚಿತ್ತು. ಹಿಂದೆಯೇ ಸಮುದಾಯದ ಕಲ್ಪನೆಯೂ ಸಾಯಲಾರಂಭಿಸಿತು. ಸ್ವಾವಲಂಬಿ ಗ್ರಾಮಗಳು ನಿಶ್ಯಕ್ತವಾಗತೊಡಗಿದವು. ಒಂದು ರೀತಿಯಲ್ಲಿ ಹಳ್ಳಿಗರ ಬದುಕು ಹಳ್ಳ ಹಿಡಿಯಿತು. ಅಪರಾಧ ಹೆಚ್ಚಿತು. ಕೊಲೆ ಸುಲಿಗೆಗಳು ಮನೆ ಮಾತಾಯಿತು. ಎಲ್ಲೆಲ್ಲೂ ಹಾಹಾಕಾರ, ಹಸಿವು. ಕಾದು ಕಂಗಾಲಾದ ಬದುಕಿನ ನಿರ್ವಹಣೆಯೇ ಸಾಧ್ಯವಾಗದ ಸ್ಥಿತಿಯಲ್ಲಿ ಜನ ಪಕ್ಕದ ಊರುಗಳಿಗೆ ಗುಳೇ ಹೊರಟರು. ಜಾನುವಾರುಗಳು ಎಲ್ಲೆಂದರಲ್ಲಿ ಸತ್ತುಬಿದ್ದವು. ಅಳಿದುಳಿದವನ್ನು ಸಾಕಲಾಗದ ಮಂದಿ ಅವನ್ನೇ ಮಾರಿ ಬಂದಷ್ಟು ದಿನ ಉಂಡು ತೇಗಿದರು. ಊರಿನ ಸುತ್ತಮುತ್ತಲ ಪ್ರದೇಶದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದ ಶೇ.೭೫ರಷ್ಟು ಜೀವ ಸಮೂಹ ನೆರೆಯ ರಾಜ್ಯಗಳಿಗೆ ವಲಸೆ ಹೋಯಿತು. ಒಟ್ಟಾರೆ ಲಕಲಕಿಸುತ್ತಿದ್ದ ಲಾಪೋಡಿಯಾ ಎಂದರೆ ಸ್ಮಶಾನ ಸದೃಶತೆಗೆ ಸಾಕ್ಷಿಯಾಯಿತು. ಇವೆಲ್ಲಕ್ಕೂ ಮೂಲ ಕಾರಣ ಊರಿನ ಪ್ರಮುಖ ನೀರಾಧಾರವಾಗಿದ್ದ ಅನ್ನ ಸಾಗರ್ ಎಂಬ ಬೃಹತ್ ತಾಲಾಬ್ ಒಂದು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡ ಘಟನೆ ಎಂದರೆ ನೀವು ನಂಬುತ್ತೀರಾ ?
ಇದನ್ನು ನಂಬಿ ಬಿಡಿ, ಇಂಥ ಘೋರ ಸತ್ಯ ಲಕ್ಷ್ಮಣ್ ಸಿಂಗ್ ಮತ್ತವರ ಜಲಯೋಧರಿಗೆ ಮನವರಿಕೆಯಾದದ್ದರಿಂದಲೇ ಅವರು ಶಿಕ್ಷಣವನ್ನು ೧೦ನೇ ತರಗತಿಯಲ್ಲಿದ್ದಾಗಲೇ ಅರ್ಧಕ್ಕೇ ನಿಲ್ಲಿಸಿ ತಮ್ಮ ಬದುಕನ್ನೇ ನೀರಿನ ಕಾಯಕಕ್ಕೆ ಮುಡುಪಾಗಿಟ್ಟರು. ಇಡೀ ಊರಿನ ಸಾಂಸ್ಕೃತಿಕ ಪರಂಪರೆಗೆ, ನೆಮ್ಮದಿಗೆ ಬೇಲಿಯಾಗಿರಬೇಕಿದ್ದ ತಮ್ಮ ಮನೆತನದ ಹಿರಿಯರೇ ಅದಕ್ಕೆ ಕಂಟಕರಾದದ್ದನ್ನು ಲಕ್ಷ್ಮಣ್‌ಗೆ ಅರಗಿಸಿಕೊಳ್ಳಲಾಗಲಿಲ್ಲ.


ಅವತ್ತು ದೀಪಾವಳಿ, ಊರಿಗೆ ರಜೆಗೆಂದು ಬಂದಿದ್ದ ಲಕ್ಷ್ಮಣ್ ಸಿಂಗ್ ಗಮನ ಸೆಳೆದದ್ದು ಒಂದು ಪುಟ್ಟ ಘಟನೆ. ಹಬ್ಬದ ಸಡಗರದ ನಡುವೆಯೂ ಊರಿನ ಜಮೀನು ಒತ್ತುವರಿಯ ವ್ಯಾಜ್ಯವೊಂದು ಮನೆಯ ಜಗುಲಿ ಹತ್ತಿತ್ತು. ಜಹಗೀರದಾರರಾಗಿದ್ದ ಲಕ್ಷ್ಮಣ್‌ರ ತಂದೆ, ಪಂಚಾಯಿತಿ ನಡೆಸಿ ಒತ್ತುವರಿದಾರ ೨೦೦ ರೂ. ಪರಿಹಾರಧನವನ್ನು ಕೊಡಬೇಕೆಂದು ತೀರ್ಪ ನೀಡಿದರು. ಆತನೇನೋ ಅದನ್ನು ಕೆಲ ದಿನಗಳಲ್ಲೇ ಪಂಚಾಯಿತಿದಾರರಿಗೆ ಕೊಟ್ಟು ಬಿಟ್ಟ. ಆದರೆ ನಿಜವಾದ ಸಂತ್ರಸ್ತನಿಗೆ ತಲುಪಲೇ ಇಲ್ಲ. ದಿನಗಳು ಕಳೆಯುತ್ತಲೇ ಇತ್ತು. ವಾಯಿದೆಯಂತೆ ಪ್ರತಿ ಹತ್ತು ದಿನಗಳಿಗೊಮ್ಮೆ ಊರ ಹಿರಿಯರ ಮನೆ ಬಾಗಿಲಿಗೆ ಆತ ತಿರುಗುವದಾಯಿತೇ ವಿನಃ ಪ್ರಯೋಜನವಾಗಲಿಲ್ಲ. ಇದನ್ನು ಗಮನಿಸಿದ್ದ ಲಕ್ಷ್ಮಣ್ ಸಿಂಗ್ ತಾವೇ ಸ್ವತಃ ಪರಿಹಾರ ಮೊತ್ತವನ್ನು ಸಂತ್ರಸ್ತನಿಗೆ ಕೊಟ್ಟು, ವ್ಯವಸ್ಥೆಯ ವಿರುದ್ಧ ಸಿಡಿದು ನಿಂತರು. ಅವತ್ತು ಊರಿನ ಬದುಕಿನ ಪುನರ್‌ಸ್ಥಾಪನೆಯ ಪಣತೊಟ್ಟು ಹೊರಟರು.


೧೯೭೫ರಲ್ಲಿ ಐವರು ಯುವಕರ ಪುಟ್ಟ ಪಡೆ ಗ್ರಾಮೀಣ ವಿಕಾಸ ನವಯುವಕ ಮಂಡಲ ಲಾಪೋಡಿಯಾದಲ್ಲಿ ಅಸ್ತಿತ್ವಕ್ಕೆ ಬಂದಿತು. ಊರಿನ ಸಮಸ್ಯೆಯ ಬೇರುಗಳನ್ನು ಅರಿಯುವುದು ಮಂಡಲದ ಮೊದಲ ಆದ್ಯತೆಯಾಯಿತು. ಊರೂರು ಸುತ್ತಿದ ಲಕ್ಷ್ಮಣ್‌ಗೆ ನೀರಿನ ನಿರ್ವಹಣೆಯಲ್ಲಿ ಎಡವಿದ್ದೇ ಬದುಕು ಹಾದಿಬಿಟ್ಟಿದ್ದಕ್ಕೆ ಕಾರಣ ಎಂಬ ಅಂಶ ಗಮನಕ್ಕೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಸಮುದಾಯದ ಹಿಡಿತದಲ್ಲಿದ್ದ ನೀರು ನಿರ್ವಹಣಾ ವ್ಯವಸ್ಥೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸರಕಾರಿ ವ್ಯವಸ್ಥೆಯಡಿ ಬಂದತ್ತು. ಅಲ್ಲಿಯೇ ದೋಷ ಇಣುಕಲಾರಂಭಿಸಿದ್ದು. ಇಡೀ ಊರಿನ ಜಲಾಶ್ರಯ ತಾಣವಾಗಿದ್ದ ಅನ್ನ ಸಾಗರ್ ಅದೊಂದು ಮಳೆಗಾಲದಲ್ಲಿ ಒಡ್ಡು ಒಡೆದು ಇಡೀ ಊರಿನ ಬದುಕೇ ಕೊಚ್ಚಿಕೊಂಡು ಹೋಗಿತ್ತು. ಅಂದಿನಿಂದ ಗ್ರಾಮಕ್ಕೆ ಕಾಲಿಟ್ಟ ದಾರಿದ್ರ್ಯವೇ ಇಂದಿಗೂ ತಾಂಡವವಾಡುತ್ತಿದೆ ಎಂಬುದನ್ನು ಮನಗಂಡ ಲಕ್ಷ್ಮಣ್‌ರ ಸಾರಥ್ಯದ ಜಲಯೋಧರ ಪಡೆ ಆ ತಾಲಾಬ್ ಅನ್ನು ಮರು ನಿರ್ಮಿಸುವುದರೊಂದಿಗೆ ಇಡೀ ಜನಜೀವನವನ್ನು ಪುನರ್ ನಿರ್ಮಿಸುವ ಸಂಕಲ್ಪಕ್ಕೆ ಬಂದಿತು.


ಗ್ರಾಮದಲ್ಲಿ ಮೊದಲಿದ್ದ ನೀರ ಸಂಸ್ಕೃತಿಯ ಆಧಾರದಲ್ಲೇ ಜೀವನ ಸಂಸ್ಕೃತಿಯನ್ನು ಚಿಗುರಿಸಬೇಕೆಂಬ ದೃಢ ನಿರ್ಧಾರ ಅವರದ್ದಾಗಿತ್ತು. ಇದಕ್ಕಾಗಿ ಹಳ್ಳಿಹಳ್ಳಿಗಳ ಮನೆಮನೆಯ ಬಾಗಿಲಿಗೆ ಹೋದರು. ಊರವರಲ್ಲಿ ಅದರಲ್ಲೂ ಯುವಕರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು. ನಿಸರ್ಗವನ್ನು ಗೌರವಿಸದೇ ಬದುಕು ಹಸನಾಗಲು ಸಾಧ್ಯವೇ ಇಲ್ಲ. ಶಿಕ್ಷಣವಿಲ್ಲದೇ ಸಮಾಜದ ಸುಧಾರಣೆ ಕಾಣಲು ಆಗುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು. ಎಂದಿನಂತೆ ವಿರೋಧ ವ್ಯಕ್ತವಾಯಿತಾದರೂ ಮತ್ತೆ ಹಿಂದಿನ ನೆಮ್ಮದಿಯ ಕನಸು ಕಂಡ ಮನಸ್ಸುಗಳೆದುರು ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಮೊದಲು ಐದಾರು ಗ್ರಾಮಗಳಲ್ಲಿ ಸುತ್ತಿದಾಗ ಇಂಥ ಕಹಿಘಟನೆಗಳು ಅನುಭವಕ್ಕೆ ಬಂದರೂ ಜಲಯೋಧರಲ್ಲಿನ ಪ್ರಾಮಾಣಿಕತೆಯಿಂದ ಅಂಥವು ಪುನರಾವರ್ತನೆ ಆಗಲಿಲ್ಲ. ಪಡೆ ಬೆಳೆಯುತ್ತ ಹೋಯಿತು. ಇಬ್ಬರಿದ್ದ ಪಡೆ ೭೦ಕ್ಕೆ ಏರಿತು. ಎಲ್ಲರೂ ಗುಂಪುಗಳಲ್ಲಿ ಪ್ರತಿದಿನ ಮುಂಜಾವು ಹೊರಟರೆ ಮನೆ ಸೇರುತ್ತಿದ್ದುದು ಹೊತ್ತು ಮುಳುಗಿದ ಮೇಲೆಯೇ. ಹೋದಲ್ಲೆಲ್ಲ ನೀರ ಸಂಸ್ಕೃತಿ ಬಿತ್ತುವ ಮಾತುಗಳಿಂದಲೇ ಬೋಧನೆ ಆರಂಭ. ರಾತ್ರಿ ಮುಂದಿನ ರೂಪುರೇಷೆಯ ಬಗೆಗೆ ಚರ್ಚೆ. ನಡುವೊಂದಿಷ್ಟು ಅಧ್ಯಯನ. ಬೇರೆ ಬೇರೆ ಯಶೋಗಾಥೆಗಳ ಅವಲೋಕನ. ಅಗತ್ಯವೆನಿಸಿದ ಸ್ಥಳಗಳಿಗೆ ಭೇಟಿ. ತಜ್ಞರೊಂದಿಗೆ ಚರ್ಚೆ. ಅದರ ಫಲವಾಗಿ ಸುತ್ತಲಿನ ೪೦ ಗ್ರಾಮಗಳಲ್ಲಿ ಸಂಘಟನೆಗಳಾದವು. ಜಲಯೋಧರ ಪಡೆಯಲ್ಲಿ ಈಗ ೨ ಸಾವಿರ ಸ್ವಯಂ ಸೇವಕರಿದ್ದರು. ಶ್ರಮದಾನದ ಮೂಲಕವೇ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಲು ನಿರ್ಧಾರವಾಯಿತು. ನಾಲ್ಕು ಸಾವಿರ ಕೈಗಳು ಗುದ್ದಲಿ, ಪಿಕಾಸಿ ಹಿಡಿದು ಸಜ್ಜಾದವು. ಒಡೆದು ಹೋಗಿದ್ದ ಬೃಹತ್ ಅನ್ನ ಸಾಗರದ ಒಡ್ಡು ಸತತ ಮಾನವ ಶ್ರಮದಿಂದ ಮತ್ತೆ ಎದ್ದು ನಿಂತದ್ದು ಜಾದೂ ಆಲ್ಲ. ಅದು ಲಕ್ಷ್ಮಣ್ ಸಿಂಗ್ ಎಂಬ ಪ್ರಬಲ ಇಚ್ಛಾ ಶಕ್ತಿಯುಳ್ಳ ವ್ಯಕ್ತಿಯ ದೂರದೃಷ್ಟಿಯ ಪರಿಣಾಮ.


ಅಲ್ಲಿಂದ ಬದಲಾಗಲಾರಂಭಿಸಿದ ಲಾಪೋಡಿಯಾ ಇಂದು ಸಮುದಾಯ ಆಧಾರಿತ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ಜಗತ್ತಿಗೇ ಮಾದರಿಯಾಗಿ ನಿಂತಿದೆ.


‘ಲಾಸ್ಟ್’ಡ್ರಾಪ್: ಸಹಭಾಗಿತ್ವ, ವಿಕಾಸ ಹಾಗೂ ಶಾಂತಿ ಇವು ಲಾಪೋಡಿಯಾ ದ ವೀರ ಜಲಸೇನಾನಿ ಲಕ್ಷ್ಮಣ್‌ಸಿಂಗ್‌ರ ಯಶಸ್ಸಿನ ಮೂಲ ಮಂತ್ರ. ಗಾಂ ಹೇಳಿದ್ದೂ ಇದನ್ನೇ ಅಲ್ಲವೇ ?

No comments: