Friday, December 18, 2009

ನಮ್ಮ ಹಲಸೂರು ಕೆರೆಯೂ, ಲಂಡನ್ನಿನ ಹುಲುಸಾದ ಕೆರೆಯೂ

ಒಂದು ಕಾಲದಲ್ಲಿ ಹಾಗೆ ಒಂದು ಸುತ್ತು ಆ ಕೆರೆಯ ಬಳಸಿ ಹೊರಟರೆ ಅದೆಂಥದೋ ಆಹ್ಲಾದ. ಹಾಗೆಂದು ಇಂದಿನ ಅಜ್ಜಂದಿರೆಲ್ಲ ನೆನಪಿಸಿಕೊಳ್ಳುತ್ತಾರೆ. ಸುಮ್ಮನೆ ಒಮ್ಮೆ ನಿಮ್ಮನೆಯ ಹಿರಿಯರನ್ನು ಕೇಳಿ ನೋಡಿ; ನಿಮ್ಮ ಕಾಲದಲ್ಲಿ ಹಲಸೂರು ಕೆರೆಯೆಂದರೆ ಹೇಗಿತ್ತು ಅಂತ. ಒಮ್ಮೆಲೆ ಅವರು ನೆನಪಿನಾಳಕ್ಕೆ ಜಾರುತ್ತಾರೆ. ಅಷ್ಟೇ ಅವರ ಮುಖದಲ್ಲಿ ಎಂಥದ್ದೋ ಉಲ್ಲಾಸ ಉಕ್ಕುತ್ತದೆ. ನೀವದನ್ನು ಗುರುತಿಸಬಲ್ಲಿರಿ. ಏನೋ ಉತ್ಸಾಹದಲ್ಲಿ ಬಣ್ಣಿಸ ಹೊರಡುತ್ತಾರೆ. ಅಷ್ಟೇ, ಅದು ಕ್ಷಣ ಕಾಲ. ಮತ್ತೆ ಆ ಮುಖದಲ್ಲಿವಿಷಾದದ ಗೆರೆ ಇಣುಕುತ್ತದೆ. ಏನನ್ನೋ ಕಳೆದುಕೊಂಡ ಅನುಭವ. ನಮ್ಮದೆನ್ನುವ ಅನರ್ಘ್ಯವೊಂದು ನಮ್ಮಿಂದ ದೂರಾದ ಭಾವದಲ್ಲಿ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ಅಯ್ಯೋ...ಅಂಥ ಕಾಲ ಮತ್ತೆ ಬರುವುದೇ ಇಲ್ಲವೇನೋ...? ಅನುಮಾನದ ಹಿಂದೆಯೂ ಖಚಿತತೆ ಮನೆ ಮಾಡಿದೆ. ಅಂದರೆ ಹಲಸೂರು ಕೆರೆ ಮತ್ತೆ ಹಿಂದಿನಂತಾಗುವುದು ಸಾಧ್ಯವೇ ಇಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಹೋಗಿದೆ.

ಅದೃಷ್ಟಕ್ಕೆ ಹಲಸೂರು ಕೆರೆ ಇಂದಿಗೂ ಹಲಸೂರು ಕೆರೆಯಾಗಿ ಉಳಿದುಕೊಂಡಿದೆ. ಆ ಕೆರೆಯನ್ನು ಇವತ್ತಿಗೂ ಸುತ್ತಿದರೆ ಅದೇ ಗಾಳಿ ತೆರೆಗಳ ಮೇಲಿಂದ ತೇಲಿ ಬರುತ್ತದೆ. ಆದರೆ ಆ ಗಾಳಿಯಗುಂಟ ಕೆಟ್ಟದ್ದೊಂದು ಗಮಲು ಮುಖಕ್ಕೆ ರಾಚುತ್ತದೆ. ಅಲ್ಲಿ ಹಿಂದಿನಂತೆಯೇ ನೀರೂ ಇದ್ದಿರಬಹುದು. ಆದರೆ ಅದನ್ನು ನಗರ ಜೀವನದ ಎಲ್ಲ ಅಪಸವ್ಯಗಳಿಂದ ನಿರ್ಮಾಣಗೊಂಡ ಪೊರೆಯೊಂದು ಆವರಿಸಿಕೊಂಡಿದೆ. ಅಲ್ಲೊಂದಿಷ್ಟು ಮೀನೂ ಸೇರಿದಂತೆ ಹಲವು ವೈವಿಧ್ಯದ ಜಲಚರಗಳು ಆಟ ಆಡಿಕೊಂಡಿದ್ದವು. ಇಂದಿಗೂ ಇವೆ, ಆದರೆ ಬದುಕುಳಿದರೆ ನಾಳೆಯ ಬೆಳಗನ್ನು ಕಂಡೇವು ಎಂಬಂತೆ ಭಯದಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿವೆ. ಸುತ್ತಲೊಂದಿಷ್ಟು ಮರ-ಗಿಡಗಳು, ಪೊದೆ ಗಂಟಿಗಳಿದ್ದವು. ಅವುಗಳ ಹಚ್ಚ ಹಸಿರು ತಿಳಿ ನೀಲ ನೀರಿನಲ್ಲಿ ಪ್ರತಿಫಲಿಸುತ್ತಿತ್ತು. ಇಂದು ಅದೆಲ್ಲಿಗೆ ಹೋದವೆಂಬುದು ಯಾರಿಗೂ ತಿಳಿದಿಲ್ಲ. ಅಂಥ ಮರಗಿಡಗಳಲ್ಲಿ ಕಲರವ ಹೊಮ್ಮಿಸುತ್ತಿದ್ದ ಗಿಳಿವಿಂಡು, ಹಕ್ಕಿ-ಗುಬ್ಬಚ್ಚಿಗಳ ಗುಂಪು ಮಟಾಮಾಯ.


ಏಕೆ ಹೀಗೆ ? ನಮಗೆ ಬೇಕಾದಂತೆ ನಾವಿರುವ ಎಲ್ಲ ಹಕ್ಕೂ ನಮಗಿದೆ. ಅದಕ್ಕಾಗಿ ಅವೆಲ್ಲವನ್ನೂ ಬದಲಿಸಿ ನಾವು ಬದುಕುತ್ತಿದ್ದೇವೆ. ಹಾಗೆಯೇ ನಿಸರ್ಗದ ಇತರ ಸಹ ನಿವಾಸಿಗಳಿಗೂ ನಾವು ಅಂಥ ಹಕ್ಕನ್ನು ಬಿಟ್ಟುಕೊಡಬೇಕೆಂದು ಯಾವತ್ತೂ ನಮಗೆ ಅನ್ನಿಸಿಯೇ ಇಲ್ಲವೇ ? ಇದು ಕೇವಲ ಬೆಂಗಳೂರಿನ ಹಲಸೂರು ಕೆರೆಯೊಂದರ ಕಥೆಯಲ್ಲ. ಅದು ಸ್ಯಾಂಕಿ ಕೆರೆಯಿರಬಹುದು, ಹೆಬ್ಬಾಳದ್ದಿರಬಹುದು, ಗುಲ್ಬರ್ಗದ ಕೆರೆಯಾಗಿರಬಹದು, ಅರಸೀಕೆರೆಯಾಗಿರಲೂಬಹುದು...ಹೀಗೆ ಎಲ್ಲ ಊರಿನ ಎಲ್ಲ ಕೆರೆಗಳ ಕಥೆಯೂ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇಲ್ಲ. ಕೆರೆಗಳು ಮಾಯವಾಗುತ್ತಿವೆ. ಅದರೊಂದಿಗೆ ಜೀವವೈವಿಧ್ಯವೂ ಇಲ್ಲದಾಗುತ್ತಿದೆ ಎಂಬ ಕಳವಳ ಇಂದು ನಿನ್ನೆಯದಲ್ಲ. ಕೆರೆಗಳನ್ನು ಉಳಿಸುವ ಸರಕಾರದ ಯೋಜನೆಗಳೂ ಅದರ ಸುತ್ತ ಬೇಲಿ, ವಾಯುವಿಹಾರ ಮಾರ್ಗ ರಚಿಸುವಷ್ಟಕ್ಕೆ ಸೀಮಿತ. ಹಾಗಾದರೆ ನಮ್ಮ ಕೆರೆಗಳನ್ನು ಉಳಿಸಲು ಮಾದರಿ ಯಾವುದು ?
ಹಾಗೆ ಯೋಚಿಸುತ್ತ ಅಂತರ್ಜಾಲ ತಾಣವೊಂದರಲ್ಲಿ ಜಾಲಾಡುತ್ತಿದ್ದಾಗ ಕಣ್ಣೆದುರು ಅವತರಿಸಿದ್ದು ‘ಲಂಡನ್ ವೆಟ್ಲ್ಯಾಂಡ್ ಸೆಂಟರ್’ ಬಗೆಗಿನ ಅಕ್ಷರ ಸರಣಿ. ವೆಟ್ಲ್ಯಾಂಡ್, ಇದು ಜನನಿಬಿಡ ನಗರವಾದ ಲಂಡನ್ನ ಹೀತ್ರೊ ವಿಮಾನ ನಿಲ್ದಾಣಕ್ಕೆ ಅತಿ ಸಮೀಪದಲ್ಲೇ ಇದೆ. ಒಂದು ಕಾಲದಲ್ಲಿ ಪಾಳುಬಿದ್ದು, ಒತ್ತುವರಿಗೆ ತುತ್ತಾಗಿದ್ದ ನೆಲ ಇಂದು ನಂದನವನ. ಈ ೧೫೦ ಎಕರೆ ಪ್ರದೇಶ ಈಗ ಕೆರೆಗಳು, ಪುಟ್ಟ ಕೊಳಗಳು, ಸಾವಿರಾರು ಮರಗಿಡಗಳು, ಪಕ್ಷಿ ಪ್ರಾಣಿಗಳ ಸುವ್ಯವಸ್ಥಿತ ಜಾಲ. ೧೮೦ಕ್ಕೂ ಹೆಚ್ಚು ಜಾತಿಯ ಹಕ್ಕಿಗಳ ತಾಣ. ಬೇರ್ಯಾವ ಮೆಟ್ರೊ ನಗರದಲ್ಲೂ ಕಾಣಸಿಗದ ಅಪರೂಪದ ಪಕ್ಷಿ ಸಂಕುಲ ಇಲ್ಲಿದೆ. ಚಿಟ್ಟೆಗಳು, ಕಪ್ಪೆಗಳಂಥ ಉಭಯವಾಸಿಗಳು, ಕೀಟಗಳು, ಮೀನುಗಳು, ಸರೀಸೃಪಗಳು, ಬಾವಲಿಗಳು ಮತ್ತಿತರ ಅಗಾಧ ಜೀವವೈವಿಧ್ಯಕ್ಕೆ ಆಗರ. ಹಲವಾರು ಪರಿಸರ ಪ್ರಶಸ್ತಿಗಳಿಗೆ ಪಾತ್ರ. ಜೀವವಿಜ್ಞಾನಿಗಳ ಸಂಶೋಧನೆ ಹಾಗೂ ಅಧ್ಯಯನಗಳಿಗೆ ನೆಲೆಮನೆ.


ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದೇ ಕುತೂಹಲಕರ. ಮೊದಲು ಎಲ್ಲ ಕೆರೆಗಳ ಹೂಳೆತ್ತಲಾಯಿತು. ಎತ್ತಿದ ಮಣ್ಣನ್ನೇ ಸುತ್ತ ಹರಡಿ ಪರಿಸರಕ್ಕೆ ಹೊಂದುವ ವೈವಿಧ್ಯಮಯ ಹೂವಿನ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಒತ್ತುವರಿದಾರರನ್ನು ಕಟ್ಟುನಿಟ್ಟಾಗಿ ಹೊರಗಟ್ಟಲಾಯಿತು. ಹೂವು ಹೆಚ್ಚಿದಂತೆ ಚಿಟ್ಟೆಗಳು ವಲಸೆ ಬಂದವು. ಹಣ್ಣಿನ ಗಿಡಗಳು ಫಲ ಬಿಡಲಾರಂಭಿಸಿದಂತೆ ಹಕ್ಕಿಗಳು ಹೆಚ್ಚಿದವು. ನಿಧಾನವಾಗಿ ಸಣ್ಣಪುಟ್ಟ ಉಭಯವಾಸಿಗಳು, ಸರೀಸೃಪಗಳು, ಕೀಟಗಳು, ಬಾವಲಿಗಳು ಪ್ರವೇಶಿಸಿದವು. ಆಹಾರ ಸರಪಣಿಯ ನಿಯಮವನ್ನೇ ಪಾಲಿಸಿ, ಇವುಗಳ ಮೇಲೆ ಜೀವಿಸುವ ಪ್ರಾಣಿ ಪಕ್ಷಿ ಕೀಟಗಳೂ ಹಿಂಬಾಲಿಸಿದವು.


ಇಷ್ಟರ ನಡುವೆ ಎಲ್ಲೂ ಮಾನವನ ಮಧ್ಯಪ್ರವೇಶಕ್ಕೆ ಅವಕಾಶವನ್ನೇ ನೀಡಲಿಲ್ಲ. ಉದ್ಯಾನ ಒಂದು ಹಂತಕ್ಕೆ ಬರುವವರೆಗೂ ಇಲ್ಲಿನ ಕೆಲ ಪ್ರದೇಶಗಳಿಗೆ ವೀಕ್ಷಕರಿಗೆ ಹೋಗಬಿಡುತ್ತಿರಲಿಲ್ಲ. ಈಗಲೂ, ಪಕ್ಷಿಗಳು ಮೊಟ್ಟೆಯಿಡುವ, ಪ್ರಾಣಿಗಳು ಮರಿಹಾಕುವ ಜಾಗಗಳಿಗೆ ಯಾರಿಗೂ ಕಾಲಿಡಲು ಅವಕಾಶವಿಲ್ಲ. ವೀಕ್ಷಕರ ಭೇಟಿ ಇಲ್ಲಿನ ಜೀವಸಂಕುಲಕ್ಕೆ ಯಾವುದೇ ತೊಂದರೆ ನೀಡದಂತೆ ನಡೆದಾರಿಗಳು, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ಅಪರೂಪದ ಪ್ರಾಣಿ ಪಕ್ಷಿಗಳ ಚಟುವಟಿಕೆಯನ್ನು ಗುಪ್ತ ಕ್ಯಾಮೆರಾದಿಂದ ಶೂಟ್ ಮಾಡಿ ವೀಕ್ಷಕರಿಗೆ ತೋರಿಸುವ ವ್ಯವಸ್ಥೆಯಿದೆ.


ಇಷ್ಟೆಲ್ಲವನ್ನೂ ಓದಿ ಮುಗಿಸುವ ಹೊತ್ತಿಗೆ, ಮತ್ತದೇ ಪ್ರಶ್ನೆ ಎದುರಾದದ್ದು, ಲಂಡನ್ನ ಈ ಉದ್ಯಾನವನ ನಮಗೂ ಮಾದರಿಯಾಗಬಾರದೇಕೆ ?


ಅಸಲಿಗೆ ಭಾರತದ ಬದುಕು ಬರಡಾಗತೊಡಗಿದ್ದೇ ಅಲ್ಲಿ. ನಮ್ಮ ಜನಜೀವನವನ್ನು ತಮ್ಮ ಮಡಿಲಲ್ಲಿ ಇಟ್ಟು ಮಗುವಿನಂತೆ ಪೊರೆಯುತ್ತಿದ್ದ ಕೆರೆಗಳನ್ನು ಕಡೆಗಣ್ಣಿನಲ್ಲೂ ನೋಡುವ ಸೌಜನ್ಯವನ್ನು ನಾವು ತೋರಲಿಲ್ಲ. ಕೊನೇ ಪಕ್ಷ, ಹೊಸ ಕೆರೆಗಳ ನಿರ್ಮಾಣ ಹಾಗಿರಲಿ, ಅಥವಾ ಇರುವ ಕೆರೆಗಳ ಅಭಿವೃದ್ಧಿಯ ಬಗೆಗೆ ಯೋಚಿಸುವುದೂ ಬೇಡ. ಕೊನೇ ಪಕ್ಷ ಇದ್ದ ಕೆರೆಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬೇಕೆಂದೂ ಅನ್ನಿಸದಿರುವುದು ದುರಂತ. ಕೆರೆಗಳು ಅಳಿದವು ಎಂಬುದಕ್ಕೆ ಅತ್ಯಂತ ಪ್ರಮುಖ ಕಾರಣ ಅವುಗಳ ಮೂಲಾಧಾರವಾಗಿದ್ದ ಜಲಾನಯನ ಪ್ರದೇಶವನ್ನು ನಾವು ಅತಿಕ್ರಮಿಸಿಕೊಂಡದ್ದು. ಜಲನಕ್ಷೆಯನ್ನೇ ಮರೆತು ಕಂಡಕಂಡಲ್ಲಿ ಮನೆಗಳು ತಲೆ ಎತ್ತಿದವು. ಖಾಲಿ ಜಾಗ ಕಂಡದ್ದೆಲ್ಲ ನಮ್ಮದೆಂಬ ಹಪಾಹಪಿತನ ಒಂದೆಡೆಯಾದರೆ ಕೆರೆಯ ಸುತ್ತಲ ಜಾಗ ವ್ಯರ್ಥ ಎಂಬ ಮನೋಭಾವ ಇನ್ನೊಂದೆಡೆ ಕೆರೆಗಳಿಗೆ ಮುಳುವಾಯಿತು.


ನೀವು ಒಮ್ಮೆ ಕೆರೆಯ ಸುತ್ತ ಓಡಾಡಿ ನೋಡಿ. ಒಂದು ಅವಲೋಕನಕ್ಕೆ ಸಿಗದ ಎಷ್ಟೋ ಅಂಶಗಳು, ಎರಡು, ಮೂರನೇ ಬಾರಿ ಹೋದಾಗ ಗಮನಕ್ಕೆ ಬರಬಹುದು. ಒಟ್ಟಾರೆ ಆ ಪರಿಸರದ ತೀರಾ ಎತ್ತರದ ಪ್ರದೇಶ ಯಾವುದು, ಇಳಿಜಾರು ಎಲ್ಲಿದೆ, ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ನೀರು ಎಲ್ಲಿ ದಿಕ್ಕು ಬದಲಿಸುತ್ತದೆ. ಹಾಗೆ ಹಾದಿ ತಪ್ಪುವ ಅದು ಮುಂದೆ ಎಲ್ಲಿಗೆ ಹೋಗಿ ಸೇರುತ್ತದೆ. ಮನೆಯ ಅಥವಾ ಜಮೀನಿನ ಅತ್ಯಂತ ಸಮೀಪದ ಕೆರೆ, ಕುಂಟೆಗಳಂಥ ಜಲಾಶ್ರಯ ತಾಣ ಯಾವುದು, ಅದಕ್ಕೆ ಮೂಲ ಸೆಲೆ ಎಲ್ಲಿಯದು, ಜಲಕಿಂಡಿಯ ಮುಖ ಎತ್ತ ಕಡೆಗಿದೆ ಎಂಬಿತ್ಯಾದಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಂದು ಅಲ್ಲೆಲ್ಲ ಜನ ವಸತಿ ತುಂಬಿ ತುಳುಕುತ್ತಿದೆ. ಅಂದ ಮೇಲೆ ಕೆರೆಗಳು ನಳನಳಿಸುತ್ತಲೇ ಇರುವುದೆಂತು ?


ಪ್ರತಿ ಕೆರೆಗೂ ಅದರ ಜಲಾನಯನವನ್ನಾಧರಿಸಿ ಪ್ರತ್ಯೇಕ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದುದರಿಂದ ನೀರಿನ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದಕ್ಕೆ ಕಾರಣವೇನು ? ಎಲ್ಲಿ ಲೋಪವಾಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ಇಂದು ಮೂಲಭೂತವಾಗಿ ಜಲನಕ್ಷೆ ಎಂಬುದೇ ಇಲ್ಲ. ಅಂಥ ಯಾವುದೇ ಪ್ರಯತ್ನ ಈಗ ನಡೆಯುತ್ತಿಲ್ಲವಾದ್ದರಿಂದ ನೀರಿನ ಬಳಕೆಯ ಲೆಕ್ಕಾಚಾರವೂ ತಲೆಕೆಳಗಾಗಿದೆ. ನೀರು ಸಹ ಹಾದಿ ತಪ್ಪಿ ಹರಿದು ಹೋಗುತ್ತಿದೆ.


ಕೆರೆಯೆಂದರೆ ಅದೊಂದು ಜೀವಂತ ತಾಣ. ಅಲ್ಲಿ ನೂರಕ್ಕೆ ನೂರು ಸಂಪೂರ್ಣ ಜೈವಿಕ ಪ್ರಕ್ರಿಯೆ ಸಾಗುತ್ತಿರುತ್ತದೆ. ಭೌತಿಕ ನಿರ್ಮಾಣ ಎಷ್ಟು ಮುಖ್ಯವೋ, ಜೈವಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವುದೂ ನೀರಿನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಷ್ಟೇ ಪ್ರಮುಖ ವಿಚಾರವೆನಿಸಿಕೊಳ್ಳುತ್ತದೆ. ನೈಸರ್ಗಿಕವಾಗಿ ಅತ್ಯಂತ ಸೂಕ್ಷ್ಮ ಸಂಗತಿಗಳನ್ನೂ ಗಮನಿಸಿದಲ್ಲಿ ಮಾತ್ರ ಕೆರೆಯೊಂದರ ಸಮರ್ಥ ಅಭಿವೃದ್ಧಿ ಸಾಧ್ಯ.


‘ಲಾಸ್ಟ್’ ಡ್ರಾಪ್: ನೀರೆಂದರೆ ಅದು ನಿರ್ಜೀವ ಅಲ್ಲವೇ ಅಲ್ಲ. ಭಾವನಾತ್ಮಕ ಒಡನಾಟ ಇಲ್ಲದ ವ್ಯಕ್ತಿಗಳ ನಡುವೆ ಅದು ಎಂದಿಗೂ ವಾಸ ಮಾಡಲೊಪ್ಪುವುದೇ ಇಲ್ಲ.

No comments: