
ಅದರ ಶಕ್ತಿಯೇ ಅಂಥದ್ದು. ಓಹ್...ಅದೆಷ್ಟು ಮಹದಾನಂದ ? ಎಲ್ಲವನ್ನೂ ಕಳೆದುಕೊಂಡು ಸೋತು ಕುಳಿತಾಗಲೊಮ್ಮೆ, ಕಣ್ಣೀರ ಕೋಡಿಯಾಗಿ ಬದುಕನ್ನು ಬಲವಂತವಾಗಿ ನಿಲ್ಲಿಸಿಕೊಂಡಾಗಲೊಮ್ಮೆ, ಅಂಧಕಾರವೇ ನಮ್ಮ ಸುತ್ತೆಲ್ಲ ಆವರಿಸಿಕೊಂಡಾಗಲೊಮ್ಮೆ, ನಿರಾಸೆಯ ಕಾರ್ಮೋಡ ದಟ್ಟೈಸಿ ಮಂಕು ಕವಿದಕೊಂಡಿದ್ದಾಗಲೊಮ್ಮೆ, ಸಂಕಷ್ಟದಲ್ಲಿ ಜೀವನ ಮುಳಕುಹಾಕೇಳುತ್ತಿರುವಾಗಲೊಮ್ಮೆ, ಆಶಾವಾದವೇ ಮುಗ್ಗರಿಸಿ ಮಕಾಡೆ ಮಲಗಿರುವಾಗಲೊಮ್ಮೆ ಇಂಥ ಸುವಾಸನೆ ಮೂಗಿಗೆ ಅಡರಿದರೆ ಸಾಕು, ಕುಂಟ ಕುಮಿತ್ರಿಯೂ ಎದ್ದು ಓಡುವ ಚೈತನ್ಯವನ್ನು ಗಳಿಸಿಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಬೀಸಿ ಬರುವ ತಂಗಾಳಿಯೊಂದಿಗೆ ತೇಲಿ ಬರುವ ಆ ಪರಿಮಳಕ್ಕೆ ಅದೆಷ್ಟು ಸಾಮರ್ಥ್ಯವಿದೆ ಎಂದರೆ ಬೇಡಬೇಡವೆಂದರೂ ಮನಸ್ಸು ಯೌವನದಿಂದ ಪುಟಿಯುವಂತೆ ಮಾಡಿಬಿಡುತ್ತದೆ. ನೆನಪುಗಳ ಹಾಯಿದೋಣಿಯಲ್ಲಿ ಪಯಣ ಆರಂಭವಾಗಿಬಿಡುತ್ತದೆ. ಕಳಕೊಂಡ ಪ್ರಿಯಕರನ ನೆನಪುಗಳ ಸಾಗರದಲ್ಲಿ ನಾವು ನಮಗೇ ಗೊತ್ತಿಲ್ಲದಂತೆ ವಿಹರಿಸಲಾರಂಭಿಸಿರುತ್ತೇವೆ. ಗೆಳತಿಯ ತೋಳ್ತೆಕ್ಕೆಯೊಳಗಿನ ಸಮೃದ್ಧ ಸುಖದ ಅನುಭೂತಿಯಾಗಿ ಮೀಟುತ್ತದೆ. ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತಿರಬಹುದಾದ ದುಗುಡ ದುಮ್ಮಾನಗಳನ್ನು ಗುಡಿಸಿ ಆಚೆ ತೆಗೆದೊಗೆದುಬಿಡುತ್ತದೆ. ಅಮ್ಮನ ಮಡಿಲ ಬೆಚ್ಚನೆಯ ಸಾಂತ್ವನಕ್ಕೆ ತಹತಹಿಸುತ್ತಿರುವ ಹೃದಯ ಎಂಥದ್ದೋ ಸಂತೃಪ್ತಿಯಲ್ಲಿ ಗದ್ದಲ ಮಾಡದೇ ಸುಖ ನಿದ್ದೆಗೆ ಜಾರುತ್ತದೆ. ಸೋದರಿಯ ವಾತ್ಸಲ್ಯಕ್ಕಾಗಿ ಹಂಬಲಿಸಿ ಸೋತು ಸುಣ್ಣವಾದವರನ್ನೂ ಸಂತೈಸಿಬಿಡುತ್ತದೆ. ಮಗಳ ಮುಗ್ಧತೆಯ ಸ್ಪರ್ಶದೊಂದಿಗೆ ಮುಖ ಅರಳುತ್ತದೆ. ಅಂಹಕಾರದಿಂದ ಅಬ್ಬರಿಸುತ್ತಿರವವರನ್ನು ಅಟಕಾಯಿಸಿಕೊಂಡು ನೆಲಕ್ಕಿಳಿಸುತ್ತದೆ. ಅಜ್ಞಾನ ತಿಮಿರದಿಂದ ಅಂಧರಾದವರನ್ನು ಜ್ಞಾನ ಶಲಾಕೆಯಾಗಿ ತಿವಿಯುತ್ತದೆ. ಮುಪ್ಪಿನಲ್ಲಿ ಮುದುಡಿದವರನ್ನು ಕೈಹಿಡಿದೇಳಿಸುತ್ತದೆ. ಉತ್ಸಾಹಿಗಳ ಉತ್ತೇಜಿಸುತ್ತದೆ. ಮೈಗಳ್ಳರಲ್ಲೂ ಲವಲವಿಕೆಯನ್ನು ಮೈಗೂಡಿಸುತ್ತದೆ.
ನೂರಕ್ಕೆ ನೂರು ಸತ್ಯ ‘ಮಣ್ಣಿನ ವಾಸನೆ’ಯೆಂದರೇ ಹಾಗೆ. ಅದು ವಿರಹೋತ್ಕಟೆಯೊಬ್ಬಳು ತನ್ನಿನಿಯನ ಸಾಂಗತ್ಯದಲ್ಲಿದ್ದಾಗ ಹೊರಹೊಮ್ಮಿಸುವ ಸೌಗಂಧದಂತೆ. ಕಾದು ಕಂಗಾಲಾಗಿ, ಗಾರಿ ಗಬರೆದ್ದು ಹೋದ ನೆಲಕ್ಕೆ ಬೀಳುವ ಮೊದಲ ಮುತ್ತಿನ ಮಳೆಯ ಸಿಂಚನಕ್ಕೆ ಪಸರಿಸುವ ಆ ಪರಿಮಳಕ್ಕೆ ಸಮನಾದುದು ಈ ಭೂಮಿಯ ಮೇಲೆ ಮತ್ತೊಂದಿಲ್ಲ. ಮಣ್ಣಿನ ವಾಸನೆ ಇಷ್ಟವಾಗದವರೂ ಈ ಜಗತ್ತಿನಲ್ಲಿರಲಿಕ್ಕೆ ಸಾಧ್ಯವೇ ? ಮುಂಗಾರ ಮಳೆಯ ಮೊದಲೆರಡು ಹನಿಗಳು ಧೂಳಿನ ರಾಶಿಯ ಮೇಲೆ ಚಿಟಪಟನೆ ಸದ್ದು ಮಾಡುತ್ತ ಬೀಳುವುದಕ್ಕೆ ತಡವಿಲ್ಲ. ಸುತ್ತಮುತ್ತಲ ಪರಿಸರಕ್ಕೆ ಅದೇನಾಗುತ್ತದೋ ಕಾಣೆ. ತಂಗಾಳಿ ತೀಡಲಾರಂಭಿಸುತ್ತದೆ. ಹಸಿರೆಲೆಗಳು ಲಾಸ್ಯಕ್ಕಿಟ್ಟುಕೊಳ್ಳುತ್ತವೆ. ಹಕ್ಕಿ-ಪಕ್ಷಿಗಳು ಹಬ್ಬದ ಸಂಭ್ರಮದೊಂದಿಗೆ ಹಾರಾಡತೊಡಗುತ್ತವೆ. ಅಷ್ಟೇ, ಮೇಘ ಮೇದಿನಿಯರ ಮಿಲನದ ಪ್ರತೀಕವಾಗಿ ಮಣ್ಣಿನ ವಾಸನೆ ಮೆಲ್ಲಗೆ ಪಸರಿಸಲಾರಂಭಿಸುತ್ತದೆ. ಮನೆಯ ಮೂಲೆಯಲ್ಲೆಲ್ಲಿದ್ದರೂ ಬಿಡದೇ ಹಿಡಿದೆಳೆದು ಹೊರತಂದು ನಿಲ್ಲಿಸುತ್ತದೆ ಆ ಘಮ.
ಮಣ್ಣಿಗೆ ಈ ಮಟ್ಟಿಗಿನ ಸುವಾಸನೆಯನ್ನು ತುಂಬಿದವರಾದರೂ ಯಾರು ? ನೂರು, ಸಾವಿರಾರು ವೈವಿಧ್ಯಮಯ ಪರಿಮಳಗಳಿಂದ ಈ ಜಗತ್ತು ಆವೃತ್ತವಾಗಿದ್ದರೂ ಅದ್ಯಾವುದಕ್ಕೂ ಮನುಷ್ಯ ಇಂಥಾ ಪರಿ ಮನಸೋಲದ ಹಿಂದಿನ ಗುಟ್ಟೇನು ? ಅವರಿವರೆನ್ನುವ ಭೇದವಿಲ್ಲದೇ ಇರುವವರೆಲ್ಲರನ್ನೂ ಸೆಳೆಯುವ ಮಣ್ಣಿನ ವಾಸನೆಯಲ್ಲಿರುವ ಶಕ್ತಿಯಾದರೂ ಎಂಥದ್ದು ? ಅಲ್ಲಿಯವರೆಗೂ ಅವಿತು ಕುಳಿತು ಮೊದಲ ಹನಿಗೇ ಮೈಮರೆಯುವಂತೆ ಮಾಡುವ ಉದ್ದೇಶವಾದರೂ ಏನು?
ಭೂರಮೆಯ ಸುಗಂಧಕ್ಕೆ ಮೂಲಕಾರಣೀಭೂತವಾದದ್ದು ಒಂದು ಬ್ಯಾಕ್ಟೀರಿಯಾ ಎಂದರೆ ನಂಬಲಾದೀತೇ ? ಸಹಸ್ರಾರು ವರ್ಷಗಳ ಹಿಂದೆಯೇ ಇದನ್ನು ಕಂಡು ಹಿಡಿಯಲಾಗಿದ್ದರೂ ನಿಖರವಾಗಿ ದು ಹೀಗೆಯೇ ಏಕೆ ಆಗುತ್ತದೆ? ಮಣ್ಣಿನ ವಾಸನೆಯಿಂದ ಮನುಷ್ಯನ ಮನಸ್ಸು ಇಷ್ಟೇಕೆ ಪ್ರಚೋದನೆಗೊಳಗಾಗುತ್ತದೆ ? ಭೂಗಂಧಕ್ಕೂ ರಸಿಕತನಕ್ಕೂ ಸಂಬಂಧವೇನು...? ಜೈವಿಕ ವಿಜ್ಞಾನ ವಲಯವನ್ನು ಕಾಡುತ್ತಲೇ ಇದ್ದ ಇಂಥ ಹತ್ತು ಹಲವು ಕುತೂಹಲಕ್ಕೆ ಕೊನೆಗೂ ಕೇವಲ ಎರಡು ವರ್ಷಗಳ ಹಿಂದಷ್ಟೇ ನಿಖರ ಉತ್ತರ ಸಿಕ್ಕಿದೆ. ಅತ್ಯಂತ ಭಾವನಾತ್ಮಕ ಸಂಯೋಜನೆಯ ಫಲವಾಗಿ ಹೊರಹೊಮ್ಮುವ ಇದಕ್ಕೆ ಇಂಗ್ಲಿಷ್ ವೈಜ್ಞಾನಿಕ ಪರಿಭಾಷೆಯಲ್ಲಿ ‘ಪೆಟ್ರಿಕಾರ್’ ಎಂಬ ಶುಷ್ಕ ಪದವೊಂದಿದೆ. ಶೃಂಗಾರದ ಶೃಂಗಕ್ಕೆ ಕರೆದೊಯ್ಯಬಲ್ಲ ಪರಿಮಳವನ್ನು ಇನ್ನೂ ಸ್ವಲ್ಪ ಕಾವ್ಯಾತ್ಮಕವಾಗಿ ಹೇಳುವ ಪ್ರಯತ್ನವಾಗಿ ‘ಜಿಯಾಸ್ಮಿನ್’ ಎಂತಲೂ ಬಳಸುವುದಿದೆ. ಅಸಲಿಗೆ ಜೀವ ರಾಸಾಯನಿಕವಾಗಿರುವ ಈ ಜಿಯಾಸ್ಮಿನ್‌ನ ಇಂಥ ಉತ್ತೇಜನಕಾರಿ ಗುಣದ ಉದ್ದೇಶವೇನೆಂಬುದರ ರಹಸ್ಯವನ್ನು ಪ್ರಕೃತಿ ಇನ್ನೂ ಹಾಗೆಯೇ ಬಚ್ಚಿಟ್ಟುಕೊಂಡಿದೆ. ಆದರೂ ಒಂದೆರಡು ಊಹಾತ್ಮಕ ಕಾರಣಗಳನ್ನು ವಿಜ್ಞಾನಿಗಳು ಮುಂದಿಡುತ್ತಾರೆ.
ಸ್ಟ್ರೆಪ್ಟೋಮೈಸ್ ಎಂಬ ಸೂಕ್ಷ್ಮಾತಿಸೂಕ್ಷ್ಮ ಜೀವಿ ಮಹಾಶಯನ ಕೆಲಸವಿದು. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಡೆವಿಡ್ ಕೇನ್ ಎಂಬ ವಿಜ್ಞಾನಿಯ ನೇತೃತ್ವದ ತಂಡ ಇದನ್ನು ಪತ್ತೆಹಚ್ಚಿತು. ಅದೂ ಆಕಸ್ಮಿಕವೇ ಅನ್ನಿ. ಕೇನ್ ಮತ್ತವರ ಗೆಳೆಯರು, ‘ಟರ್‍ಪೇನ್ ’ ಎಂಬ ಇನ್ನೊಂದು ಸಂಯುಕ್ತ ಧಾತುವಿನ ಬಗ್ಗೆ ಸಂಶೋಧನಾ ನಿರತರಾಗಿದ್ದರು. ವಿಶೇಷವೆಂದರೆ ಇದೂ ಸಹ ಸ್ಟ್ರೆಪ್ಟೋಮೈಸ್‌ನಿಂದಲೇ ಆದದ್ದು, ಜತೆಗೆ ಶ್ರೀಗಂಧದಲ್ಲಿ ಸೌಗಂಧಕ್ಕೂ ಇದೇ ಕಾರಣ. ಟರ್‍ಪೇನ್‌ನಿಂದ ಉತ್ಪತ್ತಿಯಾಗುವ ಜೀನ್ ಅನ್ನು ಕಂಡು ಹಿಡಿಯುವ ಉತ್ಸಾಹದಲ್ಲಿರುವಾಗಲೇ ಅಚಾನಕ್ ಆಗಿ ಕೇನ್‌ಗೆ ಇನ್ನೊಂದು ಜೀನ್‌ನ ಪ್ರತಿಕ್ರಿಯೂ ಗಮನಕ್ಕೆ ಬಂತು. ಟರ್‍ಪೇನ್ ನಲ್ಲಿ ಜೀನ್‌ಗಳಲ್ಲಿ ಒಂದೇ ಮಣ್ಣಿನ ವಾಸನೆಯ ಹುಟ್ಟಿಗೂ ಕಾರಣವಾಗಿರಬಹುದೇ ಎಂಬ ಅನುಮಾನ ಕಾಡಿತು. ತಡ ಮಾಡಲಿಲ್ಲ. ಇಡೀ ತಂಡ ಮಾಡುತ್ತಿದ್ದ ಸಂಶೋಧನೆಯನ್ನು ಬದಿಗಿಟ್ಟು ಮಣ್ಣಿನ ವಾಸನೆಯ ಬೆನ್ನು ಹತ್ತಿತು. ಜಿಯಾಸ್ಮಿನ್ ಪರಿಮಳವನ್ನು ಹೊರಸೂಸುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ಆದರೆ ಅದೇಕೋ ಮನುಷ್ಯ ಇದನ್ನು ಆಘ್ರಾಣಿಸುತ್ತಲೇ ಆತನ ಇಂದ್ರಿಯಗಳು ಇದಕ್ಕೆ ಕ್ಷಿಪ್ರವಾಗಿ ಸ್ಪಂದಿಸಲಾರಂಭಿಸುತ್ತದೆ. ಅದಕ್ಕಾಗಿಯೇ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಎಷ್ಟರಮಟ್ಟಿಗೆ ಪ್ರಭಾವಶಾಲಿಯೆಂದರೆ ಮೂರು ಶತಕೋಟಿಲೀಟರ್ ನೀರಿನಲ್ಲಿ ಕೇವಲ ಒಂದು ಹತ್ತು ಲೀಟರ್‌ನಷ್ಟು ಜಿಯಾಸ್ಮಿನ್ ಇದ್ದರೂ ಸಾಕು, ಮನುಷ್ಯನ ಮೂಗು ಇದನ್ನು ಗ್ರಹಿಸಿಬಿಡುತ್ತದೆ. ಬೇರೆ ಯಾವುದೇ ವಾಸನೆಗಿಂತಲೂ ಕೋಟ್ಯಂತರ ಪಟ್ಟು ಹೆಚ್ಚು ಸೂಕ್ಷ್ಮಗ್ರಾಹಿಯಾಗಿರುತ್ತದೆ ಇದರ ಪ್ರಭಾವ ಎಂಬುದು ಸ್ವತಃ ಕೇನ್‌ನ ವಿಶ್ಲೇಷಣೆ. ಹೇಗಿರಬಹುದು ಇದರ ಸಾಮರ್ಥ್ಯ ಎಂಬುದು ಊಹಿಸಿಕೊಳ್ಳಿ ಸಾಕು. ಆದ್ದರಿಂದಲೇ ಒಂದೇ ಒಂದು ಹನಿ ಮಳೆ ನೀರು ಮಣ್ಣಿನ ಮೇಲೆ ಬಿದ್ದರೂ ಸಾಕು ಸುತ್ತೆಲ್ಲ ಪರಿಮಳ ಹರಡಲಾರಂಭಿಸುತ್ತದೆ.
ಏಕೆ ಎಂಬುದು ಗೊತ್ತಿಲ್ಲ, ಆದರೆ ನಿಸರ್ಗವಂತೂ ಈ ಜಿಯಾಸ್ಮಿನ್‌ಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಿದೆ; ಮನದಲ್ಲೇ ಆರಾಸುವ ನಮ್ಮ ‘ದೇವತೆ’ಗೆ ನಾವು ಕೊಟ್ಟ ಆದ್ಯತೆಯಂತೆ. ಹಾಗೆಂದು ಸ್ಟ್ರೆಪ್ಟೋಮೈಸ್ ಏನೂ ಒಂಟಿಯಾಗಿ ಈ ಮಣ್ಣಿನ ವಾಸನೆಯನ್ನು ಉತ್ಪಾದಿಸುವುದಿಲ್ಲ. ಇದಕ್ಕೂ ಸಂಗಾತಿಗಳಿದ್ದಾರೆ. ಅದೂ ಒಂದೆರಡಲ್ಲ. ಸರಿಸುಮಾರು ಮೂರು ಡಜನ್ ಸಂಗಾತಿ(ಜೀನ್‌ಗಳ)ಯ ಸರದಾರ ಈ ಸ್ಟ್ರೆಪ್ಟೋಮೈಸ್. ಇವೆಲ್ಲವಕ್ಕೂ ಪಕ್ಕಾ ಇನಿಯನದ್ದೇ (ಸ್ಟ್ರೆಪ್ಟೋಮೈಸ್) ಗುಣ. ಅವುಗಳಲ್ಲಿ ಮೈಕ್ಸೋಬ್ಯಾಕ್ಟೀರಿಯಾಕ್ಕೆ ಪಟ್ಟದರಸಿಯ ಸ್ಥಾನ.
ಈ ಮಣ್ಣಿನ ವಾಸನೆಯ ಪ್ರಯೋಜನವೇನು ಎಂಬುದು ಈವರೆಗೆ ಯಾರಿಗೂ ಗೊತ್ತಿಲ್ಲದ ಸಂಗತಿ. ಮೇಲ್ನೋಟಕ್ಕೆ ಸಿಕ್ಕಿದ ಒಂದು ಊಹಾ ಚಿತ್ರಣವೆಂದರೆ ಮಳೆ ಬಿದ್ದಾಕ್ಷಣ ನೆಲದೊಳಗೆ ಇರುವ ಅನೇಕ ಸೂಕ್ಷ್ಮ ಕ್ರಿಮಿಗಳು ಆಕರ್ಷಿತಗೊಳ್ಳುತ್ತವೆ. ವಶೀಕರಣಕ್ಕೆ ಒಳಗಾದವರಂತೆ ಅವು ನೀರು-ಮಣ್ಣು ಸಂಯೋಜನೆಗೊಂಡ ತಾಣಕ್ಕೆ ನುಗ್ಗುತ್ತವೆ. ಮಾತ್ರವಲ್ಲ ಹುಚ್ಚಿಗೆ ಬಿದ್ದು ಮಣ್ಣನ್ನು ಮುಕ್ಕಲಾರಂಭಿಸುತ್ತವೆ. ಇದರಿಂದ ನೆಲದೊಡಲು ಸಡಿಲಾಗಲಾರಂಭಿಸುತ್ತದೆ. ಅವು ಹಾಗೆ ತಿಂದು ವಿಸರ್ಜಿಸುವ ಕಾಸ್ಟ್ ಎಂಬ ವಸ್ತು ಅತ್ಯಂತ ಸಾರಯುಕ್ತವಾಗಿದ್ದು, ಭೂಮಿಯ ಫಲವತ್ತತೆಯನ್ನು ದ್ವಿಗುಣಗೊಳಿಸುತ್ತದೆ. ಈ ಸಂದರ್ಭದಲ್ಲಿ ಹೊರಹೊಮ್ಮುವ ಪರಿಮಳವೇ ಗಾಳಿಯೊಂದಿಗೆ ಬೆರೆತು ನಮ್ಮ ಮೂಗಿಗೆ ಅಡರುವುದು. ಅಂದರೆ ಸ್ಟ್ರೆಪ್ಟೋಮೈಸ್‌ನ ಕಾರ್ಯ ನಮ್ಮ ಮಟ್ಟಿಗೆ ಅತ್ಯಂತ ಉಪಯುಕ್ತ ಎಂದ ಹಾಗಾಯಿತು.
ಹಾಗೆಂದು ಎಲ್ಲ ಸಂದರ್ಭದಲ್ಲೂ ಮನುಷ್ಯನಿಗೆ ಇದು ಹಿತವಾಗಿಯೇ ಇರುತ್ತದೆ ಎಂಬುದೇನೂ ಇಲ್ಲ ಬಿಡಿ. ಇಂಥ ವಾಸನೆ ಮಣ್ಣಿನಿಂದ ಗಾಳಿಯಲ್ಲಿ ಬೆರತಾಗಲಷ್ಟೇ ನಾವೆಲ್ಲರೂ ಪ್ರೇಮಿಗಳಾಗಿ ವರ್ತಿಸುತ್ತೇವಷ್ಟೇ. ಅದೇ ಆ ವಾಸನೆ ನೀರಿಗೆ ಸೇರಿ ಬಿಟ್ಟರೆ ಖಂಡಿತಾ ಮುಖ ಸಿಂಡರಿಸಿಕೊಳ್ಳುತ್ತೇವೆ. ಅಪ್ಪಿ ತಪ್ಪಿಯೂ ನೀರು ಮಣ್ಣಿನ ವಾಸನೆಯಿಂದ ಕೂಡಿದ್ದರೆ ಅದನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕ ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಇದನ್ನು ನಾವು ಗಮನಿಸಬಹುದು. ಒಂದು ರೀತಿಯ ಮುಗ್ಗಲು ವಾಸನೆ ನೀರನ್ನು ಕಾಡುತ್ತಿರುತ್ತದೆ. ಮಜಾ ಅಂದರೆ ನೀರು ಶುದ್ಧೀಕರಣ ಸಂದರ್ಭದಲ್ಲಿ ಇಂಥ ವಾಸನೆಯನ್ನು ತೊಡೆದು ಹಾಕಲೆಂದೇ ಕೋಟ್ಯಂತರ ರೂಗಳನ್ನು ನಾವು ವೆಚ್ಚ ಮಾಡುತ್ತೇವೆ. ಏನಾದರೂ ಹೇಳಿ, ಮೊದಲ ಮಳೆಗೆ ಮುಖವೊಡ್ಡಿ ಮಣ್ಣಿನ ವಾಸನೆಯನ್ನು ಹೀರುವುದೆಂದರೆ ಅದೊಂದು ರೀತಿ ಅಹ್ಲಾದಕರ ಅನುಭವ. ಯಾವಾತನೂ ಅಮಥ ಅನುಭವದಿಮದ ವಂಚಿತನಾಗಲು ಇಷ್ಟಪಡಲಾರ.
‘ಲಾಸ್ಟ್’ಡ್ರಾಪ್: ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್‌ನ ತಂಡವೊಂದು ವಿಜ್ಞಾನ ಪ್ರಯೋಗಾಲಯದೊಳಗೆ ರಾಸಾಯನಿಕ ಸಂಯೋಜನೆಯಿಂದ ಕೃತಕ ಮಣ್ಣಿನ ವಾಸನೆಯನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಇನ್ನು ಅಮಥ ಅನುಭೂತಿಗೆ ಮೊದಲ ಮಳೆಗಾಗಿಯೇ ಕಾಯಬೇಕಿಲ್ಲ. ಬೇಕೆಂದಾಗಲೆಲ್ಲ ಮೂಗು ತೂರಿಸಿದರಾಯಿತು.
No comments:
Post a Comment