ಎಷ್ಟಾದರೂ ಅದು ಸರಕಾರಿ ವ್ಯವಸ್ಥೆ. ಅಲ್ಲೊಂದಿಷ್ಟು ಉಡಾಫೆ, ಉದಾಸೀನ, ಅಲ್ಲಿನವರಲ್ಲೊಂದಿಷ್ಟು ಅಹಂ ಇಂಥವೆಲ್ಲಾ ಇರದಿದ್ದರೆ ಹೇಗಾದೀತು ? ಪಕ್ಕಾ ಅದೇ ಪ್ರತಿಕ್ರಿಯೆ ಕೃಷಿ ಕಾಲೇಜು ಮುಖ್ಯಸ್ಥರಿಂದ ದೊರಕಿತ್ತು ಲಕ್ಷ್ಮಣ್ ಮತ್ತವರ ಪಡೆಗೆ. ಕೃಷಿ ಅಭಿವೃದ್ಧಿಯ ಬಗೆಗೆ ಚರ್ಚಿಸುವುದು ಹಾಗಿರಲಿ, ಒಳಗೆ ಬಿಟ್ಟುಕೊಳ್ಳಲೇ ಅವರು ಸಿದ್ಧರಿರಲಿಲ್ಲ. ಕೊನೆಗಂತೂ ಮಹನೋತ್‌ರ ಅದ್ಧೂರಿ ಕ್ಯಾಬಿನ್‌ಗೆ ಹೊಕ್ಕರೆಆವರಿಂದ ತೂರಿ ಬಂದ ಮೊದಲ ಪ್ರಶ್ನೆಯೇ ‘ನೀನು ಓದಿದ್ದೇನು ?’ ಎಂಬುದು. ಅಷ್ಟಕ್ಕೇ ವ್ಯಂಗ್ಯ ನಿಂತಿದ್ದರೆ ಆಗಿರುತ್ತಿತ್ತು. ಹಾಗಾಗಲಿಲ್ಲ. ‘ಹತ್ತನೇ ತರಗತಿಯನ್ನೂ ಮುಗಿಸಲಾಗದ ನಿನಗೆ ನೀರು ನಿರ್ವಹಣೆ, ಕೃಷಿ ಪದ್ಧತಿಗಳ ಬಗೆಗಿನ ವೈಜ್ಞಾನಿಕ ಸಂಶೋಧನೆಗಳಾದರೂ ಹೇಗೆ ಅರ್ಥವಾದೀತು. ಎಲ್ಲರಂತೆ ನೀನೂ ಒಂದಷ್ಟು ಲಫಡಾ ಮಾಡಿ ಬದುಕು ಹೋಗು...’ ಮತ್ತೆ ಒಂದು ಕ್ಷಣವೂ ತಡ ಮಾಡದೇ ಟೇಬಲ್ ಮೇಲಿನ ಕರೆಗಂಟೆ ಒತ್ತಿ ಜವಾನನ ಮೂಲಕ ಬಾಗಿಲನ್ನು ತೋರಿಸಿದ್ದರು ಘನ ಕೃಷಿ ಪಂಡಿತರು.
ಲಕ್ಷ್ಮಣ್‌ಗೇನೂ ಇದು ಹೊಸತಾಗಿರಲಿಲ್ಲ. ಆರಂಭದಿಂದಲೂ ಸರಕಾರಿ ಇಲಾಖೆಗಳಿಂದ ಇಂಥದ್ದೇ ಉದಾಸೀನ, ಅಸಹಕಾರವನ್ನು ಅವರು ಎದುರಿಸಿಕೊಂಡೇ ಬಂದಿದ್ದರು. ಗೋಮಾಳ, ಕೆರೆ ಪರಿಸರ, ಕೃಷಿ ಹಾಗೂ ಒಟ್ಟಾರೆ ಜೈವಿಕ ವ್ಯವಸ್ಥೆ ಹೀಗೆ ಒಟ್ಟೊಟ್ಟಾಗಿಯೇ ಅಭಿವೃದ್ಧಿ ಎಂಬುದು ಸಾಗಬೇಕೆಂಬ ಆಶಯಕ್ಕೆ ಯಾವುದೇ ಸರಕಾರಿ ವ್ಯವಸ್ಥೆಯಿಂದಲೂ ಬೆಂಬಲ ಸಿಗಲೇ ಇಲ್ಲ. ಬದಲಾಗಿ ಟೀಕೆ, ವ್ಯಂಗ್ಯ. ಇದಕ್ಕೂ ಕಾರಣ ಇಲ್ಲದೇ ಇರಲಿಲ್ಲ. ಸರಕಾರಿ ಎಂಜಿನಿಯರ್‌ಗಳು, ತಜ್ಞರೆಂದು ಬೋರ್ಡ್ ಹಾಕಿಸಿಕೊಂಡು, ಫ್ಯಾನು-ಫೋನುಗಳೊಂದಿಗೆ ಕುಳಿತಿದ್ದವರಿಗೆ ತಾವು ಒಂದಕ್ಕೆ ಹತ್ತು ಪಟ್ಟು ವೆಚ್ಚ ತೋರಿಸಿ ರೂಪಿಸಿದ್ದ ಯೋಜನೆಗಳು ಲಕ್ಷ್ಮಣ ಸಿಂಗ್ ಅವರಂಥ ವಾಸ್ತವವಾದಿಗಳ ಕೆಲಸದಿಂದ ವ್ಯರ್ಥವೆನಿಸಿಕೊಳ್ಳುವುದು ಬೇಕಿರಲಿಲ್ಲ. ಹೀಗಾಗಿ ಕಾನೂನಿನ ಹೆಸರಿನಲ್ಲಿ ಅಡ್ಡಿ ಪಡಿಸುತ್ತಲೇ ಬರಲಾಗಿತ್ತು. ಆದರೆ ಭಾರತದ ಹಳ್ಳಿಗಳಿಗೆ ಬೇಕಿರುವುದು ಬೃಹತ್ ಯೋಜನೆಗಳಲ್ಲ. ಸ್ಥಳೀಯ ಅಗತ್ಯಕ್ಕನುಗುಣವಾಗಿ, ಸಹಭಾಗಿತ್ವದ ಅಡಿಯಲ್ಲಿ ರೂಪುಗೊಳ್ಳುವ ಸುಸ್ಥಿರ ವ್ಯವಸ್ಥೆ ಎಂಬುದನ್ನು ಮನಗಂಡಿದ್ದ ಲಕ್ಷ್ಮಣ್ ಅದನ್ನೇ ನಿವಾಸಿಗಳಿಗೂ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ‘ಸಮಗ್ರ, ಸಮತೋಲಿತ, ಸಮಾನ’ ಎಂಬ ಮೂರು ‘ಸ-ಸೂತ್ರ’ವನ್ನು ರೂಪಿಸಿಕೊಂಡು ಮುಂದೆ ಹೊರಟಿದ್ದರು. ಜಲ ಮರುಪೂರಣಕ್ಕೆ ಆದ್ಯತೆ ಸಿಕ್ಕದ್ದೇ ಈ ಕಾರಣದಿಂದ.
ಇಂಥ ಜಲ ಮರುಪೂರಣ ಕಾರ್ಯಕ್ಕೆ ‘ಚೌಕ ಪದ್ಧತಿ’ ಎಂಬ ಕರೆಸಿಕೊಳ್ಳುವ ಅತಿ ವಿಶಿಷ್ಟ , ಅಷ್ಟೇ ಅಪರೂಪದ ವ್ಯವಸ್ಥೆಯೊಂದನ್ನು ಅಂತಿಮವಾಗಿ ಲಕ್ಷ್ಮಣ್ ಸಿಂಗ್ ಪರಿಚಯಿಸಿದರು. ಪರಿಚಯಿಸಿದರು ಎಂದರೆ ಬಹುಶಃ ತಪ್ಪಾದೀತು. ಏಕೆಂದರೆ ಅದು ಸ್ವತಃ ಲಕ್ಷ್ಮಣರ ಸಂಶೋಧನೆ. ನಿರಂತರ ಅಧ್ಯಯನ, ಸುದೀರ್ಘ ಪ್ರವಾಸಾನುಭವ, ಈ ವ್ಯವಸ್ಥೆಯಲ್ಲಿ ಕಂಡುಂಡ ಸಂಕಷ್ಟ, ಊರಿನ ಪರಿಸರದಲ್ಲಿ ಗೋಚರಿಸಿದ ಲೋಪ ಇವೆಲ್ಲದರ ಫಲವಾಗಿ ರೂಪುಗೊಂಡದ್ದು ಚೌಕ ಪದ್ಧತಿ. ಲಕ್ಷ್ಮಣ್‌ರ ಇಂಥ ಮಳೆ ನೀರಿಂಗಿಸುವ ಚೌಕಗಳು ಇಂದು ವಿಶ್ವ ಸಂಸ್ಥೆಯವರೆಗೆ ಎಲ್ಲೆಡೆ ಅದೇ ಹೆಸರಿನಲ್ಲಿ ಖ್ಯಾತವಾಯಿತು.
ಲಾಪೋಡಿಯಾದಂಥ ಊರಿನಲ್ಲಿ ನಡೆದ ಜಲ ಮರುಪೂರಣ ಕಾರ್‍ಯ ಮಹತ್ವದ್ದೆನಿಸುವುದು, ಅದು ಆಗಾಗ ಬರಕ್ಕೆ ತುತ್ತಾಗುತ್ತಿದ್ದ ಪ್ರದೇಶ ಎಂಬುದಕ್ಕಷ್ಟೇ ಅಲ್ಲ. ಕೃಷಿಗೆ ಅಗತ್ಯ ಲವಣಾಂಶವನ್ನು ಸೂಕ್ತ ಪ್ರಮಾಣದಲ್ಲಿ ಆ ನೆಲದಲ್ಲಿ ಕಾಪಾಡಿಕೊಳ್ಳುವುದೂ ಅನಿವಾರ್ಯ ಎಂಬ ಕಾರಣದಿಂದ ಸಹ. ಲವಣಾಂಶ ಹೆಚ್ಚಿದರೂ ಅದು ಮಣ್ಣನ್ನು ದುರ್ಬಲಗೊಳಿಸುತ್ತದೆ. ಪರಿಣಾಮ ಇಳುವರಿ ಕುಸಿಯುತ್ತದೆ. ಸಾಮಾನ್ಯವಾಗಿ ಮಳೆಯ ಸಂದರ್ಭದಲ್ಲಿ ಲವಣಾಂಶ ತೊಳೆದುಕೊಂಡು ಹೋಗುತ್ತದೆ ಅಥವಾ ಬೇರೆಲ್ಲೋ ಒಂದು ಕಡೆ ಕೇಂದ್ರೀಕರಣಗೊಳ್ಳುತ್ತದೆ. ಇದನ್ನು ತಪ್ಪಿಸಿ ಸಮತೋಲನ ರಕ್ಷಿಸಿದ್ದು ಲಾಪೋಡಿಯಾ ಚೌಕಗಳ ಹೆಗ್ಗಳಿಕೆ. ಲಕ್ಷ್ಮಣ್ ಸಿಂಗ್ ಹಾಗೂ ಊರಿನ ಇತರ ಜಲಯೋಧರು ಕಟ್ಟಿದ ಈ ವ್ಯವಸ್ಥೆಯೇ, ಅವರು ನಿಸರ್ಗದ ಕುರಿತು ಹೊಂದಿದ್ದ ಆಳವಾದ ತಿಳಿವಳಿಕೆಯನ್ನು ಸಾರಿ ಹೇಳುತ್ತದೆ.
ಗ್ರಾಮದ ಮೇಲ್ಭಾಗದಲ್ಲಿರುವ ಊರಿನ ಗೋಮಾಳದಿಂದಲೇ ಇವರ ಕೆಲಸ ಆರಂಭ. ನೆಲದ ಮೇಲೆ ಓಡುವ ನೀರನ್ನು ಹಿಡಿದಿಡಲು ಹಾಗೂ ಗೋಮಾಳವನ್ನು ಪುನಶ್ಚೇತನಗೊಳಿಸಲು ಮಾಡಿದ ತಂತ್ರವಿದು. ಅಲ್ಲಿಂದಲೇ ಚೌಕಗಳ ನಿರ್ಮಾಣ. ಉದ್ದಕ್ಕೂ ಹಾದು ಹೋಗುವ ಸಣ್ಣ ಕಾಲುವೆಗಳು ಹಾಗೂ ಅದಕ್ಕೆ ತಾಗಿಕೊಂಡು ಸಣ್ಣ ಬದುಗಳು. ಒಂದಕ್ಕೊಂದು ಒತ್ತಿ ಕೂರಿಸಿಟ್ಟ ಚೌಕಗಳಂತೆ ಕಾಣುವ ರಚನೆಗಳಿವು. ವಿಸ್ತಾರವಾದ ಗೋಮಾಳ ಭೂಮಿಯನ್ನು ಹೀಗೆ ನೂರಾರು ಚೌಕಗಳಾಗಿ ವಿಭಾಗಿಸಲಾಗುತ್ತಿತ್ತು. ಪ್ರತಿ ಚೌಕದಲ್ಲೂ ಓಡುವ ಮಳೆ ನೀರನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ಹೆಣೆಯಲಾದ ಒಡ್ಡುಗಳು. ಮಳೆಗಾಲದಲ್ಲಿ ಭಾರಿ ವೇಗದಿಂದ ಹರಿಯುವ ನೀರು ಇಡೀ ಪ್ರದೇಶದಲ್ಲಿ ಹರಡಿಹೋಗುವಂತೆ ಮಾಡುವ ಜಾಣ್ಮೆ.
ಈ ಬಗೆಯ ಅಸಂಖ್ಯ ಒಡ್ಡುಗಳ ನಡುವೆ ಹರಿಯುವ ನೀರು ಚೌಕದೊಳಗೆ ತುಂಬಿಕೊಂಡು ಎಷ್ಟು ಸಾಧ್ಯವೋ ಅಷ್ಟು ಆಳಕ್ಕೆ ಇಂಗುತ್ತದೆ. ಹೆಚ್ಚುವರಿ ನೀರು ಅಲ್ಲಿಂದ ಇನ್ನೊಂದು ಚೌಕಕ್ಕೆ ಹರಿಯುತ್ತದೆ, ಇಂಗುತ್ತದೆ. ಅಲ್ಲಿಂದ ಮತ್ತೊಂದು ಚೌಕಕ್ಕೆ... ಹೀಗೇ. ಹೀಗೆ ಇಂಗುತ್ತ ಗೋಮಾಳದ ತಗ್ಗಿಗೆ ಹರಿದುಬಂದ ಉಳಿದ ನೀರು ಸಂಗ್ರಹಗೊಳ್ಳಲು ಅಲ್ಲೊಂದು ಕೆರೆ. ಇದು ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ಜಲಮೂಲ. ದೊಡ್ಡ ಗಾತ್ರದ ಕೆರೆ ಒಡ್ಡು ನಿರ್ಮಿಸುವುದಕ್ಕೆ ಭಾರಿ ಪ್ರಮಾಣದ ಮಣ್ಣನ್ನು ಅಗೆದು ರಾಶಿ ಹಾಕಬೇಕು. ಗ್ರಾಮಸ್ಥರು ಇಲ್ಲೂ ಜಾಣ್ಮೆ ಮೆರೆದಿದ್ದಾರೆ. ಖಾಲಿ ಗುಂಡಿಗಳನ್ನೆಈ ಕೆರೆಗಳನ್ನಾಗಿ ಪರಿವರ್ತಿಸಿದ್ದಾರೆ. ಬೇಸಗೆಯ ಈ ಸಣ್ಣ ಗುಂಡಿಗಳೇ ಮಳೆಗಾಲದಲ್ಲಿ ಕೆರೆಗಳಾಗಿ ಮಾರ್ಪಡುತ್ತವೆ. ಅವುಗಳ ಸುತ್ತ ಹಸಿರು ತೊನೆಯುತ್ತದೆ. ಗುಂಡಿಗಳ ಸತ್ತಮುತ್ತ, ಚೌಕಗಳಲ್ಲಿ ಇರುವ ನೀರು ಹಾಗೂ ತಂಪಿನ ಪ್ರಮಾಣಕ್ಕನುಗುಣವಾಗಿ ನಾನಾ ಜಾತಿ, ಗಾತ್ರದ ಹುಲ್ಲು ಬೆಳೆಯುತ್ತದೆ. ಇದು ಗ್ರಾಮದ ಸುಮಾರು ಮೂರ್ನಾಲ್ಕು ಸಾವಿರ ಜಾನುವಾರುಗಳಿಗೆ ಆಹಾರ.
ಸಾಂಪ್ರದಾಯಿಕ ಜಲತಜ್ಞರು ಪ್ರತಿಪಾದಿಸುವ ಜಲ ಮರುಪೂರಣ ಗುಂಡಿಗಳಿಗೂ ಈ ಲಾಪೋಡಿಯಾ ಚೌಕಗಳಿಗೆ ವ್ಯತ್ಯಾಸವಿದೆ. ಈ ಚೌಕಗಳು ಅಲ್ಪ ವೆಚ್ಚದ್ದು ಕೂಡ. ಸಾಂಪ್ರದಾಯಿಕ ಗುಂಡಿಗಳಿಗೆ ಹೆಕ್ಟೇರ್‌ಗೆ ೬ ಸಾವಿರ ರೂ.ಗಳಂತೆ ಬೇಕಾದರೆ, ಇದು ಅದಕ್ಕಿಂತ ಮೂರು ಪಟ್ಟು ಕಡಿಮೆ ವೆಚ್ಚದಾಯಕ. ‘ಸರಕಾರಿ ಇಲಾಖೆಗಳು ಪ್ರತಿಪಾದಿಸುವ ಬೃಹತ್ ಇಂಗುಗುಂಡಿಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಸಹಜವಾಗಿ ಹುಲ್ಲು ಬೆಳೆಯುವುದಿಲ್ಲ. ಮೇಲಾಗಿ, ತಗ್ಗು ನೀರಿನಲ್ಲಿ ಬೆಳೆಯುವ ನಾನಾ ವಿಧದ ಹುಲ್ಲುಗಳಿವೆ. ಆಳ ನೀರಿನಲ್ಲಿ ಅವು ಬೆಳೆಯಲಾರವು’ ಎನ್ನುತ್ತಾರೆ ಲಕ್ಷ್ಮಣ್ ಸಿಂಗ್.
ಲಾಪೋಡಿಯಾ ಚೌಕಗಳ ಅನನ್ಯತೆ ಹಾಗೂ ಪರಿಣಾಮಕಾರಿತ್ವವನ್ನು ನಮ್ಮ ಜಲ ತಜ್ಞರು ಹಾಗೂ ನಿಧಾನ ಸರಕಾರಿ ವ್ಯವಸ್ಥೆ ಇನ್ನೂ ಗುರುತಿಸಿಲ್ಲ. ಆದರೆ ಕಣ್ಬಿಟ್ಟು ನೋಡಿ, ಈ ವ್ಯವಸ್ಥೆಯ ಯಶಸ್ಸು ನಿಮ್ಮ ಕಣ್ಣಿಗೇ ಕಾಣಿಸುತ್ತಿದೆ ಇಲ್ಲಿ ಎಂದು ಬೊಟ್ಟು ಮಾಡುತ್ತಾರೆ ಲಕ್ಷ್ಮಣ್ ಸಿಂಗ್. ಸುತ್ತಲೂ ಹಬ್ಬಿರುವ ಮರುಭೂಮಿಯ ನಡುವೆ ಲಾಪೋಡಿಯಾವಷ್ಟೇ ಯಾಕೆ ಹಚ್ಚಹಸಿರಾಗಿದೆ ಎಂಬ ಪ್ರಶ್ನೆಯನ್ನೂ ಅವರು ಒಡ್ಡುತ್ತಾರೆ. ಮತ್ತೆ ಈ ಗೋಮಾಳಗಳಿಗೂ ಯಾವುದೇ ಬೇಲಿಯಿಲ್ಲ, ಇಲ್ಲಿ ಜಾನುವಾರು ಮೇಯಿಸುವುದಕ್ಕೆ ನಿರ್ಬಂಧವೂ ಇಲ್ಲ. ‘ಚೌಕ ನಿರ್ಮಿಸದ ಊರುಗಳನ್ನೇ ನೋಡಿ. ಅಲ್ಲಿನ ಕುಡಿಯುವ ನೀರು ಕೆಟ್ಟದಾಗಿದೆ, ಅದರಲ್ಲಿ ಲವಣಾಂಶ ಹೆಚ್ಚಿದೆ. ನಿರ್ಜಲೀಕರಣ ಹಾಗೂ ಗ್ಯಾಸ್ಟ್ರಿಕ್‌ನಂಥ ಬಾಧೆಗಳು ಅಲ್ಲಿ ಹೆಚ್ಚಿವೆ’ ಎನ್ನುತ್ತಾರೆ ಸಿಂಗ್.
‘ಲಾಸ್ಟ್’ ಡ್ರಾಪ್: ಚೌಕ ಪದ್ಧತಿಯನ್ನು ಪರಿಚಯಿಸುವ ಮುನ್ನ ನಿರಂತರ ಒಂದು ವರ್ಷ ಕಾಲ ಅಧ್ಯಯನ ನಡೆಸಿದ ಲಕ್ಷ್ಮಣ್‌ಜೀ ಗ್ರಾಮದ ನಿಖರ ನಕ್ಷೆಯನ್ನು ಬರೆದಿದ್ದರು. ಇದರಿಂದ ಒಂದೇ ಒಂದು ನಿಸರ್ಗದತ್ತ ಸಸಿಗೂ ಧಕ್ಕೆ ಭಾರದಂತೆ ಎಚ್ಚರ ವಹಿಸಿದ್ದು ಹೆಗ್ಗಳಿಕೆ. ಕೃಷಿ ವಿಜ್ಞಾನಿಗಳೆನಿಸಿಕೊಂಡವರಲ್ಲಿ ಇಂಥ ತಾಳ್ಮೆ, ಸಮರ್ಪಣೆ ಇದ್ದೀತೆ ?
No comments:
Post a Comment