Saturday, September 12, 2009

ಇದು ನಾವೇ ‘ಬರ’ಮಾಡಿಕೊಂಡಿರುವ ಸಮಸ್ಯೆ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಳೆ ಎಂಬ ಪದ ಕೇಳಿದರೆ ಸಾಕು ನಡುಗಲಾರಂಭಿಸುವ, ಸದಾ ಪ್ರವಾಹ ಸಂತ್ರಸ್ತ ಎಂಬ ಪಟ್ಟ ಕಟ್ಟಿಕೊಂಡಿರುವ ರಾಜ್ಯ ಅಸ್ಸಾಂ ಕೂಡಾ ಈ ವರ್ಷ ಬರಗಾಲಕ್ಕೆ ತುತ್ತಾಗಿದೆ. ಅದರಲ್ಲೂ ಬರಪೀಡಿತವೆಂದು ಘೋಷಿಸಿಕೊಂಡ ದೇಶದ ಮೊಟ್ಟ ಮೊದಲ ರಾಜ್ಯವೇ ಅದು. ಅಸ್ಸಾಂನಲ್ಲಿಯೇ ಬರಬಿದ್ದುಹೋಗಿದೆ ಎಂದ ಮೇಲೆ ಇಡೀ ದೇಶಕ್ಕೇ ಬರ ಬಂದಿದೆ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಕೇಂದ್ರ ಅಧ್ಯಯನ ತಂಡದ ಪ್ರಕಾರವೇ ದೇಶದ ೧೦ ರಾಜ್ಯಗಳ ೧೮,೨೪೬ಕ್ಕೂ ಹೆಚ್ಚು ಜಿಲ್ಲೆಗಳು ಬರಪೀಡಿತವಾಗಿವೆ.

ಬರವೇನೂ ದೇಶಕ್ಕೆ ಹೊಸತಲ್ಲ ಬಿಡಿ. ಅದನ್ನು ನಾವು ಅನುಭವಿಸಿಕೊಂಡೇ ಬಂದಿದ್ದೇವೆ. ೧೮೯೧ರಿಂದ ಈ ವರೆಗೆ ದೇಶ ೨೨ ಬಾರಿ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿದೆ. ಆದರೆ ಆಗೆಲ್ಲ ಸಾಮಾನ್ಯವಾಗಿ ಒಣ ಪ್ರದೇಶವೆಂದು ಗುರುತಿಸಿರುವ ಕಡೆಗಳಲ್ಲೇ ಮಳೆ ಕೈಕೊಟ್ಟಿತ್ತು. ಈ ವರ್ಷ ಹಾಗಲ್ಲ. ಈಗಿನ ಬರವೆಂದರೆ ಒಂದು ರೀತಿಯಲ್ಲಿ ವಿಚಿತ್ರ. ಉತ್ತಮ ನೀರಾವರಿ ಪ್ರದೇಶವೆಂದು ಗುರುತಿಸಲಾಗಿರುವ ಅಥವಾ ಯಾವಾಗಲೂ ಸಾಕಷ್ಟು ಮಳೆ ಪಡೆಯುತ್ತಿದ್ದ ರಾಜ್ಯಗಳೇ ಬರಕ್ಕೆ ತುತ್ತಾಗಿವೆ. ನೋಡಿ ಬೇಕಿದ್ದರೆ, ಮಳೆಯ ಕೊರತೆಯೆಂದರೆ ಏನೆಂಬುದನ್ನೂ ಬಲ್ಲದ ಬಿಹಾರದಲ್ಲಿ ಈ ಬಾರಿ ಮುಂಗಾರು ಹಿಂದಡಿಯಿಟ್ಟಿದೆ. ಪಂಚ ನದಿಗಳ ಬೀಡು ಪಂಜಾಬ್, ಹರಿಯಾಣಗಳಂಥ ರಾಜ್ಯದಲ್ಲಿಯೇ ನೆಲ ಬಿರುಕುಬಿಟ್ಟಿದೆ. ಹೆಚ್ಚೆಂದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಭಾಗ, ಕೇರಳ, ಒರಿಸ್ಸಾ ಬಿಟ್ಟರೆ ದೇಶದ ಬಹುತೇಕ ರಾಜ್ಯಗಳು ವರುಣನ ಅವಕೃಪೆಗೆ ಈಡಾಗಿವೆ.


ಹಿಂದೆಲ್ಲ ಬರ ಬಾರಿಸಿದಾಗ ಆಹಾರಕ್ಕೆ ಹಾಹಾಕಾರವೆದ್ದಿತ್ತು. ರೈತರು ವರ್ಷದ ತುತ್ತಿನ ಚೀಲಕ್ಕೆ ದಾರಿಯಾದರೆ ಸಾಕು, ಜಾನುವಾರುಗಳಿಗೆ ಒಂದಷ್ಟು ಮೇವು, ಕುಡಿಯಲು ನೀರು ಕೊಟ್ಟರೆ ಅದೇ ಪುಣ್ಯ ಎನ್ನುತ್ತಿದ್ದರು. ಆದರೆ ಈ ಬಾರಿಯ ಬರದಲ್ಲಿ ರೈತರ ಬೇಡಿಕೆಯೇ ಬೇರೆ. ಸಕಾಲಕ್ಕೆ ಮಳೆ ಬಂದಿಲ್ಲ. ಬಿತ್ತಿದ ಬೆಳೆಗಳಿಗೆ ನೀರಿಲ್ಲದಾಗಿದೆ. ಹೀಗಾಗಿ ಅಂತರ್ಜಲ ಎತ್ತಿ ಬೆಳೆ ಉಳಿಸಿಕೊಳ್ಳಲು ಹೆಚ್ಚಿನ ವಿದ್ಯುತ್ ನೀಡುವಂತೆ ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ ರೈತರು.


ಆತಂಕ ಇರುವುದು ದೇಶ ಬರಪೀಡಿತವಾಗಿದೆ ಎಂಬುದರಲ್ಲಿ ಅಲ್ಲ. ಹೇಳಿ-ಕೇಳಿ ಬರಗಾಲ ಎಂಬುದು ಅಭಿವೃದ್ಧಿ ಅಥವಾ ಹೊಸದೊಂದು ಕ್ರಾಂತಿಗೆ ನಿಸರ್ಗ ಬರೆಯುವ ಮುನ್ನುಡಿ. ಯುದ್ಧ, ಬರಗಾಲಗಳಿಲ್ಲದೇ ಹೋದರೆ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಎಂಬ ತಮ್ಮ ವಾದಕ್ಕೆ ರಜನೀಶ್‌ರು ಪುಟಗಟ್ಟಲೇ ಪುರಾವೆಯನ್ನು ಪೇರಿಸಿಟ್ಟಿದ್ದಾರೆ. ಕುರುಕ್ಷೇತ್ರ ಯುದ್ಧದ ಬಳಿಕವೇ ಭರತಖಂಡ ವಿಶ್ವದಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾದದ್ದು ಎಂಬುದು ರಜನೀಶ್‌ರ ವಾದ. ಅದೇನೇ ಇರಲಿ. ಭೀಕರ ಬರಗಾಲದ ಬಳಿಕ ಕ್ರಾಂತಿಯಾಗಿದ್ದಕ್ಕೆ ಬೋರ್‌ವೆಲ್‌ಗಳ ವಿಚಾರದಲ್ಲಿ ನಮ್ಮ ಸಾಧನೆ(?)ಗಿಂತ ಬೇರೆ ಉದಾಹರಣೆ ಬೇಕಿಲ್ಲ. ಅದರ ಪರಿಣಾಮವೇ ಇಂದು ನಮಗೆ ಅತ್ಯಲ್ಪ ಮಳೆ ಕೊರತೆಯನ್ನು ಎದುರಿಸುವ ತಾಳ್ಮೆ, ಜಾಣ್ಮೆಗಳೆರಡೂ ಉಳಿದಿಲ್ಲ. ಹೀಗಾಗಿಯೇ ಇಂದು ರೈತರಿಗೆ ನೀರಿನ ಕೊರತೆಗಿಂತಲೂ ವಿದ್ಯುತ್ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ.
ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ನಡೆಸಿದ ಉಪಗ್ರಹ ಅಧ್ಯಯನದ ಪ್ರಕಾರ ೨೦೦೨-೦೮ರ ಅವಯಲ್ಲಿ ಭಾರತದಲ್ಲಿ ಅದರಲ್ಲೂ ದೇಶದ ಉತ್ತರ ಭಾಗದಲ್ಲಿನ ಅಂತರ್ಜಲ ಮಟ್ಟ ಗಣನೀಯ ಕುಸಿತವನ್ನು ಕಂಡಿದೆ. ಸಾಕಷ್ಟು ಮಳೆ ಸರಾಸರಿಯನ್ನು ಹೊಂದಿರುವ ಈಶಾನ್ಯ ಭಾರತದಲ್ಲೂ ಅಂತರ್ಜಲ ಮಟ್ಟ ವರ್ಷಕ್ಕೆ ನಾಲ್ಕು ಸೆಂಟಿಮೀಟರ್‌ನಷ್ಟು ಕುಸಿಯುತ್ತಿದೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಅವಯಲ್ಲಿ ೧೦೯ ಕ್ಯೂಬಿಕ್ ಕಿಲೋಮೀಟರ್‌ಗೂ ಹೆಚ್ಚು ಅಂತರ್ಜಲ ಬರಿದಾಗಿದೆ. ಇದನ್ನು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ೧೧೪ ದಶಲಕ್ಷಕ್ಕೂ ಹೆಚ್ಚು ಮಂದಿ ಗಂಭೀರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಆತಂಕವಿದೆ. ದೇಶದ ಪ್ರಮುಖ ೮೧ಕ್ಕೂ ಹೆಚ್ಚು ಜಲಮೂಲಗಳು ಈ ಬಾರಿ ನೀರಿನ ಕೊರತೆಯನ್ನು ಎದುರಿಸುತ್ತಿವೆ.

ಇದಾವುದಕ್ಕೂ ನಾವು ಚಿಂತೆ ಮಾಡಬೇಕಾದ್ದಿರಲಿಲ್ಲ. ಭಾರತದಂಥ ದೇಶಕ್ಕೂ ಬರ ಭಾರವೆನಿಸಲು ಇನ್ನೊಂದು ಕಾರಣವಿದೆ. ನಾವು ವೈವಿಧ್ಯಮಯ ಕೃಷಿ ಪದ್ಧತಿಯನ್ನು ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದವರು. ಯಾವಾಗ ಹಸಿರು ಕ್ರಾಂತಿ ಎಂಭ ಭ್ರಮೆ ನಮಲ್ಲಿ ಹೊಕ್ಕಿತೋ ಅಂದಿನಿಂದ ಪರ್ಯಾಯ ಬೆಳೆಗಳ ಗೊಡವೆಗೇ ಹೋಗಿಲ್ಲ. ನೀರಾವರಿ ಯೋಜನೆಗಳು ರೂಪಿತವಾಗುವುದೇ ನಮ್ಮಲ್ಲಿ ಭತ್ತ, ಕಬ್ಬಿನಂಥ ಹೆಚ್ಚು ನೀರು ಬೇಡುವ ಬೆಳೆಗಳಿಗಾಗಿ ಎಂಬಂತಾಗಿ ಬಿಟ್ಟಿದೆ. ಕಡಿಮೆ ನೀರಿನಿಂದಲೂ ಬೆಳೆಯಬಹುದಾದ ಬೆಳೆಗಳ ಅವಗಣನೆಯೇ ರೈತರನ್ನು, ಪರೋಕ್ಷವಾಗಿ ದೇಶವನ್ನು ಬರದ ಸಂಕಷ್ಟಕ್ಕೆ ಈಡು ಮಾಡಿದೆ. ಇದು ಸಹಜವಾಗಿಯೇ ಅಂತರ್ಜಲವನ್ನು ಅಪಾಯದ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.


ಅಂತರ್ಜಲ ಆರಿ ಹೋಗುತ್ತಿದೆ ಎನ್ನುವ ಹೊತ್ತಿಗೇ, ಇದಕ್ಕಿಂತಲೂ ಭೀಕರ ಇನ್ನೊಂದು ಸಮಸ್ಯೆ ನಮ್ಮೆದುರು ಧುತ್ತನೆ ನಿಂತಿದೆ. ಅದು ನೀರಿನ ಆವಿಯುದ್ದು. ಹೌದು, ಭಾರತದ ಬಹುತೇಕ ನೀರು ವೃಥಾ ಆವಿಯಾಗಿ ಹೋಗುತ್ತಿದೆ. ನಮ್ಮ ಪ್ರಮುಖ ಜಲ ಮೂಲ ಅಂದರೆ ಅದು ಮಳೆ ಹಾಗೂ ಹಿಮಾಲಯ ಶ್ರೇಣಿಯಲ್ಲಿನ ಮಂಜುಗಡ್ಡೆಗಳು. ಮಂಜು ಗಡ್ಡೆ ಕರಗುವುದರಿಂದ ವಾರ್ಷಿಕ ಎಷ್ಟು ನೀರು ದೊರೆಯುತ್ತದೆ ಎಂಬುದಕ್ಕೆ ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. ೪೩ ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶ ಮಂಜುಗಡ್ಡೆಗಳಿಂದ ಆವೃತವಾಗಿದೆ. ಇದರಿಂದ ಅಂದಾಜು ೩,೮೭೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ವರ್ಷಕ್ಕೆ ಸಿಗುತ್ತಿದೆ. ಇದರಲ್ಲಿ ಭಾರತಕ್ಕೆ ಲಭ್ಯವಿರುವುದು ಸುಮಾರು ೧೦ ಸಾವಿರ ಚದರ ಕಿ.ಮೀ.ಪ್ರದೇಶದ ೨೦೦ ಕ್ಯೂಬಿಕ್ ಕಿ.ಮೀ.ನಷ್ಟು ನೀರು ಮಾತ್ರ. ಒಟ್ಟಾರೆ ಮಳೆ ಮತ್ತು ಮಂಜಿನಿಂದ ನಾವು ಅಂದಾಜು ೪ ಸಾವಿರ ಶತಕೋಟಿ ಕ್ಯೂಬಿಕ್ ಮೀಟರ್‌ನಷ್ಟು ನೀರನ್ನು ಪಡೆಯುತ್ತಿದ್ದೇವೆ. ಇದರಲ್ಲಿ ಶೇ.೫೦ರಷ್ಟು ಆವಿಯಾಗಿ ಹೋಗುತ್ತದೆ. ೧೯೧೨ರಿಂದ ೧೯೬೪ ಹಾಗೂ ೧೯೬೫ರಿಂದ ೨೦೦೬ ಅವಯಲ್ಲಿ ದೇಶದ ಮಳೆ ಸರಾಸರಿ ಶೇ. ೪ರಷ್ಟು ಕುಸಿದಿದೆ. ಆದರೆ ಆ ಪೈಕಿ ಬಳಕೆಗೆ ದಕ್ಕುತ್ತಿರುವ ಮಳೆ ನೀರಿನ ಪ್ರಮಾಣ ಶೇ. ೧೨ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಮಳೆ ಸಂಗ್ರಹ ಹಾಗೂ ಬಳಕೆಯ ನಿಟ್ಟಿನಲ್ಲಿ ನಮ್ಮ ನಿರ್ಲಕ್ಷ್ಯ ಇದಕ್ಕೆ ಮೊದಲ ಪ್ರಮುಖ ಕಾರಣವಾಗಿದ್ದರೆ, ಮಳೆ ಸುರಿಯುವ ಒಟ್ಟೂ ಅವಯಲ್ಲಿನ ಕುಸಿತವೂ ಇನ್ನೊಂದು ಮುಖ್ಯ ಕಾರಣ. ಇದರ ಒಟ್ಟಾರೆ ಪ್ರತಿಫಲನ ಬರ ಎದುರಿಸುವಲ್ಲಿನ ನಮ್ಮ ವೈಫಲ್ಯದಲ್ಲಿ ಕಾಣುತ್ತಿದೆ.


ವಿಶೇಷ ಗೊತ್ತೆ ? ದೇಶದ ಒಟ್ಟಾರೆ ಕೃಷಿಯ ಶೇ. ೬೦ರಷ್ಟು ಒಣ ಭೂಮಿಯಲ್ಲೇ ನಡೆಯುತ್ತಿದೆ. ಈ ದೃಷ್ಟಿಯಿಂದ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ, ಬರನಿರೋಧಕ ಬೆಳೆಗಳ ಬಗ್ಗೆಯೇ ನಾವು ಹೆಚ್ಚು ಯೋಚಿಸುವುದು ಅನಿವಾರ್ಯ. ಹಾಗೆನ್ನುವಾಗ ಬರದಂಥ ಸಂದರ್ಭದಲ್ಲಿ ನಮಗೆ ಉತ್ತರವಾಗಿ ನಿಲ್ಲಬಲ್ಲವು ನವಣೆ, ಸಜ್ಜೆ ಇತ್ಯಾದಿಗಳು ಮಾತ್ರ. ಭತ್ತವನ್ನು ನಾವು ವಾರ್ಷಿಕ ೧೨೦೦ರಿಂದ ೧೩೦೦ ಮಿ.ಮೀ. ಮಳೆ ಸರಾಸರಿ ಇರುವ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ಆದರೆ ನವಣೆ, ಸಜ್ಜೆ, ಜವೆ, ಜೋಳ ಇತ್ಯಾದಿಗಳಿಗೆ ೩೫೦ರಿಂದ ೫೦೦ ಮಿ.ಮೀ. ಮಳೆ ಸರಾಸರಿ ಇದ್ದರೆ ಸಾಕು. ಇದು ಗೊತ್ತಿದ್ದೂ ನಾವು ಬರ ಬಂದಾಗಲೂ ಅಂತರ್ಜಲವನ್ನು ಹೀರಿಯಾದರೂ ಸರಿ ಭತ್ತವನ್ನೇ ಬೆಳೆಯುತ್ತೇವೆ ಎಂಬ ಹಠಕ್ಕೆ ಬೀಳುತ್ತೇವೋ ಗೊತ್ತಿಲ್ಲ. ಧಾನ್ಯಗಳ ಸಸಿಗಳ ಬೇರು ಅತ್ಯಂತ ಆಳಕ್ಕೆ ಇಳಿಯಬಲ್ಲ ಶಕ್ತಿಯನ್ನು ಹೊಂದಿವೆ. ಅದೇ ರೀತಿ ಇದರ ದಟ್ಟ ಹರವು ವಾತಾವರಣದಲ್ಲಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳಬಲ್ಲದು. ಭತ್ತದ ಕಣಜವೆಂದು ಕರೆಸಿಕೊಳ್ಳುವ ಪಂಜಾಬ್‌ನಲ್ಲಿ ಸಹ ೧೯೬೦ಕ್ಕೂ ಮುನ್ನ ಭತ್ತ ಪ್ರಚಲಿತದಲ್ಲಿರಲಿಲ್ಲ. ಅಂಥದ್ದೊಂದು ಬದಲಾವಣೆ ಬಂದದ್ದು ೭೦ರ ದಶಕದಲ್ಲಿ. ಆಹಾರ ಸ್ವಾವಲಂಬನೆಯ ಸಾಧನೆಗೆ ಸರಕಾರ ಹೆಚ್ಚಿನ ಒತ್ತು ಕೊಡಲಾರಂಭಿಸಿದ್ದೇ ಕೃಷಿಗೆ ನೀರಿನ ಬೇಡಿಕೆ ಹೆಚ್ಚಲು ಕಾರಣವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಹೇಳಿ, ನಿಜವಾಗಿಯೂ ಬರದಿಂದ ನಮಗೆ ಸಂಕಷ್ಟ ಒದಗಿದೆಯೇ ಅಥವಾ ಅದನ್ನು ನಿರ್ವಹಿಸುವಲ್ಲಿ ನಾವು ಎಡವುತ್ತಿದ್ದೇವೆಯೇ ?


‘ಲಾಸ್ಟ್’ಡ್ರಾಪ್: ಸರಕಾರ ಪಡಿತರ ವ್ಯವಸ್ಥೆಯಡಿ ೨-೩ ರೂ.ಗಳಿಗೆ ಅಕ್ಕಿ ಕೊಡಲು ಮುಂದಾಗುತ್ತಿದೆ. ಹೀಗಿರುವಾಗ ಸಹಜವಾಗಿ ಭತ್ತಕ್ಕೆ ಬೇಡಿಕೆ ಹೆಚ್ಚುತ್ತದೆ. ರೈತರೂ ಅದನ್ನೇ ಬೆಳೆಯುತ್ತಾರೆ. ಇದಕ್ಕಿಂತ ದುಬಾರಿ ದವಸ ಧಾನ್ಯಗಳ ಕೃಷಿಗೆ ಯಾರು ಮನಸ್ಸು ಮಾಡುತ್ತಾರೆ ? ಒಣ ಭೂಮಿ ಕೃಷಿ ಸೊರಗುತ್ತಿರುವುದಕ್ಕೆ ಬೇರೆ ಕಾರಣ ಬೇಕಿಲ್ಲ ತಾನೆ ?

No comments: