ಮರ-ಮರಳಿ ಮರಳುಗಾಡಿನತ್ತಲೇ ಸಾಗುತ್ತಿದ್ದೇವೆ. ಮತ್ತೆ ಮತ್ತೆ ಅದೇ ಮಾತು ಪ್ರತಿಧ್ವನಿಸುತ್ತಿದೆ; ‘ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಇರುವುದು ನಮ್ಮಲ್ಲೇ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಕರ್ನಾಟಕ ಅತಿ ಹೆಚ್ಚು ಒಣಭೂಮಿಯ ರಾಜ್ಯ ಆಗಲು ಇನ್ನು ಹೆಚ್ಚು ಕಾಲ ಉಳಿದಿಲ್ಲ,...’ ದುರದೃಷ್ಟ, ಇಂಥ ಮಾತುಗಳನ್ನು ನಾವು ಯಾವುದೋ ಕಾಲ್ಪನಿಕ ಕಾದಂಬರಿಯ ಸಾಲುಗಳೆಂಬಂತೆ ಆಸ್ವಾದಿಸಿಕೊಂಡು ಬರುತ್ತಿದ್ದೇವೆ.
ಪ್ರತಿ ವರ್ಷ ವಿಶ್ವ ಜಲದಿನದ ಸಂದರ್ಭದಲ್ಲಿ ಅವೇ ಹಳೆಯ ಅಂಕಿ ಅಂಶಗಳು, ಮತ್ತದೇ ಒಣ ಭಾಷಣಗಳು. ಈ ಭೂಮಿಯ ಮೇಲಿರುವ ನೀರಿನ ತೀರಾ ಕನಿಷ್ಠ ಭಾಗ ಮಾತ್ರ ಬಳಕೆ ಯೋಗ್ಯವೆಂತಲೋ, ಮುಂದಿನ ಮಹಾಯುದ್ಧ ನಡೆಯುವುದಿದ್ದರೆ ಅದು ನೀರಿಗಾಗಿ ಎಂತಲೋ...ಒಟ್ಟಾರೆ ಸುಂದರ ನೀರಿನ ಬಗೆಗೆ ಒಂದು ಭಯಂಕರ ಚಿತ್ರಣ ಮುಂದೊಡ್ಡಿ ಎಲ್ಲವೂ ಮುಗಿಯಿತೆಂಬಂತೆ ಹೊರಡುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ಈ ವರ್ಷವೂ ಅಂಥದ್ದೇ ಒಂದು ಜಲದಿನ(ಮಾ.೨೨)ವನ್ನು ಆಚರಿಸಿ ಮುಗಿಸಿದ್ದೇವೆ
ಇನ್ನು ಸರಕಾರಿ ಕಾರ್ಯಕ್ರಮಗಳೋ ಮಂತ್ರಿ ಮಹೋದಯರ, ರಾಜಕಾರಣಿಗಳ ಅದೇ ದೊಂಬರಾಟದಂತೆ ಕಾಣುತ್ತದೆ ಎಂದರೆ ಆಶ್ಚರ್ಯಪಡಬೇಕಿಲ್ಲ. ನೀರಿನ ಬಗೆಗೆ ಕನಿಷ್ಠ ಕಾಳಜಿಯನ್ನೂ ಹೊಂದಿಲ್ಲದ, ಪುಟ್ಟ ಪುಟ್ಟ ಮಾಹಿತಿಗಳನ್ನೂ ಹೊಂದಿರದ ನಮ್ಮ ಜನಪ್ರತಿನೀಗಳೆನಿಸಿಕೊಂಡವರು, ರಾಜ್ಯವನ್ನು ನಂದನವನವನ್ನಾಗಿಸುವ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಇವು ಕಡ್ಡಾಯ ಪರಂಪರೆಯೆಂಬಂತಾಗಿ ಬಿಟ್ಟಿವೆ. ಅದಿಲ್ಲದಿದ್ದರೆ ನಮ್ಮ ನೀರಾವರಿ ಯೋಜನೆಗಳು ವಿಳಂಬದ ದಾಖಲೆಗಳನ್ನು ಬರೆಯುತ್ತಿರಲಿಲ್ಲ.
ಇಷ್ಟಕ್ಕೂ ನೀರಿಗಾಗಿ ಒಂದು ದಿನ ಎಂಬುದು ನಿಗದಿಯಾದದ್ದು ಯಾವಾಗ ? ಅದು ೧೯೯೨ರ ಡಿಸೆಂಬರ್ ೨೨. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನಡೆಯುತ್ತಿತ್ತು. ವಿಶ್ವಾದ್ಯಂತ ಜಲಾಭಾವದ ಬಗೆಗೆ ತೀವ್ರ ಚರ್ಚೆ ಎದ್ದಿತ್ತು. ಅರಿವಿನ ಕೊರತೆಯೇ ನೀರಿನ ನಿರ್ವಣೆಯಲ್ಲಿನ ವೈಫಲ್ಯಕ್ಕೆ ಕಾರಣವೆಂಬ ವಾದವನ್ನು ತಜ್ಞರು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಲ ಜಾಗೃತಿಗಾಗಿ ಪ್ರತಿವರ್ಷ ಮಾರ್ಚ್ ೨೨ರಂದು ವಿಶ್ವ ನೀರಿನ ದಿನವನ್ನಾಗಿ ವಿಶ್ವವ್ಯಾಪಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಮಾತ್ರವಲ್ಲ, ಎಲ್ಲ ಕ್ಷೇತ್ರಗಳಂತೆಯೇ ನೀರಿನ ಬಗೆಗೂ ವರ್ಷಕ್ಕೊಂದು ಘೋಷವಾಕ್ಯವನ್ನು ಹೊರಡಿಸಲು ತೀರ್ಮಾನಿಸಲಾಯಿತು. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯದ ಯುನೆಸ್ಕೋ ನೇತೃತ್ವದಲ್ಲಿ ಪ್ರತಿ ವರ್ಷ ಇಂಥದ್ದೊಂದು ನುಡಿಮುತ್ತಿನೊಂದಿಗೆ ಪ್ರಚಲಿತ ಜಲ ಸಮಸ್ಯೆಯ ಬಗೆಗೆ ಗಮನ ಸೆಳೆಯಲಾಗುತ್ತಿದೆ.
ಅಷ್ಟಕ್ಕೇ ಮುಗಿಯಲಿಲ್ಲ. ಅದೇ ವರ್ಷ ಬ್ರೆಜಿಲ್ ದೇಶದ ರಿಯೋ-ಡಿ ಜನೈರೋದಲ್ಲಿ ಜೂನ್ ೩ರಿಂದ ೧೪ರವರೆಗೆ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನ ನಡೆಯಿತು. ಅದರಲ್ಲಿ ಜಲಸಂಪನ್ಮೂಲದ ಬಗೆಗೆ ಗೊತ್ತುವಳಿಯೊಂದನ್ನೂ ಸ್ವೀಕರಿಸಲಾಯಿತು.೧೭೮ ದೇಶಗಳ ಪ್ರತಿನಿಗಳು ಅಲ್ಲಿದ್ದರು. ಎಲ್ಲ ದೇಶಗಳು ತಮ್ಮ ತಮ್ಮ ದೇಶಗಳ ನೀರಿನ ಸಮಸ್ಯೆಗಳ ಮುಂದಿಟ್ಟು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗಸೂಚಿಯೊಂದನ್ನು ರೂಪಿಸಲು ನಿರ್ಧರಿಸಿದವು. ಪ್ರಾದೇಶಿಕ ಕ್ರಿಯಾ ಯೋಜನೆ ರೂಪಿಸುವುದು ಇದರ ಮೊದಲ ಆದ್ಯತೆ. ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸಮ್ಮೇಳನ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರಗಳ ಪ್ರದರ್ಶನ...ಹೀಗೆ ಒಟ್ಟಾರೆಯಾಗಿ ಜನಜಾಗೃತಿಯ ಹಲವು ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಯಿತು. ಅಂತಿಮ ಕಾರ್ಯಸೂಚಿಯನ್ನು ಸಮಾವೇಶದ ಮುಂದಿಟ್ಟು ಗೊತ್ತುವಳಿ ಸ್ವೀಕರಿಸಲಾಯಿತು. ಸುಸ್ಥಿರ ಅರಣ್ಯ ವ್ಯವಸ್ಥಾಪನೆಯ ಜತೆಗೆ ಒಡಂಬಡಿಕೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಅದೇ ವರ್ಷ ಡಿಸೆಂಬರ್‌ನಲ್ಲಿ ‘ಸುಸ್ಥಿರ ಅಭಿವೃದ್ಧಿ ಆಯೋಗ’ವನ್ನು ಸಹ ರಚಿಸಲಾಯಿತು. ೧೯೯೭ರಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜಾಗತಿಕ ಅಭಿವೃದ್ಧಿ ಕುರಿತು ಪರಾಮರ್ಶಿಸಬೇಕೆಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.
ಈ ವರ್ಷದ ಘೋಷವಾಕ್ಯ ‘ಗಡಿಯಾಚೆಗಿನ ನೀರು’. ನೀರಿನ ಎಲ್ಲ ಸಮಸ್ಯೆಗಳ ಜತೆಗೆ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಬಾಧುತ್ತಿರುವ ಇನ್ನೊಂದು ವಿಚಾರ ಜಲ ವಿವಾದ. ಎರಡು ದೇಶ, ಎರಡು ರಾಜ್ಯ...ಕೊನೆಗೆ ಎರಡು ಹಳ್ಳಿಗಳ ನಡುವೆ ಸಹ ನೀರಿನ ಹಂಚಿಕೆಯ ವಿಷಯದಲ್ಲಿ ಸಂಘರ್ಷ ಮಾಮೂಲು ಎಂಬಂತಾಗಿದೆ. ಜಲ ವಿವಾದಕ್ಕೆ ಬೃಹತ್ ಇತಿಹಾಸವೇ ಇದೆ. ಒಂದು ಅಂಕಿ ಸಂಖ್ಯೆಯ ಪ್ರಕಾರ ಜಗತ್ತಿನ ಜನಸಂಖ್ಯೆಯ ಶೇ.೪೦ರಷ್ಟು ಜನ ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳ ಮಧ್ಯೆ ಹರಿಯುವ ನದಿದಂಡೆಗಳ ಮೇಲೆ ವಾಸಿಸುತ್ತಿದ್ದಾರೆ. ಆ ನೀರನ್ನು ಹಂಚಿಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನೀರಾವರಿ ಯೋಜನೆಗಳು ರೂಪುಗೊಂಡಾಗ ಸಹಜವಾಗಿ ಆಕ್ಷೇಪ ವ್ಯಕ್ತವಾಗುತ್ತದೆ. ಜನಸಂಖ್ಯೆಯ ಹೆಚ್ಚಳ, ಕೈಗಾರಿಕೆಗಳ ದಟ್ಟಣೆ, ನಗರೀಕರಣದ ಪರಿಣಾಮದಿಂದ ನೀರಿನ ಬೇಡಿಕೆ ಒಂದೆಡೆ ಹೆಚ್ಚುತ್ತಿದೆ. ಇನ್ನೊಂದೆಡೆ ಜಲ ಮಾಲಿನ್ಯದ ಪ್ರಮಾಣವೂ ತೀವ್ರಗೊಳ್ಳುತ್ತಿದೆ. ಇದರಿಂದ ಜಲತಂಟೆ ಮುಗಿಯದ ಕತೆಯಾಗಿದೆ.
ಕಳೆದ ೬೦ ವರ್ಷಗಳಲ್ಲಿ ಈ ಜಗತ್ತಿನ ನಾನಾ ದೇಶಗಳ ಮಧ್ಯೆ ಒಟ್ಟು ೩೦೦ಕ್ಕೂ ಹೆಚ್ಚು ‘ಜಲಬಂಧ’ ಗಳಾಗಿವೆ. ಅವುಗಳಲ್ಲಿ ಶೇ ೧೦ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಹಿಂಸೆ, ಘರ್ಷಣೆ ನಡೆದಿದೆ ಎಂಬುದು ಗಮನಾರ್ಹ. ನೀರೆಂಬುದು ಸೌಹಾರ್ದದ ಮಾಧ್ಯಮವಾಗಬೇಕೇ ಹೊರತು ಸಮಸ್ಯೆಯನ್ನು ಹುಟ್ಟುಹಾಕಬಾರದು. ಈ ಸತ್ಯವನ್ನು ಮನವರಿಕೆ ಮಾಡಿಕೊಡಬೇಕೆಂಬುದೇ ಈ ವರ್ಷದ ಘೋಷಣೆಯ ಉದ್ದೇಶ.
ವಿಶೇಷವೆಂದರೆ ೨೬೩ ಅಂತಾರಾಷ್ಟ್ರೀಯ ಜಲಮೂಲಗಳು ಹಾಗೂ ೨೭೦ಕ್ಕೂ ಹೆಚ್ಚು ಅಂತರ್ಜಲ ಸಂಗ್ರಹಗಳು ಜಲವಿವಾದದ ಮೂಲವಾಗಿವೆ. ವಿಶ್ವಸಂಸ್ಥೆಯ ಮಟ್ಟದಲ್ಲಿ ಈ ಪರಿ ಒಡಂಬಡಿಕೆಗಳು ಆಗಿದ್ದರೂ ಫಲ ಶೂನ್ಯ ಎಂಬುದಕ್ಕೆ ಇದೇ ಸಾಕ್ಷಿ. ಗಡಿಯಾಚೆಗಿನ ನೀರಿನ ಸಮರ್ಥ ನಿರ್ವಹಣೆಗಾಗಿ ಪರಸ್ಪರ ದೇಶಗಳ ಸಹಕರವೇ ಬುನಾದಿ. ಆಗ ಮಾತ್ರ ಜಾಗತಿಕ ಮಟ್ಟದಲ್ಲಿ ಶಾಂತಿ, ಅಭಿವೃದ್ಧಿ ಎರಡರ ಸಾಧನೆಯೂ ಸಾಧ್ಯ.
ರಾಷ್ಟ್ರಗಳ ಮಟ್ಟದಲ್ಲಿ ರಾಜಕೀಯ, ಆರ್ಥಿಕ ಹಾಗೂ ಅಭಿವೃದ್ಧಿಯ ಚಿಂತನೆಗಳು ವಿಭಿನ್ನವಾಗಿರುತ್ತವೆ ನಿಜ. ಆದರೆ ಅದು ಸಂಘರ್ಷಕ್ಕೆ ಎಡೆಮಾಡದೆ ಪೂರಕವಾಗಬೇಕು. ಅದಿಲ್ಲದಿದ್ದರೆ ಯಾರ ಅಗತ್ಯವನ್ನೂ ಪೂರೈಸಲಾಗದು. ಈ ಹಿನ್ನೆಲೆಯಲ್ಲಿ ನೋಡಿದಾಗ ನಾವು ಬೃಹತ್ ನೀರಾವರಿ ಯೋಜನೆಗಳತ್ತಲೇ ಮುಖ ಮಾಡಿ ಕುಳಿತುಕೊಂಡಿದ್ದೇ ಎಲ್ಲ ಸಮಸ್ಯೆಗಳಿಗೆ ಮೂಲವಾಗಿ ಗೋಚರಿಸುತ್ತದೆ. ಸ್ಥಳೀಯ, ಸಣ್ಣ ಜಲಮೂಲಗಳು ನಮ್ಮ ಕಣ್ಣಿಗೆ ಕಂಡೇ ಇಲ್ಲ. ಅವುಗಳ ಸಂರಕ್ಷಣೆ ನಮಗೆ ಆದ್ಯತೆಯಾಗಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಲೆಕ್ಕಾಚಾರದ ಬೃಹತ್ ಯೋಜನೆಗಳು. ಅವುಗಳಿಗೆ ನೀಡುವ ಪ್ರಾಮುಖ್ಯವನ್ನು ಸಣ್ಣ ನೀರಾವರಿ ಯೋಜನೆಗಳಿಗೆ ನೀಡಿಯೇ ಇಲ್ಲ. ಹೀಗಾಗಿಯೇ ಜಲ ವಿವಾದಗಳು ಬೆಳೆಯುತ್ತಲೇ ಹೋಗುತ್ತಿವೆ.
ಯೋಜನೆಗಳ ಆಡಂಬರವೇ ಬೇರೆ, ಸಕಾಲಕ್ಕೆ ಒದಗುವ, ಸ್ಥಳೀಯರೇ ರೂಪಿಸಿಕೊಳ್ಳಬಹುದಾದ, ಸುಲಭ ಪರಿಹಾರ ಮಾರ್ಗಗಳೇ ಬೇರೆ. ಭಾರಿ ತಂತ್ರಜ್ಞಾನ, ಬೃಹತ್ ಬಜೆಟ್‌ನ ಗುಂಗಿನಲ್ಲೇ ಮುಳುಗಿರುವ ಆಡಳಿತಶಾಹಿಗೆ ಇದರ ಲಾಭದ ಅರ್ಥ ಈವರೆಗೂ ಆದಂತಿಲ್ಲ. ಸಣ್ಣ ಸಣ್ಣ ಯೋಜನೆಗಳಿಂದ ಮುಳುಗಡೆ, ಅರಣ್ಯ ಭೂಮಿ ನಾಶ ಇಲ್ಲ. ಹೆಚ್ಚು ಸಮಯ ಮತ್ತು ಹಣ ವ್ಯರ್ಥವಾಗದು. ಪ್ರಾಕೃತಿಕ ಏರಿಳಿತದಂತಹ ಸಮಸ್ಯೆ ಇಲ್ಲವೇ ಇಲ್ಲ. ಜಲ ವಿವಾದಗಳಿಗೆ ಆಸ್ಪದವೇ ಇಲ್ಲ ಎಂಬುದನ್ನು ಮನಗಾಣಬೇಕು.
‘ಲಾಸ್ಟ್’ಡ್ರಾಪ್: ಕೆರೆ ಬರಿದಾದಾಗಲೇ ನೀರಿನ ಅಗತ್ಯ ಅರಿವಾಗುವುದು.
ಸಮ್ಮನಸ್ಸಿಗೆ ಶರಣು
3 months ago
1 comment:
Kannada Blogs at One Place
Post a Comment