Monday, April 6, 2009

ನೀರೆಯರ ಸೌಂದರ್ಯದ ಗುಟ್ಟೇ ನೀರು ಗೊತ್ತೆ ?

ಮುಗ್ಧ ಮುಖ, ತುಸು ನಾಚಿದರೂ ಕೆಂಪಗಾಗುವ ಕೆನ್ನೆ, ಕಣ್ಣಂಚಿನಿಂದ ಒಂದು ಹನಿ ಹೊರಗಿಣುಕಿದರೂ ಆ ನುಣ್ಣನೆಯ ಕಪಾಲದ ಮೇಲೆ ಕ್ಷಣವೂ ನಿಲ್ಲುವ ಪ್ರಶ್ನೆಯೇ ಇಲ್ಲ; ಹಾಗೊಮ್ಮೆ ಕಣ್ಣೀರು ಜಾರಿ ಕೆಳಬಂದರೂ ಆ ಸುಕೋಮಲ ಕೆನ್ನೆಗಳಲ್ಲಿ ಗೀರು ಬಿದ್ದುಬಿಡುತ್ತವೇನೋ ಎಂಬಷ್ಟರ ಮಟ್ಟಿಗೆ ಮೃದು ಮಧುರ ಚರ್ಮ. ಜಟಕಾಗಾಡಿ ಹೊಡೆಯುತ್ತ ಇಡೀ ದಿನ ಬಿರುಬಿರು ಬಿಸಿಲಲ್ಲಿ ಆ ಬಂಡೆಗಳಾವೃತ ಬೆಟ್ಟಗಳ ತುಂಬ ಸುತ್ತಿದರೂ ಆ ಮುಖದ ಕಾಂತಿಯಲ್ಲಿ ಒಂದಿನಿತೂ ಬದಲಿಲ್ಲ. ಅದೇ ಹೊಳಪು, ಅದೇ ನುಣುಪು.
ವ್ಹಾವ್, ಆ ಕಣ್ಣುಗಳೋ ಪಕ್ಕಾ ತುಂಬಿದ ಕರಿ ಸರೋವರ, ಅದರೊಳಕ್ಕೆ ನಮ್ಮ ಕಣ್ಣುಗಳ ನೆಟ್ಟು, ದಿಟ್ಟ ದಿಟ್ಟಿಯಲ್ಲಿ ಭಾವನೆಗಳ ಹುಡುಕಾಟಕ್ಕೆ ತೊಡಗಿದರೆ ಒಂದೇ, ಎರಡೇ....ಭರಪೂರ ಭಾವಯಾನ. ಆರ್ದ್ರತೆಯಲ್ಲಿ ಅದ್ದಿ ಹೋಗಿರುವ ಆ ಕಣ್ಣುಗಳೇ ಇಡೀ ಸೌಂದರ್ಯಕ್ಕೆ ಇಟ್ಟ ಕಿರೀಟ. ಅದೆಲ್ಲಿಂದ ಬಂತು ಅಂಥ ಬೆಳಕು ಆ ಕಣ್ಣುಗಳಿಗೆ ? ಇನ್ನು ತುಂಬಿದ ತುಟಿ, ಎಂಥವರಿಗೂ ಒಮ್ಮೆ ಮುದ್ದಿಸಿಬಿಡಬೇಕೆನಿಸುವ ಆ ಗಲ್ಲ, ಮಿರಿ ಮಿರಿ ಮಿಂಚುವ ನೀಳ ಕೇಶ, ಕೈ ತೊಳೆದು ಮುಟ್ಟಬೇಕೆನಿಸುವ ಮೈಬಣ್ಣ....ಆಕೆಗೆ ಆಕೆಯೇ ಸಾಟಿ...
ಹೌದು, ಆಕೆ ನಮ್ಮ ನಿಮ್ಮ ನೆಚ್ಚಿನ ಬಸಂತಿಯೇ ! ಪಕ್ಕಾ ಅದೇ ಶೋಲೆ ಚಿತ್ರದ ಬಜಾರಿ ಹೆಣ್ಣು, ಸೌಂದರ್ಯದ ಖನಿ, ಬಾಲಿವುಡ್‌ನ ಕನಸಿನ ಕನ್ಯೆ ಹೇಮಾಮಾಲಿನಿ ಬಗೆಗೇ ಹೇಳುತ್ತಿರುವುದು. ಗ್ವಾಲಿಯರ್‌ನ ಮಹಾರಾಣಿಯಾಗಿದ್ದ ವಿಜಯರಾಜೆ ಸಿಂಯಾ ಜೀವನಾಧಾರಿತ ಚಿತ್ರ ‘ಏಕ್ ಥೀ ರಾಣಿ ಐಸೀ ಭಿ’ಯಲ್ಲಿ ಚಿತ್ರೀಕರಣದಲ್ಲಿ ಇತ್ತೀಚೆಗೆ ತೊಡಗಿಕೊಂಡಿದ್ದಳಾಕೆ. ಅಂದಿನ ಶೋಲೆ(೧೯೭೫)ಯ ಬಸಂತಿ ಬಂದು ಹೋಗಿ ಏನಿಲ್ಲವೆಂದರೂ ೩೦ ವಸಂತ ಸರಿದು ಹೋಗಿವೆ. ಹೇಗೆ ನೋಡಿದರೂ ಹೇಮಾಗೆ ಈಗ ಅರವತ್ತರ ಆಸು ಪಾಸು. ಈಗಲೂ ಆಕೆ ಹಾದು ಹೋದರೆ, ತಿರುಗಿ ನೋಡದವನು ಅರಸಿಕ. ಅಂಥ ಹೇಮಾಮಾಲಿನಿಯ ಸೌಂದರ್ಯದ ಗುಟ್ಟೇನು?
ಆಕೆಯನ್ನೇ ಕೇಳಿ ನೋಡಿ. ‘ನೀರೆಯರ ಸೌಂದರ್‍ಯಕ್ಕೆ ನೀರೇ ಮದ್ದು !’ ಎನ್ನುತ್ತ ತಿಳಿನಗೆ ಚೆಲ್ಲಿ, ಕಣ್ಣು ಮಿಟುಕಿಸಿ ದಂಗು ಬಡಿಸದಿದ್ದರೆ ದೇವರಾಣೆ. ತಮ್ಮ ಚಿರಯೌವನದ ಗುಟ್ಟನ್ನು ಹೇಮಾ ಹೀಗೆ ಹೊರಗೆಡಹಿದ್ದಾರೆಂದ ಮೇಲೆ ನಂಬಲಿರಲಾದೀತೇ ?
ಯಥೇಚ್ಛ ನೀರು ಹಾಗೂ ಆರೋಗ್ಯಕರ ಜೀವನ ಪದ್ಧತಿಗಳಿಂದಾಗಿಯೇ ಆಕೆ ಇನ್ನೂ ಇಷ್ಟು ಸುಂದರಿಯಾಗಿ ಕಂಗೊಳಿಸುತ್ತಿರುವುದಾಗಿ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಿಸುತ್ತಿಲ್ಲ. ‘ನಾನು ತಂಪು ಪಾನೀಯಗಳನ್ನು ಸೇವಿಸುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ಆಕರ್ಷಕವಾಗಿರಬೇಕೆಂದರೆ ಎಲ್ಲರೂ ಹೆಚ್ಚು ನೀರು ಕುಡಿಯಬೇಕು’ ಎಂದು ತಮ್ಮ ಸೌಂದರ್‍ಯ ಸೂತ್ರ ಬಿಡಿಸಿಡುತ್ತಾರೆ ಹೇಮಾ.
ಹೇಮಾ ಮಾತು ನೂರಕ್ಕೆ ನೂರು ಸತ್ಯ. ಮತ್ತೊಂದು ಬೇಸಿಗೆ ನಮ್ಮ ಮೇಲೆ ಕೆಂಗಣ್ಣೂ ಬೀರುತ್ತ ಮುಕ್ಕರಿಸಿಕೊಂಡಿದೆ. ಹಿಂದಿನೆಲ್ಲ ವರ್ಷಗಳಿಗಿಂತ ಹೆಚ್ಚು ಪ್ರಖರತೆ ಈ ಋತುಮಾನದ ದುರದೃಷ್ಟ. ಈಗಿನ್ನು ಮಾರ್ಚ್ ಬರಲೋ ಬೇಡವೋ ಎನ್ನುತ್ತ ಕಾಲಿಡುತ್ತಿದೆ. ಈಗಲೇ ೩೦-೩೨ ಡಿಗ್ರಿ ಸೆಂಟಿಗ್ರೇಡ್ ಉಷ್ಟಾಂಶ ಎಂದ ಮೇಲೆ ಇನ್ನು ಏಪ್ರಿಲ್-ಮೇ ನ ಕತೆಯೇನೋ ಎಂಬ ಆತಂಕವೇ ಬೆವರೊಡೆಸಿ ಎಲ್ಲರನ್ನೂ ತೊಯ್ದು ತೊಪ್ಪೆಯಾಗಿಸುತ್ತಿದೆ.
ಬೇಸಿಗೆ ಬಗಲಲ್ಲೆ ಬಂದು ಬಿಡುತ್ತವೆ ಹತ್ತಾರು ಬಗೆಯ ಹಾದಿಬೀದಿಯ ರೋಗಗಳು. ಸಾಲದ್ದಕ್ಕೆ ಎಲ್ಲಿ ನೋಡಿದರೂ ಜಾತ್ರೆ-ಉತ್ಸವ, ಮದುವೆ-ಮುಂಜಿ, ಸಭೆ- ಸಮಾರಂಭಗಳು. ಪರಿಣಾಮ ಬೇಡಬೇಡವೆಂದರೂ ಸಾಕ್ರಾಮಿಕ ರೋಗಗಳು ಹುಟ್ಟಿಕೊಂಡು ಬಿಡುತ್ತವೆ. ಕ್ಲಿನಿಕ್‌ಗಳು ಭರ್ತಿ ಭರ್ತಿ. ಯಾರ ಮನೆಯಲ್ಲಿ ನೋಡಿದರೂ ಮಕ್ಕಳಿಗೆ ಹುಷಾರಿಲ್ಲ ಎಂಬ ವರಾತ. ದೊಡ್ಡವರಿಗೂ ನೆಗಡಿ, ಕೆಮ್ಮು, ಜ್ವರ- ಹೀಗೆ ಒಂದಲ್ಲಾ ಒಂದು. ‘ಛೆ, ಎಂಥ ಕೆಟ್ಟ ವೆದರ್, ಈ ಬೇಸಿಗೆ ಬಂದ್ರೆ ಸಾಕು. ಆಸ್ಪತ್ರೆಗೆ ದುಡ್ಡೋ ದುಡ್ಡು...’ಇಂಥ ಮಾತು ಯಾರಿಬ್ಬರು ಭೇಟಿಯಾದರೂ ಸಾಕು ಕೇಳಿಬಂದೇ ಬರುತ್ತದೆ.
ಹಾಗಾದರೆ ಇದೆಲ್ಲ ಹೀಗೆ ಏಕೆ ? ಯಾವುದರಿಂದ ಇಂಥ ಉಪದ್ವ್ಯಾಪ ಎಂಬ ಪ್ರಶ್ನೆ ಉತ್ತರವಾಗಿ ನಿಲ್ಲುತ್ತದೆ ನೀರು. ಹೇಮಾಮಾಲಿನಿ ಕೆನ್ನೆ ಇನ್ನೂ ಸುಕ್ಕುಗಟ್ಟದಿರುವುದಕ್ಕೂ ನೀರೇ ಕಾರಣ. ಅಂತೆಯೇ ನಮ್ಮ ನಿಮ್ಮೆಲ್ಲರ ಮುಖ ಮೂವತ್ತಕ್ಕೆಲ್ಲ ಸುಕ್ಕುಗಟ್ಟುತ್ತಿರುವುದಕ್ಕೂ ನೀರೇ ಕಾರಣ. ಮಾನವನ ಆರೋಗ್ಯಕ್ಕೂ ಬೇಸಿಗೆಗೂ, ನೀರಿಗೂ ಸಾಕಷ್ಟು ಸಂಬಂಧವಿದೆ ಎನ್ನುವುದಕ್ಕಿಂತ ಬಹುಪಾಲು ರೋಗ ಹುಟ್ಟುವುದೇ ನೀರಿನಿಂದ.
ನಿಮಗೆ ಗೊತ್ತಿದೆಯೋ ಇಲ್ಲವೋ. ಗೊತ್ತಿಲ್ಲ. ಆದರೆ ಗೊತ್ತಿರಲೇಬೇಕಾದ ಸಂಗತಿಯೆಂದರೆ ನಮ್ಮ ದೇಹದ ಒಟ್ಟಾರೆ ತೂಕದ ಅರ್ಧಪಾಲು ನೀರಿನದ್ದು ಎಂಬುದು. ನಮ್ಮ ಎಲ್ಲ ಅಂಗಾಂಗಳಿಗೆ , ಜೀವಕೋಶಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡುವ ಮತ್ತು ವ್ಯರ್ಥ ವಸ್ತುಗಳನ್ನು ಹೊರತಳ್ಳುವ ದ್ರವದಲ್ಲಿ ನೀರಿನದ್ದೇ ಸಿಂಹಪಾಲು. ನಮ್ಮ ಹೃದಯ, ಕಣ್ಣು, ಹೊಟ್ಟೆ, ಇವೆಲ್ಲದರಲ್ಲೂ ಹರಿಯುತ್ತಿರುವುದು ದ್ರವ.
ಬೇಕಿದ್ದರೆ ಯೋಚಿಸಿ ನೋಡಿ ನಾವು ಕುಡಿಯುವುದು ನೀರನ್ನೇ. ಹೊರಬಿಡುವ ಮೂತ್ರ ನೀರು. ಮೈಯಿಂದ ಹೊರಹೊಮ್ಮುವ ಬೆವರು ನೀರು. ನೀರು ಕುಡಿಯದಿದ್ದರೆ ಉಂಡದ್ದು ಅರಗುವುದಿಲ್ಲ. ನಮ್ಮ ದೇಹದೊಳಗಿನ ಕೈಕಾಲು ಸೇರಿದಂತೆ ಪ್ರತಿ ಸಂದುಗಳ ಕೀಲು ಕೆಲಸ ಮಾಡಲು ಅಗತ್ಯ ತೈಲ ಸಿದ್ಧಗೊಳ್ಳಲು ನೀರು ಬೇಕೇಬೇಕು. ಇನ್ನು ನಮ್ಮ ದೇಹದಲ್ಲಿ ಹರಿಯುವ ರಕ್ತವಂತೂ ನೀರು,ನೀರು. ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕಣ್ಣೊಳಗೆ ಮಡುಗಟ್ಟುವುದು ನೀರು, ಗಂಟಲಲ್ಲಿರುವ ಕಫ, ಮೂಗಿನೊಳಗೆ ಸುರಿಯುವ ಸಿಂಬಳ ಎಲ್ಲವೆಂದರೆ ಎಲ್ಲದರಲ್ಲೂ ನೀರನಂಶ ಇದ್ದೇ ಇರುತ್ತದೆ. ಮಾತ್ರವಲ್ಲ ಇವುಗಳಲ್ಲಿ ಯಾವೊಂದು ಏರುಪೇರಾದರೂ ಅದಕ್ಕೆ ನಾವು ಸೇವಿಸುವ ನೀರೇ ಕಾರಣ.
ಶೀತ, ಜ್ವರ,ವಾಂತಿ ಭೇದಿ..ಹೀಗೆ ನಾವು ಕಿರಿಕಿರಿ ಎಂದುಕೊಳ್ಳುವ ಸಣ್ಣಪುಟ್ಟ ಕಾಯಿಲೆಗಳೆಲ್ಲವೂ ಅವು ಉಪದ್ರವಕೊಡಲಿಕ್ಕಾಗಿಯೇ ನಮಗೆ ಬಂದಿವೆ ಎಂದುಕೊಳ್ಳಬೇಕಿಲ್ಲ. ಅದು ಹಾಗಲ್ಲವೇ ಅಲ್ಲ. ದೇಹದಲ್ಲಿನ ಜಲದ ಮಟ್ಟ ಕಾಯ್ದುಕೊಳ್ಳುವ ಸಹಜ ಪ್ರಕ್ರಿಯೆಗಳಾಗಿ ನಮಗೆ ಇಂಥ ರೋಗಭಾದೆ ಕಾಣಿಸಿಕೊಳ್ಳುತ್ತವೆ. ಯಾವಾಗ ಅದು ಮಿತಿ ಮೀರುತ್ತದೋ ಆಗ ಮಾತ್ರ ಅಪಾಯಕಾರಿಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಬರುವ ಎಲ್ಲ ರೋಗಗಳಿಗೂ ಹೆದರಬೇಕಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಿದರೆ ದೇಹದ ನೀರಿನ ಮಟ್ಟ ರಕ್ಷಿಸಿಕೊಂಡು ಇಂಥ ಕಿರಿಕಿರಿಗಳಿಂದಲೂ ಪಾರಾಗಿ ಆರಾಮವಾಗಿರಬಹುದು.


‘ಲಾಸ್ಟ್’ಡ್ರಾಪ್: ಒಬ್ಬ ಮನುಷ್ಯನ ತೂಕ ೭೦ ಕಿ.ಗ್ರಾಂ ಇದ್ದರೆ, ಆತನ ದೇಹದಲ್ಲಿ ೪೭ ಲೀಟರ್ ನೀರಿರುತ್ತದೆ.

1 comment:

Anup said...

NICE BLOG

VISIT:WWW.MADHUBHAT.BLOGSPOT.COM
WWW.PARYAYA.BLOGSPOT.COM