ಹಾಗೆಂದು ಅದು ಉಕ್ಕುವ ಊಟೆಯೇನಲ್ಲ, ಕುಲುಕುವ ಕುಂಟೆಯೂ ಅಲ್ಲ, ಕಟ್ಟಿ ನಿಲ್ಲಿಸಿದ ಕೆರೆಯಲ್ಲ, ಕಟ್ಟೆ, ಗೋಕಟ್ಟೆಗಳ ರೀತಿಯೂ ಇಲ್ಲ. ಆದರೆ ಊರಣಿಗಳೆಂದರೆ ಇವೆಲ್ಲವೂ ಹೌದು. ವಿಚಿತ್ರ ಹೆಸರಿನ, ಅಷ್ಟೇ ವಿಚಿತ್ರ ಸ್ವಭಾವದ, ತುಂಬು ವ್ಯಕ್ತಿತ್ವದ ಈ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ, ಗ್ರಾಮೀಣ ತಮಿಳುನಾಡಿನ ಜನಜೀವನದ ಜೀವ ನಾಡಿಗಳು ಎಂದರೆ ಅಚ್ಚರಿಪಡಬೇಕಿಲ್ಲ. ಹೌದು, ತಮಿಳುನಾಡಿನ ಊರಣಿಗಳೆಂದರೆ ಕೇವಲ ಒಂದು ಸಂರಚನೆಯಾಗಿ, ನಿರ್ಮಿತಿಯಾಗಿ ನಿಲ್ಲುವುದಿಲ್ಲ. ಅದೊಂದು ಜೀವಂತ ವ್ಯವಸ್ಥೆ. ಖಂಡಿತಾ ಅದಕ್ಕೊಂದು ವ್ಯಕ್ತಿತ್ವ ಇದೆ. ಅದು ಅಕ್ಷರಶಃ ತನ್ನ ಸುತ್ತಮುತ್ತಲ ಜೀವಪರಿಸರ ವ್ಯವಸ್ಥೆಯೊಡನೆ ಸಂವಾದಿಸಬಲ್ಲುದು. ಜನಜೀವನಕ್ಕೆ ಸ್ಪಂದಿಸಬಲ್ಲುದು. ಅಷ್ಟೇಕೆ ಮುಂದಿನ ಐದು ವರ್ಷಗಳ ಕೃಷಿ ವ್ಯವಸ್ಥೆಯ ವೇಳಾಪಟ್ಟಿಯನ್ನು ರೈತರಿಗೆ ನಿಗದಿಪಡಿಸಿಕೊಡುವ ಮಟ್ಟಿಗಿನ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತದೆ ಎಂಬುದು ಸತ್ಯ.
ಕೊಯಮತ್ತೂರಿನಲ್ಲಿ ಯಾವುದೋ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಮೈಸೂರಿನವನಾದ ಗೆಳೆಯ ಕಿರಣ್, ಊರಣಿಯ ವೈಶಿಷ್ಟ್ಯದ ಬಗ್ಗೆ ಹೇಳಿದಾಗ ಹೆಚ್ಚೆಂದರೆ ನಮ್ಮ ಕೆರೆ-ಕುಂಟೆಗಳಂಥ ಇನ್ನೊಂದು ಸಂರಚನೆ ಅದಾಗಿರಬಹುದು ಎಂಬ ಊಹಾ ಚಿತ್ರಣ, ಅಂಥದ್ದೊಂದರ ಎದುರು ಹೋಗಿ ನಿಂತಾಗ ಸಂಪೂರ್ಣ ಬದಲಾಗಿತ್ತು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಅದರಲ್ಲೂ ಶಿವಗಂಗೆ ಜಿಲ್ಲೆಯಾದ್ಯಂತ ಕಂಡು ಬರುವ ಊರಣಿಗಳು ನಿಜಕ್ಕೂ ಅಪೂರ್ವ ಜಲನಿ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದರ ಒಡಲಲ್ಲಿ ತುಂಬಿಕೊಂಡಿರುವ ಅಮೃತ ಸಮಾನ ಸವಿಯ ನೀರು, ಅದಕ್ಕಿರುವ ಔಷಯ ಗುಣಗಳು ಗಮನ ಸೆಳೆಯುತ್ತದೆ. ಅದಕ್ಕೇ ಊರಣಿಯನ್ನು ‘ಪಾಲ್‌ಕೊಟ್ಟೈ ಊರಣಿಗಳ್‘ ಎಂದು ಸ್ಥಳೀಯರು ಅತ್ಯಂತ ಆಪ್ಯಾಯತೆಯಿಂದ ಕರೆಯುತ್ತಾರೆ. ಹಾಲಿಗಿಂತ ಅಮೃತ ಬೇಕೇ ? ಊರಣಿಗಳ ನೀರೆಂದರೆ ಹಾಲಿನಷ್ಟೇ ಸವಿಯಾದ್ದು, ಮಾತ್ರವಲ್ಲ ಅಷ್ಟೇ ಆರೋಗ್ಯಕಾರಿ ಎಂಬುದು ನಂಬಿಕೆ. ಇದು ನಂಬಿಕೆ ಮಾತ್ರವಲ್ಲ, ಊರಣಿಯ ನೀರಿನಲ್ಲಿ ಆ ಪರಿಯ ಸವಿ ಅಡಗಿರುವುದರ ಹಿಂದೆಯೂ ಒಂದು ರಹಸ್ಯವಿದೆ. ಅದು ಗ್ರಾಮೀಣರ ಪಾಲಿಗೆ ದೇಗುಲಕ್ಕಿಂತಲೂ ಪವಿತ್ರ ತಾಣ. ಹಾಗೊಂದು ಭಾವನಾತ್ಮಕ ಸಂಬಂಧದ ಸೆಳವಿನಲ್ಲೇ ಕೃಷಿಕರು ಅದನ್ನು ಕಾಪಿಟ್ಟುಕೊಂಡು ಬರುತ್ತಾರೆ. ಅಷ್ಟೇ ಪೂಜನೀಯ ದೃಷ್ಟಿಯಿಂದ ಊರಣಿಗಳನ್ನು ನೋಡುತ್ತಾರೆ. ದೇಗುಲಗಳ ಪ್ರಾಂಗಣವನ್ನು ಇಟ್ಟುಕೊಳ್ಳುವ ರೀತಿಯಲ್ಲೇ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಾರೆ ಹಳ್ಳಿಗರು. ದೇವತಾಣಗಳನ್ನು ಎಂದಾದರೂ ನಾವು ಭಾರತೀಯರು ಮೈಲಿಗೆ ಮಾಡಲುಂಟೇ ? ಹಾಗೆಯೇ ಯಾವುದೇ ಕಾರಣಕ್ಕೂ ಊರಣಿಯ ಸುತ್ತಮುತ್ತಲ ಪ್ರದೇಶ ಆಶೌಚಕ್ಕೊಳಗಾಗದಂತೆ ಸಂರಕ್ಷಿಸುತ್ತಾರೆ. ಪಕ್ಕದಲ್ಲೇ ದೇಗುಲ ನಿರ್ಮಾಣದ ಮೂಲಕ ಪವಿತ್ರ ವಾತಾವರಣವನ್ನು ಕಲ್ಪಿಸುತ್ತಾರೆ.
ಸಾಮಾನ್ಯವಾಗಿ ಊರಣಿಯ ಒಂದು ಪಕ್ಕದಲ್ಲಿ ಒಂದಿಲ್ಲೊಂದು ದೇಗುಲಗಳಿದ್ದರೆ, ಉಳಿದ ಪಾರ್ಶ್ವಗಳನ್ನು ಉತ್ತಮ ಜಾತಿಯ ಮರಗಿಡಗಳು ಆಕ್ರಮಿಸಿಕೊಂಡಿರುತ್ತವೆ. ಹಾಗೆನ್ನುವುದಕ್ಕಿಂತ ಉದ್ದೇಶಪೂರ್ವಕ ಹುಣಸೆ-ಹೊಂಗೆ, ಬೇವು-ಬನ್ನಿಯಂಥ ಔಷಯ ಸಸ್ಯಗಳನ್ನು ಮತ್ತು ಆಲ-ಅರಳಿ- ಅತ್ತಿಯಂಥ ಪವಿತ್ರ ಸಸಿಗಳನ್ನು ಆಯ್ದು ತಂದು ಹಚ್ಚಿರುತ್ತಾರೆ. ಯಾವುದೇ ಕಾರಣಕ್ಕೂ ಸುತ್ತಮುತ್ತಲಿನ ಕಲ್ಮಶಗಳು ಮಲೆ ನೀರಿನೊಂದಿಗೆ ಹರಿದು ಬಂದು ಊರಣಿಯನ್ನು ಸೇರಬಾರದೆಂಬ ಮುನ್ನೆಚ್ಚರಿಕೆ ಒಂದೆಡೆಯಾದರೆ, ಊರಣಿಯ ಒಡಲು ಸೇರಲು ಹವಣಿಸುವ ಹೂಳನ್ನು ಇಂಥ ಮರಗಿಡಗಳ ದಟ್ಟ ಬೇರು ತಡೆದು ನಿಲ್ಲಿಸುತ್ತದೆ. ಇದಕ್ಕಿಂತ ಗಮನಾರ್ಹ ಸಂಗತಿಯೆಂದರೆ ಊರಣಿಗಳ ಸುತ್ತಲಿನ ಜಲಾನಯನ ಪ್ರದೇಶದ ತುಂಬೆಲ್ಲ ವ್ಯಾಪಿಸಿರುವ ಅಪೂರ್ವ ಸಸ್ಯ ಸಂಕುಲದ ಮೂಲಕ ಹರಿದು ಬರುವ ನೀರು ತಂತಾನೇ ಅವುಗಳನ್ನು ಔಷಯ ಅಂಶಗಳನ್ನು ಒಳಗೊಂಡು ಬರುತ್ತದೆ. ಹೀಗಾಗಿಯೇ ಊರಣಿಯ ನೀರಿಗೆ ಆ ಮಟ್ಟಿಗಿನ ಸಿಹಿ ದೊರಕಿರುತ್ತದೆ.
ಸುತ್ತಮುತ್ತಲ ಜನವಸತಿಯನ್ನು ಅವಲಂಬಿಸಿ ಊರಣಿಗಳ ವಿಸ್ತಾರ, ಬಳಕೆಯ ಕ್ರಮಗಳು ನಿರ್ಧಾರವಾಗುವುದು ಇನ್ನೊಂದು ವಿಶೇಷ. ಜಲಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಇಡೀ ಊರಣಿಯನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದೊಂದು ಭಾಗದ ನೀರು ಒಂದೊಂದು ರೀತಿಯ ಬಳಕೆಗೆ ನಿಗದಿಯಾಗುತ್ತದೆ. ಜಾನುವಾರುಗಳು ಕುಡಿಯಲು, ದೇಗುಲದ ಬಳಕೆ, ಕೃಷಿ ಉಪಯೋಗಕ್ಕೆ, ಕುಡಿಯುವ ನೀರಿಗಾಗಿ ಹೀಗೆ ಪ್ರತ್ಯೇಕ ಪಾರ್ಶ್ವಗಳಲ್ಲಿ ನೀರು ಬಳಕೆಯಾಗುವುದರಿಂದ ಊರಣಿಗಳ ನೀರಿನ ಗುಣಮಟ್ಟಕ್ಕೆ ಧಕ್ಕೆ ಬರುವುದೇ ಇಲ್ಲ. ಹಾಗೆಯೇ ಜನಸಂಖ್ಯೆ ಆಧಾರದಲ್ಲಿ ಇವುಗಳ ವಿಸ್ತಾರವೂ ಬದಲಾಗುತ್ತದೆ. ಎಲ್ಲ ಊರಣಿಗಳೂ ಇಷ್ಟೇ ಆಳ ಅಗಲ ಇರಬೇಕೆಂಬ ನಿಯಮವೇನೂ ಇರುವುದಿಲ್ಲ. ಕೆಲವೊಂದು ಊರಣಿಗಳು ಎರಡು- ಎರಡೂವರೆ ಎಕರೆಗೂ ಮೀರಿದ ಹರವನ್ನು ಹೊಂದಿರುತ್ತದೆ. ತೀರಾ ಆಳವಲ್ಲದಿದ್ದರೂ ಒಂದಾಳು, ಕೆಲವು ಅದಕ್ಕಿಂತಲೂ ಹೆಚ್ಚು ಆಳವನ್ನು ಹೊಂದಿರುತ್ತವೆ. ಊರಣಿಯ ಮಧ್ಯಭಾಗದಲ್ಲಿ ಮಾತ್ರ ಅಷ್ಟು ಆಳವನ್ನು ಕಾಣಬಹುದು, ಅಗಲ ಹೆಚ್ಚಿದಂತೆಲ್ಲ ಆಳ ಕಡಿಮೆಯಾಗುತ್ತ ಹೋಗಿರುತ್ತದೆ.
ಸಾಮಾನ್ಯವಾಗಿ ಚಚ್ಚೌಕಾಕಾರದಲ್ಲೇ ಇರುವ ಊರಣಿಗಳಿಗೆ ಅತ್ಯಂತ ವ್ಯವಸ್ಥಿತವಾದ ನಿರ್ಮಾಣವನ್ನೂ ಮಾಡಲಾಗಿರುತ್ತದೆ. ನೆಲಮಟ್ಟಕ್ಕೇ ತೆರೆದುಕೊಂಡಿರುವ ಇವು ಸಾಮಾನ್ಯವಾಗಿ ಇಡೀ ವರ್ಷದ ಎಲ್ಲ ಕಾಲದಲ್ಲೂ ಮೈದುಂಬಿಕೊಂಡೇ ಇರುತ್ತವೆ. ಬಹುತೇಕ ಸುತ್ತಮುತ್ತಲೆಲ್ಲ ಬಾವಿಗಳು ಬತ್ತಿದ್ದರೂ ಇವುಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಅತ್ಯಂತ ವಿರಳ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ, ಇದನ್ನು ನಿರ್ಮಿಸಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಮುತ್ತಲಿನ ಮಳೆ ಹರಿವು ನೇರವಾಗಿ ಊರಣಿಗಳನ್ನೇ ಬಂದು ಸೇರುವಂತೆ ಜಾಗಗಳ ಆಯ್ಕೆ ಮಾಡಿರುತ್ತಾರೆ.
ಹಾಗೆ ನೋಡಿದರೆ ಊರಣಿಗಳ ಇತಿಹಾಸ ನೂರಿನ್ನೂರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅತ್ಯಂತ ಪುರಾತನ ಹಾಗೂ ಬೃಹತ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವೆಂಕೈಪಟ್ಟಿ ಊರಣಿ ಮುನ್ನೂರು ವರ್ಷಕ್ಕೂ ಹಿಂದೆ ರಾಜಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡದ್ದೆನ್ನುತ್ತಾರೆ ಸ್ಥಳೀಯರು. ನಮ್ಮಲ್ಲಿ ಗೋಕಟ್ಟೆಗಳ ನಿರ್ಮಾಣಕ್ಕೆ ಎಷ್ಟು ಮಹತ್ವವನ್ನು ರಾಜಾಡಳಿತದ ಅವಯಲ್ಲಿ ನೀಡಲಾಗಿತ್ತೋ ಅದೇ ರೀತಿ ತಮಿಳುನಾಡಿನಲ್ಲಿ ಊರಣಿಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗಿತ್ತು. ಆದರೆ ಇವು ಬಹೂಪಯೋಗಿಯಾಗಿ ಊರಿನ ಮಧ್ಯದಲ್ಲೇ ಅಸ್ತಿತ್ವ ಪಡೆದು ಗಮನಸೆಳೆಯುತ್ತವೆ. ಊರಣಿಗಳಷ್ಟೇ ಪುರಾತನವಾದ್ದು ಇದರ ನೀರಿನ ಶುದ್ಧೀಕರಣ ತಂತ್ರಜ್ಞಾನ. ಸಂಪೂರ್ಣ ದೇಸೀ ಪದ್ಧತಿಯನ್ನು ಆಧರಿಸಿದ ಈ ಕ್ರಮ ಎಲ್ಲವೂ ಗಿಡಮೂಲಿಕೆಗಳನ್ನೇ ಆಧರಿಸಿದ್ದು. ಸ್ಥಳೀಯ ಅರಣ್ಯಗಳಲ್ಲಿ ಮಾತ್ರ ಸಿಗುವ ವಿಶಿಷ್ಟ ಮರದ ಬೀಜವೊಂದನ್ನು ತಂದು ಅದನ್ನು ಉಜ್ಜಿ ಊರಣಿಯಲ್ಲಿ ಮೊಗೆದುಕೊಂಡ ನೀರಿನಲ್ಲಿ ಹಾಕಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಕಲ್ಮಷದ ಕಣಗಳೂ ನೀರಿನ ತಳಕ್ಕಿಳಿದುಬಿಡುತ್ತವೆ. ಎಷ್ಟೋ ಸಂದರ್ಭದಲ್ಲಿ ಉತ್ತಮ ಬೀಜಗಳನ್ನು ತಂದು ಊರಣಿಗೇ ಬೆರೆಸುವುದೂ ಇದೆ.
ಒಟ್ಟಾರೆ, ಇಂದಿಗೂ ಪೂರ್ಣ ಸ್ಥಳೀಯ ಸೊಗಡನ್ನು ಉಳಿಸಿಕೊಂಡು ಗ್ರಾಮೀಣ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿರುವ ಊರಣಿಗಳು ಖಂಡಿತಾ ತನ್ನ ಜಲವೈಭವದೊಂದಿಗೆ ಮೌಲ್ಯಯುತವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಸಂರಕ್ಷಣೆಗೊಳಪಡುತ್ತಿರುವುದು ಪ್ರಶಂಸನೀಯ ಸಂಗತಿ.
‘ಲಾಸ್ಟ್‘ಡ್ರಾಪ್: ಗ್ರಾಮೀಣ ಭಾರತದ ಒಡಲಲ್ಲಿ ಹುದುಗಿರುವ ಅದೆಷ್ಟೋ ಪಾರಂಪರಿಕ ಜಲಸಂರಕ್ಷಣಾ ಪದ್ಧತಿಗಳಲ್ಲಿ ಅಳವಡಿಕೆಯಾಗಿರುವ ತಂತ್ರಜ್ಞಾನ ತನ್ನ ಸುಸ್ಥಿರತೆಯಿಂದ ಇಂದಿಗೂ ಮಾದರಿಯಾಗಿವೆ. ಅದನ್ನು ದಕ್ಕಿಸಿಕೊಳ್ಳುವ ಜ್ಞಾನ, ಅಧ್ಯಯನದ ತಾಳ್ಮೆ ಮಾತ್ರ ನಮ್ಮಲ್ಲಿ ಉಳಿದಿಲ್ಲ.
No comments:
Post a Comment