ಅಷ್ಟಕ್ಕೂ ಬರ ಅಂದರೇನು ? ಮೂಲಭೂತ ಪ್ರಶ್ನೆ. ತಕ್ಷಣಕ್ಕೆ ಉತ್ತರ ಹೊಳೆಯದೇ ತಡಕಾಡುವಂತಾಗುತ್ತದೆ. ಬರ ಅಂದರೆ ಬರನಪ್ಪಾ. ಹಾಗೆಂದರೇನು ಅಂದರೆ; ಬೇಕಿದ್ದರೆ ಬರಗಾಲ ಬಂದಾಗ ಏನಾಗುತ್ತದೆ ಎಂಬುದನ್ನು ಹೇಳಬಹುದು. ಮಳೆ ಬರುವುದಿಲ್ಲ, ಬೆಳೆ ಬೆಳೆಯುವುದಿಲ್ಲ, ಕೆರೆ-ಬಾವಿಗಳೆಲ್ಲ ಬತ್ತಿ ಹೋಗುತ್ತದೆ, ಕುಡಿಯಲೂ ನೀರಿರುವುದಿಲ್ಲ, ಜಾನುವಾರುಗಳಿಗೆ ಮೇವು ನಾಸ್ತಿ, ಕೊನೆಗೆ ಬಡವರಿಗೆ ತಿನ್ನಲು ಅನ್ನವೂ ಇರುವುದಿಲ್ಲ. ಒಟ್ಟಾರೆ ಎಲ್ಲೆಲ್ಲೂ ಭೀಕರ ಕ್ಷಾಮ. ಹಾಗಾದರೆ ನಾವು ಅದನ್ನು ಬರಗಾಲ ಎಂದು ಕರೆಯಬಹುದು.
ಅರೆ ಮತ್ತೆ ಸಂದೇಹವೇ ? ಹೌದು, ಮೂಡಲೇಬೇಕಲ್ಲ. ಒಮ್ಮೆ ಬರ ಅನ್ನೋದು, ಇನ್ನೊಂದು ಬಾರಿ ಕ್ಷಾಮ ಅನ್ನೋದು. ಏನಿದು ? ಎರಡರಲ್ಲಿ ಯಾವುದು ಸರಿ ? ಬರವೋ, ಕ್ಷಾಮವೋ ?- ಅಂದರೆ ಎರಡೂ ಸರಿ ಅನ್ನಬೇಕಾಗುತ್ತದೆ. ಹಾಗಾದರೆ ಬರ, ಕ್ಷಾಮ ಎರಡೂ ಒಂದೇನಾ ? ಖಂಡಿತಾ ಅಲ್ಲ. ಹಾಗಾದರೆ ಬರಕ್ಕೂ ಕ್ಷಾಮಕ್ಕೂ ವ್ಯತ್ಯಾಸ ಏನು ? ಇದೊಳ್ಳೆ ಕತೆ. ನೀವು ಮತ್ತೆ ಮೊದಲಿನ ಪ್ರಶ್ನೆಗೇ ಬಂದು ನಿಂತಂತಾಯಿತು. ಕೇಳಿದ ಸ್ವರೂಪ ಸ್ವಲ್ಪ ಬೇರೆ ಅಷ್ಟೆ.
ಇರಲಿ, ಒಂದೊಂದಾಗಿ ಅಥ ಮಾಡಿಕೊಳ್ಳುತ್ತ ಹೋಗೋಣ. ಇವೆಲ್ಲವನ್ನೂ ಒತ್ತಟ್ಟಿಗೆ ಇಡಿ. ಸ್ವಲ್ಪ ಬೇರೇನಾದರೂ ಯೋಚಿಸೋಣ. ನಿಮ್ಮ ಮನೆಯಲ್ಲಿ ಊಟದ ಸಮಯ. ಎಲ್ಲರದ್ದೂ ಊಟವಾಗಿ ಇನ್ನೇನು ಪಾತ್ರೆ ಎಲ್ಲ ಸ್ವಚ್ಛಗೊಳಿಸುತ್ತಿರುವಾಗ ಗೇಟಿನ ಬಳಿ- ‘ಅಮ್ಮಾ, ತಾಯಿ. ಹೊಟ್ಟೆಗೇನಾದ್ರು ಹಾಕಿ ತಾಯಿ...’ ಅಂತ ಕೂಗಿದ್ದು ಕೇಳಿಸುತ್ತದೆ. ಬಾಗಿಲು ತೆರೆದು ನೋಡಿದರೆ ಹಣ್ಣು ಹಣ್ಣು ಮುದುಕನೊಬ್ಬ, ಬಡಕಲು ದೇಹ ಹೊತ್ತು ನಿಲ್ಲಲೂ ತ್ರಾಣವಿಲ್ಲದೇ ಕೀರಲು ಧ್ವನಿಯಲ್ಲಿ ಕರೆಯುತ್ತಿರುತ್ತಾನೆ. ಆತನ ದೈನ್ಯ ಸ್ಥಿತಿ ನೋಡಲಾರದೇ ಒಂದಷ್ಟು ಅನ್ನ ತಂದು ಆತನ ತಾಟಿಗೆ ಹಾಕುತ್ತೀರಿ. ಅಷ್ಟೆ, ಅದನ್ನು ಏನು ಅಂತಲೂ ನೋಡದೇ ಗಬಗಬನೆ ತಿಂದು ಮುಗಿಸುತ್ತಾನೆ ಆತ. ‘ಛೆ...ಒಳ್ಳೆ ಬರಗೆಟ್ಟು ಬಂದವನಂತೆ ತಿಂದುಬಿಟ್ಟ’ ಎಂದು ಅಂದುಕೊಳ್ಳುತ್ತಾ ಕನಿಕರದಿಂದ ಒಳಗೆ ಬರುತ್ತೀರಿ. ಈಗ ಹೇಳಿ, ಬರಗೆಟ್ಟು ಬಂದದ್ದು ಅಂದರೆ ಏನು ? ಅಂದರೆ ಅನ್ನವೇ ಇಲ್ಲದವನಂತೆ ಎಂದರ್ಥ. ಹ್ಞಾ...ಇಲ್ಲಿಯೂ ಅದೇ ಅರ್ಥ. ಬರ ಅಂದರೆ ಇಲ್ಲದ್ದು. ಮಳೆಯೇ ಇಲ್ಲದ, ನೀರೇ ಇಲ್ಲದ ಸ್ಥಿತಿಯನ್ನು ನಾವು ಬರ ಎಂದು ಗುರುತಿಸುತ್ತೇವೆ. ಇಂಥ ಬರವನ್ನು ಮೂರು ರೀತಿಯಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಹವಾಮಾನ ಸಂಬಂ ಬರ, ಎರಡನೆಯದು ಜಲ ಬರ. ಕೊನೆಯದು ಕೃಷಿ ಬರ.
ಹವಾಮಾನ ಸಂಬಂ ಬರ ಸ್ಥಿತಿ ನಿರ್ಮಾಣವಾಗಲು ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಆ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿ ನೀರಿನ ಕೊರತೆ ತಲೆದೋರುತ್ತದೆ. ಇಡೀ ರಾಷ್ಟ್ರ ಬಹುತೇಕ ಒಂದು ರೀತಿಯ ಮಾನ್ಸೂನ್ ಧರ್ಮವನ್ನು ಹೊಂದಿರುತ್ತದೆ. ಹಾಗಿದ್ದೂ ಪ್ರದೇಶದಿಂದ ಪ್ರದೇಶಕ್ಕೆ ಅದರಲ್ಲೂ ಒಂದಷ್ಟು ವ್ಯತ್ಯಸ್ತವಾಗುವುದನ್ನು ಕಾಣುತ್ತೇವೆ. ಅದನ್ನು ಆಧರಿಸಿ ನೋಡಿದಾಗ ಕೆಲ ವರ್ಷಗಳಲ್ಲಿ ಸಾಮಾನ್ಯ ಮಳೆಯ ಪ್ರಮಾಣಕ್ಕಿಂತಲೂ ಕಡಿಮೆ ಲಭ್ಯತೆ ಕಂಡುಬರುತ್ತದೆ. ಹೀಗೆ ಹೆಚ್ಚು ಕಡಿಮೆಯಾಗುವುದನ್ನು ವಾಡಿಕೆಗಿಂತ ಕಡಿಮೆ, ವಾಡಿಕೆಗಿಂತ ಹೆಚ್ಚು, ವಾಡಿಕೆಗಿಂತ ತೀರಾ ಕಡಿಮೆ, ಕೊರತೆ-ಇತ್ಯಾದಿ ಹಂತಗಳಲ್ಲಿ ಗುರುತಿಸುತ್ತೇವೆ. ವಾಡಿಕೆ ಮಳೆಯಲ್ಲಿ ಕೊರತೆ ಕಂಡು ಬಂದರೆ ಆಗ ಬರಸ್ಥಿತಿಯನ್ನು ಘೋಷಿಸಲಾಗುತ್ತದೆ.
ಜಲ ಬರ ಎಂದರೆ ಮೇಲ್ಜಲದಲ್ಲಿನ ತೀವ್ರ ಕುಸಿತ. ಕೆರೆ, ಹಳ್ಳ-ಕೊಳ್ಳ ಎಲ್ಲವೂ ಒಣಗಿ ಹೋಗಿರುತ್ತದೆ. ಇದರಿಂದಾಗಿ ಭೂಮಿಯ ಮೇಲ್ಭಾಗದ ನೀರಿನ ಪಸೆ ಸಂಪೂರ್ಣ ಬತ್ತಿ ಹೋಗಿ, ಎಲ್ಲೆಡೆ ಗಾರುಗಾರು ಕಾಣಿಸುತ್ತದೆ. ನದಿ ಪಾತ್ರಗಳಲ್ಲಿ ಮರಳುರಾಶಿ, ಕಲ್ಲುಗಳು ಮಾತ್ರವೇ ಇಣುಕುತ್ತಿರುತ್ತವೆ. ಇನ್ನು ಕೃಷಿ ಬರ. ಮಣ್ಣಿನಲ್ಲಿರುವ ತೇವಾಂಶವೂ ಬತ್ತಿ ಹೋಗಿ ನೆಲ ಬಿರುಕು ಬಿಡಲಾರಂಭಿಸುತ್ತದೆ. ಇದರ ಪರಿಣಾಮ ಕೃಷಿ ಹಿನ್ನಡೆ ಅನುಭವಿಸುತ್ತದೆ. ಉತ್ಪಾದನೆ ಕುಸಿಯುತ್ತದೆ. ಆಹಾರದ ಕೊರತೆ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ೧೯೮೭, ೧೯೭೯, ೧೯೭೨ರಲ್ಲಿ ಇಂಥ ಬರ ಕಾಣಿಸಿಕೊಂಡಿತ್ತು. ಈ ವರ್ಷ ಪುನಃ ದೇಶದಲ್ಲಿ ಬರದ ಘೋಷಣೆಯಾಗಿದ್ದು ಶೇ.೧೦ರಷ್ಟು ಪ್ರದೇಶದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಶೇ.೧೯ರಷ್ಟು ಪ್ರದೇಶದಲ್ಲಿ ಪರಿವರ್ತಿತ ಬರವನ್ನು ಗುರುತಿಸಲಾಗಿದೆ. ದೇಶದ ಶೇ.೨೦ಕ್ಕೂ ಹೆಚ್ಚು ಪ್ರದೇಶದಲ್ಲಿ ಬರ ಕಾಣಿಸಿಕೊಂಡರೆ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುತ್ತದೆ. ಈ ಬಾರಿ ಅಂಥದ್ದೇ ಸ್ಥಿತಿಯನ್ನು ಘೋಷಿಸಲಾಗಿದ್ದು ಎಲ್‌ನಿನೋ ಪರಿಣಾಮದ ಫಲವಿದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಎಲ್‌ನಿನೋ ದಕ್ಷಿಣ ಕಂಪನದ ಕಾರಣದಿಂದ ದೇಶಾದ್ಯಂತ ಮಳೆಯಲ್ಲಿ ಏರು ಪೇರಾಗಿದ್ದು, ಪ್ರಮುಖ ೭೦ಕ್ಕೂ ಹೆಚ್ಚು ಜಲಾನಯನ ಪ್ರದೇಶ ಒಣಗಿ ನಿಂತಿದೆ. ಇದರಿಂದ ಅಂತರ್ಜಲದ ಮಟ್ಟದಲ್ಲೂ ತೀವ್ರ ಕುಸಿತ ಕಂಡು ಬಂದಿದೆ.
ಇದ್ಯಾವುದು ಹೊಸ ಪದ ಎಲ್‌ನಿನೊ ? ಇಲ್ಲಿನ ನೀರಿಗೂ ಎಲ್ಲಿಯದೋ ಎಲ್‌ನಿನೋಗೂ ಏನು ಸಂಬಂಧ ? ಪ್ರಶ್ನೆ ಸಹಜವಾದದ್ದೇ. ‘ಎಲ್ ನಿನೋ- ದಕ್ಷಿಣ ಕಂಪನ’(ಇಎನ್‌ಎಸ್‌ಒ) ಎಂದರೆ ಪೆಸಿಫಿಕ್ ಸಮುದ್ರ ಹಾಗೂ ವಾತಾವರಣದಲ್ಲಿ ಕಾಲಮಾನಕ್ಕನುಸರಿಸಿ ಉಂಟಾಗುವ ಪಲ್ಲಟ. ಇದರಲ್ಲೇ ಎರಡು ಬಗೆ- ಎಲ್ ನಿನೋ ಹಾಗೂ ಲಾ ನಿನಾ. ಮೊದಲನೆಯದರಲ್ಲಿ ವಾತಾವರಣ ಬೆಚ್ಚಗಾದರೆ, ಎರಡನೆಯದರಲ್ಲಿ ವಾತಾವರಣ ತಣ್ಣಗಾಗುತ್ತದೆ. ಇದು ಮೂರರಿಂದ ಎಂಟು ವರ್ಷಕ್ಕೊಮ್ಮೆ ನಡೆಯುವ ಸಹಜ ವಿದ್ಯಮಾನ. ಸ್ಪಾನಿಶ್ ಭಾಷೆಯಲ್ಲಿ ಎಲ್ ನಿನೋ ಅಂದರೆ ‘ಗಂಡು ಮಗು’, ಲಾ ನಿನಾ ಅಂದರೆ ‘ಹೆಣ್ಣು ಮಗು’.
ಪ್ರತಿ ಎಲ್‌ನಿನೋಗೂ ಅದರದೇ ಆದ ಪರಿಣಾಮಗಳಿರುತ್ತವೆ. ಈ ಅವಯಲ್ಲಿ ಜಗತ್ತಿನ ಹಲವಾರು ಕಡೆ ನೆರೆ, ಪ್ರವಾಹ, ಬರ ಮತ್ತಿತರ ಪರಿಸರ ವೈಪರೀತ್ಯಗಳು ಸಂಭವಿಸುತ್ತವೆ. ಪೆಸಿಫಿಕ್ ಸಾಗರಕ್ಕೆ ಸಮೀಪವಾಗಿರುವ ದೇಶಗಳು ಇದರ ಭಾರಿ ಪರಿಣಾಮಕ್ಕೆ ತುತ್ತಾಗುತ್ತವೆ. ಅದರಲ್ಲೂ ಕೃಷಿ, ಮೀನುಗಾರಿಕೆಗಳ ಮೇಲೆ ಅವಲಂಬಿಸಿದ ಅಭಿವೃದ್ಧಿಶೀಲ ದೇಶಗಳ ಮೇಲಾಗುವ ಪರಿಣಾಮ ಅನೂಹ್ಯ.
ಎಲ್‌ನಿನೋವನ್ನು ಅಳೆಯುವುದು ಹೇಗೆ ? ಅದಕ್ಕೂ ಕ್ರಮವಿದೆ. ಆಸ್ಟ್ರೇಲಿಯಾದ ತಾಹಿತಿ ಮತ್ತು ಡಾರ್ವಿನ್ ಪ್ರದೇಶಗಳ ವಾತಾವರಣದ ಒತ್ತಡದ ವ್ಯತ್ಯಾಸ, ಅಥವಾ ಪೆಸಿಫಿಕ್ ಧ್ರುವ ಕೇಂದ್ರ ಮತ್ತು ಪೂರ್ವ ಪೆಸಿಫಿಕ್‌ನ ಮೇಲ್ಮೈ ಜಲಗಳ ಉಷ್ಣತೆಯ ವ್ಯತ್ಯಾಸವೇ ಇದರ ಅಳತೆ. ಮೂರರಿಂದ ಎಂಟು ವರ್ಷಕ್ಕೊಮ್ಮೆ ಯಾವಾಗ ಬೇಕಾದರೂ ಸಂಭವಿಸುವ ಈ ಎಲ್ ನಿನೋದ ಮೂಲ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನ ನಡೆದೇ ಇದೆ.
ಹಿಂದೂ ಸಾಗರ, ಇಂಡೊನೇಷ್ಯಾ, ಆಸ್ಟ್ರೇಲಿಯಾದ ಮೇಲ್ಮೈ ಒತ್ತಡದಲ್ಲಿ ಹೆಚ್ಚಳ, ಕೇಂದ್ರ ಮತ್ತು ಪೂರ್ವ ಪೆಸಿಫಿಕ್ ಸಮುದ್ರದ ವಾಯುಭಾರದಲ್ಲಿ ಕುಸಿತ, ದಕ್ಷಿಣ ಪೆಸಿಫಿಕ್‌ನ ವಾಣಿಜ್ಯ ಮಾರುತಗಳು ದುರ್ಬಲಗೊಳ್ಳುವುದು ಅಥವಾ ಪೂರ್ವದತ್ತ ಚಲಿಸುವುದು, ಪೆರುವಿನ ಬಳಿ ಬೆಚ್ಚಗಿನ ಮಾರುತ, ಉತ್ತರ ಪೆರುವಿನ ಮರುಭೂಮಿಯಲ್ಲಿ ಮಳೆ, ಹಿಂದೂ ಸಾಗರ ಮತ್ತು ಪಶ್ಚಿಮ ಪೆಸಿಫಿಕ್‌ನಿಂದ ಪೂರ್ವ ಪೆಸಿಫಿಕ್‌ನತ್ತ ಬಿಸಿನೀರಿನ ಪ್ರವಾಹದ ಹರಿವು- ಇವೆಲ್ಲ ಎಲ್‌ನಿನೋದ ಪ್ರಾಥಮಿಕ ಲಕ್ಷಣಗಳು.
ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದೇವೆ ಅನ್ನುತ್ತೀರಾ ? ಕ್ಷಾಮವೆನ್ನುವುದನ್ನು ಮರೆತೇಬಿಟ್ಟೆವು ಎಂಬುದು ನಿಮ್ಮ ಆಕ್ಷೇಪ ತಾನೆ ? ಅಲ್ಲಿಗೇ ಬರೋಣ. ಇಂಥ ಎಲ್ಲ ಪರಿಸ್ಥಿತಿಯಲ್ಲಿ ಉದ್ಭವಿಸುವ ಆಹಾರದ ಕೊರತೆಯನ್ನು, ತಿನ್ನಲೂ ಗತಿಯಿಲ್ಲ, ಜೀವಗಳು ಹಸಿವಿಗೆ ಆಹುತಿಯಾಗುತ್ತಿವೆ; ಮನುಷ್ಯರು ಹಸಿದ ಹೊಟ್ಟೆಯಲ್ಲೇ ಪ್ರಾಣ ಬಿಡುವ ಸಂದರ್ಭ ಎದುರಾದರೆ ಅದನ್ನು ಕ್ಷಾಮ ಎಂದು ಕರೆಯಲಾಗುತ್ತದೆ. ಈವರೆಗೆ ದೇಶದಲ್ಲಿ ಐದು ಬಾರಿ ಭೀಕರ ಕ್ಷಾಮ ತಲೆದೋರಿದೆ. ೧೬೩೦-೩೨ರಲ್ಲಿ ಗುಜರಾತ್ ಹಾಗೂ ದಕ್ಷಿಣ ಪ್ರಸ್ಥಭೂಮಿಯನ್ನು ಮೊದಲ ಬಾರಿಗೆ ಅತ್ಯಂತ ಕರಾಳ ಕ್ಷಾಮ ಕಾಡಿತ್ತು. ೧೭೭೦ರಲ್ಲಿನ ಬಂಗಾಲದ ಕ್ಷಾಮವೂ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ೧೭೮೩-೮೪ರ ಅವಯಲ್ಲಿ ದೇಶವನ್ನು ಮತ್ತೊಂದು ಕ್ಷಾಮ ನಲುಗಿಸಿತು. ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಾದ ಈಗಿನ ದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಕಾಶ್ಮೀರ ಮತ್ತು ಪಂಜಾಬ್ ಪ್ರಾತ್ಯದಲ್ಲಿ ಹಸಿವಿನಿಂದ ನೂರಾರು ಮಂದಿ ಆಗ ಅಸುನೀಗಿದ್ದರು. ೧೭೯೧-೯೨ರಲ್ಲಿ ಕಾಣಿಸಿಕೊಂಡ ಕ್ಷಾಮವನ್ನು ದೋಜಿಬರ ಎಂದೇ ಕರೆಯಲಾಯಿತು. ಹೆಸರೇ ಅದರ ಭೀಕರತೆಗೆ ಸಾಕ್ಷಿ. ಹಸಿವಿನಿಂದ ಪ್ರಾಣ ಕಳೆದುಕೊಂಡ ಜೀವಿಗಳ ತಲೆಬುರುಡೆ ಆಗಿನ ಎಲ್ಲೆಡೆಯ ಸಾಮಾನ್ಯ ದೃಶ್ಯವಾಗಿತ್ತಂತೆ. ಹೈದರಾಬಾದ್ ಹಾಗೂ ದಕ್ಷಿಣ ಮರಾಠಾ ಪ್ರಾಂತ್ಯಗಳಲ್ಲಿ ತೀವ್ರ ಜೀವಹಾನಿ ಸಂಭವಿಸಿತ್ತೆಂಬುದು ದಾಖಲಾಗಿದೆ. ತೀರಾ ಇತ್ತೀಚೆಗೆ ದಾಖಲಾದದ್ದು ೧೯೪೩ರ ಬಂಗಾಳದ ಕ್ಷಾಮ.
ಅಂಥ ಇನ್ನೊಂದು ಸ್ಥಿತಿ ನಿರ್ಮಾಣವಾಗದಿರಲು ಇರುವ ಏಕೈಕ ಮಾರ್ಗ ನೀರಿನ ಹೊಣೆಯರಿತ ನಿರ್ವಹಣೆ. ಪುಣ್ಯಕ್ಕೆ ಮಳೆ ಎಂಬುದು ಇನ್ನೂ ಭೂಮಿಯ ಮೇಲಿದೆ. ಹಾಗಾಗಿ ಆತಂಕ ಬೇಡ. ಬಿದ್ದಷ್ಟು ಮಳೆಯನ್ನು ಓಡಿಹೋಗಲು ಬಿಡದೇ ಬಿದ್ದ ಸ್ಥಳದಲ್ಲೇ ಉಳಿಸಿಕೊಳ್ಳಲು ಸಾಧ್ಯವಾದರೆ ಬರ, ಕ್ಷಾಮಗಳು ಸವಕಲು ಪದಗಳಾಗುತ್ತವೆ.
‘ಲಾಸ್ಟ್’ಡ್ರಾಪ್: ಬರವೆಂಬುದು ನಿಸರ್ಗದ ಸಾಮಾನ್ಯ ವ್ಯಾಪಾರಗಳಲ್ಲಿ ಒಂದು. ಅದನ್ನು ಬರಬೇಡ ಎನ್ನುವುದು ವಿಹಿತವಲ್ಲ. ಬದಲಾಗಿ ಅದನ್ನು ಭರಿಸುವ ಮಾರ್ಗ ಅರಿತರೆ ಅದೆಂದೂ ನಮಗೆ ಭಾರವಾಗದು.
ಸಮ್ಮನಸ್ಸಿಗೆ ಶರಣು
4 months ago
No comments:
Post a Comment