Sunday, November 2, 2008

ಬಾವಿಗಳ ಬಗೆಗೇಕೆ ಈ ಭೇದ ಭಾವ ?

ಗುಲ್ಬರ್ಗ ನಗರವನ್ನು ಇಂದು ನೀವು ಪ್ರವೇಶಿಸಿದರೆ ಅಲ್ಲೊಂದು ಯುದ್ಧದ ಮರುದಿನದ ಚಿತ್ರಣ ತೆರೆದುಕೊಳ್ಳುತ್ತದೆ. ದಂಡು ದಾಳಿಗೊಳಗಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡ ನಗರವೊಂದು ಹೇಗಿರಬಹುದೋ ನೂರಕ್ಕೆ ನೂರು ಅದೇ ದೃಶ್ಯ. ಮುಖ್ಯರಸ್ತೆಯಲ್ಲಿ ಸಾಗಿದರೆ ಅರ್ಧಂಬರ್ಧ ಕುಸಿದ ಕಟ್ಟಡಗಳು, ಎಲ್ಲೆಂದರಲ್ಲಿ ಮಣ್ಣು-ಇಟ್ಟಿಗೆಗಳ, ಕಸ-ಕಡ್ಡಿಯ ರಾಶಿ....ರಸ್ತೆ ವಿಸ್ತರಣೆಯ ಹೆಸರದಕ್ಕೆ. ನಗರೀಕರಣದ ಇನ್ನೊಂದು ಮುಖವಿದು. ಅಂಗಡಿ-ಮುಂಗಟ್ಟು, ಮನೆ-ಮಠ, ಗುಡಿ-ಗುಂಡಾರ ಹೀಗೆ ಎಲ್ಲವೂ ರಸ್ತೆಗಾಗಿ ಹಿಂದಕ್ಕೆ ಸರಿದು ನಿಂತಿವೆ.
ಬಿಡಿ, ಆಧುನಿಕ ಅನಿವಾರ್ಯಗಳಿಗೆ ಯಾರೂ ಹೊರತಲ್ಲ. ವಿಷಯ ಅದಲ್ಲ. ಇಷ್ಟೆಲ್ಲ ಭರಾಟೆಯ ನಡುವೆ ಸುಂದರ, ಪುರಾತನ ಬಾವಿಯೊಂದರ ಕೀರಲು ಸ್ವರ ಯಾರಿಗೂ ಕೇಳಿಸುತ್ತಲೇ ಇಲ್ಲ ಎಂಬುದು ಬೇಸರದ ಸಂಗತಿ. ಹಾಗೆ ನೋಡಿದರೆ ಗುಲ್ಬರ್ಗದಲ್ಲಿ ಬಾವಿಗಳು ಚೀರಲು ಆರಂಭಿಸಿ ಸಾಕಷ್ಟು ವರ್ಷಗಳೇ ಆಗಿ ಹೋದವು. ಹಾಗೆನ್ನುವುದಕ್ಕಿಂತ ಇಡೀ ನಗರಕ್ಕೆ ನೀರಾಶ್ರಯವಾಗಿ ನಿಂತಿದ್ದ ನೂರಾರು ಬಾವಿಗಳಲ್ಲಿ ಇಂದು ಉಳಿದಿರುವವು ಎಂಟತ್ತು ಅಷ್ಟೇ. ಹಾಗೆ ಅಳಿದುಳಿದವಲ್ಲಿ ಲಾಲ್‌ಗೇರಿ ಬಡಾವಣೆಯಲ್ಲಿರುವ ಈ ಬಾವಿಗೊಂದು ವಿಶೇಷ ಮಹತ್ವವಿದೆ. ಅಲ್ಲಿನವರು ಅದನ್ನು ಗುರುತಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ. ಅದು ಸಾಮಾನ್ಯ ಬಾವಿಯಂತೂ ಅಲ್ಲ.
ಒಂದಿಡೀ ನಗರವನ್ನೇ ಎತ್ತಿ ಪಕ್ಕಕ್ಕೆ ಸರಿಸಿ ಅತ್ಯಾಧುನಿಕ ರಸ್ತೆ ಮಾಡ ಹೊರಟಿರುವಾಗ ಒಂದು ಪುಟ್ಟ ಬಾವಿಯನ್ನು ನೋಡುತ್ತ ಕುಳಿತುಕೊಳ್ಳಲಾದೀತೇ ? ಎಂಬ ಧೊರಣೆ ಬಹುತೇಕ ಎಲ್ಲರಲ್ಲೂ ಇದ್ದಂತಿದೆ. ಈ ಬಗ್ಗೆ ಗೆಳೆಯ ರವೀಂದ್ರ ದೇಸಾಯಿಗೆ ಏನೋ ಹಳಹಳಿ. ಇನ್ನೇನು ವಾರೊಪ್ಪತ್ತಿನಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದಾದ ಆ ಬಾವಿಯ ಅಂತಿಮ ದರ್ಶನವನ್ನಾದರೂ ಪಡೆದುಕೊಂಡು ಬರೋಣವೆಂದುಕೊಂಡು ದೇಸಾಯಿಯವರ ಬೆನ್ನುಹಿಡಿದು ಹೊರಟದ್ದೇ ತಪ್ಪಾಯಿತೇನೋ? ಕೊನೇ ಪಕ್ಷ ಅದನ್ನು ಸ್ಮಾರಕವನ್ನಾಗಿಯಾದರೂ ಉಳಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬ ಅಪರಾಧ ಪ್ರಜ್ಞೆ ಕಾಡಲಾರಂಭಿಸಿದೆ.
ನಾಡಿನ ಯಾವುದೇ ಮೂಲೆಗೆ ಹೋಗಿ ನೋಡಿ. ಬಾವಿಗಳಿಲ್ಲದ ಊರು ಸಿಗುವುದೇ ಇಲ್ಲ. ಪಾರಂಪರಿಕ ನೀರು ನಿರ್ವಹಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಬಾವಿಗಳಿಗೆ ಅದರದೇ ಆದ ಮಹತ್ವವಿದೆ. ಶತಶತಮಾನಗಳಿಂದ ಜನಜೀವನವನ್ನು ಪೊರೆಯುತ್ತಿರುವ ಬಾವಿಗಳ ಬಗ್ಗೆ ಅದೇಕೋ ಒಂದು ದಿವ್ಯ ನಿರ್ಲಕ್ಷ್ಯ ಭಾವ ನಮ್ಮಲ್ಲಿ ಮನೆ ಮಾಡುತ್ತಿದೆ.
ಬಾವಿಗಳ ಇತಿಹಾಸ ಹುಡುಕುತ್ತ ಹೊರಟರೆ ಕನಿಷ್ಠ ಸಾವಿರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ನಾಗರಿಕತೆಯ ಅನಿವಾರ್ಯಗಳಲ್ಲಿ ಒಂದಾಗಿದ್ದ ಬಾವಿಗಳನ್ನು ಅವಲಂಬಿಸಿಯೇ ಕೃಷಿ ಸೇರಿದಂತೆ ಎಲ್ಲ ದೈನಂದಿನ ಚಟುವಟಿಕೆಗಳು ನಡೆಯುತ್ತಿದ್ದವು ಎಂದರೆ ಇಂದಿನ ಬೃಹತ್ ನೀರಾವರಿ ಯೋಜನೆಗಳ ದಿನಗಳಲ್ಲಿ ಅಚ್ಚರಿ ಎನಿಸಬಹುದು. ಒಂದು ಊರೆಂದರೆ ಅಲ್ಲೊಂದು ಕೆರೆ, ಅದರ ಸುತ್ತಮುತ್ತ ಕನಿಷ್ಠ ನೂರು ಬಾವಿಗಳು ನಿರ್ಮಾಣಗೊಂಡಿರುತ್ತಿದ್ದವು. ಹೆಚ್ಚೆಂದರೆ ೨೫ ರಿಂದ ೩೦ ಅಡಿಗಳ ಆಳದಲ್ಲಿ ಬಾವಿಗಳಿಂದ ನೀರೆತ್ತಿ ಉಪಯೋಗಿಸಲಾಗುತ್ತಿತ್ತು. ತೀರಾ ಇತ್ತೀಚಿನ ದಿನಗಳವರೆಗೂ ಇದೇ ಪರಿಸ್ಥಿತಿ ಇತ್ತು. ಬಹುಶಃ ೮೦ರ ದಶಕದಲ್ಲಿ ರಾಜ್ಯವನ್ನು ಬಿಟ್ಟೂ ಬಿಡದೇ ಕಾಡಿದ ಬರದ ಬಳಿಕ ಬಾವಿಗಳಿಗೂ ಗ್ರಹಚಾರ ಆರಂಭವಾಯಿತೇನೊ ?
೧೯೮೦ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು ೪ ಲಕ್ಷ ಬಾವಿಗಳಿದ್ದವು. ಈ ಪೈಕಿ ಮೂರೂವರೆ ಲಕ್ಷದಷ್ಟು ನೀರಾವರಿಗೋಸ್ಕರವೇ ತೋಡಿದ್ದು. ಉಳಿದ ಐವತ್ತು ಸಾವಿರ ಬಾವಿಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಒಂದು ಕಾಲದಲ್ಲಿ ಗುಲ್ಬರ್ಗ ಸುತ್ತಮುತ್ತಲಿನ ಬಾವಿಗಳು ಅತ್ಯಂತ ಪ್ರಖ್ಯಾತವಾಗಿದ್ದವು. ಜಿಲ್ಲೆಯ ಶಹಾಪುರ, ಸುರಪುರಗಳು ರಾಜಾಡಳಿತರ ಕಾಲಕ್ಕೆ ಒಳಪಟ್ಟ ಸಂದರ್ಭದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಬಾವಿಗಳ ನಿರ್ಮಾಣ ನಡೆದಿದ್ದವು ಎನ್ನುತ್ತದೆ ಇತಿಹಾಸ. ಅಲ್ಲಿನ ಸುಣ್ಣದ ಕಲ್ಲುಗಳು ನೀರನ್ನು ಹೀರಿಕೊಳ್ಳುವ ವಿಶೇಷ ಗುಣಗಳನ್ನು ಹೊಂದಿವೆ. ಇಂಥ ಕಲ್ಲುಗಳನ್ನು ಅಗೆದು ತೆಗೆಯುತ್ತ ಹೋದರೆ ಅವುಗಳ ಕೆಳಗೆ ಸಮೃದ್ಧ ನೀರ ಸೆಲೆ ನಲಿದಾಡುತ್ತದೆ. ಇದನ್ನೇ ಕಂಡುಕೊಂಡಿದ್ದ ಆಗಿನ ಆಳರಸರು, ನೂರಾರು ಬಾವಿಗಳನ್ನು ನಿರ್ಮಿಸಿ ನೀರು ನಿರ್ವಹಣೆಯಲ್ಲಿ ಜಾಣ್ಮೆ ಮೆರೆದಿದ್ದುದು ಕಂಡು ಬರುತ್ತದೆ. ಪಕ್ಕದ ಲಿಂಗಸುಗೂರು ಪ್ರದೇಶವಂತೂ ಬಾವಿಗಳಿಗೆ ಹೆಸರುವಾಸಿ. ಅಲ್ಲಿ ಆಗಿ ಹೋದ ಮನ್ನೇಸಾಬನೆಂಬ ಸಾಮಂತ ಸಾವಿರಕ್ಕೂ ಹೆಚ್ಚು ಬಾವಿಗಳನ್ನು ಏಕ ಕಾಲಕ್ಕೆ ತೋಡಿಸಿದ್ದನಂತೆ. ಇವು ಪಾರಂಪರಿಕ ಬದುಕಿನಲ್ಲಿ ಬಾವಿಗಳಿಗಿದ್ದ ಮಹತ್ವಕ್ಕೆ ಸಾಕ್ಷಿ.
ಜಿಲ್ಲೆಯ ಯಾವುದೇ ಭಾಗಕ್ಕೆ ಹೋದರೂ ಅತ್ಯಂತ ಸುವ್ಯವಸ್ಥಿತವಾಗಿ ಕಲ್ಲುಗಳಿಂದ ಕಟ್ಟಿರುವ ಸುಂದರ ಬಾವಿಗಳ ನಿರ್ಮಾಣ ಗಮನ ಸೆಳೆಯುತ್ತದೆ. ಗುಲ್ಬರ್ಗದ ಲಾಲ್‌ಗೇರಿಯಲ್ಲಿರುವ ಈ ಪುಟ್ಟ ಬಾವಿಯೂ ಇವೆಲ್ಲದರ ಪ್ರತೀಕದಂತಿದೆ. ಸುಮಾರು ಮೂವತ್ತು ಅಡಿ ಉದ್ದ, ಹತ್ತು ಅಡಿ ಅಗಲದ ಈ ಸುಂದರ ಬಾವಿಗೆ ಸುತ್ತಲೂ ಸದೃಢ ಕಲ್ಲು ನಿರ್ಮಾಣವನ್ನು ಮಾಡಲಾಗಿದೆ. ನಾಲ್ಕೈದು ಅಡಿಗೆಲ್ಲ ನೀರು ಎಟಕುವಂತಿದ್ದರೂ ಕೆಳಭಾಗದವರೆಗೂ ಕಲ್ಲಿನ ಅಟ್ಟಣಿಗೆಗಳನ್ನು ಕಟ್ಟಲಾಗಿದೆ. ಬಾವಿಯ ಗೋಡೆಯ ಮೇಲಿರುವ ಹೊಯ್ಸಳರ ರಾಜ ಮುದ್ರೆಯ ಪ್ರತಿಕೃತಿ ಅದರ ಇತಿಹಾಸವನ್ನು ಸಾರುತ್ತಿದೆ. ಬಾವಿಯನ್ನು ಎಷ್ಟು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದರೆ ಸುತ್ತ ಮುತ್ತಲಿನ ಯಾವುದೇ ಪ್ರದೇಶದಲ್ಲಿ ಮಳೆಯಾದರೂ ಅಲ್ಲಲ್ಲಿಯೇ ಇಂಗುವ ನೀರು, ಸೆಲೆಯ ರೂಪದಲ್ಲಿ ಇಲ್ಲಿಗೇ ನೇರವಾಗಿ ಸಂಪರ್ಕಿಸುತ್ತದೆ. ಮಾತ್ರವಲ್ಲ ಆಗಿನ ಕಾಲದಲ್ಲಿಯೇ ಬಾವಿಯೊಳಗಿಂದ ಪೈಪ್ ಜಾಲವನ್ನು ನಿರ್ಮಿಸಿ ನಗರದೊಳಕ್ಕೆ ಕೊಂಡೊಯ್ಯಲಾಗಿದೆ. ಸಮೀಪದ ಷಣ್ಮುಖ ದೇವರ ಗುಡಿಯಲ್ಲಿ ಇದಕ್ಕೆ ಪುರಾವೆ ಸಿಗುತ್ತದೆ.
ಹೇಗೆ ನೋಡಿದರೂ, ಅಂದಿನ ತಂತ್ರಜ್ಞರ ಜಾಣ್ಮೆಗೆ ತಲೆದೂಗಲೇಬೇಕು; ಹಾಗಿದೆ ಬಾವಿ. ಒಂದು ರೀತಿಯಲ್ಲಿ ಈಜುಕೊಳದಂತೆ ಕಂಡರೂ ಆಗಿನ ಅರ್ಧ ನಗರಕ್ಕೆ ನೀರು ಪೂರೈಸಬಲ್ಲ ಸಾಮರ್ಥ್ಯ ಈ ಬಾವಿಗಿತ್ತು. ಸುತ್ತಲಿನವರು ಹೇಳುವ ಪ್ರಕಾರ ಈವರೆಗೆ ಅದರಲ್ಲಿ ನೀರು ಬತ್ತಿದ್ದೇ ಗೊತ್ತಿಲ್ಲ. ೭೬ರ ಸುಮಾರಿಗೆ ಇಡೀ ನಗರದಲ್ಲಿ ನೀರಿನ ಹಾಹಾಕಾರವೆದ್ದಾಗಲೂ ಈ ಬಾವಿಯಲ್ಲಿ ಅರ್ಧ ಅಡಿಗಳಷ್ಟು ಮಾತ್ರ ನೀರಿನ ಪ್ರಮಾಣ ಕುಸಿದಿತ್ತು. ಇಂಥ ಬಾವಿ ಇದೀಗ ರಸ್ತೆ ವಿಸ್ತರಣೆಯ ನೆಪದಲ್ಲಿ ಧ್ವಂಸಗೊಳ್ಳುತ್ತಿದೆ. ಸ್ವಲ್ಪ ಮನಸ್ಸು ಮಾಡಿದರೂ ಈ ಅಪರೂಪದ ಖನಿಯನ್ನು ಉಳಿಸಿಕೊಳ್ಳುವುದು ಕಷ್ಟವೇನಲ್ಲ. ತುಸುವೇ ರಸ್ತೆಯನ್ನು ತಿರುಗಿಸಿಕೊಂಡು ಹೋದರೂ ಇದು ಇನ್ನೂ ಅದೆಷ್ಟೋ ತಲೆಮಾರಿಗೆ ನೀರುಣಿಸಬಲ್ಲುದು. ಆದರೆ ಅದರ ಪಕ್ಷಪಾತಿಯಾಗಿ ಲಾಬಿ ಮಾಡುವವರಿಲ್ಲ.
ಇದಂತಲೇ ಅಲ್ಲ. ಬಾವಿಗಳ ಬಗ್ಗೆ ಇಂಥ ಅನಾದರ ಗುಲ್ಬರ್ಗದಲ್ಲಿ ಹೊಸತಲ್ಲ. ಒಂದು ಕಾಲದಲ್ಲಿ ಇಡೀ ಗುಲ್ಬರ್ಗಕ್ಕೆ ನೀರು ಪೂರೈಸುತ್ತಿದ್ದ ಅಲ್ಲಿನ ಶಾಂತಿನಗರದ ಬಾವಿಯ ಇಂದಿನ ಸ್ಥಿತಿ ನೋಡಿದರೆ ನಮ್ಮ ಅಜ್ಞಾನಕ್ಕೆ ನಗಬೇಕೋ, ಅಳಬೇಕೋ ಅರ್ಥವಾಗದು. ಸುಮಾರು ೩ ಎಕರೆಯಷ್ಟು ವಿಸ್ತೀರ್ಣದಲ್ಲಿ ಮೈಚಾಚಿದ್ದ ಅದ್ಭುತ ಸಂರಚನೆಯ ಈ ಬಾವಿ ಇಂದು ಕಸ ಚೆಲ್ಲುವ ಮೈದಾನವಾಗುಳಿದಿದೆ. ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಇನ್ನೊಂದು ಬೃಹತ್ ಬಾವಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೇವಲ ಹತ್ತು ಅಡಿಗೆಲ್ಲ ನೀರು ಸಿಗುವಂತಿರುವ ಸಮೃದ್ಧ ಅಂತರ್ಜಲದಿಂದ ತುಂಬಿರುವ ಈ ಬಾವಿಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ.
ಇದು ಬೃಹತ್ ಬಾವಿಗಳ ಕಥೆಯಾದರೆ, ಇನ್ನು ಸೇಂಟ್ ಮೇರೀಸ್ ಶಾಲೆಯ ಸಮೀಪದ ಕಾರ್ಪೊರೇಷನ್ ಬಾವಿ, ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿ ಅವಸಾನದ ಅಂಚಿನಲ್ಲಿರುವ ಶರಣನಗರ ಸಮೀಪದ ಜನತಾ ಲೇಔಟ್‌ನ ಬಾವಿ ಹೀಗೆ...ಹೆಸರಿಗೆ ಉಳಿದಿರುವ ಕೆಲವೇ ಬಾವಿಗಳೂ ಭೂಗತವಾಗುತ್ತಿವೆ. ನೂರಾರು ಕೋಟಿ ರೂ.ಗಳನ್ನು ಸುರಿದು ಬೆಣ್ಣೆತೊರಾದಿಂದ, ಭೀಮಾ ನದಿಯಿಂದ ಪೈಪ್ ಜೋಡಿಸಿಕೊಂಡು ಬಂದು ಗುಲ್ಬರ್ಗ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಹೆಚ್ಚೆಂದರೆ ಇವೆಲ್ಲ ಆಗಿ ಒಂದೆರಡು ದಶಕಗಳಾಗಿರಬಹುದು. ಅದಕ್ಕೂ ಮುನ್ನ ಗುಲ್ಬರ್ಗದ ಮಂದಿ ನೀರನ್ನೇ ಕುಡಿದಿರಲಿಲ್ಲವೇ ? ಅಂದು ತಂಪೆರೆದು ಜೀವನ ಪೊರೆದ ಅಮೂಲ್ಯ ಬಾವಿಗಳನ್ನು ಅಲ್ಲಿನವರು ಮರೆತರೇಕೆ ? ರಸ್ತೆ ವಿಸ್ತರಣೆಗೆ ಬಂದಿರುವ ಜೆಸಿಬಿ, ಬುಲ್ಡೋಜರ್‌ಗಳ ಶಬ್ದದಲ್ಲಿ ಇಂಥ ಪ್ರಶ್ನೆಗಳು ಲೀನವಾಗಿ ಹೋಗುತ್ತಿವೆ ಅಲ್ಲಿ.


‘ಲಾಸ್ಟ್’ಡ್ರಾಪ್: ರಾಜ್ಯದಲ್ಲಿ ಅತ್ಯಕ ಬಾವಿಗಳಿರುವ ಜಿಲ್ಲೆ ಕೋಲಾರ. ಅಲ್ಲಿ ೬೦ ಸಾವಿರಕ್ಕೂ ಹೆಚ್ಚು ಬಾವಿಗಳಿವೆ.

1 comment:

ಭರತೇಶ ಅಲಸಂಡೆಮಜಲು said...

ತುಂಬಾ ಚೆನ್ನಾಗಿ ವಿವರಿಸಿದ್ದಿರಾ !!