Friday, September 4, 2009

ಹುಲಿಬನ: ಜಲ ಸಮೃದ್ಧತೆಯ ಸಾಂಕೇತಿಕ ತಾಣ

ಅದು ದಟ್ಟ ಕಾನನದ ನಡುವಿನ ಒಂದು ಊರು. ಊರು ಅನ್ನುವುದಕ್ಕಿಂತ ಲೆಕ್ಕ ಮಾಡಿ ಮೂರು ಮನೆಗಳಿರುವ ಒಂದು ತಾಣ. ಅದೂ ಅಣ್ಣ ತಮ್ಮಂದಿರದ್ದೇ. ಕಾಡು ಹಾದಿಯಲ್ಲೇ ಒಂದೂವರೆ ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕು. ಬಸ್ ಇರಲಿ, ಕೊನೇ ಪಕ್ಷ ದ್ವಿಚಕ್ರವಾಹನವೂ ನೆಟ್ಟಗೆ ಹೋಗುವುದಿಲ್ಲ. ಮಳೆಗಾಲದಲ್ಲಿ ‘ಕಾಲೇಶ್ವರ ಎಕ್ಸ್‌ಪ್ರೆಸ್’ ನಿಮಗಾಗಿ ಸಿದ್ಧವಿರುತ್ತದೆ. ಬೇರೆ ಮಾರ್ಗವೇ ಇಲ್ಲ. ಹೀಗೆ ನಡೆದುಕೊಂಡೇ ಹೋಗುತ್ತಿದ್ದರೆ ರಸ್ತೆಯೆಂದು ಗುರುತಿಸಿಕೊಂಡಿರುವ ಕಿರು ದಾರಿಯ ಪಕ್ಕದಲ್ಲೇ ಒಂದು ಬೃಹತ್ ಕಾರೇ ಮರ ಕಾಣಿಸುತ್ತದೆ. ಅದರ ಬುಡದಲ್ಲೊಂದು ಜೀರ್ಣಾವಸ್ಥೆಯಲ್ಲಿರುವ ಕಟ್ಟೆ. ಆ ಕಟ್ಟೆಯ ಮೇಲೊಂದು ಹುಲಿಯ ಕಲ್ಲಿನ ವಿಗ್ರಹ. ಅದಕ್ಕೊಂದಿಷ್ಟು ಅರಿಷಿಣ, ಕುಂಕುಮ. ಯಾವತ್ತೋ ಹಾಕಿದ್ದ ಹೂವಿನ ಹಾರ ಒಣಗಿ ವಿಗ್ರಹಕ್ಕೆ ಮೆತ್ತಿಕೊಂಡಿದೆ. ಪಕ್ಕದಲ್ಲೇ ಶ್ರದ್ಧಾಳುಗಳು ಊದಿನ ಕಡ್ಡಿ ಹಚ್ಚಿದ್ದಕ್ಕೆ ಸಾಕ್ಷಿಯಾಗಿ ಅರ್ಧ ಉರಿದುಳಿದ ಒಂದಷ್ಟು ಕಡ್ಡಿಗಳು ರಾರಾಜಿಸುತ್ತಿವೆ.

ಅಚ್ಚರಿಯಾದರೂ ಸತ್ಯ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹುಲಿ ಕಟ್ಟೆಗಳು ಅಲ್ಲಲ್ಲಿ ಪೂಜೆಗೊಳ್ಳುತ್ತಿವೆ. ಎಷ್ಟೋ ಊರುಗಳನ್ನು ಹುಲಿಯ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಮಲೆನಾಡಿನ ಭಾಗಗಳಲ್ಲಂತೂ ತಾಲೂಕಿಗೊಂದರಂತೆ ಹುಲಿಮನೆಯೋ, ಹುಲಿಕಟ್ಟೆಯೋ, ಹುಲ್ಕಲ್ಲೋ, ಹುಲಿಕಾಡೋ, ಹುಲದೇವರಬನವೋ ಒಂದಲ್ಲಾ ಒಂದು ಇಂಥದ್ದೇ ಹೆಸರಿನ ಊರು ಇದ್ದೇ ಇರುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಲಿಕಲ್ ಘಾಟಿ ಸಾಕಷ್ಟು ಪ್ರಸಿದ್ಧ.


ನಂಬಿಕೆಗಳ ಪ್ರಶ್ನೆ ಏನೇ ಇರಲಿ. ನಾವು ಭಾರತೀಯರಿಗೆ ಪ್ರಕೃತಿಯ ಎಲ್ಲ ಅಂಶಗಳೂ ಪೂಜನೀಯ. ಹೀಗಿರುವಾಗ ಪ್ರಕೃತಿಯ ಸೃಷ್ಟಿಗಳಲ್ಲಿ ಒಂದಾದ ಹುಲಿಯೂ ದೇವರಾದದ್ದರಲ್ಲಿ ಅಚ್ಚರಿಯಿಲ್ಲ. ಪ್ರಶ್ನೆ ಅದಲ್ಲ. ಹುಲಿ ಕಟ್ಟೆಯಂಥವುಗಳು ನಿರ್ದಿಷ್ಟ ಪ್ರದೇಶದಲ್ಲೇ ಏಕೆ ಇವೆ ? ಕಾಡಿನ ಯಾವುದೇ ಪ್ರದೇಶದಲ್ಲಿ ಹುಲಿ ವಾಸ ಮಾಡಬಹುದು. ಅಲ್ಲೆಲ್ಲಾ ಹುಲಿ ದೇವರುಗಳನ್ನು ಗ್ರಾಮೀಣರು ಪ್ರತಿಷ್ಠಾಪಿಸಿಲ್ಲವೇಕೆ ? ಇಂಥ ಹುಡುಕಾಟಕ್ಕೆ ಇಳಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಂತು. ಬರೀ ಪೂಜೆಗಾಗಿಯೇ ಇಂಥ ಕಟ್ಟೆಗಳನ್ನು ಕಟ್ಟಿದ್ದಲ್ಲ. ಹೀಗೆ ಹುಲಿ ಕಟ್ಟೆಗಳು ಇರುವ ತಾಣಗಳೆಲ್ಲ ಅತ್ಯಂತ ದಟ್ಟ ಜಲಮೂಲವನ್ನು ಹೊಂದಿದ್ದವು. ಕಾಲ ಕ್ರಮೇಣ ನಾಗರಿಕತೆಯ ದಾಳಿಗೆ ಸಿಲುಕಿ ಅರಣ್ಯವೂ ನಾಶವಾಯಿತು, ಹುಲಿ ಸಂತತಿಗಳೂ ಕ್ಷೀಣಿಸುತ್ತ ಬಂದು ಕಟ್ಟೆಗಳಷ್ಟೇ ಉಳಿದುಕೊಂಡಿವೆ.


ಹುಲಿಗಳಂತಲೇ ಅಲ್ಲ, ಸಾಮಾನ್ಯವಾಗಿ ಕಾಡು ಪ್ರಾಣಿಗಳು ಜಲಮೂಲದ ಸಮೀಪದಲ್ಲೇ ವಾಸಿಸುತ್ತವೆ. ಅದರಲ್ಲೂ ಹುಲಿಯದ್ದು ಅತ್ಯಂತ ವಿಶಿಷ್ಟ ಸ್ವಭಾವ. ಅದು ನೀರಿಗಾಗಿಯಷ್ಟೇ ಅಲ್ಲ, ನೀರನ್ನು ಹುಡುಕಿಕೊಂಡು ಬರುವ ಪ್ರಾಣಿಗಳ ಬೇಟೆಯ ಉದ್ದೇಶದಿಂದಲೂ ಜಲಮೂಲದ ಸಮೀಪದಲ್ಲೇ ತನ್ನ ವಾಸ ಸ್ಥಳವನ್ನು ಗುರುತಿಸಿಕೊಂಡಿರುತ್ತಿತ್ತು. ಹೀಗೆ ಹುಲಿ ಸಂತತಿ ದಟ್ಟವಾಗಿದ್ದ ಕಡೆಗಳಲ್ಲೆಲ್ಲ ಹಿಂದಿನವರು ಅದನ್ನು ಗುರುತಿಸಲು ಸುಲಭವಾಗಲಿ ಎಂಬ ದೃಷ್ಟಿಯಿಂದ ಇಂಥ ಕಟ್ಟೆಗಳನ್ನು ಕಟ್ಟಿ ಪೂಜೆಯ ವ್ಯವಸ್ಥೆ ಮಾಡಿರುತ್ತಿದ್ದರು.


ಇನ್ನೂ ವಿಶೇಷವೆಂದರೆ, ಹೀಗೆ ಸ್ಥಳ ನಿಗದಿಗೆ ಮುನ್ನ ಅತ್ಯಂತ ನಿಖರ ಸಮೀಕ್ಷೆಯನ್ನೂ ಮಾಡಲಾಗುತ್ತಿತ್ತು. ಆ ಭಾಗದ ಅರಣ್ಯ ಪ್ರದೇಶ, ಅಲ್ಲಿರಬಹುದಾದ ಪ್ರಾಣಿ ಸಂಕುಲ, ಜೀವ-ಸಸ್ಯ ವೈವಿಧ್ಯ ಇತ್ಯಾದಿ ಅಂಶಗಳೆಲ್ಲವನ್ನೂ ತಮ್ಮದೇ ವಿಶಿಷ್ಟ ಕ್ರಮಗಳಿಂದ ಲೆಕ್ಕಹಾಕಲಾಗುತ್ತಿತ್ತು. ಈ ಎಲ್ಲ ಅಂಕಿ-ಅಂಶಗಳನ್ನು ಆಧರಿಸಿ ಜಲಮೂಲದ ಸಾಮರ್ಥ್ಯವನ್ನು ಅಳೆಯಲಾಗುತ್ತಿತ್ತು. ಇಷ್ಟೇ ಅಲ್ಲ ಇದನ್ನು ಅವಲಂಬಿಸಿಯೇ ಮುಂದಿನ ಒಂದು ವರ್ಷ ಊರಿನ ಹೊಳೆ, ಕೆರೆ, ಕಟ್ಟೆಗಳಲ್ಲಿರಬಹುದಾದ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು.


ಈ ಎಲ್ಲವನ್ನು ಗಮನಿಸಿದಾಗ ಪ್ರಾಣಿ ಗಣತಿ, ಮರಗಳ ಗಣತಿ ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು ಎಂಬ ಸಂಗತಿ ಹುಬ್ಬೇರಿಸುತ್ತದೆ. ನೀರಿನ ವಿಚಾರದಲ್ಲಂತೂ ಅತ್ಯಂತ ಕರಾರುವಾಕ್ ಲೆಕ್ಕಾಚಾರ ಹಿಂದಿನ ಗ್ರಾಮೀಣರದ್ದಾಗಿತ್ತು. ಈಗಿನ ಆಧುನಿಕ ಪ್ರಾಣಿ ಗಣತಿ ಪದ್ಧತಿಯೂ ಇದೇ ಆಧಾರದಲ್ಲಿಯೇ ಅಭಿವೃದ್ಧಿಗೊಂಡದ್ದೆಂದು ಹೇಳಬಹುದು. ಯಾವುದೇ ಒಂದು ಪ್ರದೇಶದ ಜನಸಂಖ್ಯೆಯನ್ನು ಅತ್ಯಂತ ಸುಲಭವಾಗಿ, ಅಷ್ಟೇ ನಿಖರವಾಗಿ ಎಣಿಸಿ ಹೇಳಿಬಿಡಬಹುದು. ಆದರೆ, ಕಾಡು ಪ್ರಾಣಿಗಳ ಸಂಖ್ಯೆಯನ್ನು ಹಾಗೆ ಎಣಿಸಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರಾಣಿಗಳು ಒಂದು ಕಡೆ ನಿಲ್ಲುವುದೇ ಇಲ್ಲ. ಸದಾ ಸಂಚರಿಸುತ್ತಿರುತ್ತವೆ. ಮತ್ತೊಂದು ಸಂಗತಿಯೆಂದರೆ ಒಂದು ವರ್ಗದ ಪ್ರಾಣಿಗಳು ಸಾಮಾನ್ಯವಾಗಿ ಆಕಾರ, ಸ್ವರೂಪ, ಗಾತ್ರದಲ್ಲಿ ಒಂದೇ ರೀತಿಯಿರುತ್ತವೆ. ಇನ್ನು ಹುಲಿಯಂಥ ಪ್ರಾಣಿಗಳ ಹೆಜ್ಜೆ ಗುರುತಿನ ಗಣತಿ ವಿಶ್ವಾಸಾರ್ಹವಲ್ಲ. ಅದೇ ರೀತಿ ನೀರಿನ ಲೆಕ್ಕ ತೆಗೆಯುವುದೂ ಸುಲಭವಲ್ಲ. ಹರಿಯುವಿಕೆ, ಇಂಗುವುದು ಹಾಗೂ ಆವಿಯಾಗುವುದು ನೀರಿನ ಮೂಲಭೂತ ಗುಣ. ಹೀಗಿರುವಾಗ ಆಯಾ ಪ್ರದೇಶದ ಪ್ರಾಣಿಗಳ ಸಂಖ್ಯೆ ಎಷ್ಟು? ನೀರಿನ ಪ್ರಮಾಣವೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ.


ಈಗೆಲ್ಲ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಒಂದು ಚದರ ಕಿ.ಮೀ.ನಲ್ಲಿ ಇಂತಿಷ್ಟು ಪ್ರಾಣಿಗಳಿವೆ ಎಂದು ಅಂದಾಜು ಮಾಡಲಾಗುತ್ತದೆ. ಸಾಮಾನ್ಯವಾಗಿ ಸಂರಕ್ಷಿತ ಅರಣ್ಯ ಪ್ರದೇಶದ ಮಧ್ಯಭಾಗ (ಕೋರ್ ಜೋನ್)ದಲ್ಲಿ ಕಾಲ್ಪನಿಕ ಚೌಕಗಳನ್ನು ಹಾಕಿಕೊಳ್ಳಲಾಗುತ್ತದೆ. ಕಾಡಿನ ಮರಗಳ ಮೇಲೆ ಗುರುತು ಮಾಡಿಯೋ, ನೆಲದಲ್ಲಿ ಅಲ್ಲಲ್ಲಿ ಕಲ್ಲುಗಳನ್ನು ನೆಡುವ ಮೂಲಕವೋ ಇಂಥ ಚೌಕಗಳನ್ನು ನಿರ್ಮಿಸಲಾಗುತ್ತದೆ. ಸ್ಥಳೀಯರನ್ನೊಳಗೊಂಡ ಗುಂಪುಗಳಲ್ಲಿ ಇಂಥ ಗುರುತುಗಳನ್ನುನುಸರಿಸಿ ನಿಶ್ಶಬ್ದವಾಗಿ ಅಲ್ಲಲ್ಲಿ ತಂಗಿ ಪ್ರಾಣಿ-ಪಕ್ಷಿಗಳನ್ನು ಗುರುತುಹಾಕಿಕೊಳ್ಳುತ್ತಾರೆ. ಕಾಂಪಾಸ್‌ನ ಸಹಾಯದಿಂದ ಪ್ರಾಣಿ ಕಂಡುಬಂದ ಕೋನ ಹಾಗೂ ರೇಂಜ್ ಫೈಂಡರ್ ಎಂಬ ಉಪಕರಣದ ಗೆರೆಯಿಂದ ಪ್ರಾಣಿಗಿರುವ ದೂರವನ್ನು ಅಳೆದು ತಮ್ಮ ಮಾಹಿತಿ ಕಲೆಹಾಕುತ್ತಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ಆಯಾ ಪ್ರದೇಶದ ಪ್ರಾಣಿಗಳ ಸಾಂದ್ರತೆ ಅರಿಯಲಾಗುತ್ತದೆ. ಇದನ್ನು ‘ಸೀಳು ದಾರಿ ಗಣತಿ’ ಎಂದು ಗುರುತಿಸಲಾಗುತ್ತದೆ.


ಇದಕ್ಕೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಅದರದ್ದೇ ಆದ ನಿಯಮಗಳಿರುತ್ತದೆ. ಗುಂಪಿನಲ್ಲಿ ಹೆಚ್ಚು ಜನರಿರಬಾರದು. ದಾರಿಯಲ್ಲಿ ಮಾತಾಡುವಂತಿಲ್ಲ. ಶಬ್ದ ಮಾಡುವಂತಿಲ್ಲ. ಸನ್ನೆಗಳಲ್ಲೇ ಸಂವಹನ ಸಾಸಬೇಕು. ಎಷ್ಟೋ ವೇಳೆ ಕಾಡಿನ ಸದ್ದು ಮೋಸ ಮಾಡುವ ಸಾಧ್ಯತೆಯಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡಿನ ಬಗೆಗೆ ಅನುಭವವಿರಬೇಕು. ಸ್ಥಳದ ಪರಿಚಯವಿರಬೇಕು. ಅದಿಲ್ಲದಿದ್ದರೆ ಹಾದಿ ತಪ್ಪಿ, ಎಲ್ಲೆಲ್ಲೋ ಹೋಗಿ ಬಿಡುವ ಅಪಾಯವಿರುತ್ತದೆ. ಪ್ರಾಣಿಗಳ ಸ್ವಭಾವ, ಅವುಗಳ ಜೀವನ ಕ್ರಮ, ನಡೆ ಇತ್ಯಾದಿಗಳ ಮಾಹಿತಿಯೂ ತಿಳಿದಿರಬೇಕು. ಒಟ್ಟಾರೆ ಇದು ಸಾಕಷ್ಟು ಸೂಕ್ಷ್ಮ, ತಾಳ್ಮೆ ಬೇಡುವ ಪ್ರಕ್ರಿಯೆಯಷ್ಟೇ ಅಲ್ಲ. ಅಷ್ಟೇ ಚೇತೋಹಾರಿ ಅನುಭವ. ಮಾತ್ರವಲ್ಲ ಕೆಲವೊಮ್ಮೆ ಅಪಾಯಕಾರಿ ಸಾಹಸವೂ ಹೌದು.


ಇಂದು ವೈಜ್ಞಾನಿಕ ಬೆಳವಣಿಗೆಗಳ ಉತ್ತುಂಗದಲ್ಲಿರುವ ನಾವು ಬದುಕಿನ ತೀರಾ ಅನಿವಾರ್ಯಗಳಾದ ಜೀವ ಅಧ್ಯಯನದ ಬಗೆಗೆ ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ವಹಿಸಿರುವಂತೆ ಕಂಡು ಬರುತ್ತಿದೆ. ನಮ್ಮ ಪರಿಸರದಲ್ಲಿ ಪ್ರತಿ ದಿನ, ಪ್ರತಿ ಕ್ಷಣವೂ ಬದಲಾವಣೆ, ಬೆಳವಣಿಗೆಗಳಾಗುತ್ತಿದೆ. ಇದನ್ನು ಗುರುತಿಸುವಲ್ಲಿನ ನಮ್ಮ ವೈಫಲ್ಯವೇ, ನೀರಿನ ಕೊರತೆಯಂಥ ಸಮಸ್ಯೆಗಳಿಗೆ ಕಾರಣವಾಗಿದೆ. ಇನ್ನಾದರೂ ಹುಲಿಕಟ್ಟೆಯಂಥವುಗಳನ್ನು ಮೂಢ ನಂಬಿಕೆಯೆಂದು ಉಡಾಫೆ ಮಾಡುವ ಬದಲಿಗೆ, ಅವುಗಳ ಬಗೆಗೆ ಸಾಂಸ್ಥಿಕ ಅಧ್ಯಯನಕ್ಕೆ ತೊಡಗುವುದು ಒಳಿತು.


‘ಲಾಸ್ಟ್’ಡ್ರಾಪ್: ಮೂಲಭೂತ ಅವಶ್ಯಕತೆಗಳ ಲಭ್ಯತೆಯನ್ನು ಗುರುತಿಸುವ ಸಾಮರ್ಥ್ಯ ಪ್ರಾಣಿ-ಪಕ್ಷಿಗಳಲ್ಲಿ ನಮಗಿಂಥ ಕನಿಷ್ಠ ಹತ್ತುಪಟ್ಟು ಹೆಚ್ಚು ಇರುತ್ತದೆ. ಕೊನೇ ಪಕ್ಷ ಅದನ್ನು ಗ್ರಹಿಸುವ ಸೂಕ್ಷ್ಮತೆ ನಮ್ಮದಾದರೆ ಬದುಕು ಈಗಿನ ನೂರು ಪಟ್ಟು ಸುಲಲಿತ.

No comments: