ನಿಜಕ್ಕೂ ಅದು ನಿರೀಕ್ಷೆಗಿಂತ ಸುಂದರ ವ್ಯವಸ್ಥೆ. ಅದೊಂದು ದೃಶ್ಯ ಕಾವ್ಯ. ನಿಸರ್ಗ ಸೃಷ್ಟಿಸಿದ ಅದ್ಭುತ ತಂತ್ರಜ್ಞಾನ. ಪ್ರಕೃತಿ ಬರೆದ ಅವರ್ಣನೀಯ ಚಿತ್ರ. ಆಧುನಿಕತೆಯ ಎಲ್ಲ ವೈಫಲ್ಯದ ನಡುವೆಯೂ ಮೂಡಿದ ಬೆಚ್ಚನೆಯ ಕನಸು. ಸುಭದ್ರ, ಸುಸ್ಥಿರ ಕೃಷಿ ಬದುಕಿಗೆ ಅದೃಷ್ಟವಶಾತ್ ಇನ್ನೂ ಅಲ್ಲಿ-ಇಲ್ಲಿ ಉಳಿದು ಬಂದಿರುವ ಸಮರ್ಥ ವ್ಯವಸ್ಥೆ.
ಹೌದು, ತುಮಕೂರು ಜಿಲ್ಲೆಯ ತಲಪರಿಗೆಗಳನ್ನು ಕಣ್ಣಾರೆ ಕಂಡು ಬಂದ ನಂತರ ಅದರ ಬಗೆಗಿದ್ದ ಇಂಥ ಭಾವನೆಗಳು ನೂರ್ಮಡಿಸಿವೆ. ಶತಶತಮಾನಗಳಿಂದ ಸುತ್ತಲಿನ ಸಮಾಜವನ್ನು ತಾಯಿಯಂತೆ ಸಲುಹಿದ ಅಪೂರ್ವ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ (ಜಲಬಂಧು ಶ್ರೀ ಪಡ್ರೆಯವರ ಸುಂದರ ಪದದಲ್ಲಿ ಹೇಳುವುದಾದರೆ -ಪಾರಂಜವ್ಯ)ಯೊಂದು ಕಣ್ಮರೆಯಾಗುತ್ತಿರುವ ಬಗ್ಗೆ ಅಷ್ಟೇ ದೀರ್ಘ ಬೇಸರವೂ ಮೂಡಿದೆ.
ಆಧುನಿಕತೆಯ ಭ್ರಮೆ ನಮ್ಮನ್ನು ಎಂಥ ವಿಸ್ಮೃತಿಗೆ ತಳ್ಳುತ್ತಿದೆ ಎಂಬುದನ್ನು ಕಣ್ಣಾರೆ ಕಂಡೇ ಅರಿಯಬೇಕು. ೮೦ರ ದಶಕದಲ್ಲಿ ಬೋರ್‌ವೆಲ್‌ಗಳ ಬಲೆಗೆ ಬಿದ್ದ ನಾವು ನಾಡಿನ ಅಮೂಲ್ಯ ಇಂಥ ಅದೆಷ್ಟೋ ಪಾರಂಜವ್ಯ ಪ್ರಪಂಚವನ್ನೇ ಮರೆತುಬಿಡುತ್ತಿದ್ದೇವೆ. ಬೆಟ್ಟಗಳ ಸಾಲು ಸಾಲುಗಳ ಸನ್ನಿಯಲ್ಲಿ ನೆಲದಡಿಯ ಜೀವದ್ರವ ಬುಗ್ಗೆಯಾಗಿ ಪುಟಿದೇಳುತ್ತಿದ್ದರೆ, ಅದರ ಮೇಲೆ ತಂಗಾಳಿ ತೇಲಿ ಬರುತ್ತಿದ್ದರೆ ಹೊಲದಲ್ಲಿ, ಬಿರು ಬಿಸಿಲಲ್ಲಿ ಬೆವರು ಹರಿಸುತ್ತ ದುಡಿಯುವ ರೈತ ಹಾಗೆಯೇ ಕಣ್ಮುಚ್ಚಿ ನೆಮ್ಮದಿಯ ನಾಳೆಗಳನ್ನು ನಿಶ್ಚಯಗೊಳಿಸಿಕೊಳ್ಳುತ್ತಾನೆ.
ತಲಪರಿಗೆಗಳೆಂದರೇ ಹಾಗೆ. ಅದು ಇಂದಿನವರೆಗೆ ತನ್ನನ್ನು ನಂಬಿದ ಜೀವವನ್ನು ಒಣಿಗಿಸಿಲ್ಲ, ಅವಲಂಬಿಸಿದ ಬದುಕನ್ನು ಕಮರಿಸಿಲ್ಲ. ಇದು ಇಂದು ನಿನ್ನೆಯ ಮಾತಲ್ಲ. ತಲಪರಿಗೆಯ ತಪ್ಪಲಿನ ಮಂದಿಯೇ ಹೇಳುವಂತೆ ಈ ಭೂಮಿಯ ಮೇಲೆ ಬಾವಿಗಳು ಬರುವ ಮುನ್ನವೇ, ಕಪಿಲೆ, ಏತಗಳು ಏಳುವ ಮುನ್ನವೇ, ರಾಟೆಗಳು ಸದ್ದು ಮಾಡಲು ಕಲಿಯುವ ಮೊದಲೇ, ನದಿ ಕಾಲುವೆಗಳ ಪರಿಚಯ ಆಗುವುದಕ್ಕಿಂತ ಮುಂಚೆಯೇ ತಲಪರಿಗೆಗಳು ನಾಗರಿಕತೆಗೆ ತಂಪೆರೆದಿದ್ದವು. ಅದರ ಗುಣಗಾನವನ್ನು ಫಲಾನುಭವಿ ರೈತನ ಮಾತಲ್ಲೇ ಕೇಳಬೇಕು....
ಮಧುಗಿರಿಯ ಹಿರಿಯ ತಲೆ ಮಾದಪ್ಪನನ್ನು ಕೇಳಿನೋಡಿ, ‘ಅದು ಅಶಂಖದ ನೀರು ಸ್ವಾಮೀ !’ ಎನ್ನುತ್ತಾರೆ. ಹಾಗೆ ಹೇಳುವಾಗಲೊಮ್ಮೆ ಅವರ ಕಣ್ಣಲ್ಲಿ ಪಾರಂಜವ್ಯದ ಬಗೆಗೊಂದು ಹೆಮ್ಮೆಯ ಹೊಳಪು ಪ್ರತಿಫಲಿಸುತ್ತದೆ. ಇದೇನಿದು ಅಶಂಖದ ನೀರು ? ಎಂದು ಪ್ರಶ್ನಿಸಿದರೆ ಬರುವ ಉತ್ತರ ಇನ್ನಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಅಶಂಖ ಎಂದರೆ ಶಂಕೆ ಇಲ್ಲದ್ದು ಎಂದರ್ಥ. ಅಂದರೆ ತಲಪರಿಗೆಯ ನೀರಿನ ಬಗ್ಗೆ ಸಂಶಯವೇ ಬೇಡ. ಕಣ್ಮುಚ್ಚಿ ಅದನ್ನು ಕುಡಿಯಬಹುದು. ಅಷ್ಟೊಂದು ಪರಿಶುದ್ಧ. ಮಾತ್ರವಲ್ಲ, ಅಷ್ಟೂ ರುಚಿಕರ.
ಇದು ಕೇವಲ ಬಾಯಿಮಾತಲ್ಲ. ತಲಪರಿಗೆಯ ನೀರುಂಡವರೆಲ್ಲರ ಅನುಭವವೂ ಇದನ್ನೇ ಸಾರುತ್ತದೆ. ಇನ್ನು ನಮ್ಮ ನಂಬಿಕೆಗಳಲ್ಲಿ, ಪೂಜಾ ವಿವಿಧಾನಗಳಲ್ಲಿ ಶಂಖಕ್ಕೆ ಮಹತ್ವದ ಸ್ಥಾನವಿದೆ. ಶಂಖದ ನೀರೆಂದರೆ ಅದು ತೀರ್ಥಕ್ಕೆ ಸಮಾನ ಎಂಬ ಭಾವನೆ. ಹಾಗೆಯೇ ತಲಪರಿಗೆಯ ನೀರೆಂದರೆ ಶಂಖದ ನೀರಿನಷ್ಟು ಪವಿತ್ರ ಎಂಬುದನ್ನು ವ್ಯಾಖ್ಯಾನಿಸಲು ‘ಅಶಂಖದ ನೀರು’ ಪದ ಬಳಕೆಯಾಗುತ್ತದೆ ಗ್ರಾಮೀಣ ಭಾಗದಲ್ಲಿ.
ತಲಪರಿಗೆಗಳಲ್ಲಿ ನೀರು ಉದ್ಭವಿಸುವ ರೀತಿ ಹಾಗೂ ಭೌಗೋಳಿಕ ಕಾರಣಗಳನ್ನು ಗಮನಿಸಿದರೂ ಈ ಮಾತಿಗೆ ಪುಷ್ಟಿ ದೊರೆಯುತ್ತದೆ. ಎಲ್ಲೋ ಬೆಟ್ಟ ಗುಡ್ಡಗಳ ಮೇಲೆ ಬಿದ್ದ ಮಳೆ ನೀರು ಭೂಮಿಯೊಳಕ್ಕೆ ಇಂಗಿ, ಬಂಡೆಗಳ ಅತಿ ಸೂಕ್ಷ್ಮ ರಂಧ್ರಗಳಲ್ಲಿ ನುಸುಳಿ, ಕೆಳಗಿಳಿದು ಇನ್ನೆಲ್ಲಿಗೋ ಪಯಣ ಹೊರಡುತ್ತದೆ. ಹಾಗೆ ಅಂತರ್ಮುಖಿಯಾಗಿ ಯಾನ ಹೊರಟ ನೀರು ಬೆಟ್ಟಗಳ ತಗ್ಗಿನ ಸಮತಳಕ್ಕೆ ಬಂದಾಗ ಒತ್ತಡಕ್ಕೆ ಒಳಗಾಗುತ್ತದೆ. ಅಂಥ ಒತ್ತಡ ನೀರಿನ ಬುಗ್ಗೆಗಳನ್ನು ಸೃಷ್ಟಿಸುತ್ತದೆ. ಈ ಬುಗ್ಗೆಗಳ ಸುತ್ತ ನಿರ್ಮಿಸುವ ರಚನೆಗಳೇ ತಲಪರಿಗೆಗಳೆನಿಸಿಕೊಂಡು ಸವಿಸವಿ ಅಮೃತಧಾರೆಯನ್ನು ಹನಿಸುತ್ತವೆ.
ತಲಪರಿಗೆಯ ನೀರು ಸಂಜೀವಿನಿ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನವನ್ನೂ ನೀರ ಗೆಳೆಯರು ಮುಂದಿಡುತ್ತಾರೆ. ಅದು ಮಧುಗಿರಿ ಸಮೀಪದ ಸಿ.ಕೆ.ಪುರ ಎಂಬ ಹಳ್ಳಿಯೊಂದರ ಮಾತು. ಮೂರು ವರ್ಷದ ಹಿಂದೆ ಮಳೆ ಕಾಣದೇ ಸುತ್ತಮುತ್ತ ಬರ ಬೀಳುವ ಎಲ್ಲ ಲಕ್ಷಣಗಳೂ ಕಂಡಿತ್ತು. ನೀರಿಗಾಗಿ ನಂಬಿದ್ದ ಬೋರ್‌ವೆಲ್‌ಗಳು ಬಾಯ್ದೆರೆದುಕೊಂಡು ಬಿದ್ದಿದ್ದವಂತೆ. ಕೊನೆಗೆ ಯಾರೋ ಒಬ್ಬರಿಗೆ ತಲಪರಿಗೆಗಳ ಬಗ್ಗೆ, ಭೀಕರ ಬರಗಾಲದಲ್ಲೂ ಅದು ಹನಿಸುತ್ತಿದ್ದ ಸವಿನೀರಿನ ಬಗ್ಗೆ ಜ್ಞಾನೋದಯವಾಯಿತಂತೆ. ಸರಿ, ಕಳೆದು ಹೋಗುತ್ತಿದ್ದ ಊರ ಮುಂದಿನ ತಲಪರಿಗೆಯೊಂದನ್ನು ಪುನಶ್ಚೇನಗೊಳಿಸಿ ನೀರ ಬಳಕೆ ಆರಂಭವಾಯಿತು. ಅಚ್ಚರಿ ಕಂಡದ್ದು ಆಗ. ವರ್ಷಗಳಿಂದ ಕೈಕಾಲು ಹಿಡಿದುಕೊಂಡು ಬಿದ್ದಿದ್ದ ಹಿರಿಯರಲ್ಲಿ ಚೇತರಿಕೆ ಕಂಡು ಬಂತು. ಬಹುಕಾಲದಿಂದ ಕಾಡುತ್ತಿದ್ದ ಸಂದುನೋವು ಸದ್ದಿಲ್ಲದೇ ಹಿಂದಾಗಿತ್ತು. ಸಣ್ಣಪುಟ್ಟ ಕಾಯಿಲೆಗಳು ಕಣ್ಮರೆಯಾಗಿದ್ದವು. ಅದು ಬರೀ ಭ್ರಮೆಯಾಗಿರಲಿಲ್ಲ. ನೂರಕ್ಕೆ ನೂರು ಸತ್ಯವಾಗಿತ್ತು. ಇಲ್ಲೇನೂ ಮಾಯಮಂತ್ರ ಆಗಿಲ್ಲ. ಇಂದ್ರಜಾಲ-ಮಹೇಂದ್ರಜಾಲ ನಡೆದಿಲ್ಲ. ಈವರೆಗ ಬಳಸುತ್ತಿದ್ದ ಬೋರ್‌ವೆಲ್ ನೀರು ಫ್ಲೋರೈಡ್ ಎಂಬ ವಿಷವನ್ನು ಕಕ್ಕುತ್ತಿತ್ತು. ಅನಿವಾರ್ಯವಾಗಿ ಅದನ್ನೇ ಕುಡಿಯುತ್ತಿದ್ದ ಮಂದಿ ಹತ್ತು ಹಲವು ಸಂಕಟಗಳಿಗೆ ಒಳಗಾಗಿದ್ದರು. ಯಾವಾಗ ಬೋರ್‌ನ ವಿಷ ಬಿಟ್ಟು ತಲಪರಿಗೆಯ ಅಮೃತವನ್ನು ಕುಡಿಯಲಾರಂಭಿಸಿದರೋ ತಂತಾನೇ ಅಡ್ಡ ಪರಿಣಾಮಗಳು ದೂರಾಗಲಾರಂಭಿಸಿದವು. ಇಂಥ ಹಲವು ಘಟನೆಗಳನ್ನು ತಲಪರಿಗೆಯ ಸುತ್ತಲಿನ ಮಂದಿ ತಲಸ್ಪರ್ಶಿಯಾಗಿ ವಿವರಿಸುತ್ತಾರೆ.
ತಲಪರಿಗೆಯ ಬಗೆಗೊಂದಿಷ್ಟು ಎಚ್ಚರ ಮೂಡಿಸಿದ, ಆಸಕ್ತರನ್ನು ಒಟ್ಟು ಮಾಡಿ, ಪುಟ್ಟ ಪುಸ್ತಕವೊಂದನ್ನು ಹೊರತಂದ ನೀರ ಗೆಳೆಯ ಮಲ್ಲಿಕಾರ್ಜುನ ಹೊಸಪಾಳ್ಯ ಕೊಡುವ ವ್ಯಾಖ್ಯಾನವೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಧಾಟಿ ತುಸು ಭಿನ್ನ. ಮಲ್ಲಿ ಪ್ರಕಾರ ‘ನನ್ನ ಬೋರ್‌ವೆಲ್, ನನ್ನ ನೀರು’ ಎನ್ನುವ ಇಂದಿನ ದಿನಗಳಲ್ಲಿ ‘ಇದು ನಮ್ಮ ನೀರು’ ಎಂಬ ಸಾಮುದಾಯಿಕ ಪ್ರಜ್ಞೆಯೊಂದನ್ನು ತಲಪರಿಗೆಗಳು ಜಾಗೃತಿಗೊಳಿಸುತ್ತವೆ. ಈ ಮಾತಿನಲ್ಲಿ ಸಂಶಯಕ್ಕೆ, ಆಕ್ಷೇಪಕ್ಕೆ ಅವಕಾಶವೇ ಇಲ್ಲ.
ಕಳೆದ ಭಾನುವಾರ ಮಧುಗಿರಿಯಲ್ಲಿ ಒಂದಿಡೀ ದಿನ ತಲಪರಿಗೆಯ ಬಗ್ಗೆ ನೀರ ಆಸಕ್ತರು ಕಲೆತು ಚರ್ಚಿಸಿದ್ದಾರೆ. ನಶಿಸಿ ಹೋಗುತ್ತಿರುವ ಈ ನೆಲದ ಜ್ಞಾನದ ಉಳಿವಿನ ನಿಟ್ಟಿನಲ್ಲಿ ಅದೊಂದು ಉತ್ತಮ ಪ್ರಯತ್ನ. ತಲಪರಿಗೆಯ ಬಗ್ಗೆ ಅಲ್ಲಿ ದಕ್ಕಿದ ಒಂದೊಂದು ಅನುಭವಗಳೂ ಹಸಿಹಸಿಯಾಗಿದ್ದವು. ಇಂಥ ಅಪೂರ್ವ ಜಲಸಂರಕ್ಷಣಾ ಪದ್ಧತಿಯ ರಕ್ಷಣೆಯ, ಅದರ ಕುರಿತಾದ ಜಾಗೃತಿಯ ದಿಸೆಯಲ್ಲಿ ರಕ್ಕಸ ಬೋರ್‌ವೆಲ್‌ಗಳ ಈ ಯುಗದಲ್ಲಿ ಕೊನೆಗೂ ಒಂದಷ್ಟು ಸುಮನಸುಗಳು ಹೀಗೆ ಸೇರಿದ್ದು ಆರೋಗ್ಯಕಾರಿ ಬೆಳವಣಿಗೆ. ಈ ದೃಷ್ಟಿಯಿಂದ ಸದ್ದಿಲ್ಲದೇ ಆಂದೋಲನವನ್ನು ಆರಂಭಿಸಿರುವ ನೀರ ನೆಂಟರಾದ ಭೂಷಣ್ ಮಿಡಿಗೇಶಿ ಹಾಗೂ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಬೆನ್ನು ತಟ್ಟಲೇಬೇಕಿದೆ. ಇದರಿಂದ ಪ್ರೇರಣೆ ಪಡೆದಾದರೂ ನಮ್ಮ ಇಲಾಖೆಗಳು, ಜಿಲ್ಲಾ ಪಂಚಾಯತ್‌ನಂಥ ಸ್ಥಳೀಯ ಸಂಸ್ಥೆಗಳು ಕಣ್ತೆರೆದು, ಅಳಿದುಳಿದ ತಲಪರಿಗೆಗಳ ರಕ್ಷಣೆಗೆ ಮುಂದಾಗಲಿ. ಪುಟ್ಟದಾಗಿ ಆರಂಭವಾಗಿರುವ ಆ ಬಗೆಗಿನ ಅಧ್ಯಯನ ಬೃಹತ್ ಸಂಶೋಧನೆಯ ರೂಪ ಪಡೆಯಲಿ. ಆಗಲಾದರೂ ಬೋರ್‌ವೆಲ್‌ಗಳಲ್ಲಿ ತಲೆ ಸಿಕ್ಕಿಸಿಕೊಂಡು ಕುಳಿತಿರುವ ನಮ್ಮ ಸರಕಾರಗಳಿಗೆ ಸತ್ಯ ದರ್ಶನವಾದೀತು ಎಂಬುದು ಆಶಯ.
"ÇÝÓ…r'vÝű…: ನಾಡಿನ ನೀರೆಚ್ಚರದ ದ್ರೋಣ ಶ್ರೀಪಡ್ರೆ ಕಾರ್ಯಾಗಾರದಲ್ಲಿ ನೆನಪಿಸಿಕೊಂಡ ದಿಲ್ಲಿಯ ಜಲ ಭೀಷ್ಮ ಅನುಪಮ್ ಮಿಶ್ರಾರ ಮಾತು-ಇಂದ್ರನಿಗೆ ಚಿಟಿಕೆಯ ಕೆಲಸ(ಮಳೆ),ಕೊಟ್ಟೀತು ರಾಟೆಗೆ ವರ್ಷದ ಕೆಲಸ(ನೀರಾವರಿ).
ಸಮ್ಮನಸ್ಸಿಗೆ ಶರಣು
3 months ago
No comments:
Post a Comment