Wednesday, September 10, 2008

ಕೆರೆ ತುಂಬ ನೀರು, ಗಂಗೆಗಿಷ್ಟು ಖೀರು!



ಆ ಸಡಗರಕ್ಕೆ ಸಾಟಿಯೇ ಇಲ್ಲ. ಕೆರೆ ತುಂಬಿತೆಂದರೆ ಅದು ಎಲ್ಲ ಸಂಭ್ರಮಕ್ಕಿಂತ ಮಿಗಿಲು. ಅಲ್ಲೊಂದು ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಗ್ರಾಮ ಕರ್ನಾಟಕದಲ್ಲಿ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ತೆರನಾದ ಆಚರಣೆಗಳು. ಅಂಥ ಆಚರಣೆಗಳಲ್ಲಿನ ವೈವಿಧ್ಯಗಳಲ್ಲಿ ಗಂಗೆ ಪೂಜೆಯೂ ಒಂದು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅದರಲ್ಲೂ ಮೈಸೂರು ಕರ್ನಾಟಕ ಭಾಗದಲ್ಲಿ ಶ್ರಾವಣದಲ್ಲಿ ಗಂಗೆ ಪೂಜೆ ನೆರವೇರುತ್ತದೆ. ಹಳ್ಳಿಗರು ಸ್ಥಳೀಯವಾಗಿ ಅವರದೇ ಆದ ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಕೆರೆ ದಂಡೆಯಲ್ಲಿ ಹಸಿರು ಚಪ್ಪರ ಹಾಕಿ. ಊರವರೆಲ್ಲ ಅಲ್ಲಿ ಸೇರಿ ಹಬ್ಬಾಚರಣೆ ಮಾಡುವುದು ಅದರ ಪ್ರಮುಖ ಅಂಗ. ಸಮೃದ್ಧ ಮಳೆಯಾಗಿ ಕೆರ ತುಂಬಿ ಕೋಡಿ ಬಿದ್ದ ಬಳಿಕ ಪುರೋಹಿತರ ಬಳಿ ಗಮಕಾರ ಊರಿನ ಗೌಡರ ಜತೆಗೂಡಿ ಮುಹೂರ್ತ ಕೇಳಲು ಹೋಗುತ್ತಾನೆ. ಅದೇ ವಾರದಲ್ಲಿ ಪ್ರಶಸ್ತ ದಿನವೊಂದನ್ನು ಪುರೋಹಿತರು ಸೂಚಿಸುತ್ತಾರೆ. ಅಂದು ಗಂಗೆ ಪೂಜೆ ನೆರವೇರಿಸುವುದು ನಿಕ್ಕಿಯಾದ ಮೇಲೆ ಗಮಕಾರ ಊರಿನ ತುಂಬೆಲ್ಲ ತಮಟೆ ಸಾರಿಸುತ್ತಾನೆ. ಊರೊಟ್ಟಿನ ಕೆಲಸಕ್ಕೆ ಬಂದು ಸೇರಿದ್ದವರೆಲ್ಲರ ಮನೆಗೆ ಹಸಗೆ ಹೋಗುತ್ತದೆ.
ಈ ಕೆರೆ ಹಬ್ಬದಲ್ಲಿ ತೋಟಿ, ತಳವಾರ, ನೀರಗಂಟಿ ಹಾಗೂ ಗಮಕಾರರಿಗೆ ಹೆಚ್ಚಿನ ಪ್ರಾಶಸ್ತ್ಯ. ಗಮಕಾರನೇ ಮುಂದೆ ನಿಂತು ಎಲ್ಲವನ್ನೂ ನೆರವೇರಿಸಬೇಕು. ಗಂಗೆ ಪೂಜೆಯಲ್ಲಿ ಆತನದ್ದೇ ಪಾರುಪತ್ಯ. ವರ್ಷವಿಡೀ ಕೆರಯನ್ನು ಕಣ್ಣಲ್ಲಿ ಕಣ್ಣಿಟ್ಟು ತಳವಾರ ಕಾದಿರುತ್ತಾನೆ. ತೋಟಿ ಕೆರೆಯ ಉಸ್ತುವಾರಿ ನೋಡಿಕೊಂಡಿರುತ್ತಾನೆ. ನೀರಗಂಟಿ ಊರಿನ ಜಮೀನಿಗೆ ಸಮನಾಗಿ ನೀರ ಹಂಚಿಕೆ ಮಾಡಿರುತ್ತಾನೆ. ಗಮಕಾರರು ಜಲಮೂಲದ ನಿರ್ವಹಣೆಯ ಹೊಣೆ ನಿಭಾಯಿಸಿರುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಕೂಡಿ ಊರಿಗೆ ನೀರಿನ ಕೊರತೆ ಬಾಸದಂತೆ ಎಚ್ಚರವಹಿಸಿರುತ್ತಾರೆ. ಅಂಥವರಿಗೊಂದು ಕೃತಜ್ಞತಾ ಸಮರ್ಪಣೆಯ ಕಾರ್ಯ ಗಂಗೆ ಪೂಜೆಯ ಸಂದರ್ಭದಲ್ಲಿ ನೆರವೇರುತ್ತದೆ.
ತೋಟಿ, ತಳವಾರ, ನೀರಗಂಟಿ ಹೀಗೆ ಕೆರೆಗೆ ಸಂಬಂಸಿದ ಸಿಬ್ಬಂದಿಯನ್ನು ಅವರ ಕುಟುಂಬವನ್ನು ಇಡೀ ಊರವರು ಸೇರಿ ಸಾಕುತ್ತಾರೆ. ಅವರಿಗೆ ಜೀವನಾಧಾರವಾಗಿ ಬೇರೆ ಜಮೀನಾಗಲೀ, ವೃತ್ತಿಯಾಗಲೀ ಇರುವುದಿಲ್ಲ. ಕೆರೆ ತುಂಬಿದ ದಿನದಿಂದಲೇ ಅವರ ವರ್ಷದ ಕಸುಬು ಆರಂಭವಾಗುತ್ತದೆ. ಪ್ರತಿದಿನ ಮಧ್ಯಾಹ್ನ ಗಮಕಾರರ ಮನೆಯಿಂದಲೇ ಅವರಿಗೆ ಊಟ ಕಳುಹಿಸಿಕೊಡಲಾಗುತ್ತದೆ. ಕೆಲವೆಡೆ ಇಡೀ ಊರವರೂ ಒಂದೊಂದು ದಿನ ಒಬ್ಬೊಬ್ಬರ ಮನೆಯಂತೆ ಪಾಳಿಯ ಮೇಲೆ ಊಟ ಕಳುಹಿಸಿಕೊಡುವುದೂ ಉಂಟು. ಇದಲ್ಲದೇ ವರ್ಷದ ಜೀವನ ನಿರ್ವಹಣೆಗೆ ಜಮೀನು ಮಾಲಿಕರು ಕಾಳು ಕಡ್ಡಿ ಕೊಡುವ ಪದ್ಧತಿಯೂ ಇದೆ. ಸಾಮಾನ್ಯವಾಗಿ ಎಕರೆಯೊಂದಕ್ಕೆ ಒಂದು ಹೊರೆ ಹುಲ್ಲು, ಎರಡು ಮೊರದಷ್ಟು ಕಾಳು ಕೊಡುವುದು ರೂಢಿ. ಇನ್ನು ಊರಿನ ಯಾವುದೇ ಮನೆಯಲ್ಲಿ ಮದುವೆ ಮುಂಜಿಯಂಥ ಶುಭ ಕಾರ್ಯ ನಡೆದಾಗ ಆಯಾ ಮನೆಯಿಂದ ಕುಟುಂಬದ ಸದಸ್ಯರಿಗೆ ತಂದಂತೆ ಕೆರೆಗೆ ಸಂಬಂಸಿದ ತೋಟಿ, ತಳವಾರ ಇತ್ಯಾದಿಯವರಿಗೂ ಹೊಸಬಟ್ಟೆ ತರುತ್ತಾರೆ. ಪ್ರತಿಯೊಬ್ಬರೂ ಅತ್ಯಂತ ಅಕ್ಕರೆಯಿಂದ ಇವರನ್ನು ತಮ್ಮ ಕುಟುಂಬ ಸದಸ್ಯರಂತೆಯೇ ಕಾಣುವುದು ವಿಶೇಷ.
ಇನ್ನು ಗಂಗೆ ಪೂಜೆಯ ದಿನದಲ್ಲಂತೂ ಇವರಿಗೆ ವಿಶೇಷ ಸಮ್ಮಾನ. ಊರವರೆಲ್ಲ ಸೇರಿ ಕಾಣಿಕೆ, ಸಿಹಿತಿಂಡಿ, ಹೊಸ ಬಟ್ಟೆಗಳನ್ನು ನೀಡಿ ಆದರಿಸುತ್ತಾರೆ. ಆ ದಿನ ಬೆಳಗ್ಗೆ ಬೇಗನೆದ್ದು ಊರಿಗೆ ಊರೇ ಸಂಭ್ರಮಕ್ಕೆ ಅಣಿಯಾಗುತ್ತದೆ. ಸಂಬಂಕರು, ನೆಂಟರಿಷ್ಟರು, ಸ್ನೇಹಿತರು, ಬೇರೆಯೂರಿಗೆ ಮದುವೆಯಾಗಿ ಹೋದ ಹೆಣ್ಣುಮಕ್ಕಳು ಹೀಗೆ ಎಲ್ಲರನ್ನೂ ಕೆರೆ ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಕೆರೆಯ ದಂಡೆಗೆ ಎಲ್ಲರೂ ಹೊಸ ಬಟ್ಟೆಯುಟ್ಟು ಬಂದು ಸೇರುತ್ತಾರೆ. ಊರ ಮುಂದಿನ ಗಂಗಮ್ಮನ ಗುಡಿಯಿಂದ ದೇವರ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕೆರೆಗೆ ತರಲಾಗುತ್ತದೆ. ಅಲ್ಲಿ ತೂಬಿನ ಕಟ್ಟೆಯ ಮೇಲೆ ಅದನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆರೆ ದಂಡೆಯುದ್ದಕ್ಕೂ ಹಸಿರು ಚಪ್ಪರದಲ್ಲಿ ಊರವರು ಬಂದು ನೆರೆಯುತ್ತಿದ್ದಂತೆಯೇ ಪುರೋ ಹಿತರು ವೇದಘೋಷಗಳೊಂದಿಗೆ ಪೂಜೆ ಆರಂಭಿಸುತ್ತಾರೆ. ಊರ ಗೌಡರು ಹಾಗೂ ವಿಶೇಷವಾಗಿ ಗಮಕಾರ ದಂಪತಿ ಗಂಗೆಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಗಂಗೆಗೆ ಮೊದಲ ಬಾಗಿನವನ್ನು ಈ ಎರಡೂ ಕುಟುಂಬದವರು ಅರ್ಪಿಸುತ್ತಾರೆ. ನಂತರದ ಸರದಿ ಊರಿನವರದ್ದು. ಒಬ್ಬೊಬ್ಬರಾಗಿ ಬಂದು ಅರಿಷಿಣ, ಕುಂಕುಮ, ಬಳೆ, ಹೂವು ಇತ್ಯಾದಿಗಳನ್ನೊಳಗೊಂಡ ಬಾಗಿನವನ್ನು ಭಕ್ತಿ ಪೂರ್ವಕವಾಗಿ ಕೆರೆಗೆ ಅರ್ಪಿಸುತ್ತಾರೆ.
ಇಷ್ಟೆಲ್ಲ ಮುಗಿಯುವ ವೇಳೆಗೆ ಹೊತ್ತು ನೆತ್ತಿಯ ಮೇಲೆ ಬಂದಿರುತ್ತದೆ. ಚಪ್ಪರದಡಿಯಲ್ಲಿ ಊರವರೆಲ್ಲ ಸೇರಿ ತಯಾರಿಸಿದ ಅಡುಗೆಯ ಪರಿಮಳ ಪಸರಿಸುತ್ತಿರುತ್ತದೆ. ವಿವಿಧ ಬಗೆಯ ಭಕ್ಷ್ಯಗಳು ಬಾಯಲ್ಲಿ ನೀರೂರಿಸುತ್ತಿರುತ್ತವೆ. ಗಂಗಮ್ಮನಿಗೆ ನೈವೇದ್ಯ ಆಗುತ್ತಿದ್ದಂತೆ ಸಾರ್ವಜನಿಕ ಸಂತರ್ಪಣೆ. ಯಾರೊಬ್ಬರೂ ಊಟವಿಲ್ಲದೇ ಹೋಗುವಂತೆಯೇ ಇಲ್ಲ. ಸಂಜೆಯವರೆಗೂ ಅನ್ನ ಸಂತರ್ಪಣೆ ಮುಂದುವರಿಯುತ್ತದೆ. ನಂತರ ಕೆರೆ ದಂಡೆಯಲ್ಲೇ ವಿವಿಧ ಆಟೋಟ ಸ್ಪರ್ಧೆ. ಹೆಂಗಸರು ಮಕ್ಕಳ ಭೇದವಿಲ್ಲದಂತೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇಷ್ಟೆಲ್ಲ ಮುಗಿಯುವಾಗ ಹೊತ್ತು ಕಂತಲಾರಂಭಿಸಿರುತ್ತದೆ. ಮತ್ತೆ ಮೆರವಣಿಗೆಗೆ ಸಜ್ಜು. ಬೆಳಗ್ಗೆ ತಂದು ಕೆರೆ ತೂಬಿನ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಗಂಗಮ್ಮನ ಮೂರ್ತಿಯನ್ನು ಅಷ್ಟೇ ಸಂಭ್ರಮದಲ್ಲಿ ಮತ್ತೆ ಗುಡಿಗೆ ಕೊಂಡೊಯ್ದು ಇಟ್ಟು ವರ್ಷವೆಲ್ಲ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿ, ಪ್ರಸಾದ ಪಡೆದು ಎಲ್ಲರೂ ಮನೆಗಳಿಗೆ ಹಿಂತಿರುಗುತ್ತಾರೆ.
ಇದು ಕೆರೆಯ ಅಂಗಳದಲ್ಲೇ ನಡೆಯುವ ಪೂಜಾ ಕ್ರಮವಾದರೆ ಇನ್ನು ಕೆಲವೆಡೆ ಊರವರೆಲ್ಲ ಸೇರಿ ಸಮೀಪದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಕ್ರಮವೂ ಇದೆ. ಮಳೆಗಾಲ ಆರಂಭವಾಗುತ್ತಿದೆ ಎನ್ನುವಾಗಲೇ ಊರ ಪ್ರಮುಖರೆಲ್ಲ ದೇವರ ಸನ್ನಿಗೆ ತೆರಳಿ ಹೂವು ಕೇಳುವ ಪದ್ಧತಿ ವಿಶೇಷವಾದ್ದು. ಅದರಲ್ಲೂ ಮಳೆ ಸರಿಯಾಗಿ ಆಗದೇ, ಬರದ ಸೂಚನೆ ಇರುವಾಗ ದೇವರಲ್ಲಿ ಹೂವು ಕೇಳುವುದಕ್ಕೆ ಅತ್ಯಂತ ಹೆಚ್ಚಿನ ಮಹತ್ವ. ಇಲ್ಲೂ ಸಹ ಊರ ಪ್ರಮುಖರು ಸೇರಿ ವಿಚಾರ ವಿಮರ್ಶೆ ನಡೆಸುತ್ತಾರೆ. ಪುರೋಹಿತರನ್ನು ಕೇಳಿ ಉತ್ತಮ ದಿನವೊಂದನ್ನು ಗುರುತಿಸಿಕೊಳ್ಳುತ್ತಾರೆ. ಅಂದು ಗೌಡರ ಮುಂದಾಳತ್ವದಲ್ಲಿ ಗಮಕಾರ ಮತ್ತಿತರರು ದೇವರ ಸನ್ನಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆನಂತರ ಮಹಾ ಮಂಗಳಾರತಿಯಾಗುತ್ತಿದ್ದಂತೆ ಮಳೆ, ಬೆಳೆಯ ಬಗ್ಗೆ ದೇವರಲ್ಲಿ ಪ್ರಾರ್ಥನೆ ಸಲ್ಲಸಿ, ಪ್ರಶ್ನೆಯನ್ನಿಡುತ್ತಾರೆ. ಹೂವು ಕೇಳುವುದು ಅಂದರೆ ಇದೇ. ಪೂಜೆಯಿಂದ ಸಂಪ್ರೀತನಾಗಿ ದೇವರು ಪ್ರಸಾದದ ಹೂವನ್ನು ಬೀಳಿಸಿದರೆ ಆ ವರ್ಷ ಮಳೆ ಬೆಳೆ ಸರಿಯಾಗಿ ಆಗುತ್ತದೆ ಎಂಬುದು ನಂಬುಗೆ. ಒಂದೊಮ್ಮೆ ಹೂವು ಬೀಳದಿದ್ದರೆ ಮಳೆ ಬರಲಿಕ್ಕಿಲ್ಲ, ಕೆರೆ ತುಂಬುವುದಿಲ್ಲ. ಎಂದು ಭಾವಿಸುತ್ತಾರೆ. ಅಂಥ ಸಂದರ್ಭದಲ್ಲೇ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯಲ್ಲಿ ಉಳಿದ ನೀರನ್ನು ಎಚ್ಚರಿಕೆಯಿಂದ ಬಳಸುವ ಸೂತ್ರವನ್ನು ಗಮಕಾರರು ಸಿದ್ಧಪಡಿಸುತ್ತಾರೆ.
ಹೆಚ್ಚು ನೀರು ಬೇಡದ ಬೆಳೆಯನ್ನು ಬೆಳೆಯಬೇಕೆಂದು ಆ ವರ್ಷ ಫರ್ಮಾನು ಹೊರಡಿಸಲಾಗುತ್ತದೆ. ಜತೆಗೆ ಇದ್ದ ಎಲ್ಲ ಜಮೀನಿನಲ್ಲೂ ಬೆಳೆ ಬೆಳೆಯುವಂತಿಲ್ಲ. ಜಮೀನಿನ ಪ್ರಮಾಣ ಕ್ಕನುಗುಣವಾಗಿ ಬೆಳೆ ನಿಗದಿಯಾಗುತ್ತದೆ. ಇದನ್ನು ಮೀರಿ ಬೆಳೆ ಬೆಳೆದರೆ ಅದಕ್ಕೆ ಕೆರೆಯಿಂದ ನೀರು ಒದಗಿಸಲಾಗುವುದಿಲ್ಲ. ಮಾತ್ರವಲ್ಲ ದಂಡ ವಿಸಲಾಗುತ್ತದೆ. ಕೆರೆ ಕೆಲಸಕ್ಕೆ ಬರದ, ನಿಯಮ ಉಲ್ಲಂಘಿಸಿದ ಮನೆಯವರು ಹೀಗೆ ಕಟ್ಟುವ ದಂಡದ ಹಣವನ್ನು ಉಳಿಯಾಳು ದುಡ್ಡು ಎಂದು ಪ್ರತ್ಯೇಕವಾಗಿ ತೆಗೆದಿಟ್ಟುಕೊಂಡು ಕೆರೆ ಪೂಜೆಯ ಸಂದರ್ಭದಲ್ಲಿ ಸಂತರ್ಪಣೆ ಇತ್ಯಾದಿ ವೆಚ್ಚಗಳಿಗೆ ಬಳಸಲಾಗುತ್ತದೆ.
ಇನ್ನು ಮಲೆನಾಡ ಕಡೆಗಳಲ್ಲಿ ಗಂಗಾಷ್ಟಮಿ ಪೂಜೆಯೆಂಬ ವಿಶೇಷ ಆಚರಣೆಯನ್ನೂ ನಡೆಸಲಾಗುತ್ತದೆ. ಆಶ್ವಯುಜ, ಕಾರ್ತೀಕ ಶುದ್ಧ ಅಷ್ಟಮಿಯಂದು ಪ್ರತಿ ಮನೆಮನೆಗಳಲ್ಲಿ ಗಂಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಮನೆಯ ಹೆಣ್ಣುಮಕ್ಕಳು ನಸುಕಿನಲ್ಲೇ ಎದ್ದು ಬಾವಿ ಕಟ್ಟೆಗೆ ತೆರಳಿ, ಸುತ್ತೆಲ್ಲ ಹೂವುಗಳಿಂದ ಅಲಂಕರಿಸಿ ನೀರು ಸೇದಿ ತುಂಬಿ ಅಲ್ಲೇ ಪೂಜೆ ಸಲ್ಲಿಸಿ ಬರುತ್ತಾರೆ. ಅಲ್ಲಿಂದ ಕೊಡಗಳಲ್ಲಿ ಮನೆಗೆ ತಂದಿಟ್ಟುಕೊಳ್ಳುವ ನೀರನ್ನು ವರ್ಷವಿಡೀ ತೀರ್ಥದ ರೂಪದಲ್ಲಿ ಬಳಸಲಾಗುತ್ತದೆ.
ಇಂಥ ಅದೆಷ್ಟೋ ಆಚರಣೆಗಳು ಇಂದಿಗೂ ಗ್ರಾಮೀಣ ನಂಬಿಕೆಗಳನ್ನು ಶ್ರೀಮಂತವಾಗಿಟ್ಟಿವೆ. ಮಾತ್ರವಲ್ಲ ಸಮು ದಾಯದ ಒಗ್ಗಟ್ಟಿನ ಪ್ರತೀಕವಾಗಿ ನಿಲ್ಲುತ್ತವೆ. ಎಲ್ಲರೂ ಹೊಂದಾಣಿಕೆಯಿಂದ ನೀರಿನ ಅಳತೆಪೂರ್ವಕ ಬಳಕೆಗೆ ಇಲ್ಲೊಂದು ಅಲಿಖಿತ ಸಂವಿಧಾನ ನಿರ್ಮಾಣವಾಗುತ್ತದೆ. ದೇವರ ಸನ್ನಿಯಲ್ಲಿ ಇದಕ್ಕೆ ತಾವು ಬದ್ಧವೆಂದು ಪ್ರಮಾಣ ಮಾಡುವುದು ವಿಶೇಷ. ಎಂಥ ಸನ್ನಿವೇಶದಲ್ಲೂ ಇದನ್ನು ಉಲ್ಲಂಘಿಸುವುದಿಲ್ಲ. ನೀರೆಂಬುದನ್ನು ನಿರ್ಜೀವ ಸರಕೆಂದು ಎಂದಿಗೂ ನಮ್ಮವರು ಭಾವಿಸಿಲ್ಲ. ಅದಕ್ಕೊಂದು ದೈವತ್ವದ ಸ್ವರೂಪ ನೀಡಿ ಗೌರವಿಸಿಕೊಂಡು ಬಂದಿರುವುದರಿಂದಲೇ ಅಪವ್ಯಯ, ಅಪಸವ್ಯಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಅದರಿಂದ ಆಧುನಿಕತೆಯ ದಾಳಿಗೆ ಸಿಲುಕಿ ಇಂಥ ಆಚರಣೆಗಳೂ ಮರೆಯಾ ಗುತ್ತಿದೆ. ಪರಿಣಾಮ ಸಂಕಷ್ಟಗಳೂ ಹೆಚ್ಚಿವೆ.
‘ಲಾಸ್ಟ್ ಡ್ರಾಪ್’: ನೀರೆಂಬುದು ಹಳ್ಳಿಗಳ ಬದುಕಿನಲ್ಲಿ ಹಾಸುಹೊಕ್ಕಾದ ವಿಷಯ. ಗಂಗೆ ಪೂಜೆಯಿಲ್ಲದೇ ಯಾವುದೇ ಶುಭ ಕಾರ್ಯ ಊರಿನಲ್ಲಿ ನೆರವೇರುವುದೇ ಇಲ್ಲ. ಅಂಥ ನೀರ ಪ್ರೀತಿಯೇ ಅವರನ್ನು ಇಂದಿಗೂ ಸಮೃದ್ಧವಾಗಿ ಪೊರೆಯುತ್ತಿದೆ.

No comments: