Monday, February 22, 2010

ಲಾಪೋಡಿಯಾದ ಲಫಡಾಗೆ ಈತ ‘ಲಕ್ಷ್ಮಣ’ ರೇಖೆ

ಹೇಳಿ, ಕೇಳಿ ಅದು ಹುಚ್ಚರ ಹಳ್ಳಿ. ನಂಬಬೇಕು ಆ ಊರಿನ ಹೆಸರೇ ಹಾಗೆ. ಅದಕ್ಕೂ ಕಾರಣವಿದೆ. ಅದನ್ನು ತಿಳಿಯುವ ಮುನ್ನ ಒಂದು ಕಥೆ ಕೇಳಿ.

ಅದು ೧೯೭೩ರ ಸುಮಾರು, ಇನ್ನೇನು ಚಳಿ ಮುಕ್ಕರಿಸಿಕೊಂಡು ಮುಗಿಬೀಳುವ ಹುನ್ನಾರದಲ್ಲಿತ್ತು. ಹತ್ತು ಹದಿನೈದು ದಿನಗಳು ದಾಟಿಬಿಟ್ಟರೆ ಮೈ ಕೈ ಮರಗಟ್ಟಿಹೋಗುವುದರಲ್ಲಿ ಅನುಮಾನವಿಲ್ಲ. ಅಂಥಾ ಊರಿಗೊಬ್ಬ ಕಂಬಳಿ ಮಾರುವವ ಬಂದ. ಮುಖವನ್ನೂ ಮೀರಿ ನಿಂತ ಪೊಗದಸ್ತಾದ ಮೀಸೆ. ಅಷ್ಟೇ ಮಸ್ತಾದ ದೇಹ. ಕಟ್ಟಾಳು. ತಲೆಯ ಮೇಲೊಂದು ಬಿಗಿಯಾದ ಹೊರೆ ಹೊತ್ತು ಆ ಊರಿಗೆ ಕಾಲಿಟ್ಟದ್ದೇ ತಡ ಊರಿನ ಜಹಗೀರದಾರ್ ಎದುರಾದ. ಊರೆಲ್ಲ ಸುತ್ತಾಡಿ ಸುಮ್ಮನೇ ಏಕೆ ಕಷ್ಟಪಡುವೆ ? ಒಂದು ತಿಂಗಳ ಮಾತಿಗೆ ಕಂಬಳಿ ದುಡ್ಡಿಗೆ ಸಾಲ ನಿಲ್ಲುವುದಾದರೆ ಎಲ್ಲವನ್ನೂ ಮಾರಿಸಿಕೊಡುವ ಭರವಸೆಯನ್ನು ಆತ ನೀಡಿದ. ವ್ಯಾಪಾರಿ ಅಂದ ಮೇಲೆ ಫಾಯಿದೆ ನೋಡದಿರುತ್ತಾರೆಯೇ ? ಪಾಪ ಜಹಗೀರದಾರನ ವರಸೆ ಆತನಿಗೇನು ಗೊತ್ತು ? ಅನಾಯಾಸವಾಗಿ ಅಷ್ಟೂ ಕಂಬಳಿ ಮಾರಾಟವಾಗುವುದಾದರೆ ಒಂದು ತಿಂಗಳಲ್ಲಿ ಆಗುವುದೇನಿದೆ ? ಹೇಗೂ ಜಹಗೀರದಾರರೇ ಜಾಮೀನು ನಿಂತಿದ್ದಾರೆ. ಹಣ ಎಲ್ಲಿಗೆ ಹೋದೀತು ಎಂದುಕೊಂಡು ಇಡೀ ಹೊರೆಯನ್ನೇ ಅಲ್ಲಿಳಿಸಿ ಹೋಗಿಬಿಟ್ಟ. ಕ್ಷಣದಲ್ಲಿ ಕಂಬಳಿಗಳು ಬಿಕರಿಯಾಗಿ ಬಿಟ್ಟವು.


ಕಂಬಳಿ ಮಾರಾಟಗಾರ ಆತ್ತ ಹೋದನೋ ಇಲ್ಲವೋ ಹೊಂಚು ಹಾಕುತ್ತ ಕುಳಿತಂತಿದ್ದ ಚಳಿ ಊರಿಗೆ ಕಾಲಿಟ್ಟಿತು. ಕಳೆದ ಬೇಸಿಗೆ ಬಿಸಲಿಗೆ, ಮಳೆಗಾಲದಲ್ಲಿ ಕಾಡಿದ್ದ ಬರಕ್ಕೆ ಸವಾಲು ಹಾಕುವ ರೀತಿಯಲ್ಲಿತ್ತು ಆ ವರ್ಷದ ಚಳಿ. ಇಡೀ ಊರಿಗೆ ಊರೇ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕುಳಿತಿತ್ತು. ಹಾಗೆ ಬೆಚ್ಚಗೆ ಇದ್ದಾಗ ದಿನ ಕಳೆದದ್ದಾದರೂ ಹೇಗೆ ತಿಳಿಯುತ್ತದೆ ? ಅಕೋ-ಇಕೋ ಎನ್ನುತ್ತಿರುವಾಗಲೇ ಒಂದು ತಿಂಗಳು ಕಳೆದು ಹೋಯಿತು. ಮಾತಿನಂತೆ ಕಂಬಳಿಯ ದುಡ್ಡನ್ನು ಎಲ್ಲರೂ ಪಾವತಿಸಬೇಕಿತ್ತು. ಅದನ್ನು ವಸೂಲು ಮಾಡಲು ಮತ್ತೆ ಬಂದ ಮಾರಾಟಗಾರ ಹಣ ಪಡೆದು ಹಸನ್ಮುಖಿಯಾಗಿ ಮರಳಬೇಕಿತ್ತು. ಅಷ್ಟಾಗಿಬಿಟ್ಟರೆ ಅದು ಹುಚ್ಚರಹಳ್ಳಿ ಹೇಗಾದೀತು ? ಹಣ ಕೊಡಬೇಕಾದವರು ಕೊಡಲಿಲ್ಲ. ಕೊಡಿಸುತ್ತೇನೆಂದವರು ಸಿಗಲಿಲ್ಲ. ಏನು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾಗಲೇ ಒಂದಿಬ್ಬರು ‘ಸಂಪನ್ನ’ರೆಂಬುವವರು ಎದುರಾದರು. ಕಷ್ಟ ಕಾಲದಲ್ಲಿ ಮಾತನಾಡಿಸುತ್ತಿದ್ದಾರೆಂದಾದ ಮೇಲೆ ನಂಬದಿರಲಾದೀತೆ ? ಷರಾಬು ಬಾಟಲಿಯ ಬೇಡಿಕೆಯೊಂದಿಗೆ ಹಣ ವಸೂಲಿ ಮಾಡಿಕೊಡಿಸುವ ಷರತ್ತಿನ ಭರವಸೆ ಅವರಿಂದ ಕಂಬಳಿಗಾರನಿಗೆ ಸಿಕ್ಕಿತು. ಅವತ್ತೇನೋ ಗಡಂಗು ನಡೆದು ಹೋಯಿತು. ಒಂದೆರಡು ದಿನ ಬಿಟ್ಟು ಬರಲು ಹೇಳಿ ಆತನನ್ನು ಕಳಿಸಿದ್ದೂ ಆಯಿತು. ಇಲ್ಲದ ಆಶಾ ಭಾವ, ಒಲ್ಲದ ಮನಸ್ಸಿನೊಂದಿಗೆ ಅವ ಹೋದದ್ದೂ ಆಯಿತು, ಮತ್ತೆ ಬಂದದ್ದೂ ಆಯಿತು. ಈ ಬಾರಿ ಸಿಕ್ಕ ಸಂಪನ್ನರೆಂಬೋ ಸಂಪನ್ನರ ಮಾತಿನ ಧಾಟಿ ಬದಲಾಗಿತ್ತು. ತಮ್ಮಿಬ್ಬರ ಕಂಬಳಿ ಹಣವನ್ನು ಮಾಫಿ ಮಾಡಿಬಿಟ್ಟರೆ ಉಳಿದ ಹಣ ಕೈಸೇರುತ್ತೆ ಎಂಬ ಕಂಡೀಷನ್ ಮುಂದೆ ಬಂದಿತ್ತು. ಕಂಬಳಿಗಾರನಿಗೂ ರೇಗಿ ಹೋಯಿತು. ಮಾತಿಗೆ ಮಾತು ಬೆಳೆಯಿತು. ಇವರೂ ಬಿಡಲಿಲ್ಲ ಕೈ ಹಚ್ಚಿದರು. ಧರ್ಮದೇಟುಗಳೂ ಬಿದ್ದವು. ಆದರೂ ಯಾರೊಬ್ಬರೂ ನ್ಯಾಯಕ್ಕೆ ಬರಲಿಲ್ಲ. ಮಾತಾಡಿಕೊಟ್ಟಿದ್ದ ಜಾಗೀರ್‌ದಾರ್ ಈಗ ನ್ಯಾಯಕ್ಕೆ ಕುಳಿತ. ಊರವರ ಮೇಲೆ ಕೈ ಮಾಡಿದರೆ ಕಾಲು ಮುರಿಯಬೇಕಾದೀತು ಎಂಬ ಎಚ್ಚರಿಕೆ ಬಂತು, ಪಂಚಾಯತಿಯಿಂದ ಇಬ್ಬರ ಜತೆ ಮತ್ತಿಬ್ಬರು ಸೇರಿದರು, ನಾಲ್ಕಿದ್ದ ಮಂದಿ ಎಂಟಾದರು. ಸಣ್ಣದೊಂದು ಗುಂಪೇ ನೆರೆಯಿತು. ಎಲ್ಲರೂ ಸೇರಿ ಮಾಡಿದ ನ್ಯಾಯ ಪಂಚಾಯ್ತಿ ಅತ್ಯದ್ಭುತವಾಗಿತ್ತು. ಈ ಕ್ಷಣ ಕಂಬಳಿಗಾರ ಊರು ಬಿಟ್ಟು ಹೋಗದಿದ್ದರೆ ಮುಂದಿನ ಅನಾಹುತಕ್ಕೆ ಯಾರೂ ಹೊಣೆಯಾಗಲು ಸಾಧ್ಯವಿಲ್ಲ... ಇಷ್ಟು ಆಗುವುದರೊಳಗೆ ಎದ್ದೆನೋ ಬಿದ್ದೆನೋ ಅಂತ ಆತ ಓಡಿ ಹೋಗಿಯಾಗಿತ್ತು. ಮತ್ತೆ ರಾತ್ರಿ ಊರಲ್ಲಿಆ ಸಂಭ್ರಮದಲ್ಲಿ ಗಡಂಗು ಸಮಾರಾಧನೆ.


‘ಹುಚ್ಚರ ಹಳ್ಳಿ’ ಅಂತ ಅದಕ್ಕೆ ಹೆಸರು ಬರಲು ಬೇರೆ ಕಾರಣ ಬೇಕಿಲ್ಲ ತಾನೆ ? ಹೌದು, ರಾಜಸ್ಥಾನದ ತೀರಾ ಹೀನಾಯ ಬರಪೀಡಿತ ಲಾಪೋಡಿಯಾ ಎಂಬ ಊರಿನ ಮಂದಿ ಅಕ್ಷರಶಃ ಇಂಥ ಲಫಡಾಗಳಿಂದಲೇ ಒಂದು ಕಾಲದಲ್ಲಿ ಕುಖ್ಯಾತರಾದವರು. ಗುರ್ಜರ್ ಜನಾಂಗದವರೇ ಹೆಚ್ಚಾಗಿ ವಾಸಿಸುವ ಪ್ರದೇಶವದು. ಲಾಪೋಡಿಯಾ ಎಂಬ ರಾಜಸ್ಥಾನಿ ಪದದ ಅರ್ಥ ಹುಚ್ಚರ ಹಳ್ಳಿ ಎಂದೇ. ಆ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇರಲಿಲ್ಲ. ಅವರಿರುವುದೇ ಹಾಗೆ. ಎಂತಾದರೂ ಆಗಲಿ; ಹೊಟ್ಟೆ ತುಂಬಬೇಕಷ್ಟೆ. ಉದ್ಯೋಗ ಮಾಡಲು ಮನಸ್ಸಿಲ್ಲ. ಮನಸ್ಸಿದ್ದರೂ ಗೊತ್ತಿದ್ದ ಒಂದೇ ಉದ್ಯೋಗ ಕೃಷಿಗೆ ಅಗತ್ಯ ನೀರು ಕಾಣದೇ ಅದೆಷ್ಟು ವರ್ಷಗಳಾಯಿತೋ. ಮಳೆ ಬೀಳದೇ ಭೂಮಿಯೇ ಬಾಯ್ದೆರೆದುಕೊಂಡು ಮಲಗಿರುವಾಗ ಮನುಷ್ಯರಿಗಾದರೂ ಎಲ್ಲಿಂದ ಸಿಕ್ಕೀತು ನೀರು. ವರ್ಷಕ್ಕೆ ಹೆಚ್ಚೆಂದರೆ ೩೨೦ ಮಿಲಿ ಮೀಟರ್ ಮಳೆ. ಅಷ್ಟನ್ನೂ ಸರಿಯಾಗಿ ಕಾಣುವುದು ಐದೋ ಆರೋ ವರ್ಷಕ್ಕೊಮ್ಮೆ. ಹೋಗಲಿ ಅದಾದರೂ ತಾಲಾಬ್‌ಗಳಲ್ಲಿ ನಿಂತಿದ್ದರೆ ಬೇಸಿಗೆ ಭಾರವಾಗುತ್ತಿರಲಿಲ್ಲ. ಆದರೆ ತಾಲಾಬ್‌ಗಳೇ ಹೂಳಿನಡಿ ಹೂತು ಹೋಗುತ್ತಿದ್ದಾಗ ನೀರಾದರೂ ಹೇಗೆ ನಿಲ್ಲಲು ಸಾಧ್ಯವಾದೀತು ? ಮನುಷ್ಯ ಬದುಕುವುದೇ ಕಷ್ಟವಾಗಿರುವಾಗ ಜಾನುವಾರುಗಳನ್ನು ಸಾಕುವುದಾದರೂ ಹೇಗೆ ? ಹೀಗಾಗಿ ಅವುಗಳನ್ನು ಹೊಡೆದಟ್ಟಿಯಾಗಿತ್ತು. ಸಾಕಿದವರು ಹೊಡೆದಟ್ಟಿದರು ಎನ್ನುವುದಕ್ಕಿಂತ ಮೇವು-ನೀರು ಸಿಗದಿದ್ದ ಮೇಲೆ ಜಾನುವಾರುಗಳೇ ಅವನ್ನು ಹುಡುಕಿಕೊಂಡು ಹೊರಟುಬಿಟ್ಟಿದ್ದವು.


ಇಂತಿಪ್ಪ ಸನ್ನಿವೇಶದಲ್ಲಿ ಜನ ಲಫಡಾಕ್ಕಿಳಿಯದೇ ಮತ್ತಿನ್ನೇನು ಮಾಡಿಯಾರು ? ಹಿರಿಯರೇ ಹೀಗೆ ಹಾದಿ ತಪ್ಪಿದ ಮೇಲೆ ಯುವಕರು ಮಕ್ಕಳ ಕಥೆ ಏನಾದೀತೆಂಬುದನ್ನು ಊಹಿಸಿಕೊಳ್ಳಬಹುದು. ಒಟ್ಟರೆ, ಕಂಡಕಂಡ ಕಟ್ಟೆಗಳಲ್ಲಿ ಕುಳಿತು ಕಾಡು ಹರಟೆ ಹೊಡೆಯವುದು, ದಾರಿ ಹೋಕರನ್ನು ವ್ಯಂಗ್ಯ ಮಾಡುವುದು, ಪಾಪದವರು ಸಿಕ್ಕರೆ ಅವರನ್ನು ಸುಲಿದು ಪರದೇಶಿಗಳನ್ನಾಗಿ ಮಾಡುವುದು, ಒಟ್ಟಾರೆ ಕಂಡವರ ಅನ್ನಕ್ಕೆ ಕನ್ನ ಹಾಕಿಯೇ ಜೀವಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಲಾಪೋಡಿಯಾದ ಮಂದಿಯ ಅಂಥ ಪ್ರವೃತ್ತಿಗೆ ಒಂದು ಉದಾಹರಣೆ ಕಂಬಳಿಗಾರನ ಪ್ರಕರಣ. ಇಷ್ಟಕ್ಕೇ ಕಥೆ ಮುಗಿಯುವುದಿಲ್ಲ.


ಇಷ್ಟೆಲ್ಲವೂ ಆಗುವಾಗ ಆಗಿನ್ನೂ ಹರೆಯಕ್ಕೆ ಕಾಲಿಡುತ್ತಿದ್ದ ಒಬ್ಬ ಯುವಕ ಸುಮ್ಮನೆ ನಿಂತು ಗಮನಿಸುತ್ತಿದ್ದ. ಅದೂ ಮುಂದೆ ನಿಂತು ಊರನ್ನು ಅಂಥ ಮಾರ್ಗದಲ್ಲಿ ಮುನ್ನಡೆಸುತ್ತಿದ್ದ, ಅನ್ಯಾಯವನ್ನು ಕಂಡೂ ಕಾಣದಂತೆ ಪೋಷಿಸುತ್ತಿದ್ದ ಜಹಗೀರುದಾರನ ಹಿರಿಯ ಮಗನಾತ. ಲಾಪೋಡಿಯಾದಲ್ಲಿ ಜಹಗೀರುದಾರಿಕೆಯೆಂದರೆ ಅದು ರಾಜಸ್ಥಾನದ ರಾಜಮನೆತನದ ಬಳವಳಿ. ಮಾತ್ರವಲ್ಲ, ಅವರೂ ಅದೇ ಮೂಲ ರಾಜ ಮನೆತನಕ್ಕೇ ಸೇರಿದವರು. ಅಂಥ ರಾಜ ಕುಟುಂಬದ ಆ ಯುವಕನಿಗೆ ಇದೇನೋ ವಿಚಿತ್ರವಾಗಿ ಕಂಡಿತು. ಯಾವತ್ತಿಗೂ ಅಪ್ಪನ, ಊರಿನವರ ನಡವಳಿಕೆ ಸರಿ ತೋರಲಿಲ್ಲ. ಹಾಗೆಂದು ಅಂಥದ್ದರ ಪರಿಚಯ ಅವನಿಗೆ ಆವರೆಗೂ ಆಗಿದ್ದಿರಲಿಲ್ಲ. ಆತ ಊರಿನಲ್ಲಿದ್ದರೆ ತಾನೆ ಅದು ಅರಿವಿಗೆ ಬರುವುದು ? ಆತ ದೂರದ ಜೈಪುರದಲ್ಲಿ ಉನ್ನತ ಶಿಕ್ಷಣಕ್ಕೆಂದು ತೆರಳಿದ್ದ. ಲಾಪೋಡಿಯಾದ ಮಟ್ಟಿಗೆ ಉನ್ನತ ಶಿಕ್ಷಣವೆಂದರೆ ನಾಲ್ಕನೆಯ ತರಗತಿಯ ನಂತರದ ಓದೆಲ್ಲವನ್ನೂ ಅವರು ಹಾಗೆಂದೇ ಗುರುತಿಸುತ್ತಿದ್ದರು. ಏಕೆಂದರೆ ಆ ಊರಿನಲ್ಲಿ ಆಗ ಇದ್ದುದೇ ಮೂರನೆಯ ತರಗತಿಯವರೆಗಿನ ಶಾಲೆ. ತೀರಾ ಶ್ರೀಮಂತರ ಮಕ್ಕಳು ಮಾತ್ರ ಹೆಚ್ಚಿನ ಓದಿಗಾಗಿ ಜೈಪುರಕ್ಕೆ ಹೋಗುತ್ತಿದ್ದರು. ಜಹಗೀರದಾರನ ಮಗನೂ ಹಾಗೆ ಊರುಬಿಟ್ಟು ಆಗಲೇ ಆರೇಳು ವರ್ಷಗಳಾಗಿತ್ತು. ವರ್ಷಕ್ಕೊಮ್ಮೆ ಸಿಗುವ ದೀಪಾವಳಿ ರಜಕ್ಕೆ ಮಾತ್ರ ನಾಲ್ಕು ದಿನ ಊರಿಗೆ ಬಂದು ಮತ್ತೆ ಹೋಗಿ ಬಿಡುತ್ತಿದ್ದ. ಹೀಗಾಗಿ ಊರಿನ ಪರಿಸ್ಥಿತಿ ಆತನಿಗೆ ತೀರಾ ಅಪರಿಚಿತ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಹೀಗೆ ಊರಿಗೆ ಬಂದಾಗಲೇ ಇಂಥ ಘೋರ ಚಿತ್ರಣವೊಂದರ ದರ್ಶನವಾದ್ದು.


ಅಷ್ಟೇ, ತನಗೆ ಸರಿಕಾಣದ ಸಂಗತಿಯ ಬಗ್ಗೆ ಸಿಡಿದೆದ್ದ. ಖಂಡತುಂಡವಾಗಿ ಅನ್ಯಾಯವನ್ನು ಖಂಡಿಸಿದ. ಸ್ವತಃ ಜಹಗೀರದಾರ ತಂದೆಗೇ ಎದುರು ವಾದಿಸಿ ಅವರನ್ನು ಸರಿದಾರಿಗೆ ತರಲು ಯತ್ನಿಸಿದ. ಊರಿನ ದುಃಸ್ಥಿತಿಯ ಬಗ್ಗೆ ಮರುಗಿದ. ಇಡೀ ಹಳ್ಳಿಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಡುತ್ತಿದ್ದ ಬಡತನವನ್ನು ಬಡಿದೋಡಿಸಬೇಕೆಂದು ಚಿಂತಿಸಿದ. ಎಂದೋ ಊರುಬಿಟ್ಟು ಹೋಗಿದ್ದ ಶ್ರೀಮಂತ ಭಾರತೀಯ ಸಂಸ್ಕೃತಿಯನ್ನು ಮತ್ತೆ ನೆಲೆಗೊಳಿಸಬೇಕೆಂದು ಆಶಿಸಿದ. ಇಷ್ಟಲ್ಲಕ್ಕೂ ಕಾರಣವಾಗಿರುವ, ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಹತ್ತಾರು ವರ್ಷಗಳಿಂದ ಬೋರಲು ಬಿದ್ದುಕೊಂಡಿದ್ದ ಭೀಕರ ಬರಗಾಲವನ್ನು ಹೇಗಾದರೂ ನಿವಾರಿಸಬೇಕೆಂದು ನಿಶ್ಚಯಿಸಿದ. ಇದೆಲ್ಲವೂ ತನ್ನೊಬ್ಬನಿಂದಲೇ ಸಾಧ್ಯವಾಗದೆಂದು ನಿಶ್ಚಯಿಸಿದವನೇ ನಾಲ್ಕಾರು ಗೆಳೆಯರನ್ನು ಒಟ್ಟುಗೂಡಿಸಿಕೊಂಡು ರಾತ್ರಿ ಬೆಳಗೆನ್ನದೇ ಚರ್ಚೆಗೆ ನಿಂತ. ಕೊನೆಗೊಂದು ದಿನ ಬದುಕು ಕಲಿಸದ ಓದನ್ನು ಅಷ್ಟಕ್ಕೇ ನಿಲ್ಲಿಸಿ ತನ್ನೂರಿನವರಿಗೊಂದು ಹೊಸ ಬದುಕನ್ನು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಡಲು ನಿರ್ಧರಿಸಿ ಎದ್ದು ನಿಂತ.
ಇಂದು ಲಾಪೋಡಿಯಾ ಎಂಬುದು ದೇಶಕ್ಕೇ ಮಾದರಿ ನೀರಾವರಿ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದ್ದರೆ, ವಿಶ್ವವೇ ನಿಬ್ಬೆರಗಾಗಿ ನೋಡುವಂಥ ಬರ ನಿರೋಧಕ ಜಾಣ್ಮೆಯನ್ನು ಮೆರೆದಿದ್ದರೆ, ಅಲ್ಲಿನ ಬಾನ್ದಳ ಸ್ವಚ್ಛಂದ ಹಕ್ಕಿಗಳ ಕಲರವದಿಂದ ತುಂಬಿಹೋಗಿದ್ದರೆ, ಜಾನುವಾರುಗಳು ಮೈಕೈ ತುಂಬಿಕೊಂಡು ಹಾಲಿನ ಹೊಳೆ ಹರಿಸುತ್ತಿದ್ದರೆ, ಕಾನನ ಹಸಿರಾಚ್ಛಾದಿತವಾಗಿ ಕಂಗೊಳಿಸುತ್ತಿದ್ದರೆ, ನೀರ ಸಂಸ್ಕೃತಿಯೊಂದಿಗೆ ಭಾರತೀಯ ಸತ್ಪರಂಪರೆ ಮನೆ ಮಾಡಿದ್ದರೆ, ಕಂಡಕಂಡವರನ್ನು ಸುಲಿಯುತ್ತಿದ್ದ ಅದೇ ಹಳ್ಳಿಯ ಜನ ಇಂದು ಹೊಸಬರು ಯಾರೇ ಕಂಡರೂ ಯಾರೆಂಬುದನ್ನೂ ವಿಚಾರಿಸದೇ ಅತ್ಯಂತ ಗೌರವ-ಪ್ರೀತಿಪೂರ್ವಕವಾಗಿ ‘ರಾಂ ರಾಂ ಸಾಬ್‘ ಎಂದು ಕೈ ಮುಗಿದು ಆದರಿಸುತ್ತಿದ್ದರೆ... ಇಂಥ ಇನ್ನೂ ನೂರಾರು ರೇಗಳ ಸಾಮ್ರಾಜ್ಯ ವಾಸ್ತವಗಳಾಗಿ ಅನುಷ್ಠಾನಗೊಂಡಿದೆ ಎಂದರೆ ಅದಕ್ಕೆ ಆ ಯುವಕನೇ ಕಾರಣ.


ಇದೇನು ಅಮೀರ್ ಖಾನ್‌ನ ಹೊಸ ಸಿನೆಮಾದ ಸ್ಕಿಪ್ಟ್ ಅಲ್ಲ. ಆ ಯುವಕ ಚಿತ್ರದ ಹೀರೋನೂ ಅಲ್ಲ. ಆತ ರಾಜಸ್ಥಾನದ ನೀರ ಯಶೋಗಾಥೆಯ ನಾಯಕ, ಗ್ರಾಮವಿಕಾಸ್ ನವ ಯುವಕ್ ಮಂಡಲವೆಂಬ ಎಂಟು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜಲಯೋಧಪಡೆಯ ಸೇನಾಪತಿ. ಹೆಸರು ಲಕ್ಷ್ಮಣ ಸಿಂಗ್. ಜಲ ಪುನರುತ್ಥಾನಕ್ಕಾಗಿ ಜೀವನವನ್ನೇ ಮುಡುಪಿಟ್ಟು ಗೆದ್ದ ಅದೇ ಯುವಕ ಐಐಎಂಬಿಯಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಛಾಯಾಚಿತ್ರಗ್ರಾಹಕ ಮಹೇಶ್ ಭಟ್ ಪರಿಚಯಿಸಿ ಸುಮ್ಮನೆ ಕುಳಿತರು. ಖುಲ್ಲಂಖುಲ್ಲ ಮೂರು ತಾಸು ಅವರ ಜತೆ ಹರಟಿ ಯಶೋಗಾಥೆಯನ್ನು ಮನದುಂಬಿಸಿಕೊಂಡು ಬಂದಿದ್ದೇನೆ. ಇನ್ನೊಂದಷ್ಟು ವಾರ ಕಂತುಗಳಲ್ಲಿ ಅದನ್ನು ನಿಮ್ಮ ಜತೆ ಹಂಚಿಕೊಳ್ಳದಿದ್ದರೆ ನನಗೆಲ್ಲಿಯ ನೆಮ್ಮದಿ. ಇದು ಆರಂಭ. ಉಳಿದೆಲ್ಲದಕ್ಕೆ ಮುಂದಿನ ವಾರದವರೆಗೆ ಕಾಯಬೇಕಷ್ಟೇ.

ತಿಳಿನೀರ ಕೆರೆ ಜತೆ ನೀರೆಯ ಮಾನವೀಯತೆ

ಚೆಲುವೆಯ ಮುಗ್ಧ ನಗು ಅಲ್ಲಿ ಪ್ರತಿಫಲಿಸುತ್ತದೆ. ಆಕೆಯ ನಿಷ್ಕಲ್ಮಶ ಪ್ರೇಮದ ಸವಿ ಆ ನೀರಿನಲ್ಲಿ ಅಡಗಿದೆ. ಅವಳ ಪುಣ್ಯದ ಫಲ ತಲೆಮಾರುಗಳನ್ನು ಪೊರೆಯುತ್ತಿದೆ. ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ, ಪ್ರೀತಿ- ವಾತ್ಸಲ್ಯಗಳ ಪ್ರತೀಕವಾಗಿ ಆಕೆಯ ಹೆಸರಿನಲ್ಲೇ ಆ ಕೆರೆ ಅಲ್ಲಿ ಮೈ ಹರವಿ ಮಲಗಿದ್ದರೆ ಅಲ್ಲಿನ ಜನ ಹೆಮ್ಮೆಯಿಂದ ಆಕೆಯನ್ನು ಸ್ಮರಿಸಿಕೊಳ್ಳುತ್ತಾರೆ.

ಹೌದು, ಅವಳು ಸೂಳೆ. ಈ ಸಮಾಜ ಅತ್ಯಂತ ನಿಕೃಷ್ಟವಾಗಿ ಕಾಣುವ, ಆದರೆ ನೈಜ ನಿಷ್ಠೆ-ಪ್ರಾಮಾಣಿಕತೆಗೆ ಸಾಕ್ಷಿಯಾದ ವೇಶ್ಯೆಯೊಬ್ಬಳ ಹೆಸರು ಇಂದು ನಾಡಿನ ಹಲವು ಹಳ್ಳಿಗಳಲ್ಲಿ ಅಜರಾಮರವಾಗಿದ್ದರೆ ಅದು ಆಕೆ ಮಾಡಿದ ನೀರ ಕಾರ್ಯದಿಂದ; ಅವಳ ಪಾತಿವ್ರತ್ಯದಿಂದ. ಇದೇನಿದು, ಒಬ್ಬ ವೇಶ್ಯೆಗೂ ನಿಷ್ಠೆ-ಬದ್ಧತೆಗೂ, ಪಾತಿವ್ರತ್ಯಕ್ಕೂ ಎತ್ತಣಿಂದೆತ್ತಣ ಸಂಬಂಧ ? ಹಾಗೆನ್ನುವಾಗ ಎಲ್ಲೋ ಓದಿದ ಕಥೆಯೊಂದು ನೆನಪಿಗೆ ಬರುತ್ತಿದೆ. ಬಹುಶಃ ಇದು ಸಹ ಭಾಗೀರಥಿ ಕಥೆಯಂತೆಯೇ ಜನಪದರಲ್ಲಿ ಹುಟ್ಟಿ ಬೆಳೆದದ್ದೇ ಇರಬಹುದು.


ಆ ಊರಿನಲ್ಲಿ- ಯಾವುದೋ ಒಂದು ಊರು. ಬೇಕಿದ್ದರೆ ಬೇಕೂರು ಅಂತಲೇ ಇಟ್ಟುಕೊಳ್ಳೋಣ- ಅಂಥ ಬೇಕೂರಿನಲ್ಲಿ ಭೀಕರ ನೀರಿನ ಕ್ಷಾಮ ತಲೆದೋರಿತ್ತು. ಹಾಗೆಂದು ನೀರು ಇಲ್ಲವೆಂದಲ್ಲ. ಬೇಕಷ್ಟು ಬಾವಿಗಳಿದ್ದವು. ಊರ ದೇಗುಲದಲ್ಲಿ ಒಂದು ಕೆರೆಯೂ ಇತ್ತೆನ್ನಿ. ಅದರೊಳಗಣ ಸಮೃದ್ಧ ಜಲ ಸಂಪನ್ಮೂಲ ಮಾತ್ರ ಉಳ್ಳವರ, ಕುಲೀನರ ಸುಪರ್ದಿಗೆ ಒಳಪಟ್ಟಿತ್ತು. ಊರೆಂದರೆ ಅವರಷ್ಟೇ ಇರುವುದಿಲ್ಲವಲ್ಲಾ ? ಇತರರಿಗೆ ನೀರಿಲ್ಲ. ಅದೇ ಕ್ಷಾಮ. ಕೊನೆಗೂ ದೂರು ದೊರೆಯವರೆಗೆ ಹೋಗಿ ಮುಟ್ಟುತ್ತದೆ. ಪ್ರಜೆಗಳಲ್ಲಿ ಕುಲೀನರು- ಕುಲಹೀನರೆಂಬ ಭೇದವೆಲ್ಲಿಯದು. ಕೊನೆಗೆ ಬೇಕೂರಿಗಿನ್ನೊಂದು ಕೆರೆ ಬೇಕೆಂಬ ಬೇಡಿಕೆಗೆ ರಾಜಮನ್ನಣೆ ದೊರೆಯುತ್ತದೆ. ಕೆರೆ ಕಟ್ಟಿ ನಿಲ್ಲಿಸಿದರೆ ಅದೇನು ದುರದೃಷ್ಟವೋ ಒಂದು ಹನಿ ನೀರೂ ಅಲ್ಲಿ ಬೀಳುವುದಿಲ್ಲ. ಇದು ರಾಜನಿಗೆ ಅಪಮಾನ ಎನ್ನಿಸಿಬಿಡುತ್ತದೆ. ತಾನು ಕಟ್ಟಿಸಿದ ಕೆರೆಯಲ್ಲಿ ನೀರು ಬೀಳುವುದಿಲ್ಲವೆಂದರೆ ಏನರ್ಥ ? ಪೂಜೆ ಪುನಸ್ಕಾರಗಳು ನೆರೆವೇರುತ್ತದೆ. ಗಂಗೆಯ ಸುಳಿವಿಲ್ಲ. ನಾಡಿನ ಧರ್ಮಿಷ್ಠರೆಲ್ಲರ ಪುಣ್ಯದ ಧಾರೆಯಾಗುತ್ತದೆ. ಕೊನೆ ಸ್ವತಃ ರಾಜ ತನ್ನ ಧರ್ಮಾಡಳಿತದ, ತಾನು ಕುಳಿತ ಧರ್ಮಪೀಠದ ಪುಣ್ಯ ಸಂಚಯವನ್ನೆಲ್ಲ ಕೆರೆಯ ನೀರಿಗಾಗಿ ವ್ಯಯಿಸುತ್ತಾನೆ. ಆದರೂ ಪ್ರಯೋಜನವಾಗದಿದ್ದಾಗ ಕೈ ಚೆಲ್ಲಿ ಕುಳಿತುಬಿಡುತ್ತಾನೆ.


ಅಂಥ ಸಂಕಷ್ಟಕ್ಕೆ ಒದಗುವವಳು ಒಬ್ಬ ವೇಶ್ಯೆ. ಊರಿನ ಮಂದಿಯ ವ್ಯಥೆಯೆಂದರೆ, ರಾಜನಿಗೆದುರಾದ ಸವಾಲೆಂದರೆ ಅದು ತನ್ನದೇ ಎಂದುಕೊಳ್ಳುವ ಆಕೆ ಆ ಕೆರೆಯ ಮುಂದೆ ನಿಂತು ಕೈಮುಗಿದು ಗಂಗಾ ಮಾತೆಯನ್ನು ಪ್ರಾರ್ಥಿಸುತ್ತಾಳೆ. ‘ನಾನು ನಿಜವಾಗಿಯೂ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಧರ್ಮ ಪಾಲನೆ ಮಾಡಿದ್ದರೆ, ಜೀವನದಲ್ಲಿ ಈವರೆಗೆ ನೈತಿಕವಾಗಿ ಬದುಕಿದ್ದರೆ, ನಿಜವಾಗಿ ಪಾತಿವ್ರತ್ಯ ನನ್ನಲ್ಲಿದ್ದರೆ, ಆ ಎಲ್ಲದರ ಪುಣ್ಯವನ್ನು ಧಾರೆ ಎರೆಯುತ್ತೇನೆ. ಈ ಕೆರೆಯಲ್ಲಿ ಬೆಳಗಾಗುವುದರಲ್ಲಿ ನೀರು ಬೀಳುವಂತಾಗಲಿ’ ಎನ್ನುತ್ತಾಳೆ. ಅಚ್ಚರಿಯೆಂದರೆ ಬೆಳಗಿನ ಕಿರಣಗಳು ಆ ಕೆರೆಯನ್ನು ತಲುಪಿದವೋ ಇಲ್ಲವೋ, ಅದು ತುಂಬಿ ತುಳುಕುತ್ತದೆ. ಆಗಸದ ಹೊಂಬಣ್ಣ ಆ ನೀರಲೆಗಳಲ್ಲಿ ಪ್ರತಿಫಲಿಸುತ್ತದೆ. ರಾಜ ಇದು ಹೇಗೆಂದು ಕೇಳಿದಾಗ ವೇಶ್ಯೆಯ ಉತ್ತರ ಕೇಳಿ- ನಾನು ಎಂದಿಗೂ ವೈಯಕ್ತಿಕ ವಾಂಛೆಗಾಗಿ ಬೇರೊಬ್ಬರೊಂದಿಗೆ ಮಲಗಿಲ್ಲ. ಎಂದಿಗೂ ನನ್ನ ವೃತ್ತಿಯ ಬಗ್ಗೆಯಾಗಲೀ, ವ್ಯವಹಾರದಲ್ಲಾಗಲೀ ಸುಳ್ಳು ಹೇಳಿಲ್ಲ. ನನ್ನ ಬಳಿ ಬರುವ ಗಿರಾಕಿಗಳಿಗೆ ಸದಾ ನಾನು ನಿಷ್ಠೆಯಿಂದಲೇ ಇರುತ್ತೇನೆ. ಹಾಗಾಗಿ ಒಬ್ಬ ಪತಿವ್ರತೆಯಷ್ಟೇ ನಾನೂ ಪವಿತ್ರಳು. ಅಂಥ ಧರ್ಮದ ಫಲವೇ ಇಂದು ಊರ ಜನರನ್ನು ಪೊರೆಯುತ್ತಿದೆ.- ಧರ್ಮ ಸೂಕ್ಷ್ಮ ಎಂದರೆ ಇದೇ ಇರಬಹುದೇ ?


ಅದೇನೇ ಇರಲಿ, ವೇಶ್ಯೆಯರಿಗೂ ಕೆರೆಗಳಿಗೂ ಅವಿನಾ ಸಂಬಂಧವಿರುವುದು ಇತಿಹಾಸದುದ್ದಕ್ಕೂ ಕಂಡು ಬರುತ್ತದೆ. ನಾಡಿನ ಹಲವೆಡೆಗಳಲ್ಲಿ ‘ಸೂಳೆಕೆರೆ’ ಹೆಸರಿನ ಹಲವು ನಿರ್ಮಾಣಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇಲ್ಲಿ ಎರಡು ಅಂಶಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ನೀರಿಗಿಂತ ದೊಡ್ಡ ಧರ್ಮವೆಂಬುದು ಯಾವುದೂ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ, ಕೀಳಾಗಿ ನೋಡಲ್ಪಟ್ಟ ವೇಶ್ಯೆಯರು ತಾವು ಪಾಪಪ್ರಜ್ಞೆಯಿಂದ ಮುಕ್ತರಾಗಲು ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದಿರಬಹುದು. ಮತ್ತೊಂದು ಅಂಶ ನೀರಿನ ಸಂಕಷ್ಟ ಎಂದರೆ ಅದು ನೀರೆಯ ಸಂಕಷ್ಟ. ಒಬ್ಬ ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಮಾತ್ರವಲ್ಲ ಅದಕ್ಕೆ ಪರಿಹಾರವೂ ಆಕೆ ಮಾತ್ರ ದೊರಕಿಸಿಕೊಡಬಲ್ಲಳು. ಇಲ್ಲಿ ಒಬ್ಬ ಹೆಣ್ಣಾಗಿ ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ವೇಶ್ಯೆ, ಅದಕ್ಕೆ ಪರಿಹಾರ ರೂಪದಲ್ಲಿ ಕೆರೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಿರಬಹುದು.


ನಾಡಿನ ಇಂಥ ಹಲವು ಕೆರೆಗಳಲ್ಲಿ ಗಮನ ಸೆಳೆಯುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ. ನಿಜಕ್ಕೂ ಅದರ ವೈಶಾಲ್ಯ, ಸುತ್ತಲಿನ ಮನಮೋಹಕ ಪರಿಸರ, ನೀರಿನ ಸಮೃದ್ಧಿ, ತಾಂತ್ರಿಕ ನಿರ್ಮಾಣಗಳು ಗಮನ ಸೆಳೆಯುತ್ತದೆ. ಏಷ್ಯಾಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಇದು ಪಾತ್ರ. ಹಾಗೆ ನೋಡಿದರೆ ಕೆರೆಯಿರುವ ಪ್ರದೇಶ ಅರೆ ಮಲೆನಾಡು. ಬಟಾನು ಬಯಲಿನ ನಡುವೆ ಮೈವೆತ್ತ ಸೂಳೆಕೆರೆ ಹೆಮ್ಮೆಯ ನಿಸರ್ಗ ತಾಣ. ಕುಡಿಯುವ ನೀರಿಗೆ ಮಾತ್ರವಲ್ಲದೆ ನೂರಾರು ರೈತ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.


ಬರೋಬ್ಬರಿ ೪೪೧೬ ಎಕರೆ ೧೭ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ, ಪಕ್ಕಾ ಸಮುದ್ರದಂತೆಯೇ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು ೯೫೦ ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ನಿಲ್ಲಿಸಲಾಗಿದೆ. ಬದುವಿನ ಒಂದು ಪಾರ್ಶ್ವ ೬೦ ಅಡಿ, ಇನ್ನೊಂದೆಡೆ ೮೦ ಅಡಿ ಅಗಲವಿದೆ.


ಈ ಕೆರೆಯ ಹಿಂದೆಯೂ ಒಂದು ಜಾನಪದ ಕಥೆ ಬಿಚ್ಚಿಕೊಳ್ಳುತ್ತದೆ. ಅದು ಸ್ವರ್ಗಾವತಿ ನಗರ. ವಿಕ್ರಮರಾಯ ಅದರ ಅರಸ. ನೂತನಾದೇವಿ ಪಟ್ಟದರಸಿ. ದಂಪತಿಗೆ ಶಾತಲಾದೇವಿ ಮುದ್ದಿನ ಮಗಳು. ಒಮ್ಮೆ ಏರು ಜವ್ವನೆ ಶಾಂತಲಾ ನೆರೆ ಊರಿಗೆ ಹೋಗಿರುತ್ತಾಳೆ. ಅವಳು ಮರಳಿ ಬರುವ ಹೊತ್ತಿಗೆ ರಾಜನಿಗೆ ಅವಳ ಬಗ್ಗೆ ಕೇಳಬಾರದ ಮಾತು ಕೇಳಿಬರುತ್ತದೆ. ಆಕೆಯನ್ನು ಆಕ್ಷೇಪಿಸುವ ವಿಕ್ರಮರಾಯ ನಡತೆಗೆಟ್ಟವಳೆಂದು ಆರೋಪಿಸುತ್ತಾನೆ.


ತಂದೆಯ ಬೈಗುಳದಿಂದ ಮನ ನೊಂದ ಶಾಂತಲಾದೇವಿ ಆರೋಪದಿಂದ ಮುಕ್ತಳಾಗಲು ಕೆರೆಯನ್ನು ನಿರ್ಮಿಸಲು ನಿರ್ಧರಿಸುತ್ತಾಳೆ. ಸ್ವರ್ಗಾವತಿಯಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶವನ್ನು ಅದಕ್ಕೆ ಆಯ್ಕೆ ಮಾಡಿಕೊಂಡು, ಆ ಜಾಗವನ್ನು ಬಿಟ್ಟುಕೊಡುವಂತೆ ವೇಶ್ಯೆಯರನ್ನು ಕೇಳುತ್ತಾಳೆ. ಕೆರೆಗೆ ‘ಸೂಳೆಕೆರೆ’ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ.ಆ ಬೇಡಿಕೆಗೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂದು ಇತಿಹಾಸ ಹೇಳುತ್ತದೆ.


ಬಹಳ ವಿಶೇಷವೆಂದರೆ ಬ್ರಿಟಿಷ್ ನೀರಾವರಿ ತಂತ್ರಜ್ಞರ ಪ್ರಕಾರ ಯಾವ ರೀತಿಯಿಂದ ನೋಡಿದರೂ ಅದು ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಆದರೆ ಅತ್ಯಂತ ಚಾಣಾಕ್ಷ ತನದಿಂದ ಅಂಥ ಬೃಹತ್ ಕೆರೆಯನ್ನು ಭಾರತೀಯರು ನಿರ್ಮಿಸಿದ್ದರೆಂದರೆ ನಮ್ಮ ತಂತ್ರಜ್ಞಾನದ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುತ್ತದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿವೆ. ಕೆರೆಯಿಂದ ನೀರು ಹರಿದು ಹೋಗಲು ಒಟ್ಟು ಮೂರು ತೂಬುಗಳಿವೆ. ಈ ಕೆರೆ ಸುಮಾರು ೧೫ರಿಂದ ೨೦ ಹಳ್ಳಿಗಳ ೨೦೦೦ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನೂ ಪೂರೈಸುತ್ತಿದೆ.


ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇವಾಲಯವಿದೆ. ಕೆರೆಯ ಅಂಚಿನಲ್ಲಿ ಆಕರ್ಷಕ ಕಲ್ಲು ಮಂಟಪವಿದೆ. ಆ ಕಲ್ಲು ಮಂಟಪದ ಬಳಿ ನಿಂತು ಕೆರೆ ನೋಡುವುದೇ ಒಂದು ಅಭೂತಪೂರ್ವ ಅನುಭವ.


ಏನಿಲ್ಲವೆಂದರೂ ೨೭ ಅಡಿಗೂ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಯಲ್ಲಿ ಇತ್ತೀಚೆಗೆ ಹೂಳು ತುಂಬಿಕೊಂಡಿರುವುದು ದುರಂತದ ಸಂಗತಿ. ಕೆರೆಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯನ್ನು ಬಲಪಡಿಸುವ ಗ್ರಾಮಗಳಿಗೆ ಅಂದಿನ ಕಾಲದಲ್ಲಿ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಇತ್ತು ಎಂಬುದು ಕೌಟಿಲ್ಯನ ‘ಅರ್ಥಶಾಸ್ತ್ರ’ದ ಉಲ್ಲೇಖ. ಆದರೆ ಈಗ ಹೂಳು ತೆಗೆಯುವ ವ್ಯವಸ್ಥೆಯೇ ಇಲ್ಲ. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಅದು ಇಂದಿಗೂ ಸೂಳೆಕೆರೆ ಆಗಿ ಉಳಿದಿದೆ. ಹೆಸರು ಬದಲಾವಣೆ ಬಗ್ಗೆ ವಿರೋಧವೂ ಈ ಹಿಂದೆ ವ್ಯಕ್ತವಾಗಿತ್ತು. ಏನೇ ಆದರೂ ಇಂದಿಗೂ ಅದು ಸೂಳೆ ಕೆರೆಯಂತಲೇ ಜನಪ್ರಿಯ.


ಮಾನವತೆಯ ಚರಿತ್ರೆಯಲ್ಲಿ ಕೊನೆಗೂ ಉಳಿಯುವುದು ಇಂಥವರೇ. ಆ ಕೆರೆ ಕಟ್ಟಿಸಿದ ರಾಜ ಯಾರೆಂದು ಜನರಿಗೆ ಮರೆತು ಹೋಗಬಹುದು, ಆದರೆ ಕೆರೆಯ ಹಿಂದಿರುವ ವೇಶ್ಯೆಯ ಕತೆ ಮರೆತುಹೋಗದು. ಊರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ತಿಳಿನೀರನ್ನು ಜನರಿಗೆ ಉಣಿಸುವ ಕೆರೆಯಂತೆಯೇ, ನೋವು ದೂಷಣೆಗಳನ್ನು ನುಂಗಿಕೊಂಡು ಜನತೆಗೆ ಸುಖ ನೀಡುವ ವೇಶ್ಯೆಯರು ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುತ್ತಿದ್ದರು ಎಂಬುದು ನಿಜವಲ್ಲವೆ ?


ಲಾಸ್ಟ್ ಡ್ರಾಪ್: ಸ್ವಚ್ಛ ಕೆರೆಯಲ್ಲಿ ಸ್ನಾನ ಮಾಡಿ ಕೊಳೆ ತುಂಬಿಸುವವರು, ಅದರ ಹೂಳು ತೆಗೆಯುವ ಬಗ್ಗೆಯೂ ಯೋಚಿಸಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕು.

ಊರಿಗೊಂದು ಊರಣಿ, ಜಲ ಶ್ರೀಮಂತಿಕೆಯ ಗಣಿ

ಫಕ್ಕನೆ ನೋಡಿದರೆ ಅದೊಂದು ಸರೋವರ. ಯಾವ ಕೋನದಲ್ಲಿ ನಿಂತರೂ ಅದರ ಸುಂದರ ಹರವು, ವಿಶಾಲ ವಿಸ್ತಾರ, ದಿಟ್ಟ ನಿಲುವು, ಘನ ಗಂಭೀರ ಆಕೃತಿ ಗಮನ ಸೆಳೆಯದೇ ಇರದು. ಒಂದಿಡೀ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೈ ಚಾಚಿಕೊಂಡಿರುವ ಊರಣಿಗಳೆಂದರೆ ಅಪರೂಪದ ಜಲ ಸಮೃದ್ಧಿಯ ತಾಣ. ಸುತ್ತಲ ದಟ್ಟ ಹಸಿರನ್ನೇ ಪ್ರತಿಫಲಿಸುತ್ತ, ಮೈದುಂಬಿ ತೊನೆದಾಡುತ್ತ, ತಿಳಿಗಾಳಿಯೊಡನೆ ಸಲ್ಲಾಪಕ್ಕಿಳಿದು ಅದಕ್ಕೆ ಸ್ಪಂದಿಸಿದ್ದರ ಪರಿಣಾಮವೋ ಎಂಬಂತೆ ಅಲೆಗಳನ್ನೆಬ್ಬಿಸುತ್ತ, ಅಂಥ ಅಲೆಗಳು ಪಡಿಪಡಿಯಾಗಿ ವಿಸ್ತಾರಗೊಳ್ಳುತ್ತ ತಟವನ್ನು ಚುಂಬಿಸುವುದರ ಒಳಗೆ ಮತ್ತಷ್ಟು ತರಂಗಗಳನ್ನು ತಳ್ಳಿಬಿಡುತ್ತ ನಿಂತಿರುವ ಊರಣಿಗಳ ದಂಡೆಯ ಮೇಲೆ ನಿಂತು ಕಣ್ತುಂಬಿಕೊಳ್ಳುವುದೆಂದರೆ ಅದೊಂದು ಅನಿರ್ವಚನೀಯ ಅನುಭವ.


ಹಾಗೆಂದು ಅದು ಉಕ್ಕುವ ಊಟೆಯೇನಲ್ಲ, ಕುಲುಕುವ ಕುಂಟೆಯೂ ಅಲ್ಲ, ಕಟ್ಟಿ ನಿಲ್ಲಿಸಿದ ಕೆರೆಯಲ್ಲ, ಕಟ್ಟೆ, ಗೋಕಟ್ಟೆಗಳ ರೀತಿಯೂ ಇಲ್ಲ. ಆದರೆ ಊರಣಿಗಳೆಂದರೆ ಇವೆಲ್ಲವೂ ಹೌದು. ವಿಚಿತ್ರ ಹೆಸರಿನ, ಅಷ್ಟೇ ವಿಚಿತ್ರ ಸ್ವಭಾವದ, ತುಂಬು ವ್ಯಕ್ತಿತ್ವದ ಈ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ, ಗ್ರಾಮೀಣ ತಮಿಳುನಾಡಿನ ಜನಜೀವನದ ಜೀವ ನಾಡಿಗಳು ಎಂದರೆ ಅಚ್ಚರಿಪಡಬೇಕಿಲ್ಲ. ಹೌದು, ತಮಿಳುನಾಡಿನ ಊರಣಿಗಳೆಂದರೆ ಕೇವಲ ಒಂದು ಸಂರಚನೆಯಾಗಿ, ನಿರ್ಮಿತಿಯಾಗಿ ನಿಲ್ಲುವುದಿಲ್ಲ. ಅದೊಂದು ಜೀವಂತ ವ್ಯವಸ್ಥೆ. ಖಂಡಿತಾ ಅದಕ್ಕೊಂದು ವ್ಯಕ್ತಿತ್ವ ಇದೆ. ಅದು ಅಕ್ಷರಶಃ ತನ್ನ ಸುತ್ತಮುತ್ತಲ ಜೀವಪರಿಸರ ವ್ಯವಸ್ಥೆಯೊಡನೆ ಸಂವಾದಿಸಬಲ್ಲುದು. ಜನಜೀವನಕ್ಕೆ ಸ್ಪಂದಿಸಬಲ್ಲುದು. ಅಷ್ಟೇಕೆ ಮುಂದಿನ ಐದು ವರ್ಷಗಳ ಕೃಷಿ ವ್ಯವಸ್ಥೆಯ ವೇಳಾಪಟ್ಟಿಯನ್ನು ರೈತರಿಗೆ ನಿಗದಿಪಡಿಸಿಕೊಡುವ ಮಟ್ಟಿಗಿನ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತದೆ ಎಂಬುದು ಸತ್ಯ.



ಕೊಯಮತ್ತೂರಿನಲ್ಲಿ ಯಾವುದೋ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಮೈಸೂರಿನವನಾದ ಗೆಳೆಯ ಕಿರಣ್, ಊರಣಿಯ ವೈಶಿಷ್ಟ್ಯದ ಬಗ್ಗೆ ಹೇಳಿದಾಗ ಹೆಚ್ಚೆಂದರೆ ನಮ್ಮ ಕೆರೆ-ಕುಂಟೆಗಳಂಥ ಇನ್ನೊಂದು ಸಂರಚನೆ ಅದಾಗಿರಬಹುದು ಎಂಬ ಊಹಾ ಚಿತ್ರಣ, ಅಂಥದ್ದೊಂದರ ಎದುರು ಹೋಗಿ ನಿಂತಾಗ ಸಂಪೂರ್ಣ ಬದಲಾಗಿತ್ತು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಅದರಲ್ಲೂ ಶಿವಗಂಗೆ ಜಿಲ್ಲೆಯಾದ್ಯಂತ ಕಂಡು ಬರುವ ಊರಣಿಗಳು ನಿಜಕ್ಕೂ ಅಪೂರ್ವ ಜಲನಿ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದರ ಒಡಲಲ್ಲಿ ತುಂಬಿಕೊಂಡಿರುವ ಅಮೃತ ಸಮಾನ ಸವಿಯ ನೀರು, ಅದಕ್ಕಿರುವ ಔಷಯ ಗುಣಗಳು ಗಮನ ಸೆಳೆಯುತ್ತದೆ. ಅದಕ್ಕೇ ಊರಣಿಯನ್ನು ‘ಪಾಲ್‌ಕೊಟ್ಟೈ ಊರಣಿಗಳ್‘ ಎಂದು ಸ್ಥಳೀಯರು ಅತ್ಯಂತ ಆಪ್ಯಾಯತೆಯಿಂದ ಕರೆಯುತ್ತಾರೆ. ಹಾಲಿಗಿಂತ ಅಮೃತ ಬೇಕೇ ? ಊರಣಿಗಳ ನೀರೆಂದರೆ ಹಾಲಿನಷ್ಟೇ ಸವಿಯಾದ್ದು, ಮಾತ್ರವಲ್ಲ ಅಷ್ಟೇ ಆರೋಗ್ಯಕಾರಿ ಎಂಬುದು ನಂಬಿಕೆ. ಇದು ನಂಬಿಕೆ ಮಾತ್ರವಲ್ಲ, ಊರಣಿಯ ನೀರಿನಲ್ಲಿ ಆ ಪರಿಯ ಸವಿ ಅಡಗಿರುವುದರ ಹಿಂದೆಯೂ ಒಂದು ರಹಸ್ಯವಿದೆ. ಅದು ಗ್ರಾಮೀಣರ ಪಾಲಿಗೆ ದೇಗುಲಕ್ಕಿಂತಲೂ ಪವಿತ್ರ ತಾಣ. ಹಾಗೊಂದು ಭಾವನಾತ್ಮಕ ಸಂಬಂಧದ ಸೆಳವಿನಲ್ಲೇ ಕೃಷಿಕರು ಅದನ್ನು ಕಾಪಿಟ್ಟುಕೊಂಡು ಬರುತ್ತಾರೆ. ಅಷ್ಟೇ ಪೂಜನೀಯ ದೃಷ್ಟಿಯಿಂದ ಊರಣಿಗಳನ್ನು ನೋಡುತ್ತಾರೆ. ದೇಗುಲಗಳ ಪ್ರಾಂಗಣವನ್ನು ಇಟ್ಟುಕೊಳ್ಳುವ ರೀತಿಯಲ್ಲೇ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಾರೆ ಹಳ್ಳಿಗರು. ದೇವತಾಣಗಳನ್ನು ಎಂದಾದರೂ ನಾವು ಭಾರತೀಯರು ಮೈಲಿಗೆ ಮಾಡಲುಂಟೇ ? ಹಾಗೆಯೇ ಯಾವುದೇ ಕಾರಣಕ್ಕೂ ಊರಣಿಯ ಸುತ್ತಮುತ್ತಲ ಪ್ರದೇಶ ಆಶೌಚಕ್ಕೊಳಗಾಗದಂತೆ ಸಂರಕ್ಷಿಸುತ್ತಾರೆ. ಪಕ್ಕದಲ್ಲೇ ದೇಗುಲ ನಿರ್ಮಾಣದ ಮೂಲಕ ಪವಿತ್ರ ವಾತಾವರಣವನ್ನು ಕಲ್ಪಿಸುತ್ತಾರೆ.



ಸಾಮಾನ್ಯವಾಗಿ ಊರಣಿಯ ಒಂದು ಪಕ್ಕದಲ್ಲಿ ಒಂದಿಲ್ಲೊಂದು ದೇಗುಲಗಳಿದ್ದರೆ, ಉಳಿದ ಪಾರ್ಶ್ವಗಳನ್ನು ಉತ್ತಮ ಜಾತಿಯ ಮರಗಿಡಗಳು ಆಕ್ರಮಿಸಿಕೊಂಡಿರುತ್ತವೆ. ಹಾಗೆನ್ನುವುದಕ್ಕಿಂತ ಉದ್ದೇಶಪೂರ್ವಕ ಹುಣಸೆ-ಹೊಂಗೆ, ಬೇವು-ಬನ್ನಿಯಂಥ ಔಷಯ ಸಸ್ಯಗಳನ್ನು ಮತ್ತು ಆಲ-ಅರಳಿ- ಅತ್ತಿಯಂಥ ಪವಿತ್ರ ಸಸಿಗಳನ್ನು ಆಯ್ದು ತಂದು ಹಚ್ಚಿರುತ್ತಾರೆ. ಯಾವುದೇ ಕಾರಣಕ್ಕೂ ಸುತ್ತಮುತ್ತಲಿನ ಕಲ್ಮಶಗಳು ಮಲೆ ನೀರಿನೊಂದಿಗೆ ಹರಿದು ಬಂದು ಊರಣಿಯನ್ನು ಸೇರಬಾರದೆಂಬ ಮುನ್ನೆಚ್ಚರಿಕೆ ಒಂದೆಡೆಯಾದರೆ, ಊರಣಿಯ ಒಡಲು ಸೇರಲು ಹವಣಿಸುವ ಹೂಳನ್ನು ಇಂಥ ಮರಗಿಡಗಳ ದಟ್ಟ ಬೇರು ತಡೆದು ನಿಲ್ಲಿಸುತ್ತದೆ. ಇದಕ್ಕಿಂತ ಗಮನಾರ್ಹ ಸಂಗತಿಯೆಂದರೆ ಊರಣಿಗಳ ಸುತ್ತಲಿನ ಜಲಾನಯನ ಪ್ರದೇಶದ ತುಂಬೆಲ್ಲ ವ್ಯಾಪಿಸಿರುವ ಅಪೂರ್ವ ಸಸ್ಯ ಸಂಕುಲದ ಮೂಲಕ ಹರಿದು ಬರುವ ನೀರು ತಂತಾನೇ ಅವುಗಳನ್ನು ಔಷಯ ಅಂಶಗಳನ್ನು ಒಳಗೊಂಡು ಬರುತ್ತದೆ. ಹೀಗಾಗಿಯೇ ಊರಣಿಯ ನೀರಿಗೆ ಆ ಮಟ್ಟಿಗಿನ ಸಿಹಿ ದೊರಕಿರುತ್ತದೆ.



ಸುತ್ತಮುತ್ತಲ ಜನವಸತಿಯನ್ನು ಅವಲಂಬಿಸಿ ಊರಣಿಗಳ ವಿಸ್ತಾರ, ಬಳಕೆಯ ಕ್ರಮಗಳು ನಿರ್ಧಾರವಾಗುವುದು ಇನ್ನೊಂದು ವಿಶೇಷ. ಜಲಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಇಡೀ ಊರಣಿಯನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದೊಂದು ಭಾಗದ ನೀರು ಒಂದೊಂದು ರೀತಿಯ ಬಳಕೆಗೆ ನಿಗದಿಯಾಗುತ್ತದೆ. ಜಾನುವಾರುಗಳು ಕುಡಿಯಲು, ದೇಗುಲದ ಬಳಕೆ, ಕೃಷಿ ಉಪಯೋಗಕ್ಕೆ, ಕುಡಿಯುವ ನೀರಿಗಾಗಿ ಹೀಗೆ ಪ್ರತ್ಯೇಕ ಪಾರ್ಶ್ವಗಳಲ್ಲಿ ನೀರು ಬಳಕೆಯಾಗುವುದರಿಂದ ಊರಣಿಗಳ ನೀರಿನ ಗುಣಮಟ್ಟಕ್ಕೆ ಧಕ್ಕೆ ಬರುವುದೇ ಇಲ್ಲ. ಹಾಗೆಯೇ ಜನಸಂಖ್ಯೆ ಆಧಾರದಲ್ಲಿ ಇವುಗಳ ವಿಸ್ತಾರವೂ ಬದಲಾಗುತ್ತದೆ. ಎಲ್ಲ ಊರಣಿಗಳೂ ಇಷ್ಟೇ ಆಳ ಅಗಲ ಇರಬೇಕೆಂಬ ನಿಯಮವೇನೂ ಇರುವುದಿಲ್ಲ. ಕೆಲವೊಂದು ಊರಣಿಗಳು ಎರಡು- ಎರಡೂವರೆ ಎಕರೆಗೂ ಮೀರಿದ ಹರವನ್ನು ಹೊಂದಿರುತ್ತದೆ. ತೀರಾ ಆಳವಲ್ಲದಿದ್ದರೂ ಒಂದಾಳು, ಕೆಲವು ಅದಕ್ಕಿಂತಲೂ ಹೆಚ್ಚು ಆಳವನ್ನು ಹೊಂದಿರುತ್ತವೆ. ಊರಣಿಯ ಮಧ್ಯಭಾಗದಲ್ಲಿ ಮಾತ್ರ ಅಷ್ಟು ಆಳವನ್ನು ಕಾಣಬಹುದು, ಅಗಲ ಹೆಚ್ಚಿದಂತೆಲ್ಲ ಆಳ ಕಡಿಮೆಯಾಗುತ್ತ ಹೋಗಿರುತ್ತದೆ.



ಸಾಮಾನ್ಯವಾಗಿ ಚಚ್ಚೌಕಾಕಾರದಲ್ಲೇ ಇರುವ ಊರಣಿಗಳಿಗೆ ಅತ್ಯಂತ ವ್ಯವಸ್ಥಿತವಾದ ನಿರ್ಮಾಣವನ್ನೂ ಮಾಡಲಾಗಿರುತ್ತದೆ. ನೆಲಮಟ್ಟಕ್ಕೇ ತೆರೆದುಕೊಂಡಿರುವ ಇವು ಸಾಮಾನ್ಯವಾಗಿ ಇಡೀ ವರ್ಷದ ಎಲ್ಲ ಕಾಲದಲ್ಲೂ ಮೈದುಂಬಿಕೊಂಡೇ ಇರುತ್ತವೆ. ಬಹುತೇಕ ಸುತ್ತಮುತ್ತಲೆಲ್ಲ ಬಾವಿಗಳು ಬತ್ತಿದ್ದರೂ ಇವುಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಅತ್ಯಂತ ವಿರಳ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ, ಇದನ್ನು ನಿರ್ಮಿಸಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಮುತ್ತಲಿನ ಮಳೆ ಹರಿವು ನೇರವಾಗಿ ಊರಣಿಗಳನ್ನೇ ಬಂದು ಸೇರುವಂತೆ ಜಾಗಗಳ ಆಯ್ಕೆ ಮಾಡಿರುತ್ತಾರೆ.



ಹಾಗೆ ನೋಡಿದರೆ ಊರಣಿಗಳ ಇತಿಹಾಸ ನೂರಿನ್ನೂರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅತ್ಯಂತ ಪುರಾತನ ಹಾಗೂ ಬೃಹತ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವೆಂಕೈಪಟ್ಟಿ ಊರಣಿ ಮುನ್ನೂರು ವರ್ಷಕ್ಕೂ ಹಿಂದೆ ರಾಜಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡದ್ದೆನ್ನುತ್ತಾರೆ ಸ್ಥಳೀಯರು. ನಮ್ಮಲ್ಲಿ ಗೋಕಟ್ಟೆಗಳ ನಿರ್ಮಾಣಕ್ಕೆ ಎಷ್ಟು ಮಹತ್ವವನ್ನು ರಾಜಾಡಳಿತದ ಅವಯಲ್ಲಿ ನೀಡಲಾಗಿತ್ತೋ ಅದೇ ರೀತಿ ತಮಿಳುನಾಡಿನಲ್ಲಿ ಊರಣಿಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗಿತ್ತು. ಆದರೆ ಇವು ಬಹೂಪಯೋಗಿಯಾಗಿ ಊರಿನ ಮಧ್ಯದಲ್ಲೇ ಅಸ್ತಿತ್ವ ಪಡೆದು ಗಮನಸೆಳೆಯುತ್ತವೆ. ಊರಣಿಗಳಷ್ಟೇ ಪುರಾತನವಾದ್ದು ಇದರ ನೀರಿನ ಶುದ್ಧೀಕರಣ ತಂತ್ರಜ್ಞಾನ. ಸಂಪೂರ್ಣ ದೇಸೀ ಪದ್ಧತಿಯನ್ನು ಆಧರಿಸಿದ ಈ ಕ್ರಮ ಎಲ್ಲವೂ ಗಿಡಮೂಲಿಕೆಗಳನ್ನೇ ಆಧರಿಸಿದ್ದು. ಸ್ಥಳೀಯ ಅರಣ್ಯಗಳಲ್ಲಿ ಮಾತ್ರ ಸಿಗುವ ವಿಶಿಷ್ಟ ಮರದ ಬೀಜವೊಂದನ್ನು ತಂದು ಅದನ್ನು ಉಜ್ಜಿ ಊರಣಿಯಲ್ಲಿ ಮೊಗೆದುಕೊಂಡ ನೀರಿನಲ್ಲಿ ಹಾಕಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಕಲ್ಮಷದ ಕಣಗಳೂ ನೀರಿನ ತಳಕ್ಕಿಳಿದುಬಿಡುತ್ತವೆ. ಎಷ್ಟೋ ಸಂದರ್ಭದಲ್ಲಿ ಉತ್ತಮ ಬೀಜಗಳನ್ನು ತಂದು ಊರಣಿಗೇ ಬೆರೆಸುವುದೂ ಇದೆ.
ಒಟ್ಟಾರೆ, ಇಂದಿಗೂ ಪೂರ್ಣ ಸ್ಥಳೀಯ ಸೊಗಡನ್ನು ಉಳಿಸಿಕೊಂಡು ಗ್ರಾಮೀಣ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿರುವ ಊರಣಿಗಳು ಖಂಡಿತಾ ತನ್ನ ಜಲವೈಭವದೊಂದಿಗೆ ಮೌಲ್ಯಯುತವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಸಂರಕ್ಷಣೆಗೊಳಪಡುತ್ತಿರುವುದು ಪ್ರಶಂಸನೀಯ ಸಂಗತಿ.



‘ಲಾಸ್ಟ್‘ಡ್ರಾಪ್: ಗ್ರಾಮೀಣ ಭಾರತದ ಒಡಲಲ್ಲಿ ಹುದುಗಿರುವ ಅದೆಷ್ಟೋ ಪಾರಂಪರಿಕ ಜಲಸಂರಕ್ಷಣಾ ಪದ್ಧತಿಗಳಲ್ಲಿ ಅಳವಡಿಕೆಯಾಗಿರುವ ತಂತ್ರಜ್ಞಾನ ತನ್ನ ಸುಸ್ಥಿರತೆಯಿಂದ ಇಂದಿಗೂ ಮಾದರಿಯಾಗಿವೆ. ಅದನ್ನು ದಕ್ಕಿಸಿಕೊಳ್ಳುವ ಜ್ಞಾನ, ಅಧ್ಯಯನದ ತಾಳ್ಮೆ ಮಾತ್ರ ನಮ್ಮಲ್ಲಿ ಉಳಿದಿಲ್ಲ.

ನೋಯಿಡಾದಲ್ಲಿ ಗಾಲಿಗಳ ಮೇಲೆ ನೀರ ಮನೆ ನೋಡಾ


ಒಂದೆರಡು ವರ್ಷಗಳ ಹಿಂದಿನ ಮಾತಿದು. ಸಾಗರ ಸಮೀಪದ ಹಳ್ಳಿಯೊಂದರ ಶಾಲಾ ಮಕ್ಕಳ ಉದ್ದನೆಯ ಸರತಿ ರಸ್ತೆಯಲ್ಲಿ ಹೊರಟಿತ್ತು. ಪಕ್ಕಾ ಇರುವೆ ಸಾಲಿನಂತೆ, ಯೂನಿಫಾರ್ಮ್‌ನಲ್ಲಿ ಶಿಸ್ತಿನ ಸಿಪಾಯಿಗಳಾಗಿ ಸಾಗಿ ಹೋಗುತ್ತಿದ್ದರು ಚಿಣ್ಣರು. ಹಾಗೆಂದು ಕಲರವಕ್ಕೆ ಅಲ್ಲಿ ಕೊರತೆ ಇರಲಿಲ್ಲ. ದಾರಿಯುದ್ದಕ್ಕೂ ಕಿಲಾಡಿತನ ಮಾಡುತ್ತ, ಏನನ್ನೋ ಹರಟುತ್ತ, ಜಗಳ ಕಾಯುತ್ತ ಮುಂದುವರಿದಿದ್ದ ಅವರನ್ನು ನಡುನಡುವೆ ಗದರುತ್ತ ನಿಯಂತ್ರಿಸುವ ಪ್ರಯತ್ನ ನಡೆಸಿದ್ದರು ಶಿಕ್ಷಕರು. ಎಲ್ಲರಿಗಿಂತ ಮುಂದೆ ಎದೆ ಸೆಟೆಸಿ ತುಸು ಹಮ್ಮಿನಿಂದಲೇ ನಡೆಯುತ್ತಿದ್ದ ಇಬ್ಬರು ಹುಡುಗರ ಕೈಯಲ್ಲಿ ಎಂಥದ್ದೋ ಬ್ಯಾನರ್. ಕುತೂಹಲಕ್ಕೆ ಇಣುಕಿದರೆ ಸುಂದರ ಅಕ್ಷರಗಳಲ್ಲಿ ಗಮನ ಸೆಳೆಯುತ್ತಿತ್ತು ‘ಜಲತೇರು’ ಎಂಬ ಮುದ್ದಾದ ಪದ.


ಹಳ್ಳಿಗಳಲ್ಲಿ ಜಾತ್ರೆಗಳು ಸಾಮಾನ್ಯ. ಅಂಥ ಜಾತ್ರೆಗಳಲ್ಲಿ ಬಣ್ಣಬಣ್ಣದ ಪತಾಕೆಗಳನ್ನು ಹೊತ್ತು ಬಾನೆತ್ತರಕ್ಕೆ ಮುಖ ಮಾಡಿ ನಿಲ್ಲುವ ತೇರುಗಳನ್ನೂ ನೋಡಿದ್ದೇವೆ. ಅಂಥ ತೇರನ್ನೆಳೆಯಲು ಊರಿಗೆ ಊರೇ ಪೈಪೋಟಿಗೆ ಬಿದ್ದು, ಆ ಗಡಿಬಿಡಿಯಲ್ಲಿ ಒಬ್ಬರ ಕಾಲಡಿಗೆ ಇನ್ನೊಬ್ಬರು ಸಿಲುಕಿ, ಸಾವರಿಸಿಕೊಂಡು ಎದ್ದು ಅಂತೂ ಪುನೀತರಾದೆವೆಂಬ ಕೃತಾರ್ಥ ಭಾವದಲ್ಲಿ ಮನೆ ಸೇರಿದರೆ ಮತ್ತೆ ಮುಂದಿನ ತೇರಿಗೆ ಅದೇ ದೃಶ್ಯ ಪುನರಾವರ್ತನೆ. ಆದರೆ ಈ ಜಲ ತೇರಿನಲ್ಲಿ ಅಂಥ ಯಾವ ಅಲಂಕಾರ, ಆಡಂಬರಗಳ ಸುಳಿವೂ ಸಿಗಲಿಲ್ಲ. ಮೆಲ್ಲಗೆ ಒಬ್ಬ ಹುಡುಗನನ್ನು ಸರತಿಯಿಂದ ಪಕ್ಕಕ್ಕೆ ಎಳೆದು ಕೇಳಿದರೆ, ‘ಇವತ್ತು ಹುಳೇಗಾರಿಗೆ ಪಿಕ್ನಿಕ್ ಹೋಗ್ತಾ ಇದ್ದೀವಿ’ ಅಂದ. ಹುಳೇಗಾರೇನು ಗೊತ್ತಿಲ್ಲದ್ದೇ ? ಸಾಗರದ ಹತ್ತು ಹಳ್ಳಿಗಳಲ್ಲಿ ಹನ್ನೊಂದನೆಯದ್ದಿದ್ದಂತಿರುವ ಊರು. ಅಲ್ಲಿಗೆಂತಾ ಪಿಕ್ನಿಕ್ಕು ? ಕುತೂಹಲ. ಅದರ ಬೆನ್ನತ್ತಿ ಹೊರಟಾಗ ಅತ್ಯಂತ ಅಚ್ಚರಿಯ ಸಂಗತಿಗಳು ಬಯಲಾಗಿದ್ದವು.


ಹುಳೇಗಾರು ಹೊಸತೊಂದು ಬದಲಾವಣೆಗೆ ತೆರೆದುಕೊಂಡಿತ್ತು. ಖಂಡಿತಾ ಅದು ನೋಡಲೇ ಬೇಕಾದ ತಾಣವಾಗಿ ಮಾರ್ಪಟ್ಟಿತ್ತು ಎಂಬುದಕ್ಕಿಂತ ಊರಿನ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಹಾಗೆ ಮಾಡಿದ್ದರು. ಒಂದಿಡೀ ಗ್ರಾಮವನ್ನು ರಾಸಾಯನಿಕ ಮುಕ್ತಗೊಳಿಸಿ, ಮಳೆ ನೀರಿನ ಕೊಯ್ಲಿನಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿದ್ದರು. ಹಾಗೆಂದೇ ಶಾಲಾ ಮಕ್ಕಳನ್ನು ಹುಳೇಗಾರಿನವರು ತಮ್ಮೂರಿಗೆ ಆಹ್ವಾನಿಸಿದ್ದರು. ಜತೆಗೆ ಪೋಷಕರಿಗೂ ಊರ ಬಾಗಿಲು ತೆರೆದಿದ್ದರು. ಬಂದವರಿಗೆ ಎಂದಿನ ಮಲೆನಾಡಿನ ಊಟ ಉಪಚಾರದೊಂದಿಗೆ ತಮ್ಮ ಯಶೋಗಾಥೆಯನ್ನು ಸಾರುವ, ತೋಡಿಟ್ಟ ಇಂಗುಗುಂಡಿಗಳ ತೋರುವ, ಕೂಡಿಟ್ಟ ಮಳೆನೀರ ಕುಡಿಸುವ ಯೋಜನೆ ರೂಪಿಸಿದ್ದರು. ಇಂಥದ್ದೊಂದು ಕಾನ್ಸೆಪ್ಟ್‌ಗೆ ಅವರಿಟ್ಟ ಹೆಸರು ‘ಜಲತೇರು’.
ನಿಜವಾಗಿ ನೀರೆಚ್ಚರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಮಕ್ಕಳು. ಅದು ಯಾವುದೇ ವಿಚಾರವಿರಲಿ, ಮಕ್ಕಳ ತಲೆಗೊಮ್ಮೆ ಹುಳು ಬಿಟ್ಟರೆ ಸಾಕು, ದೊಡ್ಡವರು ಮರೆತರೂ ಮಕ್ಕಳು ಮರೆಯುವುದಿಲ್ಲ. ಬೇಕಿದ್ದರೆ ನೋಡಿ, ಮನೆಯಲ್ಲಿ ಅಮ್ಮನಿಗೆ ಶಾಪಿಂಗ್ ಹೋಗಬೇಕೆನಿಸಿದರೆ ಮಕ್ಕಳಿಗೆ ಛೂ...ಬಿಟ್ಟು ಬಿಡುತ್ತಾಳೆ. ಅಷ್ಟೇ, ಅಪ್ಪ ಆಪೀಸಿನಿಂದ ಬರುವುದನ್ನೇ ಕಾಯುವ ಮಕ್ಕಳು ವರಾತ ತೆಗೆದು, ರಂಪ ಹಿಡಿದು ಅಂತೂ ಅಂದುಕೊಂಡದ್ದನ್ನು ಮಾಡಿಸಿಯೇ ತೀರುತ್ತಾರೆ. ದೊಡ್ಡವರಿಂದಾಗದ ಕೆಲಸ ಮಕ್ಕಳಿಂದ ಸಲೀಸು. ಹೀಗಾಗಿ ಹುಳೇಗಾರಿನ ಮಂದಿ, ಶಾಲಾಮಕ್ಕಳಲ್ಲಿ ಅರಿವು ಮೂಡಿಸುವ ಬುದ್ಧಿವಂತಿಕೆಯ ಯೋಜನೆ ರೂಪಿಸಿದ್ದರು.
ಅಂಥದ್ದೇ ಬುದ್ಧಿವಂತಿಕೆಯನ್ನು ದೂರದ ಉತ್ತರ ಪ್ರದೇಶದ ನೋಯಿಡಾದ ‘ಜನಹಿತ್ ಫೌಂಡೇಶನ್’ ಸಹ ತೋರುತ್ತಿದೆ. ಅದು ಸಹ ನೀರೆಚ್ಚರದ ಯಾತ್ರೆಯೇ. ಹೆಸರು ವಾಟರ್ ಲಿಟರಸಿ ಆನ್ ವ್ಹೀಲ್’. ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಎಂದು ಕನ್ನಡದಲ್ಲಿ ತರ್ಜುಮೆ ಮಾಡಿಕೊಳ್ಳಬಹುದೇನೋ. ಇದೇ ತಿಂಗಳ ೧೩ಕ್ಕೆ ಇಂಥದ್ದೊಂದು ಅಪರೂಪದ ಯಾತ್ರೆಗೆ ನೆಹರೂ ಅಂತಾರಾಷ್ಟ್ರೀಯ ಪಬ್ಲಿಕ್ ಸ್ಕೂಲ್‌ನಲ್ಲಿ ಚಾಲನೆ ನೀಡಲಾಗಿದೆ. ಯಾತ್ರಗಾಗಿಯೇ ವಿಶೇಷವಾಗಿ ವಾಹನವೊಂದನ್ನು ರೂಪಿಸಲಾಗಿದೆ. ಹೊಚ್ಚ ಹೊಸ ಟಾಟಾ ವಿಂಜರ್ ವಾಹನವನ್ನು ಇದಕ್ಕಾಗಿಯೇ ಸಜ್ಜುಗೊಳಿಸಲಾಗಿದೆ. ವಾಹನದ ಹೊರಭಾಗದಲ್ಲಿ ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಬರಹಗಳನ್ನು ಬರೆಸಲಾಗಿದೆ. ಜಲ ಶುದ್ಧತೆಯ ಪರೀಕ್ಷೆಗೆ ಅಗತ್ಯ ಉಪಕರಣಗಳನ್ನೂ ಹೊಂದಿರುವ ಈ ವಾಹನ ನೋಯಿಡಾ ಜಿಲ್ಲೆಯ ಹಳ್ಳಿ-ಹಳ್ಳಿಗಳನ್ನು ಸುತ್ತಲಿದೆ. ದಾರಿಯುದ್ದಕ್ಕೂ ಸಿಗುವ ಶಾಲೆಗಳ ಆವರಣ ಹೊಕ್ಕು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶ.


ಕಳೆದ ಆಗಸ್ಟ್‌ನಲ್ಲೇ ರೂಪುಗೊಂಡಿರುವ ಯೋಜನೆಗೆ ಚಾರಿಟೀಸ್ ಏಯ್ಡ್ ಫೌಂಡೇಷನ್(ಸಿಎಎಫ್) ಹಾಗೂ ಅಡೋಬ್ ಇಂಡಿಯಾ ಸಿಸ್ಟಮ್ಸ್ ಲಿ. ಸಹಯೋಗವನ್ನು ಒದಗಿಸಿವೆ. ಆಗಿನಿಂದಲೂ ಉದ್ದೇಶಿತ ಯಾತ್ರೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನೋಯಿಡಾ ಎದುರಿಸುತ್ತಿರುವ ಜಲ ಮಾಲಿನ್ಯ ಮತ್ತು ನೀರಿನ ಕೊರತೆಯೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಸಂಸ್ಥೆಯ ಸೋನಾಕ್ಷಿ ಗುಡ್ಡ. ಸಮುದಾಯದಲ್ಲಿನ ಅರಿವಿನ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಮೂಲ. ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸುವ ದೃಷ್ಟಿಯಿಂದ ಜನಹಿತ್ ಫೌಂಡೇಶನ್ ಕಾರ್ಯಕ್ಷೇತ್ರಕ್ಕಿಳಿದಿದೆ. ಭಾವೀ ಪ್ರಜೆಗಳು ಎಚ್ಚೆತ್ತರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಸುಲಭ ಮಾರ್ಗವಾಗಿ ಶಾಲೆಗಳನ್ನು ಆಯ್ದುಕೊಂಡೆವು ಎಂಬುದು ಅವರ ವಿವರಣೆ.


ಎಲ್ಲರಿಗೂ ಶುದ್ಧ ಕುಡಿಯುವ ನೀರು ಮೂಲಭೂತ ಹಕ್ಕು. ಇದು ಜನ ಜಾಗೃತಿಯಿಂದ ಮಾತ್ರ ಸಾಧ್ಯವಾಗುವಂಥದ್ದು. ಫೌಂಡೇಶನ್‌ನ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಗುರಿಯೇ ನೀರಿನ ಗುಣಮಟ್ಟ ಹಾಗೂ ಜಲ ನಿರ್ವಹಣೆಯ ಪ್ರಾಮುಖ್ಯದ ಬಗೆಗೆ ವಿದ್ಯಾರ್ಥಿಗಳ ಗಮನ ಸೆಳೆಯುವುದು. ಯೋಜನೆಯು ಮೂರು ವರ್ಷಗಳ ಕಾಲ ನಾನಾ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಅಂತಿಮ ವರ್ಷದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಹತ್ತು ಶಾಲೆಗಳನ್ನು ಗುರುತಿಸಲಾಗುತ್ತದೆ. ಆ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯಂಥ ನೀರಿನ ಸಂರಕ್ಷಣಾ ನಿರ್ಮಿತಿಗಳನ್ನು ಕಟ್ಟಿ, ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತದೆ. ಇಷ್ಟಕ್ಕೇ ಯೋಜನೆ ಮುಗಿದು ಹೋಗುವುದಿಲ್ಲ. ಶಾಲಾ ಪಠ್ಯಗಳಲ್ಲಿ ಸುರಕ್ಷಿತ ಮತ್ತು ಉತ್ತಮ ನೀರು ನಿರ್ವಹಣೆಯ ಕುರಿತಾದ ವಿಷಯಗಳ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡಲಿದೆ.


ಈಗಾಗಲೇ ಮೊದಲ ಹಂತದಲ್ಲಿ ಯೋಜಿತ ರೀತಿಯಲ್ಲೇ ಕಾರ್ಯಾನುಷ್ಠಾನ ಮಾಡಲಾಗಿದ್ದು, ಸಂಚಾರಿ ಜಲ ಸಾಕ್ಷರತಾ ವಾಹನಕ್ಕೆ ಚಾಲನೆ ನೀಡಲಾಗಿದೆ. ಶಾಲೆಗಳಲ್ಲಿ ನೀರೆಚ್ಚರ ಮೂಡಿಸಲು ಹೊರಟಿರುವ ಈ ವಾಹನ ಜಿಪಿಆರ್‌ಎಸ್ ವ್ಯವಸ್ಥೆ, ಎಲ್‌ಸಿಡಿ ಪ್ರೊಜೆಕ್ಟರ್, ಲ್ಯಾಪ್‌ಟಾಪ್ ಮತ್ತಿತರ ಆಧುನಿಕ ಸಲಕರಣೆಗಳನ್ನು ಒಳಗೊಂಡಿದೆ. ಹೋದೆಡೆಯಲ್ಲೆಲ್ಲ ಯಾತ್ರೆಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಸ್ಲೈಡ್‌ಗಳು, ಕಿರು ಚಿತ್ರಗಳ ಮೂಲಕ ನೀರಿನ ಮಾಹಿತಿಗಳನ್ನು ಬಿತ್ತರಿಸಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ತಾವೇ ಸ್ವತಃ ಪ್ರಯೋಗಕ್ಕೆ ಮುಂದಾಗಿ ನೀರಿನ ಗುಣಮಟ್ಟದ ಪ್ರಾಥಮಿಕ ಪರೀಕ್ಷೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾದ ಕಿಟ್ ಒಂದನ್ನು ಈ ಸಂಚಾರಿ ವಾಹನ ಒಳಗೊಂಡಿದೆ. ನೀರೆಚ್ಚರ ಮೂಡಿಸುವ ಬರಹಗಳನ್ನೊಳಗೊಂಡ ಆಕರ್ಷಕ ಬಣ್ಣಗಳಲ್ಲಿ ಮುದ್ರಿಸಲಾದ ಸಾಹಿತ್ಯವನ್ನೂ ವಾಹನದಲ್ಲಿ ಒಯ್ಯಲಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.


ಯೋಜನೆಗೆ ಸಂಬಂಸಿದ ಎಲ್ಲ ವಿವರವನ್ನು ಒಳಗೊಂಡ ಕಿರು ಸಾಕ್ಷ್ಯ ಚಿತ್ರವನ್ನೂ ಹೊರತರಲಾಗಿದೆ. ನೋಯಿಡಾ ಮತ್ತು ಗ್ರೇಟರ್ ನೋಯಿಡಾದ ಎಲ್ಲ ಶಾಲೆಗಳನ್ನೂ ತಲುಪುವುದು ಯೋಜನೆಯ ಗುರಿ. ನೀರಿನ ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ ಎಷ್ಟು ಮುಖ್ಯವಾದ್ದು ಎಂಬುದರ ಬಗ್ಗೆ ಎಲ್ಲ ಶಾಲಾ ಮುಖ್ಯಸ್ಥರನ್ನೂ ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಸೋನಾಕ್ಷಿ.


ಅಂತರ್ಜಲ ಸಂರಕ್ಷಣೆ, ನದಿ ನೀರಿನ ಮಾಲಿನ್ಯ ನಿಯಂತ್ರಣ, ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳ ಕುರಿತು ಅರಿವು ಮೂಡಿಸುವುದು, ಸ್ಥಳೀಯ ಸಮುದಾಯಗಳಲ್ಲಿ ಪರಿಸರ ಹಾಗೂ ಅದರ ಪ್ರಾಮುಖ್ಯದ ಕುರಿತು ಜಾಗೃತಿ ಮೂಡಿಸುವುದೇ ಮತ್ತಿತರ ಪರಿಸರ ಸಂಬಂ ಹಲವು ಚಟುವಟಿಕೆಗಳಲ್ಲಿ ೧೯೯೮ರಿಂದಲೂ ತೊಡಗಿಸಿಕೊಂಡಿದೆ ಜನಹಿತ್ ಫೌಂಡೇಶನ್. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆಯ ಚಟುವಟಿಕೆಗಳೆಲ್ಲವೂ ಸಮುದಾಯ ಕೇಂದ್ರಿತವಾಗಿದ್ದು, ನಿಜವಾಗಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪರಿಸರ ಸಂರಕ್ಷಣೆಯಂಥ ಅತ್ಯಂತ ಪ್ರಮುಖ ಅಷ್ಟೇ ಸೂಕ್ಷ್ಮ ಕಾರ್ಯ ಸಾಧನೆಯಾಗಲು ಸಾಧ್ಯ ಎಂಬುದನ್ನು ಅರಿತ ಸಂಸ್ಥೆ, ಸ್ಥಳೀಯರನ್ನು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಂಘಟಿಸುತ್ತಿದೆ. ಅದರ ಮುಂದುವರಿದ ಭಾಗವೇ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಯಾತ್ರೆ.


ಇಂಥ ಪ್ರಯೋಗಗಳು ಖಂಡಿತಾ ಎಲ್ಲ ರಾಜ್ಯಕ್ಕೂ ಮಾದರಿಯಾಗಬಲ್ಲುದು. ನಮ್ಮ ಹುಳೇಗಾರಿನಂಥ ಊರಿನಲ್ಲಿ ಯಾವಾಗಲೋ ಪ್ರಯೋಗಕ್ಕೊಳಪಟ್ಟು ಯಶಸ್ವಿಯಾಗಿರುವ ಯೋಜನೆಯನ್ನುಸರಕಾರ ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಯೋಚಿಸಿದರೊಳಿತು. ಹೇಗೂ ಈಗ ಶಾಲಾ ಶೈಕ್ಷಣಿಕ ಪ್ರವಾಸದ ಸಮಯ. ಇಂಥ ಸಂದರ್ಭದ ಸದುಪಯೋಗ ಪಡೆದು ವಿದ್ಯಾರ್ಥಿಗಳನ್ನು ಯಾವುದೋ ಫ್ಯಾಂಟಸಿ ಪಾರ್ಕ್‌ಗಳಿಗೆ, ಉದ್ಯಾನಗಳಿಗೆ ಕರೆದೊಯ್ಯುವ ಬದಲಾಗಿ ದೈನಂದಿನ ಬದುಕನ್ನು ಪರಿಚಯಿಸುವ, ನೀರಿನಂಥ ಮೂಲಭೂತ ಅಗತ್ಯಗಳ ಪೂರೈಕೆಯಲ್ಲಿ ಮಾದರಿಯಾಗಬಲ್ಲ ಸ್ಥಳಗಳಿಗೆ ಭೇಟಿ ಕೊಡುವುದು ಉತ್ತಮ.


‘ಲಾಸ್ಟ್’ ಡ್ರಾಪ್: ಮನರಂಜನೆಗಾಗಿ ನೀರಿನಲ್ಲಿ ಮಕ್ಕಳು ಆಟವಾಡುವ ಫ್ಯಾಂಟಸಿ ಪಾರ್ಕ್‌ಗಳನ್ನು ರೂಪಿಸುವ ಬದಲು, ನೀರಿನ ಪಾಠ ಹೇಳುವ ಜಲಪಾರ್ಕ್‌ಗಳನ್ನು ಜಿಲ್ಲೆಗೊಂದರಂತೆ ರೂಪಿಸಿದರೆ ಹೇಗೆ ?

ಘಮ ಘಮ ಘಮಾಡಿಸ್ತಾವ ಮಣ್ಣಿಗೆ, ನೀನು ಹೊಂಟಿದ್ದೀಗ ಎಲ್ಲಿಗೆ ?

ಪ್ರೇಯಸಿಯ ಮೈ ಗಂಧವನ್ನೂ ಮೀರುವ ಸುವಾಸನೆಯದು. ಹುಚ್ಚು ಹಿಡಿಸಿಬಿಡುತ್ತದೆ. ಎಂಥ ವಿಷಾದದ, ವಿಷಣ್ಣ ಮನಸ್ಸನ್ನೂ ಉಲ್ಲಸಿತಗೊಳಿಸುವ ಶಕ್ತಿ ಅದಕ್ಕಿದೆ. ಯಾವುದೇ ನೋವನ್ನೂ ಮರೆಸಿ ಇಡೀ ಮನಸ್ಸನ್ನು ಆವರಿಸಿಕೊಳ್ಳಬಲ್ಲಂಥದ್ದು ಅದು. ಒಂದೇ ಒಂದು ಕ್ಷಣದಲ್ಲಿ ಎಂಥ ಕಠೋರ ಹೃದಯಿಯನ್ನೂ ಕರಗಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲ ರಸಿಕತನ ಅದರಲ್ಲಡಗಿಕುಳಿತಿದೆ. ಬಡ ಅಕ್ಷರಗಳ ಬಣ್ಣನೆಗೆ ಸಿಲಕುವಷ್ಟು ಸುಲಭದಲ್ಲಿಲ್ಲ ಅದರ ವೈಶಿಷ್ಟ್ಯ. ಅದನ್ನು ಅನುಭವಿಸಿಯೇ ಆನಂದಿಸಬೇಕು.

ಅದರ ಶಕ್ತಿಯೇ ಅಂಥದ್ದು. ಓಹ್...ಅದೆಷ್ಟು ಮಹದಾನಂದ ? ಎಲ್ಲವನ್ನೂ ಕಳೆದುಕೊಂಡು ಸೋತು ಕುಳಿತಾಗಲೊಮ್ಮೆ, ಕಣ್ಣೀರ ಕೋಡಿಯಾಗಿ ಬದುಕನ್ನು ಬಲವಂತವಾಗಿ ನಿಲ್ಲಿಸಿಕೊಂಡಾಗಲೊಮ್ಮೆ, ಅಂಧಕಾರವೇ ನಮ್ಮ ಸುತ್ತೆಲ್ಲ ಆವರಿಸಿಕೊಂಡಾಗಲೊಮ್ಮೆ, ನಿರಾಸೆಯ ಕಾರ್ಮೋಡ ದಟ್ಟೈಸಿ ಮಂಕು ಕವಿದಕೊಂಡಿದ್ದಾಗಲೊಮ್ಮೆ, ಸಂಕಷ್ಟದಲ್ಲಿ ಜೀವನ ಮುಳಕುಹಾಕೇಳುತ್ತಿರುವಾಗಲೊಮ್ಮೆ, ಆಶಾವಾದವೇ ಮುಗ್ಗರಿಸಿ ಮಕಾಡೆ ಮಲಗಿರುವಾಗಲೊಮ್ಮೆ ಇಂಥ ಸುವಾಸನೆ ಮೂಗಿಗೆ ಅಡರಿದರೆ ಸಾಕು, ಕುಂಟ ಕುಮಿತ್ರಿಯೂ ಎದ್ದು ಓಡುವ ಚೈತನ್ಯವನ್ನು ಗಳಿಸಿಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಬೀಸಿ ಬರುವ ತಂಗಾಳಿಯೊಂದಿಗೆ ತೇಲಿ ಬರುವ ಆ ಪರಿಮಳಕ್ಕೆ ಅದೆಷ್ಟು ಸಾಮರ್ಥ್ಯವಿದೆ ಎಂದರೆ ಬೇಡಬೇಡವೆಂದರೂ ಮನಸ್ಸು ಯೌವನದಿಂದ ಪುಟಿಯುವಂತೆ ಮಾಡಿಬಿಡುತ್ತದೆ. ನೆನಪುಗಳ ಹಾಯಿದೋಣಿಯಲ್ಲಿ ಪಯಣ ಆರಂಭವಾಗಿಬಿಡುತ್ತದೆ. ಕಳಕೊಂಡ ಪ್ರಿಯಕರನ ನೆನಪುಗಳ ಸಾಗರದಲ್ಲಿ ನಾವು ನಮಗೇ ಗೊತ್ತಿಲ್ಲದಂತೆ ವಿಹರಿಸಲಾರಂಭಿಸಿರುತ್ತೇವೆ. ಗೆಳತಿಯ ತೋಳ್ತೆಕ್ಕೆಯೊಳಗಿನ ಸಮೃದ್ಧ ಸುಖದ ಅನುಭೂತಿಯಾಗಿ ಮೀಟುತ್ತದೆ. ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತಿರಬಹುದಾದ ದುಗುಡ ದುಮ್ಮಾನಗಳನ್ನು ಗುಡಿಸಿ ಆಚೆ ತೆಗೆದೊಗೆದುಬಿಡುತ್ತದೆ. ಅಮ್ಮನ ಮಡಿಲ ಬೆಚ್ಚನೆಯ ಸಾಂತ್ವನಕ್ಕೆ ತಹತಹಿಸುತ್ತಿರುವ ಹೃದಯ ಎಂಥದ್ದೋ ಸಂತೃಪ್ತಿಯಲ್ಲಿ ಗದ್ದಲ ಮಾಡದೇ ಸುಖ ನಿದ್ದೆಗೆ ಜಾರುತ್ತದೆ. ಸೋದರಿಯ ವಾತ್ಸಲ್ಯಕ್ಕಾಗಿ ಹಂಬಲಿಸಿ ಸೋತು ಸುಣ್ಣವಾದವರನ್ನೂ ಸಂತೈಸಿಬಿಡುತ್ತದೆ. ಮಗಳ ಮುಗ್ಧತೆಯ ಸ್ಪರ್ಶದೊಂದಿಗೆ ಮುಖ ಅರಳುತ್ತದೆ. ಅಂಹಕಾರದಿಂದ ಅಬ್ಬರಿಸುತ್ತಿರವವರನ್ನು ಅಟಕಾಯಿಸಿಕೊಂಡು ನೆಲಕ್ಕಿಳಿಸುತ್ತದೆ. ಅಜ್ಞಾನ ತಿಮಿರದಿಂದ ಅಂಧರಾದವರನ್ನು ಜ್ಞಾನ ಶಲಾಕೆಯಾಗಿ ತಿವಿಯುತ್ತದೆ. ಮುಪ್ಪಿನಲ್ಲಿ ಮುದುಡಿದವರನ್ನು ಕೈಹಿಡಿದೇಳಿಸುತ್ತದೆ. ಉತ್ಸಾಹಿಗಳ ಉತ್ತೇಜಿಸುತ್ತದೆ. ಮೈಗಳ್ಳರಲ್ಲೂ ಲವಲವಿಕೆಯನ್ನು ಮೈಗೂಡಿಸುತ್ತದೆ.


ನೂರಕ್ಕೆ ನೂರು ಸತ್ಯ ‘ಮಣ್ಣಿನ ವಾಸನೆ’ಯೆಂದರೇ ಹಾಗೆ. ಅದು ವಿರಹೋತ್ಕಟೆಯೊಬ್ಬಳು ತನ್ನಿನಿಯನ ಸಾಂಗತ್ಯದಲ್ಲಿದ್ದಾಗ ಹೊರಹೊಮ್ಮಿಸುವ ಸೌಗಂಧದಂತೆ. ಕಾದು ಕಂಗಾಲಾಗಿ, ಗಾರಿ ಗಬರೆದ್ದು ಹೋದ ನೆಲಕ್ಕೆ ಬೀಳುವ ಮೊದಲ ಮುತ್ತಿನ ಮಳೆಯ ಸಿಂಚನಕ್ಕೆ ಪಸರಿಸುವ ಆ ಪರಿಮಳಕ್ಕೆ ಸಮನಾದುದು ಈ ಭೂಮಿಯ ಮೇಲೆ ಮತ್ತೊಂದಿಲ್ಲ. ಮಣ್ಣಿನ ವಾಸನೆ ಇಷ್ಟವಾಗದವರೂ ಈ ಜಗತ್ತಿನಲ್ಲಿರಲಿಕ್ಕೆ ಸಾಧ್ಯವೇ ? ಮುಂಗಾರ ಮಳೆಯ ಮೊದಲೆರಡು ಹನಿಗಳು ಧೂಳಿನ ರಾಶಿಯ ಮೇಲೆ ಚಿಟಪಟನೆ ಸದ್ದು ಮಾಡುತ್ತ ಬೀಳುವುದಕ್ಕೆ ತಡವಿಲ್ಲ. ಸುತ್ತಮುತ್ತಲ ಪರಿಸರಕ್ಕೆ ಅದೇನಾಗುತ್ತದೋ ಕಾಣೆ. ತಂಗಾಳಿ ತೀಡಲಾರಂಭಿಸುತ್ತದೆ. ಹಸಿರೆಲೆಗಳು ಲಾಸ್ಯಕ್ಕಿಟ್ಟುಕೊಳ್ಳುತ್ತವೆ. ಹಕ್ಕಿ-ಪಕ್ಷಿಗಳು ಹಬ್ಬದ ಸಂಭ್ರಮದೊಂದಿಗೆ ಹಾರಾಡತೊಡಗುತ್ತವೆ. ಅಷ್ಟೇ, ಮೇಘ ಮೇದಿನಿಯರ ಮಿಲನದ ಪ್ರತೀಕವಾಗಿ ಮಣ್ಣಿನ ವಾಸನೆ ಮೆಲ್ಲಗೆ ಪಸರಿಸಲಾರಂಭಿಸುತ್ತದೆ. ಮನೆಯ ಮೂಲೆಯಲ್ಲೆಲ್ಲಿದ್ದರೂ ಬಿಡದೇ ಹಿಡಿದೆಳೆದು ಹೊರತಂದು ನಿಲ್ಲಿಸುತ್ತದೆ ಆ ಘಮ.


ಮಣ್ಣಿಗೆ ಈ ಮಟ್ಟಿಗಿನ ಸುವಾಸನೆಯನ್ನು ತುಂಬಿದವರಾದರೂ ಯಾರು ? ನೂರು, ಸಾವಿರಾರು ವೈವಿಧ್ಯಮಯ ಪರಿಮಳಗಳಿಂದ ಈ ಜಗತ್ತು ಆವೃತ್ತವಾಗಿದ್ದರೂ ಅದ್ಯಾವುದಕ್ಕೂ ಮನುಷ್ಯ ಇಂಥಾ ಪರಿ ಮನಸೋಲದ ಹಿಂದಿನ ಗುಟ್ಟೇನು ? ಅವರಿವರೆನ್ನುವ ಭೇದವಿಲ್ಲದೇ ಇರುವವರೆಲ್ಲರನ್ನೂ ಸೆಳೆಯುವ ಮಣ್ಣಿನ ವಾಸನೆಯಲ್ಲಿರುವ ಶಕ್ತಿಯಾದರೂ ಎಂಥದ್ದು ? ಅಲ್ಲಿಯವರೆಗೂ ಅವಿತು ಕುಳಿತು ಮೊದಲ ಹನಿಗೇ ಮೈಮರೆಯುವಂತೆ ಮಾಡುವ ಉದ್ದೇಶವಾದರೂ ಏನು?


ಭೂರಮೆಯ ಸುಗಂಧಕ್ಕೆ ಮೂಲಕಾರಣೀಭೂತವಾದದ್ದು ಒಂದು ಬ್ಯಾಕ್ಟೀರಿಯಾ ಎಂದರೆ ನಂಬಲಾದೀತೇ ? ಸಹಸ್ರಾರು ವರ್ಷಗಳ ಹಿಂದೆಯೇ ಇದನ್ನು ಕಂಡು ಹಿಡಿಯಲಾಗಿದ್ದರೂ ನಿಖರವಾಗಿ ದು ಹೀಗೆಯೇ ಏಕೆ ಆಗುತ್ತದೆ? ಮಣ್ಣಿನ ವಾಸನೆಯಿಂದ ಮನುಷ್ಯನ ಮನಸ್ಸು ಇಷ್ಟೇಕೆ ಪ್ರಚೋದನೆಗೊಳಗಾಗುತ್ತದೆ ? ಭೂಗಂಧಕ್ಕೂ ರಸಿಕತನಕ್ಕೂ ಸಂಬಂಧವೇನು...? ಜೈವಿಕ ವಿಜ್ಞಾನ ವಲಯವನ್ನು ಕಾಡುತ್ತಲೇ ಇದ್ದ ಇಂಥ ಹತ್ತು ಹಲವು ಕುತೂಹಲಕ್ಕೆ ಕೊನೆಗೂ ಕೇವಲ ಎರಡು ವರ್ಷಗಳ ಹಿಂದಷ್ಟೇ ನಿಖರ ಉತ್ತರ ಸಿಕ್ಕಿದೆ. ಅತ್ಯಂತ ಭಾವನಾತ್ಮಕ ಸಂಯೋಜನೆಯ ಫಲವಾಗಿ ಹೊರಹೊಮ್ಮುವ ಇದಕ್ಕೆ ಇಂಗ್ಲಿಷ್ ವೈಜ್ಞಾನಿಕ ಪರಿಭಾಷೆಯಲ್ಲಿ ‘ಪೆಟ್ರಿಕಾರ್’ ಎಂಬ ಶುಷ್ಕ ಪದವೊಂದಿದೆ. ಶೃಂಗಾರದ ಶೃಂಗಕ್ಕೆ ಕರೆದೊಯ್ಯಬಲ್ಲ ಪರಿಮಳವನ್ನು ಇನ್ನೂ ಸ್ವಲ್ಪ ಕಾವ್ಯಾತ್ಮಕವಾಗಿ ಹೇಳುವ ಪ್ರಯತ್ನವಾಗಿ ‘ಜಿಯಾಸ್ಮಿನ್’ ಎಂತಲೂ ಬಳಸುವುದಿದೆ. ಅಸಲಿಗೆ ಜೀವ ರಾಸಾಯನಿಕವಾಗಿರುವ ಈ ಜಿಯಾಸ್ಮಿನ್‌ನ ಇಂಥ ಉತ್ತೇಜನಕಾರಿ ಗುಣದ ಉದ್ದೇಶವೇನೆಂಬುದರ ರಹಸ್ಯವನ್ನು ಪ್ರಕೃತಿ ಇನ್ನೂ ಹಾಗೆಯೇ ಬಚ್ಚಿಟ್ಟುಕೊಂಡಿದೆ. ಆದರೂ ಒಂದೆರಡು ಊಹಾತ್ಮಕ ಕಾರಣಗಳನ್ನು ವಿಜ್ಞಾನಿಗಳು ಮುಂದಿಡುತ್ತಾರೆ.


ಸ್ಟ್ರೆಪ್ಟೋಮೈಸ್ ಎಂಬ ಸೂಕ್ಷ್ಮಾತಿಸೂಕ್ಷ್ಮ ಜೀವಿ ಮಹಾಶಯನ ಕೆಲಸವಿದು. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಡೆವಿಡ್ ಕೇನ್ ಎಂಬ ವಿಜ್ಞಾನಿಯ ನೇತೃತ್ವದ ತಂಡ ಇದನ್ನು ಪತ್ತೆಹಚ್ಚಿತು. ಅದೂ ಆಕಸ್ಮಿಕವೇ ಅನ್ನಿ. ಕೇನ್ ಮತ್ತವರ ಗೆಳೆಯರು, ‘ಟರ್‍ಪೇನ್ ’ ಎಂಬ ಇನ್ನೊಂದು ಸಂಯುಕ್ತ ಧಾತುವಿನ ಬಗ್ಗೆ ಸಂಶೋಧನಾ ನಿರತರಾಗಿದ್ದರು. ವಿಶೇಷವೆಂದರೆ ಇದೂ ಸಹ ಸ್ಟ್ರೆಪ್ಟೋಮೈಸ್‌ನಿಂದಲೇ ಆದದ್ದು, ಜತೆಗೆ ಶ್ರೀಗಂಧದಲ್ಲಿ ಸೌಗಂಧಕ್ಕೂ ಇದೇ ಕಾರಣ. ಟರ್‍ಪೇನ್‌ನಿಂದ ಉತ್ಪತ್ತಿಯಾಗುವ ಜೀನ್ ಅನ್ನು ಕಂಡು ಹಿಡಿಯುವ ಉತ್ಸಾಹದಲ್ಲಿರುವಾಗಲೇ ಅಚಾನಕ್ ಆಗಿ ಕೇನ್‌ಗೆ ಇನ್ನೊಂದು ಜೀನ್‌ನ ಪ್ರತಿಕ್ರಿಯೂ ಗಮನಕ್ಕೆ ಬಂತು. ಟರ್‍ಪೇನ್ ನಲ್ಲಿ ಜೀನ್‌ಗಳಲ್ಲಿ ಒಂದೇ ಮಣ್ಣಿನ ವಾಸನೆಯ ಹುಟ್ಟಿಗೂ ಕಾರಣವಾಗಿರಬಹುದೇ ಎಂಬ ಅನುಮಾನ ಕಾಡಿತು. ತಡ ಮಾಡಲಿಲ್ಲ. ಇಡೀ ತಂಡ ಮಾಡುತ್ತಿದ್ದ ಸಂಶೋಧನೆಯನ್ನು ಬದಿಗಿಟ್ಟು ಮಣ್ಣಿನ ವಾಸನೆಯ ಬೆನ್ನು ಹತ್ತಿತು. ಜಿಯಾಸ್ಮಿನ್ ಪರಿಮಳವನ್ನು ಹೊರಸೂಸುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ಆದರೆ ಅದೇಕೋ ಮನುಷ್ಯ ಇದನ್ನು ಆಘ್ರಾಣಿಸುತ್ತಲೇ ಆತನ ಇಂದ್ರಿಯಗಳು ಇದಕ್ಕೆ ಕ್ಷಿಪ್ರವಾಗಿ ಸ್ಪಂದಿಸಲಾರಂಭಿಸುತ್ತದೆ. ಅದಕ್ಕಾಗಿಯೇ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಎಷ್ಟರಮಟ್ಟಿಗೆ ಪ್ರಭಾವಶಾಲಿಯೆಂದರೆ ಮೂರು ಶತಕೋಟಿಲೀಟರ್ ನೀರಿನಲ್ಲಿ ಕೇವಲ ಒಂದು ಹತ್ತು ಲೀಟರ್‌ನಷ್ಟು ಜಿಯಾಸ್ಮಿನ್ ಇದ್ದರೂ ಸಾಕು, ಮನುಷ್ಯನ ಮೂಗು ಇದನ್ನು ಗ್ರಹಿಸಿಬಿಡುತ್ತದೆ. ಬೇರೆ ಯಾವುದೇ ವಾಸನೆಗಿಂತಲೂ ಕೋಟ್ಯಂತರ ಪಟ್ಟು ಹೆಚ್ಚು ಸೂಕ್ಷ್ಮಗ್ರಾಹಿಯಾಗಿರುತ್ತದೆ ಇದರ ಪ್ರಭಾವ ಎಂಬುದು ಸ್ವತಃ ಕೇನ್‌ನ ವಿಶ್ಲೇಷಣೆ. ಹೇಗಿರಬಹುದು ಇದರ ಸಾಮರ್ಥ್ಯ ಎಂಬುದು ಊಹಿಸಿಕೊಳ್ಳಿ ಸಾಕು. ಆದ್ದರಿಂದಲೇ ಒಂದೇ ಒಂದು ಹನಿ ಮಳೆ ನೀರು ಮಣ್ಣಿನ ಮೇಲೆ ಬಿದ್ದರೂ ಸಾಕು ಸುತ್ತೆಲ್ಲ ಪರಿಮಳ ಹರಡಲಾರಂಭಿಸುತ್ತದೆ.


ಏಕೆ ಎಂಬುದು ಗೊತ್ತಿಲ್ಲ, ಆದರೆ ನಿಸರ್ಗವಂತೂ ಈ ಜಿಯಾಸ್ಮಿನ್‌ಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಿದೆ; ಮನದಲ್ಲೇ ಆರಾಸುವ ನಮ್ಮ ‘ದೇವತೆ’ಗೆ ನಾವು ಕೊಟ್ಟ ಆದ್ಯತೆಯಂತೆ. ಹಾಗೆಂದು ಸ್ಟ್ರೆಪ್ಟೋಮೈಸ್ ಏನೂ ಒಂಟಿಯಾಗಿ ಈ ಮಣ್ಣಿನ ವಾಸನೆಯನ್ನು ಉತ್ಪಾದಿಸುವುದಿಲ್ಲ. ಇದಕ್ಕೂ ಸಂಗಾತಿಗಳಿದ್ದಾರೆ. ಅದೂ ಒಂದೆರಡಲ್ಲ. ಸರಿಸುಮಾರು ಮೂರು ಡಜನ್ ಸಂಗಾತಿ(ಜೀನ್‌ಗಳ)ಯ ಸರದಾರ ಈ ಸ್ಟ್ರೆಪ್ಟೋಮೈಸ್. ಇವೆಲ್ಲವಕ್ಕೂ ಪಕ್ಕಾ ಇನಿಯನದ್ದೇ (ಸ್ಟ್ರೆಪ್ಟೋಮೈಸ್) ಗುಣ. ಅವುಗಳಲ್ಲಿ ಮೈಕ್ಸೋಬ್ಯಾಕ್ಟೀರಿಯಾಕ್ಕೆ ಪಟ್ಟದರಸಿಯ ಸ್ಥಾನ.


ಈ ಮಣ್ಣಿನ ವಾಸನೆಯ ಪ್ರಯೋಜನವೇನು ಎಂಬುದು ಈವರೆಗೆ ಯಾರಿಗೂ ಗೊತ್ತಿಲ್ಲದ ಸಂಗತಿ. ಮೇಲ್ನೋಟಕ್ಕೆ ಸಿಕ್ಕಿದ ಒಂದು ಊಹಾ ಚಿತ್ರಣವೆಂದರೆ ಮಳೆ ಬಿದ್ದಾಕ್ಷಣ ನೆಲದೊಳಗೆ ಇರುವ ಅನೇಕ ಸೂಕ್ಷ್ಮ ಕ್ರಿಮಿಗಳು ಆಕರ್ಷಿತಗೊಳ್ಳುತ್ತವೆ. ವಶೀಕರಣಕ್ಕೆ ಒಳಗಾದವರಂತೆ ಅವು ನೀರು-ಮಣ್ಣು ಸಂಯೋಜನೆಗೊಂಡ ತಾಣಕ್ಕೆ ನುಗ್ಗುತ್ತವೆ. ಮಾತ್ರವಲ್ಲ ಹುಚ್ಚಿಗೆ ಬಿದ್ದು ಮಣ್ಣನ್ನು ಮುಕ್ಕಲಾರಂಭಿಸುತ್ತವೆ. ಇದರಿಂದ ನೆಲದೊಡಲು ಸಡಿಲಾಗಲಾರಂಭಿಸುತ್ತದೆ. ಅವು ಹಾಗೆ ತಿಂದು ವಿಸರ್ಜಿಸುವ ಕಾಸ್ಟ್ ಎಂಬ ವಸ್ತು ಅತ್ಯಂತ ಸಾರಯುಕ್ತವಾಗಿದ್ದು, ಭೂಮಿಯ ಫಲವತ್ತತೆಯನ್ನು ದ್ವಿಗುಣಗೊಳಿಸುತ್ತದೆ. ಈ ಸಂದರ್ಭದಲ್ಲಿ ಹೊರಹೊಮ್ಮುವ ಪರಿಮಳವೇ ಗಾಳಿಯೊಂದಿಗೆ ಬೆರೆತು ನಮ್ಮ ಮೂಗಿಗೆ ಅಡರುವುದು. ಅಂದರೆ ಸ್ಟ್ರೆಪ್ಟೋಮೈಸ್‌ನ ಕಾರ್ಯ ನಮ್ಮ ಮಟ್ಟಿಗೆ ಅತ್ಯಂತ ಉಪಯುಕ್ತ ಎಂದ ಹಾಗಾಯಿತು.


ಹಾಗೆಂದು ಎಲ್ಲ ಸಂದರ್ಭದಲ್ಲೂ ಮನುಷ್ಯನಿಗೆ ಇದು ಹಿತವಾಗಿಯೇ ಇರುತ್ತದೆ ಎಂಬುದೇನೂ ಇಲ್ಲ ಬಿಡಿ. ಇಂಥ ವಾಸನೆ ಮಣ್ಣಿನಿಂದ ಗಾಳಿಯಲ್ಲಿ ಬೆರತಾಗಲಷ್ಟೇ ನಾವೆಲ್ಲರೂ ಪ್ರೇಮಿಗಳಾಗಿ ವರ್ತಿಸುತ್ತೇವಷ್ಟೇ. ಅದೇ ಆ ವಾಸನೆ ನೀರಿಗೆ ಸೇರಿ ಬಿಟ್ಟರೆ ಖಂಡಿತಾ ಮುಖ ಸಿಂಡರಿಸಿಕೊಳ್ಳುತ್ತೇವೆ. ಅಪ್ಪಿ ತಪ್ಪಿಯೂ ನೀರು ಮಣ್ಣಿನ ವಾಸನೆಯಿಂದ ಕೂಡಿದ್ದರೆ ಅದನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕ ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಇದನ್ನು ನಾವು ಗಮನಿಸಬಹುದು. ಒಂದು ರೀತಿಯ ಮುಗ್ಗಲು ವಾಸನೆ ನೀರನ್ನು ಕಾಡುತ್ತಿರುತ್ತದೆ. ಮಜಾ ಅಂದರೆ ನೀರು ಶುದ್ಧೀಕರಣ ಸಂದರ್ಭದಲ್ಲಿ ಇಂಥ ವಾಸನೆಯನ್ನು ತೊಡೆದು ಹಾಕಲೆಂದೇ ಕೋಟ್ಯಂತರ ರೂಗಳನ್ನು ನಾವು ವೆಚ್ಚ ಮಾಡುತ್ತೇವೆ. ಏನಾದರೂ ಹೇಳಿ, ಮೊದಲ ಮಳೆಗೆ ಮುಖವೊಡ್ಡಿ ಮಣ್ಣಿನ ವಾಸನೆಯನ್ನು ಹೀರುವುದೆಂದರೆ ಅದೊಂದು ರೀತಿ ಅಹ್ಲಾದಕರ ಅನುಭವ. ಯಾವಾತನೂ ಅಮಥ ಅನುಭವದಿಮದ ವಂಚಿತನಾಗಲು ಇಷ್ಟಪಡಲಾರ.


‘ಲಾಸ್ಟ್’ಡ್ರಾಪ್: ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್‌ನ ತಂಡವೊಂದು ವಿಜ್ಞಾನ ಪ್ರಯೋಗಾಲಯದೊಳಗೆ ರಾಸಾಯನಿಕ ಸಂಯೋಜನೆಯಿಂದ ಕೃತಕ ಮಣ್ಣಿನ ವಾಸನೆಯನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಇನ್ನು ಅಮಥ ಅನುಭೂತಿಗೆ ಮೊದಲ ಮಳೆಗಾಗಿಯೇ ಕಾಯಬೇಕಿಲ್ಲ. ಬೇಕೆಂದಾಗಲೆಲ್ಲ ಮೂಗು ತೂರಿಸಿದರಾಯಿತು.