Friday, October 2, 2009

ಹಸಿರ ತೋಟದ ಸಿರಿಗೆ ಅವಳೆ ನೆರಿಗೆ

ನಿಮಗೆ ಅವಳೆ ಗೊತ್ತಾ ? ಅವಳೆ ಎಂದರೆ ಅವಳಲ್ಲ. ಇವಳು ಬೇರೆಯೇ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅವಳೆ ಬೇರೆ, ನೀವಂದುಕೊಂಡಿರುವ ಅವಳು ಬೇರೆ. ಈ ನೆಲದ ಪರಂಪರೆ ರೂಪಿಸಿದ ನೀರ ತಂತ್ರಜ್ಞಾನದ ಒಂದು ಭಾಗ ಅವಳೆ. ಅಡಕೆ ತೋಟದ ಸಾಲಿನ ನಡು ನಡುವೆ, ಮುಗ್ಧವಾಗಿ ಮೈ ಚೆಲ್ಲಿ ಮಲಗಿರುವ ಅವಳೆ, ವಾರಕ್ಕೊಮ್ಮೆಯೋ, ಎರಡು ಬಾರಿಯೋ ತನಿತನಿಯಾಗಿ ನಲಿಯುತ್ತಾಳೆ. ಹಸಿಹಸಿಯಾಗಿ ನಗುತ್ತಾಳೆ. ಜತೆಗಾರರಿಗೆ ಸುಖವುಣ್ಣಿಸಿದ ಸಂತೃಪ್ತಿಯಲ್ಲಿ ಮತ್ತೆ ಮೈಮರೆತು ಮಲಗುತ್ತಾಳೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಅಡಕೆ ತೋಟಕ್ಕೆ ನೀರು ಹಾಯಿಸಲು ಒಂದು ವಿಶಿಷ್ಟ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದಕ್ಕೆ ನೀರಬಾರಿ ಅಥವಾ ನೀರು ತೋಕುವುದು(ಸೋಕುವುದು-ಎರಚುವುದು) ಎನ್ನಲಾಗುತ್ತದೆ. ಹೀಗೆ ನೀರು ತೋಕಲು ಅಡಕೆ ಮರಗಳ ಸಾಲಿನ ನಡುನಡುವೆ ನಿರ್ಮಿಸಲಾಗುವ ಪುಟ್ಟ ಕಾಲುವೆಗಳನ್ನೇ ಅವಳೆ ಎಂದು ಗುರುತಿಸಲಾಗುತ್ತದೆ. ಇಂಥ ಅವಳೆಗಳು ಅಡಕೆ ತೋಟದ ಪಾಲಿಗೆ ಜೀವವಾಹಿನಿಗಳಿದ್ದಂತೆ. ಮನುಷ್ಯನ ದೇಹದಲ್ಲಿರುವ ನರಗಳಂತೆಯೇ ಇವು ಕಾರ್ಯನಿರ್ವಹಿಸುತ್ತವೆ. ಜೀವ ದ್ರವವನ್ನು ಉತ್ಪತ್ತಿ ಮಾಡುವುದು ಇವುಗಳ ಕೆಲಸವಲ್ಲ. ಆದರೆ ಅದು ತಲುಪಬೇಕಾದ ಸ್ಥಳಕ್ಕೆ ಕೊಂಡೊಯ್ದು ಬಿಡುವುದು ಅವಳೆಯ ಹೊಣೆಗಾರಿಕೆ.


ಅವಳೆಗಳು ಭಾರೀ ಆಳವಾಗೇನೂ ಇರುವುದಿಲ್ಲ. ಅಡಕೆ ಮರಗಳ ಸಾಲಿನ ನಡುವೆ ಹೆಚ್ಚೆಂದರೆ, ಎರಡು ಅಡಿ ಅಗಲ, ಎರಡರಿಂದ ಮೂರು ಇಂಚು ಗಾತ್ರಕ್ಕೆ ತಗ್ಗು ಮಾಡಿರಲಾಗುತ್ತದೆ. ಸಾಮಾನ್ಯವಾಗಿ ಚಿಕ್ಕಚಿಕ್ಕ ಕಲ್ಲಿನ ಹರಳುಗಳನ್ನು ಇದರಲ್ಲಿ ತುಂಬಿರುತ್ತಾರೆ. ಕಲ್ಲುಗೊಜ್ಜು ಅಥವಾ ಕಡಿ ಎಂದು ಕರೆಯಲಾಗುವ ಜಂಬಿಟ್ಟಿಗೆಯ ಪುಟ್ಟಪುಟ್ಟ ಕಲ್ಲಿನ ತುಣುಕುಗಳು ಅವಳೆಗಳಲ್ಲಿ ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತದೆ. ಜತೆಗೆ ನೀರನ್ನು ಮರಗಳಿಗೆ ಎರಚುವ ಸಂದರ್ಭದಲ್ಲಿ ಮಣ್ಣು ಸವಕಳಿಯಾಗುವುದನ್ನು ಇವು ತಪ್ಪಿಸುತ್ತವೆ.


ನೀರಬಾರಿಯೆಂದರೆ ಅಡಕೆ ಬೆಳೆಗಾರರಿಗೆ ಅದೊಂದು ಸಂಭ್ರಮ. ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದ ಈ ಕೃಷಿ ಕಾರ್ಯದಲ್ಲಿ ತಮ್ಮ ಶ್ರಮ ವ್ಯಯಿಸುತ್ತಾರೆ. ಎರಡು ಅಥವಾ ಮೂರು ಕುಟುಂಬಗಳ ತೋಟಕ್ಕೆ ಒಂದರಂತೆ ಮಧ್ಯದಲ್ಲಿ ಒಂದು ಕೆರೆ, ಹೊಂಡ ಅಥವಾ ಬಾವಿ ಇರುತ್ತದೆ. ಅದರ ದಂಡೆಯ ಮೇಲೆ ಅಡಕೆ ಮರದಿಂದ ನಿರ್ಮಿಸಿದ ಏತದ ತುದಿಯಲ್ಲಿ ಜೊಟ್ಟೆಯನ್ನು ಜೋಡಿಸಿರುತ್ತಾರೆ. ಜೊಟ್ಟೆಯೆಂದರೆ ಸಾಮಾನ್ಯವಾಗಿ ತಾಮ್ರದಿಂದ ಮಾಡಿದ ನಾಲ್ಕೈದು ಕೊಡ ನೀರು ಹಿಡಿಸಬಹುದಾದ ಅಗಲ ಬಾಯಿಯ ಒಂದು ಪಾತ್ರೆ. ಇದರ ಬಗ್ಗೆ ಹಿಂದೆಯೇ ಈ ಅಂಕಣದಲ್ಲೇ ಬರೆಯಲಾಗಿತ್ತು. ಹೊಂಡದ ನೀರನ್ನು ಜೊಟ್ಟೆಯಲ್ಲಿ ಎತ್ತಿ ಅವಳೆಯ ಬುಡಕ್ಕೆ ಸುರಿಯಲಾಗುತ್ತದೆ. ತೋಟದ ಉದ್ದಕ್ಕೂ ಚಾಚಿಕೊಂಡಿರುವ ಹಲವು ಅವಳೆಗಳು ತಲೆಯಲ್ಲಿ ಮುಖ್ಯ ಅವಳೆಯನ್ನು ಸಂಪರ್ಕಿಸುತ್ತವೆ. ಇದರ ಬುಡ ನೇರವಾಗಿ ಹೊಂಡದ ದಂಡೆಗೆ ಬಂದು ಸೇರಿರುತ್ತದೆ. ಇಲ್ಲಿಯೇ ಜೊಟ್ಟೆಯನ್ನು ಅಳವಡಿಸಲಾಗಿರುತ್ತದೆ. ಜೊಟ್ಟೆಯಲ್ಲಿ ಎತ್ತಿ ಸುರಿದ ನೀರನ್ನು ಮುಖ್ಯ ಅವಳೆಯಲ್ಲಿ ಹರಿಸಿಕೊಂಡು ಬಂದು ಒಂದೊಂದಾಗಿ ಕಿರು ಅವಳೆಗೆ ತಿರುಗಿಸಿಕೊಳ್ಳಲಾಗುತ್ತದೆ.


ವಿಶೇಷವಿರುವುದು ನೀರನ್ನು ತಿರುಗಿಸಿಕೊಳ್ಳುವಲ್ಲಿ. ಮುಖ್ಯ ಅವಳೆಯಲ್ಲಿ ಹರಿದು ಬರುವ ನೀರು ಮುಂದೆ ಹೋಗದಂತೆ ತಡೆದು, ತಮಗೆ ಬೇಕಾದ ಕಿರು ಅವಳೆಗೆ ಹರಿಸಿಕೊಂಡು ಹೋಗಲು ಕೃಷಿಕರೇ ರೂಪಿಸಿಕೊಳ್ಳುವ ‘ಕಟ್ನ’ವನ್ನು ಬಳಸಲಾಗುತ್ತದೆ. ಇದು ಸ್ಥಳೀಯವಾಗಿ ದೊರೆಯುವ ತ್ಯಾಜ್ಯ ವಸ್ತುಗಳಿಂದಲೇ ತಯಾರಾಗುತ್ತದೆ. ತೋಟದಲ್ಲಿ ಗೊನೆಬಿಟ್ಟು ಮುಗಿದ ಬಾಳೆಮರದ ರೆಂಬೆ, ಅಡಕೆ ಮರದ ಒಳಗಿನ ತಿರುಳು ಇವನ್ನು ಬಳಸಿ ಅವಳೆಯ ಅಗಲ, ಎತ್ತರಕ್ಕೆ ತಕ್ಕಂತೆ ಸುತ್ತಿ ಸಿಂಬೆ ಮಾಡಿರಲಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಎತ್ತಿಕೊಂಡು ಸಾಗಿಸಲು ಸುಲಭವಾಗುವಂತೆ ಬಾಳೆ ದಾರದಲ್ಲಿ ಹಿಡಿಕೆಯನ್ನು ರಚಿಸಿಕೊಂಡಿರುತ್ತಾರೆ. ನೀರನ್ನು ತಿರುಗಿಸಿಕೊಳ್ಳುವ ಕಿರು ಅವಳೆಯ ತುಸು ಮುಂದೆ ಇದನ್ನು ಅಡ್ಡಡ್ಡಲಾಗಿ ಇಡಲಾಗುತ್ತದೆ. ನೀರು ತಂತಾನೇ ಬೇಕೆಂಬಲ್ಲಿಗೆ ತಿರುಗಿಕೊಳ್ಳುತ್ತದೆ. ಕಟ್ನದ ಕೆಲಸ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ನೀರನ್ನು ಮರಕ್ಕೆ ತೋಕುವಾಗ ಅನುಕೂಲವಾಗುವಂತೆ ನಿಲ್ಲಿಸಿಕೊಳ್ಳಲೂ ಕಟ್ನವನ್ನು ಬಳಸಲಾಗುತ್ತದೆ. ಅವಳೆಯಲ್ಲಿ ನೀರು ಹರಿದು ಬರುತ್ತಿದ್ದಂತೆ ಇನ್ನೊಂದು ಪುಟ್ಟ ಕಟ್ನವನ್ನು ಅಡ್ಡಕ್ಕೆ ಹಾಕಿ ಅದಕ್ಕೆ ಲಂಬವಾಗಿ ನಿಲ್ಲುವ ವ್ಯಕ್ತಿ, ಒಂದು ಕಾಲಲ್ಲಿ ಕಟ್ನವನ್ನು ಮೆಟ್ಟಿ ಹಿಡಿದುಕೊಳ್ಳುತ್ತಾನೆ. ಇನ್ನೊಂದು ಕಾಲು ನೀರು ಹರಿದುಬರುವ ಕಡೆ ಪಕ್ಕಕ್ಕೆ ಇರುತ್ತದೆ. ನೀರು ಬಂದು ಶೇಖರವಾಗುತ್ತಿದ್ದಂತೆಯೇ ಬಗ್ಗಿ ಹಾಳೆಯಿಂದ ನೀರನ್ನು ಮರದ ಬುಡಕ್ಕೆ ತೋಕುತ್ತಾನೆ.


ಇಲ್ಲಿ ಹಾಳೆಯೆಂಬುದೂ ಇನ್ನೊಂದು ವಿಶಿಷ್ಟ ಸಲಕರಣೆ. ಮರವನ್ನು ಕೆತ್ತಿ ಒಂದು ಅಡಿ ಅಗಲ, ಒಂದೂವರೆ ಅಡಿ ಉದ್ದದ ಬಟ್ಟಲಾಕಾರದ ರಚನೆಯನ್ನು ಮಾಡಿಕೊಂಡಿರುತ್ತಾರೆ. ನೀರಿನಲ್ಲಿ ತಾಳಿಕೆ ಬರುವಂಥ, ಒಣಗಿದ ಹಗುರ ಜಾತಿಯ ನಿರ್ದಿಷ್ಟ ಮರಗಳನ್ನೇ ಹಾಳೆ ಮಾಡಲು ಬಳಸಲಾಗುತ್ತದೆ. ಕಬ್ಬಣದ ತಗಡಿನಿಂದ ಹಾಳೆ ತಯಾರಿಸುವುದೂ ಉಂಟು. ಇಂಥ ಹಾಳೆಗಳನ್ನು ಕೈಯಲ್ಲಿ ಹಿಡಿದು ಅವಳೆಯಲ್ಲಿ ಬರುವ ನೀರು ಮೊಗೆದು ಅಡಕೆ ಮರದ ಬುಡಕ್ಕೇ ತಲುಪುವಂತೆ ತೋಕಲಾಗುತ್ತದೆ. ಒಂದೊಂದು ಬಾರಿ ಹೀಗೆ ತೋಕಿದಾಗಲೂ ೧೦ರಿಂದ ೧೫ ಲೀಟರ್‌ನಷ್ಟು ನೀರು ಮರಕ್ಕೆ ಹೋಗಿ ತಲುಪುತ್ತದೆ. ರಪರಪನೆ ನೀರು ತೋಕುತ್ತಿದ್ದಾಗ ತೋಟದ ಮೇಲೆ ನಿಂತು ಕೇಳಿದರೆ ಎಲ್ಲೋ ಪ್ರವಾಹದ ಅಲೆಗಳು ಬಂದು ಅಪ್ಪಳಿಸುತ್ತಿದ್ದಂತೆ ಕೇಳಿಸುತ್ತದೆ.
ಬಿಸಿಲೇರಿದ ಸಂದರ್ಭದಲ್ಲಿ ನೀರ ಬಾರಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಸಂಪೂರ್ಣ ಮಾನವ ಶ್ರಮದಿಂದಲೇ ನಡೆಯುವ ಪ್ರಕ್ರಿಯೆ ಇದಾಗಿರುವುದರಿಂದ ಬಿಸಿಲಿನಲ್ಲಿ ಹೆಚ್ಚು ಹೊತ್ತು ದುಡಿಯಲಾಗುವುದಿಲ್ಲ. ಹೀಗಾಗಿ ಬೆಳಗಿನ ಜಾವ ನಾಲ್ಕು ಗಂಟೆಗೇ ನೀರಬಾರಿ ಆರಂಭವಾಗುತ್ತದೆ. ಬಿಸಿಲು ಕಣ್ಣು ಬಿಡುವ ವೇಳೆಗೆ ಒಂದು ಹಂತಕ್ಕೆ ಕೆಲಸ ನಿಲ್ಲಿಸಿಬಿಡಲಾಗುತ್ತದೆ. ನಂತರ ಸಂಜೆ ನಾಲ್ಕಕ್ಕೆ ಶುರುವಿಟ್ಟುಕೊಂಡು ಕತ್ತಲು ಕವಿಯುವವರೆಗೂ ನೀರು ತೋಕುವ ಕೆಲಸ ಸಾಗುತ್ತದೆ.


ಮಳೆಗಾಲ ಮುಗಿದು ಒಂದು ಒಂದೂವರೆ ತಿಂಗಳಿಗೆಲ್ಲಾ ಅವಳೆಯಲ್ಲಿ ನೀರು ಹರಿಸಲು ಆರಂಭವಾಗುತ್ತದೆ. ತೋಯ್ ಹಾಳೆಯಲ್ಲಿ ಹೀಗೆ ನೀರು ತೋಕುವ ಕೆಲಸ ವರ್ಷದ ೭ ತಿಂಗಳೂ ನಡೆದಿರುತ್ತದೆ. ಇದರಿಂದ ಬೆಟ್ಟು ನೆಲದಲ್ಲೂ ನೀರಿನಂಶವನ್ನು ಕಾಪಾಡುವುದು ಅತ್ಯಂತ ಸುಲಭ. ನೀರು ಅವಳೆಯಲ್ಲಷ್ಟೇ ಹರಿದು ನೇರವಾಗಿ ಗಿಡದ ಬುಡಕ್ಕೇ ಪೂರೈಕೆಯಾಗುವುದರಿಂದ ಮಿತವ್ಯಯದ ಸಾಧನೆಯಾಗುತ್ತದೆ. ಮಳೆಗಾಲದಲ್ಲಿ ಈ ಅವಳೆಗಳಲ್ಲೇ ನೀರು ಇಂಗುತ್ತದೆ. ಹೀಗಾಗಿ ತೋಟದ ತುಂಬ ನೆಲದಲ್ಲಿ ತನಿ ನಿಂತಿರುತ್ತದೆ. ಇದಕ್ಕಿಂತ ಮುಖ್ಯ ವಿಷಯವೆಂದರೆ ಇಂಥ ಪ್ರತಿ ಅವಳೆ ಕೊನೆಯಾಗುವ ಜಾಗದಲ್ಲಿ ತೋಟದ ಅಂಚಿನಲ್ಲಿ ವೃತ್ತಾಕಾರದಲ್ಲಿ ಇಂಗು ಗುಂಡಿಯ ಮಾದರಿಯನ್ನು ಮಾಡಿರಲಾಗುತ್ತದೆ. ಉದ್ದಕ್ಕೆ ಹರಿದು ಬರುವ, ಮರಕ್ಕೆ ತೋಕಿ ಉಳಿಯುವ ಹೆಚ್ಚುವರಿ ನೀರು ಪೋಲಾಗದೆ ಇಲ್ಲಿಯೇ ನಿಂತು ಇಂಗುತ್ತದೆ. ಮಳೆಗಾಲದಲ್ಲೂ ಹೀಗೆಯೇ ಆಗಿ ಅಂತರ್ಜಲ ಮಟ್ಟ ಏರುತ್ತದೆ.


ಇಂದು ನೀರು ತೋಕುವ ಪದ್ಧತಿಯೇ ಕಣ್ಮರೆಯಾಗಿದೆ. ಅವಳೆಗಳಿದ್ದ ಸ್ಥಳದಲ್ಲಿ ಸ್ಪಿಂಕ್ಲರ್‌ನ ಪೈಪಿನ ಜಾಲ ಬಂದಿದೆ. ಜೊಟ್ಟೆಯ ಬದಲು ಪಂಪು ಬಂದಿದೆ. ಅತ್ಯಂತ ಸಣ್ಣ ಹಿಡುವಳಿದಾರರೂ ಪಂಪ್ ಖರೀದಿಸಿ ಅದರಿಂದ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಕುಶಲ ಕರ್ಮಿಗಳ ಕೊರತೆ, ಮಾನವ ಸಂಪನ್ಮೂಲದ ಅಲಭ್ಯತೆ, ಸೋಮಾರಿತನ, ಯಂತ್ರದ ದಾಳಿ ಇವೆಲ್ಲದರ ಪರಿಣಾಮ ಅವಳೆಗಳ ಹೆಸರೇ ಅಳಿಸಿ ಹೋಗುತ್ತಿದೆ. ಮಳೆಗಾಲದಲ್ಲಿ ಮಣ್ಣು ಬಂದು ಕುಳಿತು, ಅವುಗಳ ನಿರ್ವಹಣೆಯೂ ಇಲ್ಲದೇ ಎಲ್ಲೋ ಕೆಲವರ ತೋಟಗಳಲ್ಲಿ ಮಾತ್ರ ಅವಳೆಗಳ ಪಳೆಯುಳಿಕೆ ಉಳಿದುಕೊಂಡಿದ್ದರೂ ಅವುಗಳ ಕ್ಷಮತೆ ಕಡಿಮೆಯಾಗಿದೆ. ಇದರ ನೇರ ಪರಿಣಾಮ ನೀರು-ನೆರಳಿನ ಮೇಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ತೋಟಗಳು ಮೊದಲಿನ ಹಸುರು-ಹೊದಲು ಕಳೆದುಕೊಂಡು ಬರಸುತ್ತಿವೆ. ನಿತ್ಯ ಹರಿದ್ವರ್ಣ ತೋಟಗಳು ಇದೀಗ ಮಳೆಗಾಲದಲ್ಲೂ ತಮ್ಮ ವೈಭವವನ್ನು ಮರಳಿ ಗಳಿಸಿಕೊಳ್ಳುತ್ತಿಲ್ಲ. ‘ಅವಳೇನು ಮಹಾ...’ ಎಂಬ ನಮ್ಮಗಳ ಅಹಂಕಾರದ ಧೋರಣೆಗೆ ಅವಳೇ ತಕ್ಕ ಶಾಸ್ತಿ ಮಾಡಿದ್ದಾಳೆ.

‘ಲಾಸ್ಟ್’ಡ್ರಾಪ್: ಮಲೆನಾಡಿನ ಗ್ರಾಮಗಳು ಇಂಥ ಹತ್ತು ಹಲವು ನೀರಸ್ನೇಹಿ ಪಾರಂಪರಿಕ ಜ್ಞಾನವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಒಂದಕ್ಕಿಂತ ಒಂದು ಭಿನ್ನ, ಕುತೂಹಲಕಾರಿ. ಆದರೆ ಅವುಗಳ ಬಗೆಗಿನ ಕುತೂಹಲವನ್ನು ನಾವು ಕಳೆದುಕೊಂಡಿದ್ದರಿಂದ ಅಪೂರ್ವಜ್ಞಾನದ ಕೊಂಡಿಯೊಂದು ಕಳಚಿಹೋಗುತ್ತಿದೆ.

2 comments:

ಜಗದೀಶಶರ್ಮಾ said...

ಬರಹ ಚೆನ್ನಾಗಿ ಬಂದಿದೆ.

ಅವೀನ್ said...

ಲೇಖನ ನಿಜಕ್ಕೋ ಅದ್ಭುತ ಹಾಗು ಅಷ್ಟೇ ವಿಷಯ ಸಂಪನ್ನವಾಗಿದೆ. ನಿಜಕ್ಕೋ ಆತಂಕಕಾರಿ ವಿಷಯವೆಂದರೆ ನಮ್ಮ ಜನಗಳು ಹರ್ಷದ ಕೂಳಿಗಾಗಿ ವರ್ಷದ ಕೂಳಿನ ಬಗ್ಗೆ ಯೋಚಿಸುವುದನ್ನೇ ಮರೆತಿದ್ದಾರೆ.
ನಿಮ್ಮ ಈ ಅಂಕಣ ಅವರನ್ನ ಎಚ್ಚರಿಸಿವುದರಲ್ಲಿ ಸಂದೇಹವಿಲ್ಲ..