Friday, September 25, 2009

ಬಿರಾದಾರ ಚಮತ್ಕಾರ: ಕಲ್ಲರಳಿ ಹಣ್ಣಾಯಿತು

ಸುಮ್ಮನೆ ಕಲ್ಪಿಸಿಕೊಳ್ಳಿ, ಇಡೀ ಒಂದು ಎಕರೆ ಜಮೀನನ್ನು ಅಗೆದಾಡಿದರೂ ಸರಿಯಾಗಿ ಒಂದು ಟ್ರ್ಯಾಕ್ಟರ್ ತುಂಬುವಷ್ಟು ಮಣ್ಣೂ ಅಲ್ಲಿ ಸಿಗುವಂತಿರಲಿಲ್ಲ.ಆ ಭೂಮಿ ಇನ್ನೆಷ್ಟು ಬರಡಾಗಿದ್ದಿರಬೇಕು ? ಇನ್ನು ಅಲ್ಲಿ ಏನು ಬೆಳೆಯಲು ಸಾಧ್ಯ ? ಭೂಮಿಯ ಮೇಲ್ಭಾಗವೇ ಹೀಗಿದೆ ಎಂದ ಮೇಲೆ ಅಲ್ಲಿ ನೀರಿನ ಪಸೆ ಇದ್ದೀತೆ ? ಮಳೆ ಬಂದಾಗೊಮ್ಮೆ ನೆಲ ತೇವವಾದಂತೆ ಕಂಡರೂ ಎರಡು ದಿನಗಳ ಮಾತಷ್ಟೇ. ಬಿದ್ದಷ್ಟೇ ವೇಗದಲ್ಲೇ ನೀರು ಜಾರಿ ಹೋಗುತ್ತಿತ್ತು. ಇನ್ನೆಲ್ಲಿಯ ಅಂತರ್ಜಲ ? ಇಂಥ ಭೂಮಿಯನ್ನು ಕೇಳುವವರಾರು ? ಎಕರೆಗೆ ಒಂದೆರಡು ಸಾವಿರ ರೂ. ಮೌಲ್ಯವೂ ಹುಟ್ಟುತ್ತಿರಲಿಲ್ಲ.

ಅದೇನು ಹುಚ್ಚು ಧೈರ್ಯಕ್ಕೆ ಬಿದ್ದಿದ್ದರೋ ವಿಠ್ಠಲ ಗೌಡ ಬಿರಾದಾರ ಅವರು; ಬರೋಬ್ಬರಿ ಇಪ್ಪತ್ತು ಎಕರೆ ಭೂಮಿಯನ್ನು ಬೆಲೆ ಕಟ್ಟಿ ಖರೀದಿಸಿಯೇಬಿಟ್ಟರು. ಅದೂ ತಾವು ಪಡೆದ ಸ್ವಯಂ ನಿವೃತ್ತಿ ಯೋಜನೆಯಿಂದ ಬಂದ ಹಣದಲ್ಲಿ. ರೇಷ್ಮೆ ಇಲಾಖೆ ನೌಕರರಾಗಿದ್ದು, ಜೀವನಕ್ಕಾಗಿ ಉಳಿಸಿಕೊಂಡಿದ್ದ ಹಣದಲ್ಲಿ ಇಂಥ ಬರಡು ಭೂಮಿಯನ್ನು ಖರೀದಿಸಿ ಸಾಸುವುದಾದರೂ ಏನನ್ನು ? ನೋಡಿದವರ ಮನದಲ್ಲಿ ಪ್ರಶ್ನೆಗಳೆದ್ದದ್ದು ಸಹಜ. ಆದರೆ ವಿಠ್ಠಲ ಗೌಡರ ಮನದಲ್ಲಿ ಶಂಕೆ ಇರಲಿಲ್ಲ. ಅವರಲ್ಲಿದ್ದುದು ಆತ್ಮ ವಿಶ್ವಾಸ, ಮಣ್ಣಿನ ಮೇಲಿನ ಪ್ರೀತಿ, ಸಾಧನೆಯ ಛಲ. ಭವಿಷ್ಯದ ಸುಂದರ ಕನಸುಗಳ ಮೂಟೆ ಹೊತ್ತು ಸುತ್ತಾಡಿದರು. ಹಾಗೆ ಸುತ್ತಾಡುವಾಗ ಕಣ್ಣಿಗೆ ಬಿದ್ದುದು ಜಮೀನಿನ ಸುತ್ತಲು ಹೂಳು ತುಂಬಿ ಕುಳಿತಿದ್ದ ಕೆರೆಗಳು. ತಮ್ಮ ಕೆಲಸ ಆರಂಭವಾಗಬೇಕಿದ್ದುದು ಈ ಕೆರೆಗಳಿಂದ ಎಂದು ನಿರ್ಧರಿಸಿದವರೇ ಕೆರೆಯಲ್ಲಿ ತುಂಬಿರಬಹುದಾದ ಹೂಳು, ಅದರ ನೀರಿನ ಸಾಮರ್ಥ್ಯ, ತಾವು ಕೊಂಡ ಜಮೀನಿನಲ್ಲಿ ಬೆಳೆಯಬಹುದಾದ ಬೆಳೆ ಇನ್ನಿತರ ಅಂಶಗಳ ಲೆಕ್ಕಾಚಾರಕ್ಕೆ ಮೊದಲಿಟ್ಟರು.

ಅದು ೧೯೮೩-೮೪ರ ಸಮಯ. ವಿಜಾಪುರದ ರಾಷ್ಟ್ರೀಯ ಹೆದ್ದಾರಿ೧೩ರ ಪಕ್ಕದಲ್ಲಿ, ಸೊಲ್ಲಾಪುರ ಮಾರ್ಗದಲ್ಲಿ ಸುಮಾರು ೨೦ ಕಿ.ಮೀ. ಸಾಗಿದರೆ ತಿಡಗುಂದಿ ಗ್ರಾಮ ಸಿಗುತ್ತದೆ. ಅಲ್ಲೇ, ಗೌಡರು ಖರೀದಿಸಿದ್ದ ಬಂಜರು ಭೂಮಿ ನಿಡುಸುಯ್ಯುತ್ತ ಬಿದ್ದುಕೊಂಡಿತ್ತು. ಭೂಮಿ ಖರೀದಿಯಿಂದ ಕೈಯ್ಯಲ್ಲಿದ್ದ ಕಾಸು ಖಾಲಿಯಾಗಿದ್ದರೂ, ಕಸುವು ಉಳಿದಿತ್ತು. ಸಾಲ ಮಾಡಿದರೂ ತೀರಿಸಬಲ್ಲೆನೆಂಬ ನಂಬಿಕೆ ಆಸೀಮವಾಗಿತ್ತು. ಅದನ್ನು ಆಧರಿಸಿಯೇ ಕೃಷಿ ಸಾಲಕ್ಕೆ ಕೈ ಹಾಕಿದರು. ಬಂದ ೧.೨೫ ಕೋಟಿ ರೂ.ಗಳಲ್ಲಿ ಮಾಡಿದ ಮೊದಲ ಕೆಲಸ, ಕೆರೆಗಳ ಹೂಳು ತೆಗೆಸಿದ್ದು. ಬೊಮ್ಮನಹಳ್ಳಿ ಕೆರೆ, ಮಕಣಾಪುರ ಕೆರೆ, ದೊಮ್ಮನಾಳು ಕೆರೆ, ಕೊಟ್ನಾಲ್ ಕೆರೆಯನ್ನು ಸ್ವಚ್ಛ ಮಾಡಲಾಯಿತು. ೧ ಜೆಸಿಬಿ, ೪ ಟಿಪ್ಪರ್, ೬ ಟ್ರ್ಯಾಕ್ಟರ್‌ಗಳು ನಿರಂತರ ಸದ್ದುಮಾಡಿದವು. ಸತತ ಒಂದೂವರೆ ವರ್ಷ ನೂರಕ್ಕೂ ಹೆಚ್ಚು ಕಾರ್ಮಿಕರು ದುಡಿದರು. ಬಂದ ಮಣ್ಣನ್ನು ಹೊರಚೆಲ್ಲದೇ ತಮ್ಮ ಹೊಸ ಜಮೀನಿಗೆ ಸಾಗಿಸಿದ್ದೇ ಬಿರಾದಾರ್ ಮಾಡಿದ ಬುದ್ಧಿವಂತಿಕೆ.

ವರ್ಷದಲ್ಲಿ ಸುತ್ತಲಿನ ಚಿತ್ರಣವೇ ಬದಲಾಗಿತ್ತು. ಕಲ್ಲು ಬಂಡೆಗಳಿಂದಲೇ ತುಂಬಿ ಹೋಗಿದ್ದ ಗೌಡರ ಜಮೀನು ಮೊದಲು ಬಾರಿಗೆ ಹೆಣ್ಣಾಗಿ ನಿಂತಿತ್ತು. ಎಕರೆಗೆ ೮೦೦ರಿಂದ ಸಾವಿರ ಟ್ರ್ಯಾಕ್ಟರ್‌ನಷ್ಟು ಮಣ್ಣು ಜಮೀನಿಗೆ ಬಂದು ಬಿದ್ದಿತ್ತು. ಖಾಲಿ ತಟ್ಟೆಯಂತಾಗಿದ್ದ ಕೆರೆಗಳು ಬಟ್ಟಲುಗಳಾಗಿ ಪರಿವರ್ತನೆಗೊಂಡು ಮುಂದಿನ ಮಳೆಗಾಲದಲ್ಲಿ ನೀರು ತುಂಬಿಕೊಂಡವು. ಆ ಕೆರೆಗಳ ಮಧ್ಯದಲ್ಲಿದ್ದ ಗೌಡರ ಜಮೀನಿನಡಿಯ ನೀರಿನ ಮಟ್ಟ ತಂತಾನೇ ಏರುತ್ತ ಸಾಗಿತು. ಹೀಗೆ ಅಭಿವೃದ್ಧಿಪಡಿಸಿದ ಜಮೀನು ನೂರು ಎಕರೆಯ ಗಡಿಯನ್ನು ದಾಟಿತ್ತು. ಇಷ್ಟಾಗುವಾಗ ನಾಲ್ಕಾರು ವರ್ಷ ಕಳೆದುಹೋಗಿವೆ. ಅಸಲಿಗೆ ಕೃಷಿ ಅಂಬೋದು ಶುರುವಿಟ್ಟುಕೊಂಡದ್ದೇ ೧೯೯೧ರಲ್ಲಿ. ಕಡಿಮೆ ನೀರಿನ ಬೇಡಿಕೆಯಲ್ಲಿ ಹೆಚ್ಚು ಇಳುವರಿ, ಬೇಗ ಫಸಲು ಹಾಗೂ ಗುಣಮಟ್ಟದ ಬೆಳೆ- ಈ ನಾಲ್ಕನ್ನೂ ಸಾಸಿದಾಗ ಮಾತ್ರ ತಮ್ಮ ಕೃಷಿ ಸಾರ್ಥಕವಾದೀತು ಎಂದುಕೊಂಡಿದ್ದವರು ಬಿರಾದಾರ್ ಸಾಹೇಬರು. ಇಷ್ಟು ಮಾಡಿದವರು ಅಷ್ಟು ಮಾಡದಿದ್ದಾರೆಯೇ ? ಸೂಕ್ತ ಬೆಳೆಯ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಅಮೆರಿಕದ ಕಾಡು ಜಾತಿಯ ದ್ರಾಕ್ಷಿ ಬಳ್ಳಿ ರೂಸ್ಟಾಕ್. ಇದಕ್ಕೆ ದೇಶಿ ತಳಿಯನ್ನು ಕಸಿಕಟ್ಟಿ ಸಾಲಿಗೆ ಕೂರಿಸಿದರು. ಒಂದು ಎಕರೆಯಿಂದ ಆರಂಭವಾದ ದ್ರಾಕ್ಷಿ ೫೦ ಎಕರೆಗೆ ಏರಿತು. ನಿಜವಾದ ಸವಾಲು ಎದುರಾದದ್ದು ಈಗ. ಮಳೆ ಎಂದಿನ ವರಸೆ ತೋರಿಸಿತ್ತು. ಎರಡು ಬಾವಿ, ೫ ಬೋರ್‌ವೆಲ್‌ಗಳ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು.

ಅರ್ಧಕ್ಕರ್ಧ ಬೆಳೆ ಒಣಗಿ ನಿಂತಾಗ ಧೈರ್ಯಗೆಡಲಿಲ್ಲ ಗೌಡರು. ಹುಡುಕಾಟವೇ ಸಮಸ್ಯೆಗೆ ಪರಿಹಾರ ಎಂಬುದರ ಅರಿವು ಅವರಿಗೆ ಚೆನ್ನಾಗಿ ಆಗಿತ್ತು. ಎಲ್ಲದಕ್ಕೂ ಉತ್ತರ ಇದ್ದೇ ಇದೆ. ಅದಕ್ಕಾಗಿ ಅಲೆಯಲಾರಂಭಿಸಿದಾಗ ಕಣ್ಣಿಗೆ ಬಿದ್ದುದು ಮಹಾರಾಷ್ಟ್ರದ ರೈತರು ಅನುಸರಿಸುತ್ತಿದ್ದ ‘ಡಿಫ್ಯೂಜರ್ ಪದ್ಧತಿ’. ಪುಟ್ಟ ಪುಟ್ಟ ಮಡಿಕೆಗಳನ್ನು ಗಿಡದ ಬುಡದಲ್ಲಿ ಹುಗಿದು, ಅದರ ಮೂಲಕ ನೀರು ಹನಿಸಿದಲ್ಲಿ ಈಗ ಬೇಕಿದ್ದ ನೀರಿನ ಶೇ.೩೦ರಷ್ಟು ನೀರಿನಲ್ಲೇ ಇನ್ನೂ ಹೆಚ್ಚಿನ ಫಸಲನ್ನು ಪಡೆಯಬುದೆಂಬುದನ್ನು ಕಂಡುಕೊಂಡರು. ಹನಿ ನೀರಾವರಿಯಾದರೆ ಎಕರೆಗೆ ೨೦ ಸಾವಿರ ರೂ. ಖರ್ಚಾಗುತ್ತದೆ. ಡಿಫ್ಯೂಜರ್‌ನಲ್ಲಿ ೧೫ ಸಾವಿರ ಸಾಕು. ಐದು ಸಾವಿರ ರೂ. ಉಳಿಯುತ್ತದೆ ಮಾತ್ರವಲ್ಲ, ನೀರೂ ದುಬಾರಿಯಾಗುವುದಿಲ್ಲ. ಮತ್ತೇಕೆ ತಡ ? ಮಹಾರಾಷ್ಟ್ರದಿಂದ ೧೨ ರೂ.ಗೆ ಒಂದರಂತೆ ಚೀನಿ ಮಣ್ಣಿನಿಂದ ತಯಾರಿಸಿರುವ ವಿಶಿಷ್ಟ ಮಡಕೆಗಳನ್ನು ತರಿಸಲಾಯಿತು. ಸುಮಾರು ೩ ಲೀಟರ್ ನೀರು ಹಿಡಿಸಬಹುದಾದ ೮ ಇಂಚು ಎತ್ತರದ ಈ ಮಡಕೆಗಳನ್ನು ಗಿಡದ ಬುಡದಲ್ಲಿ ನಾಲ್ಕು ಇಂಚಿನವರೆಗೆ ಗುಂಡಿ ತೆಗೆದು ಹುಗಿಯಲಾಯಿತು. ಇವುಗಳ ಬಾಯಿಗೆ ಹನಿ ನೀರಾವರಿಯ ಪೈಪ್‌ಗಳನ್ನು ಜೋಡಿಸಿ ನೀರು ಹಾಯಿಸಲಾಯಿತು. ತಳದಲ್ಲಿರುವ ನಾಲ್ಕೈದು ಪುಟ್ಟ ರಂಧ್ರಗಳ ಮೂಲಕ ಗಿಡದ ಬೇರಿಗೇ ನೇರವಾಗಿ ನೀರು ಹೋಗುವಂತಾಯಿತು. ೨೫ರಿಂದ ೩೦ ವರ್ಷ ಬಾಳಿಕೆ ಬರುವ ಈ ಮಡಕೆಗಳಿಂದ ಬೇರಿಗೆ ನೇರವಾಗಿ ನೀರು ಸರಬರಾಜಾಗುವುದರಿಂದ ಭಾಷ್ಪೀಭವನವನ್ನು ತಪ್ಪಿಸಿದಂತಾಗಿತ್ತು. ಮೇಲಕ್ಕೆ ನೀರು ಚೆಲ್ಲಿ ವ್ಯರ್ಥವಾಗುವುದು ನಿಂತಿತಲ್ಲದೇ ಕಳೆ ನಿಯಂತ್ರಣಕ್ಕೆ ಬಂತು. ೩ರಿಂದ ೪ ದಿನಗಳಿಗೊಮ್ಮೆ ನೀರು ಪೂರೈಸಿದರೂ ಸಾಗುತ್ತಿತ್ತು. ಜತೆಗೆ ಗೊಬ್ಬರ, ಸೂಕ್ಷ್ಮ ಜೀವ ಪೋಷಕಾಂಶಗಳನ್ನು ನೀರಿನ ಜತೆಯಲ್ಲೇ ಪೂರೈಸಲಾಗುವುದರಿಂದ ಮಾನವಶ್ರಮವೂ ಉಳಿತಾಯವಾಗಲಾರಂಭಿಸಿತು.

ಅಂದುಕೊಂಡದ್ದನ್ನು ಬಿರಾದಾರರು ಸಾಸಿಯಾಗಿತ್ತು. ಕಡಿಮೆ ನೀರಿನಲ್ಲಿ ಶಾಶ್ವತ ಪರಿಹಾರ ಸಿಕ್ಕಿತ್ತು. ಅವರೇ ಹೇಳುವಂತೆ ತಮ್ಮ ‘ಜೀವವಾಹಿನಿ’ ಪದ್ಧತಿಯಡಿ ಎಕರೆಗೆ ೧೦ರಿಂದ ೧೪ ಲಕ್ಷ ಲೀಟರ್ ನೀರು ಸಾಕಾಗುತ್ತಿದೆ. ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್ ಅನ್ನು ನಂಬಿ ಕೂರುವ ಪ್ರಮೇಯವೂ ಇಲ್ಲ. ಒಟ್ಟಾರೆ ಇಂದು ವಿಠ್ಠಲ ಗೌಡರ ಬರಡು ನೆಲವಷ್ಟೇ ಹಸುರಾಗಿಲ್ಲ. ಅವರ ೫೦ ಜನರ ಅವಿಭಕ್ತ ಕುಟುಂಬದ ಬದುಕೂ ಹಸನಾಗಿದೆ. ಈಗಾಗಲೇ ೩೫ ಎಕರೆಯಲ್ಲಿ ಎಕರೆಗೆ ೩ರಿಂದ ೪ ಟನ್ ಇಳುವರಿ ಬರುವ, ವೈನ್‌ಗೆ ಬಳಸುವ ದ್ರಾಕ್ಷಿ ಫಲ ಬರುತ್ತಿದೆ. ಒಂದಷ್ಟು ಸ್ಥಳೀಯ ಹಣ್ಣುಗಳಿವೆ. ೪೦ ಎಕರೆ ಪ್ರದೇಶದಲ್ಲಿ ಎಕರೆಗೆ ೫ರಿಂದ ೬ ಟನ್ ಇಳುವರಿ ಬರುವ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕೃಷಿ ಎಂದಿಗೂ ಬಿರಾದಾರ್ ಪಾಲಿಗೆ ಸ್ವಾರ್ಥವಲ್ಲ. ಅದರ ಉಪಯೋಗ ಸರ್ವರಿಗೂ ಸಲ್ಲಬೇಕು. ಆಗಲೇ ಅದು ಸಾರ್ಥಕ. ಈ ಮಾತನ್ನು ಪುನರುಚ್ಚರಿಸುತ್ತಲೇ ಸುಮಾರು ೫೦ ಎಕರೆ ಪ್ರದೇಶದಲ್ಲಿ ‘ವನಶ್ರೀ’ ಕಾಡನ್ನು ಬೆಳೆಸುತ್ತಿದ್ದಾರೆ.

ಗೌಡರ ಸಾಧನೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ, ರಾಜ್ಯಪಾಲರು, ದೇಶವಿದೇಶಗಳ ವಿಜ್ಞಾನಿಗಳು ಮೆಚ್ಚುಗೆ ಸೂಚಿಸಿ ಪುರಸ್ಕರಿಸಿದ್ದಾರೆ. ಚೀನಾ, ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ, ಮತ್ತಿತರ ದೇಶಗಳಿಂದ ನಿಯೋಗದಲ್ಲಿ ರೈತರು ಬಂದು ಮಾಹಿತಿ ಪಡೆದು ಹೋಗಿದ್ದಾರೆ. ವಿಠ್ಠಲಗೌಡರು ಸರಕಾರಿ ಕೆಲಸಬಿಟ್ಟು ಕೃಷಿಗೆ ಇಳಿದಾಗ ಸ್ವಂತದ್ದೆನ್ನುವ ಕೇವಲ ಒಂದು ಎಕರೆ ಬರಡು ಭೂಮಿಯಿತ್ತು. ಇಂದು ಇನ್ನೂರು ಎಕರೆಯಷ್ಟು ಸಮೃದ್ಧ ಹಸುರು ನೆಲದೊಡೆಯ. ಇದಾದದ್ದು ಮಾಂತ್ರಿಕ ಶಕ್ತಿಯಿಂದಲ್ಲ, ಯಾವುದೋ ಕಾಣದ ತಂತ್ರಜ್ಞಾನದಿಂದಲ್ಲ, ಇಷ್ಟೆಲ್ಲ ಸಾಧ್ಯವಾಗಿದ್ದರೆ ಅದು ಸ್ವಾವಲಂಬಿ ಮನೋಭಾವದಿಂದ. ಈ ನೆಲದ ಆರಾಧನೆಯಲ್ಲಿ ತೋರಿದ ಶ್ರದ್ಧೆಯಿಂದ. ಹೆಮ್ಮೆಯಿಂದ ಬಿಮ್ಮನೆ ಬೀಗುತ್ತಿದ್ದಾರೆ ಬಿರಾದಾರ್. ಭಲೇ ಎನ್ನೋಣವೇ ?

‘ಲಾಸ್ಟ್’ಡ್ರಾಪ್: ವಿಠ್ಠಲ ಗೌಡರು ನಾಲ್ಕು ಕೆರೆಗಳ ಹೂಳೆತ್ತಿಸಿದ ಫಲ ಅವರಿಗೆ ಮಾತ್ರ ದೊರೆಯಲಿಲ್ಲ. ಸುತ್ತಲಿನ ೧೦ ಹಳ್ಳಿಗಳ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ತಪ್ಪಿದೆ. ಅವರ ಬದುಕು ತಣ್ಣಗಿರಲು ಇಷ್ಟು ಸಾಲದೇ ?

Friday, September 18, 2009

ಎಲ್‌ನೀನೊ ಅಲ್ಲಿ ನಾನು ಎನ್ನುತ್ತಿರುವ ಬರ

ಷ್ಟಕ್ಕೂ ಬರ ಅಂದರೇನು ? ಮೂಲಭೂತ ಪ್ರಶ್ನೆ. ತಕ್ಷಣಕ್ಕೆ ಉತ್ತರ ಹೊಳೆಯದೇ ತಡಕಾಡುವಂತಾಗುತ್ತದೆ. ಬರ ಅಂದರೆ ಬರನಪ್ಪಾ. ಹಾಗೆಂದರೇನು ಅಂದರೆ; ಬೇಕಿದ್ದರೆ ಬರಗಾಲ ಬಂದಾಗ ಏನಾಗುತ್ತದೆ ಎಂಬುದನ್ನು ಹೇಳಬಹುದು. ಮಳೆ ಬರುವುದಿಲ್ಲ, ಬೆಳೆ ಬೆಳೆಯುವುದಿಲ್ಲ, ಕೆರೆ-ಬಾವಿಗಳೆಲ್ಲ ಬತ್ತಿ ಹೋಗುತ್ತದೆ, ಕುಡಿಯಲೂ ನೀರಿರುವುದಿಲ್ಲ, ಜಾನುವಾರುಗಳಿಗೆ ಮೇವು ನಾಸ್ತಿ, ಕೊನೆಗೆ ಬಡವರಿಗೆ ತಿನ್ನಲು ಅನ್ನವೂ ಇರುವುದಿಲ್ಲ. ಒಟ್ಟಾರೆ ಎಲ್ಲೆಲ್ಲೂ ಭೀಕರ ಕ್ಷಾಮ. ಹಾಗಾದರೆ ನಾವು ಅದನ್ನು ಬರಗಾಲ ಎಂದು ಕರೆಯಬಹುದು.

ಅರೆ ಮತ್ತೆ ಸಂದೇಹವೇ ? ಹೌದು, ಮೂಡಲೇಬೇಕಲ್ಲ. ಒಮ್ಮೆ ಬರ ಅನ್ನೋದು, ಇನ್ನೊಂದು ಬಾರಿ ಕ್ಷಾಮ ಅನ್ನೋದು. ಏನಿದು ? ಎರಡರಲ್ಲಿ ಯಾವುದು ಸರಿ ? ಬರವೋ, ಕ್ಷಾಮವೋ ?- ಅಂದರೆ ಎರಡೂ ಸರಿ ಅನ್ನಬೇಕಾಗುತ್ತದೆ. ಹಾಗಾದರೆ ಬರ, ಕ್ಷಾಮ ಎರಡೂ ಒಂದೇನಾ ? ಖಂಡಿತಾ ಅಲ್ಲ. ಹಾಗಾದರೆ ಬರಕ್ಕೂ ಕ್ಷಾಮಕ್ಕೂ ವ್ಯತ್ಯಾಸ ಏನು ? ಇದೊಳ್ಳೆ ಕತೆ. ನೀವು ಮತ್ತೆ ಮೊದಲಿನ ಪ್ರಶ್ನೆಗೇ ಬಂದು ನಿಂತಂತಾಯಿತು. ಕೇಳಿದ ಸ್ವರೂಪ ಸ್ವಲ್ಪ ಬೇರೆ ಅಷ್ಟೆ.

ಇರಲಿ, ಒಂದೊಂದಾಗಿ ಅಥ ಮಾಡಿಕೊಳ್ಳುತ್ತ ಹೋಗೋಣ. ಇವೆಲ್ಲವನ್ನೂ ಒತ್ತಟ್ಟಿಗೆ ಇಡಿ. ಸ್ವಲ್ಪ ಬೇರೇನಾದರೂ ಯೋಚಿಸೋಣ. ನಿಮ್ಮ ಮನೆಯಲ್ಲಿ ಊಟದ ಸಮಯ. ಎಲ್ಲರದ್ದೂ ಊಟವಾಗಿ ಇನ್ನೇನು ಪಾತ್ರೆ ಎಲ್ಲ ಸ್ವಚ್ಛಗೊಳಿಸುತ್ತಿರುವಾಗ ಗೇಟಿನ ಬಳಿ- ‘ಅಮ್ಮಾ, ತಾಯಿ. ಹೊಟ್ಟೆಗೇನಾದ್ರು ಹಾಕಿ ತಾಯಿ...’ ಅಂತ ಕೂಗಿದ್ದು ಕೇಳಿಸುತ್ತದೆ. ಬಾಗಿಲು ತೆರೆದು ನೋಡಿದರೆ ಹಣ್ಣು ಹಣ್ಣು ಮುದುಕನೊಬ್ಬ, ಬಡಕಲು ದೇಹ ಹೊತ್ತು ನಿಲ್ಲಲೂ ತ್ರಾಣವಿಲ್ಲದೇ ಕೀರಲು ಧ್ವನಿಯಲ್ಲಿ ಕರೆಯುತ್ತಿರುತ್ತಾನೆ. ಆತನ ದೈನ್ಯ ಸ್ಥಿತಿ ನೋಡಲಾರದೇ ಒಂದಷ್ಟು ಅನ್ನ ತಂದು ಆತನ ತಾಟಿಗೆ ಹಾಕುತ್ತೀರಿ. ಅಷ್ಟೆ, ಅದನ್ನು ಏನು ಅಂತಲೂ ನೋಡದೇ ಗಬಗಬನೆ ತಿಂದು ಮುಗಿಸುತ್ತಾನೆ ಆತ. ‘ಛೆ...ಒಳ್ಳೆ ಬರಗೆಟ್ಟು ಬಂದವನಂತೆ ತಿಂದುಬಿಟ್ಟ’ ಎಂದು ಅಂದುಕೊಳ್ಳುತ್ತಾ ಕನಿಕರದಿಂದ ಒಳಗೆ ಬರುತ್ತೀರಿ. ಈಗ ಹೇಳಿ, ಬರಗೆಟ್ಟು ಬಂದದ್ದು ಅಂದರೆ ಏನು ? ಅಂದರೆ ಅನ್ನವೇ ಇಲ್ಲದವನಂತೆ ಎಂದರ್ಥ. ಹ್ಞಾ...ಇಲ್ಲಿಯೂ ಅದೇ ಅರ್ಥ. ಬರ ಅಂದರೆ ಇಲ್ಲದ್ದು. ಮಳೆಯೇ ಇಲ್ಲದ, ನೀರೇ ಇಲ್ಲದ ಸ್ಥಿತಿಯನ್ನು ನಾವು ಬರ ಎಂದು ಗುರುತಿಸುತ್ತೇವೆ. ಇಂಥ ಬರವನ್ನು ಮೂರು ರೀತಿಯಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಹವಾಮಾನ ಸಂಬಂ ಬರ, ಎರಡನೆಯದು ಜಲ ಬರ. ಕೊನೆಯದು ಕೃಷಿ ಬರ.

ಹವಾಮಾನ ಸಂಬಂ ಬರ ಸ್ಥಿತಿ ನಿರ್ಮಾಣವಾಗಲು ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಆ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿ ನೀರಿನ ಕೊರತೆ ತಲೆದೋರುತ್ತದೆ. ಇಡೀ ರಾಷ್ಟ್ರ ಬಹುತೇಕ ಒಂದು ರೀತಿಯ ಮಾನ್ಸೂನ್ ಧರ್ಮವನ್ನು ಹೊಂದಿರುತ್ತದೆ. ಹಾಗಿದ್ದೂ ಪ್ರದೇಶದಿಂದ ಪ್ರದೇಶಕ್ಕೆ ಅದರಲ್ಲೂ ಒಂದಷ್ಟು ವ್ಯತ್ಯಸ್ತವಾಗುವುದನ್ನು ಕಾಣುತ್ತೇವೆ. ಅದನ್ನು ಆಧರಿಸಿ ನೋಡಿದಾಗ ಕೆಲ ವರ್ಷಗಳಲ್ಲಿ ಸಾಮಾನ್ಯ ಮಳೆಯ ಪ್ರಮಾಣಕ್ಕಿಂತಲೂ ಕಡಿಮೆ ಲಭ್ಯತೆ ಕಂಡುಬರುತ್ತದೆ. ಹೀಗೆ ಹೆಚ್ಚು ಕಡಿಮೆಯಾಗುವುದನ್ನು ವಾಡಿಕೆಗಿಂತ ಕಡಿಮೆ, ವಾಡಿಕೆಗಿಂತ ಹೆಚ್ಚು, ವಾಡಿಕೆಗಿಂತ ತೀರಾ ಕಡಿಮೆ, ಕೊರತೆ-ಇತ್ಯಾದಿ ಹಂತಗಳಲ್ಲಿ ಗುರುತಿಸುತ್ತೇವೆ. ವಾಡಿಕೆ ಮಳೆಯಲ್ಲಿ ಕೊರತೆ ಕಂಡು ಬಂದರೆ ಆಗ ಬರಸ್ಥಿತಿಯನ್ನು ಘೋಷಿಸಲಾಗುತ್ತದೆ.

ಜಲ ಬರ ಎಂದರೆ ಮೇಲ್ಜಲದಲ್ಲಿನ ತೀವ್ರ ಕುಸಿತ. ಕೆರೆ, ಹಳ್ಳ-ಕೊಳ್ಳ ಎಲ್ಲವೂ ಒಣಗಿ ಹೋಗಿರುತ್ತದೆ. ಇದರಿಂದಾಗಿ ಭೂಮಿಯ ಮೇಲ್ಭಾಗದ ನೀರಿನ ಪಸೆ ಸಂಪೂರ್ಣ ಬತ್ತಿ ಹೋಗಿ, ಎಲ್ಲೆಡೆ ಗಾರುಗಾರು ಕಾಣಿಸುತ್ತದೆ. ನದಿ ಪಾತ್ರಗಳಲ್ಲಿ ಮರಳುರಾಶಿ, ಕಲ್ಲುಗಳು ಮಾತ್ರವೇ ಇಣುಕುತ್ತಿರುತ್ತವೆ. ಇನ್ನು ಕೃಷಿ ಬರ. ಮಣ್ಣಿನಲ್ಲಿರುವ ತೇವಾಂಶವೂ ಬತ್ತಿ ಹೋಗಿ ನೆಲ ಬಿರುಕು ಬಿಡಲಾರಂಭಿಸುತ್ತದೆ. ಇದರ ಪರಿಣಾಮ ಕೃಷಿ ಹಿನ್ನಡೆ ಅನುಭವಿಸುತ್ತದೆ. ಉತ್ಪಾದನೆ ಕುಸಿಯುತ್ತದೆ. ಆಹಾರದ ಕೊರತೆ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ೧೯೮೭, ೧೯೭೯, ೧೯೭೨ರಲ್ಲಿ ಇಂಥ ಬರ ಕಾಣಿಸಿಕೊಂಡಿತ್ತು. ಈ ವರ್ಷ ಪುನಃ ದೇಶದಲ್ಲಿ ಬರದ ಘೋಷಣೆಯಾಗಿದ್ದು ಶೇ.೧೦ರಷ್ಟು ಪ್ರದೇಶದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಶೇ.೧೯ರಷ್ಟು ಪ್ರದೇಶದಲ್ಲಿ ಪರಿವರ್ತಿತ ಬರವನ್ನು ಗುರುತಿಸಲಾಗಿದೆ. ದೇಶದ ಶೇ.೨೦ಕ್ಕೂ ಹೆಚ್ಚು ಪ್ರದೇಶದಲ್ಲಿ ಬರ ಕಾಣಿಸಿಕೊಂಡರೆ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುತ್ತದೆ. ಈ ಬಾರಿ ಅಂಥದ್ದೇ ಸ್ಥಿತಿಯನ್ನು ಘೋಷಿಸಲಾಗಿದ್ದು ಎಲ್‌ನಿನೋ ಪರಿಣಾಮದ ಫಲವಿದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಎಲ್‌ನಿನೋ ದಕ್ಷಿಣ ಕಂಪನದ ಕಾರಣದಿಂದ ದೇಶಾದ್ಯಂತ ಮಳೆಯಲ್ಲಿ ಏರು ಪೇರಾಗಿದ್ದು, ಪ್ರಮುಖ ೭೦ಕ್ಕೂ ಹೆಚ್ಚು ಜಲಾನಯನ ಪ್ರದೇಶ ಒಣಗಿ ನಿಂತಿದೆ. ಇದರಿಂದ ಅಂತರ್ಜಲದ ಮಟ್ಟದಲ್ಲೂ ತೀವ್ರ ಕುಸಿತ ಕಂಡು ಬಂದಿದೆ.

ಇದ್ಯಾವುದು ಹೊಸ ಪದ ಎಲ್‌ನಿನೊ ? ಇಲ್ಲಿನ ನೀರಿಗೂ ಎಲ್ಲಿಯದೋ ಎಲ್‌ನಿನೋಗೂ ಏನು ಸಂಬಂಧ ? ಪ್ರಶ್ನೆ ಸಹಜವಾದದ್ದೇ. ‘ಎಲ್ ನಿನೋ- ದಕ್ಷಿಣ ಕಂಪನ’(ಇಎನ್‌ಎಸ್‌ಒ) ಎಂದರೆ ಪೆಸಿಫಿಕ್ ಸಮುದ್ರ ಹಾಗೂ ವಾತಾವರಣದಲ್ಲಿ ಕಾಲಮಾನಕ್ಕನುಸರಿಸಿ ಉಂಟಾಗುವ ಪಲ್ಲಟ. ಇದರಲ್ಲೇ ಎರಡು ಬಗೆ- ಎಲ್ ನಿನೋ ಹಾಗೂ ಲಾ ನಿನಾ. ಮೊದಲನೆಯದರಲ್ಲಿ ವಾತಾವರಣ ಬೆಚ್ಚಗಾದರೆ, ಎರಡನೆಯದರಲ್ಲಿ ವಾತಾವರಣ ತಣ್ಣಗಾಗುತ್ತದೆ. ಇದು ಮೂರರಿಂದ ಎಂಟು ವರ್ಷಕ್ಕೊಮ್ಮೆ ನಡೆಯುವ ಸಹಜ ವಿದ್ಯಮಾನ. ಸ್ಪಾನಿಶ್ ಭಾಷೆಯಲ್ಲಿ ಎಲ್ ನಿನೋ ಅಂದರೆ ‘ಗಂಡು ಮಗು’, ಲಾ ನಿನಾ ಅಂದರೆ ‘ಹೆಣ್ಣು ಮಗು’.
ಪ್ರತಿ ಎಲ್‌ನಿನೋಗೂ ಅದರದೇ ಆದ ಪರಿಣಾಮಗಳಿರುತ್ತವೆ. ಈ ಅವಯಲ್ಲಿ ಜಗತ್ತಿನ ಹಲವಾರು ಕಡೆ ನೆರೆ, ಪ್ರವಾಹ, ಬರ ಮತ್ತಿತರ ಪರಿಸರ ವೈಪರೀತ್ಯಗಳು ಸಂಭವಿಸುತ್ತವೆ. ಪೆಸಿಫಿಕ್ ಸಾಗರಕ್ಕೆ ಸಮೀಪವಾಗಿರುವ ದೇಶಗಳು ಇದರ ಭಾರಿ ಪರಿಣಾಮಕ್ಕೆ ತುತ್ತಾಗುತ್ತವೆ. ಅದರಲ್ಲೂ ಕೃಷಿ, ಮೀನುಗಾರಿಕೆಗಳ ಮೇಲೆ ಅವಲಂಬಿಸಿದ ಅಭಿವೃದ್ಧಿಶೀಲ ದೇಶಗಳ ಮೇಲಾಗುವ ಪರಿಣಾಮ ಅನೂಹ್ಯ.

ಎಲ್‌ನಿನೋವನ್ನು ಅಳೆಯುವುದು ಹೇಗೆ ? ಅದಕ್ಕೂ ಕ್ರಮವಿದೆ. ಆಸ್ಟ್ರೇಲಿಯಾದ ತಾಹಿತಿ ಮತ್ತು ಡಾರ್ವಿನ್ ಪ್ರದೇಶಗಳ ವಾತಾವರಣದ ಒತ್ತಡದ ವ್ಯತ್ಯಾಸ, ಅಥವಾ ಪೆಸಿಫಿಕ್ ಧ್ರುವ ಕೇಂದ್ರ ಮತ್ತು ಪೂರ್ವ ಪೆಸಿಫಿಕ್‌ನ ಮೇಲ್ಮೈ ಜಲಗಳ ಉಷ್ಣತೆಯ ವ್ಯತ್ಯಾಸವೇ ಇದರ ಅಳತೆ. ಮೂರರಿಂದ ಎಂಟು ವರ್ಷಕ್ಕೊಮ್ಮೆ ಯಾವಾಗ ಬೇಕಾದರೂ ಸಂಭವಿಸುವ ಈ ಎಲ್ ನಿನೋದ ಮೂಲ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನ ನಡೆದೇ ಇದೆ.

ಹಿಂದೂ ಸಾಗರ, ಇಂಡೊನೇಷ್ಯಾ, ಆಸ್ಟ್ರೇಲಿಯಾದ ಮೇಲ್ಮೈ ಒತ್ತಡದಲ್ಲಿ ಹೆಚ್ಚಳ, ಕೇಂದ್ರ ಮತ್ತು ಪೂರ್ವ ಪೆಸಿಫಿಕ್ ಸಮುದ್ರದ ವಾಯುಭಾರದಲ್ಲಿ ಕುಸಿತ, ದಕ್ಷಿಣ ಪೆಸಿಫಿಕ್‌ನ ವಾಣಿಜ್ಯ ಮಾರುತಗಳು ದುರ್ಬಲಗೊಳ್ಳುವುದು ಅಥವಾ ಪೂರ್ವದತ್ತ ಚಲಿಸುವುದು, ಪೆರುವಿನ ಬಳಿ ಬೆಚ್ಚಗಿನ ಮಾರುತ, ಉತ್ತರ ಪೆರುವಿನ ಮರುಭೂಮಿಯಲ್ಲಿ ಮಳೆ, ಹಿಂದೂ ಸಾಗರ ಮತ್ತು ಪಶ್ಚಿಮ ಪೆಸಿಫಿಕ್‌ನಿಂದ ಪೂರ್ವ ಪೆಸಿಫಿಕ್‌ನತ್ತ ಬಿಸಿನೀರಿನ ಪ್ರವಾಹದ ಹರಿವು- ಇವೆಲ್ಲ ಎಲ್‌ನಿನೋದ ಪ್ರಾಥಮಿಕ ಲಕ್ಷಣಗಳು.

ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದೇವೆ ಅನ್ನುತ್ತೀರಾ ? ಕ್ಷಾಮವೆನ್ನುವುದನ್ನು ಮರೆತೇಬಿಟ್ಟೆವು ಎಂಬುದು ನಿಮ್ಮ ಆಕ್ಷೇಪ ತಾನೆ ? ಅಲ್ಲಿಗೇ ಬರೋಣ. ಇಂಥ ಎಲ್ಲ ಪರಿಸ್ಥಿತಿಯಲ್ಲಿ ಉದ್ಭವಿಸುವ ಆಹಾರದ ಕೊರತೆಯನ್ನು, ತಿನ್ನಲೂ ಗತಿಯಿಲ್ಲ, ಜೀವಗಳು ಹಸಿವಿಗೆ ಆಹುತಿಯಾಗುತ್ತಿವೆ; ಮನುಷ್ಯರು ಹಸಿದ ಹೊಟ್ಟೆಯಲ್ಲೇ ಪ್ರಾಣ ಬಿಡುವ ಸಂದರ್ಭ ಎದುರಾದರೆ ಅದನ್ನು ಕ್ಷಾಮ ಎಂದು ಕರೆಯಲಾಗುತ್ತದೆ. ಈವರೆಗೆ ದೇಶದಲ್ಲಿ ಐದು ಬಾರಿ ಭೀಕರ ಕ್ಷಾಮ ತಲೆದೋರಿದೆ. ೧೬೩೦-೩೨ರಲ್ಲಿ ಗುಜರಾತ್ ಹಾಗೂ ದಕ್ಷಿಣ ಪ್ರಸ್ಥಭೂಮಿಯನ್ನು ಮೊದಲ ಬಾರಿಗೆ ಅತ್ಯಂತ ಕರಾಳ ಕ್ಷಾಮ ಕಾಡಿತ್ತು. ೧೭೭೦ರಲ್ಲಿನ ಬಂಗಾಲದ ಕ್ಷಾಮವೂ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ೧೭೮೩-೮೪ರ ಅವಯಲ್ಲಿ ದೇಶವನ್ನು ಮತ್ತೊಂದು ಕ್ಷಾಮ ನಲುಗಿಸಿತು. ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಾದ ಈಗಿನ ದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಕಾಶ್ಮೀರ ಮತ್ತು ಪಂಜಾಬ್ ಪ್ರಾತ್ಯದಲ್ಲಿ ಹಸಿವಿನಿಂದ ನೂರಾರು ಮಂದಿ ಆಗ ಅಸುನೀಗಿದ್ದರು. ೧೭೯೧-೯೨ರಲ್ಲಿ ಕಾಣಿಸಿಕೊಂಡ ಕ್ಷಾಮವನ್ನು ದೋಜಿಬರ ಎಂದೇ ಕರೆಯಲಾಯಿತು. ಹೆಸರೇ ಅದರ ಭೀಕರತೆಗೆ ಸಾಕ್ಷಿ. ಹಸಿವಿನಿಂದ ಪ್ರಾಣ ಕಳೆದುಕೊಂಡ ಜೀವಿಗಳ ತಲೆಬುರುಡೆ ಆಗಿನ ಎಲ್ಲೆಡೆಯ ಸಾಮಾನ್ಯ ದೃಶ್ಯವಾಗಿತ್ತಂತೆ. ಹೈದರಾಬಾದ್ ಹಾಗೂ ದಕ್ಷಿಣ ಮರಾಠಾ ಪ್ರಾಂತ್ಯಗಳಲ್ಲಿ ತೀವ್ರ ಜೀವಹಾನಿ ಸಂಭವಿಸಿತ್ತೆಂಬುದು ದಾಖಲಾಗಿದೆ. ತೀರಾ ಇತ್ತೀಚೆಗೆ ದಾಖಲಾದದ್ದು ೧೯೪೩ರ ಬಂಗಾಳದ ಕ್ಷಾಮ.

ಅಂಥ ಇನ್ನೊಂದು ಸ್ಥಿತಿ ನಿರ್ಮಾಣವಾಗದಿರಲು ಇರುವ ಏಕೈಕ ಮಾರ್ಗ ನೀರಿನ ಹೊಣೆಯರಿತ ನಿರ್ವಹಣೆ. ಪುಣ್ಯಕ್ಕೆ ಮಳೆ ಎಂಬುದು ಇನ್ನೂ ಭೂಮಿಯ ಮೇಲಿದೆ. ಹಾಗಾಗಿ ಆತಂಕ ಬೇಡ. ಬಿದ್ದಷ್ಟು ಮಳೆಯನ್ನು ಓಡಿಹೋಗಲು ಬಿಡದೇ ಬಿದ್ದ ಸ್ಥಳದಲ್ಲೇ ಉಳಿಸಿಕೊಳ್ಳಲು ಸಾಧ್ಯವಾದರೆ ಬರ, ಕ್ಷಾಮಗಳು ಸವಕಲು ಪದಗಳಾಗುತ್ತವೆ.

‘ಲಾಸ್ಟ್’ಡ್ರಾಪ್: ಬರವೆಂಬುದು ನಿಸರ್ಗದ ಸಾಮಾನ್ಯ ವ್ಯಾಪಾರಗಳಲ್ಲಿ ಒಂದು. ಅದನ್ನು ಬರಬೇಡ ಎನ್ನುವುದು ವಿಹಿತವಲ್ಲ. ಬದಲಾಗಿ ಅದನ್ನು ಭರಿಸುವ ಮಾರ್ಗ ಅರಿತರೆ ಅದೆಂದೂ ನಮಗೆ ಭಾರವಾಗದು.

Saturday, September 12, 2009

ಇದು ನಾವೇ ‘ಬರ’ಮಾಡಿಕೊಂಡಿರುವ ಸಮಸ್ಯೆ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಳೆ ಎಂಬ ಪದ ಕೇಳಿದರೆ ಸಾಕು ನಡುಗಲಾರಂಭಿಸುವ, ಸದಾ ಪ್ರವಾಹ ಸಂತ್ರಸ್ತ ಎಂಬ ಪಟ್ಟ ಕಟ್ಟಿಕೊಂಡಿರುವ ರಾಜ್ಯ ಅಸ್ಸಾಂ ಕೂಡಾ ಈ ವರ್ಷ ಬರಗಾಲಕ್ಕೆ ತುತ್ತಾಗಿದೆ. ಅದರಲ್ಲೂ ಬರಪೀಡಿತವೆಂದು ಘೋಷಿಸಿಕೊಂಡ ದೇಶದ ಮೊಟ್ಟ ಮೊದಲ ರಾಜ್ಯವೇ ಅದು. ಅಸ್ಸಾಂನಲ್ಲಿಯೇ ಬರಬಿದ್ದುಹೋಗಿದೆ ಎಂದ ಮೇಲೆ ಇಡೀ ದೇಶಕ್ಕೇ ಬರ ಬಂದಿದೆ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಕೇಂದ್ರ ಅಧ್ಯಯನ ತಂಡದ ಪ್ರಕಾರವೇ ದೇಶದ ೧೦ ರಾಜ್ಯಗಳ ೧೮,೨೪೬ಕ್ಕೂ ಹೆಚ್ಚು ಜಿಲ್ಲೆಗಳು ಬರಪೀಡಿತವಾಗಿವೆ.

ಬರವೇನೂ ದೇಶಕ್ಕೆ ಹೊಸತಲ್ಲ ಬಿಡಿ. ಅದನ್ನು ನಾವು ಅನುಭವಿಸಿಕೊಂಡೇ ಬಂದಿದ್ದೇವೆ. ೧೮೯೧ರಿಂದ ಈ ವರೆಗೆ ದೇಶ ೨೨ ಬಾರಿ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿದೆ. ಆದರೆ ಆಗೆಲ್ಲ ಸಾಮಾನ್ಯವಾಗಿ ಒಣ ಪ್ರದೇಶವೆಂದು ಗುರುತಿಸಿರುವ ಕಡೆಗಳಲ್ಲೇ ಮಳೆ ಕೈಕೊಟ್ಟಿತ್ತು. ಈ ವರ್ಷ ಹಾಗಲ್ಲ. ಈಗಿನ ಬರವೆಂದರೆ ಒಂದು ರೀತಿಯಲ್ಲಿ ವಿಚಿತ್ರ. ಉತ್ತಮ ನೀರಾವರಿ ಪ್ರದೇಶವೆಂದು ಗುರುತಿಸಲಾಗಿರುವ ಅಥವಾ ಯಾವಾಗಲೂ ಸಾಕಷ್ಟು ಮಳೆ ಪಡೆಯುತ್ತಿದ್ದ ರಾಜ್ಯಗಳೇ ಬರಕ್ಕೆ ತುತ್ತಾಗಿವೆ. ನೋಡಿ ಬೇಕಿದ್ದರೆ, ಮಳೆಯ ಕೊರತೆಯೆಂದರೆ ಏನೆಂಬುದನ್ನೂ ಬಲ್ಲದ ಬಿಹಾರದಲ್ಲಿ ಈ ಬಾರಿ ಮುಂಗಾರು ಹಿಂದಡಿಯಿಟ್ಟಿದೆ. ಪಂಚ ನದಿಗಳ ಬೀಡು ಪಂಜಾಬ್, ಹರಿಯಾಣಗಳಂಥ ರಾಜ್ಯದಲ್ಲಿಯೇ ನೆಲ ಬಿರುಕುಬಿಟ್ಟಿದೆ. ಹೆಚ್ಚೆಂದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಭಾಗ, ಕೇರಳ, ಒರಿಸ್ಸಾ ಬಿಟ್ಟರೆ ದೇಶದ ಬಹುತೇಕ ರಾಜ್ಯಗಳು ವರುಣನ ಅವಕೃಪೆಗೆ ಈಡಾಗಿವೆ.


ಹಿಂದೆಲ್ಲ ಬರ ಬಾರಿಸಿದಾಗ ಆಹಾರಕ್ಕೆ ಹಾಹಾಕಾರವೆದ್ದಿತ್ತು. ರೈತರು ವರ್ಷದ ತುತ್ತಿನ ಚೀಲಕ್ಕೆ ದಾರಿಯಾದರೆ ಸಾಕು, ಜಾನುವಾರುಗಳಿಗೆ ಒಂದಷ್ಟು ಮೇವು, ಕುಡಿಯಲು ನೀರು ಕೊಟ್ಟರೆ ಅದೇ ಪುಣ್ಯ ಎನ್ನುತ್ತಿದ್ದರು. ಆದರೆ ಈ ಬಾರಿಯ ಬರದಲ್ಲಿ ರೈತರ ಬೇಡಿಕೆಯೇ ಬೇರೆ. ಸಕಾಲಕ್ಕೆ ಮಳೆ ಬಂದಿಲ್ಲ. ಬಿತ್ತಿದ ಬೆಳೆಗಳಿಗೆ ನೀರಿಲ್ಲದಾಗಿದೆ. ಹೀಗಾಗಿ ಅಂತರ್ಜಲ ಎತ್ತಿ ಬೆಳೆ ಉಳಿಸಿಕೊಳ್ಳಲು ಹೆಚ್ಚಿನ ವಿದ್ಯುತ್ ನೀಡುವಂತೆ ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ ರೈತರು.


ಆತಂಕ ಇರುವುದು ದೇಶ ಬರಪೀಡಿತವಾಗಿದೆ ಎಂಬುದರಲ್ಲಿ ಅಲ್ಲ. ಹೇಳಿ-ಕೇಳಿ ಬರಗಾಲ ಎಂಬುದು ಅಭಿವೃದ್ಧಿ ಅಥವಾ ಹೊಸದೊಂದು ಕ್ರಾಂತಿಗೆ ನಿಸರ್ಗ ಬರೆಯುವ ಮುನ್ನುಡಿ. ಯುದ್ಧ, ಬರಗಾಲಗಳಿಲ್ಲದೇ ಹೋದರೆ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಎಂಬ ತಮ್ಮ ವಾದಕ್ಕೆ ರಜನೀಶ್‌ರು ಪುಟಗಟ್ಟಲೇ ಪುರಾವೆಯನ್ನು ಪೇರಿಸಿಟ್ಟಿದ್ದಾರೆ. ಕುರುಕ್ಷೇತ್ರ ಯುದ್ಧದ ಬಳಿಕವೇ ಭರತಖಂಡ ವಿಶ್ವದಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾದದ್ದು ಎಂಬುದು ರಜನೀಶ್‌ರ ವಾದ. ಅದೇನೇ ಇರಲಿ. ಭೀಕರ ಬರಗಾಲದ ಬಳಿಕ ಕ್ರಾಂತಿಯಾಗಿದ್ದಕ್ಕೆ ಬೋರ್‌ವೆಲ್‌ಗಳ ವಿಚಾರದಲ್ಲಿ ನಮ್ಮ ಸಾಧನೆ(?)ಗಿಂತ ಬೇರೆ ಉದಾಹರಣೆ ಬೇಕಿಲ್ಲ. ಅದರ ಪರಿಣಾಮವೇ ಇಂದು ನಮಗೆ ಅತ್ಯಲ್ಪ ಮಳೆ ಕೊರತೆಯನ್ನು ಎದುರಿಸುವ ತಾಳ್ಮೆ, ಜಾಣ್ಮೆಗಳೆರಡೂ ಉಳಿದಿಲ್ಲ. ಹೀಗಾಗಿಯೇ ಇಂದು ರೈತರಿಗೆ ನೀರಿನ ಕೊರತೆಗಿಂತಲೂ ವಿದ್ಯುತ್ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ.
ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ನಡೆಸಿದ ಉಪಗ್ರಹ ಅಧ್ಯಯನದ ಪ್ರಕಾರ ೨೦೦೨-೦೮ರ ಅವಯಲ್ಲಿ ಭಾರತದಲ್ಲಿ ಅದರಲ್ಲೂ ದೇಶದ ಉತ್ತರ ಭಾಗದಲ್ಲಿನ ಅಂತರ್ಜಲ ಮಟ್ಟ ಗಣನೀಯ ಕುಸಿತವನ್ನು ಕಂಡಿದೆ. ಸಾಕಷ್ಟು ಮಳೆ ಸರಾಸರಿಯನ್ನು ಹೊಂದಿರುವ ಈಶಾನ್ಯ ಭಾರತದಲ್ಲೂ ಅಂತರ್ಜಲ ಮಟ್ಟ ವರ್ಷಕ್ಕೆ ನಾಲ್ಕು ಸೆಂಟಿಮೀಟರ್‌ನಷ್ಟು ಕುಸಿಯುತ್ತಿದೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಅವಯಲ್ಲಿ ೧೦೯ ಕ್ಯೂಬಿಕ್ ಕಿಲೋಮೀಟರ್‌ಗೂ ಹೆಚ್ಚು ಅಂತರ್ಜಲ ಬರಿದಾಗಿದೆ. ಇದನ್ನು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ೧೧೪ ದಶಲಕ್ಷಕ್ಕೂ ಹೆಚ್ಚು ಮಂದಿ ಗಂಭೀರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಆತಂಕವಿದೆ. ದೇಶದ ಪ್ರಮುಖ ೮೧ಕ್ಕೂ ಹೆಚ್ಚು ಜಲಮೂಲಗಳು ಈ ಬಾರಿ ನೀರಿನ ಕೊರತೆಯನ್ನು ಎದುರಿಸುತ್ತಿವೆ.

ಇದಾವುದಕ್ಕೂ ನಾವು ಚಿಂತೆ ಮಾಡಬೇಕಾದ್ದಿರಲಿಲ್ಲ. ಭಾರತದಂಥ ದೇಶಕ್ಕೂ ಬರ ಭಾರವೆನಿಸಲು ಇನ್ನೊಂದು ಕಾರಣವಿದೆ. ನಾವು ವೈವಿಧ್ಯಮಯ ಕೃಷಿ ಪದ್ಧತಿಯನ್ನು ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದವರು. ಯಾವಾಗ ಹಸಿರು ಕ್ರಾಂತಿ ಎಂಭ ಭ್ರಮೆ ನಮಲ್ಲಿ ಹೊಕ್ಕಿತೋ ಅಂದಿನಿಂದ ಪರ್ಯಾಯ ಬೆಳೆಗಳ ಗೊಡವೆಗೇ ಹೋಗಿಲ್ಲ. ನೀರಾವರಿ ಯೋಜನೆಗಳು ರೂಪಿತವಾಗುವುದೇ ನಮ್ಮಲ್ಲಿ ಭತ್ತ, ಕಬ್ಬಿನಂಥ ಹೆಚ್ಚು ನೀರು ಬೇಡುವ ಬೆಳೆಗಳಿಗಾಗಿ ಎಂಬಂತಾಗಿ ಬಿಟ್ಟಿದೆ. ಕಡಿಮೆ ನೀರಿನಿಂದಲೂ ಬೆಳೆಯಬಹುದಾದ ಬೆಳೆಗಳ ಅವಗಣನೆಯೇ ರೈತರನ್ನು, ಪರೋಕ್ಷವಾಗಿ ದೇಶವನ್ನು ಬರದ ಸಂಕಷ್ಟಕ್ಕೆ ಈಡು ಮಾಡಿದೆ. ಇದು ಸಹಜವಾಗಿಯೇ ಅಂತರ್ಜಲವನ್ನು ಅಪಾಯದ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.


ಅಂತರ್ಜಲ ಆರಿ ಹೋಗುತ್ತಿದೆ ಎನ್ನುವ ಹೊತ್ತಿಗೇ, ಇದಕ್ಕಿಂತಲೂ ಭೀಕರ ಇನ್ನೊಂದು ಸಮಸ್ಯೆ ನಮ್ಮೆದುರು ಧುತ್ತನೆ ನಿಂತಿದೆ. ಅದು ನೀರಿನ ಆವಿಯುದ್ದು. ಹೌದು, ಭಾರತದ ಬಹುತೇಕ ನೀರು ವೃಥಾ ಆವಿಯಾಗಿ ಹೋಗುತ್ತಿದೆ. ನಮ್ಮ ಪ್ರಮುಖ ಜಲ ಮೂಲ ಅಂದರೆ ಅದು ಮಳೆ ಹಾಗೂ ಹಿಮಾಲಯ ಶ್ರೇಣಿಯಲ್ಲಿನ ಮಂಜುಗಡ್ಡೆಗಳು. ಮಂಜು ಗಡ್ಡೆ ಕರಗುವುದರಿಂದ ವಾರ್ಷಿಕ ಎಷ್ಟು ನೀರು ದೊರೆಯುತ್ತದೆ ಎಂಬುದಕ್ಕೆ ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. ೪೩ ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶ ಮಂಜುಗಡ್ಡೆಗಳಿಂದ ಆವೃತವಾಗಿದೆ. ಇದರಿಂದ ಅಂದಾಜು ೩,೮೭೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ವರ್ಷಕ್ಕೆ ಸಿಗುತ್ತಿದೆ. ಇದರಲ್ಲಿ ಭಾರತಕ್ಕೆ ಲಭ್ಯವಿರುವುದು ಸುಮಾರು ೧೦ ಸಾವಿರ ಚದರ ಕಿ.ಮೀ.ಪ್ರದೇಶದ ೨೦೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ಮಾತ್ರ. ಒಟ್ಟಾರೆ ಮಳೆ ಮತ್ತು ಮಂಜಿನಿಂದ ನಾವು ಅಂದಾಜು ೪ ಸಾವಿರ ಶತಕೋಟಿ ಕ್ಯೂಬಿಕ್ ಮೀಟರ್‌ನಷ್ಟು ನೀರನ್ನು ಪಡೆಯುತ್ತಿದ್ದೇವೆ. ಇದರಲ್ಲಿ ಶೇ.೫೦ರಷ್ಟು ಆವಿಯಾಗಿ ಹೋಗುತ್ತದೆ. ೧೯೧೨ರಿಂದ ೧೯೬೪ ಹಾಗೂ ೧೯೬೫ರಿಂದ ೨೦೦೬ ಅವಯಲ್ಲಿ ದೇಶದ ಮಳೆ ಸರಾಸರಿ ಶೇ. ೪ರಷ್ಟು ಕುಸಿದಿದೆ. ಆದರೆ ಆ ಪೈಕಿ ಬಳಕೆಗೆ ದಕ್ಕುತ್ತಿರುವ ಮಳೆ ನೀರಿನ ಪ್ರಮಾಣ ಶೇ. ೧೨ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಮಳೆ ಸಂಗ್ರಹ ಹಾಗೂ ಬಳಕೆಯ ನಿಟ್ಟಿನಲ್ಲಿ ನಮ್ಮ ನಿರ್ಲಕ್ಷ್ಯ ಇದಕ್ಕೆ ಮೊದಲ ಪ್ರಮುಖ ಕಾರಣವಾಗಿದ್ದರೆ, ಮಳೆ ಸುರಿಯುವ ಒಟ್ಟೂ ಅವಯಲ್ಲಿನ ಕುಸಿತವೂ ಇನ್ನೊಂದು ಮುಖ್ಯ ಕಾರಣ. ಇದರ ಒಟ್ಟಾರೆ ಪ್ರತಿಫಲನ ಬರ ಎದುರಿಸುವಲ್ಲಿನ ನಮ್ಮ ವೈಫಲ್ಯದಲ್ಲಿ ಕಾಣುತ್ತಿದೆ.


ವಿಶೇಷ ಗೊತ್ತೆ ? ದೇಶದ ಒಟ್ಟಾರೆ ಕೃಷಿಯ ಶೇ. ೬೦ರಷ್ಟು ಒಣ ಭೂಮಿಯಲ್ಲೇ ನಡೆಯುತ್ತಿದೆ. ಈ ದೃಷ್ಟಿಯಿಂದ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ, ಬರನಿರೋಧಕ ಬೆಳೆಗಳ ಬಗ್ಗೆಯೇ ನಾವು ಹೆಚ್ಚು ಯೋಚಿಸುವುದು ಅನಿವಾರ್ಯ. ಹಾಗೆನ್ನುವಾಗ ಬರದಂಥ ಸಂದರ್ಭದಲ್ಲಿ ನಮಗೆ ಉತ್ತರವಾಗಿ ನಿಲ್ಲಬಲ್ಲವು ನವಣೆ, ಸಜ್ಜೆ ಇತ್ಯಾದಿಗಳು ಮಾತ್ರ. ಭತ್ತವನ್ನು ನಾವು ವಾರ್ಷಿಕ ೧೨೦೦ರಿಂದ ೧೩೦೦ ಮಿ.ಮೀ. ಮಳೆ ಸರಾಸರಿ ಇರುವ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ಆದರೆ ನವಣೆ, ಸಜ್ಜೆ, ಜವೆ, ಜೋಳ ಇತ್ಯಾದಿಗಳಿಗೆ ೩೫೦ರಿಂದ ೫೦೦ ಮಿ.ಮೀ. ಮಳೆ ಸರಾಸರಿ ಇದ್ದರೆ ಸಾಕು. ಇದು ಗೊತ್ತಿದ್ದೂ ನಾವು ಬರ ಬಂದಾಗಲೂ ಅಂತರ್ಜಲವನ್ನು ಹೀರಿಯಾದರೂ ಸರಿ ಭತ್ತವನ್ನೇ ಬೆಳೆಯುತ್ತೇವೆ ಎಂಬ ಹಠಕ್ಕೆ ಬೀಳುತ್ತೇವೋ ಗೊತ್ತಿಲ್ಲ. ಧಾನ್ಯಗಳ ಸಸಿಗಳ ಬೇರು ಅತ್ಯಂತ ಆಳಕ್ಕೆ ಇಳಿಯಬಲ್ಲ ಶಕ್ತಿಯನ್ನು ಹೊಂದಿವೆ. ಅದೇ ರೀತಿ ಇದರ ದಟ್ಟ ಹರವು ವಾತಾವರಣದಲ್ಲಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳಬಲ್ಲದು. ಭತ್ತದ ಕಣಜವೆಂದು ಕರೆಸಿಕೊಳ್ಳುವ ಪಂಜಾಬ್‌ನಲ್ಲಿ ಸಹ ೧೯೬೦ಕ್ಕೂ ಮುನ್ನ ಭತ್ತ ಪ್ರಚಲಿತದಲ್ಲಿರಲಿಲ್ಲ. ಅಂಥದ್ದೊಂದು ಬದಲಾವಣೆ ಬಂದದ್ದು ೭೦ರ ದಶಕದಲ್ಲಿ. ಆಹಾರ ಸ್ವಾವಲಂಬನೆಯ ಸಾಧನೆಗೆ ಸರಕಾರ ಹೆಚ್ಚಿನ ಒತ್ತು ಕೊಡಲಾರಂಭಿಸಿದ್ದೇ ಕೃಷಿಗೆ ನೀರಿನ ಬೇಡಿಕೆ ಹೆಚ್ಚಲು ಕಾರಣವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಹೇಳಿ, ನಿಜವಾಗಿಯೂ ಬರದಿಂದ ನಮಗೆ ಸಂಕಷ್ಟ ಒದಗಿದೆಯೇ ಅಥವಾ ಅದನ್ನು ನಿರ್ವಹಿಸುವಲ್ಲಿ ನಾವು ಎಡವುತ್ತಿದ್ದೇವೆಯೇ ?


‘ಲಾಸ್ಟ್’ಡ್ರಾಪ್: ಸರಕಾರ ಪಡಿತರ ವ್ಯವಸ್ಥೆಯಡಿ ೨-೩ ರೂ.ಗಳಿಗೆ ಅಕ್ಕಿ ಕೊಡಲು ಮುಂದಾಗುತ್ತಿದೆ. ಹೀಗಿರುವಾಗ ಸಹಜವಾಗಿ ಭತ್ತಕ್ಕೆ ಬೇಡಿಕೆ ಹೆಚ್ಚುತ್ತದೆ. ರೈತರೂ ಅದನ್ನೇ ಬೆಳೆಯುತ್ತಾರೆ. ಇದಕ್ಕಿಂತ ದುಬಾರಿ ದವಸ ಧಾನ್ಯಗಳ ಕೃಷಿಗೆ ಯಾರು ಮನಸ್ಸು ಮಾಡುತ್ತಾರೆ ? ಒಣ ಭೂಮಿ ಕೃಷಿ ಸೊರಗುತ್ತಿರುವುದಕ್ಕೆ ಬೇರೆ ಕಾರಣ ಬೇಕಿಲ್ಲ ತಾನೆ ?

Friday, September 4, 2009

ಹುಲಿಬನ: ಜಲ ಸಮೃದ್ಧತೆಯ ಸಾಂಕೇತಿಕ ತಾಣ

ಅದು ದಟ್ಟ ಕಾನನದ ನಡುವಿನ ಒಂದು ಊರು. ಊರು ಅನ್ನುವುದಕ್ಕಿಂತ ಲೆಕ್ಕ ಮಾಡಿ ಮೂರು ಮನೆಗಳಿರುವ ಒಂದು ತಾಣ. ಅದೂ ಅಣ್ಣ ತಮ್ಮಂದಿರದ್ದೇ. ಕಾಡು ಹಾದಿಯಲ್ಲೇ ಒಂದೂವರೆ ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕು. ಬಸ್ ಇರಲಿ, ಕೊನೇ ಪಕ್ಷ ದ್ವಿಚಕ್ರವಾಹನವೂ ನೆಟ್ಟಗೆ ಹೋಗುವುದಿಲ್ಲ. ಮಳೆಗಾಲದಲ್ಲಿ ‘ಕಾಲೇಶ್ವರ ಎಕ್ಸ್‌ಪ್ರೆಸ್’ ನಿಮಗಾಗಿ ಸಿದ್ಧವಿರುತ್ತದೆ. ಬೇರೆ ಮಾರ್ಗವೇ ಇಲ್ಲ. ಹೀಗೆ ನಡೆದುಕೊಂಡೇ ಹೋಗುತ್ತಿದ್ದರೆ ರಸ್ತೆಯೆಂದು ಗುರುತಿಸಿಕೊಂಡಿರುವ ಕಿರು ದಾರಿಯ ಪಕ್ಕದಲ್ಲೇ ಒಂದು ಬೃಹತ್ ಕಾರೇ ಮರ ಕಾಣಿಸುತ್ತದೆ. ಅದರ ಬುಡದಲ್ಲೊಂದು ಜೀರ್ಣಾವಸ್ಥೆಯಲ್ಲಿರುವ ಕಟ್ಟೆ. ಆ ಕಟ್ಟೆಯ ಮೇಲೊಂದು ಹುಲಿಯ ಕಲ್ಲಿನ ವಿಗ್ರಹ. ಅದಕ್ಕೊಂದಿಷ್ಟು ಅರಿಷಿಣ, ಕುಂಕುಮ. ಯಾವತ್ತೋ ಹಾಕಿದ್ದ ಹೂವಿನ ಹಾರ ಒಣಗಿ ವಿಗ್ರಹಕ್ಕೆ ಮೆತ್ತಿಕೊಂಡಿದೆ. ಪಕ್ಕದಲ್ಲೇ ಶ್ರದ್ಧಾಳುಗಳು ಊದಿನ ಕಡ್ಡಿ ಹಚ್ಚಿದ್ದಕ್ಕೆ ಸಾಕ್ಷಿಯಾಗಿ ಅರ್ಧ ಉರಿದುಳಿದ ಒಂದಷ್ಟು ಕಡ್ಡಿಗಳು ರಾರಾಜಿಸುತ್ತಿವೆ.

ಅಚ್ಚರಿಯಾದರೂ ಸತ್ಯ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹುಲಿ ಕಟ್ಟೆಗಳು ಅಲ್ಲಲ್ಲಿ ಪೂಜೆಗೊಳ್ಳುತ್ತಿವೆ. ಎಷ್ಟೋ ಊರುಗಳನ್ನು ಹುಲಿಯ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಮಲೆನಾಡಿನ ಭಾಗಗಳಲ್ಲಂತೂ ತಾಲೂಕಿಗೊಂದರಂತೆ ಹುಲಿಮನೆಯೋ, ಹುಲಿಕಟ್ಟೆಯೋ, ಹುಲ್ಕಲ್ಲೋ, ಹುಲಿಕಾಡೋ, ಹುಲದೇವರಬನವೋ ಒಂದಲ್ಲಾ ಒಂದು ಇಂಥದ್ದೇ ಹೆಸರಿನ ಊರು ಇದ್ದೇ ಇರುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಲಿಕಲ್ ಘಾಟಿ ಸಾಕಷ್ಟು ಪ್ರಸಿದ್ಧ.


ನಂಬಿಕೆಗಳ ಪ್ರಶ್ನೆ ಏನೇ ಇರಲಿ. ನಾವು ಭಾರತೀಯರಿಗೆ ಪ್ರಕೃತಿಯ ಎಲ್ಲ ಅಂಶಗಳೂ ಪೂಜನೀಯ. ಹೀಗಿರುವಾಗ ಪ್ರಕೃತಿಯ ಸೃಷ್ಟಿಗಳಲ್ಲಿ ಒಂದಾದ ಹುಲಿಯೂ ದೇವರಾದದ್ದರಲ್ಲಿ ಅಚ್ಚರಿಯಿಲ್ಲ. ಪ್ರಶ್ನೆ ಅದಲ್ಲ. ಹುಲಿ ಕಟ್ಟೆಯಂಥವುಗಳು ನಿರ್ದಿಷ್ಟ ಪ್ರದೇಶದಲ್ಲೇ ಏಕೆ ಇವೆ ? ಕಾಡಿನ ಯಾವುದೇ ಪ್ರದೇಶದಲ್ಲಿ ಹುಲಿ ವಾಸ ಮಾಡಬಹುದು. ಅಲ್ಲೆಲ್ಲಾ ಹುಲಿ ದೇವರುಗಳನ್ನು ಗ್ರಾಮೀಣರು ಪ್ರತಿಷ್ಠಾಪಿಸಿಲ್ಲವೇಕೆ ? ಇಂಥ ಹುಡುಕಾಟಕ್ಕೆ ಇಳಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಂತು. ಬರೀ ಪೂಜೆಗಾಗಿಯೇ ಇಂಥ ಕಟ್ಟೆಗಳನ್ನು ಕಟ್ಟಿದ್ದಲ್ಲ. ಹೀಗೆ ಹುಲಿ ಕಟ್ಟೆಗಳು ಇರುವ ತಾಣಗಳೆಲ್ಲ ಅತ್ಯಂತ ದಟ್ಟ ಜಲಮೂಲವನ್ನು ಹೊಂದಿದ್ದವು. ಕಾಲ ಕ್ರಮೇಣ ನಾಗರಿಕತೆಯ ದಾಳಿಗೆ ಸಿಲುಕಿ ಅರಣ್ಯವೂ ನಾಶವಾಯಿತು, ಹುಲಿ ಸಂತತಿಗಳೂ ಕ್ಷೀಣಿಸುತ್ತ ಬಂದು ಕಟ್ಟೆಗಳಷ್ಟೇ ಉಳಿದುಕೊಂಡಿವೆ.


ಹುಲಿಗಳಂತಲೇ ಅಲ್ಲ, ಸಾಮಾನ್ಯವಾಗಿ ಕಾಡು ಪ್ರಾಣಿಗಳು ಜಲಮೂಲದ ಸಮೀಪದಲ್ಲೇ ವಾಸಿಸುತ್ತವೆ. ಅದರಲ್ಲೂ ಹುಲಿಯದ್ದು ಅತ್ಯಂತ ವಿಶಿಷ್ಟ ಸ್ವಭಾವ. ಅದು ನೀರಿಗಾಗಿಯಷ್ಟೇ ಅಲ್ಲ, ನೀರನ್ನು ಹುಡುಕಿಕೊಂಡು ಬರುವ ಪ್ರಾಣಿಗಳ ಬೇಟೆಯ ಉದ್ದೇಶದಿಂದಲೂ ಜಲಮೂಲದ ಸಮೀಪದಲ್ಲೇ ತನ್ನ ವಾಸ ಸ್ಥಳವನ್ನು ಗುರುತಿಸಿಕೊಂಡಿರುತ್ತಿತ್ತು. ಹೀಗೆ ಹುಲಿ ಸಂತತಿ ದಟ್ಟವಾಗಿದ್ದ ಕಡೆಗಳಲ್ಲೆಲ್ಲ ಹಿಂದಿನವರು ಅದನ್ನು ಗುರುತಿಸಲು ಸುಲಭವಾಗಲಿ ಎಂಬ ದೃಷ್ಟಿಯಿಂದ ಇಂಥ ಕಟ್ಟೆಗಳನ್ನು ಕಟ್ಟಿ ಪೂಜೆಯ ವ್ಯವಸ್ಥೆ ಮಾಡಿರುತ್ತಿದ್ದರು.


ಇನ್ನೂ ವಿಶೇಷವೆಂದರೆ, ಹೀಗೆ ಸ್ಥಳ ನಿಗದಿಗೆ ಮುನ್ನ ಅತ್ಯಂತ ನಿಖರ ಸಮೀಕ್ಷೆಯನ್ನೂ ಮಾಡಲಾಗುತ್ತಿತ್ತು. ಆ ಭಾಗದ ಅರಣ್ಯ ಪ್ರದೇಶ, ಅಲ್ಲಿರಬಹುದಾದ ಪ್ರಾಣಿ ಸಂಕುಲ, ಜೀವ-ಸಸ್ಯ ವೈವಿಧ್ಯ ಇತ್ಯಾದಿ ಅಂಶಗಳೆಲ್ಲವನ್ನೂ ತಮ್ಮದೇ ವಿಶಿಷ್ಟ ಕ್ರಮಗಳಿಂದ ಲೆಕ್ಕಹಾಕಲಾಗುತ್ತಿತ್ತು. ಈ ಎಲ್ಲ ಅಂಕಿ-ಅಂಶಗಳನ್ನು ಆಧರಿಸಿ ಜಲಮೂಲದ ಸಾಮರ್ಥ್ಯವನ್ನು ಅಳೆಯಲಾಗುತ್ತಿತ್ತು. ಇಷ್ಟೇ ಅಲ್ಲ ಇದನ್ನು ಅವಲಂಬಿಸಿಯೇ ಮುಂದಿನ ಒಂದು ವರ್ಷ ಊರಿನ ಹೊಳೆ, ಕೆರೆ, ಕಟ್ಟೆಗಳಲ್ಲಿರಬಹುದಾದ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು.


ಈ ಎಲ್ಲವನ್ನು ಗಮನಿಸಿದಾಗ ಪ್ರಾಣಿ ಗಣತಿ, ಮರಗಳ ಗಣತಿ ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು ಎಂಬ ಸಂಗತಿ ಹುಬ್ಬೇರಿಸುತ್ತದೆ. ನೀರಿನ ವಿಚಾರದಲ್ಲಂತೂ ಅತ್ಯಂತ ಕರಾರುವಾಕ್ ಲೆಕ್ಕಾಚಾರ ಹಿಂದಿನ ಗ್ರಾಮೀಣರದ್ದಾಗಿತ್ತು. ಈಗಿನ ಆಧುನಿಕ ಪ್ರಾಣಿ ಗಣತಿ ಪದ್ಧತಿಯೂ ಇದೇ ಆಧಾರದಲ್ಲಿಯೇ ಅಭಿವೃದ್ಧಿಗೊಂಡದ್ದೆಂದು ಹೇಳಬಹುದು. ಯಾವುದೇ ಒಂದು ಪ್ರದೇಶದ ಜನಸಂಖ್ಯೆಯನ್ನು ಅತ್ಯಂತ ಸುಲಭವಾಗಿ, ಅಷ್ಟೇ ನಿಖರವಾಗಿ ಎಣಿಸಿ ಹೇಳಿಬಿಡಬಹುದು. ಆದರೆ, ಕಾಡು ಪ್ರಾಣಿಗಳ ಸಂಖ್ಯೆಯನ್ನು ಹಾಗೆ ಎಣಿಸಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರಾಣಿಗಳು ಒಂದು ಕಡೆ ನಿಲ್ಲುವುದೇ ಇಲ್ಲ. ಸದಾ ಸಂಚರಿಸುತ್ತಿರುತ್ತವೆ. ಮತ್ತೊಂದು ಸಂಗತಿಯೆಂದರೆ ಒಂದು ವರ್ಗದ ಪ್ರಾಣಿಗಳು ಸಾಮಾನ್ಯವಾಗಿ ಆಕಾರ, ಸ್ವರೂಪ, ಗಾತ್ರದಲ್ಲಿ ಒಂದೇ ರೀತಿಯಿರುತ್ತವೆ. ಇನ್ನು ಹುಲಿಯಂಥ ಪ್ರಾಣಿಗಳ ಹೆಜ್ಜೆ ಗುರುತಿನ ಗಣತಿ ವಿಶ್ವಾಸಾರ್ಹವಲ್ಲ. ಅದೇ ರೀತಿ ನೀರಿನ ಲೆಕ್ಕ ತೆಗೆಯುವುದೂ ಸುಲಭವಲ್ಲ. ಹರಿಯುವಿಕೆ, ಇಂಗುವುದು ಹಾಗೂ ಆವಿಯಾಗುವುದು ನೀರಿನ ಮೂಲಭೂತ ಗುಣ. ಹೀಗಿರುವಾಗ ಆಯಾ ಪ್ರದೇಶದ ಪ್ರಾಣಿಗಳ ಸಂಖ್ಯೆ ಎಷ್ಟು? ನೀರಿನ ಪ್ರಮಾಣವೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ.


ಈಗೆಲ್ಲ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಒಂದು ಚದರ ಕಿ.ಮೀ.ನಲ್ಲಿ ಇಂತಿಷ್ಟು ಪ್ರಾಣಿಗಳಿವೆ ಎಂದು ಅಂದಾಜು ಮಾಡಲಾಗುತ್ತದೆ. ಸಾಮಾನ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದ ಮಧ್ಯಭಾಗ (ಕೋರ್ ಜೋನ್)ದಲ್ಲಿ ಕಾಲ್ಪನಿಕ ಚೌಕಗಳನ್ನು ಹಾಕಿಕೊಳ್ಳಲಾಗುತ್ತದೆ. ಕಾಡಿನ ಮರಗಳ ಮೇಲೆ ಗುರುತು ಮಾಡಿಯೋ, ನೆಲದಲ್ಲಿ ಅಲ್ಲಲ್ಲಿ ಕಲ್ಲುಗಳನ್ನು ನೆಡುವ ಮೂಲಕವೋ ಇಂಥ ಚೌಕಗಳನ್ನು ನಿರ್ಮಿಸಲಾಗುತ್ತದೆ. ಸ್ಥಳೀಯರನ್ನೊಳಗೊಂಡ ಗುಂಪುಗಳಲ್ಲಿ ಇಂಥ ಗುರುತುಗಳನ್ನುನುಸರಿಸಿ ನಿಶ್ಶಬ್ದವಾಗಿ ಅಲ್ಲಲ್ಲಿ ತಂಗಿ ಪ್ರಾಣಿ-ಪಕ್ಷಿಗಳನ್ನು ಗುರುತುಹಾಕಿಕೊಳ್ಳುತ್ತಾರೆ. ಕಾಂಪಾಸ್‌ನ ಸಹಾಯದಿಂದ ಪ್ರಾಣಿ ಕಂಡುಬಂದ ಕೋನ ಹಾಗೂ ರೇಂಜ್ ಫೈಂಡರ್ ಎಂಬ ಉಪಕರಣದ ಗೆರೆಯಿಂದ ಪ್ರಾಣಿಗಿರುವ ದೂರವನ್ನು ಅಳೆದು ತಮ್ಮ ಮಾಹಿತಿ ಕಲೆಹಾಕುತ್ತಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ಆಯಾ ಪ್ರದೇಶದ ಪ್ರಾಣಿಗಳ ಸಾಂದ್ರತೆ ಅರಿಯಲಾಗುತ್ತದೆ. ಇದನ್ನು ‘ಸೀಳು ದಾರಿ ಗಣತಿ’ ಎಂದು ಗುರುತಿಸಲಾಗುತ್ತದೆ.


ಇದಕ್ಕೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಅದರದ್ದೇ ಆದ ನಿಯಮಗಳಿರುತ್ತದೆ. ಗುಂಪಿನಲ್ಲಿ ಹೆಚ್ಚು ಜನರಿರಬಾರದು. ದಾರಿಯಲ್ಲಿ ಮಾತಾಡುವಂತಿಲ್ಲ. ಶಬ್ದ ಮಾಡುವಂತಿಲ್ಲ. ಸನ್ನೆಗಳಲ್ಲೇ ಸಂವಹನ ಸಾಸಬೇಕು. ಎಷ್ಟೋ ವೇಳೆ ಕಾಡಿನ ಸದ್ದು ಮೋಸ ಮಾಡುವ ಸಾಧ್ಯತೆಯಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡಿನ ಬಗೆಗೆ ಅನುಭವವಿರಬೇಕು. ಸ್ಥಳದ ಪರಿಚಯವಿರಬೇಕು. ಅದಿಲ್ಲದಿದ್ದರೆ ಹಾದಿ ತಪ್ಪಿ, ಎಲ್ಲೆಲ್ಲೋ ಹೋಗಿ ಬಿಡುವ ಅಪಾಯವಿರುತ್ತದೆ. ಪ್ರಾಣಿಗಳ ಸ್ವಭಾವ, ಅವುಗಳ ಜೀವನ ಕ್ರಮ, ನಡೆ ಇತ್ಯಾದಿಗಳ ಮಾಹಿತಿಯೂ ತಿಳಿದಿರಬೇಕು. ಒಟ್ಟಾರೆ ಇದು ಸಾಕಷ್ಟು ಸೂಕ್ಷ್ಮ, ತಾಳ್ಮೆ ಬೇಡುವ ಪ್ರಕ್ರಿಯೆಯಷ್ಟೇ ಅಲ್ಲ. ಅಷ್ಟೇ ಚೇತೋಹಾರಿ ಅನುಭವ. ಮಾತ್ರವಲ್ಲ ಕೆಲವೊಮ್ಮೆ ಅಪಾಯಕಾರಿ ಸಾಹಸವೂ ಹೌದು.


ಇಂದು ವೈಜ್ಞಾನಿಕ ಬೆಳವಣಿಗೆಗಳ ಉತ್ತುಂಗದಲ್ಲಿರುವ ನಾವು ಬದುಕಿನ ತೀರಾ ಅನಿವಾರ್ಯಗಳಾದ ಜೀವ ಅಧ್ಯಯನದ ಬಗೆಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ವಹಿಸಿರುವಂತೆ ಕಂಡು ಬರುತ್ತಿದೆ. ನಮ್ಮ ಪರಿಸರದಲ್ಲಿ ಪ್ರತಿ ದಿನ, ಪ್ರತಿ ಕ್ಷಣವೂ ಬದಲಾವಣೆ, ಬೆಳವಣಿಗೆಗಳಾಗುತ್ತಿದೆ. ಇದನ್ನು ಗುರುತಿಸುವಲ್ಲಿನ ನಮ್ಮ ವೈಫಲ್ಯವೇ, ನೀರಿನ ಕೊರತೆಯಂಥ ಸಮಸ್ಯೆಗಳಿಗೆ ಕಾರಣವಾಗಿದೆ. ಇನ್ನಾದರೂ ಹುಲಿಕಟ್ಟೆಯಂಥವುಗಳನ್ನು ಮೂಢ ನಂಬಿಕೆಯೆಂದು ಉಡಾಫೆ ಮಾಡುವ ಬದಲಿಗೆ, ಅವುಗಳ ಬಗೆಗೆ ಸಾಂಸ್ಥಿಕ ಅಧ್ಯಯನಕ್ಕೆ ತೊಡಗುವುದು ಒಳಿತು.


‘ಲಾಸ್ಟ್’ಡ್ರಾಪ್: ಮೂಲಭೂತ ಅವಶ್ಯಕತೆಗಳ ಲಭ್ಯತೆಯನ್ನು ಗುರುತಿಸುವ ಸಾಮರ್ಥ್ಯ ಪ್ರಾಣಿ-ಪಕ್ಷಿಗಳಲ್ಲಿ ನಮಗಿಂಥ ಕನಿಷ್ಠ ಹತ್ತುಪಟ್ಟು ಹೆಚ್ಚು ಇರುತ್ತದೆ. ಕೊನೇ ಪಕ್ಷ ಅದನ್ನು ಗ್ರಹಿಸುವ ಸೂಕ್ಷ್ಮತೆ ನಮ್ಮದಾದರೆ ಬದುಕು ಈಗಿನ ನೂರು ಪಟ್ಟು ಸುಲಲಿತ.