Friday, December 18, 2009

ಕೋಟೆ ಕೆರೆ ನೀರನ್ನು ಪೇಟೆಗೆ ಹರಿಸುವ ಯತ್ನ

ದು ಯಾರ ಬಳಿ ಪಂಥಕ್ಕೆ ಬಿದ್ದಿತ್ತೋ ಗೊತ್ತಿಲ್ಲ. ಅಥವಾ ಹೀಗಿದ್ದರೂ ಇರಬಹುದು, ಯಾರೋ ತಮ್ಮ ಸೆಣಸಿಗೆ ಪಣವಾಗಿ ಅದನ್ನು ಇಟ್ಟು ಕಳೆದುಕೊಂಡುಬಿಟ್ಟಿದ್ದರೇನೋ. ಅಂತೂ ನೂರಾರು ವರ್ಷಗಳಿಂದ ಆ ಕಗ್ಗಾಡಿನಲ್ಲದು ದಿವ್ಯ ಅಜ್ಞಾತವನ್ನು ಅನುಭವಿಸುತ್ತ ಕುಳಿತು ಬಿಟ್ಟಿತ್ತು; ಹಾಗೆ ಸುಮ್ಮನೆ. ಯಾರೆಂದರೆ ಯಾರಿಗೂ ಒಂದು ಪುಟ್ಟ ಸುಳಿವನ್ನೂ ಬಿಟ್ಟುಕೊಡದೇ ಕುಳಿತ ಅದರ ಬದುಕು ಇನ್ನೇನು ಹಾಗೆಯೇ ಕಳೆದು ಹೋಗಿಬಿಡುತ್ತಿತ್ತೇನೋ. ಪುಣ್ಯಕ್ಕೆ ಒಂದಷ್ಟು ಕಥೆಗಳ ಹಂದರ ಅದರ ಸುತ್ತ ಬೆಳೆದು, ಬಾಯಿಂದ ಬಾಯಿಗೆ ದಾಟಿಕೊಳ್ಳುತ್ತ, ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿತ್ತು. ದೊಡ್ಡವರಿಗೆ ಅದೊಂದು ಕುತೂಹಲ, ಚಿಕ್ಕವರಿಗೆ ಅದನ್ನು ಕಾಣುವ ಹಂಬಲ. ಆದರೆ, ಬಹಳಷ್ಟು ವರ್ಷಗಳಿಂದ ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಅದು ಕಾಡಿನ ಕುಸುಮವೇ ಆಗಿತ್ತು.

ಅದಕ್ಕೂ ಕಾರಣಗಳಿಲ್ಲದಿಲ್ಲ. ಮೊದಲೇ ಹೇಳಿ ಆಯಿತಲ್ಲ, ಆ ಕೆರೆ ಇದ್ದ ತಾಣವೇ ಅಂಥದ್ದು. ಯಾರಿಗೂ ಕಾಣದಂಥ, ಕಂಡರೂ ಕಾಣದೇ ಹೋಗುವಂಥ ಗೌಪ್ಯ ತಾಣದಲ್ಲಿ ಅದು ನಿರ್ಮಾಣಗೊಂಡದ್ದು. ಕೆರೆಗೆ ಹೋಗಬೇಕೆಂಬ ಕಾರಣಕ್ಕೇ ದುರ್ಗಮ ಹಾದಿಯನ್ನು ಸವೆಸಿ ಅಲ್ಲಿಗೆ ಉದ್ದಿಶ್ಯ ಹೋಗಬೇಕೇ ವಿನಾ, ಅದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಅದರ ಬಳಿ ಸುಳಿಯುವ ವ್ಯರ್ಥ ಸಾಹಸವನ್ನು ಯಾರೂ ಮಾಡಲಿಕ್ಕಿಲ್ಲ. ಹಾಗಿದ್ದರೆ ಬಹುಶಃ ಗುಡ್ಡದ ಮರುಕಲಲ್ಲಿ ಗುಂಡಿ ಬಿದ್ದ ಜಾಗದಲ್ಲಿ ತಂತಾನೇ ಒಂದಷ್ಟು ನೀರು ನಿಂತುಕೊಂಡು ನಿಸರ್ಗ ಸಹಜವಾಗಿ ಆ ಕೆರೆ ನಿರ್ಮಾಣಗೊಂಡಿರಬಹುದು ಎಂದುಕೊಳ್ಳಲು ಸುತ್ತಲ ಪರಿಸರ ನೋಡಿದರೆ ಹಾಗೆ ಭಾವಿಸಲು ಸಾಧ್ಯವೇ ಇಲ್ಲ.

ಅದಾದರೂ ಎಂಥಾ ಕೆರೆಯಂತೀರಾ ? ನಿರಾಭರಣ ಸುಂದರಿಯಾಗಿಯೂ ಮೊದಲ ನೋಟದಲ್ಲೇ ರಸಿಕರ ಕಣ್ಮನಗಳಿಗೆ ಲಗ್ಗೆ ಇಕ್ಕಿ ಹಿಡಿದಿಟ್ಟುಕೊಳ್ಳುತ್ತದೆ. ಅಂದ ಮೇಲೆ ಸಂಸ್ಕಾರರಹಿತವಾಗಿ ಎಲ್ಲೋ ಹಾದಿ ಬೀದಿಯಲ್ಲಿ ಬಿದ್ದು ಬೆಳೆದು ಬದುಕಿದ್ದ ಕೆರೆಯಂತೂ ಅಲ್ಲವೇ ಅಲ್ಲ. ಅದರ ಮೈಕಟ್ಟೇ ಹಾಗಿದೆ. ಇಣುಕಿದರೆ ಒಂದಳೆತೆಗೆ ಸುಲಭದಲ್ಲಿ ಸಿಗುವುದಂತೂ ಅಸಾಧ್ಯ. ಚತುರ್ಬಾಹುಗಳನ್ನೂ ಇಷ್ಟಗಲಕ್ಕೆ ಚಾಚಿಕೊಂಡು ಸುತ್ತಲ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ತನ್ನದಾಗಿಸಿಕೊಂಡಿದೆ. ಸುತ್ತ ಒಪ್ಪ ಓರಣವಾಗಿ ಕಲ್ಲು ಪಾವಟಿಕೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಗತ ವೈಭವದ ಕಲ್ಪನೆ ತಂತಾನೇ ಮೂಡುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿಂಗುಮನೆ ಹತ್ತಿರದ ಗುಡ್ಡದ ಮೇಲೆ ಮಲಗಿದ್ದ ಇಂತಿಪ್ಪ ಕೆರೆಯನ್ನು ಎಲ್ಲರೂ ಮರೆತುಬಿಟ್ಟಿದ್ದಾಗಲೇ ವಾಜಗೋಡು ಗ್ರಾಮಪಂಚಾಯಿತಿಯ ಅಧ್ಯಕ್ಷ ಡಿ.ಜಿ.ಹೆಗಡೆಯವರಿಗೆ ಅದೇನು ಪ್ರೇರಣೆಯಾಯಿತೋ ಏನೋ, ಅಂತೂ ಕೆರೆಯನ್ನೊಮ್ಮೆ ನೋಡಿ ಬರಲೇಬೇಕು ಎಂದುಕೊಂಡು ಹೊರಟುಬಿಟ್ಟರು. ಅಜ್ಞಾತಕ್ಕೆ ಕುಳಿತದ್ದು ಸುಲಭಕ್ಕೆ ಕಂಡೀತೇ? ಮೊದಲೇ ಹೇಳಿಯಾಗಿದೆಯಲ್ಲಾ ಅದಿರುವುದು ಕಾಡಿನ ನಟ್ಟನಡುವಿನಲ್ಲಿ, ಬೆಟ್ಟದ ತುತ್ತ ತುದಿಯಲ್ಲಿ ಅಂತ. ಅಷ್ಟನ್ನು ಹರಸಾಹಸ ಮಾಡಿ ಹತ್ತಿಳಿದು ಅಂತೂ ಕೆರೆಯ ಹುಡುಕಾಟಕ್ಕೆ ಬಿದ್ದವರು ಬೇಸತ್ತು ಹಿಂದಿರಬೇಕೆನ್ನುವಾಗಲೂ ಒಂದಷ್ಟು ಮರಮಟ್ಟುಗಳ ಜತೆ ಯಾರೋ ಕೂಕಾಟ ಆಡುತ್ತಿದ್ದ ಅನುಭವ. ಕೆರೆಯ ಬೆನ್ನು ಹತ್ತಿ ಹೋದವರಿಗೂ ಒಮ್ಮೆ ತಾವೂ ಕೂಗು ಹಾಕಿಬಿಡುವ ಪ್ರೇರಣೆ ಅದ್ಯಾಕಾಯಿತೆಂದರೆ ಆ ತಾಣ ಹಾಗಿದೆ ಸ್ವಾಮಿ. ಹಗಲು ಹನ್ನೆರಡರ ಹೊತ್ತಿಗೂ ಇನ್ನೇನು ಗವ್ವನೆ ಕವಿದುಕೊಳ್ಳುಲು ಕತ್ತಲೇ ಸಜ್ಜಾಗುತ್ತಿರುವಂತೆ ಕಂಡರೆ ಅದು ಸುತ್ತಲೂ ಬೆಳೆದ ದಟ್ಟ ಗಿಡಮರಗಳ ಅಪರಾಧವಲ್ಲ. ಕೊನೆಗೂ ಕೆರೆ ಹುಡುಕಿಕೊಂಡು ಹೋದ ವಾಜಗೋಡಿನ ಅಧ್ಯಕ್ಷರು ತಮ್ಮ ತಂಡದೊಂದಿಗೆ ಒಂದು ಕೂಗು ಹಾಕಿದ್ದೇ ತಡ, ಒಂದಕ್ಕೆ ಹತ್ತಾಗಿ, ಹತ್ತಕ್ಕೆ ಮತ್ತೆರ ಇಮ್ಮಡಿಯಾಗಿ ಪ್ರತಿಧ್ವನಿಸಬೇಕಿತ್ತು. ಆದರೆ ಕಾದದ್ದೇ ಬಂತು. ಅಂತ ಕೂಗು ಕತ್ತಲೆಯಲ್ಲಿ ಕಳೆದು ಹೋಯಿತು ಅನ್ನುವುದಕ್ಕಿಂತ ಎಲ್ಲೋ ಆಳದಲ್ಲಿ ಹುದುಗಿಹೋದ ಅನುಭವ.

ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು. ಹಾಗೆ ಧ್ವನಿ ಹುದುಗಿಹೋದದ್ದಾದರೂ ಎಲ್ಲಿ ಎನ್ನುವ ಮತ್ತೊಂದು ಹುಡುಕಾಟವೇ ಕೆರೆಯನ್ನು ಪತ್ತೆ ಮಾಡಿಬಿಡಬೇಕೇ ? ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತು ಅಂತೇನೋ ಹೇಳುತ್ತಾರಲ್ಲಾ, ಹಾಗೆ ಹುಡುಕುತ್ತಿದ್ದ ಕೆರೆಯೇ ಧ್ವನಿಯನ್ನು ನುಂಗಿಕೊಂಡದ್ದೆಂದು ಅರಿವಾಗಲು ಹೆಗಡೆಯವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ಫಕ್ಕನೆ ಗುರುತು ಸಿಗುವಂತಿರಲಿಲ್ಲ ಅದು. ಎಂಥಾ ಸ್ಥಿತಿಗೆ ದು ಬಂದು ತಲುಪಿತ್ತೆಂದರೆ ಇದೇ ಕೆರೆಯೆಂದರೆ ಯಾರೂ ನಂಬುವುದೇ ಇಲ್ಲ. ಬೇಕಿದ್ದರೆ ಬಯಲೆನ್ನಿ, ತಗ್ಗೆನ್ನಿ, ಇನ್ನೂ ಸಮಾಧಾನವಿಲ್ಲದಿದ್ದರೆ ಕಾಡಿನೊಂದು ಮಗ್ಗಲೇನೋ ಎಂದು ಸಂಶಯಿಸುವಷ್ಟು ದುಃಸ್ಥಿತಿಗೆ ತಲುಪಿತ್ತದು. ಎಷ್ಟೆಂದರೂ ನೂರಾರು ವರ್ಷಗಳ ಅಜ್ಞಾತದಲ್ಲಿದ್ದದ್ದಲ್ಲವೇ ?

ಕತೆ ಕೇಳಿ ಇಲ್ಲಿ. ಕೆರೆಯೆಂಬೋ ಆ ಕೆರೆ ಎಷ್ಟೋ ವರ್ಷಗಳ ನಂತರ ಹಾಗೆ ಅಜ್ಞಾತಕ್ಕೆ ಬಿದ್ದು, ದುಃಸ್ಥಿತಿಗೆ ಬಂದು ತಲುಪಿದ್ದಲ್ಲ ಎನ್ನುತ್ತದೆ ಸ್ಥಳೀಯ ಇತಿಹಾಸ. ಅದು ಹುಟ್ಟಿದ ದಿನದಿಂದಲೂ ಹಾಗೆ ಕಣ್ಣಾಮುಚ್ಚಾಲೆ ಆಡುತ್ತಲೇ ಬಂದ್ದದ್ದು. ಹಾಗೆಂದು ಕೆರೆಗೇನು ತಾನು ಹಾಗೆಯೇ ಇರಬೇಕೆಂದೇನೂ ಇರಲಿಲ್ಲ. ಆದರೆ ಅದನ್ನು ನಿರ್ಮಿಸಿದ ಉದ್ದೇಶವೇ ಅಂತದ್ದು. ಬೀಳಗಿಯೆಂಬ ರಾಜ ಮನೆತನದ ಕಾಲದಲ್ಲಿ ಸೈನಿಕ ಶಿಬಿರವೊಂದು ಆ ಕಾಡಿನಲ್ಲಿ ಇತ್ತು, ಮತ್ತು ಅಷ್ಟೂ ಸೈನಿಕರ ದಿನದ ದಾಹವನ್ನು ಇಂಗಿಸಲು ಅಲ್ಲಿಯೇ ಆ ಕೆರೆ ನಿರ್ಮಾಣ ಮಾಡಲಾಗಿತ್ತು ಎಂಬ ಅಂಬೋಣ ಸ್ಥಳೀಯರದ್ದು. ಈ ಬಗ್ಗೆ ನಿಖರ ದಾಖಲೆಗಳು ಸಿಗದಿದ್ದರೂ ಕತೆಯ ಬಗೆಗೆ ಇರುವ ಹತ್ತಾರು ಕಥೆಗಳಲ್ಲಿ ಇದು ಸಾಕಷ್ಟು ಸಾಮ್ಯತೆ ಪಡೆಯುತ್ತದೆ. ಏಕೆಂದರೆ ಬಿಳಗಿ ರಾಜರ ರಾಜಧಾನಿ ಸಹ ಇಲ್ಲಿಗೆ ಸುಮಾರು ೮ ಕಿ.ಮೀ. ದೂರದ ಐಸೂರು ಆಗಿತ್ತು. ಪಕ್ಕಾ ಸೈನಿಕರ ಅಡಗುದಾಣದಂತೆ ಕಾಣುವ ಕೆರೆಯ ಪ್ರದೇಶ ಸುಮಾರು ೩೦ ಎಕರೆ ವಿಸ್ತಾರವನ್ನು ಹೊಂದಿದ್ದು, ಗುಡ್ಡದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಲಾಗಿದೆ. ಅದೇ ಗುಡ್ಡದ ಇನ್ನೊಂದು ಮಗ್ಗಲು ಕೆಳದಿ ಹಾಗೂ ಲಿಂಗನಮಕ್ಕಿ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಹೀಗಾಗಿ ಗಡಿ ಕಾವಲು ಪಡೆಯ ತಂಗುದಾಣವಾಗಿರುವ ಎಲ್ಲ ಸಾಧ್ಯತೆ ಇದ್ದು, ಗುಡ್ಡದ ತುಂಬ ಕುದುರೆಯ ಓಡಾಟಕ್ಕೆ ಮಾಡದ್ದಿರಬಹುದಾದ ಪ್ರತ್ಯೇಕ ಮಾರ್ಗದ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೇ ಕೆರೆಯೆಂದು ಕರೆಸಿಕೊಳ್ಳುವ ಈ ಕೆರೆ ಸರಿಸುಮಾರು ೬೦ ಚದರ ಅಡಿಯಷ್ಟು ವಿಸ್ತಾರವನ್ನು ಹೊಂದಿದೆ. ಸುಮಾರು ೩೦ ಎಕರೆ ವಿಸ್ತೀರ್ಣದ ಗುಡ್ಡದಲ್ಲಿ ಈ ಕೆರೆಗೆ ಪೂರಕವಾಗಿ ಇನ್ನೂ ೨೦ ಎಕರೆ ಪ್ರದೇಶಕ್ಕೆ ನೀರಿನ ಸಂಗ್ರಹಕ್ಕೆ ಅನುಕೂಲವಾಗುವಂತೆ ಕಲ್ಲಿನ ಏರಿಯನ್ನು ಕಟ್ಟಲಾಗಿದೆ. ಕೆರೆಗೆ ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ. ಕೆರೆಯಲ್ಲಿ ಸಂಗ್ರಹಗೊಂಡ ನೀರು ನಾಲೆಯ ಮೂಲಕ ಹರಿದು ಕಾಡಿನ ಇತರ ಪ್ರದೇಶಗಳಿಗೂ ಪೂರೈಕೆಯಾಗುತ್ತದೆ. ಎಲ್ಲ ಕಡೆಗಳಲ್ಲೂ ಕಲ್ಲು ಕಟ್ಟಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜಲಾನಯನವನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದ ಜಲಾಗಾರ ಇದಾಗಿತ್ತು ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.

ಅದೆಲ್ಲ ಹಾಗಿರಲಿ, ಕೆರೆ ಹುಡುಕಿಕೊಂಡು ಹೋದ ನಮ್ಮ ಗ್ರಾ.ಪಂ. ಅಧ್ಯಕ್ಷರು ಮತ್ತವರ ತಂಡಕ್ಕೆ ನಿಯೇ ಸಿಕ್ಕ ಅನುಭವ. ಸಹಜವಲ್ಲವೇ? ಸುತ್ತಲ ನಾಲ್ಕಾರು ಹಳ್ಳಿಗಳಿಗೆ ಸಾಕಾಗುವಷ್ಟು ಜಲನಿ ಒಂದೇ ಕಡೆಯಲ್ಲಿ ದೊರೆಯುತ್ತದಾದರೆ ಅಭಿವೃದ್ಧಿ ಚಿಂತಕ ನೇತಾರನೊಬ್ಬನಿಗೆ ಅದಕ್ಕಿಂತ ಇನ್ನೇನು ಬೇಕು? ಸರಿ, ಹೂಳು ತುಂಬಿ ಪಾಳು ಬಿದ್ದ ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲಿಂದ ಊರವರೆಗೆ ನೀರು ಹರಿಸಿಕೊಂಡುಹೋಗಬೇಕೆಂಬ ಹೆಬ್ಬಯಕೆಯೇನೋ ಅವರಲ್ಲಿ ಮೂಡಿತು ನಿಜ. ಆದರೆ ರಸ್ತೆ ಸಂಪರ್ಕವೇ ಇಲ್ಲದ, ಗುಡ್ಡದ ನೆತ್ತಿಯ ಮೇಲಿರುವ ಆ ಕೆರೆ ಕಾಮಗಾರಿಗೆ ಅಗ್ತಯ ಸಲಕರಣೆಗಳು, ಕೆಲಸಗಾರರನ್ನು ಕರೆ ತರುವುದಾದರೂ ಹೇಗೆ ? ಪ್ರಶ್ನೆ ಕೇಳಿಕೊಳ್ಳುತ್ತ ಕುಳಿತಿದ್ದರೆ ಹೆಚ್ಚೆಂದರೆ ನಾವು ಜ್ಞಾತ ಕೋಟೆಕೆರೆಯನ್ನು ನೋಡಿ ಬಂದಿದ್ದೇವೆ, ಅಷ್ಟಗಲ, ಇಷ್ಟುದ್ದ ಇದೆಯೆಂದು ಬಣ್ಣಿಸಿ ಸಾಹಸ ಮೆರೆದವರಂತೆ ಪೋಸು ಕೊಡಬಹುದಿತ್ತಷ್ಟೆ. ಆದರೆ ಹೆಗಡೆಯವರ ಉದ್ದೇಶ ಅದಾಗಿರಲಿಲ್ಲ. ಏನಾದರೂ ಮಾಡಿ ಈ ಕೆರೆಯಿಂದಸುತ್ತಮುತ್ತಲಿನ ೩೦ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಐತಿಹಾಸಿಕ ಕೆರೆಯನ್ನು ಸಂರಕ್ಷಿಸಲೇಬೇಕೆಂಬ ಹಠಕ್ಕೆ ಬಿದ್ದದ್ದ ಅವರ ನೆರವಿಗೆ ಬಂದದ್ದು ಉದ್ಯೋಗಖಾತ್ರಿ ಯೋಜನೆ ಮತ್ತು ಸ್ಥಳೀಯರ ಉತ್ಸಾಹ. ಇಚ್ಛಾಶಕ್ತಿಯ ನಾಯಕತ್ವಕ್ಕೆ ಬೆಂಬಲವಾಗಿ ನಿಂತವರು ತಾಲೂಕು ಕಾರ್ಯನಿರ್ವಹಣಾಕಾರಿ ವಿ.ಎಸ್.ಹೆಗಡೆ.

ಸಾಂಪ್ರದಾಯಿಕ ನೀರಿನ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಯೋಜನೆ ರೂಪುಗೊಂಡಿತ್ತು. ಕೊನೆಗೊಂದು ಶುಭ ಮುಂಜಾವಿನಲ್ಲಿ ಡಿ.ಜಿ.ಹೆಗಡೆಯವರ ನೇತೃತ್ವದ ಉತ್ಸಾಹಿಗಳ ತಂಡ ನೆತ್ತಿಯ ಮೇಲೆ ಬುತ್ತಿ, ಹೆಗಲಲ್ಲಿ ಹಾರೆ ಪಿಕಾಸಿಗಳನ್ನು ಹೊತ್ತು ಗುಡ್ಡ ಹತ್ತಿಯೇಬಿಟ್ಟಿತು. ಅಲ್ಲಿ ಇಲ್ಲಿ ಕಥೆಯಾಗಿ ಜನರ ಬಾಯಲ್ಲಿ ಸುಳಿದಾಡುತ್ತಿದ್ದ ಕೋಟೆ ಕೆರೆ ಅವಸ್ಥಾಂತರಕ್ಕೆ ಸಜ್ಜಾಗಿಯೇ ಬಿಟ್ಟಿತು. ನೋಡ ನೋಡುತ್ತಿದ್ದಂತೆ ಮಂಕರಿಗಳಲ್ಲಿ ತುಂಬಿದ ಮಣ್ಣುನ ಕೆರೆಯ ಒಡಲಿಂದ ಹೊರ ಬರಲಾರಂಭಿಸಿತು. ಇಂದೂ ಕೆರೆ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಊರವರಲ್ಲಿ ವಿಶ್ವಾಸ ಮೂಡಿದೆ. ನಮ್ಮದೇ ಕೆರೆಯನ್ನು ಅಜ್ಞಾತದಿಮದ ಮುಕ್ತಗೊಳಿಸಿ ಮೂಲಸ್ವರೂಪಕ್ಕೆ ತಂದೇ ತರುವ ಛಲ ಮೂಡಿದೆ. ಕೆಲಸ ಭರದಿಂದ ಸಾಗಿದೆ. ಇನ್ನೇನು ವಾರ, ತಿಂಗಳೊಪ್ಪತ್ತಿನಲ್ಲಿ ಕೋಟೆಕೆರೆಯ ನೀರು ಮನೆಮನೆಗೆ ಹರಿದು ಬಂದು ಸಮೃದ್ಧಿಯ ಹೊಸ ಶಕೆಯನ್ನು ಆರಂಭಿಸುತ್ತದೆ. ಅಪ್ಪ ಡಿ.ಜಿ.ಹೆಗಡೆಯವರ ಉತ್ಸಾಹಪೂರಿತ ಸತ್ಕಾರ್ಯವನ್ನು ಅತ್ಯುತ್ಸಾಹದಿಂದ ಬಣ್ಣಿಸಿಕೊಳ್ಳುತ್ತಿದ್ದಾನೆ, ಈಗಷ್ಟೇ ಧಾರವಾಡದಲ್ಲಿ ಮರಿ ಪತ್ರಕರ್ತನಾಗಿ ಮೂಡುತ್ತಿರುವ ರಾಜೀವ ಹೆಗಡೆ. ಶಿಂಗುಮನೆಯ ಎಲ್ಲ ಯುವಕರೂ ಇದೇ ಭಾವದಲ್ಲಿದ್ದಾರೆ. ಇಂಥದ್ದೊಂದು ನೀರಕಾಯಕಕ್ಕೆ, ಮತ್ತವರ ಉತ್ಸಾಹಕ್ಕೂ ನಾಲ್ಕಾರು ಒಳ್ಳೆಯ ಮಾತುಗಳ ನೀರೆರೆದು ಕಳುಹಿಸಲಾಗಿದೆ. ಎಲ್ಲ ಊರಿನಲ್ಲೂ ಹೀಗೆ ಅಜ್ಞಾತಕ್ಕೆ ಬಿದ್ದರುವ ಕೆರೆಗಳಿರಬಹುದು. ಅದನ್ನು ಹುಡುಕಿ ಬೆಳಕಿಗೆ ತರುವ ಗುಪ್ತಚರರು ಬೇಕಿದ್ದಾರೆ. ಎಲ್ಲಿದ್ದಿರಿ?

‘ಲಾಸ್ಟ್‘ಡ್ರಾಪ್: ಈ ನಾಡಿನ ಕೆರೆಗಳೆಲ್ಲವಕ್ಕೆ ಹಿಂದಿದ್ದ ಮರ್ಯಾದೆಯನ್ನು ಮರಳಿ ದೊರಕಿಸಿಕೊಟ್ಟರೆ ಸಾಕು. ನೀರಿನ ಕೊರೆತೆಯೆಂಬ ಪದವನ್ನು ನಿಘಂಟಿನಿಂದ ನಿಸ್ಸಂಶಯವಾಗಿ ತೆಗೆದು ಹಾಕಬಹುದು.

ಮಳೆ ನಿಂತು ಹೋದ ಮೇಲೂ ಹನಿಗಳು ಉಳಿಯಲಿ

ಭೂಮಿಗೂ ಬವಳಿ ಬಂದಿರಲಿಕ್ಕೆ ಸಾಕು. ಕಳೆದ ವರ್ಷ ಆ ಪಾಟಿ ಕೆಕ್ಕರಿಸಿಕೊಂಡು ನೋಡಿದ್ದ ಸೂರ್ಯ. ಎಲ್ಲೆಲ್ಲೂ ಕಾದು ಕರಕಲಾದ ಪ್ರಕೃತಿ. ಸಾಕಪ್ಪ ಈ ಧಗೆ... ಎನ್ನುತ್ತಿರುವಾಗಲೇ ಆಗಸದ ಮುಖ ಕಪ್ಪಿಡತೊಡಗಿತು. ಇಷ್ಟು ದಿನದ ಸೂರ್ಯನ ಕೋಪಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬರುತ್ತಿರುವಂತೆ ಸಾಲು ಕರಿಮೋಡಗಳು ದಮುಗುಡುತ್ತ ಮುನ್ನುಗ್ಗಿದವು. ಕೊನೆಗೊಂದಷ್ಟು ದಿನ ಅವುಗಳದೇ ಕಾರುಬಾರು. ಒಲಿದು ಸುರಿದರೆ ಸಮೃದ್ಧಿ, ಮುನಿಸು ತೋರಿದರೆ ಇಡೀ ಬದುಕೇ ಬೋರಲು ಬೀಳುತ್ತದೆ. ಇವೆರಡರ ನಡುವೆ ನಿಸರ್ಗದ ಲೆಕ್ಕಾಚಾರ ತಪ್ಪಿ ಮಳೆಯೇನಾದರೂ ಉಮ್ಮಳಿಸಿ ಕಾರಿಕೊಂಡಿತೆಂದರೆ ಎಲ್ಲೆಲ್ಲೂ ಜಲಪ್ರಳಯ. ಅದೇ ಆಯಿತು, ಕಳೆದ ಮಳೆಗಾಲವೆಂದರೆ. ಒಂದಷ್ಟು ದಿನ ಬರಗಾಲವಾದರೆ ಕೊನೆಗೊಂದಷ್ಟು ದಿನ ಪ್ರವಾಹದ ಆಟೋಪ. ಒಟ್ಟಾರೆ ಅತಿಯಾಗಿ ಸುರಿದರೂ ಸಂಕಷ್ಟ, ಸುರಿಯದೇ ಕಳೆದು ಹೋದರಂತೂ ಕಡುಕಷ್ಟ. ಮಳೆ ಇತಿಮಿತಿಯಲ್ಲಿದ್ದರೆ ಮಾತ್ರ ಬಲು ಇಷ್ಟ.
ಹೌದು, ಆದರೆ ಇಷ್ಟಕಷ್ಟಗಳನ್ನು ಕೇಳುತ್ತ ಕುಳಿತುಕೊಳ್ಳಲು ಮಳೆಯೇನು ಬೀಗರ ಕಡೆಯ ಬಂಧುವೇ ? ಅದರ ಪಾಡಿಗದು ಬರುತ್ತದೆ. ಬಂದದ್ದು ಒಂದಷ್ಟು ಸುರಿಯುತ್ತದೆ. ಸುರಿದದ್ದು ಈ ನೆಲದ ಗುಂಟ ಹರಿಯುತ್ತದೆ. ಹರಿದದ್ದು ಹಾಗೆ ನದಿ ನಾಲೆಗಳ ನೆಂಟಸ್ಥಿಕೆಯಲ್ಲಿ ಸಮುದ್ರ ಸೇರಿ ಬಿಡುತ್ತದೆ. ನಮಗೆ ಗೊತ್ತಿರುವುದು ಇಷ್ಟೆಯೇ. ಇದಕ್ಕೂ ಮಿಕ್ಕಿ ಸುರಿಯುವ ಮಳೆಗೊಂದಿಷ್ಟು ಮಹತ್ವವಿದೆ. ಅದನ್ನು ಅದರ ಪಾಡಿಗೆ ಓಡಿ ಹೋಗಲು ಬಿಡದೇ ಮಾನ ಮರ್ಯಾದೆ ತೋರಿ, ಆಧರಿಸಿ ಮನೆಯ ಮೂಲೆಯಲ್ಲೆಲ್ಲೂ ಮುಚ್ಚಿಟ್ಟುಕೊಂಡರೆ ಮುಂದೊಂದು ದಿನ ಖಂಡಿತಾ ನಮ್ಮ ಋಣವನ್ನು ಉಳಿಸಿಕೊಳ್ಳಲಿಕ್ಕಿಲ್ಲ ಎಂಬ ಸಂಗತಿ ಇನ್ನೂ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದು ಗೊತ್ತಾಗಲೇ ಬೇಕೆಂದಿದ್ದರೆ ಥಾಯ್ಲೆಂಡ್ ಅನ್ನೋ, ಚೀನಾವನ್ನೋ, ಅಷ್ಟೆಲ್ಲ ಬೇಡ ನಮ್ಮ ಗುಜರಾತ್, ರಾಜಸ್ಥಾನದ ಮಂದಿಯನ್ನೋ ಒಮ್ಮೆ ಮಾತನಾಡಿಸಿ ಬರಬೇಕು. ಮಳೆ ನೀರಿಗೆ ಮರ್ಯಾದೆ ತೋರುವ ಬಹಳಷ್ಟು ಮಂದಿ ಅಲ್ಲಿ ಸಿಗುತ್ತಾರೆ.

ಇದೇನೋ ಕಥೆ ಎಂದು ಕೊಳ್ಳಬೇಡಿ. ನೂರಕ್ಕೆ ನೂರು ಸತ್ಯ ಸಂಗತಿಯೆಂದರೆ ಜಗತ್ತಿನ ಇಷ್ಟೂ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರದ ಬಹುತೇಕ ಮಂದಿ ಅತಿಶುದ್ಧ ನೀರು ಕುಡಿಯುತ್ತಿದ್ದರೆ ಅದು ಥಾಯ್ಲೆಂಡಿನವರು. ಸ್ವಚ್ಛ ಮತ್ತು ಸುರಕ್ಷಿತ ನೀರನ್ನು ಕುಡಿದು ‘ಅಭಿವೃದ್ಧಿ ರಾಷ್ಟ್ರ’ವಾಗಿ ತಮ್ಮ ನೆಲದ ಹೆಸರನ್ನು ಬರೆಸಿಕೊಂಡ ಥಾಯ್ಲೆಂಡಿಗರದ್ದು ಜಲಚರಿತೆಯ ಯಶೋಪುಟಗಳು.

ಅದು ಹೋಗಲಿ, ನಮ್ಮ ನೆತ್ತಿಯ ಮೇಲೆ ಕುಳಿತಿರುವ ಚೀನೀಯರೇನು ಕಡಿಮೆಯವರಲ್ಲ. ಕೇವಲ ಎರಡು ವರ್ಷಗಳಲ್ಲಿ ಏನಿಲ್ಲವೆಂದರೂ ೨.೬ ಲಕ್ಷ ಕುಟುಂಬಕ್ಕೆ ಸಾಕೆನಿಸುವಷ್ಟು ನೀರು ಕುಡಿಸಿದ ಹೆಗ್ಗಳಿಕೆ ಚೀನಾದ್ದು. ಅಂಥ ಕ್ರಾಂತಿ ಯಾವುದೋ ಕೋಟ್ಯಂತರ ರೂ.ಗಳನ್ನು ಸುರಿದು ರೂಪಿಸಿದ ನೀರಾವರಿ ಯೋಜನೆಯಿಂದ ಆದದ್ದಲ್ಲ. ಹೊಸತೊಂದು ನದಿ ಹುಟ್ಟಿ ಹರಿದಿದ್ದರಿಂದಾದದ್ದೂ ಅಲ್ಲ. ದೇಶದ ನದಿಗಳನ್ನು ಬೆಸೆದು ಪೂರೈಸಿದ್ದೂ ಅಲ್ಲ. ಕೇವಲ ವರ್ಷದಲ್ಲೊಂದಿಷ್ಟು ದಿನ ಸುರಿದ ಮಳೆಯನ್ನು ಬೊಗಸೆಯೊಡ್ಡಿ ಹಿಡಿದು ಬಾಯಾರಿದ ಬಾಯಿಗೆ ತಂದು ಹನಿಸಿದ ಪರಿಣಾಮದಿಂದಾದದ್ದು. ಇಂದು ಚೀನಾದ ನಾನ್ಸು ಪ್ರಾಂತ್ಯದ ದಾಹ ತೀರಿದ್ದರೆ ಅದು ಅಲ್ಲಿನ ರಸ್ತೆ ರಸ್ತೆಗಳಲ್ಲೂ ಮಾಡಿದ ಮಳೆ ನೀರ ಕೊಯ್ಲಿನ ಫಲ.

ಇದು ಯಾರಿಗೂ ಹೇಳಬೇಡಿ ಎಂಬ ಗುಟ್ಟಿನ ಮಾತಂತೂ ಅಲ್ಲ. ಎಲ್ಲರಿಗೂ ಸಾರಿ ಹೇಳಲೇ ಬೇಕಾದ್ದೆಂದರೆ ಗಾನ್ಸು ಪ್ರಾಂತ್ಯದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ನಮ್ಮ ಬೆಂಗಳೂರಿನಲ್ಲಿ ಸುರಿಯುವ ಪ್ರಮಾಣದ ಅರ್ಧದಷ್ಟೂ ಇಲ್ಲ. ಸಾಲದ್ದಕ್ಕೆ ಅಲ್ಲಿ ಕಳೆದ ನಲವತ್ತು ವರ್ಷಗಳನ್ನು ವರ್ಣಿಸುತ್ತ ಹೋದರೆ ಬರೋಬ್ಬರಿ ೩೬ ವರ್ಷ ಇಷ್ಟೂ ಮಳೆ ಸುರಿಯದೇ ಬರ ಅಟಕಾಯಿಸಿಕೊಂಡಿತ್ತು. ಅಂದರೆ ಅವರು ಕಂಡದ್ದು ಶೇ. ೯೦ರಷ್ಟು ಬರವನ್ನೇ. ಹೀಗಾದರೆ ಅಲ್ಲಿನ ಮೂಲ ಕಸುಬಾದ ಕೃಷಿಯಾದರೂ ಹೇಗೆ ತಾನೇ ಕೈ ಹಿಡಿದೀತು ? ಜನಸಂಖ್ಯೆಯಲ್ಲಿ ನಮ್ಮ ಮೇಲೆ ಪೈಪೋಟಿಗೆ ಬಿದ್ದವರಂತೆ ಸಾಗುತ್ತಿರುವ, ಸರಾಸರಿ ಐದು ಜನರ ಕುಟುಂಬದ ವಾರ್ಷಿಕ ವರಮಾನ ೧೧ ಸಾವಿರ ರೂ. ಮುಟ್ಟಿದ್ದೇ ಆಶ್ಚರ್ಯ. ಕೊನೆಗೂ ಅಲ್ಲಿನ ಜನರ ಸಮಸ್ಯೆಗೊಂದು ಉತ್ತರ ಸಿಕ್ಕಿತೆಂದರೆ ಅದು ಮಳೆನೀರಿನ ಕೊಯ್ಲಿನಿಂದ.

ಕೇವಲ ೪೨೦ ಮಿ.ಮೀ ಮಳೆಯ ಸರಾಸರಿ ಹೊಂದಿರುವ ಗಾನ್ಸುವಿನ ಜನರಿಗೆ ಅಂಥ ಸಾಧನೆ ಸಾಧ್ಯವಾಗುವುದಾದರೆ ವರ್ಷಕ್ಕೆ ೯೦೦ ಮಿ.ಮೀ. ಮಳೆ ಸುರಿಯುವ ಬೆಂಗಳೂರಿನ ಜನರಿಗೇನು ಕೇಡು ಬಡಿದಿದೆ ? ೬೦೦ ರಿಂದ ೮೦೦ ಮಿ.ಮೀ ಮಳೆ ಬರುವ ದಕ್ಷಿಣ ಕರ್ನಾಟಕದಲ್ಲಿ, ಇದರ ದುಪ್ಪಟ್ಟು ದಕ್ಕುವ ಮಲೆನಾಡಿನ ಮನೆಗಳಲ್ಲಿ ಇನ್ನೆಷ್ಟರ ಮಟ್ಟಿಗಿನ ನೀರನ್ನು ಕೂಡಿಡಬಹುದೆಂಬುದನ್ನು ಲೆಕ್ಕಹಾಕಿ !

ಬೇಡಬೇಡವೆಂದರೂ ನಮ್ಮ ರಾಜ್ಯದ ದಕ್ಷಿಣಕ್ಕೆ ಮುಖಮಾಡಿ ನಿಂತು ಮಳೆ ಹಿಡಿದಿಟ್ಟುಕೊಂಡರೆ ಎರಡು ತಿಂಗಳಲ್ಲಿ ಒಂದೇ ಒಂದು ಚದರ ಅಡಿಯಷ್ಟು ಅಗಲದ ಚಾವಣಿಯಲ್ಲಿ ೮೦೦ ಲೀಟರ್ ನೀರು ತುಂಬಿಕೊಂಡೀತು. ಅದನ್ನು ಬಿಡಿ, ಒಂದು ಅಂದಾಜಿಗೆ ಕುಳಿತರೆ ನಮ್ಮ ರಾಜ್ಯದಲ್ಲಿ ನೂರು ಮಿ.ಮೀ. ಮಳೆ ಸುರಿದರೆ ಅದರಲ್ಲಿ ನೆಲದೊಳಗೆ ಇಂಗುವುದು ೮ ರಿಂದ ೧೦ ಮಿ.ಮೀ ನಷ್ಟು ಮಾತ್ರ. ಉಳಿದದ್ದೆಲ್ಲ ಸಮುದ್ರಪಾಲು.

ಈವರೆಗೆ ಹೀಗೆ ಸೋರಿಹೋದ ನೀರಿನ ಬಗೆಗೆ ಏನೂ ಅನ್ನಿಸಿಯೇ ಇಲ್ಲ. ತೀರಾ ಮಳೆ ಅಂಗಳಕ್ಕೆ ನಿಂತರೆ ಗುದ್ದಿಲಿ, ಹಾರೆ, ಪಿಕಾಸು ಹಿಡಿದು ಮಣ್ಣು ಬಿಡಿಸಿಕೊಟ್ಟು ಅದಕ್ಕೆ ದಾರಿ ತೋರಿದ್ದೇವೆ. ಚರಂಡಿ ತುಂಬ ಕೆಂಪು ನೀರು ಹರಿಯುತ್ತಿದ್ದರೆ ಕಾಗದದ ದೋಣಿ ಮಾಡಿ ಬಿಟ್ಟು, ಅದರ ಜತೆಗೇ ಓಡಿಹೋಗಿ ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ತುಂಬಿದ್ದರೆ ಅದರ ಕೋಡಿ ಒಡೆದು, ಕಾಲುವೆಯತ್ತ ತಿರುಗಿಸಿ ‘ಅಬ್ಬಾ, ಅಪಾಯ ತಪ್ಪಿತು’ ಎಂದುಕೊಂಡು ನೆಮ್ಮದಿಯ ನಿದ್ದೆಗೆ ಜಾರಿದ್ದೇವೆ. ಹನಿ ಕಡಿಯದೇ ಸುರಿವ ಮಳೆ ನೋಡುತ್ತ, ಹುರಿಬೀಜ ಮೆಲ್ಲುತ್ತ ಬೆಚ್ಚಗೆ ಕನಸು ಕಂಡಿದ್ದೇವೆಯೇ ಹೊರತು ಒಂದು ಹನಿಯನ್ನೂ ಇಂಗಿಸುವ ಗೋಜಿಗೆ ಹೋಗಿಲ್ಲ, ಅದನ್ನು ನಾಳೆಗಾಗಿ ಹಿಡಿದಿಟ್ಟುಕೊಂಡಿಲ್ಲ.

ಅದೇನೋ ಮಳೆನೀರಿನ ಬಗ್ಗೆ ಮೊದಲಿನಿಂದಲೂ ಕಾಳಜಿ ಎಂಬುದೇ ಇಲ್ಲ. ಅದು ಸುರಿದು, ಹರಿದು ವ್ಯರ್ಥವಾಗುತ್ತಿದ್ದರೂ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದು ಬಿಡುತ್ತೇವೆ. ಬಾವಿಯಲ್ಲಿ ನೀರಿದೆ ಅಥವಾ ನಲ್ಲಿಯಲ್ಲಿ ತಪ್ಪದೇ ನೀರು ಬರುತ್ತಿದೆ ಎಂದಾದರೆ ಮುಗಿಯಿತು. ನೀರನ್ನು ಉಳಿಸುವುದು, ಅದನ್ನು ಸಂಗ್ರಹಿಸುವುದು, ಇಲ್ಲವೇ ಇಂಗಿಸುವುದು ಇತ್ಯಾದಿ " ರಗಳೆ’ ಗಳೆಲ್ಲ ನಮಗೆಕೆ? ಅದನ್ನೇನು ನಮಗೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದಾರೆಯೇ? ಊರಿಗೆಲ್ಲ ಉಪಯೋಗಕ್ಕೆ ನಾವೊಬ್ಬರೇ ಏಕೆ ನೀರಿಂಗಿಸಬೇಕು? ಇತ್ಯಾದಿ ಪ್ರಶ್ನೆ ಕೇಳಿಕೊಂಡು ನಮ್ಮ ಪಾಡಿಗೆ ನಾವಿದ್ದು ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾವಾದ ದಟ್ಟ ಮಲೆನಾಡಿನಲ್ಲೂ ನೀರಿಗೂ ತತ್ವಾರ ಆರಂಭವಾಯಿತೋ ಆಗ ಎಚ್ಚೆತ್ತುಕೊಳ್ಳಲಾರಂಭಿಸಿದೆವು. ಬೇಕಿದ್ದರೆ ನೀವೊಮ್ಮೆ ಗಮನಿಸಿ ನೋಡಿ, ನಮಗೆ ಅಂಗಳದಲ್ಲಿ ಒಂದು ಹನಿ ನೀರು ನಿಂತರೂ ಕಿರಿಕಿರಿಯಾಗಲಾರಂಭಿಸುತ್ತದೆ. ಇನ್ನು ನಗರ ಪ್ರದೇಶದಲ್ಲಂತೂ ಒಂದಿಮಚೂ ಬಿಡದೆ ೩೦/೪೦ ಸೈಟಿನ ತುಂಬ ಸಿಮೆಂಟ್ ಮೆತ್ತಿಟ್ಟು " ಓಹ್, ಎಷ್ಟೊಂದು ನಿಟಾಗಿ ಮನೆ ಕಟ್ಟಿಕೊಂಡಿದ್ದೇವೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ನೀರಿನ ವಿಚಾರದಲ್ಲಿ ಪ್ರಪ್ರಥಮ ವೈರಿಯೇ ನಮ್ಮ ಮನೊಭಾವ.

ಯಾವಾಗ ಬೇಸಿಗೆಯಲ್ಲಿ ನೀರಿನ ಬವಣೆ ಬಂದು ಕಪಾಳಕ್ಕೆ ಬಾರಿಸಿತೋ ಆಗ ನಮಗೆ ಎಚ್ಚರವಾಗಿದೆ. ತಡವಾಗಿಯಾದರೂ ತಪ್ಪಿನ ಅರಿವಾದದ್ದು ಪುಣ್ಯ. ಈಗೀಗ ಮಳೆನೀರು ಕೊಯ್ಲಿನ ಮಾತನಾಡತೊಡಗಿದ್ದೇವೆ. ನೀರಿಂಗಿಸುವ, ಅಂತರ್ಜಲ ಕಾಪಾಡುವ ದಾರಿಗಳನ್ನು ಹುಡುಕಲಾರಂಭಿಸಿದ್ದೇವೆ. ಕುಕ್ಕರಬಸವಿಯಾಗಿ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ಮುಚ್ಚಲು ಹೊರಡುವುದಾದರೆ ಮೊದಲೊಂದಿಷ್ಟು ಚಾನೀಸಂ, ಮನೀಸಂ, ಬನಿಜಾದಂಥ ಮಾಯಾಮಂತ್ರಗಳನ್ನು ಉಪದೇಶಿಸಬಹುದು. ಈ ಮಂತ್ರಗಳ ಪುನಶ್ಚರಣೆ ಆರಂಭಿಸಿ ಮಳೆಗಾಲದ ಸತತ ನಾಲ್ಕು ತಿಂಗಳು "ಚಾತುರ್ಮಾಸ ವ್ರತ’ ಕೈಗೊಂಡರೆ ಕೊನೆಯಲ್ಲಿ ಮಂತ್ರಸಿದ್ಧಿ ಖಂಡಿತಾ ಸಾಧ್ಯ.

ಎಲ್ಲಕ್ಕಿಂತ ಮೊದಲು ‘ಅಯ್ಯೋ ಮಳೆ ನೀರಿಂದ, ಮಾಡಿನ ಮೇಲೆ ಸುರಿಯುವ ಹನಿಗಳನ್ನು ಸಂಗ್ರಹಿಸಿದರೆ ಎಷ್ಟು ಮಹಾ ನೀರು ಸಿಕ್ಕೀತು ? ಥೂ, ಅ ನೀರನ್ನೆಲ್ಲ ಕುಡಿಯೋ ಅಂಥದ್ದು ನಮಗೇನು ಬಂದಿದೆ? ನಾವ್ಯಾಕೆ, ಅದನ್ನೆಲ್ಲ ಮಾಡಬೇಕು? ಬೋರ್‌ವೆಲ್ ಇದೆ ಬಿಡು, ಅಯ್ಯೋ ನಾವು ಮಲೆನಾಡಿನವರು, ಮುಳುಗಿ ಹೋಗುವಷ್ಟು ನೀರು ನಮ್ಮಲ್ಲೇ ಇದೆ. ಇನ್ನು ಮಳೆ ನೀರನ್ನು ಹಿಡೀತಾ ಕೂತ್ಕೊಳ್ಳೋಖೆ ಬೇರೆ ಕೆಲ್ಸಾ ಇಲ್ವಾ?’ ಇಂಥ ಮನೋಭಾವವನ್ನು ಬದಲಿಸಿಕೊಂಡರೆ ಸಾಕು, ನಮ್ಮನ್ನೀಗ ಕಾಡುತ್ತಿರುವ ನೀರಿನ ಸಮಸ್ಯೆಯ ಮುಕ್ಕಾಲುಪಾಲು ಕರಗಿರುತ್ತದೆ.

‘ಲಾಸ್ಟ್’ಡ್ರಾಪ್: ದೇವರಾಣೆ ಸತ್ಯ, ನೀರಿನ ಬಗ್ಗೆ ಸಕಾರಾತ್ಮಕ ಧೋರಣೆಯೊಂದೇ ಅದರ ಸಮಸ್ಯೆಗಿರುವ ಏಕೈಕ ಪರಿಹಾರ.

ಅರಿವಿನ ‘ದಾಹ’ ಮೂಡದೇ ಅಭಿವೃದ್ಧಿ ಸಾರ್ಥಕವಾಗದು

ವಿಶೇಷ ಗಮನಿಸಿ, ನಮ್ಮಲ್ಲಿ ದೇಶದಲ್ಲಿರುವ ಎಲ್ಲ ಭಾರಿ ಅಣೆಕಟ್ಟುಗಳ ಹಿಂದೆ ಹಿಡಿದಿಟ್ಟ ನೀರಿನಷ್ಟೇ ಪ್ರಮಾಣದ ಅಂತರ್ಜಲ ನೀರಾವರಿಗೆ ಉಪಯೋಗವಾಗುತ್ತಿದೆ. ದೇಶದ ಜನಸಂಖ್ಯೆಯ ಮುಕ್ಕಾಲಕ್ಕೂ ಹೆಚ್ಚು ಪಾಲು ಜೀವನ ನೆಲದಡಿಯ ನೀರನ್ನೇ ಅವಲಂಬಿಸಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ನೀರಾವರಿ ಯೋಜನೆಗಳ ಹೆಸರನ್ನು ಹೇಳುತ್ತಲೇ ಬಂದಿದ್ದೇವೆ. ಅಂಥ ಯೋಜನೆಯ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಇಷ್ಟಾದರೂ, ಕೃಷಿ, ಕೈಗಾರಿಕೆಗಳಿಗೂ ನೆಲದಡಿಯ ನೀರಿನ ಬಳಕೆ ನಿಂತಿಲ್ಲ. ಏನಿದರ ಅರ್ಥ ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಭಾರಿ ಅಣೆಕಟ್ಟುಗಳ ಬಳಿಕ ಇತ್ತೀಚೆಗೆ ಬಲಗೊಂಡಿರುವುದು ನದಿಗಳ ಜಾಲದ್ದು. ಇದಕ್ಕಾಗಿ ಸರಕಾರಗಳು ಕೋಟಿಗಟ್ಟಲೆ ಹಣ ಸುರಿಯಲು ಆಸಕ್ತಿ ತೋರಿಸುತ್ತಿವೆ. ಅವರು ಹೇಳುತ್ತಿರುವುದನ್ನು ಕೇಳಿದರೆ ನದಿಗಳನ್ನು ಬೆಸೆದ ಮೇಲೆ ನೆಲದ ಮೇಲೆ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದುಕೊಳ್ಳಬೇಕು. ಆದರಿದು ಕಾರ್ಯ ಸಾಧುವೇ ?
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋ ಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ.
ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾ ಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ.


ಭಾರಿ ನೀರಾವರಿ ಯೋಜನೆಗಳೆಂದರೆ ಅದು ಮತ್ತೊಂದು ರೀತಿಯ ನೀರಿನ ದುರುಪಯೋಗವೆಂಬಂತಾಗಿದೆ. ಲಕ್ಷಾಂತರ ಎಕರೆ ಜಮೀನು ಜೌಗು ಪ್ರದೇಶವಾಗಿ ಪ್ರಯೋಜನಕ್ಕೆ ಬಾರದೆ ಹೋಗುತ್ತಿದೆ. ನೆಲದಲ್ಲಿ ಕ್ಷಾರಾಂಶ ಹೆಚ್ಚುತ್ತಿದೆ. ಉತ್ತಮ ಜಮೀನು ಜವಳು ಭೂಮಿಯಾಗಿ ಕೃಷಿ ಯೋಗ್ಯತೆಯನ್ನೇ ಕಳೆದುಕೊಳ್ಳುತ್ತಿದೆ.


ನಮಗೆ ಇದು ತಿಳಿದಿಲ್ಲವೆಂದಲ್ಲ. ಆದರೂ ಕಾಲುವೆ, ಪೈಪುಗಳಲ್ಲಿ ನೀರು ಬಂದು ಜಮೀನಿಗೆ ತಲುಪಿ ಬಿಡಬೇಕು ಎಂದು ಬಯಸುತ್ತಿದ್ದೇವೆ. ಹೇರಳ ನೀರು ದೊರಕಿಸಿ ಕೊಂಡು ಬಿಡುತ್ತೇವೆಂಬ ಭ್ರಮೆಯಲ್ಲಿ ಕೊಳವೆ ಬಾವಿ ಗಳನ್ನು ಕೊರೆಯುತ್ತಲೇ ಬರುತ್ತಿದ್ದೇವೆ. ನೀರೆತ್ತುವ ಪಂಪುಗಳನ್ನು ಜೋಡಿಸಿ, ಜಲ ಸಂಪತ್ತನ್ನು ಬರಿದು ಮಾಡಿಕೊಂಡು ಕಂಗಾಲಾಗುತ್ತಿದ್ದೇವೆ. ನಮ್ಮ ಯೋಜನೆ ಗಳು, ಅದಾವುದೇ ಆಗಿರಲಿ; ಬಾಳಿಕೆ ಬರಬೇಕು. ಸುಸ್ಥಿರ ವಾಗಬೇಕು. ನೈಜ ಸಾರ್ಥಕತೆ ಪಡೆಯುವುದಾದರೆ ಮುಂದಿನ ಪೀಳಿಗೆಗೂ ದಕ್ಕಬೇಕು.


ಆಧುನಿಕ ತಂತ್ರeನ ಇರಲಿ, ತಪ್ಪಿಲ್ಲ. ಅದು ಇರುವ ಸೌಲಭ್ಯಕ್ಕೆ ಪೂರಕವಾಗುವುದಾದರೆ ಸರಿ. ಇರುವುದನ್ನು ನಾಶ ಮಾಡುವುದೇ ಆದಲ್ಲಿ, ಸಮಸ್ಯೆಗಳಿಗೆ ಉತ್ತರವನ್ನಾ ದರೂ ದೊರಕಿಸಿಕೊಡುವಂತಿರಬೇಕು. ಅದರೊಂದಿಗೆ ಹೊಸ ಸಮಸ್ಯೆಗಳನ್ನೂ ಸೃಷ್ಟಿಸುವುದಾದರೆ ಅದು ಅಭಿವೃದ್ಧಿ ಹೇಗಾದೀತು ?


ಅದು ಹನಿ ನೀರಾವರಿ ಪದ್ಧತಿ ಇರಬಹುದು, ಚಿಮ್ಮು ನೀರಾವರಿ ಪದ್ಧತಿಯಿರಬಹುದು- ಈ ಆಧುನಿಕ ಕ್ರಮಗಳು ವ್ಯತಿರಿಕ್ತ ಪರಿಣಾಮಗಳಿಂದ ಮುಕ್ತ. ಅದು ಬಿಟ್ಟು ಏತದ ಮೂಲಕ ನದಿಯ ದಿಕ್ಕನ್ನೇ ಬದಲಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಯಾವ ಪುರುಷಾರ್ಥವಿದೆ ?


ನೀರು ಸ್ವಲ್ಪವೂ ಪೋಲಾಗದಂತೆ ಎಲ್ಲರಿಗೂ ಸಮಾನ ಹಂಚಿಕೆ ಮಾಡುವ ಹಲವಾರು ಉಪಕ್ರಮಗಳು ದೇಶೀಯ ವಾಗಿಯೇ ಅನುಸರಣೆಯಲ್ಲಿವೆ. ಅವುಗಳನ್ನು ಅಭಿವೃದ್ಧಿ ಪಡಿಸಲು, ಸಮಕಾಲೀನ ಸ್ಥಿತಿಗತಿಗಳಿಗನುಗುಣವಾಗಿ ಹೊಂದಿಸಿಕೊಳ್ಳಲು ಹೆಚ್ಚೇನೂ ಶ್ರಮವೂ ಬೇಕಿಲ್ಲ, ಆರ್ಥಿಕ ಹೊರೆಯೂ ಇಲ್ಲ. ಆ ಬಗ್ಗೆ ನಾವು ಈ ವರೆಗೆ ಯೋಚಿಸಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಗಾತ್ರದ ಯೋಜನೆಗಳು. ಹರಿವ ನೀರಿನ ಬಳಕೆಗೆ ಹತ್ತಾರು ಸುಲಭ ಮಾರ್ಗಗಳಿವೆ. ಅದಕ್ಕೆ ಬೃಹತ್ ಅಣೆಕಟ್ಟೆಗಳೇ ಆಗಬೇಕೆಂದಿಲ್ಲ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ.


ಚಿಕ್ಕಪುಟ್ಟ ಮಣ್ಣಿನ ದಂಡೆಗಳು ಸಹ ಹರಿಯುವ ನೀರಿನ ಪ್ರಯೋಜನವನ್ನು ಪಡೆಯಲು ಅರ್ಥಿಕ ದೃಷ್ಟಿಯಿಂದ ಲಾಭಕರವಾದವು. ಪರಿಸರ ದೃಷ್ಟಿಯಿಂದ ಅದು ವಿವೇಕ ಯುತ ಮಾರ್ಗ, ಚಂಡೀಗಢ ಸಮೀಪದಲ್ಲಿ ಹೀಗೆ ರಚಿಸಿರುವ ಮೂರು ಚಿಕ್ಕ ಜಲಾಶಯಗಳು ಒಂದು ಗ್ರಾಮದ ಸಂಪತ್ತನ್ನು ಬೇಕಾದಷ್ಟು ಹೆಚ್ಚಿಸಿದೆ. ಅಲ್ಲಿ ಯಾವ ಭೂಮಿಯೂ ಕೊರೆದು ಹೋಗಿಲ್ಲ, ಅರಣ್ಯವೂ ನಾಶವಾಗಿಲ್ಲ. ಪ್ರತಿಯಾಗಿ ಮರುಭೂಮಿಯೂ ಸೃಷ್ಟಿಗೊಂಡಿಲ್ಲ. ಯಾವೊಬ್ಬನನ್ನೂ ಅವನಿದ್ದ ಸ್ಥಳದಿಂದ ಓಡಿ ಸಿಲ್ಲ. ಇದರಿಂದ ನಾವು ಕಲಿಯಲೇ ಬೇಕಾದ ಪಾಠವೆಂದರೆ ನೀವು ಜಲ ಸಂಪತ್ತನ್ನು ರಕ್ಷಿಸುತ್ತೀರಾದರೆ ಅವಶ್ಯವಾಗಿ ರಕ್ಷಿಸಿ. ಅದರ ಬದಲು ಮಹಾ ಮಹಾ ಒಡ್ಡುಗಳನ್ನು ಕಟ್ಟು ತ್ತೀರಾದರೆ ಅವು ಖಂಡಿತವಾಗಿಯೂ ಬೇಡ.


ಹಿಂದೊಂದು ಕಾಲದಲ್ಲಿ ಭಾರತದ ಅಭಿವೃದ್ಧಿಯ ಸಂಕೇತವೇ ಮಹಾ ಒಡ್ಡುಗಳು ಎಂಬ ಭಾವನೆಯಿತ್ತು. ಇಂದು ಅಂಥ ಭ್ರಮೆ ಕಳಚಿ ಹೋಗಿದೆ. ಅವುಗಳ ದುಷ್ಪರಿಣಾಮವನ್ನು ಕುರಿತು ಜನರು ಚಿಂತೆಗೀಡಾಗಿದ್ದಾರೆ. ಹಾಗಿದ್ದರೂ ಇನ್ನೂ ಇನ್ನೂ ಆ ಬಗ್ಗೆ ಧನವ್ಯಯ ಮಾಡು ವುದನ್ನು ಕಾಣುತ್ತಿದ್ದೇವೆ. ಇವತ್ತು ಭಾರತದ ಯಾವತ್ತೂ ಪ್ರಮುಖ ನದಿಗಳಿಗೆ ಒಡ್ಡನ್ನು ಈಗಾಗಲೇ ಕಟ್ಟಿದ್ದಾರೆ. ಅಥವಾ ಕಟ್ಟುತ್ತಿದ್ದಾರೆ. ಆದರೆ ಈ ಮೂಲಕ ಜಲ ಮೂಲ ವಿದ್ಯುತ್ ಉತ್ಪಾದನೆಯ ಲಾಭ ದೊರೆತದ್ದು ತೀರ ಸ್ವಲ್ಪ. ಹೀಗಾಗಿ ಒಡ್ಡುಗಳ ನಿರ್ಮಾಣವೇ ನಮಗೆ ಅಭಿವೃದ್ಧಿಯ ಪ್ರಧಾನ ಚಟುವಟಿಕೆಯಾಗಿ ಕಾಣಿಸುವಂತಿದೆ.


ಆದರೆ ಪರಿಸರ ದೃಷ್ಟಿಯಿಂದ ಈಚೀಚೆಗೆ ಉಂಟಾದ ಅನುಭವಗಳೆಂದರೆ ಈ ಒಡ್ಡುಗಳು ಎಷ್ಟೆಷ್ಟು ದೊಡ್ಡದಾ ಗುತ್ತವೋ, ಪರಿಸರ ವಿನಾಶ ಅಷ್ಟಷ್ಟು ಹೆಚ್ಚಿಗೆ ಆಗುತ್ತದೆ ಎಂದು. ಹೀಗಿರುತ್ತಾ ಪರಿಸರಕ್ಕೆ ಧಕ್ಕೆ ತಾರದಂತೆ ಬೇರೇನೂ ಕೆಲಸ ಮಾಡಲು ಬರಲಾರದೇ-ಎಂಬ ಪ್ರಶ್ನೆ ನಮ್ಮ ಮುಂದಿದೆ. ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಆಹಾರವನ್ನು ಒದಗಿಸಬೇಕು ಮತ್ತು ಉದ್ಯಮಗಳಿಗೆ ಚೈತನ್ಯವನ್ನು ಒಗಿಸಬೇಕು ಎಂಬ ಸಂಗತಿ ನಿಜವಾದರೂ ಅವುಗಳಿಂದುಂಟಾಗುವ ಹಾನಿಯನ್ನು ತಡೆಯಲು ಪ್ರಯತ್ನಿಸಬೇಡವೇನು?


ಅಭಿವೃದ್ಧಿಯ ವ್ಯಾಖ್ಯಾನದ ಸಂದರ್ಭದಲ್ಲಿ ನಾವು ಪ್ರತಿಪಾದಿಸುತ್ತಿರುವ ಆರ್ಥಿಕ ಸಬಲತೆ, ಆಹಾರ ಸ್ವಾವ ಲಂಬನೆಯ ವಿಚಾರಗಳು ನೀರಿನ ವಿಷಯಕ್ಕೂ ಅನ್ವಯ ವಾಗಬೇಕು. ಸಾಮುದಾಯಿಕ ಪ್ರಯತ್ನಗಳ ಮೂಲಕ ಪ್ರತಿಯೊಬ್ಬನ ನೀರಿನ ಅಗತ್ಯ ಪೂರೈಕೆಯಾಗಬೇಕು. ನೀರು ಸರಕಾರಿ ಯೋಜನೆಯಾಗದೇ ವ್ಯಕ್ತಿಗತ ಕಾಳಜಿಯಾಗ ಬೇಕು. ಶುದ್ಧ ಜಲದ ಹಕ್ಕು ಸಂರಕ್ಷಣೆಗೊಳ್ಳಬೇಕು. ನೀರಿನ ವಿಚಾರದಲ್ಲಿ ‘ಆಡಳಿತ’ ಕೈ ಹಾಕುವುದೇ ಆದರೆ ಸುಸ್ಥಿರ ಪದ್ಧತಿಗಳನ್ನು ಪರಿಚಯಿಸಬೇಕು. ಪಾರಂಪರಿಕ ವಿಧಾನಗಳು ಮಾತ್ರವೇ ನೀರನ್ನು ನೀರಿನ ಸ್ವರೂಪದಲ್ಲಿ ಉಳಿಸಿ ದೇಶವಾಸಿಗಳ ದಾಹ ತಣಿಸಬಹುದೇ ವಿನಃ ಉಳಿದೆಲ್ಲ ಆಧುನಿಕ ತಂತ್ರeನಗಳು ಅದನ್ನು ಇನ್ನಷ್ಟು ಕುಲಗೆಡಿಸುತ್ತದೆ.

‘ಲಾಸ್ಟ್ ’ಡ್ರಾಪ್ :
‘ತಿಳಿನೀಲ ಬಂಗಾರ’ದ ಮೌಲ್ಯ ಜನರ ಮೂಲಭೂತ ತಿಳಿವಿಗೆ ದಕ್ಕದ ಹೊರತೂ ಈ ನೆಲದ ದಾಹ ತೀರಲು ಸಾಧ್ಯವೇ ಇಲ್ಲ.

ನಮ್ಮ ಹಲಸೂರು ಕೆರೆಯೂ, ಲಂಡನ್ನಿನ ಹುಲುಸಾದ ಕೆರೆಯೂ

ಒಂದು ಕಾಲದಲ್ಲಿ ಹಾಗೆ ಒಂದು ಸುತ್ತು ಆ ಕೆರೆಯ ಬಳಸಿ ಹೊರಟರೆ ಅದೆಂಥದೋ ಆಹ್ಲಾದ. ಹಾಗೆಂದು ಇಂದಿನ ಅಜ್ಜಂದಿರೆಲ್ಲ ನೆನಪಿಸಿಕೊಳ್ಳುತ್ತಾರೆ. ಸುಮ್ಮನೆ ಒಮ್ಮೆ ನಿಮ್ಮನೆಯ ಹಿರಿಯರನ್ನು ಕೇಳಿ ನೋಡಿ; ನಿಮ್ಮ ಕಾಲದಲ್ಲಿ ಹಲಸೂರು ಕೆರೆಯೆಂದರೆ ಹೇಗಿತ್ತು ಅಂತ. ಒಮ್ಮೆಲೆ ಅವರು ನೆನಪಿನಾಳಕ್ಕೆ ಜಾರುತ್ತಾರೆ. ಅಷ್ಟೇ ಅವರ ಮುಖದಲ್ಲಿ ಎಂಥದ್ದೋ ಉಲ್ಲಾಸ ಉಕ್ಕುತ್ತದೆ. ನೀವದನ್ನು ಗುರುತಿಸಬಲ್ಲಿರಿ. ಏನೋ ಉತ್ಸಾಹದಲ್ಲಿ ಬಣ್ಣಿಸ ಹೊರಡುತ್ತಾರೆ. ಅಷ್ಟೇ, ಅದು ಕ್ಷಣ ಕಾಲ. ಮತ್ತೆ ಆ ಮುಖದಲ್ಲಿವಿಷಾದದ ಗೆರೆ ಇಣುಕುತ್ತದೆ. ಏನನ್ನೋ ಕಳೆದುಕೊಂಡ ಅನುಭವ. ನಮ್ಮದೆನ್ನುವ ಅನರ್ಘ್ಯವೊಂದು ನಮ್ಮಿಂದ ದೂರಾದ ಭಾವದಲ್ಲಿ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ಅಯ್ಯೋ...ಅಂಥ ಕಾಲ ಮತ್ತೆ ಬರುವುದೇ ಇಲ್ಲವೇನೋ...? ಅನುಮಾನದ ಹಿಂದೆಯೂ ಖಚಿತತೆ ಮನೆ ಮಾಡಿದೆ. ಅಂದರೆ ಹಲಸೂರು ಕೆರೆ ಮತ್ತೆ ಹಿಂದಿನಂತಾಗುವುದು ಸಾಧ್ಯವೇ ಇಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಹೋಗಿದೆ.

ಅದೃಷ್ಟಕ್ಕೆ ಹಲಸೂರು ಕೆರೆ ಇಂದಿಗೂ ಹಲಸೂರು ಕೆರೆಯಾಗಿ ಉಳಿದುಕೊಂಡಿದೆ. ಆ ಕೆರೆಯನ್ನು ಇವತ್ತಿಗೂ ಸುತ್ತಿದರೆ ಅದೇ ಗಾಳಿ ತೆರೆಗಳ ಮೇಲಿಂದ ತೇಲಿ ಬರುತ್ತದೆ. ಆದರೆ ಆ ಗಾಳಿಯಗುಂಟ ಕೆಟ್ಟದ್ದೊಂದು ಗಮಲು ಮುಖಕ್ಕೆ ರಾಚುತ್ತದೆ. ಅಲ್ಲಿ ಹಿಂದಿನಂತೆಯೇ ನೀರೂ ಇದ್ದಿರಬಹುದು. ಆದರೆ ಅದನ್ನು ನಗರ ಜೀವನದ ಎಲ್ಲ ಅಪಸವ್ಯಗಳಿಂದ ನಿರ್ಮಾಣಗೊಂಡ ಪೊರೆಯೊಂದು ಆವರಿಸಿಕೊಂಡಿದೆ. ಅಲ್ಲೊಂದಿಷ್ಟು ಮೀನೂ ಸೇರಿದಂತೆ ಹಲವು ವೈವಿಧ್ಯದ ಜಲಚರಗಳು ಆಟ ಆಡಿಕೊಂಡಿದ್ದವು. ಇಂದಿಗೂ ಇವೆ, ಆದರೆ ಬದುಕುಳಿದರೆ ನಾಳೆಯ ಬೆಳಗನ್ನು ಕಂಡೇವು ಎಂಬಂತೆ ಭಯದಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿವೆ. ಸುತ್ತಲೊಂದಿಷ್ಟು ಮರ-ಗಿಡಗಳು, ಪೊದೆ ಗಂಟಿಗಳಿದ್ದವು. ಅವುಗಳ ಹಚ್ಚ ಹಸಿರು ತಿಳಿ ನೀಲ ನೀರಿನಲ್ಲಿ ಪ್ರತಿಫಲಿಸುತ್ತಿತ್ತು. ಇಂದು ಅದೆಲ್ಲಿಗೆ ಹೋದವೆಂಬುದು ಯಾರಿಗೂ ತಿಳಿದಿಲ್ಲ. ಅಂಥ ಮರಗಿಡಗಳಲ್ಲಿ ಕಲರವ ಹೊಮ್ಮಿಸುತ್ತಿದ್ದ ಗಿಳಿವಿಂಡು, ಹಕ್ಕಿ-ಗುಬ್ಬಚ್ಚಿಗಳ ಗುಂಪು ಮಟಾಮಾಯ.


ಏಕೆ ಹೀಗೆ ? ನಮಗೆ ಬೇಕಾದಂತೆ ನಾವಿರುವ ಎಲ್ಲ ಹಕ್ಕೂ ನಮಗಿದೆ. ಅದಕ್ಕಾಗಿ ಅವೆಲ್ಲವನ್ನೂ ಬದಲಿಸಿ ನಾವು ಬದುಕುತ್ತಿದ್ದೇವೆ. ಹಾಗೆಯೇ ನಿಸರ್ಗದ ಇತರ ಸಹ ನಿವಾಸಿಗಳಿಗೂ ನಾವು ಅಂಥ ಹಕ್ಕನ್ನು ಬಿಟ್ಟುಕೊಡಬೇಕೆಂದು ಯಾವತ್ತೂ ನಮಗೆ ಅನ್ನಿಸಿಯೇ ಇಲ್ಲವೇ ? ಇದು ಕೇವಲ ಬೆಂಗಳೂರಿನ ಹಲಸೂರು ಕೆರೆಯೊಂದರ ಕಥೆಯಲ್ಲ. ಅದು ಸ್ಯಾಂಕಿ ಕೆರೆಯಿರಬಹುದು, ಹೆಬ್ಬಾಳದ್ದಿರಬಹುದು, ಗುಲ್ಬರ್ಗದ ಕೆರೆಯಾಗಿರಬಹದು, ಅರಸೀಕೆರೆಯಾಗಿರಲೂಬಹುದು...ಹೀಗೆ ಎಲ್ಲ ಊರಿನ ಎಲ್ಲ ಕೆರೆಗಳ ಕಥೆಯೂ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇಲ್ಲ. ಕೆರೆಗಳು ಮಾಯವಾಗುತ್ತಿವೆ. ಅದರೊಂದಿಗೆ ಜೀವವೈವಿಧ್ಯವೂ ಇಲ್ಲದಾಗುತ್ತಿದೆ ಎಂಬ ಕಳವಳ ಇಂದು ನಿನ್ನೆಯದಲ್ಲ. ಕೆರೆಗಳನ್ನು ಉಳಿಸುವ ಸರಕಾರದ ಯೋಜನೆಗಳೂ ಅದರ ಸುತ್ತ ಬೇಲಿ, ವಾಯುವಿಹಾರ ಮಾರ್ಗ ರಚಿಸುವಷ್ಟಕ್ಕೆ ಸೀಮಿತ. ಹಾಗಾದರೆ ನಮ್ಮ ಕೆರೆಗಳನ್ನು ಉಳಿಸಲು ಮಾದರಿ ಯಾವುದು ?
ಹಾಗೆ ಯೋಚಿಸುತ್ತ ಅಂತರ್ಜಾಲ ತಾಣವೊಂದರಲ್ಲಿ ಜಾಲಾಡುತ್ತಿದ್ದಾಗ ಕಣ್ಣೆದುರು ಅವತರಿಸಿದ್ದು ‘ಲಂಡನ್ ವೆಟ್ಲ್ಯಾಂಡ್ ಸೆಂಟರ್’ ಬಗೆಗಿನ ಅಕ್ಷರ ಸರಣಿ. ವೆಟ್ಲ್ಯಾಂಡ್, ಇದು ಜನನಿಬಿಡ ನಗರವಾದ ಲಂಡನ್ನ ಹೀತ್ರೊ ವಿಮಾನ ನಿಲ್ದಾಣಕ್ಕೆ ಅತಿ ಸಮೀಪದಲ್ಲೇ ಇದೆ. ಒಂದು ಕಾಲದಲ್ಲಿ ಪಾಳುಬಿದ್ದು, ಒತ್ತುವರಿಗೆ ತುತ್ತಾಗಿದ್ದ ನೆಲ ಇಂದು ನಂದನವನ. ಈ ೧೫೦ ಎಕರೆ ಪ್ರದೇಶ ಈಗ ಕೆರೆಗಳು, ಪುಟ್ಟ ಕೊಳಗಳು, ಸಾವಿರಾರು ಮರಗಿಡಗಳು, ಪಕ್ಷಿ ಪ್ರಾಣಿಗಳ ಸುವ್ಯವಸ್ಥಿತ ಜಾಲ. ೧೮೦ಕ್ಕೂ ಹೆಚ್ಚು ಜಾತಿಯ ಹಕ್ಕಿಗಳ ತಾಣ. ಬೇರ್ಯಾವ ಮೆಟ್ರೊ ನಗರದಲ್ಲೂ ಕಾಣಸಿಗದ ಅಪರೂಪದ ಪಕ್ಷಿ ಸಂಕುಲ ಇಲ್ಲಿದೆ. ಚಿಟ್ಟೆಗಳು, ಕಪ್ಪೆಗಳಂಥ ಉಭಯವಾಸಿಗಳು, ಕೀಟಗಳು, ಮೀನುಗಳು, ಸರೀಸೃಪಗಳು, ಬಾವಲಿಗಳು ಮತ್ತಿತರ ಅಗಾಧ ಜೀವವೈವಿಧ್ಯಕ್ಕೆ ಆಗರ. ಹಲವಾರು ಪರಿಸರ ಪ್ರಶಸ್ತಿಗಳಿಗೆ ಪಾತ್ರ. ಜೀವವಿಜ್ಞಾನಿಗಳ ಸಂಶೋಧನೆ ಹಾಗೂ ಅಧ್ಯಯನಗಳಿಗೆ ನೆಲೆಮನೆ.


ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದೇ ಕುತೂಹಲಕರ. ಮೊದಲು ಎಲ್ಲ ಕೆರೆಗಳ ಹೂಳೆತ್ತಲಾಯಿತು. ಎತ್ತಿದ ಮಣ್ಣನ್ನೇ ಸುತ್ತ ಹರಡಿ ಪರಿಸರಕ್ಕೆ ಹೊಂದುವ ವೈವಿಧ್ಯಮಯ ಹೂವಿನ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಒತ್ತುವರಿದಾರರನ್ನು ಕಟ್ಟುನಿಟ್ಟಾಗಿ ಹೊರಗಟ್ಟಲಾಯಿತು. ಹೂವು ಹೆಚ್ಚಿದಂತೆ ಚಿಟ್ಟೆಗಳು ವಲಸೆ ಬಂದವು. ಹಣ್ಣಿನ ಗಿಡಗಳು ಫಲ ಬಿಡಲಾರಂಭಿಸಿದಂತೆ ಹಕ್ಕಿಗಳು ಹೆಚ್ಚಿದವು. ನಿಧಾನವಾಗಿ ಸಣ್ಣಪುಟ್ಟ ಉಭಯವಾಸಿಗಳು, ಸರೀಸೃಪಗಳು, ಕೀಟಗಳು, ಬಾವಲಿಗಳು ಪ್ರವೇಶಿಸಿದವು. ಆಹಾರ ಸರಪಣಿಯ ನಿಯಮವನ್ನೇ ಪಾಲಿಸಿ, ಇವುಗಳ ಮೇಲೆ ಜೀವಿಸುವ ಪ್ರಾಣಿ ಪಕ್ಷಿ ಕೀಟಗಳೂ ಹಿಂಬಾಲಿಸಿದವು.


ಇಷ್ಟರ ನಡುವೆ ಎಲ್ಲೂ ಮಾನವನ ಮಧ್ಯಪ್ರವೇಶಕ್ಕೆ ಅವಕಾಶವನ್ನೇ ನೀಡಲಿಲ್ಲ. ಉದ್ಯಾನ ಒಂದು ಹಂತಕ್ಕೆ ಬರುವವರೆಗೂ ಇಲ್ಲಿನ ಕೆಲ ಪ್ರದೇಶಗಳಿಗೆ ವೀಕ್ಷಕರಿಗೆ ಹೋಗಬಿಡುತ್ತಿರಲಿಲ್ಲ. ಈಗಲೂ, ಪಕ್ಷಿಗಳು ಮೊಟ್ಟೆಯಿಡುವ, ಪ್ರಾಣಿಗಳು ಮರಿಹಾಕುವ ಜಾಗಗಳಿಗೆ ಯಾರಿಗೂ ಕಾಲಿಡಲು ಅವಕಾಶವಿಲ್ಲ. ವೀಕ್ಷಕರ ಭೇಟಿ ಇಲ್ಲಿನ ಜೀವಸಂಕುಲಕ್ಕೆ ಯಾವುದೇ ತೊಂದರೆ ನೀಡದಂತೆ ನಡೆದಾರಿಗಳು, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ಅಪರೂಪದ ಪ್ರಾಣಿ ಪಕ್ಷಿಗಳ ಚಟುವಟಿಕೆಯನ್ನು ಗುಪ್ತ ಕ್ಯಾಮೆರಾದಿಂದ ಶೂಟ್ ಮಾಡಿ ವೀಕ್ಷಕರಿಗೆ ತೋರಿಸುವ ವ್ಯವಸ್ಥೆಯಿದೆ.


ಇಷ್ಟೆಲ್ಲವನ್ನೂ ಓದಿ ಮುಗಿಸುವ ಹೊತ್ತಿಗೆ, ಮತ್ತದೇ ಪ್ರಶ್ನೆ ಎದುರಾದದ್ದು, ಲಂಡನ್ನ ಈ ಉದ್ಯಾನವನ ನಮಗೂ ಮಾದರಿಯಾಗಬಾರದೇಕೆ ?


ಅಸಲಿಗೆ ಭಾರತದ ಬದುಕು ಬರಡಾಗತೊಡಗಿದ್ದೇ ಅಲ್ಲಿ. ನಮ್ಮ ಜನಜೀವನವನ್ನು ತಮ್ಮ ಮಡಿಲಲ್ಲಿ ಇಟ್ಟು ಮಗುವಿನಂತೆ ಪೊರೆಯುತ್ತಿದ್ದ ಕೆರೆಗಳನ್ನು ಕಡೆಗಣ್ಣಿನಲ್ಲೂ ನೋಡುವ ಸೌಜನ್ಯವನ್ನು ನಾವು ತೋರಲಿಲ್ಲ. ಕೊನೇ ಪಕ್ಷ, ಹೊಸ ಕೆರೆಗಳ ನಿರ್ಮಾಣ ಹಾಗಿರಲಿ, ಅಥವಾ ಇರುವ ಕೆರೆಗಳ ಅಭಿವೃದ್ಧಿಯ ಬಗೆಗೆ ಯೋಚಿಸುವುದೂ ಬೇಡ. ಕೊನೇ ಪಕ್ಷ ಇದ್ದ ಕೆರೆಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬೇಕೆಂದೂ ಅನ್ನಿಸದಿರುವುದು ದುರಂತ. ಕೆರೆಗಳು ಅಳಿದವು ಎಂಬುದಕ್ಕೆ ಅತ್ಯಂತ ಪ್ರಮುಖ ಕಾರಣ ಅವುಗಳ ಮೂಲಾಧಾರವಾಗಿದ್ದ ಜಲಾನಯನ ಪ್ರದೇಶವನ್ನು ನಾವು ಅತಿಕ್ರಮಿಸಿಕೊಂಡದ್ದು. ಜಲನಕ್ಷೆಯನ್ನೇ ಮರೆತು ಕಂಡಕಂಡಲ್ಲಿ ಮನೆಗಳು ತಲೆ ಎತ್ತಿದವು. ಖಾಲಿ ಜಾಗ ಕಂಡದ್ದೆಲ್ಲ ನಮ್ಮದೆಂಬ ಹಪಾಹಪಿತನ ಒಂದೆಡೆಯಾದರೆ ಕೆರೆಯ ಸುತ್ತಲ ಜಾಗ ವ್ಯರ್ಥ ಎಂಬ ಮನೋಭಾವ ಇನ್ನೊಂದೆಡೆ ಕೆರೆಗಳಿಗೆ ಮುಳುವಾಯಿತು.


ನೀವು ಒಮ್ಮೆ ಕೆರೆಯ ಸುತ್ತ ಓಡಾಡಿ ನೋಡಿ. ಒಂದು ಅವಲೋಕನಕ್ಕೆ ಸಿಗದ ಎಷ್ಟೋ ಅಂಶಗಳು, ಎರಡು, ಮೂರನೇ ಬಾರಿ ಹೋದಾಗ ಗಮನಕ್ಕೆ ಬರಬಹುದು. ಒಟ್ಟಾರೆ ಆ ಪರಿಸರದ ತೀರಾ ಎತ್ತರದ ಪ್ರದೇಶ ಯಾವುದು, ಇಳಿಜಾರು ಎಲ್ಲಿದೆ, ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ನೀರು ಎಲ್ಲಿ ದಿಕ್ಕು ಬದಲಿಸುತ್ತದೆ. ಹಾಗೆ ಹಾದಿ ತಪ್ಪುವ ಅದು ಮುಂದೆ ಎಲ್ಲಿಗೆ ಹೋಗಿ ಸೇರುತ್ತದೆ. ಮನೆಯ ಅಥವಾ ಜಮೀನಿನ ಅತ್ಯಂತ ಸಮೀಪದ ಕೆರೆ, ಕುಂಟೆಗಳಂಥ ಜಲಾಶ್ರಯ ತಾಣ ಯಾವುದು, ಅದಕ್ಕೆ ಮೂಲ ಸೆಲೆ ಎಲ್ಲಿಯದು, ಜಲಕಿಂಡಿಯ ಮುಖ ಎತ್ತ ಕಡೆಗಿದೆ ಎಂಬಿತ್ಯಾದಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಂದು ಅಲ್ಲೆಲ್ಲ ಜನ ವಸತಿ ತುಂಬಿ ತುಳುಕುತ್ತಿದೆ. ಅಂದ ಮೇಲೆ ಕೆರೆಗಳು ನಳನಳಿಸುತ್ತಲೇ ಇರುವುದೆಂತು ?


ಪ್ರತಿ ಕೆರೆಗೂ ಅದರ ಜಲಾನಯನವನ್ನಾಧರಿಸಿ ಪ್ರತ್ಯೇಕ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದುದರಿಂದ ನೀರಿನ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದಕ್ಕೆ ಕಾರಣವೇನು ? ಎಲ್ಲಿ ಲೋಪವಾಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ಇಂದು ಮೂಲಭೂತವಾಗಿ ಜಲನಕ್ಷೆ ಎಂಬುದೇ ಇಲ್ಲ. ಅಂಥ ಯಾವುದೇ ಪ್ರಯತ್ನ ಈಗ ನಡೆಯುತ್ತಿಲ್ಲವಾದ್ದರಿಂದ ನೀರಿನ ಬಳಕೆಯ ಲೆಕ್ಕಾಚಾರವೂ ತಲೆಕೆಳಗಾಗಿದೆ. ನೀರು ಸಹ ಹಾದಿ ತಪ್ಪಿ ಹರಿದು ಹೋಗುತ್ತಿದೆ.


ಕೆರೆಯೆಂದರೆ ಅದೊಂದು ಜೀವಂತ ತಾಣ. ಅಲ್ಲಿ ನೂರಕ್ಕೆ ನೂರು ಸಂಪೂರ್ಣ ಜೈವಿಕ ಪ್ರಕ್ರಿಯೆ ಸಾಗುತ್ತಿರುತ್ತದೆ. ಭೌತಿಕ ನಿರ್ಮಾಣ ಎಷ್ಟು ಮುಖ್ಯವೋ, ಜೈವಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವುದೂ ನೀರಿನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಷ್ಟೇ ಪ್ರಮುಖ ವಿಚಾರವೆನಿಸಿಕೊಳ್ಳುತ್ತದೆ. ನೈಸರ್ಗಿಕವಾಗಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಗಮನಿಸಿದಲ್ಲಿ ಮಾತ್ರ ಕೆರೆಯೊಂದರ ಸಮರ್ಥ ಅಭಿವೃದ್ಧಿ ಸಾಧ್ಯ.


‘ಲಾಸ್ಟ್’ ಡ್ರಾಪ್: ನೀರೆಂದರೆ ಅದು ನಿರ್ಜೀವ ಅಲ್ಲವೇ ಅಲ್ಲ. ಭಾವನಾತ್ಮಕ ಒಡನಾಟ ಇಲ್ಲದ ವ್ಯಕ್ತಿಗಳ ನಡುವೆ ಅದು ಎಂದಿಗೂ ವಾಸ ಮಾಡಲೊಪ್ಪುವುದೇ ಇಲ್ಲ.