ಪ್ರತಿಪಕ್ಷಗಳು ಎಂದಿನಂತೆಯೇ ಹುಯಿಲೆಬ್ಬಿಸಿದವು ಬಿಡಿ. ಅವತ್ತು ಬಿಜೆಪಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಬಂದಿದ್ದಾಗಲೇ ‘ರಾಜ್ಯವನ್ನು ಬಿಜೆಪಿಯವರು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ’ ಎಂದು ಅಲವತ್ತುಕೊಂಡವರು ಇವತ್ತು ಸುಮ್ಮನಿದ್ದಾರೆಯೇ ? ಅವರು ಯಾವ ಅರ್ಥದಲ್ಲಿ ಕರ್ನಾಟಕ ಇನ್ನೊಂದು ಗುಜರಾತ್ ಆಗುತ್ತದೆ ಎನ್ನುತ್ತಿದ್ದಾರೋ ಗೊತ್ತಿಲ್ಲ. ಆದರೆ ಒಂದೊಮ್ಮೆ ನಮ್ಮ ಸರಕಾರ ರಾಜ್ಯವನ್ನು ಇನ್ನೊಂದು ಗುಜರಾತ್ ಮಾಡಿದರೆ ಯಡಿಯೂರಪ್ಪ ಅವರು ಕನಿಷ್ಠ ಇನ್ನೂ ಮೂರು ಅವ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ.
ಇನ್ನು ಬಿಜೆಪಿಯವರೂ ಅಷ್ಟೇ, ಅಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಮಾದರಿ ಎನ್ನಲು ಆರಂಭಿಸಿದ್ದರು. ಈಗಲೂ ಅದೇ ಜಪ ಮುಂದುವರಿಸಿದ್ದಾರೆ. ಮೋದಿ ಮಾದರಿ ಎಂದ ಮಾತ್ರಕ್ಕೆ ಅಥವಾ ಚಿಂತನ ಸಭೆಗೆ ಅವರನ್ನು ಕರೆಸಿ ಭಾಷಣ ಕೇಳಿಸಿಕೊಂಡ ಮಾತ್ರಕ್ಕೆ ಕರ್ನಾಟಕವನ್ನು ಗುಜರಾತ್ ಮಾಡಲು ದೇವರಾಣೆ ಸಾಧ್ಯವಿಲ್ಲ ಎಂಬುದು ಸದ್ಯದ ಸಂಪುಟದ ಕಾರ್ಯ ವೈಖರಿ ನೋಡಿದರೇ ಅರ್ಥ ಆಗುತ್ತದೆ. ಅಷ್ಟಕ್ಕೂ ಮೋದಿ ಮಾದರಿ ಅಂದರೇನು ? ಇನ್ನೊಂದು ಗುಜರಾತ್ ಆಗುವುದು ಹೇಗೆ ? ಎಂಬುದನ್ನು ಕೇಳಿ ನೋಡಿ, ಬಹುಶಃ ಆಡಳಿತಾರೂಢರಿಗೂ ಗೊತ್ತಿದ್ದಂತಿಲ್ಲ. ಪ್ರತಿಪಕ್ಷದವರಿಗೂ ತಿಳಿದಿಲ್ಲ. ಗೊತ್ತಾಗಲು ಅವರೊಮ್ಮೆ ಇಂದಿನ ಗುಜರಾತ್ ಅನ್ನು ಹೋಗಿ ನೋಡಿಕೊಂಡೇ ಬರಬೇಕು.
ಬಿಟ್ಹಾಕಿ, ಒಂದೊಮ್ಮೆ ಕರ್ನಾಟಕ ಇನ್ನೊಂದು ಗುಜರಾತ್ ಆದರೆ ನಮ್ಮ ಪಾಲಿಗೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಏಕೆಂದರೆ ಈವರೆಗೆ ಕೇವಲ ಕೃಷಿ ಕ್ಷೇತ್ರವೊಂದರಲ್ಲೇ ಮೋದಿ ಮಾಡಿರುವ ಮೋಡಿ ನೋಡಿ ನಿಜಕ್ಕೂ ಬೆರಗು ಹುಟ್ಟುತ್ತದೆ. ದುರಂತವೆಂದರೆ ಮೋದಿ ಎಂದ ತಕ್ಷಣವೇ ಹಿಂದು-ಮುಸ್ಲಿಂ ಪ್ರಕರಣವನ್ನಷ್ಟೇ ನಮ್ಮ ಮಾಧ್ಯಮಗಳೂ ಬಿಂಬಿಸುತ್ತವೆ. ಹೆಚ್ಚೆಂದರೆ ಅಲ್ಲಿನ ಕೈಗಾರಿಕೆಗಳ ಬೆಳವಣಿಗೆಗಳ ಬಗೆಗೆ ಹೇಳಲಾಗುತ್ತದೆ. ಪ್ರಶ್ನೆ ಏನೆಂದರೆ ಅಭಿವೃದ್ಧಿ ಎಂದರೆ ಕೇವಲ ಕೈಗಾರಿಕೆಗಳೇ ? ಐಟಿ-ಬಿಟಿ ಕಂಪನಿಗಳಷ್ಟೇ ಅಭಿವೃದ್ಧಿಗೆ ಮಾನದಂಡವೇ ? ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಿ ಮೋದಿಯವರು ನಡೆಸಿರುವ ಕ್ರಾಂತಿ ಸುದ್ದಿಯಾಗುವುದೇ ಇಲ್ಲ ಏಕೆ ?
ಬಹುಶಃ ವಾಸ್ತವ ಗೊತ್ತಾದರೆ ನಮ್ಮ ರಾಜಕಾರಣಿಗಳು, ಮಾಧ್ಯಮಗಳು ಹೀಗೆ ವರ್ತಿಸಲು ಸಾಧ್ಯವೇ ಇಲ್ಲ. ಮೋದಿಯವರ ಯಶಸ್ಸಿನ ಗುಟ್ಟು ನಿಜವಾಗಿ ಅಡಗಿರುವುದೇ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಲ್ಲಿ. ೨೦೦೦ನೇ ಇಸವಿಯಿಂದ ಈವರೆಗೆ ಗುಜರಾತ್‌ನಲ್ಲಾಗಿರುವ ಕೃಷಿ ಬೆಳವಣಿಗೆ ದೇಶದಲ್ಲೇ ಒಂದು ಮಹತ್ವದ ಮೈಲುಗಲ್ಲು. ಆ ರಾಜ್ಯದಲ್ಲಿ ೨೦೦೦-೦೧ ಹಾಗೂ ೨೦೦೭-೦೮ ರ ನಡುವಿನ ಅವಯ ವಾರ್ಷಿಕ ಕೃಷಿ ಬೆಳವಣಿಗೆ ಶೇ ೯.೬ರಷ್ಟು. ಗಮನಾರ್ಹ ಸಂಗತಿಯೆಂದರೆ ಇದು ಒಟ್ಟಾರೆ ಇಡೀ ದೇಶದ ಕೃಷಿ ಬೆಳವಣಿಗೆಯ ಪ್ರಮಾಣಕ್ಕಿಂತ ದುಪ್ಪಟ್ಟು ಹೆಚ್ಚು. ಮಾತ್ರವಲ್ಲ, ಈವರೆಗೆ ನಾವೇನು ನಮ್ಮ ಮಹತ್ವದ ಸಾಧನೆ ಎಂದು ಪಂಜಾಬ್‌ನ ಹಸಿರು ಕ್ರಾಂತಿಯ ಬಗೆಗೆ ಬೆನ್ನು ತಟ್ಟಿಕೊಳ್ಳುತ್ತ ಬಂದಿದ್ದೆವಲ್ಲಾ, ಅದಕ್ಕಿಂತಲೂ ಮಿಗಿಲು. ಇನ್ನೂ ಮುಖ್ಯ ಸಂಗತಿಯೆಂದರೆ, ಈವರೆಗೆ ಕೃಷಿ ಕ್ಷೇತ್ರದ ಇತಿಹಾಸದಲ್ಲೇ ಜಗತ್ತಿನ ಯಾವ ಪ್ರದೇಶದಲ್ಲೂ ಇಂಥ ಬೆಳವಣಿಗೆ ದಾಖಲಾಗಿಲ್ಲ. ಸ್ವಾಮಿ, ಇಲ್ಲಿ ಕೇಳಿ. ಇಂಥ ಬೆಳವಣಿಗೆ ಸಾಧ್ಯವಾದದ್ದು ಯಾವುದೋ ಸಮೃದ್ಧ ನೀರಾವರಿ ಇರುವ ರಾಜ್ಯದಲ್ಲಿ ಅಲ್ಲ; ಸತತ ಬರಪೀಡಿತವೆಂಬ ಕುಖ್ಯಾತಿಗೆ ಪಾತ್ರವಾದ ಗುಜರಾತ್‌ನಲ್ಲಿ ಎಂಬುದನ್ನು ಮರೆಯಬೇಡಿ. ಅದರಲ್ಲೂ ಈ ಕ್ರಾಂತಿಗೆ ಮೋದಿಯವರು ಮುನ್ನುಡಿ ಬರೆದದ್ದೇ ೨೦೦೦ನೇ ಇಸವಿಯಲ್ಲಿ ಗುಜರಾತ್ ಅನ್ನು ಬಿಟ್ಟೂ ಬಿಡದೇ ಕಾಡಿದ ಬೀಕರ ಬರಗಾಲದಲ್ಲೇ ಎಂಬುದನ್ನು ಮರೆಯಬೇಡಿ.
ಎಲ್ಲ ಅಪಪ್ರಚಾರ, ಸೋ ಕಾಲ್ಡ್ ಮಾಧ್ಯಮಭೀರುಗಳ ‘ಸವಿಗನಸು’ಗಳ ನಡುವೆಯೂ ಮೋದಿ ಸರಕಾರ ಮತ್ತೆ ಮತ್ತೆ ಆರಿಸಿ ಬರುತ್ತಿದೆ. ಏಕೆಂದರೆ ಇಂದಿಗೂ ಗುಜರಾತ್ ನಿರ್ಣಾಯಕ ಮತದಾರರಿರುವುದು ಗ್ರಾಮೀಣ ಭಾಗದಲ್ಲೇ, ಅದರಲ್ಲೂ ಮುಖ್ಯವಾಗಿ ಕೃಷಿಕರು. ಅವರಿಗೆ ಏನು ಬೇಕೆಂಬುದು ಮೋದಿಯವರಿಗೆ ಗೊತ್ತು ಎಂಬುದು ಅವರ ಟೀಕಾಕಾರರಿಗೆ ಗೊತ್ತಿಲ್ಲ.
ಗುಜರಾತ್‌ನ ಶೇ. ೭೦ರಷ್ಟು ಪ್ರದೇಶ ಬರಪೀಡಿತ. ಬಹುತೇಕ ಜಿಲ್ಲೆಗಳು, ಒಂದೋ ಅದು ಒಣ ಪ್ರದೇಶವಾಗಿರುತ್ತದೆ, ಇಲ್ಲವೇ ಅರೆ ಒಣ ಪ್ರದೇಶವಾಗಿರುತ್ತದೆ. ಸಂಪೂರ್ಣ ನೀರಾವರಿ ಪ್ರದೇಶ ಎಂಬುದು ಅಲ್ಲಿ ತೀರಾ ವಿರಳ. ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಸರದಾರ್ ಸರೋವರ್ ಯೋಜನೆಯ ಬಗೆಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೋದಿ ವಿರೋಗಳು ಎಂದಿನಂತೆ ಅದನ್ನೂ ಬಿಡದೇ ಟೀಕಿಸಿದ್ದಾರೆ. ಆ ಯೋಜನೆ ಈವರೆಗೆ ಕೇವಲ ೦.೧ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರಾವರಿ ಒದಗಿಸಲು ಸಫಲವಾಗಿದೆ. ಆ ರಾಜ್ಯದ ಶೇ. ೮೨ರಷ್ಟು ಕೃಷಿ ನಿಂತಿರುವುದೇ ಬೋರ್‌ವೆಲ್‌ಗಳ ಮೇಲೆ. ೧೯೯೦ರ ಮಧ್ಯಭಾಗದಲ್ಲಿ ಅಂತರ್ಜಲ ಮಟ್ಟ ತೀರಾ ಅಪಾಯಕಾರಿ ಸನ್ನಿವೇಶವನ್ನು ತಲುಪಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿ ಮಳೆ ಕೊಯ್ಲು ವಿಕೇಂದ್ರೀಕರಣದ ಸಾಹಸಕ್ಕೆ ಮುಂದಾಗಲಾಯಿತು. ಚೆಕ್ ಡ್ಯಾಮ್‌ಗಳು, ಗ್ರಾಮೀಣ ಕೆರೆಗಳ ಪುನರುತ್ಥಾನ ಹಾಗೂ ಬೋರಿ ಬಂಡ್( ಮರಳು ಚೀಲಗಳಿಂದ ಒಡ್ಡುಕಟ್ಟುವುದು)ಗಳ ನಿರ್ಮಾಣ ಗಣನೀಯವಾಗಿ ನಡೆಯಿತು. ೨೦೦೭ರ ಹೊತ್ತಿಗೆ ಇದು ತಾರಕಕ್ಕೇರಿತು. ಪ್ರತಿಪಕ್ಷ ಕಾಂಗ್ರೆಸ್ ಆ ಬಾರಿಯ ಚುನಾವಣೆಯಲ್ಲಿ ‘ಚೆಕ್ ದೆ ಗುಜರಾತ್’ ಘೋಷಣೆಯೊಂದಿಗೆ ಕಣಕ್ಕಿಳಿದರೆ ಮೋದಿ ‘ಚೆಕ್ ಡ್ಯಾಮ್ ಗುಜರಾತ್’ ಘೋಷಣೆ ಮೊಳಗಿಸಿದರು. ಅದೇ ಚೆಕ್ ಡ್ಯಾಮ್ ಮೋದಿಯವರನ್ನು ಮತ್ತೆ ಅಕಾರಕ್ಕೆ ತಂದಿತು.
ಒಂದು ಅಧ್ಯಯನದ ಪ್ರಕಾರ ೨೦೦೦ದಲ್ಲಿ ೧೦,೭೦೦ ಚೆಕ್‌ಡ್ಯಾಮ್‌ಗಳು ನಿರ್ಮಾಣವಾಗಿದ್ದವು. ಅದರಿಂದ ಬರ ಪೀಡಿತ ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಅದರ ಹತ್ತುಪಟ್ಟು ಹೆಚ್ಚು ಚೆಕ್‌ಡ್ಯಾಮ್‌ಗಳು ತಲೆ ಎತ್ತಿವೆ. ಸೌರಾಷ್ಟ್ರ ಮತ್ತು ಕುಛ್ ವಲಯದ ಕೃಷಿ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯನ್ನು ನೀಡಿದೆ. ಹೈನು ಉದ್ಯಮ ಬೆಳವಣಿಗೆಗೂ ಇದು ಕಾರಣವಾಯಿತು. ಹನಿ ನೀರಾವರಿಗೆ ಸಾಲ, ಸಹಾಯಧನ ಸೌಲಭ್ಯ ಹೆಚ್ಚಿಸಲಾಯಿತು. ಒಟ್ಟು ವೆಚ್ಚದ ಶೇ.೫ ರಷ್ಟನ್ನು ಮಾತ್ರ ರೈತರು ಪಾವತಿಸಿದರು. ಸರಕಾರಿ ಮಾಲೀಕತ್ವದ ಕಂಪನಿಗಳು ಶೇ.೫೦ ರಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸಿದವು. ಉಳಿದ ಮೊತ್ತಕ್ಕೆ ಸಾಲಸೌಲಭ್ಯ ಒದಗಿಸಲಾಯಿತು. ಹೀಗೆ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿತು. ಹನಿ ನೀರಾವರಿಗೆ ಅತಿ ಹೆಚ್ಚು ಬಲವನ್ನು ತಂದು ಕೊಟ್ಟದ್ದು ಸರದಾರ್ ಸರೋವರ್ ಯೋಜನೆ.
ಗ್ರಾಮೀಣ ರಸ್ತೆಗಳ ಸುಧಾರಣೆ ಸಹ ಸಣ್ಣ ಸಂಗತಿಯೇನಲ್ಲ. ದೇಶದ ಅತ್ಯುತ್ತಮ ರಸ್ತೆ ಸಂಪರ್ಕ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಗುಜರಾತ್ ಸಹ ಒಂದು. ಶೇ.೯೮.೭ ಹಳ್ಳಿಗಳು ಪಕ್ಕಾ ರಸ್ತೆಗಳನ್ನು ಹೊಂದಿವೆ. ಇನ್ನು ಮೋದಿಯವರ ಜ್ಯೋತಿಗ್ರಾಮ ಯೋಜನೆ ನಿಜಕ್ಕೂ ದೇಶದ ಎಲ್ಲ ರಾಜ್ಯಗಳಿಗೂ ಮಾದರಿ. ಪಂಪ್ ಸೆಟ್ ಹಾಗೂ ಮನೆ ಬಳಕೆಗೆ ಪ್ರತ್ಯೇಕ ಫೀಡರ್ ಅನ್ನು ಈ ಯೋಜನೆಯಡಿ ಒದಗಿಸಲಾಗಿದೆ. ಇದರಿಂದ ಮನೆ ಬಳಕೆಗೆ ನಿರಂತರ ವಿದ್ಯುತ್ ಪೂರೈಕೆ ಹಾಗೂ ಕೃಷಿಗೆ ದಿನದ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. ಕೃಷಿ ಮಾತ್ರವಲ್ಲ ಗ್ರಾಮೀಣಾಭಿವೃದ್ಧಿಯ ಸಾಧನೆಗೂ ಇದು ಪೂರಕವಾಗಿದೆ.
ಇನ್ನು ಕೃಷಿ ಉದ್ಯಮದ ಅಭಿವೃದ್ಧಿಯದು ಬೇರೆಯದೇ ಆದ ಅಧ್ಯಾಯ. ಸಂಶೋಧನೆಯ ಅನುಕೂಲಕ್ಕೆ ಗುಜರಾತ್ ಕೃಷಿ ವಿಶ್ವ ವಿದ್ಯಾಲಯವನ್ನು ನಾಲ್ಕು ಪ್ರತ್ಯೇಕ ವಿವಿಗಳನ್ನಾಗಿ ವಿಂಗಡಿಸಲಾಗಿದೆ. ಕೃಷಿ ಸಂಶೋದನೆಗಳು ರೈತರ ಹೊಲದಲ್ಲಿಯೇ ನಡೆಯುತ್ತವೆ. ಕೃಷಿ ತಾಂತ್ರಿಕತೆ ನೇರವಾಗಿ ರೈತರನ್ನು ತಲುಪುತ್ತಿವೆ. ಅಕಾರಿಗಳು ರೈತರು ಕೂರೆಂದರೆ ಕೂರುತ್ತಾರೆ, ನಿಲ್ಲೆಂದರೆ ನಿಲ್ಲುತ್ತಾರೆ. ನೈಜ ಅರ್ಥದಲ್ಲಿ ಗ್ರಾಮಗಳ, ರೈತರ ಸ್ವಾವಲಂಬನೆ ಜಾರಿಯಾಗಿದೆ. ರೈತ ಸಬಲೀಕರಣ ಎಂಬುದಕ್ಕೆ ಅಕ್ಷರಶಃ ಅರ್ಥ ಕಟ್ಟಿಕೊಟ್ಟಿದ್ದಾರೆ ಮೋದಿ. ಬೃಹತ್ ನೀರಾವರಿ ಯೋಜನೆಗಳಿಗಿಂತ ಪುಟ್ಟ ಪುಟ್ಟ ಉಪಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಈಗ ಹೇಳಿ ಕರ್ನಾಟಕ ಮತ್ತೊಂದು ಗುಜರಾತ್ ಆಗಬೇಕಿಲ್ಲವೇ ? ಯಾರು ಏನೇ ಬಡಬಡಿಸಲಿ. ಹಾಗೊಮ್ಮೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಯಡಿಯೂರಪ್ಪನವರೇ, ಪ್ಲೀಸ್ ! ಅದು ನಿಮ್ಮಿಂದ ಸಾಧ್ಯವೇ ?
‘ಲಾಸ್ಟ್’ಡ್ರಾಪ್: ನಮ್ಮ ಹಸಿರು ಕ್ರಾಂತಿ ಆಹಾರ ಸ್ವಾವಲಂಬನೆ ಎಂಬುದು ನಿಜವಾಗಿ ಅತಿ ದೊಡ್ಡ ಭ್ರಾಂತಿ. ಅದು ಅಸಲಿಗೆ ನಮ್ಮ ಕೃಷಿ ವೈವಿಧ್ಯದ ಅಪಹರಣಕ್ಕೆ ಅಮೆರಿಕ ವಿಶ್ವಮಟ್ಟದಲ್ಲಿ ಹೂಡಿದ್ದ ಹುನ್ನಾರ. ಅದಕ್ಕೆ ನಾವು ಯಶಸ್ವಿಯಾಗಿ ಬಲಿಯಾಗಿದ್ದೇವೆ.
No comments:
Post a Comment