‘ಗೋಚಾರ್’(ಗೋಮಾಳಕ್ಕೆ ರಾಜಸ್ಥಾನಿ ಭಾಷೆಯ ಪದ)ಗಳ ಹಸಿರಿನ ಗೊಡವೆಗೆ ನಾವು ಹೋಗದೇ ಉಳಿದರಷ್ಟೇ ಸಾಕು. ಮಾನವ ಹಸ್ತಕ್ಷೇಪದಿಂದ ಅವನ್ನು ದೂರವಿಟ್ಟರೆ ಅದೇ ದೊಡ್ಡದು. ಬದುಕು-ನಿಸರ್ಗ-ಜೀವ ಸಂಕುಲ, ಭುವನದ ಮೇಲಿನ ಈ ಮೂರು ಸಂಗತಿಗಳ ನಡುವಿನ ಬಾಂಧವ್ಯ ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ. ಸಂಪತ್ತಿನ ಹೆಚ್ಚಳಕ್ಕೆ ನಾವೇನೂ ಮಾಡುವುದೇ ಬೇಕಿಲ್ಲ- ಇದು ಲಕ್ಷ್ಮಣ್ ಸಿಂಗ್ ಬಲವಾದ ನಂಬಿಕೆ. ಇದನ್ನೇ ಆಧಾರವಾಗಿಟ್ಟುಕೊಂಡು ನಿರೂಪಿಸಿದ ನೀತಿ ಲಾಪೋಡಿಯಾದಲ್ಲಿ ಹಾಲಿನ ಹೊಳೆಯನ್ನು ಹರಿಸಿತು. ನೀರ ನೆಮ್ಮದಿಯನ್ನು ನಿಲ್ಲಿಸಿತು. ಕೃಷಿ ಸಮೃದ್ಧಿಯನ್ನು ಕಟ್ಟಿಕೊಟ್ಟಿತು. ಬದುಕು ಬಂಗಾರವಾಗಿಸಿತು.
೭೦ರ ದಶಕದ ಬಳಿಕ ೯೦ರ ದಶಕದ ಆರಂಭದ ಅವಯಲ್ಲಿ ಅತ್ಯಪೂರ್ವ ಜೀವ ಸಂಸ್ಕೃತಿಯೊಂದಕ್ಕೆ ಭದ್ರ ಬುನಾದಿಯನ್ನು ಹಾಕಿದರು ಲಕ್ಷ್ಮಣ್. ಅದನ್ನವರು ‘ಜೀವ ಸಂಸ್ಕೃತಿಯೆಡೆಗಿನ ಪಯಣ’ ಎಂದೇ ಕರೆದುಕೊಂಡರು. ಇದು ಪರಿಣಾಮಕಾರಿ ಸಮುದಾಯ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ತಂತ್ರಕ್ಕೆ ನಾಂದಿಯಾಯಿತು. ಹಿಂದಿನ ದಿನಗಳಲ್ಲಿ ಇಂಥದ್ದೊಂದು ತಂತ್ರ ರೂಪಿಸುವ ಅಗತ್ಯವೇ ಇರಲಿಲ್ಲ. ಆಗ ಜನಸಂಖ್ಯೆ ಕಡಿಮೆ ಇತ್ತು. ಜಾನುವಾರುಗಳ ಬಾಹುಳ್ಯ ಹೆಚ್ಚಿತ್ತು. ಹೀಗಾಗಿ ಒಂದು ಜಲ ಮೂಲ (ಅದು ಕೆರೆ, ಕಟ್ಟೆ ಯಾವುದೇ ಇರಬಹುದು) ಎಲ್ಲರ ಅಗತ್ಯವನ್ನು ಪೂರೈಸಲು ಸಮರ್ಥವಾಗಿತ್ತು. ಮಾತ್ರವಲ್ಲ ಅವುಗಳ ನಿರ್ವಹಣೆಯೂ ಅಷ್ಟೇ ನಿಯಮಿತವಾಗಿ ಸಾಗಿತ್ತು. ತೇವಾಂಶಯುಕ್ತ ನೆಲವನ್ನು ಗೋ ತ್ಯಾಜ್ಯ ಹೂದಲಾಗಿಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜನ ನಿಸರ್ಗದ ಸಾಮೀಪ್ಯದಲ್ಲಿ ನಿಸರ್ಗದೊಂದಿಗೇ ಬದುಕುತ್ತಿದ್ದರು. ಆದರೆ ಯಾವತ್ತೂ ನಿಸರ್ಗವನ್ನು ಕಬಳಿಸಿ ಬದುಕುತ್ತಿರಲಿಲ್ಲ. ಈಗದು ಎಲ್ಲ ರೀತಿಯಿಂದಲೂ ತಿರುವುಮುರುವಾಗಿದೆ. ಇಂಥ ಆತಂಕವನ್ನು ಗ್ರಹಿಸಿದ್ದರು ಲಕ್ಷ್ಮಣ್.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ತಂತ್ರಜ್ಞಾನಗಳು ಮಾತ್ರವೇ ಪರಿಹಾರವನ್ನು ದೊರಕಿಸಿಕೊಡಬಲ್ಲುದು ಎಂಬುದನ್ನು ಅಧ್ಯಯನಗಳ ಮೂಲಕ ಕಂಡುಕೊಂಡ ಲಕ್ಷ್ಮಣ್ ಮತ್ತವರ ಜಲಯೋಧರ ಪಡೆ, ಅದಕ್ಕಾಗಿ ವ್ಯಾಪಕ ಅಧ್ಯಯನ ಪ್ರವಾಸ ಕೈಗೊಂಡರು. ಸಮುದಾಯ ಸಂಘಟನೆಯಲ್ಲಿ ಅವರಿಗೆ ಮಾದರಿಯಾಗಿ ನಿಂತವರು ರಾಜಸ್ಥಾನದ ಇನ್ನೊಬ್ಬ ಭಗೀರಥ ರಾಜೇಂದ್ರ ಸಿಂಗ್. ಅರಾವರಿ ಸೇರಿದಂತೆ ಐದು ನದಿಗಳನ್ನು ಪುನಶ್ಚೇತನಗೊಳಿಸಿದ ಮಹತ್ ಕಾರ್ಯಕ್ಕಾಗಿ ೨೦೦೧ನೇ ಸಾಲಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಸಿಂಗ್ ಅವರ ಕೆಲಸವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದ ಲಾಪೋಡಿಯಾದ ಜಲಯೋಧರ ಪಡೆ, ೧೯೯೧ರಲ್ಲಿ ಮಳೆ ನೀರು ಸಂಗ್ರಹಕ್ಕೆ ಅಡಿಯಿಟ್ಟಿತು. ಇದರ ಫಲವಾಗಿ ಮೂರು ಬೃಹತ್ ನೈಸರ್ಗಿಕ ಕೆರೆಗಳ(ತಾಲಾಬ್) ನಿರ್ಮಾಣ ಮಾಡಿದ್ದಲ್ಲದೇ ಊರಿನ ಸುತ್ತಮುತ್ತಲು ೫೦ ಹೊಸ ತೆರೆದ ಬಾವಿಗಳು ಅಸ್ತಿತ್ವ ಪಡೆದವು. ‘೯೧ರಲ್ಲಿ ನಮ್ಮ ಹಳ್ಳಿ ಹಾಗೂ ಸುತ್ತಮುತ್ತಲು ಪುನರುಜ್ಜೀವನ ಪಡೆದ ಬಾವಿಗಳು ಮತ್ತು ಕೆರೆಗಳ ಒಟ್ಟು ಮೊತ್ತ ೨.೫ ದಶಲಕ್ಷ ರೂ.ಗಳನ್ನು ದಾಟಿತ್ತು. ಇದಕ್ಕಿಂತ ಪರಿಣಾಮಕಾರಿಯಾದ ಫಲವನ್ನು ದೊರಕಿಸಿಕೊಟ್ಟದ್ದು ಗೋಮಾಳಗಳಲ್ಲಿ ನೀರಿನ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು. ಅವೇ ನಮ್ಮ ಎಲ್ಲ ಕೆಲಸಗಳಿಗೆ ಸಮಗ್ರ ಅರ್ಥವನ್ನು ತಂದುಕೊಟ್ಟಿತು’ ಎನ್ನುತ್ತಾರೆ ಲಕ್ಷ್ಮಣ್.
ಪ್ರತಿ ಹಂತದಲ್ಲೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅವರು ಮರೆಯಲಿಲ್ಲ. ಇದರಿಂದ ಎರಡು ರೀತಿಯ ಪ್ರಯೋಜನಗಳಾದವು ಎನ್ನುತ್ತಾರೆ ಅವರು. ಮೊದಲನೆಯದಾಗಿ ಮಾಡುವ ಕೆಲಸ ನಮ್ಮದು ಎನ್ನುವ ಪ್ರೀತಿ ಜನರಲ್ಲಿ ಮೂಡಿತು. ಅದಕ್ಕಿಂತ ಹೆಚ್ಚಾಗಿ ಒತ್ತುವರಿ ತೆರವಿನಂಥ ಸಂದರ್ಭದಲ್ಲಿ ಬರುವ ವಿರೋಧ ಎದುರಿಸುವುದು ಸುಲಭವಾಯಿತು. ಗೋಮಾಳಗಳ ಅಭಿವೃದ್ಧಿಯಲ್ಲಿ ಮೊದಲು ಮಾಡಿದ ಕೆಲಸವೇ ಒತ್ತುವರಿ ತೆರವು. ಜತೆಗೆ ಸ್ಥಳೀಯ, ಪಾರಂಪರಿಕ ತಂತ್ರಜ್ಞಾನಗಳು ಸಮುದಾಯದೊಳಗೆ ಹುದುಗಿದ್ದವು. ಬೇರೆಲ್ಲಿಂದಲೋ ಕಂಡು ತರುವ ಉಪಾಯಗಳು ಸ್ಥಳೀಯ ಸಮಸ್ಯೆಗಳನ್ನು ಅಷ್ಟು ಸಮರ್ಥವಾಗಿ ಪರಿಹರಿಸಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಸ್ಥಳೀಯ ತಂತ್ರಜ್ಞಾನವನ್ನು ಹೆಕ್ಕಿ ತೆಗೆಯಲಾಯಿತು. ಇದಕ್ಕಾಗಿ ಸ್ಥಳೀಯ ಭೂಮಿ, ಜಲ, ಕೃಷಿಯ ಬಗ್ಗೆ ಅವುಗಳ ಗುಣ ಲಕ್ಷಣದ ಬಗ್ಗೆ ಖಚಿತ ಮಾಹಿತಿಯನ್ನು ಹೊಂದಿರುವ ವಂಶಪಾರಂಪರ್ಯವಾಗಿ ಬಂದಿರುವ ‘ಗಾಜಿದಾರರ’ನ್ನು ಸಂಘಟನೆಯಲ್ಲಿ ಒಳಗೊಳಿಸಿಕೊಳ್ಳಲಾಯಿತು. ಅವರ ಜ್ಞಾನದ ನೆರವಿನ ಮೇಲೆ ಗೋಮಾಳಗಳ ಅಭಿವೃದ್ಧಿಯ ಕಾರ್ಯಕ್ಕೆ ಅಡಿಯಿಡಲಾಯಿತು. ಭೂಮಿಯ ಸ್ವರೂಪ, ಅದರ ನೀರಿಂಗುವ ಸಾಮರ್ಥ್ಯ, ಮಳೆ ಸರಾಸರಿ, ಭೂಮಿಯಲ್ಲಿನ ತೇವಾಂಶದ ಪ್ರಮಾಣ, ಇಳಿಜಾರಿನ ಮಟ್ಟ ಇತ್ಯಾದಿಗಳ ಬಗ್ಗೆ ಅವರಲ್ಲಿ ನಿಖರವಾದ ಅಂಕಿ ಅಂಶಗಳ ಸಮೇತ ಮಾಹಿತಿಗಳಿದ್ದವು. ಇದನ್ನು ಆಧರಿಸಿಯೇ ಊರಿನ ತ್ಯಾಜ್ಯ ನೀರು ಹಾಗೂ ಮಳೆನೀರಿನ ಮರು ಬಳಕೆಯ ಬಗ್ಗೆ ಯೋಜನೆ ರೂಪಿಸಲಾಯಿತು. ಜಲನಕ್ಷೆ ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ. ಬಿದ್ದ ಮಳೆ ನೀರು ಹಾಗೂ ತ್ಯಾಜ್ಯ ಎತ್ತಲಿಂದ ಎತ್ತ ಹರಿಯುತ್ತದೆ ? ಅದು ಕೊನೆಯಲ್ಲಿ ಹೋಗಿ ಸೇರುವುದೆಲ್ಲಿಗೆ ? ನಿಜವಾಗಿ ಕಾಲದ ಗತಿಯಲ್ಲಿ ಅವು ಹಾದಿ ತಪ್ಪಿದ್ದೆಲ್ಲಿ ಎಂಬಿತ್ಯಾದಿಗಳ ಕುರಿತು ಕೂಲಂಕಷ ಮಾಹಿತಿಯನ್ನು ಸಂಗ್ರಹಿಸಲಾಯಿತು. ಇದನ್ನು ಒಳಗೊಂಡ ಸಮಗ್ರ ಜಲ ನಕ್ಷೆಯನ್ನು ರೂಪಿಸಲಾಯಿತು. ಇದಕ್ಕನುಗುಣವಾಗಿ ಊರಿನ ಗೋಮಾಳಗಳು ಸೇರಿದಂತೆ ಸುತ್ತಲಿನ ಜಲಸೂರಿ(ಜಲಾನಯನ)ನತ್ತ ನೀರನ್ನು ಹರಿಸಿಕೊಂಡು ಹೋಗಿ ಅಲ್ಲಿ ಎಲ್ಲವೂ ಇಂಗುವಂತೆ ಮಾಡಲಾಯಿತು. ಹಾಗೆ ಹರಿದು ಹೋಗುವ ನೀರಿಗೆ ಕೃಷಿ ಜಮೀನುಗಳಲ್ಲಿ ಹಾದಿ ಮಾಡಿಕೊಟ್ಟದ್ದು ವಿಶೇಷ ಫಲಿತಾಂಶವನ್ನು ನೀಡಿತು.
ಇಲ್ಲಿ ಅತ್ಯಂತ ಒತ್ತು ಕೊಟ್ಟ ಅಂಶವೆಂದರೆ ಹಳ್ಳಿಯ ಎಲ್ಲ ಭೂಮಿಯನ್ನೂ ಬಳಕೆಗೆ ತಂದುಕೊಂಡದ್ದು. ಇಷ್ಟು ಮಾಡುವ ಹೊತ್ತಿಗೆ ಗ್ರಾಮವಾಸಿಗಳೆಲ್ಲರಿಗೂ ತಮ್ಮ ಸುತ್ತಲಿನ ನೀರು, ಭೂಮಿ ಸೇರಿದಂತೆ ಒಟ್ಟಾರೆ ನಿಸರ್ಗದ ಬಗ್ಗೆ ಸಮಗ್ರ ಮಾಹಿತಿ ದಕ್ಕಿತ್ತು. ಏನು ಮಾಡಿದರೆ ಏನಾದೀತು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ದೊರೆಯಿತು. ತಾನು ತನ್ನ ಭೂಮಿಯಲ್ಲಿ ಏನು ಬೆಳೆಯಬೇಕು, ಅದರ ನಿರ್ವಹಣೆಗೆ ಎಷ್ಟು ನೀರು ಬೇಕಾದೀತು...ಯಾವುದು ತನಗೆ ನಷ್ಟ ತರಲಿದೆ...ಹೀಗೆ ಪ್ರತಿಯೊಬ್ಬ ರೈತನೂ ವೈಜ್ಞಾನಿಕವಾಗಿ ವಿಶ್ಲೇಷಣೆಗಿಳಿಯುವ ಮಟ್ಟಕ್ಕೆ ಬೆಳೆದು ನಿಂತಿದ್ದ. ಆತನೇ ಸ್ವತಂತ್ರವಾಗಿ ಕಾಲುವೆಗಳ ಮೂಲಕ ತ್ಯಾಜ್ಯ, ಹೆಚ್ಚುವರಿ ನೀರನ್ನು ಹರಿಸಿಕೊಂಡು ಹೋಗಬಲ್ಲವನಾಗಿದ್ದ. ಮಳೆ ನೀರನ್ನು ಜಮೀನಿನಲ್ಲಿಯೇ ಹೇಗೆ ಇಂಗಿಸಿಕೊಳ್ಳಬೇಕು, ಹೆಚ್ಚಿನ ನೀರನ್ನು ಎಲ್ಲಿಗೆ ಕೊಂಡೊಯ್ದು ಬಿಡಬೇಕು ಎಂಬುದರ ಬಗ್ಗೆ ಸಮಗ್ರವಾದ ನೀತಿಯನ್ನು ರೈತರೇ ನಿರ್ಧರಿಸಿಕೊಂಡರು. ಈ ಹಂತದಲ್ಲಿ ಸಾಕಷ್ಟು ಎಚ್ಚರವನ್ನೂ ಪಾಲಿಸಲಾಯಿತು. ಮತ್ತೆಂದೂ ಅಂತರ್ಜಲಕ್ಕಾಗಲೀ, ಭೂಮಿಯ ಮೇಲಿನ ಜಲಮೂಲಕ್ಕಾಗಿಯಾಗಲೀ ಧಕ್ಕೆ ತಾರದಂತೆ ಜಾಗೃತಿ ಮೂಡಿಸಲಾಗಿತ್ತು. ಇದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಯಿತು ಎಂದು ನಿಟ್ಟುಸಿರು ಬಿಡುತ್ತಾರೆ ಲಕ್ಷ್ಮಣ್.
‘ಜೀವ ಸಂಸ್ಕೃತಿಯೆಡೆಗಿನ ಪಯಣ’ದಲ್ಲಿ ಪ್ರಾಣಿ-ಪಕ್ಷಿಗಳ ಸಹಜ ಬದುಕು, ಪರಿಸರ ವ್ಯವಸ್ಥೆ, ಜಲ ಸಂರಕ್ಷಣೆ ಹಾಗೂ ಕೃಷಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಳ್ಳಲಾಗಿತ್ತು. ಭೂಮಿಯನ್ನೂ ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿತ್ತು. ಮೊದಲನೆಯದ್ದು ನೀರಾವರಿಗೆ ಮೀಸಲಾದರೆ ಇನ್ನೊಂದನ್ನು ಕಡ್ಡಾಯವಾಗಿ ಗೋಮಾಳವನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮದ ಇನ್ನೊಂದು ಪಾರ್ಶ್ವದಲ್ಲಿ ಸಹಜ ನಿಸರ್ಗದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಳ್ಳಲಾಗಿತ್ತು. ಅಲ್ಲಿ ಮಾನವ ಪ್ರವೇಶವನ್ನೇ ನಿರ್ಬಂಸಿದ್ದು ಗಮನಾರ್ಹ. ವಿಕೃತಿಗಳೆಲ್ಲ ಮಾಯವಾಗಿ ನಿಜವಾದ ಸಂಸ್ಕೃತಿ ಎಂಬುದು ಮೊಳೆಯಲಾರಂಭಿಸಿದ್ದೇ ಆವಾಗ. ಅದೇ ಇಂದಿನ ಲಾಪೋಡಿಯಾದ ಸತ್ವಯುತ ಬದುಕನ್ನು ಅರಳಿಸಿದ್ದು ಎನ್ನುವಾಗ ಲಕ್ಷ್ಮಣ್ ಮುಖದಲ್ಲಿ ಆಯಾಸ ವಿರಲಿಲ್ಲ. ಬದಲಿಗೆ ಹೆಮ್ಮೆಯ ಮುಖಭಾವದೊಂದಿಗೆ ಅವರು ಕಿರು ನಗೆ ಹೊಮ್ಮಿಸುತ್ತಿದ್ದರು.
‘ಲಾಸ್ಟ್’ಡ್ರಾಪ್: ನಿಸರ್ಗದ ಸಾಮೀಪ್ಯಕ್ಕೆ ಬಂದ ಮೇಲೆಯೇ ಲಾಪೋಡಿಯಾದ ಜನ ಬರಗಾಲವನ್ನು ಬಗಲಲ್ಲಿ ಇಟ್ಟುಕೊಂಡೇ ನಗುತ್ತಾ ಬದುಕುವುದನ್ನು ಕಲಿತರು. ಅದಕ್ಕಾಗಿಯೇ ಆ ಊರು ಇಂದು ಮಾದರಿಯಾದದ್ದು ಎಂಬುದಕ್ಕೆ ಬೇರೆ ಪುರಾವೆ ಅಗತ್ಯವಿದೆಯೇ ?
No comments:
Post a Comment