Tuesday, April 28, 2009

ಭಯ ಬೇಡ, ಮಳೆ ಹುಯ್ಯುತ್ತಿದೆ !

ಕಾರಾತ್ಮಕವಾಗಿಯೇ ನೀರಿನ ಬಗ್ಗೆ ಯೋಚಿಸುವುದು ಏಕೊ ? ಈ ವಿಚಾರದಲ್ಲಿ ಅನಗತ್ಯ ಭಯವೊಂದು ನಮ್ಮಲ್ಲಿ ಮನೆ ಮಾಡಿದೆ. ಒಂದಂತೂ ಸತ್ಯ, ನೀರು ನಿರ್ವಹಣೆಯಲ್ಲಿನ ಸಮರ್ಥ ಸಮುದಾಯವೇ ಅಭಿವೃದ್ಧಿಯ ವ್ಯಾಖ್ಯಾನವನ್ನು ಬರೆಯುತ್ತದೆ. ನೀರನ್ನು ಸರಳ ಮತ್ತು ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದ್ದರೆ ಆ ಪ್ರದೇಶ ಖಂಡಿತಾ ಹಿಂದುಳಿಯಲು ಸಾಧ್ಯವೇ ಇಲ್ಲ. ಇಲ್ಲಿ ನೀರು ನಿರ್ವಹಣೆ ಎಂದರೆ ಕೊರತೆ ಇದ್ದಾಗ ಸರಿದೂಗಿಸುವುದು ಮಾತ್ರವಲ್ಲ, ಹೆಚ್ಚಾದಾಗಲೂ ವ್ಯರ್ಥ ಮಾಡದಿರುವುದು. ಅಂದರೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳೆರಡೂ ಸಂದರ್ಭಗಳಲ್ಲಿ ತೋರುವ ಜಾಣ್ಮೆ ಹಾಗೂ ಅದರ ಜತೆಗಿನ ನೆಮ್ಮದಿಯ ಬದುಕು ನೈಜ ಅಭಿವೃದ್ಧಿ ಪರ ಮನೋಭಾವಕ್ಕೊಂದು ಸ್ಪಷ್ಟ ನಿದರ್ಶನ.
ಅದೃಷ್ಟಕ್ಕೆ ಇಂದಿಗೂ ನಮಗೆ ಮಳೆ ನೀರೊಂದೇ ಶುದ್ಧವಾಗಿ ಉಳಿದುಕೊಂಡಿದೆ. ಅದರ ಸಂಗ್ರಹ ಮತ್ತು ಸೇವನೆಯಿಂದ ಎಲ್ಲ ಸಮಸ್ಯೆಗಳಿಂದಲೂ ಪಾರಾಗಬಹುದು. ಇದರ ಹೊರತಾಗಿ ಇತರ ನೀರನ್ನು ಕುಡಿಯಲೇಬೇಕಾದ ಅನಿವಾರ್ಯತೆ ಬಂದರೆ ಅದಕ್ಕೂ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದೊಳಿತು. ಯಾವುದೇ ನೀರನ್ನು ಆಟೋಕ್ಲೇವ್‌ನಿಂದ ಶುದ್ಧಗೊಂಡ ಬಾಟಲಿಯಲ್ಲಿ ಸಂಗ್ರಹಿಸಿ, ಆ ನೀರಿನ ಎಲ್ಲ ವಿವರ (ಸ್ಥಳ, ಸಂಗ್ರಹಿಸಿದ ಸಮಯ ಇತ್ಯಾದಿ)ಗಳೊಂದು ನಾಲ್ಕು ಗಂಟೆಯೊಳಗೆ ಪ್ರಯೋಗಾಲಯಕ್ಕೆ ಒಯ್ದರೆ ಪರೀಕ್ಷೆ ಸಾಧ್ಯ.
ಅವುಗಳೆಲ್ಲ ಹೇಗೇ ಇದ್ದರೂ ಚೆನ್ನಾಗಿ ಕುದಿಸಿ ಆರಿಸಿದ ನೀರು ಯೋಗ್ಯ. ಇಲ್ಲವೇ ಪಾರದರ್ಶಕ ಬಾಟಲಿ ಅಥವಾ ಪಾತ್ರೆಗಳಲ್ಲಿ ತುಂಬಿದ ನೀರನ್ನು ಆರರಿಂದ ಎಂಟು ಗಂಟೆಗಳ ಕಾಲ ಬಿಸಿಲಲ್ಲಿ ಇಟ್ಟು ನಂತರ ಯಾವುದೇ ಭೀತಿಯಿಲ್ಲದೇ ಕುಡಿಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ "ಶುದ್ಧ ನೀರಿನ ಪ್ರಜ್ಞೆ’ ಮೊದಲು ಎಲ್ಲರ ಆದ್ಯತೆಯಾಗಲಿ. ಅದಿಲ್ಲದಿದ್ದರೆ ನಾವು ಅಪಾಯವನ್ನು ಆಹ್ವಾನಿಸಿಕೊಂಡಂತೆಯೇ ಸರಿ.
ಸಾಮಾನ್ಯವಾಗಿ ಬೃಹತ್ ಪ್ರಮಾಣದಲ್ಲಿ ನೀರು ಪೂರೈಕೆಯ ಸಂದರ್ಭದಲ್ಲಿ ಮರಳಿನ ಮೂಲಕ ಸೋಸುವುದೇ ಹೆಚ್ಚು. ನೈಸರ್ಗಿಕ ವಾಗಿ ಮಣ್ಣು, ಮರಳುಗಳಲ್ಲಿ ಜಿನುಗಿದಾಗ, ಸೂರ್ಯ ರಶ್ಮಿಯ ನೇರ ಸಂಪರ್ಕದಲ್ಲಿ ನೀರು ಶುದ್ಧಗೊಳ್ಳುತ್ತದೆ. ಇದಲ್ಲದೇ ನೀರನ್ನು ಪಟಕ (ಆಲಂ-ಬಣ್ಣ ರಹಿತವಾದ, ಸಾಮಾ ನ್ಯವಾಗಿ ಔಷಧಗಳಲ್ಲಿ ಬಳಸುವ ಒಂದು ಸಂಯುಕ್ತ ವಸ್ತು) ಜತೆ ಬೆರೆಸಿಯೂ ಸಂಸ್ಕರಿಸುವ ಪದ್ಧತಿ ಇದೆ. ಇದಾದ ಬಳಿಕ ಮರಳಿನ ಹಾಸಿನ ಮೂಲಕ ನೀರನ್ನು ಹಾಯಿಸಿ, ನಂತರ ಕ್ಲೋರೀನ್‌ಯುಕ್ತ ಅನಿಲ, ದ್ರಾವಣ ಗಳನ್ನು ಬೆರೆಸಿ ಕೊಳಾಯಿಗಳ ಮೂಲಕ ಪೂರೈಸಲಾಗು ತ್ತದೆ. ಇಷ್ಟಾದ ಮಾತ್ರಕ್ಕೆ ನೀರು ಶುದ್ಧವೆನ್ನಲಾಗದು. ಮೇಲ್ನೋಟಕ್ಕೆ ನೀರು ತಿಳಿಯಾಗಿ ಕಂಡರೂ ಅದರಲ್ಲಿ ಜೈವಿಕ, ರಾಸಾಯನಿಕ ಅಂಶ ಇರಬಹುದು. ಸಂಸ್ಕರಣಾ ಕೇಂದ್ರದಿಂದ ಪೂರೈಸಲಾದ ಬಳಿಕವೂ ನೀರು ಅಶುದ್ಧ ಗೊಳ್ಳುವ ಸಾಧ್ಯತೆಗಳಿವೆ.
ಒಬ್ಬ ಮನುಷ್ಯನ ತೂಕ ೭೦ ಕಿ.ಗ್ರಾಂ ಇದ್ದರೆ, ಆತನ ದೇಹದಲ್ಲಿ ೪೭ ಲೀಟರ್ ನೀರಿರುತ್ತದೆ. ನಮ್ಮ ದೇಹದ ಬಹುತೇಕ ಅಂಗಗಳಲ್ಲಿ ನೀರಿನ ಅಂಶವೇ ಅಕವಾಗಿ ಇರುವುದು. ಉದಾಹರಣೆಗೆ ತೆಗೆದುಕೊಂಡರೆ ಮಾಂಸಖಂಡಗಳಲ್ಲಿ ಶೇ. ೭೫ರಷ್ಟು, ಪಿತ್ತಜನಕಾಂಗ ಅಥವಾ ಯಕೃತ್ತಿನಲ್ಲಿ ಶೇ. ೭೦, ಮಿದುಳಿನಲ್ಲಿ ಶೇ. ೭೯, ಕಿಡ್ನಿಯಲ್ಲಿ ಶೇ. ೮೩ರಷ್ಟು ನೀರಿನ ಅಂಶವಿದೆ. ದೇಹಕ್ಕೂ ನೀರಿಗೂ ಇರುವ ಸಂಬಂಧವನ್ನು ನಾವು ಗಮನಿಸಿಕೊಂಡರೆ ಖಂಡಿತಾ ನೀರನ್ನು ನಿರ್ಲಕ್ಷಿಸುವುದಿಲ್ಲ.
ಆರೋಗ್ಯ ಶಾಸ್ತ್ರ ಹೇಳುವ ಪ್ರಕಾರ ದೇಹದ ಒಟ್ಟೂ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಜೀವಕೋಶಗಳೊಳಗೆ ಅಡಕವಾಗಿದ್ದು, ಉಳಿದ ಭಾಗ ರಕ್ತದಲ್ಲಿ, ಅಂಗಾಂಶಗಳಲ್ಲಿ, ಮಿದುಳನ್ನು ಆವರಿಸಿರುವ ಸೆರಿಬ್ರೊಸ್ಟೈನಲ್ ದ್ರಾವಣದಲ್ಲಿ, ಕಣ್ಣಿನಲ್ಲಿ ಇರುತ್ತದೆ. ಯಾವ ಜೀವಕೋಶವೂ ನೀರಿಲ್ಲದೆ ಬದುಕಿರಲು ಸಾಧ್ಯವಿಲ್ಲ.
ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವ ಶಕ್ತಿ ನೀರಿಗಿದೆ. ಹೀಗಾಗಿ ಒಂದು ಜೀವಕೋಶ ಮತ್ತೊಂದರಿಂದ ಅಥವಾ ಹೊರಗಿನ ಪರಿಸರದಿಂದ ಅಥವಾ ರಾಸಾಯನಿಕಗಳನ್ನು ಪಡೆಯಲು ಈ ಗುಣ ಬಹಳ ಅನುಕೂಲವಾಗಿದೆ. ದೇಹದಲ್ಲಿನ ರಾಸಾಯನಿಕ ಪ್ರಕ್ರಿಯೆಗಳಿಗೂ ನೀರು ತೀರಾ ಅಗತ್ಯ. ಜೀವಕೋಶಗಳಿಗೆ ಅನೇಕ ಉಪಯುಕ್ತ ವಸ್ತುಗಳು ಹೊರಗಿನಿಂದ ಬರುತ್ತವೆ. ಅದೇ ರೀತಿಯಲ್ಲಿ ಒಳಗಿನಿಂದ ಹೊರಗೂ ಹೋಗುತ್ತದೆ. ಹೀಗೆ ಬಂದು ಹೋಗಲು ನೀರು ಬೇಕು. ಇನ್ನು ಆಹಾರ ಜೀರ್ಣವಾಗಲು, ಅದರಲ್ಲಿನ ಪೋಷಕಾಂಶ ರಕ್ತ ಸೇರಲು, ಅವು ಮುಂದೆ ಜೀವಕೋಶಗಳನ್ನು ತಲುಪಲು ನೀರು ಬೇಕು. ನೀರಿನ ಅಯಾನುಗಳು, ಆ ವಸ್ತುಗಳನ್ನು ಪ್ರವೇಶಿಸಿ ಅವುಗಳನ್ನು ವಿಭಜಿಸಿ ಆ ಪ್ರಕ್ರಿಯೆಯನ್ನು ಸರಳೀಕರಿಸುತ್ತವೆ.
ಕರುಳಿನಿಂದ ಆಹಾರದ ಅಂಶಗಳನ್ನು ಹೀರಿಕೊಳ್ಳಲು, ಮೂತ್ರಪಿಂಡಗಳ ನಾನಾ ಪ್ರಕ್ರಿಯೆಗಳಿಗೆ ಮತ್ತು ಆಹಾರದ ಅಂಶಗಳು ದೇಹದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಸೂತ್ರವಾಗಿ ಸಾಗಲು ನೀರು ತೀರಾ ಅಗತ್ಯ. ಅಷ್ಟೇಕೆ ದೇಹದ ತ್ಯಾಜ್ಯ ಪದಾರ್ಥಗಳು ಹೊರಬೀಳಲು ನೀರು ಬೇಕೇಬೇಕು. ಜೀರ್ಣ ಕ್ರಿಯೆಗೆ ಅಗತ್ಯ ಹಲವು ಜೀರ್ಣರಸಗಳ ತಯಾರಿಕೆ ನೀರಿಲ್ಲದೇ ಆಗದು. ಬೇರೆ ಬೇರೆ ರಸದೂತಗಳು ನಿರ್ನಾಳ ಗ್ರಂಥಿಗಳಲ್ಲಿ ಉತ್ಪತ್ತಿಯಾಗಿ, ತಮ್ಮ ತಮ್ಮ ಕಾರ್ಯ-ಚಟುವಟಿಕೆಯ ಸ್ಥಾನಗಳಿಗೆ ಸಾಗಲು ನೀರು ಅಗತ್ಯ.
‘ಲಾಸ್ಟ್’ಡ್ರಾಪ್: ಆಹಾರವಿಲ್ಲದೇಯೂ ಮನುಷ್ಯ ಹಲವು ದಿನಗಳವರೆಗೆ ಬದುಕಿರಬಹುದು. ಆದರೆ ನೀರಿಲ್ಲದೇ ಬದುಕಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನೀರನ್ನು ಜೀವದ್ರವ ಎನ್ನುವುದು.

Saturday, April 25, 2009

ಶೀತ ಬಂದರೆ ಮೂಗು ಕೊಯ್ತಾರಾ ?

ನೀರಿನ ಬಗ್ಗೆ ನಮಗೆ ಮೊದಲಿಂದಲೂ ಅದೇನೋ ಪೂರ್ವಗ್ರಹ. ಇದಕ್ಕೆ ಕಾರಣವೇ ಇಲ್ಲ. ಆದರೂ ಯಾವುದೇ ಕಾಯಿಲೆ ನಮ್ಮನ್ನು ಬಾಸಲಿ, ನಮಗೇ ಗೊತ್ತಿಲ್ಲದಂತೆ ನಾವು ನೀರಿನಿಂದ ದೂರ ಉಳಿದುಬಿಡುತ್ತೇವೆ. ಇದೇಕೆ ಹೀಗೆ ? ಉತ್ತರ ಇಲ್ಲ. ವೈದ್ಯರು ಮೇಲಿಂದ ಮೇಲೆ ಹೆಚ್ಚು ನೀರು ಕುಡಿಯಿರಿ ಎಂಬ ಸಲಹೆ ನೀಡುತ್ತಲೇ ಇರುತ್ತಾರೆ. ಇಷ್ಟಾದರೂ ನಮಗೆ ನೀರು ಕುಡಿಯಲು ಏನೋ ಹಿಂಜರಿಕೆ.
ಬೇಕಿದ್ದರೆ ನೋಡಿ, ಮಕ್ಕಳನ್ನು ಸಹ ನಾವು ನೀರಿನಿಂದ ದೂರ ಇಟ್ಟು ಬಿಡುತ್ತೇವೆ. ಮಕ್ಕಳಿಗೆ ನೀರೆಂದರೆ ಸಹಜವಾಗಿ ಖುಷಿ. ಅವು ಏನನ್ನು ಕುಡಿಯದಿದ್ದರೂ, ಏನನ್ನು ತಿನ್ನದಿದ್ದರೂ ನೀರನ್ನು ಬಿಡುವುದಿಲ್ಲ. ಆದರೆ, ನಮ್ಮ ಧೋರಣೆಯೇ ವಿಚಿತ್ರ. ಮಗು ಸ್ವಲ್ಪ ಹೆಚ್ಚು ನೀರು ಕುಡಿದರೂ ಸಾಕು, ಎಲ್ಲಿ ಶೀತವಾಗಿಬಿಡುತ್ತದೋ ಎಂತಲೋ, ಬರೀ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ, ಊಟ ಮಾಡುವುದೇ ಇಲ್ಲ ಎಂತಲೋ ಅನಗತ್ಯ ಆತಂಕ ವ್ಯಕ್ತಪಡಿಸುತ್ತೇವೆ. ದೊಡ್ಡವರಿಗೂ ಬರೀ ನೀರು ಕುಡಿಯುವುದೆಂದರೆ ಏನೋ ಅಸಡ್ಡೆ.
ಶುದ್ಧ ನೀರಿನ ಯಥೇಚ್ಛ ಸೇವನೆಯಿಂದ ಯಾವುದೇ ರೋಗ ನಮ್ಮನ್ನು ಬಾಸುವುದಿಲ್ಲ. ಬದಲಾಗಿ ಅದೆಷ್ಟೋ ಸಮಸ್ಯೆಗಳಿಗೆ ನೀರು ಪರಿಹಾರವಾಗಬಲ್ಲುದು. ಅದೇ ಸಂದರ್ಭದಲ್ಲಿ ಕಲುಷಿತ ನೀರಿನ ಸೇವನೆಯೇ ನಮ್ಮ ಬಹುತೇಕ ಕಾಯಿಲೆಗಳಿಗೆ ಕಾರಣವೆಂಬ ಮಾತೂ ಸತ್ಯ. ಶುದ್ಧ ಹಾಗೂ ಕಲುಷಿತ ನೀರಿನ ನಡುವಿನ ವ್ಯತ್ಯಾಸ ಗೊತ್ತಿಲ್ಲದೇ ಎಲ್ಲ ನೀರನ್ನೂ ಒಂದೇ ಮಾನದಂಡದಿಂದ ಅಳೆದು ಕಾಯಿಲೆ ಬಂದಾಕ್ಷಣ ನಾವು ನೀರಿನಿಂದ ದೂರ ಉಳಿದು ಬಿಡುತ್ತೇವೆ.
ಶೀತ ಬಂತೆಂದು ಮೂಗುಕೊಯ್ದುಕೊಳ್ಳಬೇಕಿಲ್ಲ. ಶ್ವಾಸೋಚ್ಛ್ವಾಸ ಸುಲಲಿತವಾಗಲು, ವಾಯು ಮಾಲಿನ್ಯ ಮೀರಿ ಶುದ್ಧ ಆಮ್ಲಜನಕವನ್ನು ಹೃದಯಕ್ಕೆ ಪೂರೈಸಲು ಪೂರಕವಾಗಿ ಆಗಾಗ ಶೀತ ಆಗಬೇಕು. ಅಂತೆಯೇ ಅಳುಮುಂಜಿ ಎಂದು ಯಾರನ್ನೂ ಹಂಗಿಸಬೇಡಿ. ಕಣ್ಣಿರು ಸುರಿದಷ್ಟೂ ದೃಷ್ಟಿ ಸ್ವಚ್ಛವಾಗುತ್ತದೆ. ಬಾಯಲ್ಲಿ ಜೊಲ್ಲು ಸುರಿದರೂ ನಾಚಿಕೆ ಪಟ್ಟುಕೊಳ್ಳಬೇಕಾಗಿಲ್ಲ. ಅದು ಪಚನ ಕ್ರಿಯೆಯಲ್ಲಿ ನೆರವಾಗುತ್ತದೆ.
ಇನ್ನು ಭೇದಿಯಾಯಿತೆಂದು ತಲೆಗೆ ಹಚ್ಚಿಕೊಂಡು ಕುಳಿತುಕೊಳ್ಳಬೇಡಿ. ಅನ್ನ ನಾಳದಲ್ಲಿ ಆಹಾರದ ಚಲನೆಗೆ ನೀರಿನ ಸಾಂಗತ್ಯ ಬೇಕು. ಹಾಗೆ ಒಳ ಹೋದ್ದು ಪಚನವಾಗಲೂ ನೀರು ಬೇಕು. ಅದು ಆಗದೇ ಇದ್ದಾಗ ಅಜೀರ್ಣವಾಗುತ್ತದೆ, ಭೇದಿ ಕಿತ್ತುಕೊಳ್ಳುತ್ತದೆ.
ಮನುಷ್ಯ ಎಂದ ಮೇಲೆ ಬೆವರಲೇ ಬೇಕು. ಯಾಕೆ ಅಂತೀರಾ ? ನಮ್ಮ ದೇಹದ ಉಷ್ಣಾಂಶ ಸಾಮಾನ್ಯವಾಗಿ ೯೮.೬ ಡಿಗ್ರಿ ಫಾರನ್‌ಹೀಟ್ ಇರಬೇಕು. ಬಿಸಿಲಲ್ಲಿ ಕೆಲಸ ಮಾಡಿದಾಗ ದೇಹ ಇನ್ನಷ್ಟು ಬಿಸಿಯಾಗುತ್ತದೆ. ಆಗ ದೇಹವನ್ನು ತಂಪಾಗಿಸುವುದಕ್ಕೆ ಬೆವರು ಹೊರಬರುತ್ತದೆ ಹಾಗೂ ಅನಂತರ ಗಾಳಿಯಲ್ಲಿ ಆವಿಯಾಗುತ್ತದೆ. ಬೆವರು ಆವಿಯಾದಾಗ ಚರ್ಮ ತಂಪಾಗುತ್ತದೆ, ರಕ್ತ ತಂಪಾಗುತ್ತದೆ, ಇಡೀ ದೇಹವೇ ತಂಪು ತಂಪು ಕೂಲ್‌ಕೂಲ್!
ಕುಡಿದ ನೀರಿನ ಮುಕ್ಕಾಲು ಭಾಗ ಪ್ರತಿದಿನ ದೇಹದಿಂದ ಹೊರಹೋಗುತ್ತದೆ. ಮೂತ್ರ, ಬೆವರು, ಜೀರ್ಣಪ್ರಕ್ರಿಯೆ, ನೆಗಡಿ, ಉಸಿರು, ಆವಿ ಹೀಗೆ ನಾನಾ ವಿಧಗಳಲ್ಲಿ ನೀರು ಹೊರಹೋಗುತ್ತದೆ. ಹೀಗೆ ಹೊರಹೋಗುವ ನೀರನ್ನು ಮತ್ತೆ ತುಂಬಿಕೊಳ್ಳುವುದು ಹೇಗೆ? ಸಿಂಪಲ್, ಕುಡಿಯೋದು, ತಿನ್ನೋದು. ಹೌದು ನಾವು ತಿನ್ನುವ ಹಣ್ಣು ಹಂಪಲು ತರಕಾರಿ ಆಹಾರದ ಪ್ರತಿಯೊಂದು ವಸ್ತುವಿನಲ್ಲೂ ನೀರಿದೆ. ಅದರ ಜತೆಗೆ ದಿನಕ್ಕೆ ಎರಡು ಲೀಟರ್ ನೀರು ಕುಡಿಯಲೇಬೇಕು. ವ್ಯಾಯಾಮದ ಅಭ್ಯಾಸವಿರುವವರು, ಬಿಸಿಲಲ್ಲಿ ದುಡಿಯುವವರು, ಹೆಚ್ಚು ಓಡಾಡುತ್ತಿರುವವರು ಇನ್ನೂ ಹೆಚ್ಚು ನೀರು ಕುಡಿಯಲೇಬೇಕು
ಕುಡಿಯುವ ನೀರು ಹೇಗಿರಬೇಕು?
ಶುದ್ಧ ನೀರಿಗೆ ಬಣ್ಣ, ವಾಸನೆ, ರುಚಿ ಇಲ್ಲ. ಆದ್ದರಿಂದ ನಾವು ಕುಡಿಯುವ ನೀರಿಗೆ ಹಿತಕರವಲ್ಲದ ಬಣ್ಣ, ವಾಸನೆ, ರುಚಿ ಇರಬಾರದು. ಕುಡಿಯುವ ನೀರು ರೋಗಾಣುವಿನಿಂದ, ಹಾನಿಕಾರಕ ರಾಸಾಯನಿಕ, ವಿಕಿರಣಗಳಿಂದ ಮುಕ್ತವಾಗಿರಬೇಕು.
ಹಾಗಿಲ್ಲದಿದ್ದರೆ ಅದು ದೇಹಕ್ಕೆ ಅಪಾಯಕಾರಿ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಕೋಟಿ ಮಕ್ಕಳು ಭೇದಿಯಿಂದ ಬಳಲುತ್ತಾರೆ. ಆ ಪೈಕಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಮೃತಪಡುತ್ತಾರೆ. ವರ್ಷಕ್ಕೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಕಾಲರಾ ಪೀಡಿತರಾಗುತ್ತಾರೆ. ವಿಷಮಶೀತ ಜ್ವರ, ಕಾಮಾಲೆ, ಆಮಶಂಕೆ, ಜಂತುಹುಳು, ಪೋಲಿಯೊ ಮುಂತಾದ ಅನೇಕ ರೋಗ ಬರುವುದು ಕಲುಷಿತ ನೀರಿನಿಂದಲೇ.
ನಿಂತ ನೀರಿನಿಂದ ಮಲೇರಿಯಾ, ಇಲಿಜ್ವರ, ಫೈಲೇರಿಯಾ(ಆನೇಕಾಲು ರೋಗ), ಡೆಂಗೆಜ್ವರ, ಮಿದುಳುಜ್ವರ ಮುಂತಾದ ಜ್ವರಗಳ ಸಾಲೇ ಕಾಡುತ್ತದೆ. ಕಲುಷಿತ ನೀರಿನಿಂದ ಚರ್ಮರೋಗ, ಶ್ವಾಸಕೋಶ ಸಂಬಂ ಕಾಯಿಲೆ, ಪಂಚೇಂದ್ರಿಯ ಬೇನೆ ಬರುತ್ತದೆ. ರಕ್ತದೊತ್ತಡ, ಹೃದ್ರೋಗಕ್ಕೂ ನೀರೇ ಮೂಲ.
ಮೇಲ್ನೋಟಕ್ಕೆ ನಾವು ಪಟ್ಟಿ ಮಾಡ ಹೊರಟರೆ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡ ಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೊ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ. ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ. ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳು ವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ.
ಚರ್ಮ ಸಂಬಂ ರೋಗಗಳು, ಹಲ್ಲಿನ ತೊಂದರೆ ಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ.... ಇಂಥವುಗಳನ್ನು ಬಹುತೇಕರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದು ಕೊಂಡಿರುವ ಉದಾಹರಣೆಗಳೂ ಇವೆ.

ಏನಿರುತ್ತದೆ ನೀರಿನಲ್ಲಿ ?
ಏ೨೦ ಎಂದು ವೈಜ್ಞಾನಿಕ ಪರಿಭಾಷೆಯಲ್ಲಿ ಗುರುತಿಸಲಾಗುವ ನೀರಿನಲ್ಲಿ ಗಡಸು ನೀರು ಹಾಗೂ ಮೆದು ನೀರು ಎಂಬ ಎರಡು ಬಗೆ. ಆದರೆ ಇಂದು ನೀರಿನಲ್ಲಿ ಹೈಡ್ರೋಜನ್, ಆಕ್ಸಿಜನ್‌ಗಳೆರಡೇ ಉಳಿದಿಲ್ಲ. ಹಲವೆಡೆಗಳಲ್ಲಿ ದೊರಕುತ್ತಿರುವ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಹಾಗೂ ನೈಟ್ರೇಟ್, ಮೆಗ್ನೀಷಿಯಂನ ಕಾರ್ಬೊನೇಟ್, ಸಲೇಟ್, ನೈಟ್ರೇಟ್ ಅಲ್ಲದೇ ಕಬ್ಬಿಣ, ಮ್ಯಾಂಗನೀಸ್, ಅಲ್ಯುಮಿನಿಯಂ ಹೀಗೆ ಬೆರೆತಿರದ ಲವಣ ಗಳೇ ಇಲ್ಲವೆಂಬಂತಾಗಿದೆ.
ಇತ್ತೀಚೆಗೆ ರಾಜ್ಯದ ಹಲವೆಡೆ ಫ್ಲೋರೈಡ್ ಸಮಸ್ಯೆಯಾಗಿ ಕಾಡುತ್ತಿದೆ. ಅಂತರ್ಜಲ ಮಟ್ಟ ಕುಸಿದಂತೆಲ್ಲ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚುತ್ತಿದೆ. ಇದರಿಂದಾಗಿ ಎಲುಬಿಗೆ ಸಂಬಂಸಿದ ವ್ಯಾ ವ್ಯಾಪಕವಾಗುತ್ತಿದೆ. ಒಂದು ಲೀಟರ್ ಕುಡಿಯುವ ನೀರಿನಲ್ಲಿ ಒಂದು ಗ್ರಾಂ ಫ್ಲೋರೀನ್ ಇರಬೇಕು. ಆದರೆ ಈ ಜಿಲ್ಲೆಗಳ ನೀರಿನಲ್ಲಿ ೩ ಗ್ರಾಂಗಳಿಗಿಂತಲೂ ಹೆಚ್ಚು ಪ್ರಮಾಣ ಕಾಣಿಸಿಕೊಂಡಿದ್ದು ಫ್ಲೋರೋಸಿಸ್‌ನಂಥ ಅಂಗವೈಕಲ್ಯದಿಂದ ಹಲವರು ಬಳಲುತ್ತಿದ್ದಾರೆ. ಇದೇ ರೀತಿ ನೀರಿನಲ್ಲಿ ಆರ್‍ಸೆನಿಕ್, ಸೆಲೀನಿಯಂ ಇತ್ಯಾದಿಗಳ ಅಂಶಗಳ ಹೆಚ್ಚಳದಿಂದಲೂ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.
ಮಧ್ಯಮ ಗಡಸು ನೀರು ಕುಡಿಯಲು ಉತ್ತಮ. ಇಂಥ ನೀರಿನ ಸೇವನೆಯಿಂದ ಹೃದಯಾಘಾತ, ರಕ್ತದೊತ್ತಡ ಸಂಭವಿಸಲಾರದು. ಗಡಸು ನೀರನ್ನೇ ಕುಡಿಯುವುದು ಅನಿವಾರ್‍ಯವಾದಾಗ ಮನೆಯಲ್ಲಿ ನೀರನ್ನು ಕಾಯಿಸಿ. ಸುಣ್ಣ ಬೆರಸುವುದರ ಮೂಲಕ ಮೆದು ನೀರು ಮಾಡಿಕೊಳ್ಳಬಹುದು. ಸುದೀರ್ಘ ಅವಯವರೆಗೆ ಶೇಖರಿಸಿಡುವ ನೀರು ಹಾಗೂ ಬಾವಿಗಳಿಗೆ ಆಗಾಗ್ಗೆ ಅಲ್ಪಪ್ರಮಾಣದಲ್ಲಿ ಕ್ಲೋರೀನ್ ಹಾಕಿ ಶುದ್ಧೀಕರಿಸುವುದು ಉತ್ತಮ.

ಲಾಸ್ಟ್‘ಡ್ರಾಪ್’: ಬಚ್ಚಲು ಮನೆಯ ನಲ್ಲಿ ಸೋರುತ್ತಿದ್ದರೆ ಅದು ನೀರಿನ ಪೋಲಷ್ಟೇ ಅಲ್ಲ. ನೆನಪಿಡಿ, ನಿಮ್ಮ ಸೊಂಟಕ್ಕೂ ಸಂಚಕಾರ. ಏಕೆಂದರೆ ನಿರಂತರ ನೀರಿನ ಸೋರಿಕೆ ಇದ್ದ ಕಡೆ ಪಾಚಿ ಕಟ್ಟಿರುತ್ತದೆ.

Friday, April 10, 2009

ಸರ್ವ ರೋಗಕ್ಕೂ ನೀರೇ ಮದ್ದು...ಯಾಕಾಗಬಾರದು ?!

ನೀರೆಗೂ ನೀರಿಗೂ ಅವಿನಾಭಾವ ಸಂಬಂಧ. ಮನೆ ಮುನ್ನಡೆಸುವ ಗೃಹಿಣಿಗೆ ನೀರಿಲ್ಲದೇ ಒಂದು ಕ್ಷಣವೂ ಇರಲಾಗದು. ಗುಣಧರ್ಮದಲ್ಲೂ ನೀರು-ನೀರೆಯರಲ್ಲಿ ಹಲವು ಸಾಮ್ಯವಿದೆ.
ಶಾಂತ ತಿಳಿನೀರಿದ್ದಂತೆಯೇ ಹೆಣ್ಣು ಸಹ. ಆಕೆಯಲ್ಲಿ ಹುದುಗಿರಬಹುದಾದ ದಿವ್ಯ ಶಕ್ತಿಯ ಅರಿವಿರುವುದಿಲ್ಲ. ಒಂದೊಮ್ಮೆ ಆಕೆಯ ಸಂಯಮದ ಕಟ್ಟೆಯೊಡೆದರೆ ಎದುರು ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಅಂತೆಯೇ ಕಟ್ಟೆಯೊಡೆದುಕೊಂಡ ನೀರನ್ನೂ ತಡೆಯಲು ಸಾಧ್ಯವಿಲ್ಲ. ನೀರೆಂದರೆ ಅದು ಅನಂತ ಸೌಂದರ್ಯ, ಹಾಗೆಯೇ ನೀರು. ನೀರು ಬದುಕಿನ ಅನಿವಾರ್ಯತೆ, ಹಣ್ಣಿಲ್ಲದೇ ಬದುಕಿದ್ದೀತೆ ? ನೀರ ತಟದಲ್ಲಿ ಎಲ್ಲವೂ ತಂಪು ತಂಪು, ತಾಯ ಮಡಿಲಲ್ಲಿಯೂ ಹಾಗೇ ಅಲ್ಲವೇ ? ಇಂಥ ಅಪೂರ್ವ ಸಂಗಮ ನಿಸರ್ಗ ನಿಯಮಿತ. ದುರದೃಷ್ಟ ಇಂದು ನೀರಿಗಾಗಿಯೇ ಭಾರತೀಯ ನೀರೆಯರು ಸಂಕಷ್ಟದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.
ಇನ್ನು ನೀರು ಹಲವಾರು ಕಾಯಿಲೆಗಳಿಗೆ ಮದ್ದು. ಫಿಸಿಯೋಥೆರಪಿಯಲ್ಲಿ ನೀರಿಗೆ ಬಹಳ ಮಹತ್ವದ ಸ್ಥಾನವಿದೆ. (ಹೈಡ್ರೊಥೆರಪಿ) ವರ್ಲ್‌ಪೂಲ್ ಬಾಥ್, ಕಾಂಟ್ರಾಸ್ಟ್ ಬಾಥ್, ಪೂಲ್ ಥೆರಪಿ ಮುಂತಾದ ಪ್ರಕ್ರಿಯೆಗಳಿವೆ. ವರ್ಲ್‌ಪೂಲ್ ಅಂದರೆ ನೀರು ಒಂದು ನಿರ್ದಿಷ್ಟ ವೇಗದಲ್ಲಿ ಚಕ್ರಾಕಾರದಲ್ಲಿ ಸುತ್ತುತ್ತಿರುವ ಟಬ್ ಅಥವಾ ಕೊಳಾಯಿ. ಇದರಲ್ಲಿ ನೋವಿರುವ ಅಂಗವನ್ನು ಮುಳುಗಿಸಿ ಇಟ್ಟಾಗ ತಿರುಗುತ್ತಿರುವ ನೀರಿನಿಂದಾಗಿ ನೋವಿರುವ ಜಾಗಕ್ಕೆ ರಕ್ತ ಚೆನ್ನಾಗಿ ಪೂರೈಕೆಯಾಗುತ್ತದೆ. ಕಾಂಟ್ರಾಸ್ಟ್ ಬಾಥ್ ಅಂದರೆ ಮೊದಲು ಬೆಚ್ಚಿನ ನೀರಿನಲ್ಲಿ ಸುಮಾರು ೩ ನಿಮಿಷ ಕಾಲ ನೋವಿರುವ ಅಂಗವನ್ನು ಮುಳುಗಿಸಿ ಇಡುವುದು. ನಂತರ ಸಾದಾ ನೀರಿನಲ್ಲಿ ಒಂದು ನಿಮಿಷ ಮುಳುಗಿಸಿ ಇಡುವುದು. ಪೂಲ್ ಬಾಥ್ ಅಂದರೆ ದೊಡ್ಡ ಕೊಳದಲ್ಲಿ ಇಡೀ ದೇಹಕ್ಕೆ ಚಿಕಿತ್ಸೆ ನೀಡುವುದು. ಇದು ಹೈಪರ್ ಆಕ್ಟಿವ್ ಮಕ್ಕಳಿಗೆ ಒಳ್ಳೆಯ ಚಿಕಿತ್ಸೆ. ಸಂಪೂರ್ಣ ದೇಹದ ಸ್ನಾಯುಗಳು ಇದರಿಂದ ರಿಲ್ಯಾಕ್ಸ್ ಆಗುತ್ತವೆ.
ಜಲಚಿಕಿತ್ಸೆಯ ಅತ್ಯಂತ ಪ್ರಮುಖ ಅಂಶವೆಂದರೆ ನೀರಿನ ತೇಲಿಸುವ ಶಕ್ತಿ. ತನ್ನಲ್ಲಿ ಮುಳುಗಿರುವ ವಸ್ತುವನ್ನು ನೀರು ಸುಲಭ ವಾಗಿ ಮೇಲೆತ್ತುತ್ತದೆ. ರೋಗಿಗೆ ಕೈಯಲ್ಲಿ ನೋವಿದ್ದಾಗ ಕೈಯನ್ನು ಮೇಲೆ ಎತ್ತುವುದು ಕಷ್ಟ. ಗುರುತ್ವಾಕರ್ಷಣ ಬಲವೇ ಇದಕ್ಕೆ ಕಾರಣ. ಆದರೆ ನೀರಿನಲ್ಲಿ ಅದ್ದಿ ಇಟ್ಟ ಕೈಯನ್ನು ಎತ್ತುವುದು ಸುಲಭ. ನೀರಿನ ಈ ಗುಣದಿಂದಾಗಿ ಕೈಗೆ ಉತ್ತಮ ವ್ಯಾಯಾಮ ಸುಲಭವಾಗಿ ಸಿಗುತ್ತದೆ.
ನೀರಿನ ಬಗ್ಗೆ ಒಂದಷ್ಟು ಅಂಶ ನಿಮಗೂ ತಿಳಿದಿರಲಿ:
*ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಆಹಾರ ನಮ್ಮ ರಕ್ತನಾಳಕ್ಕೆ ಸೇರಲು ತುಂಬಾ ಸಹಕಾರಿ.
*ಮಳೆಗಾಲದಲ್ಲಿ ಆಲಿಕಲ್ಲನ್ನು ಹೆಕ್ಕಿಟ್ಟು ಭದ್ರಪಡಿಸಿಟ್ಟುಕೊಳ್ಳಿ. ಚರ್ಮವ್ಯಾ ಸೇರಿದಂತೆ ಹಲವು ರೋಗಕ್ಕೆ ಅದು ಮದ್ದು
*ಪ್ರತಿದಿನ ಆಲಿಕಲ್ಲಿನ ನೀರಿನಿಂದ ಮುಖ ತೊಳೆದರೆ ಸೂಕ್ಷ್ಮ ಮುಖದ ಚರ್ಮಕ್ಕೆ ರಕ್ತ ಸಂಚಾರ ಸರಾಗವಾಗಿ ಚರ್ಮ ಹೊಳೆಪುಪಡೆಯುತ್ತದೆ.
*ಆಲಿಕಲ್ಲಿನ ನೀರಿಗೆ ನಿಂಬೆ ರಸ ಸೇರಿಸಿ ದಿನಕ್ಕೆ ಎರಡು ಬಾರಿ ಮುಖ ತೊಳೆಯುತ್ತಿದ್ದರೆ ಮೂಡವೆ ಮತ್ತು ಮೊಡವೆಯಿಂದ ಉಂಟಾದ ಕಲೆಗಳು ಮಾಯವಾಗುತ್ತವೆ.
* ಆಲಿಕಲ್ಲಿನೊಂದಿಗೆ ಸೇರಿಸಿದ ನಿಂಬೆ ಹಾಗೂ ತುಳಸಿ ರಸ ಹಲವು ಚರ್ಮರೋಗಕ್ಕೂ ಮದ್ದು.
*ಬೆಳಿಗ್ಗೆ ಎದ್ದ ಕೂಡಲೇ ಬಾಯಿ ತೊಳೆದು ಖಾಲಿ ಹೊಟ್ಟೆಗೆ ನಿಮಗೆ ಸಾಧ್ಯವಾದಷ್ಟು (ಕನಿಷ್ಠ ನಾಲ್ಕರಿಂದ ಆರು ಲೋಟ) ನೀರು ಕುಡಿಯಿರಿ. ನಂತರವೂ ಸಾಧ್ಯವಾದಾಗಲೆಲ್ಲ ನೀರು ಸೇವಿಸಿ ಚರ್ಮದ ಅಂದ, ಮುಖದ ಕಾಂತಿ, ಕಣ್ಣಿನ ಹೊಳಪು ಹೆಚ್ಚುತ್ತದೆ.ದೀರ್ಘಾಯುಸ್ಸು ಖಚಿತ.
* ಗ್ಯಾಸ್‌ಟ್ರಬಲ್, ಅಸಿಡಿಟಿ ಕಾಣಿಸಿಕೊಂಡರೆ ಹೆಚ್ಚು ಹೆಚ್ಚು ತಣ್ಣನೆಯ ನೀರು ಕುಡಿಯುತ್ತ ಬನ್ನಿ. ನಿಯಂತ್ರಣಕ್ಕೆ ಬರುತ್ತದೆ.
*ನೀರು ಅಶುದ್ಧವೆನಿಸಿದರೆ ಬಿಳಿ ಬಟ್ಟೆಯಿಂದ ಸೋಸಿದರಾಯಿತು. ಅಥವಾ ಕುದಿಸಿಟ್ಟುಕೊಳ್ಳಬಹುದು. ಫಿಲ್ಟರ್ ನೀರಾದರೂ ಆಯಿತು. ಅದೆಲ್ಲ ಶುದ್ಧವಾದ ನೀರೇ ಆಗಿದ್ದು, ಉಪಯೋಗಿಸಬಹುದು. ಬದಲಾಗಿ ಬಾಟಲಿ ನೀರು ಬೇಡ.
*ಮನೆಯಲ್ಲಿಯೇ ಸ್ಕಿನ್ ಟಾನಿಕ್ ತಯಾರಿಸಿಕೊಳ್ಳಬಹುದು. ಒಂದು ಲೀಟರ್ ನೀರಿಗೆ ಇಪ್ಪತ್ತು ಫ್ರೆಷ್ ಗುಲಾಬಿಯ ದಳಗಳನ್ನು (ಬಣ್ಣ ಯಾವುದಾದರೂ ಇರಲಿ) ಹಾಕಿ ಸುಮಾರು ಹತ್ತು ನಿಮಿಷ ಕುದಿಸಿಡಿ. ಆರಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ತುಂಬಿಸಿಡಿ. ಅದೇ ರೋಸ್ ವಾಟರ್. ನೀವು ಹಣ ತೆತ್ತು ತರುವ ಅಗತ್ಯವಿಲ್ಲ.
*ಕಣ್ಣುಗಳಲ್ಲಿ ಉರಿ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದವರು ರೋಸ್ ವಾಟರ್‌ಅನ್ನು ಹತ್ತಿಯ ತುಂಡಿನಿಂದ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ರಿಲ್ಯಾಕ್ಸ್ ಆಗಿ ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಣ್ಣ ಸುತ್ತಲಿನ ಕಲೆ ಮಾಯವಾಗುವುದು.
*ಕಂದು ಇಲ್ಲವೇ ಕಪ್ಪು ಬಣ್ಣದ ತುಟಿ ಸಮಸ್ಯೆಗೆ ಪರಿಹಾರವೆಂದರೆ ರೋಸ್ ವಾಟರಿಗೆ ಪ್ರಮಾಣ ಆಧರಿಸಿ ಜೇನುತುಪ್ಪ ಬೆರೆಸಿ ದಿನಕ್ಕೆ ನಾಲ್ಕೈದು ಬಾರಿ ಸವರಿ ಕೆಂದುಟಿ ನಿಮ್ಮದಾಗುತ್ತದೆ.
ಹೆಜ್ಜಿನ ಪ್ರಮಾಣದಲ್ಲಿ ರೋಸ್ ವಾಟರ್ ತಯಾರಿಸಿಕೊಂಡು ಸ್ನಾನದ ಟಬ್ ತುಂಬಿಸಿಕೊಂಡು ಮುಳುಗಿ ರಿಲ್ಯಾಕ್ಸ್ ಆಗಿ. ಹೀಗೆ ದಿನನಿತ್ಯ ಮಾಡುವುದರಿಂದ ನಿಮ್ಮ ಚರ್ಮ ಕಾಂತಿ ಇಮ್ಮಡಿಗೊಳ್ಳುವುದರ ಜತೆ ಬಣ್ಣವೂ ಬದಲಾಗುತ್ತದೆ.
* ಸ್ನಾನದ ನೀರಿನಲ್ಲಿ ಬೇವಿನ ಎಲೆ ಹಾಕಿಡಿ. ಎಲ್ಲ ಮಾರ್ಜಕಗಳಿಗಿಂತಲೂ ಇದು ಔಷಧಯುಕ್ತ.
* ಲಾವಂಚದ ಬೇರನ್ನು ಸ್ನಾನ ಮಾಡುವಾಗ ನೀರಿಗೆ ಹಾಕಿ ಸ್ನಾನ ಮಾಡಿದರೆ ಮೈಯ ದುರ್ಗಂಧ ದೂರ. ಇದೇ ರೀತಿ ಕುಡಿಯುವ ನೀರಿಗೆ ಲಾವಂಚದ ಬೇರು, ತುಳಸಿ ಹಾಕಿಟ್ಟರೆ ಒಳಿತು.
*ಒಂದು ಲೀಟರ್ ಕುದಿಯುವ ನೀರಿಗೆ ನಾಲ್ಕು ಕಿತ್ತಳೆ ಹಣ್ಣಿನ ಸಿಪ್ಪೆ ಹಾಕಿ ಹತ್ತು ನಿಮಿಷ ಬಿಡಿ. ತಣ್ಣಗಾದ ನಂತರ ಸೋಸಿಕೊಂಡು ಬಾಟಲಿಯಲ್ಲಿ ತುಂಬಿಸಿಡಿ. ನಿಮಗೆ ಬಿಡುವಾದಾಗ ಹತ್ತಿಯ ಸಹಾಯದಿಂದ ಮುಖಕ್ಕೆ ಲೇಪಿಸಿಕೊಳ್ಳಿ. ವಿಟಮಿನ್ ಸಿ ಕಾಸು ಖರ್ಚಿಲ್ಲದೆ ಸಿಗುತ್ತದೆ.
* ನೀರು ಕುದಿಯುವಾಗ ಒಂದು ಕಟ್ಟು ಪುದೀನಾ ಸೊಪ್ಪು ಹಾಕಿ ಅದರ ಹಬೆಗೆ ಮುಖ ಒಡ್ಡಿ, ಇದರಿಂದಾಗಿ ಮುಖದಲ್ಲಿನ ಜಿಡ್ಡಿನ ಅಂಶ ಹೋಗಿ, ಬ್ಲಾಕ್ ಮತ್ತು ವೈಟ್ ಹೆಡ್ಸ್‌ಗಳು ಮೆತ್ತಗಾಗಿ ಹೊರ ಬರುವವು. ಸುಕ್ಕುಗಳು ಮಾಯವಾಗಿ ಮುಖ ಚರ್ಮ ನಯವಾಗಿ, ಕಾಂತಿಯುತವಾಗಿ ಕಾಣುವುದು. ಮೊಡವೆಗಳು ಕಾಡುವ ಭಯವಿರುವುದಿಲ್ಲ.

‘ಲಾಸ್ಟ್’ಡ್ರಾಪ್ : ನೆನಪಿಡಿ, ಅದು ಎಂಥದೇ ರೋಗವಿರಲಿ, ಎಂಥದ್ದೇ ಸಂದರ್ಭವಿರಲಿ ನೀರಿನಿಂದ ದೂರವಿರುವ ಅಗತ್ಯವಿಲ್ಲ. ಯಾವುದೇ ರೋಗಕ್ಕೆ ನೀರಿನ ಸೇವನೆ ನಿಷಿದ್ಧವಲ್ಲ.

Monday, April 6, 2009

ನೀರೆಯರ ಸೌಂದರ್ಯದ ಗುಟ್ಟೇ ನೀರು ಗೊತ್ತೆ ?

ಮುಗ್ಧ ಮುಖ, ತುಸು ನಾಚಿದರೂ ಕೆಂಪಗಾಗುವ ಕೆನ್ನೆ, ಕಣ್ಣಂಚಿನಿಂದ ಒಂದು ಹನಿ ಹೊರಗಿಣುಕಿದರೂ ಆ ನುಣ್ಣನೆಯ ಕಪಾಲದ ಮೇಲೆ ಕ್ಷಣವೂ ನಿಲ್ಲುವ ಪ್ರಶ್ನೆಯೇ ಇಲ್ಲ; ಹಾಗೊಮ್ಮೆ ಕಣ್ಣೀರು ಜಾರಿ ಕೆಳಬಂದರೂ ಆ ಸುಕೋಮಲ ಕೆನ್ನೆಗಳಲ್ಲಿ ಗೀರು ಬಿದ್ದುಬಿಡುತ್ತವೇನೋ ಎಂಬಷ್ಟರ ಮಟ್ಟಿಗೆ ಮೃದು ಮಧುರ ಚರ್ಮ. ಜಟಕಾಗಾಡಿ ಹೊಡೆಯುತ್ತ ಇಡೀ ದಿನ ಬಿರುಬಿರು ಬಿಸಿಲಲ್ಲಿ ಆ ಬಂಡೆಗಳಾವೃತ ಬೆಟ್ಟಗಳ ತುಂಬ ಸುತ್ತಿದರೂ ಆ ಮುಖದ ಕಾಂತಿಯಲ್ಲಿ ಒಂದಿನಿತೂ ಬದಲಿಲ್ಲ. ಅದೇ ಹೊಳಪು, ಅದೇ ನುಣುಪು.
ವ್ಹಾವ್, ಆ ಕಣ್ಣುಗಳೋ ಪಕ್ಕಾ ತುಂಬಿದ ಕರಿ ಸರೋವರ, ಅದರೊಳಕ್ಕೆ ನಮ್ಮ ಕಣ್ಣುಗಳ ನೆಟ್ಟು, ದಿಟ್ಟ ದಿಟ್ಟಿಯಲ್ಲಿ ಭಾವನೆಗಳ ಹುಡುಕಾಟಕ್ಕೆ ತೊಡಗಿದರೆ ಒಂದೇ, ಎರಡೇ....ಭರಪೂರ ಭಾವಯಾನ. ಆರ್ದ್ರತೆಯಲ್ಲಿ ಅದ್ದಿ ಹೋಗಿರುವ ಆ ಕಣ್ಣುಗಳೇ ಇಡೀ ಸೌಂದರ್ಯಕ್ಕೆ ಇಟ್ಟ ಕಿರೀಟ. ಅದೆಲ್ಲಿಂದ ಬಂತು ಅಂಥ ಬೆಳಕು ಆ ಕಣ್ಣುಗಳಿಗೆ ? ಇನ್ನು ತುಂಬಿದ ತುಟಿ, ಎಂಥವರಿಗೂ ಒಮ್ಮೆ ಮುದ್ದಿಸಿಬಿಡಬೇಕೆನಿಸುವ ಆ ಗಲ್ಲ, ಮಿರಿ ಮಿರಿ ಮಿಂಚುವ ನೀಳ ಕೇಶ, ಕೈ ತೊಳೆದು ಮುಟ್ಟಬೇಕೆನಿಸುವ ಮೈಬಣ್ಣ....ಆಕೆಗೆ ಆಕೆಯೇ ಸಾಟಿ...
ಹೌದು, ಆಕೆ ನಮ್ಮ ನಿಮ್ಮ ನೆಚ್ಚಿನ ಬಸಂತಿಯೇ ! ಪಕ್ಕಾ ಅದೇ ಶೋಲೆ ಚಿತ್ರದ ಬಜಾರಿ ಹೆಣ್ಣು, ಸೌಂದರ್ಯದ ಖನಿ, ಬಾಲಿವುಡ್‌ನ ಕನಸಿನ ಕನ್ಯೆ ಹೇಮಾಮಾಲಿನಿ ಬಗೆಗೇ ಹೇಳುತ್ತಿರುವುದು. ಗ್ವಾಲಿಯರ್‌ನ ಮಹಾರಾಣಿಯಾಗಿದ್ದ ವಿಜಯರಾಜೆ ಸಿಂಯಾ ಜೀವನಾಧಾರಿತ ಚಿತ್ರ ‘ಏಕ್ ಥೀ ರಾಣಿ ಐಸೀ ಭಿ’ಯಲ್ಲಿ ಚಿತ್ರೀಕರಣದಲ್ಲಿ ಇತ್ತೀಚೆಗೆ ತೊಡಗಿಕೊಂಡಿದ್ದಳಾಕೆ. ಅಂದಿನ ಶೋಲೆ(೧೯೭೫)ಯ ಬಸಂತಿ ಬಂದು ಹೋಗಿ ಏನಿಲ್ಲವೆಂದರೂ ೩೦ ವಸಂತ ಸರಿದು ಹೋಗಿವೆ. ಹೇಗೆ ನೋಡಿದರೂ ಹೇಮಾಗೆ ಈಗ ಅರವತ್ತರ ಆಸು ಪಾಸು. ಈಗಲೂ ಆಕೆ ಹಾದು ಹೋದರೆ, ತಿರುಗಿ ನೋಡದವನು ಅರಸಿಕ. ಅಂಥ ಹೇಮಾಮಾಲಿನಿಯ ಸೌಂದರ್ಯದ ಗುಟ್ಟೇನು?
ಆಕೆಯನ್ನೇ ಕೇಳಿ ನೋಡಿ. ‘ನೀರೆಯರ ಸೌಂದರ್‍ಯಕ್ಕೆ ನೀರೇ ಮದ್ದು !’ ಎನ್ನುತ್ತ ತಿಳಿನಗೆ ಚೆಲ್ಲಿ, ಕಣ್ಣು ಮಿಟುಕಿಸಿ ದಂಗು ಬಡಿಸದಿದ್ದರೆ ದೇವರಾಣೆ. ತಮ್ಮ ಚಿರಯೌವನದ ಗುಟ್ಟನ್ನು ಹೇಮಾ ಹೀಗೆ ಹೊರಗೆಡಹಿದ್ದಾರೆಂದ ಮೇಲೆ ನಂಬಲಿರಲಾದೀತೇ ?
ಯಥೇಚ್ಛ ನೀರು ಹಾಗೂ ಆರೋಗ್ಯಕರ ಜೀವನ ಪದ್ಧತಿಗಳಿಂದಾಗಿಯೇ ಆಕೆ ಇನ್ನೂ ಇಷ್ಟು ಸುಂದರಿಯಾಗಿ ಕಂಗೊಳಿಸುತ್ತಿರುವುದಾಗಿ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಿಸುತ್ತಿಲ್ಲ. ‘ನಾನು ತಂಪು ಪಾನೀಯಗಳನ್ನು ಸೇವಿಸುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ಆಕರ್ಷಕವಾಗಿರಬೇಕೆಂದರೆ ಎಲ್ಲರೂ ಹೆಚ್ಚು ನೀರು ಕುಡಿಯಬೇಕು’ ಎಂದು ತಮ್ಮ ಸೌಂದರ್‍ಯ ಸೂತ್ರ ಬಿಡಿಸಿಡುತ್ತಾರೆ ಹೇಮಾ.
ಹೇಮಾ ಮಾತು ನೂರಕ್ಕೆ ನೂರು ಸತ್ಯ. ಮತ್ತೊಂದು ಬೇಸಿಗೆ ನಮ್ಮ ಮೇಲೆ ಕೆಂಗಣ್ಣೂ ಬೀರುತ್ತ ಮುಕ್ಕರಿಸಿಕೊಂಡಿದೆ. ಹಿಂದಿನೆಲ್ಲ ವರ್ಷಗಳಿಗಿಂತ ಹೆಚ್ಚು ಪ್ರಖರತೆ ಈ ಋತುಮಾನದ ದುರದೃಷ್ಟ. ಈಗಿನ್ನು ಮಾರ್ಚ್ ಬರಲೋ ಬೇಡವೋ ಎನ್ನುತ್ತ ಕಾಲಿಡುತ್ತಿದೆ. ಈಗಲೇ ೩೦-೩೨ ಡಿಗ್ರಿ ಸೆಂಟಿಗ್ರೇಡ್ ಉಷ್ಟಾಂಶ ಎಂದ ಮೇಲೆ ಇನ್ನು ಏಪ್ರಿಲ್-ಮೇ ನ ಕತೆಯೇನೋ ಎಂಬ ಆತಂಕವೇ ಬೆವರೊಡೆಸಿ ಎಲ್ಲರನ್ನೂ ತೊಯ್ದು ತೊಪ್ಪೆಯಾಗಿಸುತ್ತಿದೆ.
ಬೇಸಿಗೆ ಬಗಲಲ್ಲೆ ಬಂದು ಬಿಡುತ್ತವೆ ಹತ್ತಾರು ಬಗೆಯ ಹಾದಿಬೀದಿಯ ರೋಗಗಳು. ಸಾಲದ್ದಕ್ಕೆ ಎಲ್ಲಿ ನೋಡಿದರೂ ಜಾತ್ರೆ-ಉತ್ಸವ, ಮದುವೆ-ಮುಂಜಿ, ಸಭೆ- ಸಮಾರಂಭಗಳು. ಪರಿಣಾಮ ಬೇಡಬೇಡವೆಂದರೂ ಸಾಕ್ರಾಮಿಕ ರೋಗಗಳು ಹುಟ್ಟಿಕೊಂಡು ಬಿಡುತ್ತವೆ. ಕ್ಲಿನಿಕ್‌ಗಳು ಭರ್ತಿ ಭರ್ತಿ. ಯಾರ ಮನೆಯಲ್ಲಿ ನೋಡಿದರೂ ಮಕ್ಕಳಿಗೆ ಹುಷಾರಿಲ್ಲ ಎಂಬ ವರಾತ. ದೊಡ್ಡವರಿಗೂ ನೆಗಡಿ, ಕೆಮ್ಮು, ಜ್ವರ- ಹೀಗೆ ಒಂದಲ್ಲಾ ಒಂದು. ‘ಛೆ, ಎಂಥ ಕೆಟ್ಟ ವೆದರ್, ಈ ಬೇಸಿಗೆ ಬಂದ್ರೆ ಸಾಕು. ಆಸ್ಪತ್ರೆಗೆ ದುಡ್ಡೋ ದುಡ್ಡು...’ಇಂಥ ಮಾತು ಯಾರಿಬ್ಬರು ಭೇಟಿಯಾದರೂ ಸಾಕು ಕೇಳಿಬಂದೇ ಬರುತ್ತದೆ.
ಹಾಗಾದರೆ ಇದೆಲ್ಲ ಹೀಗೆ ಏಕೆ ? ಯಾವುದರಿಂದ ಇಂಥ ಉಪದ್ವ್ಯಾಪ ಎಂಬ ಪ್ರಶ್ನೆ ಉತ್ತರವಾಗಿ ನಿಲ್ಲುತ್ತದೆ ನೀರು. ಹೇಮಾಮಾಲಿನಿ ಕೆನ್ನೆ ಇನ್ನೂ ಸುಕ್ಕುಗಟ್ಟದಿರುವುದಕ್ಕೂ ನೀರೇ ಕಾರಣ. ಅಂತೆಯೇ ನಮ್ಮ ನಿಮ್ಮೆಲ್ಲರ ಮುಖ ಮೂವತ್ತಕ್ಕೆಲ್ಲ ಸುಕ್ಕುಗಟ್ಟುತ್ತಿರುವುದಕ್ಕೂ ನೀರೇ ಕಾರಣ. ಮಾನವನ ಆರೋಗ್ಯಕ್ಕೂ ಬೇಸಿಗೆಗೂ, ನೀರಿಗೂ ಸಾಕಷ್ಟು ಸಂಬಂಧವಿದೆ ಎನ್ನುವುದಕ್ಕಿಂತ ಬಹುಪಾಲು ರೋಗ ಹುಟ್ಟುವುದೇ ನೀರಿನಿಂದ.
ನಿಮಗೆ ಗೊತ್ತಿದೆಯೋ ಇಲ್ಲವೋ. ಗೊತ್ತಿಲ್ಲ. ಆದರೆ ಗೊತ್ತಿರಲೇಬೇಕಾದ ಸಂಗತಿಯೆಂದರೆ ನಮ್ಮ ದೇಹದ ಒಟ್ಟಾರೆ ತೂಕದ ಅರ್ಧಪಾಲು ನೀರಿನದ್ದು ಎಂಬುದು. ನಮ್ಮ ಎಲ್ಲ ಅಂಗಾಂಗಳಿಗೆ , ಜೀವಕೋಶಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡುವ ಮತ್ತು ವ್ಯರ್ಥ ವಸ್ತುಗಳನ್ನು ಹೊರತಳ್ಳುವ ದ್ರವದಲ್ಲಿ ನೀರಿನದ್ದೇ ಸಿಂಹಪಾಲು. ನಮ್ಮ ಹೃದಯ, ಕಣ್ಣು, ಹೊಟ್ಟೆ, ಇವೆಲ್ಲದರಲ್ಲೂ ಹರಿಯುತ್ತಿರುವುದು ದ್ರವ.
ಬೇಕಿದ್ದರೆ ಯೋಚಿಸಿ ನೋಡಿ ನಾವು ಕುಡಿಯುವುದು ನೀರನ್ನೇ. ಹೊರಬಿಡುವ ಮೂತ್ರ ನೀರು. ಮೈಯಿಂದ ಹೊರಹೊಮ್ಮುವ ಬೆವರು ನೀರು. ನೀರು ಕುಡಿಯದಿದ್ದರೆ ಉಂಡದ್ದು ಅರಗುವುದಿಲ್ಲ. ನಮ್ಮ ದೇಹದೊಳಗಿನ ಕೈಕಾಲು ಸೇರಿದಂತೆ ಪ್ರತಿ ಸಂದುಗಳ ಕೀಲು ಕೆಲಸ ಮಾಡಲು ಅಗತ್ಯ ತೈಲ ಸಿದ್ಧಗೊಳ್ಳಲು ನೀರು ಬೇಕೇಬೇಕು. ಇನ್ನು ನಮ್ಮ ದೇಹದಲ್ಲಿ ಹರಿಯುವ ರಕ್ತವಂತೂ ನೀರು,ನೀರು. ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕಣ್ಣೊಳಗೆ ಮಡುಗಟ್ಟುವುದು ನೀರು, ಗಂಟಲಲ್ಲಿರುವ ಕಫ, ಮೂಗಿನೊಳಗೆ ಸುರಿಯುವ ಸಿಂಬಳ ಎಲ್ಲವೆಂದರೆ ಎಲ್ಲದರಲ್ಲೂ ನೀರನಂಶ ಇದ್ದೇ ಇರುತ್ತದೆ. ಮಾತ್ರವಲ್ಲ ಇವುಗಳಲ್ಲಿ ಯಾವೊಂದು ಏರುಪೇರಾದರೂ ಅದಕ್ಕೆ ನಾವು ಸೇವಿಸುವ ನೀರೇ ಕಾರಣ.
ಶೀತ, ಜ್ವರ,ವಾಂತಿ ಭೇದಿ..ಹೀಗೆ ನಾವು ಕಿರಿಕಿರಿ ಎಂದುಕೊಳ್ಳುವ ಸಣ್ಣಪುಟ್ಟ ಕಾಯಿಲೆಗಳೆಲ್ಲವೂ ಅವು ಉಪದ್ರವಕೊಡಲಿಕ್ಕಾಗಿಯೇ ನಮಗೆ ಬಂದಿವೆ ಎಂದುಕೊಳ್ಳಬೇಕಿಲ್ಲ. ಅದು ಹಾಗಲ್ಲವೇ ಅಲ್ಲ. ದೇಹದಲ್ಲಿನ ಜಲದ ಮಟ್ಟ ಕಾಯ್ದುಕೊಳ್ಳುವ ಸಹಜ ಪ್ರಕ್ರಿಯೆಗಳಾಗಿ ನಮಗೆ ಇಂಥ ರೋಗಭಾದೆ ಕಾಣಿಸಿಕೊಳ್ಳುತ್ತವೆ. ಯಾವಾಗ ಅದು ಮಿತಿ ಮೀರುತ್ತದೋ ಆಗ ಮಾತ್ರ ಅಪಾಯಕಾರಿಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಬರುವ ಎಲ್ಲ ರೋಗಗಳಿಗೂ ಹೆದರಬೇಕಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಿದರೆ ದೇಹದ ನೀರಿನ ಮಟ್ಟ ರಕ್ಷಿಸಿಕೊಂಡು ಇಂಥ ಕಿರಿಕಿರಿಗಳಿಂದಲೂ ಪಾರಾಗಿ ಆರಾಮವಾಗಿರಬಹುದು.


‘ಲಾಸ್ಟ್’ಡ್ರಾಪ್: ಒಬ್ಬ ಮನುಷ್ಯನ ತೂಕ ೭೦ ಕಿ.ಗ್ರಾಂ ಇದ್ದರೆ, ಆತನ ದೇಹದಲ್ಲಿ ೪೭ ಲೀಟರ್ ನೀರಿರುತ್ತದೆ.

Friday, April 3, 2009

‘ಗಡಿ’ಬಿಡಿ ಬಿಟ್ಟು ನೀರಿನ ಬಗ್ಗೆ ಯೋಚಿಸಿ

ರ-ಮರಳಿ ಮರಳುಗಾಡಿನತ್ತಲೇ ಸಾಗುತ್ತಿದ್ದೇವೆ. ಮತ್ತೆ ಮತ್ತೆ ಅದೇ ಮಾತು ಪ್ರತಿಧ್ವನಿಸುತ್ತಿದೆ; ‘ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಇರುವುದು ನಮ್ಮಲ್ಲೇ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಕರ್ನಾಟಕ ಅತಿ ಹೆಚ್ಚು ಒಣಭೂಮಿಯ ರಾಜ್ಯ ಆಗಲು ಇನ್ನು ಹೆಚ್ಚು ಕಾಲ ಉಳಿದಿಲ್ಲ,...’ ದುರದೃಷ್ಟ, ಇಂಥ ಮಾತುಗಳನ್ನು ನಾವು ಯಾವುದೋ ಕಾಲ್ಪನಿಕ ಕಾದಂಬರಿಯ ಸಾಲುಗಳೆಂಬಂತೆ ಆಸ್ವಾದಿಸಿಕೊಂಡು ಬರುತ್ತಿದ್ದೇವೆ.
ಪ್ರತಿ ವರ್ಷ ವಿಶ್ವ ಜಲದಿನದ ಸಂದರ್ಭದಲ್ಲಿ ಅವೇ ಹಳೆಯ ಅಂಕಿ ಅಂಶಗಳು, ಮತ್ತದೇ ಒಣ ಭಾಷಣಗಳು. ಈ ಭೂಮಿಯ ಮೇಲಿರುವ ನೀರಿನ ತೀರಾ ಕನಿಷ್ಠ ಭಾಗ ಮಾತ್ರ ಬಳಕೆ ಯೋಗ್ಯವೆಂತಲೋ, ಮುಂದಿನ ಮಹಾಯುದ್ಧ ನಡೆಯುವುದಿದ್ದರೆ ಅದು ನೀರಿಗಾಗಿ ಎಂತಲೋ...ಒಟ್ಟಾರೆ ಸುಂದರ ನೀರಿನ ಬಗೆಗೆ ಒಂದು ಭಯಂಕರ ಚಿತ್ರಣ ಮುಂದೊಡ್ಡಿ ಎಲ್ಲವೂ ಮುಗಿಯಿತೆಂಬಂತೆ ಹೊರಡುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ಈ ವರ್ಷವೂ ಅಂಥದ್ದೇ ಒಂದು ಜಲದಿನ(ಮಾ.೨೨)ವನ್ನು ಆಚರಿಸಿ ಮುಗಿಸಿದ್ದೇವೆ
ಇನ್ನು ಸರಕಾರಿ ಕಾರ್ಯಕ್ರಮಗಳೋ ಮಂತ್ರಿ ಮಹೋದಯರ, ರಾಜಕಾರಣಿಗಳ ಅದೇ ದೊಂಬರಾಟದಂತೆ ಕಾಣುತ್ತದೆ ಎಂದರೆ ಆಶ್ಚರ್ಯಪಡಬೇಕಿಲ್ಲ. ನೀರಿನ ಬಗೆಗೆ ಕನಿಷ್ಠ ಕಾಳಜಿಯನ್ನೂ ಹೊಂದಿಲ್ಲದ, ಪುಟ್ಟ ಪುಟ್ಟ ಮಾಹಿತಿಗಳನ್ನೂ ಹೊಂದಿರದ ನಮ್ಮ ಜನಪ್ರತಿನೀಗಳೆನಿಸಿಕೊಂಡವರು, ರಾಜ್ಯವನ್ನು ನಂದನವನವನ್ನಾಗಿಸುವ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಇವು ಕಡ್ಡಾಯ ಪರಂಪರೆಯೆಂಬಂತಾಗಿ ಬಿಟ್ಟಿವೆ. ಅದಿಲ್ಲದಿದ್ದರೆ ನಮ್ಮ ನೀರಾವರಿ ಯೋಜನೆಗಳು ವಿಳಂಬದ ದಾಖಲೆಗಳನ್ನು ಬರೆಯುತ್ತಿರಲಿಲ್ಲ.
ಇಷ್ಟಕ್ಕೂ ನೀರಿಗಾಗಿ ಒಂದು ದಿನ ಎಂಬುದು ನಿಗದಿಯಾದದ್ದು ಯಾವಾಗ ? ಅದು ೧೯೯೨ರ ಡಿಸೆಂಬರ್ ೨೨. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನಡೆಯುತ್ತಿತ್ತು. ವಿಶ್ವಾದ್ಯಂತ ಜಲಾಭಾವದ ಬಗೆಗೆ ತೀವ್ರ ಚರ್ಚೆ ಎದ್ದಿತ್ತು. ಅರಿವಿನ ಕೊರತೆಯೇ ನೀರಿನ ನಿರ್ವಣೆಯಲ್ಲಿನ ವೈಫಲ್ಯಕ್ಕೆ ಕಾರಣವೆಂಬ ವಾದವನ್ನು ತಜ್ಞರು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಲ ಜಾಗೃತಿಗಾಗಿ ಪ್ರತಿವರ್ಷ ಮಾರ್ಚ್ ೨೨ರಂದು ವಿಶ್ವ ನೀರಿನ ದಿನವನ್ನಾಗಿ ವಿಶ್ವವ್ಯಾಪಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಮಾತ್ರವಲ್ಲ, ಎಲ್ಲ ಕ್ಷೇತ್ರಗಳಂತೆಯೇ ನೀರಿನ ಬಗೆಗೂ ವರ್ಷಕ್ಕೊಂದು ಘೋಷವಾಕ್ಯವನ್ನು ಹೊರಡಿಸಲು ತೀರ್ಮಾನಿಸಲಾಯಿತು. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯದ ಯುನೆಸ್ಕೋ ನೇತೃತ್ವದಲ್ಲಿ ಪ್ರತಿ ವರ್ಷ ಇಂಥದ್ದೊಂದು ನುಡಿಮುತ್ತಿನೊಂದಿಗೆ ಪ್ರಚಲಿತ ಜಲ ಸಮಸ್ಯೆಯ ಬಗೆಗೆ ಗಮನ ಸೆಳೆಯಲಾಗುತ್ತಿದೆ.
ಅಷ್ಟಕ್ಕೇ ಮುಗಿಯಲಿಲ್ಲ. ಅದೇ ವರ್ಷ ಬ್ರೆಜಿಲ್ ದೇಶದ ರಿಯೋ-ಡಿ ಜನೈರೋದಲ್ಲಿ ಜೂನ್ ೩ರಿಂದ ೧೪ರವರೆಗೆ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನ ನಡೆಯಿತು. ಅದರಲ್ಲಿ ಜಲಸಂಪನ್ಮೂಲದ ಬಗೆಗೆ ಗೊತ್ತುವಳಿಯೊಂದನ್ನೂ ಸ್ವೀಕರಿಸಲಾಯಿತು.೧೭೮ ದೇಶಗಳ ಪ್ರತಿನಿಗಳು ಅಲ್ಲಿದ್ದರು. ಎಲ್ಲ ದೇಶಗಳು ತಮ್ಮ ತಮ್ಮ ದೇಶಗಳ ನೀರಿನ ಸಮಸ್ಯೆಗಳ ಮುಂದಿಟ್ಟು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗಸೂಚಿಯೊಂದನ್ನು ರೂಪಿಸಲು ನಿರ್ಧರಿಸಿದವು. ಪ್ರಾದೇಶಿಕ ಕ್ರಿಯಾ ಯೋಜನೆ ರೂಪಿಸುವುದು ಇದರ ಮೊದಲ ಆದ್ಯತೆ. ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸಮ್ಮೇಳನ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರಗಳ ಪ್ರದರ್ಶನ...ಹೀಗೆ ಒಟ್ಟಾರೆಯಾಗಿ ಜನಜಾಗೃತಿಯ ಹಲವು ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಯಿತು. ಅಂತಿಮ ಕಾರ್ಯಸೂಚಿಯನ್ನು ಸಮಾವೇಶದ ಮುಂದಿಟ್ಟು ಗೊತ್ತುವಳಿ ಸ್ವೀಕರಿಸಲಾಯಿತು. ಸುಸ್ಥಿರ ಅರಣ್ಯ ವ್ಯವಸ್ಥಾಪನೆಯ ಜತೆಗೆ ಒಡಂಬಡಿಕೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಅದೇ ವರ್ಷ ಡಿಸೆಂಬರ್‌ನಲ್ಲಿ ‘ಸುಸ್ಥಿರ ಅಭಿವೃದ್ಧಿ ಆಯೋಗ’ವನ್ನು ಸಹ ರಚಿಸಲಾಯಿತು. ೧೯೯೭ರಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜಾಗತಿಕ ಅಭಿವೃದ್ಧಿ ಕುರಿತು ಪರಾಮರ್ಶಿಸಬೇಕೆಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.
ಈ ವರ್ಷದ ಘೋಷವಾಕ್ಯ ‘ಗಡಿಯಾಚೆಗಿನ ನೀರು’. ನೀರಿನ ಎಲ್ಲ ಸಮಸ್ಯೆಗಳ ಜತೆಗೆ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಬಾಧುತ್ತಿರುವ ಇನ್ನೊಂದು ವಿಚಾರ ಜಲ ವಿವಾದ. ಎರಡು ದೇಶ, ಎರಡು ರಾಜ್ಯ...ಕೊನೆಗೆ ಎರಡು ಹಳ್ಳಿಗಳ ನಡುವೆ ಸಹ ನೀರಿನ ಹಂಚಿಕೆಯ ವಿಷಯದಲ್ಲಿ ಸಂಘರ್ಷ ಮಾಮೂಲು ಎಂಬಂತಾಗಿದೆ. ಜಲ ವಿವಾದಕ್ಕೆ ಬೃಹತ್ ಇತಿಹಾಸವೇ ಇದೆ. ಒಂದು ಅಂಕಿ ಸಂಖ್ಯೆಯ ಪ್ರಕಾರ ಜಗತ್ತಿನ ಜನಸಂಖ್ಯೆಯ ಶೇ.೪೦ರಷ್ಟು ಜನ ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳ ಮಧ್ಯೆ ಹರಿಯುವ ನದಿದಂಡೆಗಳ ಮೇಲೆ ವಾಸಿಸುತ್ತಿದ್ದಾರೆ. ಆ ನೀರನ್ನು ಹಂಚಿಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನೀರಾವರಿ ಯೋಜನೆಗಳು ರೂಪುಗೊಂಡಾಗ ಸಹಜವಾಗಿ ಆಕ್ಷೇಪ ವ್ಯಕ್ತವಾಗುತ್ತದೆ. ಜನಸಂಖ್ಯೆಯ ಹೆಚ್ಚಳ, ಕೈಗಾರಿಕೆಗಳ ದಟ್ಟಣೆ, ನಗರೀಕರಣದ ಪರಿಣಾಮದಿಂದ ನೀರಿನ ಬೇಡಿಕೆ ಒಂದೆಡೆ ಹೆಚ್ಚುತ್ತಿದೆ. ಇನ್ನೊಂದೆಡೆ ಜಲ ಮಾಲಿನ್ಯದ ಪ್ರಮಾಣವೂ ತೀವ್ರಗೊಳ್ಳುತ್ತಿದೆ. ಇದರಿಂದ ಜಲತಂಟೆ ಮುಗಿಯದ ಕತೆಯಾಗಿದೆ.
ಕಳೆದ ೬೦ ವರ್ಷಗಳಲ್ಲಿ ಈ ಜಗತ್ತಿನ ನಾನಾ ದೇಶಗಳ ಮಧ್ಯೆ ಒಟ್ಟು ೩೦೦ಕ್ಕೂ ಹೆಚ್ಚು ‘ಜಲಬಂಧ’ ಗಳಾಗಿವೆ. ಅವುಗಳಲ್ಲಿ ಶೇ ೧೦ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಹಿಂಸೆ, ಘರ್ಷಣೆ ನಡೆದಿದೆ ಎಂಬುದು ಗಮನಾರ್ಹ. ನೀರೆಂಬುದು ಸೌಹಾರ್ದದ ಮಾಧ್ಯಮವಾಗಬೇಕೇ ಹೊರತು ಸಮಸ್ಯೆಯನ್ನು ಹುಟ್ಟುಹಾಕಬಾರದು. ಈ ಸತ್ಯವನ್ನು ಮನವರಿಕೆ ಮಾಡಿಕೊಡಬೇಕೆಂಬುದೇ ಈ ವರ್ಷದ ಘೋಷಣೆಯ ಉದ್ದೇಶ.
ವಿಶೇಷವೆಂದರೆ ೨೬೩ ಅಂತಾರಾಷ್ಟ್ರೀಯ ಜಲಮೂಲಗಳು ಹಾಗೂ ೨೭೦ಕ್ಕೂ ಹೆಚ್ಚು ಅಂತರ್ಜಲ ಸಂಗ್ರಹಗಳು ಜಲವಿವಾದದ ಮೂಲವಾಗಿವೆ. ವಿಶ್ವಸಂಸ್ಥೆಯ ಮಟ್ಟದಲ್ಲಿ ಈ ಪರಿ ಒಡಂಬಡಿಕೆಗಳು ಆಗಿದ್ದರೂ ಫಲ ಶೂನ್ಯ ಎಂಬುದಕ್ಕೆ ಇದೇ ಸಾಕ್ಷಿ. ಗಡಿಯಾಚೆಗಿನ ನೀರಿನ ಸಮರ್ಥ ನಿರ್ವಹಣೆಗಾಗಿ ಪರಸ್ಪರ ದೇಶಗಳ ಸಹಕರವೇ ಬುನಾದಿ. ಆಗ ಮಾತ್ರ ಜಾಗತಿಕ ಮಟ್ಟದಲ್ಲಿ ಶಾಂತಿ, ಅಭಿವೃದ್ಧಿ ಎರಡರ ಸಾಧನೆಯೂ ಸಾಧ್ಯ.
ರಾಷ್ಟ್ರಗಳ ಮಟ್ಟದಲ್ಲಿ ರಾಜಕೀಯ, ಆರ್ಥಿಕ ಹಾಗೂ ಅಭಿವೃದ್ಧಿಯ ಚಿಂತನೆಗಳು ವಿಭಿನ್ನವಾಗಿರುತ್ತವೆ ನಿಜ. ಆದರೆ ಅದು ಸಂಘರ್ಷಕ್ಕೆ ಎಡೆಮಾಡದೆ ಪೂರಕವಾಗಬೇಕು. ಅದಿಲ್ಲದಿದ್ದರೆ ಯಾರ ಅಗತ್ಯವನ್ನೂ ಪೂರೈಸಲಾಗದು. ಈ ಹಿನ್ನೆಲೆಯಲ್ಲಿ ನೋಡಿದಾಗ ನಾವು ಬೃಹತ್ ನೀರಾವರಿ ಯೋಜನೆಗಳತ್ತಲೇ ಮುಖ ಮಾಡಿ ಕುಳಿತುಕೊಂಡಿದ್ದೇ ಎಲ್ಲ ಸಮಸ್ಯೆಗಳಿಗೆ ಮೂಲವಾಗಿ ಗೋಚರಿಸುತ್ತದೆ. ಸ್ಥಳೀಯ, ಸಣ್ಣ ಜಲಮೂಲಗಳು ನಮ್ಮ ಕಣ್ಣಿಗೆ ಕಂಡೇ ಇಲ್ಲ. ಅವುಗಳ ಸಂರಕ್ಷಣೆ ನಮಗೆ ಆದ್ಯತೆಯಾಗಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಲೆಕ್ಕಾಚಾರದ ಬೃಹತ್ ಯೋಜನೆಗಳು. ಅವುಗಳಿಗೆ ನೀಡುವ ಪ್ರಾಮುಖ್ಯವನ್ನು ಸಣ್ಣ ನೀರಾವರಿ ಯೋಜನೆಗಳಿಗೆ ನೀಡಿಯೇ ಇಲ್ಲ. ಹೀಗಾಗಿಯೇ ಜಲ ವಿವಾದಗಳು ಬೆಳೆಯುತ್ತಲೇ ಹೋಗುತ್ತಿವೆ.
ಯೋಜನೆಗಳ ಆಡಂಬರವೇ ಬೇರೆ, ಸಕಾಲಕ್ಕೆ ಒದಗುವ, ಸ್ಥಳೀಯರೇ ರೂಪಿಸಿಕೊಳ್ಳಬಹುದಾದ, ಸುಲಭ ಪರಿಹಾರ ಮಾರ್ಗಗಳೇ ಬೇರೆ. ಭಾರಿ ತಂತ್ರಜ್ಞಾನ, ಬೃಹತ್ ಬಜೆಟ್‌ನ ಗುಂಗಿನಲ್ಲೇ ಮುಳುಗಿರುವ ಆಡಳಿತಶಾಹಿಗೆ ಇದರ ಲಾಭದ ಅರ್ಥ ಈವರೆಗೂ ಆದಂತಿಲ್ಲ. ಸಣ್ಣ ಸಣ್ಣ ಯೋಜನೆಗಳಿಂದ ಮುಳುಗಡೆ, ಅರಣ್ಯ ಭೂಮಿ ನಾಶ ಇಲ್ಲ. ಹೆಚ್ಚು ಸಮಯ ಮತ್ತು ಹಣ ವ್ಯರ್ಥವಾಗದು. ಪ್ರಾಕೃತಿಕ ಏರಿಳಿತದಂತಹ ಸಮಸ್ಯೆ ಇಲ್ಲವೇ ಇಲ್ಲ. ಜಲ ವಿವಾದಗಳಿಗೆ ಆಸ್ಪದವೇ ಇಲ್ಲ ಎಂಬುದನ್ನು ಮನಗಾಣಬೇಕು.
‘ಲಾಸ್ಟ್’ಡ್ರಾಪ್: ಕೆರೆ ಬರಿದಾದಾಗಲೇ ನೀರಿನ ಅಗತ್ಯ ಅರಿವಾಗುವುದು.