Wednesday, April 28, 2010

ನೀರಿನ ನೆವದಲ್ಲಿ ಹಸಿರಿಗೆ ರಹದಾರಿ, ಬೇಟೆ ದುಬಾರಿ

ಕಂಜೂಸಿ ದಾನ್ ಸೆ ಜೀತೊ...
ಅಸತ್ಯ ಕೋ ಸತ್ಯಸೆ ಜೀತೊ...
ದ್ವೇಷ್-ಕ್ರೋಧ್ ಕೋ ಸದಾಚಾರ್ ಸೆ ಜೀತೊ...!

ಆ ಯೋಧರ ಪಡೆಯ ಮೂಲ ಮಂತ್ರಗಳಿವು. ಪ್ರಾರ್ಥನೆ ಹೀಗೆಯೇ ಸಾಗುತ್ತದೆ. ಇದೇನು ಹೊಸತಲ್ಲ ಬಿಡಿ. ನಮ್ಮ ದೇಶದ ದಾರ್ಶನಿಕರೆನಿಸಿಕೊಂಡವರೆಲ್ಲ ಬೋಸಿದ್ದು ಇದನ್ನೇ ಅಲ್ಲವೇ ? ಅಷ್ಟೇಕೆ ಭಾರತೀಯ ಮೂಲ ನಂಬಿಕೆಯೇ ಇದು. ಹೊಸತಿರುವುದು ಅದರ ಅನುಷ್ಠಾನದಲ್ಲಿ. ಹೇಗೆ ನೋಡಿದರೂ ಲಕ್ಷ್ಮಣ್ ಸಿಂಗ್‌ರಲ್ಲಿ ಒಬ್ಬ ಗಾಂ, ಒಬ್ಬ ಬುದ್ಧ, ಒಬ್ಬ ಮಹಾವೀರ, ಒಬ್ಬ ಧರ್ಮರಾಜ ಕಂಡರೆ ಅದಕ್ಕೆ ಕಾರಣ ಅವರು ಲಾಪೋಡಿಯಾದಲ್ಲಿ ತಾಲಾಬ್‌ಗಳ ಪುನರ್ ನಿರ್ಮಾಣ ಮಾಡಿದರು ಎಂಬುದಕ್ಕಲ್ಲ. ಅಲ್ಲಿ ನೀರಿನ ಸಮೃದ್ಧತೆಯನ್ನು ಮರಳಿ ತಂದರು ಎಂಬುದಕ್ಕಲ್ಲ. ಹಾದಿ ತಪ್ಪಿ ಹೋಗಿದ್ದ, ಬರಗೆಟ್ಟು ಬುಕಣಾಸಿಯಾಗಿ ಹೋಗಿದ್ದ ಲಾಪೋಡಿಯಾದ ಜನಜೀವನದಲ್ಲಿ ಧರ್ಮದ ಪುನರ್‌ಸ್ಥಾಪನೆ ಮಾಡಿದರು. ಅದು ಶುದ್ಧಾತಿಶುದ್ಧ ಮಾನವೀಯ ಧರ್ಮವಾಗಿತ್ತು. ಜೀವ ಧರ್ಮವಾಗಿತ್ತು. ಅಧರ್ಮವನ್ನು ಧರ್ಮ ಮಾರ್ಗದಿಂದ ಜಯಿಸಿದ್ದೇ ಲಕ್ಷ್ಮಣ್ ಸಾಹಸಗಾಥೆಗೆ ಇಟ್ಟ ಮುಕುಟ.
ಒಂದು ಕಾಲದಲ್ಲಿ ರಾಜಸ್ಥಾನದ ಆ ಪುಟ್ಟ ಹಳ್ಳಿಯ ಯುವಕರು ಅದೆಷ್ಟು ಪೋಲಿಬಿದ್ದು ಹೋಗಿದ್ದರೆಂದರೆ ಅವರಿವರನ್ನು ಟೀಕಿಸದಿದ್ದರೆ, ವ್ಯಂಗ್ಯ ಮಾಡದಿದ್ದರೆ ಅವರಿಗೆ ತಿಂದ ಅನ್ನವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅದು ಎಷ್ಟರಮಟ್ಟಿಗೆ ಅವರಿಗೆ ರೂಢಿಬಿದ್ದು ಹೋಗಿತ್ತೆಂದರೆ ಊರಿನವರನ್ನು ಹಾಗಿರಲಿ, ಊರಿಗೆ ಬರುತ್ತಿದ್ದ ಅತಿಥಿಗಳನ್ನು, ದಾರಿಹೋಕರನ್ನೂ ಅವರು ಬಿಡುತ್ತಿರಲಿಲ್ಲ. ಕೊನೇ ಪಕ್ಷ ಅವರಿಗೆ ಅದು ಬಿಟ್ಟರೆ ಬೇರೇನೂ ಉದ್ಯೋಗವೂ ಇರಲಿಲ್ಲ. ಹಾಗೆಂದು ಹೊಟ್ಟೆ ಕೇಳಬೇಕಲ್ಲಾ ? ಬದುಕಿಗೊಂದು ಮಾರ್ಗ ಬೇಕಿತ್ತಲ್ಲ ? ಅದಕ್ಕೆ ಸಿಕ್ಕಿದ್ದು ದಗಾ-ವಂಚನೆ-ಮೋಸ... ಕೊನೆಗೆ ಖೂನಿ- ಕೊಲೆಗಳಿಗೂ ಅವರು ಹೇಸಿದ್ದು ಸುಳ್ಳು. ಅಂಥ ವಾತಾವರಣದಲ್ಲಿ ಮನುಷ್ಯ ಜೀವನವೇ ನರಕವಾಗಿರುವಾಗ ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಉಸಿರಾಡುವುದು, ಸ್ವಚ್ಛಂದವಾಗಿ ಬದುಕುವುದು ದೂರದ ಮಾತಾಗಿತ್ತು. ಹಕ್ಕಿಗಳ ಕಲರವವನ್ನು ಮರೆತು ಅದೆಷ್ಟೋ ಕಾಲವಾಗಿತ್ತು. ಅವಿದ್ದರೆ ತಾನೇ ಚಿಲಿಪಿಲಿಗುಟ್ಟಲು. ಬಹುತೇಕವನ್ನು ಕೊಂದು ತಿಂದಾಗಿತ್ತು. ಅಳಿದುಳಿದವು ನೀರು ಕಾಳು ಕಾಣದೇ ನೆರೆ ರಾಜ್ಯಗಳಿಗೆ ವಲಸೆ ಹೋಗಿದ್ದವು.


ಅಂಥ ವಾತಾವರಣದಲ್ಲಿ ಮತ್ತೆ ಜೀವ ಸಾಮ್ರಾಜ್ಯವನ್ನು ಪುನರ್‌ಸ್ಥಾಪಿಸುವುದೆಂದರೆ ಅದು ಕಟುಕನ ಬಳಿ ದಯೆಯ ಅರ್ಥ ಕೇಳಿದಂತಾಗಿತ್ತು. ಆದರೆ ಲಕ್ಷ್ಮಣ್ ನಿರ್ಧಾರ ಮಾಡಿಯಾಗಿತ್ತು. ಲಾಪೋಡಿಯಾದ ಹೆಸರನ್ನು ಬದಲಿಸಬೇಕು. ಅದು ಭೌತಿಕವಾಗಿಯಷ್ಟೇ ಅಲ್ಲ, ಊರಿನ ಜನರ ಅಂತರಂಗದಲ್ಲಿ ಅಂಥ ಬದಲಾವಣೆ ಇಣುಕಬೇಕು. ಅಲ್ಲಿಯೇ ಅದು ಮನೆ ಮಾಡಬೇಕು. ಆಗ ಮಾತ್ರವೇ ಲಾಪೋಡಿಯಾ ಮತ್ತೆ ಬಹದ್ದೂರ್ ನಗರವಾಗಿ ಪರಿವರ್ತನೆ ಹೊಂದಲು ಸಾಧ್ಯ- ಈ ಗುರಿಯೊಂದಿಗೇ ಲಕ್ಷ್ಮಣ್ ಗ್ರಾಮ ವಿಕಾಸ ನವಯುವಕ ಮಂಡಲವನ್ನು ಕಟ್ಟಿದರು. ಅಲ್ಲಿಯ ಪ್ರಾರ್ಥನೆಯೇ ಸಂಘಟನೆಯ ಇಡೀ ಉದ್ದೇಶವನ್ನು ವಿವರಿಸುತ್ತದೆ.ಜಿಪುಣನನ್ನು ದಾನದಿಂದ ಗೆಲ್ಲು, ಅಸತ್ಯವನ್ನು ಸತ್ಯದಿಂದ ಗೆಲ್ಲು....ಹೀಗೆಯೇ ಸಾಗುತ್ತದೆ ಆ ಪ್ರಾರ್ಥನೆಯ ಸಾಲುಗಳು. ಅದು ಕೇವಲ ಸಾಲುಗಳಾಗಿರಲಿಲ್ಲ. ಅದರಲ್ಲಿ ಜೀವ ಶಕ್ತಿಯನ್ನು ತುಂಬಿದ್ದರು ಲಕ್ಷ್ಮಣ್ ಸಿಂಗ್. ಪ್ರಾರ್ಥನೆ ಹಾಡುತ್ತಲೇ ಅದರ ಅನುಷ್ಠಾನವನ್ನೂ ಸಾಸಿಬಿಟ್ಟರು ಅವರು. ಸ್ಥಳೀಯ ಪರಂಪರೆಯ ಅಧ್ಯಯನಕ್ಕೆ ಅವರು ಮೊದಲು ಮಾಡಿದರು. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ದೇಸಿ ಸಂಸ್ಕೃತಿಯ ಸೊಗಡು ಅಷ್ಟಿಷ್ಟು ಊರಿನ ಹಳೆಯ ತಲೆಮಾರಿನಲ್ಲಿ ಉಳಿದಿತ್ತು. ಅದರ ನೆನಪುಗಳು ಅವರಲ್ಲಿನ್ನೂ ಹಸಿರಾಗಿತ್ತು. ಅಂಥ ನೆನಪುಗಳ ಹಸಿರು ಮಾಸುವ ಮೊದಲೇ ಜೀವ ಸಂಸ್ಕೃತಿಯನ್ನು ಚಿಗುರಿಸಿಬಿಡಬೇಕೆಂಬ ಎಚ್ಚರಿಕೆ ಮೂಡಿದ್ದು ಸಕಾಲಿಕವಾಗಿತ್ತು.ಪಂಚಾಯಿತಿಗಳ, ಯುವಕ ಮಂಡಲಗಳ ಸಹಾಯದಿಂದ ಕೆಲ ಸಣ್ಣಪುಟ್ಟ ಸಂಪ್ರದಾಯಗಳನ್ನು ಊರಿನಲ್ಲಿ ಮತ್ತೆ ಜಾರಿಗೆ ತರಲಾಯಿತು. ಅದನ್ನು ನೀತಿ ನಿರೂಪಣೆಯನ್ನಾಗಿ ಪರಿವರ್ತಿಸಲಾಯಿತು. ಆರಂಭದಲ್ಲಿ ಇದಕ್ಕೆ ಎಂದಿನಂತೆಯೇ ವಿರೋಧ ವ್ಯಕ್ತವಾದರೂ ಯುವಕರ ಸಂಕಲ್ಪ ಶಕ್ತಿಯೆದುರು ಇದಾವುದೂ ನಿಲ್ಲಲಿಲ್ಲ. ನಿಯಮಗಳನ್ನು ಹೇರುವ ಬದಲು ಮನಪರಿವರ್ತನೆಯ ಮೂಲಕ ಅದನ್ನು ಅಳವಡಿಸಿಕೊಳ್ಳುವಂತೆ ಊರವರನ್ನು ಒಲಿಸಲಾಯಿತು. ಒಮ್ಮೆ ಮನೋಭಾವ ಬದಲಾದ ಮೇಲೆ ಮುಂದಿನದು ಕಷ್ಟವಾಗಲಿಲ್ಲ.ನಿರುದ್ಯೋಗಿ ಕೈಗಳಿಗೆ ಉದ್ಯೋಗ, ಕಲಿಯುವ ಮನಸ್ಸಿಗೆ ಶಿಕ್ಷಣ- ಇವೆರಡಕ್ಕೆ ಅವಕಾಶವಾಗುತ್ತಿದ್ದಂತೆಯೇ ತನ್ನಿಂದ ತಾನೇ ಕ್ರಾಂತಿ ಇಣುಕಿತು. ಒಂದೆಡೆಯಲ್ಲಿ ಸುಶಿಕ್ಷಿತರು, ಯುವಕರ ಸಂಘಟನೆಯಾಗುತ್ತಿದ್ದರೆ ಇನ್ನೊಂದೆಡೆ ಊರಿನಲ್ಲಿದ್ದ ಶಾಲೆಯ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು. ಊರಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು ಎಂಬುದಕ್ಕಿಂತ ಊರವರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲಾಯಿತು. ನಂತರದ್ದು ಅರಣ್ಯ ಸಂರಕ್ಷಣೆ. ಊರಿನ ಅರಣ್ಯ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಮನುಷ್ಯರು ಪ್ರವೇಶಿಸುವಂತಿಲ್ಲ. ಅಲ್ಲಿ ಸಸಿಗಳನ್ನು ಯಾರೂ ಉದ್ದೇಶಪೂರ್ವಕ ನೆಡುವುದು ಬೇಕಿಲ್ಲ. ಸ್ವಾಭಾವಿಕವಾಗಿಯೇ ಹುಟ್ಟುವ ಸಸ್ಯಗಳ ಜತೆಗೆ ಮಾನವನ ಹಸ್ತಕ್ಷೇಪ ಆಗದಿದ್ದಲ್ಲಿ ಮೂರು ವರ್ಷಗಳಲ್ಲಿ ತನ್ನಿಂದ ತಾನೇ ದಟ್ಟ ಹಸಿರು ಕಾಣಲಾರಂಭಿಸುತ್ತದೆ. ಒಮ್ಮೆ ಅರಣ್ಯ ಸೊಂಪಾಗಿಬಿಟ್ಟರೆ ಜೀವ ಸಂಕುಲಗಳ ಅಭಿವೃದ್ಧಿ ಕಷ್ಟದ ಕೆಲಸವಲ್ಲ. ಅದು ಸುಲಭದ ಮಾರ್ಗವಾಗಿತ್ತು. ಕೇವಲ ಉಪದೇಶದಿಂದ ಇದು ಸಾಧ್ಯವಾಗುವುದಲ್ಲ ಎಂಬ ಎಚ್ಚರಿಕೆಯೊಂದಿಗೆ ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಒಂದು ಮರ ಕಡಿದರೆ ಆ ವ್ಯಕ್ತಿ ಕನಿಷ್ಠ ಎರಡು ಸಸಿಗಳನ್ನು ಬೆಳೆಸುವುದು ಜತೆಗೆ ಒಂದು ೧೨ ಮಣ (ಒಂದು ಮಣ ಎಂದರೆ ೪೦ ಕೆ.ಜಿ.) ಧಾನ್ಯವನ್ನು ದಂಡ ರೂಪದಲ್ಲಿ ಕೊಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಯಿತು. ಹಾಗೆ ದಂಡದ ರೂಪದಲ್ಲಿ ಬಂದ ಧಾನ್ಯವನ್ನುಯುವಕ ಮಂಡಲದ ಸದಸ್ಯರು ಪ್ರತಿ ದಿನ ಮುಂಜಾವು ಮತ್ತು ಸಂಜೆಯ ವೇಳೆ ಊರಿನ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ ಹೋಗಿ ಎರಚಿ ಬರುತ್ತಿದ್ದರು. ಹೀಗೆ ಎರಚಿದ ಕಾಳುಗಳಿಂದ ಆಕರ್ಷಿತವಾಗಿ ಹೆಚ್ಚು ಹೆಚ್ಚು ಪಕ್ಷಿಗಳು ಲಾಪೋಡಿಯಾದ ಕಡೆಗೆ ಬರಲು ಆರಂಭಿಸಿದವು. ಹಾಗೆ ಬಂದವು ಅಲ್ಲಿ ಕಣ್ಣು ಬಿಡಲಾರಂಭಿಸಿದ್ದ ಹಸಿರಿನ ಸಸಿಗಳಲ್ಲಿ ಆಶ್ರಯ ಪಡೆಯಲಾರಂಭಿಸಿದವು. ಆಗ ಊರಿನಲ್ಲಿ ಜಾರಿಗೆ ಬಂದದ್ದು ಪ್ರಾಣಿ-ಪಕ್ಷಿಗಳ ಬೇಟೆ ನಿಷೇಧ. ಒಂದು ಪ್ರಾಣಿ ಕೊಂದರೆ ಆತ ೫ ಸಾವಿರ ರೂ. ದಂಡ ಪಾವತಿಸುವಂತಾಯಿತು. ಹಕ್ಕಿಗಳಿಗೆ ಕಲ್ಲು ಹೊಡೆದವ ೫೦೦ ರೂ. ತೆರಬೇಕಾಯಿತು. ಊರಿನ ಹೊರಭಾಗದಲ್ಲಿ ಈ ಸಂಬಂಧ ಸೂಚನಾ ಫಲಕವನ್ನೇ ಬರೆಸಿ ಹಾಕಲಾಯಿತು.ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು. ಈ ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು. ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು. ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು. ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್(ನಮ್ಮ ಗೋಮಾಳ)ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜೈವಿಕ-ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ, ಕೆರೆ ಸಂರಕ್ಷಣೆ, ತಾಲಾಬ್‌ಗಳ ಪುನಶ್ಚೇತನ, ಮಕ್ಕಳ ಶಿಕ್ಷಣ- ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು. ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್‌ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು. ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು. ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು.

ಲಾಸ್ಟ್‘ಡ್ರಾಪ್‘: ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಇದರ ತವರು ಲಾಪೋಡಿಯಾ.

No comments: