Friday, April 10, 2009

ಸರ್ವ ರೋಗಕ್ಕೂ ನೀರೇ ಮದ್ದು...ಯಾಕಾಗಬಾರದು ?!

ನೀರೆಗೂ ನೀರಿಗೂ ಅವಿನಾಭಾವ ಸಂಬಂಧ. ಮನೆ ಮುನ್ನಡೆಸುವ ಗೃಹಿಣಿಗೆ ನೀರಿಲ್ಲದೇ ಒಂದು ಕ್ಷಣವೂ ಇರಲಾಗದು. ಗುಣಧರ್ಮದಲ್ಲೂ ನೀರು-ನೀರೆಯರಲ್ಲಿ ಹಲವು ಸಾಮ್ಯವಿದೆ.
ಶಾಂತ ತಿಳಿನೀರಿದ್ದಂತೆಯೇ ಹೆಣ್ಣು ಸಹ. ಆಕೆಯಲ್ಲಿ ಹುದುಗಿರಬಹುದಾದ ದಿವ್ಯ ಶಕ್ತಿಯ ಅರಿವಿರುವುದಿಲ್ಲ. ಒಂದೊಮ್ಮೆ ಆಕೆಯ ಸಂಯಮದ ಕಟ್ಟೆಯೊಡೆದರೆ ಎದುರು ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಅಂತೆಯೇ ಕಟ್ಟೆಯೊಡೆದುಕೊಂಡ ನೀರನ್ನೂ ತಡೆಯಲು ಸಾಧ್ಯವಿಲ್ಲ. ನೀರೆಂದರೆ ಅದು ಅನಂತ ಸೌಂದರ್ಯ, ಹಾಗೆಯೇ ನೀರು. ನೀರು ಬದುಕಿನ ಅನಿವಾರ್ಯತೆ, ಹಣ್ಣಿಲ್ಲದೇ ಬದುಕಿದ್ದೀತೆ ? ನೀರ ತಟದಲ್ಲಿ ಎಲ್ಲವೂ ತಂಪು ತಂಪು, ತಾಯ ಮಡಿಲಲ್ಲಿಯೂ ಹಾಗೇ ಅಲ್ಲವೇ ? ಇಂಥ ಅಪೂರ್ವ ಸಂಗಮ ನಿಸರ್ಗ ನಿಯಮಿತ. ದುರದೃಷ್ಟ ಇಂದು ನೀರಿಗಾಗಿಯೇ ಭಾರತೀಯ ನೀರೆಯರು ಸಂಕಷ್ಟದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.
ಇನ್ನು ನೀರು ಹಲವಾರು ಕಾಯಿಲೆಗಳಿಗೆ ಮದ್ದು. ಫಿಸಿಯೋಥೆರಪಿಯಲ್ಲಿ ನೀರಿಗೆ ಬಹಳ ಮಹತ್ವದ ಸ್ಥಾನವಿದೆ. (ಹೈಡ್ರೊಥೆರಪಿ) ವರ್ಲ್‌ಪೂಲ್ ಬಾಥ್, ಕಾಂಟ್ರಾಸ್ಟ್ ಬಾಥ್, ಪೂಲ್ ಥೆರಪಿ ಮುಂತಾದ ಪ್ರಕ್ರಿಯೆಗಳಿವೆ. ವರ್ಲ್‌ಪೂಲ್ ಅಂದರೆ ನೀರು ಒಂದು ನಿರ್ದಿಷ್ಟ ವೇಗದಲ್ಲಿ ಚಕ್ರಾಕಾರದಲ್ಲಿ ಸುತ್ತುತ್ತಿರುವ ಟಬ್ ಅಥವಾ ಕೊಳಾಯಿ. ಇದರಲ್ಲಿ ನೋವಿರುವ ಅಂಗವನ್ನು ಮುಳುಗಿಸಿ ಇಟ್ಟಾಗ ತಿರುಗುತ್ತಿರುವ ನೀರಿನಿಂದಾಗಿ ನೋವಿರುವ ಜಾಗಕ್ಕೆ ರಕ್ತ ಚೆನ್ನಾಗಿ ಪೂರೈಕೆಯಾಗುತ್ತದೆ. ಕಾಂಟ್ರಾಸ್ಟ್ ಬಾಥ್ ಅಂದರೆ ಮೊದಲು ಬೆಚ್ಚಿನ ನೀರಿನಲ್ಲಿ ಸುಮಾರು ೩ ನಿಮಿಷ ಕಾಲ ನೋವಿರುವ ಅಂಗವನ್ನು ಮುಳುಗಿಸಿ ಇಡುವುದು. ನಂತರ ಸಾದಾ ನೀರಿನಲ್ಲಿ ಒಂದು ನಿಮಿಷ ಮುಳುಗಿಸಿ ಇಡುವುದು. ಪೂಲ್ ಬಾಥ್ ಅಂದರೆ ದೊಡ್ಡ ಕೊಳದಲ್ಲಿ ಇಡೀ ದೇಹಕ್ಕೆ ಚಿಕಿತ್ಸೆ ನೀಡುವುದು. ಇದು ಹೈಪರ್ ಆಕ್ಟಿವ್ ಮಕ್ಕಳಿಗೆ ಒಳ್ಳೆಯ ಚಿಕಿತ್ಸೆ. ಸಂಪೂರ್ಣ ದೇಹದ ಸ್ನಾಯುಗಳು ಇದರಿಂದ ರಿಲ್ಯಾಕ್ಸ್ ಆಗುತ್ತವೆ.
ಜಲಚಿಕಿತ್ಸೆಯ ಅತ್ಯಂತ ಪ್ರಮುಖ ಅಂಶವೆಂದರೆ ನೀರಿನ ತೇಲಿಸುವ ಶಕ್ತಿ. ತನ್ನಲ್ಲಿ ಮುಳುಗಿರುವ ವಸ್ತುವನ್ನು ನೀರು ಸುಲಭ ವಾಗಿ ಮೇಲೆತ್ತುತ್ತದೆ. ರೋಗಿಗೆ ಕೈಯಲ್ಲಿ ನೋವಿದ್ದಾಗ ಕೈಯನ್ನು ಮೇಲೆ ಎತ್ತುವುದು ಕಷ್ಟ. ಗುರುತ್ವಾಕರ್ಷಣ ಬಲವೇ ಇದಕ್ಕೆ ಕಾರಣ. ಆದರೆ ನೀರಿನಲ್ಲಿ ಅದ್ದಿ ಇಟ್ಟ ಕೈಯನ್ನು ಎತ್ತುವುದು ಸುಲಭ. ನೀರಿನ ಈ ಗುಣದಿಂದಾಗಿ ಕೈಗೆ ಉತ್ತಮ ವ್ಯಾಯಾಮ ಸುಲಭವಾಗಿ ಸಿಗುತ್ತದೆ.
ನೀರಿನ ಬಗ್ಗೆ ಒಂದಷ್ಟು ಅಂಶ ನಿಮಗೂ ತಿಳಿದಿರಲಿ:
*ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಆಹಾರ ನಮ್ಮ ರಕ್ತನಾಳಕ್ಕೆ ಸೇರಲು ತುಂಬಾ ಸಹಕಾರಿ.
*ಮಳೆಗಾಲದಲ್ಲಿ ಆಲಿಕಲ್ಲನ್ನು ಹೆಕ್ಕಿಟ್ಟು ಭದ್ರಪಡಿಸಿಟ್ಟುಕೊಳ್ಳಿ. ಚರ್ಮವ್ಯಾ ಸೇರಿದಂತೆ ಹಲವು ರೋಗಕ್ಕೆ ಅದು ಮದ್ದು
*ಪ್ರತಿದಿನ ಆಲಿಕಲ್ಲಿನ ನೀರಿನಿಂದ ಮುಖ ತೊಳೆದರೆ ಸೂಕ್ಷ್ಮ ಮುಖದ ಚರ್ಮಕ್ಕೆ ರಕ್ತ ಸಂಚಾರ ಸರಾಗವಾಗಿ ಚರ್ಮ ಹೊಳೆಪುಪಡೆಯುತ್ತದೆ.
*ಆಲಿಕಲ್ಲಿನ ನೀರಿಗೆ ನಿಂಬೆ ರಸ ಸೇರಿಸಿ ದಿನಕ್ಕೆ ಎರಡು ಬಾರಿ ಮುಖ ತೊಳೆಯುತ್ತಿದ್ದರೆ ಮೂಡವೆ ಮತ್ತು ಮೊಡವೆಯಿಂದ ಉಂಟಾದ ಕಲೆಗಳು ಮಾಯವಾಗುತ್ತವೆ.
* ಆಲಿಕಲ್ಲಿನೊಂದಿಗೆ ಸೇರಿಸಿದ ನಿಂಬೆ ಹಾಗೂ ತುಳಸಿ ರಸ ಹಲವು ಚರ್ಮರೋಗಕ್ಕೂ ಮದ್ದು.
*ಬೆಳಿಗ್ಗೆ ಎದ್ದ ಕೂಡಲೇ ಬಾಯಿ ತೊಳೆದು ಖಾಲಿ ಹೊಟ್ಟೆಗೆ ನಿಮಗೆ ಸಾಧ್ಯವಾದಷ್ಟು (ಕನಿಷ್ಠ ನಾಲ್ಕರಿಂದ ಆರು ಲೋಟ) ನೀರು ಕುಡಿಯಿರಿ. ನಂತರವೂ ಸಾಧ್ಯವಾದಾಗಲೆಲ್ಲ ನೀರು ಸೇವಿಸಿ ಚರ್ಮದ ಅಂದ, ಮುಖದ ಕಾಂತಿ, ಕಣ್ಣಿನ ಹೊಳಪು ಹೆಚ್ಚುತ್ತದೆ.ದೀರ್ಘಾಯುಸ್ಸು ಖಚಿತ.
* ಗ್ಯಾಸ್‌ಟ್ರಬಲ್, ಅಸಿಡಿಟಿ ಕಾಣಿಸಿಕೊಂಡರೆ ಹೆಚ್ಚು ಹೆಚ್ಚು ತಣ್ಣನೆಯ ನೀರು ಕುಡಿಯುತ್ತ ಬನ್ನಿ. ನಿಯಂತ್ರಣಕ್ಕೆ ಬರುತ್ತದೆ.
*ನೀರು ಅಶುದ್ಧವೆನಿಸಿದರೆ ಬಿಳಿ ಬಟ್ಟೆಯಿಂದ ಸೋಸಿದರಾಯಿತು. ಅಥವಾ ಕುದಿಸಿಟ್ಟುಕೊಳ್ಳಬಹುದು. ಫಿಲ್ಟರ್ ನೀರಾದರೂ ಆಯಿತು. ಅದೆಲ್ಲ ಶುದ್ಧವಾದ ನೀರೇ ಆಗಿದ್ದು, ಉಪಯೋಗಿಸಬಹುದು. ಬದಲಾಗಿ ಬಾಟಲಿ ನೀರು ಬೇಡ.
*ಮನೆಯಲ್ಲಿಯೇ ಸ್ಕಿನ್ ಟಾನಿಕ್ ತಯಾರಿಸಿಕೊಳ್ಳಬಹುದು. ಒಂದು ಲೀಟರ್ ನೀರಿಗೆ ಇಪ್ಪತ್ತು ಫ್ರೆಷ್ ಗುಲಾಬಿಯ ದಳಗಳನ್ನು (ಬಣ್ಣ ಯಾವುದಾದರೂ ಇರಲಿ) ಹಾಕಿ ಸುಮಾರು ಹತ್ತು ನಿಮಿಷ ಕುದಿಸಿಡಿ. ಆರಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ತುಂಬಿಸಿಡಿ. ಅದೇ ರೋಸ್ ವಾಟರ್. ನೀವು ಹಣ ತೆತ್ತು ತರುವ ಅಗತ್ಯವಿಲ್ಲ.
*ಕಣ್ಣುಗಳಲ್ಲಿ ಉರಿ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದವರು ರೋಸ್ ವಾಟರ್‌ಅನ್ನು ಹತ್ತಿಯ ತುಂಡಿನಿಂದ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ರಿಲ್ಯಾಕ್ಸ್ ಆಗಿ ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಣ್ಣ ಸುತ್ತಲಿನ ಕಲೆ ಮಾಯವಾಗುವುದು.
*ಕಂದು ಇಲ್ಲವೇ ಕಪ್ಪು ಬಣ್ಣದ ತುಟಿ ಸಮಸ್ಯೆಗೆ ಪರಿಹಾರವೆಂದರೆ ರೋಸ್ ವಾಟರಿಗೆ ಪ್ರಮಾಣ ಆಧರಿಸಿ ಜೇನುತುಪ್ಪ ಬೆರೆಸಿ ದಿನಕ್ಕೆ ನಾಲ್ಕೈದು ಬಾರಿ ಸವರಿ ಕೆಂದುಟಿ ನಿಮ್ಮದಾಗುತ್ತದೆ.
ಹೆಜ್ಜಿನ ಪ್ರಮಾಣದಲ್ಲಿ ರೋಸ್ ವಾಟರ್ ತಯಾರಿಸಿಕೊಂಡು ಸ್ನಾನದ ಟಬ್ ತುಂಬಿಸಿಕೊಂಡು ಮುಳುಗಿ ರಿಲ್ಯಾಕ್ಸ್ ಆಗಿ. ಹೀಗೆ ದಿನನಿತ್ಯ ಮಾಡುವುದರಿಂದ ನಿಮ್ಮ ಚರ್ಮ ಕಾಂತಿ ಇಮ್ಮಡಿಗೊಳ್ಳುವುದರ ಜತೆ ಬಣ್ಣವೂ ಬದಲಾಗುತ್ತದೆ.
* ಸ್ನಾನದ ನೀರಿನಲ್ಲಿ ಬೇವಿನ ಎಲೆ ಹಾಕಿಡಿ. ಎಲ್ಲ ಮಾರ್ಜಕಗಳಿಗಿಂತಲೂ ಇದು ಔಷಧಯುಕ್ತ.
* ಲಾವಂಚದ ಬೇರನ್ನು ಸ್ನಾನ ಮಾಡುವಾಗ ನೀರಿಗೆ ಹಾಕಿ ಸ್ನಾನ ಮಾಡಿದರೆ ಮೈಯ ದುರ್ಗಂಧ ದೂರ. ಇದೇ ರೀತಿ ಕುಡಿಯುವ ನೀರಿಗೆ ಲಾವಂಚದ ಬೇರು, ತುಳಸಿ ಹಾಕಿಟ್ಟರೆ ಒಳಿತು.
*ಒಂದು ಲೀಟರ್ ಕುದಿಯುವ ನೀರಿಗೆ ನಾಲ್ಕು ಕಿತ್ತಳೆ ಹಣ್ಣಿನ ಸಿಪ್ಪೆ ಹಾಕಿ ಹತ್ತು ನಿಮಿಷ ಬಿಡಿ. ತಣ್ಣಗಾದ ನಂತರ ಸೋಸಿಕೊಂಡು ಬಾಟಲಿಯಲ್ಲಿ ತುಂಬಿಸಿಡಿ. ನಿಮಗೆ ಬಿಡುವಾದಾಗ ಹತ್ತಿಯ ಸಹಾಯದಿಂದ ಮುಖಕ್ಕೆ ಲೇಪಿಸಿಕೊಳ್ಳಿ. ವಿಟಮಿನ್ ಸಿ ಕಾಸು ಖರ್ಚಿಲ್ಲದೆ ಸಿಗುತ್ತದೆ.
* ನೀರು ಕುದಿಯುವಾಗ ಒಂದು ಕಟ್ಟು ಪುದೀನಾ ಸೊಪ್ಪು ಹಾಕಿ ಅದರ ಹಬೆಗೆ ಮುಖ ಒಡ್ಡಿ, ಇದರಿಂದಾಗಿ ಮುಖದಲ್ಲಿನ ಜಿಡ್ಡಿನ ಅಂಶ ಹೋಗಿ, ಬ್ಲಾಕ್ ಮತ್ತು ವೈಟ್ ಹೆಡ್ಸ್‌ಗಳು ಮೆತ್ತಗಾಗಿ ಹೊರ ಬರುವವು. ಸುಕ್ಕುಗಳು ಮಾಯವಾಗಿ ಮುಖ ಚರ್ಮ ನಯವಾಗಿ, ಕಾಂತಿಯುತವಾಗಿ ಕಾಣುವುದು. ಮೊಡವೆಗಳು ಕಾಡುವ ಭಯವಿರುವುದಿಲ್ಲ.

‘ಲಾಸ್ಟ್’ಡ್ರಾಪ್ : ನೆನಪಿಡಿ, ಅದು ಎಂಥದೇ ರೋಗವಿರಲಿ, ಎಂಥದ್ದೇ ಸಂದರ್ಭವಿರಲಿ ನೀರಿನಿಂದ ದೂರವಿರುವ ಅಗತ್ಯವಿಲ್ಲ. ಯಾವುದೇ ರೋಗಕ್ಕೆ ನೀರಿನ ಸೇವನೆ ನಿಷಿದ್ಧವಲ್ಲ.

2 comments:

Anup said...

SO NICE

VISIT:WWW.MADHUBHAT.BLOGSPOT.COM

ASHRAF said...

ನೀರಿನ ಉಪಯೋಗ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.. ಧನ್ಯವಾದಗಳು