Monday, February 22, 2010

ನೋಯಿಡಾದಲ್ಲಿ ಗಾಲಿಗಳ ಮೇಲೆ ನೀರ ಮನೆ ನೋಡಾ


ಒಂದೆರಡು ವರ್ಷಗಳ ಹಿಂದಿನ ಮಾತಿದು. ಸಾಗರ ಸಮೀಪದ ಹಳ್ಳಿಯೊಂದರ ಶಾಲಾ ಮಕ್ಕಳ ಉದ್ದನೆಯ ಸರತಿ ರಸ್ತೆಯಲ್ಲಿ ಹೊರಟಿತ್ತು. ಪಕ್ಕಾ ಇರುವೆ ಸಾಲಿನಂತೆ, ಯೂನಿಫಾರ್ಮ್‌ನಲ್ಲಿ ಶಿಸ್ತಿನ ಸಿಪಾಯಿಗಳಾಗಿ ಸಾಗಿ ಹೋಗುತ್ತಿದ್ದರು ಚಿಣ್ಣರು. ಹಾಗೆಂದು ಕಲರವಕ್ಕೆ ಅಲ್ಲಿ ಕೊರತೆ ಇರಲಿಲ್ಲ. ದಾರಿಯುದ್ದಕ್ಕೂ ಕಿಲಾಡಿತನ ಮಾಡುತ್ತ, ಏನನ್ನೋ ಹರಟುತ್ತ, ಜಗಳ ಕಾಯುತ್ತ ಮುಂದುವರಿದಿದ್ದ ಅವರನ್ನು ನಡುನಡುವೆ ಗದರುತ್ತ ನಿಯಂತ್ರಿಸುವ ಪ್ರಯತ್ನ ನಡೆಸಿದ್ದರು ಶಿಕ್ಷಕರು. ಎಲ್ಲರಿಗಿಂತ ಮುಂದೆ ಎದೆ ಸೆಟೆಸಿ ತುಸು ಹಮ್ಮಿನಿಂದಲೇ ನಡೆಯುತ್ತಿದ್ದ ಇಬ್ಬರು ಹುಡುಗರ ಕೈಯಲ್ಲಿ ಎಂಥದ್ದೋ ಬ್ಯಾನರ್. ಕುತೂಹಲಕ್ಕೆ ಇಣುಕಿದರೆ ಸುಂದರ ಅಕ್ಷರಗಳಲ್ಲಿ ಗಮನ ಸೆಳೆಯುತ್ತಿತ್ತು ‘ಜಲತೇರು’ ಎಂಬ ಮುದ್ದಾದ ಪದ.


ಹಳ್ಳಿಗಳಲ್ಲಿ ಜಾತ್ರೆಗಳು ಸಾಮಾನ್ಯ. ಅಂಥ ಜಾತ್ರೆಗಳಲ್ಲಿ ಬಣ್ಣಬಣ್ಣದ ಪತಾಕೆಗಳನ್ನು ಹೊತ್ತು ಬಾನೆತ್ತರಕ್ಕೆ ಮುಖ ಮಾಡಿ ನಿಲ್ಲುವ ತೇರುಗಳನ್ನೂ ನೋಡಿದ್ದೇವೆ. ಅಂಥ ತೇರನ್ನೆಳೆಯಲು ಊರಿಗೆ ಊರೇ ಪೈಪೋಟಿಗೆ ಬಿದ್ದು, ಆ ಗಡಿಬಿಡಿಯಲ್ಲಿ ಒಬ್ಬರ ಕಾಲಡಿಗೆ ಇನ್ನೊಬ್ಬರು ಸಿಲುಕಿ, ಸಾವರಿಸಿಕೊಂಡು ಎದ್ದು ಅಂತೂ ಪುನೀತರಾದೆವೆಂಬ ಕೃತಾರ್ಥ ಭಾವದಲ್ಲಿ ಮನೆ ಸೇರಿದರೆ ಮತ್ತೆ ಮುಂದಿನ ತೇರಿಗೆ ಅದೇ ದೃಶ್ಯ ಪುನರಾವರ್ತನೆ. ಆದರೆ ಈ ಜಲ ತೇರಿನಲ್ಲಿ ಅಂಥ ಯಾವ ಅಲಂಕಾರ, ಆಡಂಬರಗಳ ಸುಳಿವೂ ಸಿಗಲಿಲ್ಲ. ಮೆಲ್ಲಗೆ ಒಬ್ಬ ಹುಡುಗನನ್ನು ಸರತಿಯಿಂದ ಪಕ್ಕಕ್ಕೆ ಎಳೆದು ಕೇಳಿದರೆ, ‘ಇವತ್ತು ಹುಳೇಗಾರಿಗೆ ಪಿಕ್ನಿಕ್ ಹೋಗ್ತಾ ಇದ್ದೀವಿ’ ಅಂದ. ಹುಳೇಗಾರೇನು ಗೊತ್ತಿಲ್ಲದ್ದೇ ? ಸಾಗರದ ಹತ್ತು ಹಳ್ಳಿಗಳಲ್ಲಿ ಹನ್ನೊಂದನೆಯದ್ದಿದ್ದಂತಿರುವ ಊರು. ಅಲ್ಲಿಗೆಂತಾ ಪಿಕ್ನಿಕ್ಕು ? ಕುತೂಹಲ. ಅದರ ಬೆನ್ನತ್ತಿ ಹೊರಟಾಗ ಅತ್ಯಂತ ಅಚ್ಚರಿಯ ಸಂಗತಿಗಳು ಬಯಲಾಗಿದ್ದವು.


ಹುಳೇಗಾರು ಹೊಸತೊಂದು ಬದಲಾವಣೆಗೆ ತೆರೆದುಕೊಂಡಿತ್ತು. ಖಂಡಿತಾ ಅದು ನೋಡಲೇ ಬೇಕಾದ ತಾಣವಾಗಿ ಮಾರ್ಪಟ್ಟಿತ್ತು ಎಂಬುದಕ್ಕಿಂತ ಊರಿನ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಹಾಗೆ ಮಾಡಿದ್ದರು. ಒಂದಿಡೀ ಗ್ರಾಮವನ್ನು ರಾಸಾಯನಿಕ ಮುಕ್ತಗೊಳಿಸಿ, ಮಳೆ ನೀರಿನ ಕೊಯ್ಲಿನಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿದ್ದರು. ಹಾಗೆಂದೇ ಶಾಲಾ ಮಕ್ಕಳನ್ನು ಹುಳೇಗಾರಿನವರು ತಮ್ಮೂರಿಗೆ ಆಹ್ವಾನಿಸಿದ್ದರು. ಜತೆಗೆ ಪೋಷಕರಿಗೂ ಊರ ಬಾಗಿಲು ತೆರೆದಿದ್ದರು. ಬಂದವರಿಗೆ ಎಂದಿನ ಮಲೆನಾಡಿನ ಊಟ ಉಪಚಾರದೊಂದಿಗೆ ತಮ್ಮ ಯಶೋಗಾಥೆಯನ್ನು ಸಾರುವ, ತೋಡಿಟ್ಟ ಇಂಗುಗುಂಡಿಗಳ ತೋರುವ, ಕೂಡಿಟ್ಟ ಮಳೆನೀರ ಕುಡಿಸುವ ಯೋಜನೆ ರೂಪಿಸಿದ್ದರು. ಇಂಥದ್ದೊಂದು ಕಾನ್ಸೆಪ್ಟ್‌ಗೆ ಅವರಿಟ್ಟ ಹೆಸರು ‘ಜಲತೇರು’.
ನಿಜವಾಗಿ ನೀರೆಚ್ಚರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಮಕ್ಕಳು. ಅದು ಯಾವುದೇ ವಿಚಾರವಿರಲಿ, ಮಕ್ಕಳ ತಲೆಗೊಮ್ಮೆ ಹುಳು ಬಿಟ್ಟರೆ ಸಾಕು, ದೊಡ್ಡವರು ಮರೆತರೂ ಮಕ್ಕಳು ಮರೆಯುವುದಿಲ್ಲ. ಬೇಕಿದ್ದರೆ ನೋಡಿ, ಮನೆಯಲ್ಲಿ ಅಮ್ಮನಿಗೆ ಶಾಪಿಂಗ್ ಹೋಗಬೇಕೆನಿಸಿದರೆ ಮಕ್ಕಳಿಗೆ ಛೂ...ಬಿಟ್ಟು ಬಿಡುತ್ತಾಳೆ. ಅಷ್ಟೇ, ಅಪ್ಪ ಆಪೀಸಿನಿಂದ ಬರುವುದನ್ನೇ ಕಾಯುವ ಮಕ್ಕಳು ವರಾತ ತೆಗೆದು, ರಂಪ ಹಿಡಿದು ಅಂತೂ ಅಂದುಕೊಂಡದ್ದನ್ನು ಮಾಡಿಸಿಯೇ ತೀರುತ್ತಾರೆ. ದೊಡ್ಡವರಿಂದಾಗದ ಕೆಲಸ ಮಕ್ಕಳಿಂದ ಸಲೀಸು. ಹೀಗಾಗಿ ಹುಳೇಗಾರಿನ ಮಂದಿ, ಶಾಲಾಮಕ್ಕಳಲ್ಲಿ ಅರಿವು ಮೂಡಿಸುವ ಬುದ್ಧಿವಂತಿಕೆಯ ಯೋಜನೆ ರೂಪಿಸಿದ್ದರು.
ಅಂಥದ್ದೇ ಬುದ್ಧಿವಂತಿಕೆಯನ್ನು ದೂರದ ಉತ್ತರ ಪ್ರದೇಶದ ನೋಯಿಡಾದ ‘ಜನಹಿತ್ ಫೌಂಡೇಶನ್’ ಸಹ ತೋರುತ್ತಿದೆ. ಅದು ಸಹ ನೀರೆಚ್ಚರದ ಯಾತ್ರೆಯೇ. ಹೆಸರು ವಾಟರ್ ಲಿಟರಸಿ ಆನ್ ವ್ಹೀಲ್’. ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಎಂದು ಕನ್ನಡದಲ್ಲಿ ತರ್ಜುಮೆ ಮಾಡಿಕೊಳ್ಳಬಹುದೇನೋ. ಇದೇ ತಿಂಗಳ ೧೩ಕ್ಕೆ ಇಂಥದ್ದೊಂದು ಅಪರೂಪದ ಯಾತ್ರೆಗೆ ನೆಹರೂ ಅಂತಾರಾಷ್ಟ್ರೀಯ ಪಬ್ಲಿಕ್ ಸ್ಕೂಲ್‌ನಲ್ಲಿ ಚಾಲನೆ ನೀಡಲಾಗಿದೆ. ಯಾತ್ರಗಾಗಿಯೇ ವಿಶೇಷವಾಗಿ ವಾಹನವೊಂದನ್ನು ರೂಪಿಸಲಾಗಿದೆ. ಹೊಚ್ಚ ಹೊಸ ಟಾಟಾ ವಿಂಜರ್ ವಾಹನವನ್ನು ಇದಕ್ಕಾಗಿಯೇ ಸಜ್ಜುಗೊಳಿಸಲಾಗಿದೆ. ವಾಹನದ ಹೊರಭಾಗದಲ್ಲಿ ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಬರಹಗಳನ್ನು ಬರೆಸಲಾಗಿದೆ. ಜಲ ಶುದ್ಧತೆಯ ಪರೀಕ್ಷೆಗೆ ಅಗತ್ಯ ಉಪಕರಣಗಳನ್ನೂ ಹೊಂದಿರುವ ಈ ವಾಹನ ನೋಯಿಡಾ ಜಿಲ್ಲೆಯ ಹಳ್ಳಿ-ಹಳ್ಳಿಗಳನ್ನು ಸುತ್ತಲಿದೆ. ದಾರಿಯುದ್ದಕ್ಕೂ ಸಿಗುವ ಶಾಲೆಗಳ ಆವರಣ ಹೊಕ್ಕು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶ.


ಕಳೆದ ಆಗಸ್ಟ್‌ನಲ್ಲೇ ರೂಪುಗೊಂಡಿರುವ ಯೋಜನೆಗೆ ಚಾರಿಟೀಸ್ ಏಯ್ಡ್ ಫೌಂಡೇಷನ್(ಸಿಎಎಫ್) ಹಾಗೂ ಅಡೋಬ್ ಇಂಡಿಯಾ ಸಿಸ್ಟಮ್ಸ್ ಲಿ. ಸಹಯೋಗವನ್ನು ಒದಗಿಸಿವೆ. ಆಗಿನಿಂದಲೂ ಉದ್ದೇಶಿತ ಯಾತ್ರೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನೋಯಿಡಾ ಎದುರಿಸುತ್ತಿರುವ ಜಲ ಮಾಲಿನ್ಯ ಮತ್ತು ನೀರಿನ ಕೊರತೆಯೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಸಂಸ್ಥೆಯ ಸೋನಾಕ್ಷಿ ಗುಡ್ಡ. ಸಮುದಾಯದಲ್ಲಿನ ಅರಿವಿನ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಮೂಲ. ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸುವ ದೃಷ್ಟಿಯಿಂದ ಜನಹಿತ್ ಫೌಂಡೇಶನ್ ಕಾರ್ಯಕ್ಷೇತ್ರಕ್ಕಿಳಿದಿದೆ. ಭಾವೀ ಪ್ರಜೆಗಳು ಎಚ್ಚೆತ್ತರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಸುಲಭ ಮಾರ್ಗವಾಗಿ ಶಾಲೆಗಳನ್ನು ಆಯ್ದುಕೊಂಡೆವು ಎಂಬುದು ಅವರ ವಿವರಣೆ.


ಎಲ್ಲರಿಗೂ ಶುದ್ಧ ಕುಡಿಯುವ ನೀರು ಮೂಲಭೂತ ಹಕ್ಕು. ಇದು ಜನ ಜಾಗೃತಿಯಿಂದ ಮಾತ್ರ ಸಾಧ್ಯವಾಗುವಂಥದ್ದು. ಫೌಂಡೇಶನ್‌ನ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಗುರಿಯೇ ನೀರಿನ ಗುಣಮಟ್ಟ ಹಾಗೂ ಜಲ ನಿರ್ವಹಣೆಯ ಪ್ರಾಮುಖ್ಯದ ಬಗೆಗೆ ವಿದ್ಯಾರ್ಥಿಗಳ ಗಮನ ಸೆಳೆಯುವುದು. ಯೋಜನೆಯು ಮೂರು ವರ್ಷಗಳ ಕಾಲ ನಾನಾ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಅಂತಿಮ ವರ್ಷದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಹತ್ತು ಶಾಲೆಗಳನ್ನು ಗುರುತಿಸಲಾಗುತ್ತದೆ. ಆ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯಂಥ ನೀರಿನ ಸಂರಕ್ಷಣಾ ನಿರ್ಮಿತಿಗಳನ್ನು ಕಟ್ಟಿ, ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತದೆ. ಇಷ್ಟಕ್ಕೇ ಯೋಜನೆ ಮುಗಿದು ಹೋಗುವುದಿಲ್ಲ. ಶಾಲಾ ಪಠ್ಯಗಳಲ್ಲಿ ಸುರಕ್ಷಿತ ಮತ್ತು ಉತ್ತಮ ನೀರು ನಿರ್ವಹಣೆಯ ಕುರಿತಾದ ವಿಷಯಗಳ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡಲಿದೆ.


ಈಗಾಗಲೇ ಮೊದಲ ಹಂತದಲ್ಲಿ ಯೋಜಿತ ರೀತಿಯಲ್ಲೇ ಕಾರ್ಯಾನುಷ್ಠಾನ ಮಾಡಲಾಗಿದ್ದು, ಸಂಚಾರಿ ಜಲ ಸಾಕ್ಷರತಾ ವಾಹನಕ್ಕೆ ಚಾಲನೆ ನೀಡಲಾಗಿದೆ. ಶಾಲೆಗಳಲ್ಲಿ ನೀರೆಚ್ಚರ ಮೂಡಿಸಲು ಹೊರಟಿರುವ ಈ ವಾಹನ ಜಿಪಿಆರ್‌ಎಸ್ ವ್ಯವಸ್ಥೆ, ಎಲ್‌ಸಿಡಿ ಪ್ರೊಜೆಕ್ಟರ್, ಲ್ಯಾಪ್‌ಟಾಪ್ ಮತ್ತಿತರ ಆಧುನಿಕ ಸಲಕರಣೆಗಳನ್ನು ಒಳಗೊಂಡಿದೆ. ಹೋದೆಡೆಯಲ್ಲೆಲ್ಲ ಯಾತ್ರೆಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಸ್ಲೈಡ್‌ಗಳು, ಕಿರು ಚಿತ್ರಗಳ ಮೂಲಕ ನೀರಿನ ಮಾಹಿತಿಗಳನ್ನು ಬಿತ್ತರಿಸಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ತಾವೇ ಸ್ವತಃ ಪ್ರಯೋಗಕ್ಕೆ ಮುಂದಾಗಿ ನೀರಿನ ಗುಣಮಟ್ಟದ ಪ್ರಾಥಮಿಕ ಪರೀಕ್ಷೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾದ ಕಿಟ್ ಒಂದನ್ನು ಈ ಸಂಚಾರಿ ವಾಹನ ಒಳಗೊಂಡಿದೆ. ನೀರೆಚ್ಚರ ಮೂಡಿಸುವ ಬರಹಗಳನ್ನೊಳಗೊಂಡ ಆಕರ್ಷಕ ಬಣ್ಣಗಳಲ್ಲಿ ಮುದ್ರಿಸಲಾದ ಸಾಹಿತ್ಯವನ್ನೂ ವಾಹನದಲ್ಲಿ ಒಯ್ಯಲಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.


ಯೋಜನೆಗೆ ಸಂಬಂಸಿದ ಎಲ್ಲ ವಿವರವನ್ನು ಒಳಗೊಂಡ ಕಿರು ಸಾಕ್ಷ್ಯ ಚಿತ್ರವನ್ನೂ ಹೊರತರಲಾಗಿದೆ. ನೋಯಿಡಾ ಮತ್ತು ಗ್ರೇಟರ್ ನೋಯಿಡಾದ ಎಲ್ಲ ಶಾಲೆಗಳನ್ನೂ ತಲುಪುವುದು ಯೋಜನೆಯ ಗುರಿ. ನೀರಿನ ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ ಎಷ್ಟು ಮುಖ್ಯವಾದ್ದು ಎಂಬುದರ ಬಗ್ಗೆ ಎಲ್ಲ ಶಾಲಾ ಮುಖ್ಯಸ್ಥರನ್ನೂ ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಸೋನಾಕ್ಷಿ.


ಅಂತರ್ಜಲ ಸಂರಕ್ಷಣೆ, ನದಿ ನೀರಿನ ಮಾಲಿನ್ಯ ನಿಯಂತ್ರಣ, ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳ ಕುರಿತು ಅರಿವು ಮೂಡಿಸುವುದು, ಸ್ಥಳೀಯ ಸಮುದಾಯಗಳಲ್ಲಿ ಪರಿಸರ ಹಾಗೂ ಅದರ ಪ್ರಾಮುಖ್ಯದ ಕುರಿತು ಜಾಗೃತಿ ಮೂಡಿಸುವುದೇ ಮತ್ತಿತರ ಪರಿಸರ ಸಂಬಂ ಹಲವು ಚಟುವಟಿಕೆಗಳಲ್ಲಿ ೧೯೯೮ರಿಂದಲೂ ತೊಡಗಿಸಿಕೊಂಡಿದೆ ಜನಹಿತ್ ಫೌಂಡೇಶನ್. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆಯ ಚಟುವಟಿಕೆಗಳೆಲ್ಲವೂ ಸಮುದಾಯ ಕೇಂದ್ರಿತವಾಗಿದ್ದು, ನಿಜವಾಗಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪರಿಸರ ಸಂರಕ್ಷಣೆಯಂಥ ಅತ್ಯಂತ ಪ್ರಮುಖ ಅಷ್ಟೇ ಸೂಕ್ಷ್ಮ ಕಾರ್ಯ ಸಾಧನೆಯಾಗಲು ಸಾಧ್ಯ ಎಂಬುದನ್ನು ಅರಿತ ಸಂಸ್ಥೆ, ಸ್ಥಳೀಯರನ್ನು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಂಘಟಿಸುತ್ತಿದೆ. ಅದರ ಮುಂದುವರಿದ ಭಾಗವೇ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಯಾತ್ರೆ.


ಇಂಥ ಪ್ರಯೋಗಗಳು ಖಂಡಿತಾ ಎಲ್ಲ ರಾಜ್ಯಕ್ಕೂ ಮಾದರಿಯಾಗಬಲ್ಲುದು. ನಮ್ಮ ಹುಳೇಗಾರಿನಂಥ ಊರಿನಲ್ಲಿ ಯಾವಾಗಲೋ ಪ್ರಯೋಗಕ್ಕೊಳಪಟ್ಟು ಯಶಸ್ವಿಯಾಗಿರುವ ಯೋಜನೆಯನ್ನುಸರಕಾರ ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಯೋಚಿಸಿದರೊಳಿತು. ಹೇಗೂ ಈಗ ಶಾಲಾ ಶೈಕ್ಷಣಿಕ ಪ್ರವಾಸದ ಸಮಯ. ಇಂಥ ಸಂದರ್ಭದ ಸದುಪಯೋಗ ಪಡೆದು ವಿದ್ಯಾರ್ಥಿಗಳನ್ನು ಯಾವುದೋ ಫ್ಯಾಂಟಸಿ ಪಾರ್ಕ್‌ಗಳಿಗೆ, ಉದ್ಯಾನಗಳಿಗೆ ಕರೆದೊಯ್ಯುವ ಬದಲಾಗಿ ದೈನಂದಿನ ಬದುಕನ್ನು ಪರಿಚಯಿಸುವ, ನೀರಿನಂಥ ಮೂಲಭೂತ ಅಗತ್ಯಗಳ ಪೂರೈಕೆಯಲ್ಲಿ ಮಾದರಿಯಾಗಬಲ್ಲ ಸ್ಥಳಗಳಿಗೆ ಭೇಟಿ ಕೊಡುವುದು ಉತ್ತಮ.


‘ಲಾಸ್ಟ್’ ಡ್ರಾಪ್: ಮನರಂಜನೆಗಾಗಿ ನೀರಿನಲ್ಲಿ ಮಕ್ಕಳು ಆಟವಾಡುವ ಫ್ಯಾಂಟಸಿ ಪಾರ್ಕ್‌ಗಳನ್ನು ರೂಪಿಸುವ ಬದಲು, ನೀರಿನ ಪಾಠ ಹೇಳುವ ಜಲಪಾರ್ಕ್‌ಗಳನ್ನು ಜಿಲ್ಲೆಗೊಂದರಂತೆ ರೂಪಿಸಿದರೆ ಹೇಗೆ ?

No comments: