Monday, March 15, 2010

ರಜಪೂತರ ಕುಡಿ ಕಟ್ಟಿದ ಜಲಯೋಧರ ಸೇನೆ

ನಮ್ಮೊಳಗೆ ನಾನೂ ಒಬ್ಬ. ಇದು ನನ್ನೊಬ್ಬನಿಂದಾದ ಕೆಲಸವಲ್ಲ. ಆದರೆ ಇದು ನಾನೇ ಮಾಡಬೇಕಾದದ್ದು. ನಾನಲ್ಲದೇ ಇದನ್ನು ಮಾಡುವವರು ಬೇರಾರೂ ಇಲ್ಲ. ನಾನೇ ಇದನ್ನು ಆರಂಭಿಸಬೇಕು. ಆದರೆ ನನ್ನಿಂದಲೇ ಆಗುತ್ತದೆ ಎಂದೇನೂ ಇಲ್ಲ. ನಾನಿಲ್ಲದಿದ್ದರೂ ಇದು ಆಗುವುದರಲ್ಲಿ ಅನುಮಾನವಿಲ್ಲ. ಅದರಲ್ಲಿ ’ನಾನು’ ಎಂಬುದು ತೀರಾ ನಗಣ್ಯ. ಹೀಗಿದ್ದೂ ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುವುದಿಲ್ಲ. ನಾವೆಲ್ಲರೂ ಸೇರಿಯೇ ಇದನ್ನು ತಲೆ ಕಾಣಿಸಬೇಕು. ನನ್ನೊಬ್ಬನಿಗಾಗಿ ಇದನ್ನು ಮಾಡುವುದಲ್ಲ. ನಮ್ಮೆಲ್ಲರಿಗಾಗಿ ನಾನು ಮಾಡಬೇಕಾದದ್ದನ್ನು ಬೇರೆಯವರು ಮಾಡಲಿ ಎಂದು ಬಯಸುವುದು ಎಷ್ಟು ಸರಿ...
ಲಾಪೋಡಿಯಾದ ನೀರಸಾಧಕ ಲಕ್ಷ್ಮಣ್ ಸಿಂಗ್ ಹೇಳುತ್ತಾ ಹೋಗುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತವೆ. ಅವರೊಳಗಿರಬಹುದಾದ ತತ್ತ್ವಜ್ಞಾನಿಯ ದರ್ಶನವಾಗುತ್ತದೆ. ಆತ ಬರೀ ಸಾಧಕನಲ್ಲ. ಮಹಾನ್ ತಪಸ್ವಿಯಾಗಿ ಗೋಚರಿಸುತ್ತಾರೆ. ಒಬ್ಬ ಯೋಗಿಯ ದೃಢತೆಗೆ ಪ್ರತೀಕವಾಗುತ್ತಾರೆ. ಶಾಂತಿಯ ಅವಧೂತನಂತೆ ಕಂಗೊಳಿಸುತ್ತಾರೆ. ಸತ್ಯ- ಅಹಿಂಸೆಗಳಿಗೆ ಮೂರ್ತ ಸ್ವರೂಪ ಕಟ್ಟಿಕೊಡುತ್ತಾರೆ. ಒಟ್ಟಾರೆ ಗಾಂ, ಬುದ್ಧ, ಪರಮಹಂಸ, ವಿವೇಕ ಇವೆಲ್ಲರ ತತ್ತ್ವಾಧಾರಿತ ಸಂಮಿಳಿತ ಸ್ವರೂಪದಲ್ಲಿ ಲಕ್ಷ್ಮಣ್ ನಿಲ್ಲುತ್ತಾರೆ. ಅವರನ್ನು ಭೇಟಿಯಾದರೆ, ಮಾತನಾಡಿಸಿದರೆ ಇದಾವುದೂ ಉತ್ಪ್ರೇಕ್ಷೆ ಅನ್ನಿಸುವ ಪ್ರಮೇಯವೇ ಇಲ್ಲ.
ಅದು ಯಾವುದೇ ಅಭಿವೃದ್ಧಿ ಇರಬಹುದು, ಜನರಿಂದ, ಅವರ ಸಹಭಾಗಿತ್ವದಿಂದ ನಡೆದಾಗಲೇ ಅದಕ್ಕೊಂದು ಅರ್ಥ. ಅದೇ ನಿಜವಾದ ಯಶಸ್ಸು- ಲಕ್ಷ್ಮಣ್‌ರ ಯಶಸ್ಸಿನ ಗುಟ್ಟೇ ಇದು. ‘ಜನರೂ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ಜನರಲ್ಲಿ ಇದು ನಮ್ಮದೇ ಕೆಲಸ, ಇದು ನಮಗಾಗಿ ನಾವು ಮಾಡಿಕೊಳ್ಳುವುದು, ಇದರ ಸಂಪೂರ್ಣ ಯಶಸ್ಸು ನಮಗೇ ಸಿಗಬೇಕು ನಮ್ಮ ಸ್ವ ಪ್ರಯತ್ನದಿಂದ ನಮ್ಮ ಊರು ಅಭಿವೃದ್ಧಿ ಹೊಂದಬೇಕು ಎಂಬ ಮನೋಭಾವ ನೆಲೆಗೊಂಡಲ್ಲಿ ಮಾತ್ರ ಸುಸ್ಥಿರತೆಯನ್ನು ಸಾಸಲಾಗುತ್ತದೆ ಎಂಬ ನಂಬಿಕೆಯೇ ಲಾಪೋಡಿಯಾದ ದಿಕ್ಕನ್ನೇ ಬದಲಿಸಿತು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು.
ನಮಗಾಗಿ ನಮ್ಮಿಂದ- ಪ್ರತಿಯೊಬ್ಬರೂ ಇಂಥ ಮನೋಭಾವದಿಂದಲೇ ಕಣಕ್ಕಿಳಿದಾಗ ಮಾತ್ರವೇ ಯಾವುದೇ ಸಾಧನೆ ಸಾಧ್ಯವಾಗುತ್ತದೆ. ಅಂಥ ವಿನೀತ ಭಾವದಿಂದಲೇ ಲಾಪೋಡಿಯಾದ ಸ್ಥಿತಿಯನ್ನು ಬದಲಿಸುವ ನಿರ್ಧಾರಕ್ಕೆ ಅಡಿ ಇಟ್ಟದ್ದು. ಅಲ್ಲಿನ ಜನರಿಗೆ ಹೇಳಿದ್ದೂ ಇದನ್ನೇ. ಮುಖ್ಯವಾಗಿ ಯುವಜನರ ಸಂಘಟನೆ ಮಾಡಿದ್ದು ಇದೇ ತತ್ತ್ವದ ಆಧಾರದ ಮೇಲೆಯೇ. ಅದೇನೂ ಸಣ್ಣ ಮಾತಾಗಿರಲಿಲ್ಲ. ಸಂಪೂರ್ಣ ದಾರಿದ್ರ್ಯಕ್ಕೆ ಒಳಗಾಗಿದ್ದ ಹಳ್ಳಿಗರ ಮನಃಸ್ಥಿತಿಯನ್ನು ಬದಲಿಸುವುದು ತಾಲಾಬ್‌ಗಳ ಪುನಶ್ಚೇತನಕ್ಕಿಂತ ಹೆಚ್ಚಿನ ದುಃಸ್ಸಾಹಸವಾಗಿತ್ತು.

ಹಾಗೆಂದು ಯಾವುದೋ ಹೊರಗಿನ ನೆರವನ್ನು ಪಡೆದೋ, ಸರಕಾರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡೋ ತಾಲಾಬ್ ಅನ್ನು ಕಟ್ಟಿಬಿಡುತ್ತೇನೆ, ಊರಿನ ಅಭಿವೃದ್ಧಿ ಮಾಡಿಬಿಡುತ್ತೇನೆ ಎಂಬುದು ಕೇವಲ ಭ್ರಮೆಯಾಗಿತ್ತು. ಹಾಗೊಮ್ಮೆ ಆಗುವುದಿದ್ದರೆ ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ ಊರಿನ ಸ್ಥಿತಿ ಬದಲಾಗಿ ಯಾವುದೋ ಕಾಲವಾಗಿರುತ್ತಿತ್ತು. ಹಾಗಾಗಲಿಲ್ಲ ಎಂದರೆ ಅಲ್ಲಿ ಆಗಬೇಕಿದ್ದುದು ಬೇರೆಯೇ ಇತ್ತು. ನಿಜವಾಗಿ ನಾವಲ್ಲಿ ಕಟ್ಟಬೇಕಿದ್ದುದು ತಾಲಾಬ್ ಅನ್ನು ಮಾತ್ರವಲ್ಲ. ಮನಸ್ಸುಗಳನ್ನು ಕಟ್ಟಬೇಕಿತ್ತು. ಸಂಸ್ಕೃತಿಯನ್ನು ಜೋಡಿಸಬೇಕಿತ್ತು. ಬಂಜೆ ಭೂಮಿಯಲ್ಲಿ ಮತ್ತೆ ಬಯಕೆಯನ್ನು ಚಿಗುರಿಸಬೇಕಿತ್ತು. ಹಳ್ಳಹಿಡಿದಿದ್ದ ಪರಿಸರವನ್ನು ಪುನಶ್ಚೇತನಗೊಳಿಸಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಊರು ತೊರೆದು ಹೋದ ಪ್ರತೀ ಜೀವಿಯಲ್ಲೂ ‘ಇದು ನಮ್ಮೂರು’ ಎಂಬ ಮಮಕಾರವನ್ನು ಮೂಡಿಸಿ ಮರಳಿ ಕರೆತರಬೇಕಿತ್ತು. ಬದುಕಿನ ಅನಿಶ್ಚಿತತೆಯನ್ನು ಹೊಡೆದೋಡಿಸಬೇಕಿತ್ತು-ಲಕ್ಷ್ಮಣ್ ವಿವರಿಸುತ್ತಾ ಹೋಗುತ್ತಿದ್ದರೆ ಅಲ್ಲಿನ ಕರಾಳ ಚಿತ್ರಣ ತೆರೆದುಕೊಳ್ಳುತ್ತ ಹೋಗುತ್ತದೆ. ನೀರೊಂದು ಹಾದಿ ತಪ್ಪಿದರೆ ಇಡೀ ಬದುಕು ಹೇಗೆ ಹಳ್ಳ ಹಿಡಿದು ಹೋಗುತ್ತದೆ ಎಂಬುದಕ್ಕೆ ಲಾಪೋಡಿಯಾ ಪ್ರತ್ಯಕ್ಷ ಸಾಕ್ಷಿಯಾಗಿತ್ತು.
ಇವೆಲ್ಲದಕ್ಕಾಗಿ ಬದುಕು ಸವೆಸಲು ಒಂದಷ್ಟು ಮಂದಿ ಸಂಘಟಿತರಾಗಲೇಬೇಕಿತ್ತು. ಸಂಘಟನೆಗೆ ಮೂಲಾಧಾರವಾಗಬಹುದಾದದ್ದು ಜಾಗೃತಿ. ಜತೆಗೆ ಒತ್ತುವರಿ ಮತ್ತಿತರೆ ನೂರಾರು ಕಾರಣಗಳಿಂದ ಒಡೆದು ಹೋಗಿದ್ದ ಗ್ರಾಮದ ಮನಸ್ಸುಗಳನ್ನೂ ಒಂದುಗೂಡಿಸುವುದಕ್ಕೆ ವ್ಯವಸ್ಥಿತ ಸಾಂಸ್ಥಿಕ ಸ್ವರೂಪಗಳು ಮೈದಳೆಯುವುದು ಅತ್ಯವಶ್ಯಕ ಎನಿಸಿತು. ಸರಕಾರಿ ಛತ್ರದಡಿಯ ಪಂಚಾಯಿತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಹವಣಿಸುವ ಪಟ್ಟ ಭದ್ರರು, ಭ್ರಷ್ಟಾಚಾರಿಗಳ ತಾಣವಾಗಿತ್ತು. ನಮ್ಮ ಕೆಲಸ ಆರಂಭವಾಗುತ್ತಿದ್ದಂತೆಯೇ ವಿರೋಧ ಬಂದದ್ದೇ ಇಂಥವರಿಂದ. ಸ್ವಾಭಾವಿಕ ಅರಣ್ಯವನ್ನೂ ಬಿಡದೇ ಒತ್ತುವರಿ ಮಾಡಿಕೊಂಡಿದ್ದ ಮಂದಿ ಇವರ ಬೆಂಬಲಕ್ಕೆ ನಿಂತರು. ಇದಕ್ಕೆ ಪ್ರತ್ಯಸ್ತ್ರವಾಗಿ ಮೊದಲಿಗೆ ನಾವು ಪ್ರಯೋಗಿಸಿದ್ದು ಗ್ರಾಮ ಸಮಿತಿಗಳ ಬಲವೃದ್ಧಿ. ಸ್ಥಳೀಯರನ್ನು ಒಳಗೊಂಡ ನೈಜ ಪ್ರಜಾ ಪ್ರತಿನಿಗಳನ್ನು ಆಡಳಿತ ವ್ಯವಸ್ಥೆಗೆ ಎಲ್ಲ ಅಕಾರವನ್ನು ಹಸ್ತಾಂತರಿಸುವಂತೆ ಮಾಡಲಾಯಿತು. ಒಮ್ಮೆ ಗ್ರಾಮ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶ್ರಮದಾನಕ್ಕೆ ಜನರನ್ನು ಒಗ್ಗೂಡಿಸುವ ಹೊಣೆಯನ್ನು ಅವುಗಳಿಗೊಪ್ಪಿಸಲಾಯಿತು. ಮುಂದಿನದು ಕಷ್ಟವಾಗಲಿಲ್ಲ- ಲಕ್ಷ್ಮಣ್ ಹಳೆಯ ಹರಸಾಹಸವನ್ನು ನೆನೆದು ಒಮ್ಮೆ ನಿಟ್ಟುಸಿರು ಬಿಟ್ಟರು.


ಮುಂದಿನ ಸವಾಲು ಊರಿನ ಯುವಬಲ ಸೂಕ್ತ ದಿಕ್ಕಿನಲ್ಲಿ ಹರಿಯುವಂತೆ ಮಾಡುವುದು. ಗ್ರಾಮೀಣ ಯುವಕರೇ ಅವರ ಒಟ್ಟಾರೆ ಯಶೋಗಾಥೆಯ ಸರದಾರರು. ಒಂದು ವರ್ಷದಲ್ಲಿ ೩೦ ಯುವಕ ಮಂಡಲಗಳನ್ನು ಲಕ್ಷ್ಮಣ್ ಸಿಂಗ್ ಅಸ್ತಿತ್ವಕ್ಕೆ ತಂದಿದ್ದರು. ಆನಂತರ ಸುತ್ತಲಿನ ೪೨ ಹಳ್ಳಿಗಳಿಗೆ ಅದು ವಿಸ್ತಾರಗೊಂಡಿತು. ಸುತ್ತಮುತ್ತಲ ಹಳ್ಳಿಗಳ ಇಂಥ ಯುವ ಮಂಡಲದ ಸ್ವಯಂ ಸೇವಾ ಸದಸ್ಯರನ್ನು ‘ಜಲಯೋಧರು’ ಎಂಬ ಸುಂದರ, ಉತ್ಸಾಹದಾಯಕ ಹೆಸರಿನಿಂದ ಕರೆದರು ಲಕ್ಷ್ಮಣ್. ಅಂಥ ಎಲ್ಲ ಯುವಮಂಡಲದ ಒಕ್ಕೂಟವನ್ನು ರಚಿಸಿ ೧೯೮೬ರಲ್ಲಿ ’ಲಾಪೋಡಿಯಾದ ಗ್ರಾಮೀಣ ವಿಕಾಸ ನವಯುವಕ ಮಂಡಲ(ಜಿವಿಎನ್‌ಎಂ)’ ಎಂಬ ಅಕೃತ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು.


ಇಂದು ಜಿವಿಎನ್‌ಎಂನಲ್ಲಿ ೭೦ ಮಂದಿ ಪೂರ್ಣಾವ ಕಾರ್ಯಕರ್ತರಿದ್ದಾರೆ. ೨೫೦ ನೌಕರರು ಸಂಸ್ಥೆಯ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಜಲಯೋಧರ ಸಂಖ್ಯೆ ೮ ಸಾವಿರಕ್ಕೆ ಬೆಳೆದಿದೆ. ಲಾಪೋಡಿಯಾದಿಂದ ಪ್ರೇರಣೆ ಪಡೆದು ಇವತ್ತು ನಾಲ್ಕು ಜಿಲ್ಲೆಗಳಲ್ಲಿ ಬೃಹದಾಕಾರವಾಗಿ ಬೆಳೆದಿರುವ ಸಂಘಟನೆ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದೆ. ೩೦ ವರ್ಷಗಳ ಅವಿರತ ಶ್ರಮದ ಫಲವಾಗಿ ಲಕ್ಷ್ಮಣ್‌ರ ಕನಸಿನ ನವ ವಿಕಾಸ ಮಂಡಲದ ಹೆಸರು ದೇಶ ವಿದೇಶಗಳಲ್ಲಿ ಮಾರ್ದನಿಸುತ್ತಿದೆ. ನೀವು ನಂಬಬೇಕು, ಈಗಿನ ಜಿವಿಎನ್‌ಎಂನ ವಾರ್ಷಿಕ ಬಜೆಟ್ ೪.೫ ದಶಲಕ್ಷ ರೂ.ಗಳು. ಹಳ್ಳಿಗಳ ಬಲವೃದ್ಧಿ, ಸ್ಥಳೀಯರ ಕೈಗೆ ಅಕಾರ, ಗ್ರಾಮ ಸ್ವರಾಜ್ಯದ ಗಾಂಜಿಯವರ ಸಿದ್ಧಾಂತ ಅನುಷ್ಠಾನದಲ್ಲಿ ಗ್ರಾಮವಿಕಾಸ ಮಂಡಲ ಮಹತ್ವದ ಪಾತ್ರವನ್ನು ವಹಿಸಿದೆ. ದುಡಿಯುವ ಕೈಗಳು ಸುಮ್ಮನೆ ಕೂರದಂತೆ ಮಾಡಿದೆ. ೪೨ ಸಾವಿರ ಕುಟುಂಬಗಳು ಇಂದು ಸ್ವಾವಲಂಬಿಯಾಗಿ ಬದುಕುತ್ತಿದೆ. ೨೦೦ ಹೆಕ್ಟೇರ್‌ನಷ್ಟು ಕೃಷಿ ಭೂಮಿ ನಳನಳಿಸುತ್ತಿದೆ. ಶೂನ್ಯವಿದ್ದ ಊರಿನ ಜನರ ತಲಾದಾಯ ೧೪ ಸಾವಿರ ರೂ.ಗಳಿಗೆ ಏರಿದೆ. ಇನ್ನೊಂದು ವಿಶೇಷವೆಂದರೆ ತಾಲಾಬ್‌ಗಳ ಮರು ನಿರ್ಮಾಣ ಸೇರಿದಂತೆ ಊರಿನಲ್ಲಿ ಕೈಗೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಸಂಪನ್ಮೂಲ ಒದಗಿಸಿದ್ದು ಸ್ಥಳೀಯರೇ. ಪ್ರತಿ ಕುಟುಂಬ, ಪ್ರತಿ ಹೊಸ ಯೋಜನೆಗೆ ತಲಾ ನೂರು ರೂ.ಗಳ ದೇಣಿಗೆ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ಇಷ್ಟಕ್ಕೇ ಹೊಣೆಗಾರಿಕೆ ಮುಗಿಯುವುದಿಲ್ಲ. ಎಲ್ಲ ಯೋಜನೆಗಳಿಗೂ ಪ್ರತಿ ಕುಟುಂಬದಿಂದ ಒಬ್ಬನ ಶ್ರಮದಾನ ಕಡ್ಡಾಯ. ಹಣ ಕೊಡಲಾಗದಿದ್ದವರು ಅದಕ್ಕೆ ಪರಿಹಾರ ರೂಪದಲ್ಲಿ ಶ್ರಮದಾನಕ್ಕೆ ಹೆಚ್ಚುವರಿ ಆಳನ್ನು ಮೊದಲ ಸುಗ್ಗಿಯ ಬಳಿಕ ಮೂರು ತಿಂಗಳ (ಮೇನಿಂದ ಜುಲೈ) ಅವಗೆ ಕಳುಹಿಸಿಕೊಡಬೇಕು. ಹಾಗೆಂದು ಶ್ರಮದಾನಕ್ಕೆ ಇಂಥ ವಿನಾಯ್ತಿ ಇಲ್ಲ. ಆಳಿನ ಬದಲು ಹೆಚ್ಚುವರಿ ಹಣವನ್ನು ಕೊಡುತ್ತೇನೆ ಎನ್ನುವ ಪ್ರಶ್ನೆಯೇ ಇಲ್ಲ. ಗ್ರಾಮ ಸಮಿತಿಗಳು ಕೆಲಸ, ಹಣ ಹಾಗೂ ಮಾನವ ಸಂಪನ್ಮೂಲದ ನಿರ್ವಹಣೆ ಮಾಡುತ್ತದೆ. ಜತೆಗೆ ನೀರಿನ ನಿರ್ವಹಣೆಯನ್ನೂ ಅದೇ ನೋಡಿಕೊಳ್ಳುತ್ತದೆ. ಇದಕ್ಕಾಗಿ ಯುವಕರಿಗೆ ವಿಶೇಷ ತಾಂತ್ರಿಕ ತರಬೇತಿಯನ್ನು ಒದಗಿಸಲಾಗುತ್ತದೆ.


ಇದಲ್ಲವೇ ನಿಜವಾದ ಪ್ರಜಾಪ್ರಭುತ್ವ? ಇದಲ್ಲವೇ ಸೂಕ್ತ ಅಕಾರ ವಿಕೇಂದ್ರೀಕರಣ ? ಇದಲ್ಲವೇ ಪೂರ್ಣ ಸಮುದಾಯ ಸಹಭಾಗಿತ್ವ? ಒಬ್ಬ ಸಮರ್ಥ ಆಡಳಿತಗಾರ ತಾನೆಂಬುದನ್ನೂ ಈ ಮೂಲಕ ಲಕ್ಷ್ಮಣ್ ಸಿಂಗ್ ಸಾಬೀತು ಪಡಿಸಿದ್ದಾರೆ. ಎಷ್ಟಾದರೂ ಅವರು ರಜಪೂತ ರಾಜಮನೆತನದ ಕುಡಿಯಲ್ಲವೇ. ರಾಜಾ ಪ್ರತ್ಯಕ್ಷ ದೇವತಾಃ- ಎಂಬ ಪದಕ್ಕೆ ನಿಜ ಅರ್ಥದಲ್ಲಿ ಇಂದು ಲಕ್ಷ್ಮಣ್ ಭಾಜನರಾಗಿದ್ದಾರೆ. ಜಯ ಹೋ ಲಕ್ಷ್ಮಣ್.


‘ಲಾಸ್ಟ್‘ಡ್ರಾಪ್: ಪ್ರಾಣಿ- ಪಕ್ಷಿಗಳನ್ನು ದಂಡಿಸುವ ಮನುಷ್ಯ ಲಾಪೋಡಿಯಾದಲ್ಲಿ ಇಂದು ದಂಡ ತೆರಲೇಬೇಕು. ಅಂಥದ್ದೊಂದು ಕಠಿಣ ಕಟ್ಟಳೆ ಅಲ್ಲಿನ ಸ್ಥಳೀಯರಿಂದ ಸ್ವಯಂ ಪ್ರೇರಿತವಾಗಿ ಜಾರಿಗೊಂಡಿದೆ.

No comments: