ಭೂಮಿಗೂ ಬವಳಿ ಬಂದಿರಲಿಕ್ಕೆ ಸಾಕು. ಕಳೆದ ವರ್ಷ ಆ ಪಾಟಿ ಕೆಕ್ಕರಿಸಿಕೊಂಡು ನೋಡಿದ್ದ ಸೂರ್ಯ. ಎಲ್ಲೆಲ್ಲೂ ಕಾದು ಕರಕಲಾದ ಪ್ರಕೃತಿ. ಸಾಕಪ್ಪ ಈ ಧಗೆ... ಎನ್ನುತ್ತಿರುವಾಗಲೇ ಆಗಸದ ಮುಖ ಕಪ್ಪಿಡತೊಡಗಿತು. ಇಷ್ಟು ದಿನದ ಸೂರ್ಯನ ಕೋಪಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬರುತ್ತಿರುವಂತೆ ಸಾಲು ಕರಿಮೋಡಗಳು ದಮುಗುಡುತ್ತ ಮುನ್ನುಗ್ಗಿದವು. ಕೊನೆಗೊಂದಷ್ಟು ದಿನ ಅವುಗಳದೇ ಕಾರುಬಾರು. ಒಲಿದು ಸುರಿದರೆ ಸಮೃದ್ಧಿ, ಮುನಿಸು ತೋರಿದರೆ ಇಡೀ ಬದುಕೇ ಬೋರಲು ಬೀಳುತ್ತದೆ. ಇವೆರಡರ ನಡುವೆ ನಿಸರ್ಗದ ಲೆಕ್ಕಾಚಾರ ತಪ್ಪಿ ಮಳೆಯೇನಾದರೂ ಉಮ್ಮಳಿಸಿ ಕಾರಿಕೊಂಡಿತೆಂದರೆ ಎಲ್ಲೆಲ್ಲೂ ಜಲಪ್ರಳಯ. ಅದೇ ಆಯಿತು, ಕಳೆದ ಮಳೆಗಾಲವೆಂದರೆ. ಒಂದಷ್ಟು ದಿನ ಬರಗಾಲವಾದರೆ ಕೊನೆಗೊಂದಷ್ಟು ದಿನ ಪ್ರವಾಹದ ಆಟೋಪ. ಒಟ್ಟಾರೆ ಅತಿಯಾಗಿ ಸುರಿದರೂ ಸಂಕಷ್ಟ, ಸುರಿಯದೇ ಕಳೆದು ಹೋದರಂತೂ ಕಡುಕಷ್ಟ. ಮಳೆ ಇತಿಮಿತಿಯಲ್ಲಿದ್ದರೆ ಮಾತ್ರ ಬಲು ಇಷ್ಟ.
ಹೌದು, ಆದರೆ ಇಷ್ಟಕಷ್ಟಗಳನ್ನು ಕೇಳುತ್ತ ಕುಳಿತುಕೊಳ್ಳಲು ಮಳೆಯೇನು ಬೀಗರ ಕಡೆಯ ಬಂಧುವೇ ? ಅದರ ಪಾಡಿಗದು ಬರುತ್ತದೆ. ಬಂದದ್ದು ಒಂದಷ್ಟು ಸುರಿಯುತ್ತದೆ. ಸುರಿದದ್ದು ಈ ನೆಲದ ಗುಂಟ ಹರಿಯುತ್ತದೆ. ಹರಿದದ್ದು ಹಾಗೆ ನದಿ ನಾಲೆಗಳ ನೆಂಟಸ್ಥಿಕೆಯಲ್ಲಿ ಸಮುದ್ರ ಸೇರಿ ಬಿಡುತ್ತದೆ. ನಮಗೆ ಗೊತ್ತಿರುವುದು ಇಷ್ಟೆಯೇ. ಇದಕ್ಕೂ ಮಿಕ್ಕಿ ಸುರಿಯುವ ಮಳೆಗೊಂದಿಷ್ಟು ಮಹತ್ವವಿದೆ. ಅದನ್ನು ಅದರ ಪಾಡಿಗೆ ಓಡಿ ಹೋಗಲು ಬಿಡದೇ ಮಾನ ಮರ್ಯಾದೆ ತೋರಿ, ಆಧರಿಸಿ ಮನೆಯ ಮೂಲೆಯಲ್ಲೆಲ್ಲೂ ಮುಚ್ಚಿಟ್ಟುಕೊಂಡರೆ ಮುಂದೊಂದು ದಿನ ಖಂಡಿತಾ ನಮ್ಮ ಋಣವನ್ನು ಉಳಿಸಿಕೊಳ್ಳಲಿಕ್ಕಿಲ್ಲ ಎಂಬ ಸಂಗತಿ ಇನ್ನೂ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದು ಗೊತ್ತಾಗಲೇ ಬೇಕೆಂದಿದ್ದರೆ ಥಾಯ್ಲೆಂಡ್ ಅನ್ನೋ, ಚೀನಾವನ್ನೋ, ಅಷ್ಟೆಲ್ಲ ಬೇಡ ನಮ್ಮ ಗುಜರಾತ್, ರಾಜಸ್ಥಾನದ ಮಂದಿಯನ್ನೋ ಒಮ್ಮೆ ಮಾತನಾಡಿಸಿ ಬರಬೇಕು. ಮಳೆ ನೀರಿಗೆ ಮರ್ಯಾದೆ ತೋರುವ ಬಹಳಷ್ಟು ಮಂದಿ ಅಲ್ಲಿ ಸಿಗುತ್ತಾರೆ.
ಇದೇನೋ ಕಥೆ ಎಂದು ಕೊಳ್ಳಬೇಡಿ. ನೂರಕ್ಕೆ ನೂರು ಸತ್ಯ ಸಂಗತಿಯೆಂದರೆ ಜಗತ್ತಿನ ಇಷ್ಟೂ ರಾಷ್ಟ್ರಗಳಲ್ಲಿ ಯಾವುದಾದರೊಂದು ರಾಷ್ಟ್ರದ ಬಹುತೇಕ ಮಂದಿ ಅತಿಶುದ್ಧ ನೀರು ಕುಡಿಯುತ್ತಿದ್ದರೆ ಅದು ಥಾಯ್ಲೆಂಡಿನವರು. ಸ್ವಚ್ಛ ಮತ್ತು ಸುರಕ್ಷಿತ ನೀರನ್ನು ಕುಡಿದು ‘ಅಭಿವೃದ್ಧಿ ರಾಷ್ಟ್ರ’ವಾಗಿ ತಮ್ಮ ನೆಲದ ಹೆಸರನ್ನು ಬರೆಸಿಕೊಂಡ ಥಾಯ್ಲೆಂಡಿಗರದ್ದು ಜಲಚರಿತೆಯ ಯಶೋಪುಟಗಳು.
ಅದು ಹೋಗಲಿ, ನಮ್ಮ ನೆತ್ತಿಯ ಮೇಲೆ ಕುಳಿತಿರುವ ಚೀನೀಯರೇನು ಕಡಿಮೆಯವರಲ್ಲ. ಕೇವಲ ಎರಡು ವರ್ಷಗಳಲ್ಲಿ ಏನಿಲ್ಲವೆಂದರೂ ೨.೬ ಲಕ್ಷ ಕುಟುಂಬಕ್ಕೆ ಸಾಕೆನಿಸುವಷ್ಟು ನೀರು ಕುಡಿಸಿದ ಹೆಗ್ಗಳಿಕೆ ಚೀನಾದ್ದು. ಅಂಥ ಕ್ರಾಂತಿ ಯಾವುದೋ ಕೋಟ್ಯಂತರ ರೂ.ಗಳನ್ನು ಸುರಿದು ರೂಪಿಸಿದ ನೀರಾವರಿ ಯೋಜನೆಯಿಂದ ಆದದ್ದಲ್ಲ. ಹೊಸತೊಂದು ನದಿ ಹುಟ್ಟಿ ಹರಿದಿದ್ದರಿಂದಾದದ್ದೂ ಅಲ್ಲ. ದೇಶದ ನದಿಗಳನ್ನು ಬೆಸೆದು ಪೂರೈಸಿದ್ದೂ ಅಲ್ಲ. ಕೇವಲ ವರ್ಷದಲ್ಲೊಂದಿಷ್ಟು ದಿನ ಸುರಿದ ಮಳೆಯನ್ನು ಬೊಗಸೆಯೊಡ್ಡಿ ಹಿಡಿದು ಬಾಯಾರಿದ ಬಾಯಿಗೆ ತಂದು ಹನಿಸಿದ ಪರಿಣಾಮದಿಂದಾದದ್ದು. ಇಂದು ಚೀನಾದ ನಾನ್ಸು ಪ್ರಾಂತ್ಯದ ದಾಹ ತೀರಿದ್ದರೆ ಅದು ಅಲ್ಲಿನ ರಸ್ತೆ ರಸ್ತೆಗಳಲ್ಲೂ ಮಾಡಿದ ಮಳೆ ನೀರ ಕೊಯ್ಲಿನ ಫಲ.
ಇದು ಯಾರಿಗೂ ಹೇಳಬೇಡಿ ಎಂಬ ಗುಟ್ಟಿನ ಮಾತಂತೂ ಅಲ್ಲ. ಎಲ್ಲರಿಗೂ ಸಾರಿ ಹೇಳಲೇ ಬೇಕಾದ್ದೆಂದರೆ ಗಾನ್ಸು ಪ್ರಾಂತ್ಯದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ನಮ್ಮ ಬೆಂಗಳೂರಿನಲ್ಲಿ ಸುರಿಯುವ ಪ್ರಮಾಣದ ಅರ್ಧದಷ್ಟೂ ಇಲ್ಲ. ಸಾಲದ್ದಕ್ಕೆ ಅಲ್ಲಿ ಕಳೆದ ನಲವತ್ತು ವರ್ಷಗಳನ್ನು ವರ್ಣಿಸುತ್ತ ಹೋದರೆ ಬರೋಬ್ಬರಿ ೩೬ ವರ್ಷ ಇಷ್ಟೂ ಮಳೆ ಸುರಿಯದೇ ಬರ ಅಟಕಾಯಿಸಿಕೊಂಡಿತ್ತು. ಅಂದರೆ ಅವರು ಕಂಡದ್ದು ಶೇ. ೯೦ರಷ್ಟು ಬರವನ್ನೇ. ಹೀಗಾದರೆ ಅಲ್ಲಿನ ಮೂಲ ಕಸುಬಾದ ಕೃಷಿಯಾದರೂ ಹೇಗೆ ತಾನೇ ಕೈ ಹಿಡಿದೀತು ? ಜನಸಂಖ್ಯೆಯಲ್ಲಿ ನಮ್ಮ ಮೇಲೆ ಪೈಪೋಟಿಗೆ ಬಿದ್ದವರಂತೆ ಸಾಗುತ್ತಿರುವ, ಸರಾಸರಿ ಐದು ಜನರ ಕುಟುಂಬದ ವಾರ್ಷಿಕ ವರಮಾನ ೧೧ ಸಾವಿರ ರೂ. ಮುಟ್ಟಿದ್ದೇ ಆಶ್ಚರ್ಯ. ಕೊನೆಗೂ ಅಲ್ಲಿನ ಜನರ ಸಮಸ್ಯೆಗೊಂದು ಉತ್ತರ ಸಿಕ್ಕಿತೆಂದರೆ ಅದು ಮಳೆನೀರಿನ ಕೊಯ್ಲಿನಿಂದ.
ಕೇವಲ ೪೨೦ ಮಿ.ಮೀ ಮಳೆಯ ಸರಾಸರಿ ಹೊಂದಿರುವ ಗಾನ್ಸುವಿನ ಜನರಿಗೆ ಅಂಥ ಸಾಧನೆ ಸಾಧ್ಯವಾಗುವುದಾದರೆ ವರ್ಷಕ್ಕೆ ೯೦೦ ಮಿ.ಮೀ. ಮಳೆ ಸುರಿಯುವ ಬೆಂಗಳೂರಿನ ಜನರಿಗೇನು ಕೇಡು ಬಡಿದಿದೆ ? ೬೦೦ ರಿಂದ ೮೦೦ ಮಿ.ಮೀ ಮಳೆ ಬರುವ ದಕ್ಷಿಣ ಕರ್ನಾಟಕದಲ್ಲಿ, ಇದರ ದುಪ್ಪಟ್ಟು ದಕ್ಕುವ ಮಲೆನಾಡಿನ ಮನೆಗಳಲ್ಲಿ ಇನ್ನೆಷ್ಟರ ಮಟ್ಟಿಗಿನ ನೀರನ್ನು ಕೂಡಿಡಬಹುದೆಂಬುದನ್ನು ಲೆಕ್ಕಹಾಕಿ !
ಬೇಡಬೇಡವೆಂದರೂ ನಮ್ಮ ರಾಜ್ಯದ ದಕ್ಷಿಣಕ್ಕೆ ಮುಖಮಾಡಿ ನಿಂತು ಮಳೆ ಹಿಡಿದಿಟ್ಟುಕೊಂಡರೆ ಎರಡು ತಿಂಗಳಲ್ಲಿ ಒಂದೇ ಒಂದು ಚದರ ಅಡಿಯಷ್ಟು ಅಗಲದ ಚಾವಣಿಯಲ್ಲಿ ೮೦೦ ಲೀಟರ್ ನೀರು ತುಂಬಿಕೊಂಡೀತು. ಅದನ್ನು ಬಿಡಿ, ಒಂದು ಅಂದಾಜಿಗೆ ಕುಳಿತರೆ ನಮ್ಮ ರಾಜ್ಯದಲ್ಲಿ ನೂರು ಮಿ.ಮೀ. ಮಳೆ ಸುರಿದರೆ ಅದರಲ್ಲಿ ನೆಲದೊಳಗೆ ಇಂಗುವುದು ೮ ರಿಂದ ೧೦ ಮಿ.ಮೀ ನಷ್ಟು ಮಾತ್ರ. ಉಳಿದದ್ದೆಲ್ಲ ಸಮುದ್ರಪಾಲು.
ಈವರೆಗೆ ಹೀಗೆ ಸೋರಿಹೋದ ನೀರಿನ ಬಗೆಗೆ ಏನೂ ಅನ್ನಿಸಿಯೇ ಇಲ್ಲ. ತೀರಾ ಮಳೆ ಅಂಗಳಕ್ಕೆ ನಿಂತರೆ ಗುದ್ದಿಲಿ, ಹಾರೆ, ಪಿಕಾಸು ಹಿಡಿದು ಮಣ್ಣು ಬಿಡಿಸಿಕೊಟ್ಟು ಅದಕ್ಕೆ ದಾರಿ ತೋರಿದ್ದೇವೆ. ಚರಂಡಿ ತುಂಬ ಕೆಂಪು ನೀರು ಹರಿಯುತ್ತಿದ್ದರೆ ಕಾಗದದ ದೋಣಿ ಮಾಡಿ ಬಿಟ್ಟು, ಅದರ ಜತೆಗೇ ಓಡಿಹೋಗಿ ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ತುಂಬಿದ್ದರೆ ಅದರ ಕೋಡಿ ಒಡೆದು, ಕಾಲುವೆಯತ್ತ ತಿರುಗಿಸಿ ‘ಅಬ್ಬಾ, ಅಪಾಯ ತಪ್ಪಿತು’ ಎಂದುಕೊಂಡು ನೆಮ್ಮದಿಯ ನಿದ್ದೆಗೆ ಜಾರಿದ್ದೇವೆ. ಹನಿ ಕಡಿಯದೇ ಸುರಿವ ಮಳೆ ನೋಡುತ್ತ, ಹುರಿಬೀಜ ಮೆಲ್ಲುತ್ತ ಬೆಚ್ಚಗೆ ಕನಸು ಕಂಡಿದ್ದೇವೆಯೇ ಹೊರತು ಒಂದು ಹನಿಯನ್ನೂ ಇಂಗಿಸುವ ಗೋಜಿಗೆ ಹೋಗಿಲ್ಲ, ಅದನ್ನು ನಾಳೆಗಾಗಿ ಹಿಡಿದಿಟ್ಟುಕೊಂಡಿಲ್ಲ.
ಅದೇನೋ ಮಳೆನೀರಿನ ಬಗ್ಗೆ ಮೊದಲಿನಿಂದಲೂ ಕಾಳಜಿ ಎಂಬುದೇ ಇಲ್ಲ. ಅದು ಸುರಿದು, ಹರಿದು ವ್ಯರ್ಥವಾಗುತ್ತಿದ್ದರೂ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದು ಬಿಡುತ್ತೇವೆ. ಬಾವಿಯಲ್ಲಿ ನೀರಿದೆ ಅಥವಾ ನಲ್ಲಿಯಲ್ಲಿ ತಪ್ಪದೇ ನೀರು ಬರುತ್ತಿದೆ ಎಂದಾದರೆ ಮುಗಿಯಿತು. ನೀರನ್ನು ಉಳಿಸುವುದು, ಅದನ್ನು ಸಂಗ್ರಹಿಸುವುದು, ಇಲ್ಲವೇ ಇಂಗಿಸುವುದು ಇತ್ಯಾದಿ " ರಗಳೆ’ ಗಳೆಲ್ಲ ನಮಗೆಕೆ? ಅದನ್ನೇನು ನಮಗೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದಾರೆಯೇ? ಊರಿಗೆಲ್ಲ ಉಪಯೋಗಕ್ಕೆ ನಾವೊಬ್ಬರೇ ಏಕೆ ನೀರಿಂಗಿಸಬೇಕು? ಇತ್ಯಾದಿ ಪ್ರಶ್ನೆ ಕೇಳಿಕೊಂಡು ನಮ್ಮ ಪಾಡಿಗೆ ನಾವಿದ್ದು ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾವಾದ ದಟ್ಟ ಮಲೆನಾಡಿನಲ್ಲೂ ನೀರಿಗೂ ತತ್ವಾರ ಆರಂಭವಾಯಿತೋ ಆಗ ಎಚ್ಚೆತ್ತುಕೊಳ್ಳಲಾರಂಭಿಸಿದೆವು. ಬೇಕಿದ್ದರೆ ನೀವೊಮ್ಮೆ ಗಮನಿಸಿ ನೋಡಿ, ನಮಗೆ ಅಂಗಳದಲ್ಲಿ ಒಂದು ಹನಿ ನೀರು ನಿಂತರೂ ಕಿರಿಕಿರಿಯಾಗಲಾರಂಭಿಸುತ್ತದೆ. ಇನ್ನು ನಗರ ಪ್ರದೇಶದಲ್ಲಂತೂ ಒಂದಿಮಚೂ ಬಿಡದೆ ೩೦/೪೦ ಸೈಟಿನ ತುಂಬ ಸಿಮೆಂಟ್ ಮೆತ್ತಿಟ್ಟು " ಓಹ್, ಎಷ್ಟೊಂದು ನಿಟಾಗಿ ಮನೆ ಕಟ್ಟಿಕೊಂಡಿದ್ದೇವೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ನೀರಿನ ವಿಚಾರದಲ್ಲಿ ಪ್ರಪ್ರಥಮ ವೈರಿಯೇ ನಮ್ಮ ಮನೊಭಾವ.
ಯಾವಾಗ ಬೇಸಿಗೆಯಲ್ಲಿ ನೀರಿನ ಬವಣೆ ಬಂದು ಕಪಾಳಕ್ಕೆ ಬಾರಿಸಿತೋ ಆಗ ನಮಗೆ ಎಚ್ಚರವಾಗಿದೆ. ತಡವಾಗಿಯಾದರೂ ತಪ್ಪಿನ ಅರಿವಾದದ್ದು ಪುಣ್ಯ. ಈಗೀಗ ಮಳೆನೀರು ಕೊಯ್ಲಿನ ಮಾತನಾಡತೊಡಗಿದ್ದೇವೆ. ನೀರಿಂಗಿಸುವ, ಅಂತರ್ಜಲ ಕಾಪಾಡುವ ದಾರಿಗಳನ್ನು ಹುಡುಕಲಾರಂಭಿಸಿದ್ದೇವೆ. ಕುಕ್ಕರಬಸವಿಯಾಗಿ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ಮುಚ್ಚಲು ಹೊರಡುವುದಾದರೆ ಮೊದಲೊಂದಿಷ್ಟು ಚಾನೀಸಂ, ಮನೀಸಂ, ಬನಿಜಾದಂಥ ಮಾಯಾಮಂತ್ರಗಳನ್ನು ಉಪದೇಶಿಸಬಹುದು. ಈ ಮಂತ್ರಗಳ ಪುನಶ್ಚರಣೆ ಆರಂಭಿಸಿ ಮಳೆಗಾಲದ ಸತತ ನಾಲ್ಕು ತಿಂಗಳು "ಚಾತುರ್ಮಾಸ ವ್ರತ’ ಕೈಗೊಂಡರೆ ಕೊನೆಯಲ್ಲಿ ಮಂತ್ರಸಿದ್ಧಿ ಖಂಡಿತಾ ಸಾಧ್ಯ.
ಎಲ್ಲಕ್ಕಿಂತ ಮೊದಲು ‘ಅಯ್ಯೋ ಮಳೆ ನೀರಿಂದ, ಮಾಡಿನ ಮೇಲೆ ಸುರಿಯುವ ಹನಿಗಳನ್ನು ಸಂಗ್ರಹಿಸಿದರೆ ಎಷ್ಟು ಮಹಾ ನೀರು ಸಿಕ್ಕೀತು ? ಥೂ, ಅ ನೀರನ್ನೆಲ್ಲ ಕುಡಿಯೋ ಅಂಥದ್ದು ನಮಗೇನು ಬಂದಿದೆ? ನಾವ್ಯಾಕೆ, ಅದನ್ನೆಲ್ಲ ಮಾಡಬೇಕು? ಬೋರ್‌ವೆಲ್ ಇದೆ ಬಿಡು, ಅಯ್ಯೋ ನಾವು ಮಲೆನಾಡಿನವರು, ಮುಳುಗಿ ಹೋಗುವಷ್ಟು ನೀರು ನಮ್ಮಲ್ಲೇ ಇದೆ. ಇನ್ನು ಮಳೆ ನೀರನ್ನು ಹಿಡೀತಾ ಕೂತ್ಕೊಳ್ಳೋಖೆ ಬೇರೆ ಕೆಲ್ಸಾ ಇಲ್ವಾ?’ ಇಂಥ ಮನೋಭಾವವನ್ನು ಬದಲಿಸಿಕೊಂಡರೆ ಸಾಕು, ನಮ್ಮನ್ನೀಗ ಕಾಡುತ್ತಿರುವ ನೀರಿನ ಸಮಸ್ಯೆಯ ಮುಕ್ಕಾಲುಪಾಲು ಕರಗಿರುತ್ತದೆ.
‘ಲಾಸ್ಟ್’ಡ್ರಾಪ್: ದೇವರಾಣೆ ಸತ್ಯ, ನೀರಿನ ಬಗ್ಗೆ ಸಕಾರಾತ್ಮಕ ಧೋರಣೆಯೊಂದೇ ಅದರ ಸಮಸ್ಯೆಗಿರುವ ಏಕೈಕ ಪರಿಹಾರ.
ಸಮ್ಮನಸ್ಸಿಗೆ ಶರಣು
4 months ago
No comments:
Post a Comment