Tuesday, September 9, 2008

ತಲಪರಿಗೆ ಕೆಲ್ಸ:ಹೆಮ್ಮೆ ಮೂಡುವ ಊರೊಟ್ಟಿನ ಹಬ್ಬ


ತಲಪರಿಗೆ ಕೆಲಸಕ್ಕೆ ಮನೆಗೊಂದಾಳು, ಬರದಿದ್ದರೆ ಊರೇ ಹಾಳು
ಅದು ಚುಮು ಚುಮು ಮುಂಜಾವು. ಆ ಹಳ್ಳಿಯಲ್ಲಿ ಸೂರ್ಯ ಕಣ್ಣು ಬಿಡಲು ಇನ್ನೂ ಒಂದು ಗಂಟೆ ಇದೆ ಎನ್ನುವಾಗಲೇ ತಮಟೆಯ ಸದ್ದು ಮೊಳಗಲಾರಂಭಿಸಿದೆ. ಹಲಗೆ ಹೊಡೆಯುತ್ತ ವ್ಯಕ್ತಿಯೊಬ್ಬ ಊರ ಬೀದಿಬೀದಿಯಲ್ಲಿ ಸಾಗುತ್ತಿದ್ದಾನೆ. ‘ಕೇಳ್ರಪ್ಪೋ ಕೇಳ್ರಿ, ..........ರಲ್ಲಿ ಇವತ್ತು ತಲಪುರಗೆ ಕೆಲ್ಸಕ್ಕೆ ಗಮಕಾರ್ರು ಕರ್‍ದಿದಾರೆ. ಪ್ರತಿ ಮನೆಯಿಂದ ಒಂದೊಂದಾಳು ಮೂಡು ಹುಟ್ಟೋಕೆ ಮೊದಲು, ಮಾರಮ್ಮನ ದೇವಸ್ಥಾನದ ಮುಂದಿನ ಕಟ್ಟೆಗೆ ಬಂದು ಸೇರ್‍ಕೋಬೇಕು....’
ಹಲಗೆಯವನ ಧ್ವನಿ ಕೇಳುತ್ತಿದ್ದಂತೆ ಒಂದೊಂದೇ ಮನೆಯವರು ಎದ್ದು ಲಗುಬಗೆಯಿಂದ ಸಜ್ಜಾದರು. ಮನೆ ಹೆಂಗಸರು ಒಲೆ ಹೊತ್ತಿಸಿ ಎಸರು ಇಟ್ಟರೆ, ಗಂಡಸರು ಹಾರೆ, ಗುದ್ದಲಿ, ಮಚ್ಚು ಇತ್ಯಾದಿ ಹತ್ಯಾರ ಹುಡುಕಿಕೊಳ್ಳಲಡಿಯಿಟ್ಟರು. ಅರ್ಧಗಂಟೆಯೊಳಗೆ ಚಾ ಕುಡಿದು, ಬುತ್ತಿ ಕಟ್ಟಿಕೊಂಡ ಈರ, ವೆಂಕ, ನಾಣಿ, ಸೀನ, ದೊಡ್ಡೇಗೌಡ...ಹೀಗೆ ಒಬ್ಬೊಬ್ಬರಾಗಿ ಮನೆಯಿಂದ ಹೊರಬಿದ್ದು ರಸ್ತೆಗುಂಟ ಗೌಜೆಬ್ಬಿಸಲಾರಂಭಿಸಿದರು.
‘ಏ ಬಸ್ಯಾ, ಹೊತ್ತು ಹುಟ್ಟೋಕಾಯ್ತು ಏಳಲೇ, ತಲಪುರಗೆ ಕೆಲ್ಸ ಐತೆ, ಬಾರ್‍ಲ. ಇಲ್ಲಾ ನಿನ್ ಜನಾನಾದ್ರೂ ಕಳ್ಸು. ಇಲ್ಲಾಂದ್ರ ದಂಡ ಕಟ್ಟಬೇಕಾಯ್ತದೆ ನೋಡು’ ಎಂದ ಈರಣ್ಣ. ಅವನ ದನಿ ಕೇಳಿದ ಬಸ್ಯಾ ಒಳಗಿಂದಲೇ ಕೂಗಿದ. ‘ಇಲ್ಲಲೇ ಈರಣ್ಣ, ನಂಗಿವತ್ತು ಮೈಗೆ ಹುಸಾರಿಲ್ಲ. ತಗ್ಗಿನ ಮನೆ ಗುತ್ಯನ್ನ ಮಯ್ಯಾಳಿಗೆ ಹೇಳಿದೀನಿ. ಬತ್ತಾನೆ ಬಿಡು’ ಎಂದ.
ಹೀಗೆ ಸಂಭಾಷಣೆ ಸಾಗುತ್ತ ಹಾದಿ ಮುಗಿಯುವ ಹೊತ್ತಿಗೆಲ್ಲ ಮಾರಮ್ಮನ ಗುಡಿ ಮುಂದೆ ಸೇರಿರುತ್ತಾರೆ. ಗಮಕಾರ ರಂಗಣ್ಣ ಕಟ್ಟೆ ಮ್ಯಾಲೆ ನಿಂತು ತಲೆ ಎಣಿಸುತ್ತಿರುತ್ತಾನೆ. ಒಬ್ಬೊಬ್ಬರನ್ನಾಗಿ ಹೆಸರಿಡಿದು ಕರೆದು ಹಸಗೆ ಹಂಚುತ್ತಿದ್ದಾನೆ. ಎಲ್ಲರೂ ಬಂದು ಸೇರುತ್ತಿದ್ದಂತೆ ಎಲ್ಲ ಹಸಗೆ ಹಂಚಿ ಮುಗಿಯುತ್ತದೆ. ಸರಿ ಇನ್ನೇನಿದ್ದರೂ ತಲಪರಿಗೆ ಬಳಿ ಹೋಗಿ ಮಾರು ಹಾಕಿಕೊಡುವುದಷ್ಟೇ ಬಾಕಿ. ಅದೆಲ್ಲವೂ ಮುಗಿದು ಕೆಲಸ ಆರಂಭಿಸುವಷ್ಟರಲ್ಲಿ ಮಲ್ಲನೆ ಮೂಡಣ ಕೆಂಪಗಾಗ ತೊಡಗುತ್ತದೆ. ಹೊತ್ತು ಏರಿದಂತೆಲ್ಲ ಕೆಲಸದ ಭರಾಟೆಯೂ ಹೆಚ್ಚುತ್ತದೆ. ನಡು ನೆತ್ತಿಗೆ ಸೂರ್ಯ ಬರುವುದರೊಳಗೆ ಒಂದು ಹಂತದ ಕೆಲಸ ಮುಗಿಸಲಾಗುತ್ತದೆ.
ಪಾರಂಪರಿಕ ಜಲವ್ಯವಸ್ಥೆಗಳಲ್ಲಿ ಅತ್ಯಂತ ಅಮೂಲ್ಯ ಮಾದರಿಗಳಲ್ಲಿ ಒಂದಾದ ತಲಪರಿಗೆಗಳ ನಿರ್ವಹಣೆಯ ರೀತಿಯೇ ಇಂಥದ್ದು. ಅದು ಊರೊಟ್ಟಿನ ಶ್ರಮವನ್ನು ಬೇಡುತ್ತದೆ. ಗ್ರಾಮಸ್ಥರೂ ಅದನ್ನು ತಮ್ಮ ಕರ್ತವ್ಯದ ಭಾಗವೆಂದು ತಿಳಿದು ಅಷ್ಟೇ ಆಸ್ಥೆಯಿಂದ ಮಾಡಲು ಮುಂದಾಗುತ್ತಾರೆ.
ಮಧುಗಿರಿ ಸಮೀಪದ ಚೋಳೇನಹಳ್ಳಿಯಲ್ಲಿ ಜೀವಂತ ತಲಪರಿಗೆಯೊಂದನ್ನು ಇಂದಿಗೂ ನಿರ್ವಹಿಸುತ್ತಿರುವ ಗಮಕಾರ, ಬಂಡೆ ರಂಗರಾಜು ಅವರು ಇಡೀ ಪ್ರಕ್ರಿಯೆಯನ್ನು ವಿವರಿಸುತ್ತ ಹೋದರೆ ನಿಜಕ್ಕೂ ಕೌತುಕ ಮೂಡುತ್ತದೆ. ಮಧುಗಿರಿಯ ಆ ಪುಟ್ಟ ತಲಪರಿಗೆ ಇಂದಿಗೂ ೩೦ ಎಕರೆಯಷ್ಟು ಜಮೀನಿಗೆ ನೀರುಣಿಸುತ್ತ ನಲಿಯುತ್ತಿದೆ. ಇಡೀ ಗ್ರಾಮದ ಜೀವಾಳವಾಗಿ ನಿಂತಿರುವ ಇದು ಈವರೆಗೆ ಬತ್ತಿದ ಉದಾಹರಣೆಯೇ ಇಲ್ಲ. ಪ್ರತಿವರ್ಷ ಊರಿನ ಎಲ್ಲರೂ ಸೇರಿ ಕಾಲುವೆ ಸ್ವಚ್ಛಗೊಳಿಸುತ್ತಾರೆ. ಯಾವುದೇ ಭೇದವಿಲ್ಲದೇ ಎಲ್ಲ ಜಮೀನಿನ ಧಣಿಗಳೂ ಕೆಲಸಕ್ಕೆ ಬರುತ್ತಾರೆ. ತಲಪರಿಗೆ ಕೆಲಸವೆಂದರೆ ಅದೊಂದು ಹಬ್ಬವಿದ್ದಂತೆ ಎಂಬುದು ಅವರ ಹೆಮ್ಮೆಯ ಮಾತು.
ವರ್ಷವಿಡೀ ನೀರಿನ ಹಂಚಿಕೆ, ತಲಪರಿಗೆ ನಿರ್ವಹಣೆ, ಕಾಲುವೆಗಳ ಸ್ವಚ್ಛತೆ ಇತ್ಯಾದಿಗಳೆಲ್ಲದರ ನಿರ್ವಹಣೆಯನ್ನು ಊರಿನಲ್ಲಿ ಪಾರಂಪರಿಕವಾಗಿ ಬಂದ ಒಂದು ಮನೆಯವರಿಗೆ ನೀಡಿರುತ್ತಾರೆ. ಅಂಥವರನ್ನು ‘ಗಮಕಾರ’ ಎಂದು ಕರೆಯಲಾಗುತ್ತದೆ. ಚೋಳೇನಹಳ್ಳಿಯ ಈ ನಿರ್ದಿಷ್ಟ ತಲಪರಿಗೆಯ ಮಟ್ಟಿಗೆ ಹೇಳುವುದಾದರೆ ಬಂಡೆ ರಂಗರಾಜು ಗಮಕಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಮಕಾರರು ಕರೆದರೆ ಪ್ರತಿ ಜಮೀನಿನವರೂ ಕೆಲಸಕ್ಕೆ ಬರುವುದು ಕಡ್ಡಾಯ. ಊರಿನ ಮುಖಂಡ, ಗೌಡರಿಗೂ ಇದರಿಂದ ವಿನಾಯ್ತಿ ಇಲ್ಲ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಯಾವುದೇ ಒಂದು ಮನೆಯವರಿಗೆ ಬರಲಾಗಲಿಲ್ಲ ಎಂದರೆ ಬದಲಿ ಆಳನ್ನಾದರೂ ಕಳುಹಿಸಿಕೊಡಬೇಕು. ಎರಡೂ ಇಲ್ಲವೆಂದರೆ ದಿನಕ್ಕೆ ನೂರು ರೂ. ದಂಡವನ್ನು ವಿಸಲಾಗುತ್ತದೆ. ಬೆಳಗ್ಗೆ ೭ ಗಂಟೆಗೆ ಕೆಲಸಕ್ಕೆ ಹಾಜರಿರಲೇ ಬೇಕು. ತಡವಾಗಿ ಬಂದರೆ ಅಂದರೆ ಕೆಲಸ ಆರಂಭವಾದ ಮೇಲೆ ಬಂದರೆ ೧೨೫ ರೂ. ದಂಡ ವಿಸಲಾಗುತ್ತದೆ. ಮಧ್ಯದಲ್ಲಿ ಕೆಲಸ ಬಿಟ್ಟು ಹೋದರೂ ಈ ಪ್ರಮಾಣ ಇನ್ನೂ ಹೆಚ್ಚು. ಅಂಥವರ ಜೇಬಿಗೆ ಸಾವಿರ ರೂ. ತ್ಯಾಮಾನ ಬಂತೆಂದೇ ಅರ್ಥ. ಹೀಗೆ ಸಂಗ್ರಹವಾಗುವ ಹಣವನ್ನು ಉಳಿಯಾಳು ದಂಡ ಎಂದು ಕರೆಯಲಾಗುತ್ತದೆ. ಇದನ್ನು ಸಂಗ್ರಹಿಸಿಟ್ಟು, ಮಳೆಗಾಲದಲ್ಲಿ (ಸಾಮಾನ್ಯವಾಗಿ)ಶ್ರಾವಣದಲ್ಲಿ ನಡೆಯುವ ಗಂಗೆ ಪೂಜೆ, ಊರೊಟ್ಟಿನ ಹಬ್ಬ , ಸಂತರ್ಪಣೆ ಇತ್ಯಾದಿಗಳಿಗೆ ಬಳಸಲಾಗುತ್ತದೆ.
ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ನಡುವಿನ ಅವಯಲ್ಲಿ ತಲಪರಿಗೆ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರೈತರ ಕೆಲಸಗಳೂ ಮುಗಿದಿರುತ್ತದೆ. ಜತೆಗೆ ಮಳೆಗೆ ಮುನ್ನ ಕಾಲುವೆ ಇತ್ಯಾದಿಗಳನ್ನು ದುರಸ್ತಿಗೊಳಿಸಿಕೊಳ್ಳಬೇಕೆಂಬ ಉದ್ದೇಶವೂ ಇದರ ಹಿಂದಿದೆ. ಊರಿನವರನ್ನು ನಾಲ್ಕು ನಾಲ್ಕು ಜನರ ಒಂದೊಂದು ತಂಡವಾಗಿ ವಿಂಗಡಿಸಲಾಗುತ್ತದೆ. ಇಂಥ ತಂಡಗಳಿಗೆ ಕಾಲುವೆ ಒಟ್ಟು ಉದ್ದದಲ್ಲಿ ಒಂದೊಂದು ಮಾರಿನಂತೆ ಕೆಲಸ ವಹಿಸಿಕೊಡುತ್ತಾರೆ ಗಮಕಾರರು. ಇದಕ್ಕೆ ಹಸಗೆ ಹಾಕಿ ಕೊಡುವುದು ಎನ್ನುತ್ತಾರೆ. ಅಷ್ಟು ಕೆಲಸ ಮುಗಿಸುವುದು ಅವರ ಜವಾಬ್ದಾರಿ. ಇಷ್ಟಾಗಿಯೂ ಉಳಿಯುವ ಹೆಚ್ಚುವರಿ ಮಂದಿಗೆ ಕಾಲುವೆಯಲ್ಲಿ ಅಕ್ಕ ಪಕ್ಕ ಬೆಳೆದ ಜಾಲಿ ಇತ್ಯಾದಿ ಪೊದೆಗಳನ್ನು ಕಡಿಯುವುದು, ಬೇರುಗಳು ಕಾಲುವೆಗೆ ಬಂದಿದ್ದರೆ ಅದನ್ನು ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು ಇತ್ಯಾದಿ ಕೆಲಸ ವಹಿಸಲಾಗುತ್ತದೆ. ಇದಕ್ಕೂ ಲೆಕ್ಕವಿರುತ್ತದೆ. ಪ್ರತಿಯೊಬ್ಬರೂ ತಾವೆಷ್ಟು ಪೊದೆ ತೆಗೆದಿದ್ದೇವೆ, ಬೇರು ಕಿತ್ತಿದ್ದೇವೆ ಎಂಬುದನ್ನು ಕೊನೆಯಲ್ಲಿ ತೋರಿಸಬೇಕು.
ಸಾಮಾನ್ಯವಾಗಿ ಊರಿನ ರೈತರೇ ಸಭೆ ಸೇರಿ ಗಮಕಾರರನ್ನು ನೇಮಿಸುತ್ತಾರೆ. ಆತ ನಿಷ್ಪಕ್ಷಪಾತಿಯಾಗಿ ವರ್ತಿಸಬೇಕಾಗುತ್ತದೆ. ನೀರಿನ ಹಂಚಿಕೆಯಲ್ಲೂ ನಿಗದಿತ ಮಾನದಂಡ ಅನುಸರಿಸಲಾಗುತ್ತದೆ. ಈ ವಿಚಾರದಲ್ಲಿ ಇನ್ನೊಂದು ಕುತೂಹಲದ ಪದ್ಧತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ. ತಲಪರಿಗೆಯಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಯ ಆರಂಭದಲ್ಲಿ ಒಂದು ಮರವನ್ನು ಗುರುತಿಸಿರುತ್ತಾರೆ. ಅದರ ಕೊಂಬೆಗೆ ಮಧ್ಯಮ ಗಾತ್ರದ ಮಡಕೆಯೊಂದನ್ನು ತೂಗುಹಾಕಲಾಗುತ್ತದೆ. ಅದರ ತಳ ಭಾಗದಲ್ಲಿ ಸಣ್ಣ ರಂಧ್ರವನ್ನು ಮಾಡಲಾಗಿರುತ್ತದೆ. ಕಾಲುವೆಯಿಂದ ನೀರು ಹರಿಸಲಾರಂಭಿಸಿದ ತಕ್ಷಣ ಆ ಮಡಕೆಗೆ ನೀರು ತುಂಬಲಾಗುತ್ತದೆ. ಕೆಳಗಿನ ರಂಧ್ರದಿಂದ ನೀರು ಸೋರುತ್ತ ಹೋಗಿ ಮಡಕೆ ಸಂಪೂರ್ಣ ಖಾಲಿಯಾಗುವವರೆಗೂ ಕಾಲುವೆಯಿಂದ ಜಮೀನಿಗೆ ನೀರು ಹೋಗುತ್ತದೆ. ನಂತರ ಇನ್ನೊಂದು ಜಮೀನಿಗೆ ನೀರನ್ನು ತಿರುಗಿಸಲಾಗುತ್ತದೆ. ಒಂದು ಎಕರೆಗೆ ಒಂದು ಮಡಕೆ ನೀರು ಸೋರಿ ಹೋಗುವವರೆಗೆ ನೀರು. ಆಯಾ ವರ್ಷದ ಮಳೆ, ತಲಪರಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಇತ್ಯಾದಿಗಳನ್ನು ಅವಲಂಬಿಸಿ ಮಡಕೆಯ ಗಾತ್ರ ನಿರ್ಧಾರವಾಗುತ್ತದೆ.
ಒಟ್ಟಾರೆ ಸಂಪೂರ್ಣ ಗ್ರಾಮಸ್ಥರೇ ರೂಪಿಸಿಕೊಂಡ ವ್ಯವಸ್ಥೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಗೊಂದಲವಿಲ್ಲದೇ ನೀರು ನಿರ್ವಹಣೆ ಮಾಡುವುದು ಕಂಡಾಗ ಅಚ್ಚರಿಯಾಗದೇ ಇರದು. ದೇಸಿ ಜ್ಞಾನದ ಬಗೆಗೆ ಅವ್ಯಕ್ತ ಹೆಮ್ಮೆಯೂ ಮೂಡುತ್ತದೆ. ಇಂಥ ಅದೆಷ್ಟೋ ಗ್ರಾಮೀಣ ನೆಲಮೂಲದ ಜ್ಞಾನದ ಜಾಗವನ್ನು ತಾಂತ್ರಿಕತೆಯ ಹೆಸರಿನ ಅವೈಜ್ಞಾನಿಕ ಮಾನದಂಡಗಳು ಆಕ್ರಮಿಸಿಕೊಂಡಿವೆ. ಅತ್ತ ದೇಸಿ ಜ್ಞಾನವೂ ಹೊಸ ತಲೆಮಾರಿಗೆ ಉಳಿದಿಲ್ಲ, ಇತ್ತ ಆಧುನಿಕ ಜ್ಞಾನವೂ ಸುಸ್ಥಿರವಾಗಿಲ್ಲ ಎಂಬುದು ಪರಿಸ್ಥಿತಿಯ ದುರಂತ.
‘ಲಾಸ್ಟ್’ಡ್ರಾಪ್: ಭಾರತದ ನೀರಭೀಷ್ಮ ಅನುಪಮ ಮಿಶ್ರಾ ಈ ಹಿನ್ನೆಲೆಯಲ್ಲೇ ಹೇಳಿದ ಮಾತೊಂದನ್ನು ನೆನಪಿಸಿಕೊಳ್ಳಲೇ ಬೇಕು. ಬೋರ್‌ವೆಲ್‌ಗಳು ಸದಾಕಾಲ ಶುದ್ಧ, ಸುರಕ್ಷಿತ ನೀರು ಕೊಡುವುದಿದ್ದರೆ ಖಂಡಿತಾ ಅದನ್ನು ವೈಜ್ಞಾನಿಕ, ಆಧುನಿಕ ಸೌಲಭ್ಯವೆಂದು ಒಪ್ಪಿಕೊಳ್ಳುತ್ತೇನೆ. ಎಂಥ ಮಾರ್ಮಿಕ ಮಾತು.

No comments: