ಹೌದು, ಅವಳು ಸೂಳೆ. ಈ ಸಮಾಜ ಅತ್ಯಂತ ನಿಕೃಷ್ಟವಾಗಿ ಕಾಣುವ, ಆದರೆ ನೈಜ ನಿಷ್ಠೆ-ಪ್ರಾಮಾಣಿಕತೆಗೆ ಸಾಕ್ಷಿಯಾದ ವೇಶ್ಯೆಯೊಬ್ಬಳ ಹೆಸರು ಇಂದು ನಾಡಿನ ಹಲವು ಹಳ್ಳಿಗಳಲ್ಲಿ ಅಜರಾಮರವಾಗಿದ್ದರೆ ಅದು ಆಕೆ ಮಾಡಿದ ನೀರ ಕಾರ್ಯದಿಂದ; ಅವಳ ಪಾತಿವ್ರತ್ಯದಿಂದ. ಇದೇನಿದು, ಒಬ್ಬ ವೇಶ್ಯೆಗೂ ನಿಷ್ಠೆ-ಬದ್ಧತೆಗೂ, ಪಾತಿವ್ರತ್ಯಕ್ಕೂ ಎತ್ತಣಿಂದೆತ್ತಣ ಸಂಬಂಧ ? ಹಾಗೆನ್ನುವಾಗ ಎಲ್ಲೋ ಓದಿದ ಕಥೆಯೊಂದು ನೆನಪಿಗೆ ಬರುತ್ತಿದೆ. ಬಹುಶಃ ಇದು ಸಹ ಭಾಗೀರಥಿ ಕಥೆಯಂತೆಯೇ ಜನಪದರಲ್ಲಿ ಹುಟ್ಟಿ ಬೆಳೆದದ್ದೇ ಇರಬಹುದು.
ಆ ಊರಿನಲ್ಲಿ- ಯಾವುದೋ ಒಂದು ಊರು. ಬೇಕಿದ್ದರೆ ಬೇಕೂರು ಅಂತಲೇ ಇಟ್ಟುಕೊಳ್ಳೋಣ- ಅಂಥ ಬೇಕೂರಿನಲ್ಲಿ ಭೀಕರ ನೀರಿನ ಕ್ಷಾಮ ತಲೆದೋರಿತ್ತು. ಹಾಗೆಂದು ನೀರು ಇಲ್ಲವೆಂದಲ್ಲ. ಬೇಕಷ್ಟು ಬಾವಿಗಳಿದ್ದವು. ಊರ ದೇಗುಲದಲ್ಲಿ ಒಂದು ಕೆರೆಯೂ ಇತ್ತೆನ್ನಿ. ಅದರೊಳಗಣ ಸಮೃದ್ಧ ಜಲ ಸಂಪನ್ಮೂಲ ಮಾತ್ರ ಉಳ್ಳವರ, ಕುಲೀನರ ಸುಪರ್ದಿಗೆ ಒಳಪಟ್ಟಿತ್ತು. ಊರೆಂದರೆ ಅವರಷ್ಟೇ ಇರುವುದಿಲ್ಲವಲ್ಲಾ ? ಇತರರಿಗೆ ನೀರಿಲ್ಲ. ಅದೇ ಕ್ಷಾಮ. ಕೊನೆಗೂ ದೂರು ದೊರೆಯವರೆಗೆ ಹೋಗಿ ಮುಟ್ಟುತ್ತದೆ. ಪ್ರಜೆಗಳಲ್ಲಿ ಕುಲೀನರು- ಕುಲಹೀನರೆಂಬ ಭೇದವೆಲ್ಲಿಯದು. ಕೊನೆಗೆ ಬೇಕೂರಿಗಿನ್ನೊಂದು ಕೆರೆ ಬೇಕೆಂಬ ಬೇಡಿಕೆಗೆ ರಾಜಮನ್ನಣೆ ದೊರೆಯುತ್ತದೆ. ಕೆರೆ ಕಟ್ಟಿ ನಿಲ್ಲಿಸಿದರೆ ಅದೇನು ದುರದೃಷ್ಟವೋ ಒಂದು ಹನಿ ನೀರೂ ಅಲ್ಲಿ ಬೀಳುವುದಿಲ್ಲ. ಇದು ರಾಜನಿಗೆ ಅಪಮಾನ ಎನ್ನಿಸಿಬಿಡುತ್ತದೆ. ತಾನು ಕಟ್ಟಿಸಿದ ಕೆರೆಯಲ್ಲಿ ನೀರು ಬೀಳುವುದಿಲ್ಲವೆಂದರೆ ಏನರ್ಥ ? ಪೂಜೆ ಪುನಸ್ಕಾರಗಳು ನೆರೆವೇರುತ್ತದೆ. ಗಂಗೆಯ ಸುಳಿವಿಲ್ಲ. ನಾಡಿನ ಧರ್ಮಿಷ್ಠರೆಲ್ಲರ ಪುಣ್ಯದ ಧಾರೆಯಾಗುತ್ತದೆ. ಕೊನೆ ಸ್ವತಃ ರಾಜ ತನ್ನ ಧರ್ಮಾಡಳಿತದ, ತಾನು ಕುಳಿತ ಧರ್ಮಪೀಠದ ಪುಣ್ಯ ಸಂಚಯವನ್ನೆಲ್ಲ ಕೆರೆಯ ನೀರಿಗಾಗಿ ವ್ಯಯಿಸುತ್ತಾನೆ. ಆದರೂ ಪ್ರಯೋಜನವಾಗದಿದ್ದಾಗ ಕೈ ಚೆಲ್ಲಿ ಕುಳಿತುಬಿಡುತ್ತಾನೆ.
ಅಂಥ ಸಂಕಷ್ಟಕ್ಕೆ ಒದಗುವವಳು ಒಬ್ಬ ವೇಶ್ಯೆ. ಊರಿನ ಮಂದಿಯ ವ್ಯಥೆಯೆಂದರೆ, ರಾಜನಿಗೆದುರಾದ ಸವಾಲೆಂದರೆ ಅದು ತನ್ನದೇ ಎಂದುಕೊಳ್ಳುವ ಆಕೆ ಆ ಕೆರೆಯ ಮುಂದೆ ನಿಂತು ಕೈಮುಗಿದು ಗಂಗಾ ಮಾತೆಯನ್ನು ಪ್ರಾರ್ಥಿಸುತ್ತಾಳೆ. ‘ನಾನು ನಿಜವಾಗಿಯೂ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಧರ್ಮ ಪಾಲನೆ ಮಾಡಿದ್ದರೆ, ಜೀವನದಲ್ಲಿ ಈವರೆಗೆ ನೈತಿಕವಾಗಿ ಬದುಕಿದ್ದರೆ, ನಿಜವಾಗಿ ಪಾತಿವ್ರತ್ಯ ನನ್ನಲ್ಲಿದ್ದರೆ, ಆ ಎಲ್ಲದರ ಪುಣ್ಯವನ್ನು ಧಾರೆ ಎರೆಯುತ್ತೇನೆ. ಈ ಕೆರೆಯಲ್ಲಿ ಬೆಳಗಾಗುವುದರಲ್ಲಿ ನೀರು ಬೀಳುವಂತಾಗಲಿ’ ಎನ್ನುತ್ತಾಳೆ. ಅಚ್ಚರಿಯೆಂದರೆ ಬೆಳಗಿನ ಕಿರಣಗಳು ಆ ಕೆರೆಯನ್ನು ತಲುಪಿದವೋ ಇಲ್ಲವೋ, ಅದು ತುಂಬಿ ತುಳುಕುತ್ತದೆ. ಆಗಸದ ಹೊಂಬಣ್ಣ ಆ ನೀರಲೆಗಳಲ್ಲಿ ಪ್ರತಿಫಲಿಸುತ್ತದೆ. ರಾಜ ಇದು ಹೇಗೆಂದು ಕೇಳಿದಾಗ ವೇಶ್ಯೆಯ ಉತ್ತರ ಕೇಳಿ- ನಾನು ಎಂದಿಗೂ ವೈಯಕ್ತಿಕ ವಾಂಛೆಗಾಗಿ ಬೇರೊಬ್ಬರೊಂದಿಗೆ ಮಲಗಿಲ್ಲ. ಎಂದಿಗೂ ನನ್ನ ವೃತ್ತಿಯ ಬಗ್ಗೆಯಾಗಲೀ, ವ್ಯವಹಾರದಲ್ಲಾಗಲೀ ಸುಳ್ಳು ಹೇಳಿಲ್ಲ. ನನ್ನ ಬಳಿ ಬರುವ ಗಿರಾಕಿಗಳಿಗೆ ಸದಾ ನಾನು ನಿಷ್ಠೆಯಿಂದಲೇ ಇರುತ್ತೇನೆ. ಹಾಗಾಗಿ ಒಬ್ಬ ಪತಿವ್ರತೆಯಷ್ಟೇ ನಾನೂ ಪವಿತ್ರಳು. ಅಂಥ ಧರ್ಮದ ಫಲವೇ ಇಂದು ಊರ ಜನರನ್ನು ಪೊರೆಯುತ್ತಿದೆ.- ಧರ್ಮ ಸೂಕ್ಷ್ಮ ಎಂದರೆ ಇದೇ ಇರಬಹುದೇ ?
ಅದೇನೇ ಇರಲಿ, ವೇಶ್ಯೆಯರಿಗೂ ಕೆರೆಗಳಿಗೂ ಅವಿನಾ ಸಂಬಂಧವಿರುವುದು ಇತಿಹಾಸದುದ್ದಕ್ಕೂ ಕಂಡು ಬರುತ್ತದೆ. ನಾಡಿನ ಹಲವೆಡೆಗಳಲ್ಲಿ ‘ಸೂಳೆಕೆರೆ’ ಹೆಸರಿನ ಹಲವು ನಿರ್ಮಾಣಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇಲ್ಲಿ ಎರಡು ಅಂಶಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ನೀರಿಗಿಂತ ದೊಡ್ಡ ಧರ್ಮವೆಂಬುದು ಯಾವುದೂ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ, ಕೀಳಾಗಿ ನೋಡಲ್ಪಟ್ಟ ವೇಶ್ಯೆಯರು ತಾವು ಪಾಪಪ್ರಜ್ಞೆಯಿಂದ ಮುಕ್ತರಾಗಲು ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದಿರಬಹುದು. ಮತ್ತೊಂದು ಅಂಶ ನೀರಿನ ಸಂಕಷ್ಟ ಎಂದರೆ ಅದು ನೀರೆಯ ಸಂಕಷ್ಟ. ಒಬ್ಬ ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಮಾತ್ರವಲ್ಲ ಅದಕ್ಕೆ ಪರಿಹಾರವೂ ಆಕೆ ಮಾತ್ರ ದೊರಕಿಸಿಕೊಡಬಲ್ಲಳು. ಇಲ್ಲಿ ಒಬ್ಬ ಹೆಣ್ಣಾಗಿ ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ವೇಶ್ಯೆ, ಅದಕ್ಕೆ ಪರಿಹಾರ ರೂಪದಲ್ಲಿ ಕೆರೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಿರಬಹುದು.
ನಾಡಿನ ಇಂಥ ಹಲವು ಕೆರೆಗಳಲ್ಲಿ ಗಮನ ಸೆಳೆಯುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ. ನಿಜಕ್ಕೂ ಅದರ ವೈಶಾಲ್ಯ, ಸುತ್ತಲಿನ ಮನಮೋಹಕ ಪರಿಸರ, ನೀರಿನ ಸಮೃದ್ಧಿ, ತಾಂತ್ರಿಕ ನಿರ್ಮಾಣಗಳು ಗಮನ ಸೆಳೆಯುತ್ತದೆ. ಏಷ್ಯಾಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಇದು ಪಾತ್ರ. ಹಾಗೆ ನೋಡಿದರೆ ಕೆರೆಯಿರುವ ಪ್ರದೇಶ ಅರೆ ಮಲೆನಾಡು. ಬಟಾನು ಬಯಲಿನ ನಡುವೆ ಮೈವೆತ್ತ ಸೂಳೆಕೆರೆ ಹೆಮ್ಮೆಯ ನಿಸರ್ಗ ತಾಣ. ಕುಡಿಯುವ ನೀರಿಗೆ ಮಾತ್ರವಲ್ಲದೆ ನೂರಾರು ರೈತ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.
ಬರೋಬ್ಬರಿ ೪೪೧೬ ಎಕರೆ ೧೭ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ, ಪಕ್ಕಾ ಸಮುದ್ರದಂತೆಯೇ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು ೯೫೦ ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ನಿಲ್ಲಿಸಲಾಗಿದೆ. ಬದುವಿನ ಒಂದು ಪಾರ್ಶ್ವ ೬೦ ಅಡಿ, ಇನ್ನೊಂದೆಡೆ ೮೦ ಅಡಿ ಅಗಲವಿದೆ.
ಈ ಕೆರೆಯ ಹಿಂದೆಯೂ ಒಂದು ಜಾನಪದ ಕಥೆ ಬಿಚ್ಚಿಕೊಳ್ಳುತ್ತದೆ. ಅದು ಸ್ವರ್ಗಾವತಿ ನಗರ. ವಿಕ್ರಮರಾಯ ಅದರ ಅರಸ. ನೂತನಾದೇವಿ ಪಟ್ಟದರಸಿ. ದಂಪತಿಗೆ ಶಾತಲಾದೇವಿ ಮುದ್ದಿನ ಮಗಳು. ಒಮ್ಮೆ ಏರು ಜವ್ವನೆ ಶಾಂತಲಾ ನೆರೆ ಊರಿಗೆ ಹೋಗಿರುತ್ತಾಳೆ. ಅವಳು ಮರಳಿ ಬರುವ ಹೊತ್ತಿಗೆ ರಾಜನಿಗೆ ಅವಳ ಬಗ್ಗೆ ಕೇಳಬಾರದ ಮಾತು ಕೇಳಿಬರುತ್ತದೆ. ಆಕೆಯನ್ನು ಆಕ್ಷೇಪಿಸುವ ವಿಕ್ರಮರಾಯ ನಡತೆಗೆಟ್ಟವಳೆಂದು ಆರೋಪಿಸುತ್ತಾನೆ.
ತಂದೆಯ ಬೈಗುಳದಿಂದ ಮನ ನೊಂದ ಶಾಂತಲಾದೇವಿ ಆರೋಪದಿಂದ ಮುಕ್ತಳಾಗಲು ಕೆರೆಯನ್ನು ನಿರ್ಮಿಸಲು ನಿರ್ಧರಿಸುತ್ತಾಳೆ. ಸ್ವರ್ಗಾವತಿಯಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶವನ್ನು ಅದಕ್ಕೆ ಆಯ್ಕೆ ಮಾಡಿಕೊಂಡು, ಆ ಜಾಗವನ್ನು ಬಿಟ್ಟುಕೊಡುವಂತೆ ವೇಶ್ಯೆಯರನ್ನು ಕೇಳುತ್ತಾಳೆ. ಕೆರೆಗೆ ‘ಸೂಳೆಕೆರೆ’ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ.ಆ ಬೇಡಿಕೆಗೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂದು ಇತಿಹಾಸ ಹೇಳುತ್ತದೆ.
ಬಹಳ ವಿಶೇಷವೆಂದರೆ ಬ್ರಿಟಿಷ್ ನೀರಾವರಿ ತಂತ್ರಜ್ಞರ ಪ್ರಕಾರ ಯಾವ ರೀತಿಯಿಂದ ನೋಡಿದರೂ ಅದು ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಆದರೆ ಅತ್ಯಂತ ಚಾಣಾಕ್ಷ ತನದಿಂದ ಅಂಥ ಬೃಹತ್ ಕೆರೆಯನ್ನು ಭಾರತೀಯರು ನಿರ್ಮಿಸಿದ್ದರೆಂದರೆ ನಮ್ಮ ತಂತ್ರಜ್ಞಾನದ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುತ್ತದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿವೆ. ಕೆರೆಯಿಂದ ನೀರು ಹರಿದು ಹೋಗಲು ಒಟ್ಟು ಮೂರು ತೂಬುಗಳಿವೆ. ಈ ಕೆರೆ ಸುಮಾರು ೧೫ರಿಂದ ೨೦ ಹಳ್ಳಿಗಳ ೨೦೦೦ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನೂ ಪೂರೈಸುತ್ತಿದೆ.
ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇವಾಲಯವಿದೆ. ಕೆರೆಯ ಅಂಚಿನಲ್ಲಿ ಆಕರ್ಷಕ ಕಲ್ಲು ಮಂಟಪವಿದೆ. ಆ ಕಲ್ಲು ಮಂಟಪದ ಬಳಿ ನಿಂತು ಕೆರೆ ನೋಡುವುದೇ ಒಂದು ಅಭೂತಪೂರ್ವ ಅನುಭವ.
ಏನಿಲ್ಲವೆಂದರೂ ೨೭ ಅಡಿಗೂ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಯಲ್ಲಿ ಇತ್ತೀಚೆಗೆ ಹೂಳು ತುಂಬಿಕೊಂಡಿರುವುದು ದುರಂತದ ಸಂಗತಿ. ಕೆರೆಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯನ್ನು ಬಲಪಡಿಸುವ ಗ್ರಾಮಗಳಿಗೆ ಅಂದಿನ ಕಾಲದಲ್ಲಿ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಇತ್ತು ಎಂಬುದು ಕೌಟಿಲ್ಯನ ‘ಅರ್ಥಶಾಸ್ತ್ರ’ದ ಉಲ್ಲೇಖ. ಆದರೆ ಈಗ ಹೂಳು ತೆಗೆಯುವ ವ್ಯವಸ್ಥೆಯೇ ಇಲ್ಲ. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಅದು ಇಂದಿಗೂ ಸೂಳೆಕೆರೆ ಆಗಿ ಉಳಿದಿದೆ. ಹೆಸರು ಬದಲಾವಣೆ ಬಗ್ಗೆ ವಿರೋಧವೂ ಈ ಹಿಂದೆ ವ್ಯಕ್ತವಾಗಿತ್ತು. ಏನೇ ಆದರೂ ಇಂದಿಗೂ ಅದು ಸೂಳೆ ಕೆರೆಯಂತಲೇ ಜನಪ್ರಿಯ.
ಮಾನವತೆಯ ಚರಿತ್ರೆಯಲ್ಲಿ ಕೊನೆಗೂ ಉಳಿಯುವುದು ಇಂಥವರೇ. ಆ ಕೆರೆ ಕಟ್ಟಿಸಿದ ರಾಜ ಯಾರೆಂದು ಜನರಿಗೆ ಮರೆತು ಹೋಗಬಹುದು, ಆದರೆ ಕೆರೆಯ ಹಿಂದಿರುವ ವೇಶ್ಯೆಯ ಕತೆ ಮರೆತುಹೋಗದು. ಊರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ತಿಳಿನೀರನ್ನು ಜನರಿಗೆ ಉಣಿಸುವ ಕೆರೆಯಂತೆಯೇ, ನೋವು ದೂಷಣೆಗಳನ್ನು ನುಂಗಿಕೊಂಡು ಜನತೆಗೆ ಸುಖ ನೀಡುವ ವೇಶ್ಯೆಯರು ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುತ್ತಿದ್ದರು ಎಂಬುದು ನಿಜವಲ್ಲವೆ ?
ಲಾಸ್ಟ್ ಡ್ರಾಪ್: ಸ್ವಚ್ಛ ಕೆರೆಯಲ್ಲಿ ಸ್ನಾನ ಮಾಡಿ ಕೊಳೆ ತುಂಬಿಸುವವರು, ಅದರ ಹೂಳು ತೆಗೆಯುವ ಬಗ್ಗೆಯೂ ಯೋಚಿಸಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕು.
No comments:
Post a Comment