Wednesday, April 28, 2010

ಕಾದು ಗಾರಾದ ಮಣ್ಣೊಡಲಿನಿಂದ ಮೊಳೆದ ಜೀವಧಾತು

ಒಂದು ಕಾಲದಲ್ಲಿ ಲಾಪೋಡಿಯಾದ ಬಯಲಲ್ಲಿ ಹೋಗಿ ನಿಂತು ನೀವೊಮ್ಮೆ ನೋಡಬೇಕಿತ್ತು. ಆ ಹಳ್ಳಿಯ ಮೇಲೆ ಒಂದು ಗಾಳಿ ಬೀಸಿ ಬಂದರೆ ಸಾಕು ಯಾರೊಬ್ಬರೂ ಕಣ್ಣು ಬಿಟ್ಟುಕೊಂಡಿರಲು ಸಾಧ್ಯವೇ ಇಲ್ಲ. ಮಾತ್ರವಲ್ಲ. ಧೂಳಿನ ತೇರೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮೆರವಣಿಗೆ ಹೊರಟಂತೆ ಕಾಣುತ್ತಿತ್ತು. ಅಷ್ಟೊಂದು ಒಣ ಒಣಗಿ ನಿಂತಿತ್ತು ನೆಲವೆಂಬುದು. ಮಳೆ ಕಾಣದೇ ಅದೆಷ್ಟೋ ವರ್ಷಗಳಾಗಿತ್ತು. ಆಗಾಗ ಬಿದ್ದ ಮಳೆಯ ಒಂದು ಹನಿಯೂ ಅಲ್ಲಿ ನಿಲ್ಲುವ ಪ್ರಶ್ನೆಯೇ ಇರಲಿಲ್ಲ. ಬಿದ್ದ ಮರುಕ್ಷಣಕ್ಕೆ ಅದೆಲ್ಲಿ ಓಡಿ ಹೋಗಿ ಬಿಡುತ್ತಿತ್ತೋ, ಬಹುಶಃ ಬಿದ್ದ ಮಳೆ ಹನಿಗೂ ಗೊತ್ತಾಗುತ್ತಿತ್ತೋ ಇಲ್ಲವೋ. ಒಂದಷ್ಟು ಮರ-ಗಿಡಗಳಾದರೂ ಇದ್ದಿದ್ದರೆ ಅವು ಬಿದ್ದ ಹನಿಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು ಎನ್ನಲು ಅವನ್ನೆಲ್ಲ ಬೇರು ಸಹಿತ ಕಿತ್ತು , ಅದನ್ನೂ ಮಾರಿಕೊಂಡು ಯಾವುದೋ ಕಾಲವಾಗಿತ್ತು ಅಲ್ಲಿನ ಮಂದಿ.

ಲಾಪೋಡಿಯಾದ ಮಂದಿ ಮರೆತದ್ದೇ ಅದನ್ನು. ಯಾವಾಗ ಊರಿನ ಮೇಲೆ ಪ್ರೀತಿ ತೋರಿ ಬರುತ್ತಿದ್ದ ಮಳೆಯನ್ನೂ ಹೊರಗಟ್ಟಲಾರಂಭಿಸಿದರೋ ಅಂದಿನಿಂದಲೇ ಅವರ ವಲಸೆ ಅನಿವಾರ್ಯವಾಯಿತು. ಅಲ್ಪ ಸ್ವಲ್ಪ ನಿಯತ್ತಿದ್ದು, ದುಡಿದೇ ತಿನ್ನಬೇಕೆಂಬ ಮನೋಭಾವದ ಮಂದಿ ಕೆಲಸ ಹುಡುಕಿಕೊಂಡು ಗುಳೆ ಹೋಗಿದ್ದರು. ಪ್ರಾಣಿ ಪಕ್ಷಿಗಳು ವಲಸೆ ಹೋಗದೆ ಬೇರೆ ಮಾರ್ಗವಿರಲಿಲ್ಲ. ಒಂದೊಮ್ಮೆ ಅಲ್ಲಿಯೇ ಉಳಿದರೆ ಹಸಿವಿನಿಂದ ಸಾಯುವ ಮೊದಲೇ ಜನ ಕೊಂದು ತಿನ್ನುವುದು ಖಚಿತವಾಗಿತ್ತು. ಉಳಿದ ಉಢಾಳ ಮಂದಿ ಲಫಡಾಗಳ ಮೂಲಕ ‘ಲಾಪೋಡಿಯಾ’ ಎಂಬ ಹೆಸರುಳಿಸಲು ತಮ್ಮ ಯಥೇಚ್ಛ ಕೊಡುಗೆ ನೀಡುತ್ತಿದ್ದರು.
ಇವತ್ತು ಪರಿಸ್ಥಿತಿ ಸಂಪೂರ್ಣ ತಿರುವು ಮುರುವಾಗಿದೆ. ಮಳೆಗಾಲದಲ್ಲಿ ಲಾಪೋಡಿಯಾವನ್ನೊಮ್ಮೆ ಏರಿಯಲ್ ಸರ್ವೆ ಮಾಡಿದರೆ ಅಲ್ಲಿ ಹಚ್ಚ ಹಸಿರ ಮೇಲು ಹಾಸು ಹೊದೆಸಿದಂತೆ. ಹಾಗೆಂದು ಮರುಗಾಡಿದ್ದುದು ಏಕಾಏಕಿ ಮಲೆನಾಡಾಗಿ ಪರಿವರ್ತಿತವಾದುದೇನೂ ಅಲ್ಲ. ಗೋವು, ಗೋವಿಗಾಗಿ ಮೇವು- ಇವೆರಡರ ಪ್ರಾಮುಖ್ಯತೆ ಅರಿವಾದದ್ದರ ಪರಿಣಾಮವಿದು.


ಭಾರತೀಯ ಸನ್ನಿವೇಶದಲ್ಲಿ ಗೋವುಗಳಿಲ್ಲದ ಅಭಿವೃದ್ಧಿ, ಜೀವನ ಮಟ್ಟ ಸುಧಾರಣೆ ಎಂಬುದಕ್ಕೆ ಅರ್ಥವೇ ಇಲ್ಲ. ಗೋ ರಹಿತ ಕೃಷಿ ಪರಿಪೂರ್ಣವಾಗಿರುವುದಿಲ್ಲ. ಭಾರತದ ಆರ್ಥಿಕ, ಸಾಮಾಜಿಕ ಬದುಕು ನಿಂತಿರುವುದೇ ಗೋವುಗಳಿಂದ. ಗೋವುಗಳಿಲ್ಲದ ಭಾರತದ ಕೃಷಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜಾನುವಾರುಗಳನ್ನು ಜತೆಗಿಟ್ಟುಕೊಂಡೇ ಊರ ಅಭಿವೃದ್ಧಿಯನ್ನು ಸಾಸಬೇಕೆನ್ನುವುದು ಲಾಪೋಡಿಯಾದ ಪುನರ್ ನಿರ್ಮಾಣದ ಕನಸುಗಾರ ಲಕ್ಷ್ಮಣ್ ಸಿಂಗ್ ಗುರಿಯಾಗಿತ್ತು. ಊರೆಂದರೆ ಅಲ್ಲಿ ಮನುಷ್ಯರು ಮಾತ್ರ ಬದುಕಬೇಕೆಂಬ, ಬೇರೇನಾದರೂ ಇದ್ದರೆ ಅದು ಎಲ್ಲವೂ ಮಾನವನಿಗಾಗಿಯೇ ಎಂಬ ಆಧುನಿಕ ಬಕಾಸುರ ಪ್ರವೃತ್ತಿಯ ಪೊರೆ ಕಳಚಿದ ಬಳಿಕವಷ್ಟೇ ಉಳಿದೆಲ್ಲ ಕಾರ್ಯಗಳಿಗೆ ಅರ್ಥ ಬಂದೀತೆಂಬುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು.
ಯಾಂತ್ರೀಕೃತ ಪಾಶ್ಚಾತ್ಯ ಕೃಷಿ ಪದ್ಧತಿ ಉತ್ಪಾದನಾ ಹೆಚ್ಚಳದ ಗುರಿಯನ್ನು ಮಾತ್ರ ಹೊಂದಿದೆ ಎಂಬುದು ಲಕ್ಷ್ಮಣ್ ಪ್ರತಿಪಾದನೆ. ರಾಸಾಯನಿಕ, ಕೀಟನಾಶಕಗಳು ಸೇರಿದಂತೆ ಎಲ್ಲ ಆಧುನಿಕ ಪರಿಕರಗಳೂ ಇಲ್ಲಿನ ಸದೃಢ ವ್ಯವಸಾಯವನ್ನು, ಸಂಪನ್ಮೂಲಗಳನ್ನೂ ದುರ್ಬಲಗೊಳಿಸುತ್ತ ಸಾಗುತ್ತಿವೆ. ಇದರ ತೀವ್ರತರ ಪರಿಣಾಮಗಳು ಮುಂದಿನ ತಲೆಮಾರಿನ ಭವಿಷ್ಯವನ್ನು ಮಸುಕಾಗಿಸುತ್ತಿದೆ ಎಂಬ ವಾಸ್ತವ ಚಿತ್ರಣ ತೆರೆದಿಡಲು ಲಾಪೋಡಿಯಾಕ್ಕೆ ಹೊರಗಿನಿಂದ ತಜ್ಞರು ಬರಬೇಕಾದ್ದಿರಲಿಲ್ಲ. ಅಲ್ಲಿನ ಪರಂಪರೆಯೇ ಅದನ್ನು ಸಾರುತ್ತಿತ್ತು. ಕೃಷಿ ಮತ್ತು ಹೈನುಗಾರಿಕೆ ಒಟ್ಟೊಟ್ಟಿಗೇ ಸಾಗುತ್ತಿದ್ದ ದಿನಗಳಲ್ಲಿ ಪರಸ್ಪರ ಪೂರಕ ಈ ಅಂಶಗಳೆರಡರಲ್ಲೂ ಸಮೃದ್ಧಿಯನ್ನು ಸಾಸಿದ್ದರು ಅಲ್ಲಿನ ಜನ.


ಲಾಪೋಡಿಯಾದಲ್ಲಿ ಭೂಮಿಯ ಮೇಲ್ಮಣ್ಣು ಸಂಪೂರ್ಣ ನಿಸ್ಸಾರವಾಗಿತ್ತು. ಮರಗಿಡಗಳು ಮಾತ್ರವಲ್ಲ, ಭೂಮಿಗೆ ಹೊದಿಕೆಯಾಗಿದ್ದ ಹುಲ್ಲು, ಕಳೆಗಳೂ ಕಮರಿ ಹೋಗಿತ್ತು, ಇದರಿಂದಾಗಿ ಭೂಮಿಯಲ್ಲಿನ ತೇವಾಂಶ ಬಹುಬೇಗ ಸೂರ್ಯನ ಶಾಖಕ್ಕೆ ತೆರೆದುಕೊಂಡು ಆವಿಯಾಗಿ ಹೋಗುತ್ತಿತ್ತು. ಮಾತ್ರವಲ್ಲ ಬಿಸಿಲ ಗಾರಿಗೆ ಭೂ ಪದರಗಳೆಲ್ಲ ಸಡಿಲಗೊಳ್ಳುವುದರಿಂದ ಮಳೆ ಬಿದ್ದಾಕ್ಷಣ ಲವಣ ಹಾಗೂ ಖನಿಜಾಂಶಗಳು ಸುಲಭವಾಗಿ ಕೊಚ್ಚಿ ಹೋಗುತ್ತಿತ್ತು. ಭೂ ಸವಕಳಿಯೂ ಮಿತಿ ಮೀರಿತ್ತು.


ಇದಕ್ಕಿದ್ದ ಮುಖ್ಯ ಕಾರಣ ಸಸ್ಯಗಳ ಬೇರು ನಾಶ. ಭೂಮಿಯ ತೇವಾಂಶ ರಕ್ಷಣೆಯಲ್ಲಿ ಅತಿ ಮುಖ್ಯಪಾತ್ರ ವಹಿಸುವ ಸಣ್ಣಸಣ್ಣ ಕಳೆಯಂಥವುಗಳು ನೂರಾರು ವರ್ಷಗಳವರೆಗೆ ಭೂಮಿಯಾಳದಲ್ಲಿ ಬೇರುಗಳನ್ನು ಉಳಿಸಿಕೊಂಡು ಬಂದಿರುತ್ತವೆ. ಇಂಥ ಸಸ್ಯರಾಶಿಯ ಬೇರುಗಳು ಮೇಲಕ್ಕೆ ಬಂದು ಬೇಸಿಗೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಒಂದೊಮ್ಮೆ ಅಂಥ ಭೂಮಿಯಲ್ಲಿ ಕೃಷಿ ನಿಲ್ಲಿಸಿದರೆ ಮತ್ತಾ ವುದೇ ಹಸಿರು ಅಲ್ಲಿ ಚಿಗುರದೇ ಬರಡಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ, ಬೀಳುವ ಮಳೆ ನೀರು ಸಹ ಒಳಕ್ಕೆ ಇಳಿಯಲು ಆಸ್ಪದವಿಲ್ಲದಂತಾಗಿ ಆ ಭಾಗದ ಅಂತರ್ಜಲ ಕುಸಿಯುತ್ತ ಸಾಗುತ್ತದೆ. ಅದೇ ಆಗಿತ್ತು ಲಾಪೋಡಿಯಾದಲ್ಲಿ. ಇವೆಲ್ಲವುಗಳಿಂದ ಭೂ ಸವಕಳಿ ಮಿತಿ ಮೀರಿತ್ತು. ಸಡಿಲಗೊಂಡ ಭೂಮಿಯ ಮೇಲ್ಮೈ ಮಳೆಗಾಲದಲ್ಲಿ ಅತ್ಯಂತ ಸುಲಭವಾಗಿ ಕೊಚ್ಚಿ ಹೋಗುತ್ತಿತ್ತು. ಇದರಿಂದ ಎರಡು ರೀತಿಯ ನಷ್ಟವಾಗಿತ್ತು. ಭೂಮಿಗೆ ಹಾಕಿದ ಸಾರ ಕೊಚ್ಚಿ ಹೋಗಿದ್ದಲ್ಲದೇ, ನೀರು ಹೋಗಿ ಸೇರುವ ಕೆರೆ ಇತ್ಯಾದಿ ಜಲಮೂಲಗಳಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ತುಂಬಿತ್ತು. ಕಾಲಕ್ರಮೇಣ ಅವು ಬತ್ತಿ ಬರಿದಾಗಿದ್ದವು.
ಮಣ್ಣಿನಲ್ಲಿರುವ ಎರೆಹುಳು, ಕಪ್ಪೆಯಂಥ ರೈತಸ್ನೇಹಿ ಜೀವಸಂಕುಲ ಸಂಪೂರ್ಣ ನಾಶವಾಗಿ, ಭೂಮಿಯೆಂಬುದು ಬಂಜೆತನಕ್ಕೆ ಬಿದ್ದಿತ್ತು. ಇಡೀ ಪ್ರದೇಶದ ಜೈವಿಕ ಕ್ರಿಯೆಯೇ ಏರುಪೇರಾಗುತ್ತಿರುವುದರ ಪರಿಣಾಮ ಗಮನಿಸಿದರು ಲಕ್ಷ್ಮಣ್. ಭೂಮಿಯ ಹೊದಲು ರಕ್ಷಣೆ, ಬೀಜ ಪ್ರಸರಣದಂಥ ಪ್ರಕ್ರಿಯೆಯಲ್ಲಿ ಜೀವ ವೈವಿಧ್ಯದ ಪಾತ್ರ ಅತ್ಯಂತ ಪ್ರಮುಖ. ಸಾಂಪ್ರದಾಯಿಕ ಪದ್ಧತಿಯ ಸಂದರ್ಭದಲ್ಲಿ ಕಂಡು ಬರುತ್ತಿದ್ದ ಇಂಥ ಪರಸ್ಪರ ಪೂರಕ ವ್ಯವಸ್ಥೆಯ ಮರುಸ್ಥಾಪನೆಯನ್ನು ಮುಖ್ಯ ಗುರಿಯಾಗಿಸಿಕೊಂಡದ್ದರಿಂದಲೇ ಅಂದುಕೊಂಡದ್ದನ್ನು ಅವರು ಸಾಸಲು ಸುಲಭವಾಯಿತು.


ಪಕ್ಷಿ ಸಂಕುಲವೂ ರೈತನ ಹೊಲದತ್ತ ಸುಳಿಯುವುದನ್ನೇ ನಿಲ್ಲಿಸಿ ಎಷ್ಟೋ ವರ್ಷಗಳಾಗಿದ್ದವು. ಅವನ್ನು ಮತ್ತೆ ಹೊಲದತ್ತ ತರಲು ಹೊಲದಲ್ಲಿ ಸುಮ್ಮನೆ ಕಾಳುಗಳನ್ನು ಚೆಲ್ಲಲಾಯಿತು. ಹೊಲದತ್ತ ಆಕರ್ಷಿತಗೊಳ್ಳುವ ಹಕ್ಕಿಗಳು ಬೆಳೆಯನ್ನು ಬಹುತೇಕ ಕೀಟ ಬಾಧೆಯಿಂದ ಪಾರು ಮಾಡುತ್ತವೆಂಬುದು ಇದರ ಹಿಂದಿನ ಬುದ್ಧಿವಂತಿಕೆ. ಹಕ್ಕಿಗಳೇ ಬಾರದಿದ್ದಲ್ಲಿ ಕೀಟನಿಯಂತ್ರಣದ ಪ್ರಕ್ರಿಯೆಗೆ ಸಹಜವಾಗಿ ಹಿನ್ನಡೆಯಾಗುತ್ತದೆ. ಹೀಗೆ ನಿಸರ್ಗದ ಒಂದು ಚಕ್ರವೇ ಏರುಪೇರಾಗಿ ಸಮತೋಲನ ತಪ್ಪುತ್ತಿದ್ದುದನ್ನು ಮತ್ತೆ ಸುಲಲಿತ ಚಲನೆಗೆ ತಂದಾಗಲೇ ಬದುಕಿನ ಭದ್ರತೆ ಕಾಣಸಿಕ್ಕಿದ್ದು.


ವಿಶೇಷವೆಂದರೆ ಊರಿನ ಎಲ್ಲ ಸಮಸ್ಯೆಗೂ ಲಕ್ಷ್ಮಣ್ ಕಂಡುಕೊಂಡ ಕಾರಣ ಹಾಗೂ ಪರಿಹಾರ ಎರಡೂ ಗೋವು ಆಗಿತ್ತು. ಊರ ಬದುಕಿನ ಜೀವಾಳವಾಗಿದ್ದ ಹೈನುಗಾರಿಕೆ ಹಳಿ ತಪ್ಪಿದ್ದರಿಂದ ಇಡೀ ಆರ್ಥಿಕತೆಯೇ ಕುಸಿದು ಬಿದ್ದಿತ್ತು. ಉಳುಮೆಯಿಂದ ಆರಂಭಿಸಿ ಕೊಯ್ದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಸಂಪೂರ್ಣ ಗೋವುಗಳನ್ನೇ ಅವಲಂಬಿಸಿ ನಡೆಯುತ್ತಿದ್ದ ಕೃಷಿ ದುಬಾರಿಯಾಗಿರಲಿಲ್ಲ. ಅಂಥ ಸಹಜ ಕೃಷಿಯನ್ನು ಆದ್ಯತೆಯಾಗಿ ಗುರುತಿಸಿದರು ಜಲ ಯೋಧರು. ಇದರೊಂದಿಗೆ ಇನ್ನು ಕೊಟ್ಟಿಗೆ ಗೊಬ್ಬರದಂಥ ಸಾವಯವ ಸಾರ ಬಳಕೆಗೆ ಮೊದಲು ಮಾಡಿದರು. ಸಾಗಾಟದ ಮಾಧ್ಯಮವಾಗಿ ಎತ್ತಿನ ಬಂಡಿಯ ಬಳಕೆ ಹೆಚ್ಚಿಸಲಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ಹಾಲಿನ ಉತ್ಪನ್ನಗಳು ರೈತನ ಆರ್ಥಿಕ ಸ್ಥಿತಿಯ ಸುಧಾರಣೆಗೂ ಕಾರಣವಾಯಿತು. ನೈಜ ಅಭಿವೃದ್ಧಿಗೆ ಭಾಷ್ಯ ಬರೆಯುವುದು ಅಂದರೆ ಇದೇ ಅಲ್ಲವೇ ?

‘ಲಾಸ್ಟ್’ ಡ್ರಾಪ್: ಗೋವು- ಮೇವು- ಕೃಷಿ- ನೀರು ಸರಳವಾಗಿ, ಆದರೆ ಸಂಕೀರ್ಣವಾಗಿ ಹೆಣೆದುಕೊಂಡಿರುವುದೇ ಭಾರತದ ವೈಶಿಷ್ಟ್ಯ.

No comments: