Monday, February 22, 2010

ಲಾಪೋಡಿಯಾದ ಲಫಡಾಗೆ ಈತ ‘ಲಕ್ಷ್ಮಣ’ ರೇಖೆ

ಹೇಳಿ, ಕೇಳಿ ಅದು ಹುಚ್ಚರ ಹಳ್ಳಿ. ನಂಬಬೇಕು ಆ ಊರಿನ ಹೆಸರೇ ಹಾಗೆ. ಅದಕ್ಕೂ ಕಾರಣವಿದೆ. ಅದನ್ನು ತಿಳಿಯುವ ಮುನ್ನ ಒಂದು ಕಥೆ ಕೇಳಿ.

ಅದು ೧೯೭೩ರ ಸುಮಾರು, ಇನ್ನೇನು ಚಳಿ ಮುಕ್ಕರಿಸಿಕೊಂಡು ಮುಗಿಬೀಳುವ ಹುನ್ನಾರದಲ್ಲಿತ್ತು. ಹತ್ತು ಹದಿನೈದು ದಿನಗಳು ದಾಟಿಬಿಟ್ಟರೆ ಮೈ ಕೈ ಮರಗಟ್ಟಿಹೋಗುವುದರಲ್ಲಿ ಅನುಮಾನವಿಲ್ಲ. ಅಂಥಾ ಊರಿಗೊಬ್ಬ ಕಂಬಳಿ ಮಾರುವವ ಬಂದ. ಮುಖವನ್ನೂ ಮೀರಿ ನಿಂತ ಪೊಗದಸ್ತಾದ ಮೀಸೆ. ಅಷ್ಟೇ ಮಸ್ತಾದ ದೇಹ. ಕಟ್ಟಾಳು. ತಲೆಯ ಮೇಲೊಂದು ಬಿಗಿಯಾದ ಹೊರೆ ಹೊತ್ತು ಆ ಊರಿಗೆ ಕಾಲಿಟ್ಟದ್ದೇ ತಡ ಊರಿನ ಜಹಗೀರದಾರ್ ಎದುರಾದ. ಊರೆಲ್ಲ ಸುತ್ತಾಡಿ ಸುಮ್ಮನೇ ಏಕೆ ಕಷ್ಟಪಡುವೆ ? ಒಂದು ತಿಂಗಳ ಮಾತಿಗೆ ಕಂಬಳಿ ದುಡ್ಡಿಗೆ ಸಾಲ ನಿಲ್ಲುವುದಾದರೆ ಎಲ್ಲವನ್ನೂ ಮಾರಿಸಿಕೊಡುವ ಭರವಸೆಯನ್ನು ಆತ ನೀಡಿದ. ವ್ಯಾಪಾರಿ ಅಂದ ಮೇಲೆ ಫಾಯಿದೆ ನೋಡದಿರುತ್ತಾರೆಯೇ ? ಪಾಪ ಜಹಗೀರದಾರನ ವರಸೆ ಆತನಿಗೇನು ಗೊತ್ತು ? ಅನಾಯಾಸವಾಗಿ ಅಷ್ಟೂ ಕಂಬಳಿ ಮಾರಾಟವಾಗುವುದಾದರೆ ಒಂದು ತಿಂಗಳಲ್ಲಿ ಆಗುವುದೇನಿದೆ ? ಹೇಗೂ ಜಹಗೀರದಾರರೇ ಜಾಮೀನು ನಿಂತಿದ್ದಾರೆ. ಹಣ ಎಲ್ಲಿಗೆ ಹೋದೀತು ಎಂದುಕೊಂಡು ಇಡೀ ಹೊರೆಯನ್ನೇ ಅಲ್ಲಿಳಿಸಿ ಹೋಗಿಬಿಟ್ಟ. ಕ್ಷಣದಲ್ಲಿ ಕಂಬಳಿಗಳು ಬಿಕರಿಯಾಗಿ ಬಿಟ್ಟವು.


ಕಂಬಳಿ ಮಾರಾಟಗಾರ ಆತ್ತ ಹೋದನೋ ಇಲ್ಲವೋ ಹೊಂಚು ಹಾಕುತ್ತ ಕುಳಿತಂತಿದ್ದ ಚಳಿ ಊರಿಗೆ ಕಾಲಿಟ್ಟಿತು. ಕಳೆದ ಬೇಸಿಗೆ ಬಿಸಲಿಗೆ, ಮಳೆಗಾಲದಲ್ಲಿ ಕಾಡಿದ್ದ ಬರಕ್ಕೆ ಸವಾಲು ಹಾಕುವ ರೀತಿಯಲ್ಲಿತ್ತು ಆ ವರ್ಷದ ಚಳಿ. ಇಡೀ ಊರಿಗೆ ಊರೇ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕುಳಿತಿತ್ತು. ಹಾಗೆ ಬೆಚ್ಚಗೆ ಇದ್ದಾಗ ದಿನ ಕಳೆದದ್ದಾದರೂ ಹೇಗೆ ತಿಳಿಯುತ್ತದೆ ? ಅಕೋ-ಇಕೋ ಎನ್ನುತ್ತಿರುವಾಗಲೇ ಒಂದು ತಿಂಗಳು ಕಳೆದು ಹೋಯಿತು. ಮಾತಿನಂತೆ ಕಂಬಳಿಯ ದುಡ್ಡನ್ನು ಎಲ್ಲರೂ ಪಾವತಿಸಬೇಕಿತ್ತು. ಅದನ್ನು ವಸೂಲು ಮಾಡಲು ಮತ್ತೆ ಬಂದ ಮಾರಾಟಗಾರ ಹಣ ಪಡೆದು ಹಸನ್ಮುಖಿಯಾಗಿ ಮರಳಬೇಕಿತ್ತು. ಅಷ್ಟಾಗಿಬಿಟ್ಟರೆ ಅದು ಹುಚ್ಚರಹಳ್ಳಿ ಹೇಗಾದೀತು ? ಹಣ ಕೊಡಬೇಕಾದವರು ಕೊಡಲಿಲ್ಲ. ಕೊಡಿಸುತ್ತೇನೆಂದವರು ಸಿಗಲಿಲ್ಲ. ಏನು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾಗಲೇ ಒಂದಿಬ್ಬರು ‘ಸಂಪನ್ನ’ರೆಂಬುವವರು ಎದುರಾದರು. ಕಷ್ಟ ಕಾಲದಲ್ಲಿ ಮಾತನಾಡಿಸುತ್ತಿದ್ದಾರೆಂದಾದ ಮೇಲೆ ನಂಬದಿರಲಾದೀತೆ ? ಷರಾಬು ಬಾಟಲಿಯ ಬೇಡಿಕೆಯೊಂದಿಗೆ ಹಣ ವಸೂಲಿ ಮಾಡಿಕೊಡಿಸುವ ಷರತ್ತಿನ ಭರವಸೆ ಅವರಿಂದ ಕಂಬಳಿಗಾರನಿಗೆ ಸಿಕ್ಕಿತು. ಅವತ್ತೇನೋ ಗಡಂಗು ನಡೆದು ಹೋಯಿತು. ಒಂದೆರಡು ದಿನ ಬಿಟ್ಟು ಬರಲು ಹೇಳಿ ಆತನನ್ನು ಕಳಿಸಿದ್ದೂ ಆಯಿತು. ಇಲ್ಲದ ಆಶಾ ಭಾವ, ಒಲ್ಲದ ಮನಸ್ಸಿನೊಂದಿಗೆ ಅವ ಹೋದದ್ದೂ ಆಯಿತು, ಮತ್ತೆ ಬಂದದ್ದೂ ಆಯಿತು. ಈ ಬಾರಿ ಸಿಕ್ಕ ಸಂಪನ್ನರೆಂಬೋ ಸಂಪನ್ನರ ಮಾತಿನ ಧಾಟಿ ಬದಲಾಗಿತ್ತು. ತಮ್ಮಿಬ್ಬರ ಕಂಬಳಿ ಹಣವನ್ನು ಮಾಫಿ ಮಾಡಿಬಿಟ್ಟರೆ ಉಳಿದ ಹಣ ಕೈಸೇರುತ್ತೆ ಎಂಬ ಕಂಡೀಷನ್ ಮುಂದೆ ಬಂದಿತ್ತು. ಕಂಬಳಿಗಾರನಿಗೂ ರೇಗಿ ಹೋಯಿತು. ಮಾತಿಗೆ ಮಾತು ಬೆಳೆಯಿತು. ಇವರೂ ಬಿಡಲಿಲ್ಲ ಕೈ ಹಚ್ಚಿದರು. ಧರ್ಮದೇಟುಗಳೂ ಬಿದ್ದವು. ಆದರೂ ಯಾರೊಬ್ಬರೂ ನ್ಯಾಯಕ್ಕೆ ಬರಲಿಲ್ಲ. ಮಾತಾಡಿಕೊಟ್ಟಿದ್ದ ಜಾಗೀರ್‌ದಾರ್ ಈಗ ನ್ಯಾಯಕ್ಕೆ ಕುಳಿತ. ಊರವರ ಮೇಲೆ ಕೈ ಮಾಡಿದರೆ ಕಾಲು ಮುರಿಯಬೇಕಾದೀತು ಎಂಬ ಎಚ್ಚರಿಕೆ ಬಂತು, ಪಂಚಾಯತಿಯಿಂದ ಇಬ್ಬರ ಜತೆ ಮತ್ತಿಬ್ಬರು ಸೇರಿದರು, ನಾಲ್ಕಿದ್ದ ಮಂದಿ ಎಂಟಾದರು. ಸಣ್ಣದೊಂದು ಗುಂಪೇ ನೆರೆಯಿತು. ಎಲ್ಲರೂ ಸೇರಿ ಮಾಡಿದ ನ್ಯಾಯ ಪಂಚಾಯ್ತಿ ಅತ್ಯದ್ಭುತವಾಗಿತ್ತು. ಈ ಕ್ಷಣ ಕಂಬಳಿಗಾರ ಊರು ಬಿಟ್ಟು ಹೋಗದಿದ್ದರೆ ಮುಂದಿನ ಅನಾಹುತಕ್ಕೆ ಯಾರೂ ಹೊಣೆಯಾಗಲು ಸಾಧ್ಯವಿಲ್ಲ... ಇಷ್ಟು ಆಗುವುದರೊಳಗೆ ಎದ್ದೆನೋ ಬಿದ್ದೆನೋ ಅಂತ ಆತ ಓಡಿ ಹೋಗಿಯಾಗಿತ್ತು. ಮತ್ತೆ ರಾತ್ರಿ ಊರಲ್ಲಿಆ ಸಂಭ್ರಮದಲ್ಲಿ ಗಡಂಗು ಸಮಾರಾಧನೆ.


‘ಹುಚ್ಚರ ಹಳ್ಳಿ’ ಅಂತ ಅದಕ್ಕೆ ಹೆಸರು ಬರಲು ಬೇರೆ ಕಾರಣ ಬೇಕಿಲ್ಲ ತಾನೆ ? ಹೌದು, ರಾಜಸ್ಥಾನದ ತೀರಾ ಹೀನಾಯ ಬರಪೀಡಿತ ಲಾಪೋಡಿಯಾ ಎಂಬ ಊರಿನ ಮಂದಿ ಅಕ್ಷರಶಃ ಇಂಥ ಲಫಡಾಗಳಿಂದಲೇ ಒಂದು ಕಾಲದಲ್ಲಿ ಕುಖ್ಯಾತರಾದವರು. ಗುರ್ಜರ್ ಜನಾಂಗದವರೇ ಹೆಚ್ಚಾಗಿ ವಾಸಿಸುವ ಪ್ರದೇಶವದು. ಲಾಪೋಡಿಯಾ ಎಂಬ ರಾಜಸ್ಥಾನಿ ಪದದ ಅರ್ಥ ಹುಚ್ಚರ ಹಳ್ಳಿ ಎಂದೇ. ಆ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇರಲಿಲ್ಲ. ಅವರಿರುವುದೇ ಹಾಗೆ. ಎಂತಾದರೂ ಆಗಲಿ; ಹೊಟ್ಟೆ ತುಂಬಬೇಕಷ್ಟೆ. ಉದ್ಯೋಗ ಮಾಡಲು ಮನಸ್ಸಿಲ್ಲ. ಮನಸ್ಸಿದ್ದರೂ ಗೊತ್ತಿದ್ದ ಒಂದೇ ಉದ್ಯೋಗ ಕೃಷಿಗೆ ಅಗತ್ಯ ನೀರು ಕಾಣದೇ ಅದೆಷ್ಟು ವರ್ಷಗಳಾಯಿತೋ. ಮಳೆ ಬೀಳದೇ ಭೂಮಿಯೇ ಬಾಯ್ದೆರೆದುಕೊಂಡು ಮಲಗಿರುವಾಗ ಮನುಷ್ಯರಿಗಾದರೂ ಎಲ್ಲಿಂದ ಸಿಕ್ಕೀತು ನೀರು. ವರ್ಷಕ್ಕೆ ಹೆಚ್ಚೆಂದರೆ ೩೨೦ ಮಿಲಿ ಮೀಟರ್ ಮಳೆ. ಅಷ್ಟನ್ನೂ ಸರಿಯಾಗಿ ಕಾಣುವುದು ಐದೋ ಆರೋ ವರ್ಷಕ್ಕೊಮ್ಮೆ. ಹೋಗಲಿ ಅದಾದರೂ ತಾಲಾಬ್‌ಗಳಲ್ಲಿ ನಿಂತಿದ್ದರೆ ಬೇಸಿಗೆ ಭಾರವಾಗುತ್ತಿರಲಿಲ್ಲ. ಆದರೆ ತಾಲಾಬ್‌ಗಳೇ ಹೂಳಿನಡಿ ಹೂತು ಹೋಗುತ್ತಿದ್ದಾಗ ನೀರಾದರೂ ಹೇಗೆ ನಿಲ್ಲಲು ಸಾಧ್ಯವಾದೀತು ? ಮನುಷ್ಯ ಬದುಕುವುದೇ ಕಷ್ಟವಾಗಿರುವಾಗ ಜಾನುವಾರುಗಳನ್ನು ಸಾಕುವುದಾದರೂ ಹೇಗೆ ? ಹೀಗಾಗಿ ಅವುಗಳನ್ನು ಹೊಡೆದಟ್ಟಿಯಾಗಿತ್ತು. ಸಾಕಿದವರು ಹೊಡೆದಟ್ಟಿದರು ಎನ್ನುವುದಕ್ಕಿಂತ ಮೇವು-ನೀರು ಸಿಗದಿದ್ದ ಮೇಲೆ ಜಾನುವಾರುಗಳೇ ಅವನ್ನು ಹುಡುಕಿಕೊಂಡು ಹೊರಟುಬಿಟ್ಟಿದ್ದವು.


ಇಂತಿಪ್ಪ ಸನ್ನಿವೇಶದಲ್ಲಿ ಜನ ಲಫಡಾಕ್ಕಿಳಿಯದೇ ಮತ್ತಿನ್ನೇನು ಮಾಡಿಯಾರು ? ಹಿರಿಯರೇ ಹೀಗೆ ಹಾದಿ ತಪ್ಪಿದ ಮೇಲೆ ಯುವಕರು ಮಕ್ಕಳ ಕಥೆ ಏನಾದೀತೆಂಬುದನ್ನು ಊಹಿಸಿಕೊಳ್ಳಬಹುದು. ಒಟ್ಟರೆ, ಕಂಡಕಂಡ ಕಟ್ಟೆಗಳಲ್ಲಿ ಕುಳಿತು ಕಾಡು ಹರಟೆ ಹೊಡೆಯವುದು, ದಾರಿ ಹೋಕರನ್ನು ವ್ಯಂಗ್ಯ ಮಾಡುವುದು, ಪಾಪದವರು ಸಿಕ್ಕರೆ ಅವರನ್ನು ಸುಲಿದು ಪರದೇಶಿಗಳನ್ನಾಗಿ ಮಾಡುವುದು, ಒಟ್ಟಾರೆ ಕಂಡವರ ಅನ್ನಕ್ಕೆ ಕನ್ನ ಹಾಕಿಯೇ ಜೀವಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಲಾಪೋಡಿಯಾದ ಮಂದಿಯ ಅಂಥ ಪ್ರವೃತ್ತಿಗೆ ಒಂದು ಉದಾಹರಣೆ ಕಂಬಳಿಗಾರನ ಪ್ರಕರಣ. ಇಷ್ಟಕ್ಕೇ ಕಥೆ ಮುಗಿಯುವುದಿಲ್ಲ.


ಇಷ್ಟೆಲ್ಲವೂ ಆಗುವಾಗ ಆಗಿನ್ನೂ ಹರೆಯಕ್ಕೆ ಕಾಲಿಡುತ್ತಿದ್ದ ಒಬ್ಬ ಯುವಕ ಸುಮ್ಮನೆ ನಿಂತು ಗಮನಿಸುತ್ತಿದ್ದ. ಅದೂ ಮುಂದೆ ನಿಂತು ಊರನ್ನು ಅಂಥ ಮಾರ್ಗದಲ್ಲಿ ಮುನ್ನಡೆಸುತ್ತಿದ್ದ, ಅನ್ಯಾಯವನ್ನು ಕಂಡೂ ಕಾಣದಂತೆ ಪೋಷಿಸುತ್ತಿದ್ದ ಜಹಗೀರುದಾರನ ಹಿರಿಯ ಮಗನಾತ. ಲಾಪೋಡಿಯಾದಲ್ಲಿ ಜಹಗೀರುದಾರಿಕೆಯೆಂದರೆ ಅದು ರಾಜಸ್ಥಾನದ ರಾಜಮನೆತನದ ಬಳವಳಿ. ಮಾತ್ರವಲ್ಲ, ಅವರೂ ಅದೇ ಮೂಲ ರಾಜ ಮನೆತನಕ್ಕೇ ಸೇರಿದವರು. ಅಂಥ ರಾಜ ಕುಟುಂಬದ ಆ ಯುವಕನಿಗೆ ಇದೇನೋ ವಿಚಿತ್ರವಾಗಿ ಕಂಡಿತು. ಯಾವತ್ತಿಗೂ ಅಪ್ಪನ, ಊರಿನವರ ನಡವಳಿಕೆ ಸರಿ ತೋರಲಿಲ್ಲ. ಹಾಗೆಂದು ಅಂಥದ್ದರ ಪರಿಚಯ ಅವನಿಗೆ ಆವರೆಗೂ ಆಗಿದ್ದಿರಲಿಲ್ಲ. ಆತ ಊರಿನಲ್ಲಿದ್ದರೆ ತಾನೆ ಅದು ಅರಿವಿಗೆ ಬರುವುದು ? ಆತ ದೂರದ ಜೈಪುರದಲ್ಲಿ ಉನ್ನತ ಶಿಕ್ಷಣಕ್ಕೆಂದು ತೆರಳಿದ್ದ. ಲಾಪೋಡಿಯಾದ ಮಟ್ಟಿಗೆ ಉನ್ನತ ಶಿಕ್ಷಣವೆಂದರೆ ನಾಲ್ಕನೆಯ ತರಗತಿಯ ನಂತರದ ಓದೆಲ್ಲವನ್ನೂ ಅವರು ಹಾಗೆಂದೇ ಗುರುತಿಸುತ್ತಿದ್ದರು. ಏಕೆಂದರೆ ಆ ಊರಿನಲ್ಲಿ ಆಗ ಇದ್ದುದೇ ಮೂರನೆಯ ತರಗತಿಯವರೆಗಿನ ಶಾಲೆ. ತೀರಾ ಶ್ರೀಮಂತರ ಮಕ್ಕಳು ಮಾತ್ರ ಹೆಚ್ಚಿನ ಓದಿಗಾಗಿ ಜೈಪುರಕ್ಕೆ ಹೋಗುತ್ತಿದ್ದರು. ಜಹಗೀರದಾರನ ಮಗನೂ ಹಾಗೆ ಊರುಬಿಟ್ಟು ಆಗಲೇ ಆರೇಳು ವರ್ಷಗಳಾಗಿತ್ತು. ವರ್ಷಕ್ಕೊಮ್ಮೆ ಸಿಗುವ ದೀಪಾವಳಿ ರಜಕ್ಕೆ ಮಾತ್ರ ನಾಲ್ಕು ದಿನ ಊರಿಗೆ ಬಂದು ಮತ್ತೆ ಹೋಗಿ ಬಿಡುತ್ತಿದ್ದ. ಹೀಗಾಗಿ ಊರಿನ ಪರಿಸ್ಥಿತಿ ಆತನಿಗೆ ತೀರಾ ಅಪರಿಚಿತ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಹೀಗೆ ಊರಿಗೆ ಬಂದಾಗಲೇ ಇಂಥ ಘೋರ ಚಿತ್ರಣವೊಂದರ ದರ್ಶನವಾದ್ದು.


ಅಷ್ಟೇ, ತನಗೆ ಸರಿಕಾಣದ ಸಂಗತಿಯ ಬಗ್ಗೆ ಸಿಡಿದೆದ್ದ. ಖಂಡತುಂಡವಾಗಿ ಅನ್ಯಾಯವನ್ನು ಖಂಡಿಸಿದ. ಸ್ವತಃ ಜಹಗೀರದಾರ ತಂದೆಗೇ ಎದುರು ವಾದಿಸಿ ಅವರನ್ನು ಸರಿದಾರಿಗೆ ತರಲು ಯತ್ನಿಸಿದ. ಊರಿನ ದುಃಸ್ಥಿತಿಯ ಬಗ್ಗೆ ಮರುಗಿದ. ಇಡೀ ಹಳ್ಳಿಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಡುತ್ತಿದ್ದ ಬಡತನವನ್ನು ಬಡಿದೋಡಿಸಬೇಕೆಂದು ಚಿಂತಿಸಿದ. ಎಂದೋ ಊರುಬಿಟ್ಟು ಹೋಗಿದ್ದ ಶ್ರೀಮಂತ ಭಾರತೀಯ ಸಂಸ್ಕೃತಿಯನ್ನು ಮತ್ತೆ ನೆಲೆಗೊಳಿಸಬೇಕೆಂದು ಆಶಿಸಿದ. ಇಷ್ಟಲ್ಲಕ್ಕೂ ಕಾರಣವಾಗಿರುವ, ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಹತ್ತಾರು ವರ್ಷಗಳಿಂದ ಬೋರಲು ಬಿದ್ದುಕೊಂಡಿದ್ದ ಭೀಕರ ಬರಗಾಲವನ್ನು ಹೇಗಾದರೂ ನಿವಾರಿಸಬೇಕೆಂದು ನಿಶ್ಚಯಿಸಿದ. ಇದೆಲ್ಲವೂ ತನ್ನೊಬ್ಬನಿಂದಲೇ ಸಾಧ್ಯವಾಗದೆಂದು ನಿಶ್ಚಯಿಸಿದವನೇ ನಾಲ್ಕಾರು ಗೆಳೆಯರನ್ನು ಒಟ್ಟುಗೂಡಿಸಿಕೊಂಡು ರಾತ್ರಿ ಬೆಳಗೆನ್ನದೇ ಚರ್ಚೆಗೆ ನಿಂತ. ಕೊನೆಗೊಂದು ದಿನ ಬದುಕು ಕಲಿಸದ ಓದನ್ನು ಅಷ್ಟಕ್ಕೇ ನಿಲ್ಲಿಸಿ ತನ್ನೂರಿನವರಿಗೊಂದು ಹೊಸ ಬದುಕನ್ನು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಡಲು ನಿರ್ಧರಿಸಿ ಎದ್ದು ನಿಂತ.
ಇಂದು ಲಾಪೋಡಿಯಾ ಎಂಬುದು ದೇಶಕ್ಕೇ ಮಾದರಿ ನೀರಾವರಿ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದ್ದರೆ, ವಿಶ್ವವೇ ನಿಬ್ಬೆರಗಾಗಿ ನೋಡುವಂಥ ಬರ ನಿರೋಧಕ ಜಾಣ್ಮೆಯನ್ನು ಮೆರೆದಿದ್ದರೆ, ಅಲ್ಲಿನ ಬಾನ್ದಳ ಸ್ವಚ್ಛಂದ ಹಕ್ಕಿಗಳ ಕಲರವದಿಂದ ತುಂಬಿಹೋಗಿದ್ದರೆ, ಜಾನುವಾರುಗಳು ಮೈಕೈ ತುಂಬಿಕೊಂಡು ಹಾಲಿನ ಹೊಳೆ ಹರಿಸುತ್ತಿದ್ದರೆ, ಕಾನನ ಹಸಿರಾಚ್ಛಾದಿತವಾಗಿ ಕಂಗೊಳಿಸುತ್ತಿದ್ದರೆ, ನೀರ ಸಂಸ್ಕೃತಿಯೊಂದಿಗೆ ಭಾರತೀಯ ಸತ್ಪರಂಪರೆ ಮನೆ ಮಾಡಿದ್ದರೆ, ಕಂಡಕಂಡವರನ್ನು ಸುಲಿಯುತ್ತಿದ್ದ ಅದೇ ಹಳ್ಳಿಯ ಜನ ಇಂದು ಹೊಸಬರು ಯಾರೇ ಕಂಡರೂ ಯಾರೆಂಬುದನ್ನೂ ವಿಚಾರಿಸದೇ ಅತ್ಯಂತ ಗೌರವ-ಪ್ರೀತಿಪೂರ್ವಕವಾಗಿ ‘ರಾಂ ರಾಂ ಸಾಬ್‘ ಎಂದು ಕೈ ಮುಗಿದು ಆದರಿಸುತ್ತಿದ್ದರೆ... ಇಂಥ ಇನ್ನೂ ನೂರಾರು ರೇಗಳ ಸಾಮ್ರಾಜ್ಯ ವಾಸ್ತವಗಳಾಗಿ ಅನುಷ್ಠಾನಗೊಂಡಿದೆ ಎಂದರೆ ಅದಕ್ಕೆ ಆ ಯುವಕನೇ ಕಾರಣ.


ಇದೇನು ಅಮೀರ್ ಖಾನ್‌ನ ಹೊಸ ಸಿನೆಮಾದ ಸ್ಕಿಪ್ಟ್ ಅಲ್ಲ. ಆ ಯುವಕ ಚಿತ್ರದ ಹೀರೋನೂ ಅಲ್ಲ. ಆತ ರಾಜಸ್ಥಾನದ ನೀರ ಯಶೋಗಾಥೆಯ ನಾಯಕ, ಗ್ರಾಮವಿಕಾಸ್ ನವ ಯುವಕ್ ಮಂಡಲವೆಂಬ ಎಂಟು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜಲಯೋಧಪಡೆಯ ಸೇನಾಪತಿ. ಹೆಸರು ಲಕ್ಷ್ಮಣ ಸಿಂಗ್. ಜಲ ಪುನರುತ್ಥಾನಕ್ಕಾಗಿ ಜೀವನವನ್ನೇ ಮುಡುಪಿಟ್ಟು ಗೆದ್ದ ಅದೇ ಯುವಕ ಐಐಎಂಬಿಯಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಛಾಯಾಚಿತ್ರಗ್ರಾಹಕ ಮಹೇಶ್ ಭಟ್ ಪರಿಚಯಿಸಿ ಸುಮ್ಮನೆ ಕುಳಿತರು. ಖುಲ್ಲಂಖುಲ್ಲ ಮೂರು ತಾಸು ಅವರ ಜತೆ ಹರಟಿ ಯಶೋಗಾಥೆಯನ್ನು ಮನದುಂಬಿಸಿಕೊಂಡು ಬಂದಿದ್ದೇನೆ. ಇನ್ನೊಂದಷ್ಟು ವಾರ ಕಂತುಗಳಲ್ಲಿ ಅದನ್ನು ನಿಮ್ಮ ಜತೆ ಹಂಚಿಕೊಳ್ಳದಿದ್ದರೆ ನನಗೆಲ್ಲಿಯ ನೆಮ್ಮದಿ. ಇದು ಆರಂಭ. ಉಳಿದೆಲ್ಲದಕ್ಕೆ ಮುಂದಿನ ವಾರದವರೆಗೆ ಕಾಯಬೇಕಷ್ಟೇ.

No comments: