Wednesday, September 10, 2008

ನೀರಿನ ಆಗರ : ಬಿಡಿ ಈಗಲಾದರೂ ಅನಾದರ

ತಲಪರಿಗೆಗಳ ಬಗ್ಗೆ ಬರೆದಷ್ಟೂ ಇದೆ. ಹೇಳಿ, ಕೇಳಿ ಅದು ಮೊಗೆದಷ್ಟೂ ನೀರುಣಿಸುವ ಆಗರ. ವಿಷಯ, ವಿಸ್ಮಯಗಳ ವಿಚಾರದಲ್ಲೂ ಇದೇ ಅನ್ವಯ. ಹೆಸರು ಕೇಳುತ್ತಿದ್ದಂತೆ ಒಂದು ರೀತಿಯ ಮೆಸ್ಮರಿಸಂಗೆ ಒಳಪಡಿಸುವಂಥದ್ದು. ತಳದಿಂದ ಹುಟ್ಟುವ ನೀರಾದ್ದರಿಂದ ಅದನ್ನು ತಳ-ಪುರಿಗೆ ಎಂದು ಗುರುತಿಸಿದ್ದಿರಬೇಕು.
ಇದಂತಲೇ ಅಲ್ಲ, ಯಾವುದೇ ದೇಸಿ ಜ್ಞಾನಗಳನ್ನು ತೆಗೆದುಕೊಂಡರೂ ಅದು ಬಹುತ್ವದ ನೆಲೆಯಲ್ಲಿಯೇ ವಿಕಾಸಗೊಂಡಿರುತ್ತದೆ. ವೈವಿಧ್ಯವೇ ಅದರ ಮೂಲಗುಣ. ಆಯಾ ಪ್ರದೇಶದ ಮಣ್ಣಿನ ಗುಣ, ಮಳೆಯ ಸರಾಸರಿಯನ್ನಾಧರಿಸಿ ಬೆಳೆದು ಬಂದಿರುವ ಹತ್ತು ಹಲವು ಪಾರಂಜವ್ಯ (ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ)ಗಳು ಇಂದಿನ ಬಾಟಲಿ ನೀರೆಂಬ ಎಕಮುಖಿ ಸಂಸ್ಕೃತಿಯ ದಾಳಿಯಲ್ಲಿ ವಿಸ್ಮೃತಿಗೆ ಸರಿದಿವೆ.
ನೀರಿನ ವಿಚಾರದಲ್ಲಿ ನಾವಿಂದು ಎಂಥ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ ಎಂದರೆ ಬಾಯಾರಿ ಬಸವಳಿದಿದ್ದರೂ, ಕಣ್ಣೆದುರೇ ಜಲ ರಾಶಿಯಿದ್ದರೂ ಅದನ್ನು ಕುಡಿಯುವ ಧೈರ್ಯ ಮಾಡಲಾರೆವು. ನೀರಿನ ಪರಿಶುದ್ಧತೆಯ ಬಗೆಗೆ ಈ ಪರಿಯ ಶಂಕೆ ನಮ್ಮನ್ನು ಕಾಡುತ್ತಿದೆ. ಇದರ ಪರಿಣಾಮ ಮನೆಯಿಂದ ಹೊರ ಹೊರಟರೆ ಮಣ ಭಾರದ ನೀರಿನ ಬಾಟಲಿಗಳನ್ನು ಹೊತ್ತೊಯ್ಯಲೇ ಬೇಕಾದ ದುರದೃಷ್ಟಕರ ಪರಿಸ್ಥಿತಿಗೆ ಒಳಗಾಗಿದ್ದೇವೆ. ನೀರಿನ ಬಾಟಲಿಗಳೆಂದರೆ ಇಂದಿನ ಜನರ ‘ಬಗಲ ಬಾವು’ ಎಂಬಂತಾಗಿದೆ. ಏಕೆಂದರೆ ನೀರು ನಮಗೆ ಈಗ ದರ್ದು ಆಗಿ ಉಳಿದಿಲ್ಲ, ಬದಲಾಗಿ ಅದೊಂದು ಮಾರಾಟದ ಸರಕಾಗಿದೆ. ಇಂಥ ಪರಿಸ್ಥಿತಿಯ ಲಾಭವನ್ನು ವ್ಯಾಪಾರಿ ಮನೋಭಾವ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ.
ನಾಗರಿಕತೆಗಳು ಹುಟ್ಟಿದುದೇ ಜಲಸ್ಥಾನಗಳಲ್ಲಿ ಎಂಬುದನ್ನು ಇಂದಿಗೂ ನಾವು ಮಾನವೇತಿಹಾಸದ ಭಾಗವಾಗಿ ಓದುತ್ತಿದ್ದೇವೆ. ಮತ್ತೆ ಅವನ್ನು ಮರೆಯುತ್ತಲೂ ಇದ್ದೇವೆ. ಹಳ್ಳದ ದಂಡೆಯಲ್ಲಿ ಹಳ್ಳಿ, ನದಿ ದಂಡೆಯಲ್ಲಿ ನಗರಗಳು ಬೆಳೆಯುತ್ತಿದ್ದವು ಎಂಬುದು ಸಹಜ ಸಂಗತಿ. ಆದರೆ ಅಂಥ ನಾಗರೀಕತೆಯೇ ಇಂದು ಜಲಮೂಲಕ್ಕೆ, ತಲಪರಿಗೆಯಂಥ ಪಾರಂಜವ್ಯಗಳಿಗೆ ಎರವಾಗುತ್ತಿವೆ ಎಂಬುದು ವ್ಯವಸ್ಥೆಯ ದುರಂತ.
ಪಾರಂಜವ್ಯವೆಂದರೆ ಅವು ಶಾಶ್ವತ ನೀರಿನ ಆಗರ. ಕಾಲಭೇದವಿಲ್ಲದೇ ನಾಗರಿಕತೆಯ ತೃಷೆಯನ್ನು ತಣಿಸಿದ್ದಂಥವು. ಆದರೆ ಇಂದಿನ ನೀರು ಪೂರೈಕೆ ವ್ಯವಸ್ಥೆ ಹಾಗೂ ಸಾಧನಗಳೆರಡೂ ಯಾವತ್ತಿಗೂ ನಮ್ಮಲ್ಲಿ ಭರವಸೆಯನ್ನು ಉಳಿಸಿಯೇ ಇಲ್ಲ. ಹಾಗಿದ್ದರೂ ಅಂಥ ಆಧುನಿಕ ವ್ಯವಸ್ಥೆಗಳ ಮೋಹದಿಂದ ನಾವು ಹೊರಬರುತ್ತಿಲ್ಲ. ತಲಪರಿಗೆಗಳಂಥವುಗಳನ್ನು ಉಳಿಸಿಕೊಳ್ಳಲೇಬೇಕೆಂಬ ಪ್ರಜ್ಞಾವಂತಿಕೆಗೆ ಮರಳಿಲ್ಲ.
ಅಂಥದ್ದರ ನಡುವೆಯೂ ಅಲ್ಲೊಂದು, ಇಲ್ಲೊಂದು ಪಾರಂಜವ್ಯಗಳು ಉದಾಹರಣೆಗಾದರೂ ಉಳಿದಿರುವುದು ಸಮಾಧಾನದ ಸಂಗತಿ. ಕಟ್ಟ, ಕಪಿಲೆ, ಏತ, ಮದಕ, ಕೆರೆ, ಕಟ್ಟೆ , ಗೋಕಟ್ಟೆ, ಕುಂಟೆ, ಬೆಂಚೆ, ಮೆಂಚೆ ಹೀಗೆ ಪಟ್ಟಿ ಮಾಡುತ್ತ ಹೋದರೆ ಪಾರಂಜವ್ಯಗಳ ಸರಣಿಯೇ ನಮ್ಮೆದುರು ತೆರೆದುಕೊಳ್ಳುತ್ತವೆ. ಅವೆಲ್ಲದರ ಕೇಂದ್ರ ಸಮುದಾಯ ಆಗಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿ. ಸಹಭಾಗಿತ್ವ ಇವುಗಳ ಮುಖ್ಯ ಲಕ್ಷಣ. ಯಾರೋ ಒಬ್ಬರಿಂದ, ಒಬ್ಬರಿಗಾಗಿ- ವ್ಯಕ್ತಿ ಕೇಂದ್ರತ ವ್ಯವಸ್ಥೆಯಾಗಿ ಅವು ಅಸ್ತಿತ್ವ ಪಡೆದವುಗಳಲ್ಲ. ಸುತ್ತಲಿನ ಹತ್ತು ಹಲವು ಕುಟುಂಬಗಳ ಬದುಕಿನ ಆಧಾರವಾಗಿ, ಜೀವನದ ಮೂಲ ಸ್ರೋತವಾಗಿ ನಿಂತ ಮಂತ ಪರಿಕಲ್ಪನೆ ಅವುಗಳ ಹಿಂದಿವೆ. ಅವುಗಳ ನಿರ್ಮಾಣ ಹಾಗೂ ಸಂರಕ್ಷಣೆಗಳೆರಡೂ ಸಮುದಾಯದ ಒಕ್ಕಟ್ಟಿನಲ್ಲೇ ಆಗುತ್ತಿದ್ದವು.
ಮತ್ತೊಂದು ವಿಶೇಷ ಸಂಗತಿಯೆಂದರೆ ಇವೆಲ್ಲವೂ ಮಾನವ ಶ್ರಮದಿಂದಲೇ ಅಸ್ತಿತ್ವ ಪಡೆದಂಥವು. ಯಾವುದೇ ಯಂತ್ರ ಶಕ್ತಿಯ ಕ್ಷಣದ ಅವಾಂತರವಲ್ಲ. ಹೀಗಾಗಿ ನಿರ್ದಿಷ್ಟ ಮಿತಿಯೊಳಗೆ ಅಪಾಯ ರಹಿತವಾಗಿ ರಚನೆಗೊಳ್ಳುತ್ತವೆ. ಮಾತ್ರವಲ್ಲ, ಶಾಶ್ವತ ಫಲ ಕೊಡುತ್ತವೆ. ತಲಪರಿಗೆಗಳನ್ನೇ ತೆಗೆದುಕೊಂಡರೆ ಅವು ಭೀಕರ ಬರಗಾಲದ ಸಂದರ್ಭದಲ್ಲೂ ನೀರು ಪೂರೈಸುತ್ತಿದ್ದವು. ತುಮಕೂರು ಜಿಲ್ಲೆಯೆಂದರೆ ಅದು ನಿಶ್ಚಿತ ಮಳೆ ಸರಾಸರಿಯನ್ನೂ ಹೊಂದಿರದ, ಯಾವುದೇ ನದಿ ಇಲ್ಲದ ಜಿಲ್ಲೆ. ಆದರೂ ತಲಪರಿಗೆಗಳು ಸುಸ್ಥಿತಿಯಲ್ಲಿರುವವರೆಗೆ ಯಾವತ್ತೂ ನೀರಿನ ಕೊರತೆ ಆ ಜಿಲ್ಲೆಯನ್ನು ಬಾಸಿರಲಿಲ್ಲ.
ತಲಪರಿಗೆಯ ನಿರ್ವಹಣೆಗೆಂದೇ ಗ್ರಾಮಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು ಎನ್ನುತ್ತಾರೆ ಮಧುಗಿರಿಯಲ್ಲಿ ತಲಪರಿಗೆಯೊಂದನ್ನು ಕಾಪಿಟ್ಟುಕೊಂಡು ಬಂದಿರುವ ಬಂಡೆ ರಾಜು. ಅವರಿಗೆ ಇದು ತಲೆತಲಾಂತರದಿಂದ ಬಂದ ಹೊಣೆಯಂತೆ. ಅತ್ಯುತ್ತಮ ರೀತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ರಾಜು. ಕೆರೆಯ ಮಧ್ಯದಲ್ಲಿರುವ ಈ ತಲಪರಿಗೆಯಿಂದ ಕಾಲುವೆಯ ಮೂಲಕ ನೀರನ್ನು ಹರಿಸಿಕೊಂಡು ಹೋಗಿ ಜಮೀನಿಗೆ ಒದಗಿಸಲಾಗುತ್ತದೆ. ಇಂದಿಗೂ ಸರಿ ಸುಮಾರು ೩೦ ಎಕರೆಯಷ್ಟು ಪ್ರದೇಶಕ್ಕೆ ನೀರಾವರಿ ಆಗುತ್ತಿದೆ.
ಇಂಥ ತಲಪರಿಗೆಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲೊಂದರಂತೆ ಇದ್ದವು ಎನ್ನುತ್ತಾರೆ ರಾಜು. ಇದನ್ನೇ ಪುಷ್ಟೀಕರಿಸುವ ಭೂಗರ್ಭ ಶಾಸ್ತ್ರಜ್ಞ ಜಯರಾಮ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಂಡುಬರುವ ವಿಶಿಷ್ಟ ರೂಪಾಂತರ ಶಿಲೆಗಳನ್ನೊಳಗೊಂಡ ಬೆಟ್ಟ ಸಾಲುಗಳಿರುವೆಡೆಯಲ್ಲೆಲ್ಲ ತಲಪರಿಗೆಗಳಿದ್ದವು. ಆಂಧ್ರದ ರಾಯಲ ಸೀಮೆಯಿಂದಾರಂಭಿಸಿ ಮಧುಗಿರಿ, ಕೊರಟಗೆರೆ, ತುಮಕೂರು, ಶಿವಗಂಗೆ, ರಾಮನಗರ ಹೀಗೆಯೇ ಮುಂದುವರಿದು ಕೋಲಾರ ಚಿಂತಾಮಣಿಯನ್ನು ದಾಟಿ, ನೀಲಗಿರಿ ಬೆಟ್ಟ ಸಾಲಿನವರೆಗೂ ಇಂಥ ಶಿಲೆಗಳು ಕಾಣಸಿಗುತ್ತವೆ. ಸರಿ ಸುಮಾರು ಇನ್ನೂರು ವರ್ಷಗಳ ಹಿಂದೆ ಬೆಟ್ಟಗಳ ಸಾಲು ಒಡೆದು ಇಂಥ ಶಿಲಾಪದರ ನಿರ್ಮಾಣವಾಗಿದೆ. ನೆಲದಾಳಕ್ಕೆ ಸುಮಾರು ೫೦ರಿಂದ ೬೦ ಮೀಟರ್ ಆಳದಲ್ಲಿ ಬಂಡೆಗಳಲ್ಲಿ ನಿರ್ಮಾಣವಾಗಿರುವ ೨ ಮೀಟರ್ ಅಗಲದ ಬಿರುಕುಗಳೇ ತಲಪರಿಗೆಗಳು ಉದ್ಭವಿಸಲು ಕಾರಣ ಎಂಬುದು ಜಯರಾಮ್ ಅಭಿಮತ.
ಮಳೆಗಾಲದಲ್ಲಿ ಬೆಟ್ಟಗಳ ಮೇಲೆ ಬಿದ್ದು ಹರಿದುಹೋಗುವ ನೀರು ಒಂದಷ್ಟು ಬಂಡೆಗಳ ಪದರಗಳಲ್ಲಿ ಒಳ ನುಗ್ಗುತ್ತದೆ. ಆಳಕ್ಕೆ ಹೋದಂತೆಲ್ಲ ಶಿಲಾಪದರಗಳಲ್ಲಿನ ಮಿಲಿಯಾಂತರ ರಂಧ್ರಗಳಲ್ಲಿ ನುಸುಳಿ ಒಂದು ನಿರ್ದಿಷ್ಟ ಕೇಂದ್ರದಲ್ಲಿ ಸಂತೃಪ್ತ ( ಸ್ಯಾಚುರೇಶನ್) ಸ್ಥಿತಿ ತಲುಪುತ್ತದೆ. ಅಲ್ಲಿ ಭೂಮಿಯ ಪದರಗಳಲ್ಲಿನ ಒತ್ತಡ ತಾಳಲಾರದೇ ದುರ್ಬಲ ಸ್ಥಳದಲ್ಲಿ ನೆಲದಾಳದಿಂದ ಮೇಲಕ್ಕೆ ಉಕ್ಕುತ್ತದೆ. ಅದರ ಸುತ್ತ ಗುಂಡಿ ತೋಡಿಕೊಂಡು ನೀರಿನ ಬಳಕೆಗೆ ಅನುಕೂಲವಾಗುವಂಥ ನಿರ್ಮಾಣಗಳನ್ನು ಮಾಡಿಕೊಳ್ಳಲಾಗುತ್ತದೆ. ಅವೇ ತಲಪರಿಗೆಗಳು ಎಂಬುದು ಜಯರಾಮ್ ವ್ಯಾಖ್ಯಾನ.
ಇಂದು ಜಲಪಾತಳಿ, ಮಳೆ ಸರಾಸರಿ ಎಲ್ಲವೂ ಕುಸಿದಿವೆ. ಸಾಲದ್ದಕ್ಕೆ ಬೋರ್‌ವೆಲ್‌ಗಳ ಸಂಖ್ಯೆ ವೃದ್ಧಿಸಿದೆ. ನಿರ್ವಹಣೆಯ ಶಿಸ್ತೂ ಜನರಲ್ಲಿ ಉಳಿದಿಲ್ಲ. ಇವೆಲ್ಲದರ ಪರಿಣಾಮ ತಲಪರಿಗೆಗಳು ಕಾಣೆಯಾಗುತ್ತಿವೆ ಎನ್ನುತ್ತಾರೆ. ಅವರು. ಹೀಗೆ ಅನಾಯಾಸವಾಗಿ ಸೋಸಿ ಸಿಗುತ್ತಿದ್ದ ಶುದ್ಧನೀರನ್ನು ಬಿಟ್ಟು ಫ್ಲೋರೈಡ್ ಕಕ್ಕುವ ಬೋರ್‌ವೆಲ್‌ಗಳ ಮೊರೆ ಹೋಗಿರುವುದು ಎಷ್ಟು ಸರಿ ? ವಿವೇಚನೆಗೆ ಇದು ಸಕಾಲ.
ÇÝÓ…r "vÝű…': ಶಿವಗಂಗೆ ಬೆಟ್ಟದಲ್ಲಿ ಇರುವ ಅಪರೂಪದ, ವಿಸ್ಮಯ ಹುಟ್ಟಿಸುವ ಒಳಕಲ್ಲು ತೀರ್ಥ ಸಹ ಅತ್ಯುತ್ತಮ ತಲಪರಿಗೆಗಳಲ್ಲಿ ಒಂದು.

No comments: