ಸುಮ್ಮನೆ ಕಲ್ಪಿಸಿಕೊಳ್ಳಿ, ಇಡೀ ಒಂದು ಎಕರೆ ಜಮೀನನ್ನು ಅಗೆದಾಡಿದರೂ ಸರಿಯಾಗಿ ಒಂದು ಟ್ರ್ಯಾಕ್ಟರ್ ತುಂಬುವಷ್ಟು ಮಣ್ಣೂ ಅಲ್ಲಿ ಸಿಗುವಂತಿರಲಿಲ್ಲ.ಆ ಭೂಮಿ ಇನ್ನೆಷ್ಟು ಬರಡಾಗಿದ್ದಿರಬೇಕು ? ಇನ್ನು ಅಲ್ಲಿ ಏನು ಬೆಳೆಯಲು ಸಾಧ್ಯ ? ಭೂಮಿಯ ಮೇಲ್ಭಾಗವೇ ಹೀಗಿದೆ ಎಂದ ಮೇಲೆ ಅಲ್ಲಿ ನೀರಿನ ಪಸೆ ಇದ್ದೀತೆ ? ಮಳೆ ಬಂದಾಗೊಮ್ಮೆ ನೆಲ ತೇವವಾದಂತೆ ಕಂಡರೂ ಎರಡು ದಿನಗಳ ಮಾತಷ್ಟೇ. ಬಿದ್ದಷ್ಟೇ ವೇಗದಲ್ಲೇ ನೀರು ಜಾರಿ ಹೋಗುತ್ತಿತ್ತು. ಇನ್ನೆಲ್ಲಿಯ ಅಂತರ್ಜಲ ? ಇಂಥ ಭೂಮಿಯನ್ನು ಕೇಳುವವರಾರು ? ಎಕರೆಗೆ ಒಂದೆರಡು ಸಾವಿರ ರೂ. ಮೌಲ್ಯವೂ ಹುಟ್ಟುತ್ತಿರಲಿಲ್ಲ.
ಅದೇನು ಹುಚ್ಚು ಧೈರ್ಯಕ್ಕೆ ಬಿದ್ದಿದ್ದರೋ ವಿಠ್ಠಲ ಗೌಡ ಬಿರಾದಾರ ಅವರು; ಬರೋಬ್ಬರಿ ಇಪ್ಪತ್ತು ಎಕರೆ ಭೂಮಿಯನ್ನು ಬೆಲೆ ಕಟ್ಟಿ ಖರೀದಿಸಿಯೇಬಿಟ್ಟರು. ಅದೂ ತಾವು ಪಡೆದ ಸ್ವಯಂ ನಿವೃತ್ತಿ ಯೋಜನೆಯಿಂದ ಬಂದ ಹಣದಲ್ಲಿ. ರೇಷ್ಮೆ ಇಲಾಖೆ ನೌಕರರಾಗಿದ್ದು, ಜೀವನಕ್ಕಾಗಿ ಉಳಿಸಿಕೊಂಡಿದ್ದ ಹಣದಲ್ಲಿ ಇಂಥ ಬರಡು ಭೂಮಿಯನ್ನು ಖರೀದಿಸಿ ಸಾಸುವುದಾದರೂ ಏನನ್ನು ? ನೋಡಿದವರ ಮನದಲ್ಲಿ ಪ್ರಶ್ನೆಗಳೆದ್ದದ್ದು ಸಹಜ. ಆದರೆ ವಿಠ್ಠಲ ಗೌಡರ ಮನದಲ್ಲಿ ಶಂಕೆ ಇರಲಿಲ್ಲ. ಅವರಲ್ಲಿದ್ದುದು ಆತ್ಮ ವಿಶ್ವಾಸ, ಮಣ್ಣಿನ ಮೇಲಿನ ಪ್ರೀತಿ, ಸಾಧನೆಯ ಛಲ. ಭವಿಷ್ಯದ ಸುಂದರ ಕನಸುಗಳ ಮೂಟೆ ಹೊತ್ತು ಸುತ್ತಾಡಿದರು. ಹಾಗೆ ಸುತ್ತಾಡುವಾಗ ಕಣ್ಣಿಗೆ ಬಿದ್ದುದು ಜಮೀನಿನ ಸುತ್ತಲು ಹೂಳು ತುಂಬಿ ಕುಳಿತಿದ್ದ ಕೆರೆಗಳು. ತಮ್ಮ ಕೆಲಸ ಆರಂಭವಾಗಬೇಕಿದ್ದುದು ಈ ಕೆರೆಗಳಿಂದ ಎಂದು ನಿರ್ಧರಿಸಿದವರೇ ಕೆರೆಯಲ್ಲಿ ತುಂಬಿರಬಹುದಾದ ಹೂಳು, ಅದರ ನೀರಿನ ಸಾಮರ್ಥ್ಯ, ತಾವು ಕೊಂಡ ಜಮೀನಿನಲ್ಲಿ ಬೆಳೆಯಬಹುದಾದ ಬೆಳೆ ಇನ್ನಿತರ ಅಂಶಗಳ ಲೆಕ್ಕಾಚಾರಕ್ಕೆ ಮೊದಲಿಟ್ಟರು.
ಅದು ೧೯೮೩-೮೪ರ ಸಮಯ. ವಿಜಾಪುರದ ರಾಷ್ಟ್ರೀಯ ಹೆದ್ದಾರಿ೧೩ರ ಪಕ್ಕದಲ್ಲಿ, ಸೊಲ್ಲಾಪುರ ಮಾರ್ಗದಲ್ಲಿ ಸುಮಾರು ೨೦ ಕಿ.ಮೀ. ಸಾಗಿದರೆ ತಿಡಗುಂದಿ ಗ್ರಾಮ ಸಿಗುತ್ತದೆ. ಅಲ್ಲೇ, ಗೌಡರು ಖರೀದಿಸಿದ್ದ ಬಂಜರು ಭೂಮಿ ನಿಡುಸುಯ್ಯುತ್ತ ಬಿದ್ದುಕೊಂಡಿತ್ತು. ಭೂಮಿ ಖರೀದಿಯಿಂದ ಕೈಯ್ಯಲ್ಲಿದ್ದ ಕಾಸು ಖಾಲಿಯಾಗಿದ್ದರೂ, ಕಸುವು ಉಳಿದಿತ್ತು. ಸಾಲ ಮಾಡಿದರೂ ತೀರಿಸಬಲ್ಲೆನೆಂಬ ನಂಬಿಕೆ ಆಸೀಮವಾಗಿತ್ತು. ಅದನ್ನು ಆಧರಿಸಿಯೇ ಕೃಷಿ ಸಾಲಕ್ಕೆ ಕೈ ಹಾಕಿದರು. ಬಂದ ೧.೨೫ ಕೋಟಿ ರೂ.ಗಳಲ್ಲಿ ಮಾಡಿದ ಮೊದಲ ಕೆಲಸ, ಕೆರೆಗಳ ಹೂಳು ತೆಗೆಸಿದ್ದು. ಬೊಮ್ಮನಹಳ್ಳಿ ಕೆರೆ, ಮಕಣಾಪುರ ಕೆರೆ, ದೊಮ್ಮನಾಳು ಕೆರೆ, ಕೊಟ್ನಾಲ್ ಕೆರೆಯನ್ನು ಸ್ವಚ್ಛ ಮಾಡಲಾಯಿತು. ೧ ಜೆಸಿಬಿ, ೪ ಟಿಪ್ಪರ್, ೬ ಟ್ರ್ಯಾಕ್ಟರ್‌ಗಳು ನಿರಂತರ ಸದ್ದುಮಾಡಿದವು. ಸತತ ಒಂದೂವರೆ ವರ್ಷ ನೂರಕ್ಕೂ ಹೆಚ್ಚು ಕಾರ್ಮಿಕರು ದುಡಿದರು. ಬಂದ ಮಣ್ಣನ್ನು ಹೊರಚೆಲ್ಲದೇ ತಮ್ಮ ಹೊಸ ಜಮೀನಿಗೆ ಸಾಗಿಸಿದ್ದೇ ಬಿರಾದಾರ್ ಮಾಡಿದ ಬುದ್ಧಿವಂತಿಕೆ.
ವರ್ಷದಲ್ಲಿ ಸುತ್ತಲಿನ ಚಿತ್ರಣವೇ ಬದಲಾಗಿತ್ತು. ಕಲ್ಲು ಬಂಡೆಗಳಿಂದಲೇ ತುಂಬಿ ಹೋಗಿದ್ದ ಗೌಡರ ಜಮೀನು ಮೊದಲು ಬಾರಿಗೆ ಹೆಣ್ಣಾಗಿ ನಿಂತಿತ್ತು. ಎಕರೆಗೆ ೮೦೦ರಿಂದ ಸಾವಿರ ಟ್ರ್ಯಾಕ್ಟರ್‌ನಷ್ಟು ಮಣ್ಣು ಜಮೀನಿಗೆ ಬಂದು ಬಿದ್ದಿತ್ತು. ಖಾಲಿ ತಟ್ಟೆಯಂತಾಗಿದ್ದ ಕೆರೆಗಳು ಬಟ್ಟಲುಗಳಾಗಿ ಪರಿವರ್ತನೆಗೊಂಡು ಮುಂದಿನ ಮಳೆಗಾಲದಲ್ಲಿ ನೀರು ತುಂಬಿಕೊಂಡವು. ಆ ಕೆರೆಗಳ ಮಧ್ಯದಲ್ಲಿದ್ದ ಗೌಡರ ಜಮೀನಿನಡಿಯ ನೀರಿನ ಮಟ್ಟ ತಂತಾನೇ ಏರುತ್ತ ಸಾಗಿತು. ಹೀಗೆ ಅಭಿವೃದ್ಧಿಪಡಿಸಿದ ಜಮೀನು ನೂರು ಎಕರೆಯ ಗಡಿಯನ್ನು ದಾಟಿತ್ತು. ಇಷ್ಟಾಗುವಾಗ ನಾಲ್ಕಾರು ವರ್ಷ ಕಳೆದುಹೋಗಿವೆ. ಅಸಲಿಗೆ ಕೃಷಿ ಅಂಬೋದು ಶುರುವಿಟ್ಟುಕೊಂಡದ್ದೇ ೧೯೯೧ರಲ್ಲಿ. ಕಡಿಮೆ ನೀರಿನ ಬೇಡಿಕೆಯಲ್ಲಿ ಹೆಚ್ಚು ಇಳುವರಿ, ಬೇಗ ಫಸಲು ಹಾಗೂ ಗುಣಮಟ್ಟದ ಬೆಳೆ- ಈ ನಾಲ್ಕನ್ನೂ ಸಾಸಿದಾಗ ಮಾತ್ರ ತಮ್ಮ ಕೃಷಿ ಸಾರ್ಥಕವಾದೀತು ಎಂದುಕೊಂಡಿದ್ದವರು ಬಿರಾದಾರ್ ಸಾಹೇಬರು. ಇಷ್ಟು ಮಾಡಿದವರು ಅಷ್ಟು ಮಾಡದಿದ್ದಾರೆಯೇ ? ಸೂಕ್ತ ಬೆಳೆಯ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಅಮೆರಿಕದ ಕಾಡು ಜಾತಿಯ ದ್ರಾಕ್ಷಿ ಬಳ್ಳಿ ರೂಸ್ಟಾಕ್. ಇದಕ್ಕೆ ದೇಶಿ ತಳಿಯನ್ನು ಕಸಿಕಟ್ಟಿ ಸಾಲಿಗೆ ಕೂರಿಸಿದರು. ಒಂದು ಎಕರೆಯಿಂದ ಆರಂಭವಾದ ದ್ರಾಕ್ಷಿ ೫೦ ಎಕರೆಗೆ ಏರಿತು. ನಿಜವಾದ ಸವಾಲು ಎದುರಾದದ್ದು ಈಗ. ಮಳೆ ಎಂದಿನ ವರಸೆ ತೋರಿಸಿತ್ತು. ಎರಡು ಬಾವಿ, ೫ ಬೋರ್‌ವೆಲ್‌ಗಳ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು.
ಅರ್ಧಕ್ಕರ್ಧ ಬೆಳೆ ಒಣಗಿ ನಿಂತಾಗ ಧೈರ್ಯಗೆಡಲಿಲ್ಲ ಗೌಡರು. ಹುಡುಕಾಟವೇ ಸಮಸ್ಯೆಗೆ ಪರಿಹಾರ ಎಂಬುದರ ಅರಿವು ಅವರಿಗೆ ಚೆನ್ನಾಗಿ ಆಗಿತ್ತು. ಎಲ್ಲದಕ್ಕೂ ಉತ್ತರ ಇದ್ದೇ ಇದೆ. ಅದಕ್ಕಾಗಿ ಅಲೆಯಲಾರಂಭಿಸಿದಾಗ ಕಣ್ಣಿಗೆ ಬಿದ್ದುದು ಮಹಾರಾಷ್ಟ್ರದ ರೈತರು ಅನುಸರಿಸುತ್ತಿದ್ದ ‘ಡಿಫ್ಯೂಜರ್ ಪದ್ಧತಿ’. ಪುಟ್ಟ ಪುಟ್ಟ ಮಡಿಕೆಗಳನ್ನು ಗಿಡದ ಬುಡದಲ್ಲಿ ಹುಗಿದು, ಅದರ ಮೂಲಕ ನೀರು ಹನಿಸಿದಲ್ಲಿ ಈಗ ಬೇಕಿದ್ದ ನೀರಿನ ಶೇ.೩೦ರಷ್ಟು ನೀರಿನಲ್ಲೇ ಇನ್ನೂ ಹೆಚ್ಚಿನ ಫಸಲನ್ನು ಪಡೆಯಬುದೆಂಬುದನ್ನು ಕಂಡುಕೊಂಡರು. ಹನಿ ನೀರಾವರಿಯಾದರೆ ಎಕರೆಗೆ ೨೦ ಸಾವಿರ ರೂ. ಖರ್ಚಾಗುತ್ತದೆ. ಡಿಫ್ಯೂಜರ್‌ನಲ್ಲಿ ೧೫ ಸಾವಿರ ಸಾಕು. ಐದು ಸಾವಿರ ರೂ. ಉಳಿಯುತ್ತದೆ ಮಾತ್ರವಲ್ಲ, ನೀರೂ ದುಬಾರಿಯಾಗುವುದಿಲ್ಲ. ಮತ್ತೇಕೆ ತಡ ? ಮಹಾರಾಷ್ಟ್ರದಿಂದ ೧೨ ರೂ.ಗೆ ಒಂದರಂತೆ ಚೀನಿ ಮಣ್ಣಿನಿಂದ ತಯಾರಿಸಿರುವ ವಿಶಿಷ್ಟ ಮಡಕೆಗಳನ್ನು ತರಿಸಲಾಯಿತು. ಸುಮಾರು ೩ ಲೀಟರ್ ನೀರು ಹಿಡಿಸಬಹುದಾದ ೮ ಇಂಚು ಎತ್ತರದ ಈ ಮಡಕೆಗಳನ್ನು ಗಿಡದ ಬುಡದಲ್ಲಿ ನಾಲ್ಕು ಇಂಚಿನವರೆಗೆ ಗುಂಡಿ ತೆಗೆದು ಹುಗಿಯಲಾಯಿತು. ಇವುಗಳ ಬಾಯಿಗೆ ಹನಿ ನೀರಾವರಿಯ ಪೈಪ್‌ಗಳನ್ನು ಜೋಡಿಸಿ ನೀರು ಹಾಯಿಸಲಾಯಿತು. ತಳದಲ್ಲಿರುವ ನಾಲ್ಕೈದು ಪುಟ್ಟ ರಂಧ್ರಗಳ ಮೂಲಕ ಗಿಡದ ಬೇರಿಗೇ ನೇರವಾಗಿ ನೀರು ಹೋಗುವಂತಾಯಿತು. ೨೫ರಿಂದ ೩೦ ವರ್ಷ ಬಾಳಿಕೆ ಬರುವ ಈ ಮಡಕೆಗಳಿಂದ ಬೇರಿಗೆ ನೇರವಾಗಿ ನೀರು ಸರಬರಾಜಾಗುವುದರಿಂದ ಭಾಷ್ಪೀಭವನವನ್ನು ತಪ್ಪಿಸಿದಂತಾಗಿತ್ತು. ಮೇಲಕ್ಕೆ ನೀರು ಚೆಲ್ಲಿ ವ್ಯರ್ಥವಾಗುವುದು ನಿಂತಿತಲ್ಲದೇ ಕಳೆ ನಿಯಂತ್ರಣಕ್ಕೆ ಬಂತು. ೩ರಿಂದ ೪ ದಿನಗಳಿಗೊಮ್ಮೆ ನೀರು ಪೂರೈಸಿದರೂ ಸಾಗುತ್ತಿತ್ತು. ಜತೆಗೆ ಗೊಬ್ಬರ, ಸೂಕ್ಷ್ಮ ಜೀವ ಪೋಷಕಾಂಶಗಳನ್ನು ನೀರಿನ ಜತೆಯಲ್ಲೇ ಪೂರೈಸಲಾಗುವುದರಿಂದ ಮಾನವಶ್ರಮವೂ ಉಳಿತಾಯವಾಗಲಾರಂಭಿಸಿತು.
ಅಂದುಕೊಂಡದ್ದನ್ನು ಬಿರಾದಾರರು ಸಾಸಿಯಾಗಿತ್ತು. ಕಡಿಮೆ ನೀರಿನಲ್ಲಿ ಶಾಶ್ವತ ಪರಿಹಾರ ಸಿಕ್ಕಿತ್ತು. ಅವರೇ ಹೇಳುವಂತೆ ತಮ್ಮ ‘ಜೀವವಾಹಿನಿ’ ಪದ್ಧತಿಯಡಿ ಎಕರೆಗೆ ೧೦ರಿಂದ ೧೪ ಲಕ್ಷ ಲೀಟರ್ ನೀರು ಸಾಕಾಗುತ್ತಿದೆ. ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್ ಅನ್ನು ನಂಬಿ ಕೂರುವ ಪ್ರಮೇಯವೂ ಇಲ್ಲ. ಒಟ್ಟಾರೆ ಇಂದು ವಿಠ್ಠಲ ಗೌಡರ ಬರಡು ನೆಲವಷ್ಟೇ ಹಸುರಾಗಿಲ್ಲ. ಅವರ ೫೦ ಜನರ ಅವಿಭಕ್ತ ಕುಟುಂಬದ ಬದುಕೂ ಹಸನಾಗಿದೆ. ಈಗಾಗಲೇ ೩೫ ಎಕರೆಯಲ್ಲಿ ಎಕರೆಗೆ ೩ರಿಂದ ೪ ಟನ್ ಇಳುವರಿ ಬರುವ, ವೈನ್‌ಗೆ ಬಳಸುವ ದ್ರಾಕ್ಷಿ ಫಲ ಬರುತ್ತಿದೆ. ಒಂದಷ್ಟು ಸ್ಥಳೀಯ ಹಣ್ಣುಗಳಿವೆ. ೪೦ ಎಕರೆ ಪ್ರದೇಶದಲ್ಲಿ ಎಕರೆಗೆ ೫ರಿಂದ ೬ ಟನ್ ಇಳುವರಿ ಬರುವ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕೃಷಿ ಎಂದಿಗೂ ಬಿರಾದಾರ್ ಪಾಲಿಗೆ ಸ್ವಾರ್ಥವಲ್ಲ. ಅದರ ಉಪಯೋಗ ಸರ್ವರಿಗೂ ಸಲ್ಲಬೇಕು. ಆಗಲೇ ಅದು ಸಾರ್ಥಕ. ಈ ಮಾತನ್ನು ಪುನರುಚ್ಚರಿಸುತ್ತಲೇ ಸುಮಾರು ೫೦ ಎಕರೆ ಪ್ರದೇಶದಲ್ಲಿ ‘ವನಶ್ರೀ’ ಕಾಡನ್ನು ಬೆಳೆಸುತ್ತಿದ್ದಾರೆ.
ಗೌಡರ ಸಾಧನೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ, ರಾಜ್ಯಪಾಲರು, ದೇಶವಿದೇಶಗಳ ವಿಜ್ಞಾನಿಗಳು ಮೆಚ್ಚುಗೆ ಸೂಚಿಸಿ ಪುರಸ್ಕರಿಸಿದ್ದಾರೆ. ಚೀನಾ, ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ, ಮತ್ತಿತರ ದೇಶಗಳಿಂದ ನಿಯೋಗದಲ್ಲಿ ರೈತರು ಬಂದು ಮಾಹಿತಿ ಪಡೆದು ಹೋಗಿದ್ದಾರೆ. ವಿಠ್ಠಲಗೌಡರು ಸರಕಾರಿ ಕೆಲಸಬಿಟ್ಟು ಕೃಷಿಗೆ ಇಳಿದಾಗ ಸ್ವಂತದ್ದೆನ್ನುವ ಕೇವಲ ಒಂದು ಎಕರೆ ಬರಡು ಭೂಮಿಯಿತ್ತು. ಇಂದು ಇನ್ನೂರು ಎಕರೆಯಷ್ಟು ಸಮೃದ್ಧ ಹಸುರು ನೆಲದೊಡೆಯ. ಇದಾದದ್ದು ಮಾಂತ್ರಿಕ ಶಕ್ತಿಯಿಂದಲ್ಲ, ಯಾವುದೋ ಕಾಣದ ತಂತ್ರಜ್ಞಾನದಿಂದಲ್ಲ, ಇಷ್ಟೆಲ್ಲ ಸಾಧ್ಯವಾಗಿದ್ದರೆ ಅದು ಸ್ವಾವಲಂಬಿ ಮನೋಭಾವದಿಂದ. ಈ ನೆಲದ ಆರಾಧನೆಯಲ್ಲಿ ತೋರಿದ ಶ್ರದ್ಧೆಯಿಂದ. ಹೆಮ್ಮೆಯಿಂದ ಬಿಮ್ಮನೆ ಬೀಗುತ್ತಿದ್ದಾರೆ ಬಿರಾದಾರ್. ಭಲೇ ಎನ್ನೋಣವೇ ?
‘ಲಾಸ್ಟ್’ಡ್ರಾಪ್: ವಿಠ್ಠಲ ಗೌಡರು ನಾಲ್ಕು ಕೆರೆಗಳ ಹೂಳೆತ್ತಿಸಿದ ಫಲ ಅವರಿಗೆ ಮಾತ್ರ ದೊರೆಯಲಿಲ್ಲ. ಸುತ್ತಲಿನ ೧೦ ಹಳ್ಳಿಗಳ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ತಪ್ಪಿದೆ. ಅವರ ಬದುಕು ತಣ್ಣಗಿರಲು ಇಷ್ಟು ಸಾಲದೇ ?
ಸಮ್ಮನಸ್ಸಿಗೆ ಶರಣು
4 months ago
No comments:
Post a Comment