
ಲಕ್ಷ್ಮಣ್‌ಜೀ ಮಾತುಗಳಲ್ಲಿ ನಿಖರತೆ ಇದೆ. ಅನುಭವ ಜನ್ಯ ನುಡಿಗಳವು.-‘ಅದು ಯಾವುದೇ ಪ್ರದೇಶವಿರಬಹುದು ಕೃಷಿ ಸಮಸ್ಯೆಯಾಗಿ ಕಾಡುವುದೇ ಹೊರಗಿನಿಂದ ನೀರನ್ನು ಕೊಡಲು ಆರಂಭಿಸಿದಾಗಿನಿಂದ. ಹೊರಗಿನಿಂದ ಬಂದವರು ಯಾವತ್ತಿಗೂ ಶಾಶ್ವತವಾಗಿರಲು ಸಾಧ್ಯ ಇಲ್ಲ. ಕೃಷಿಯೇ ಜೀವನಾಧಾರವಾಗಿದ್ದ ಲಾಪೋಡಿಯಾ ಮಕಾಡೆ ಮಲಗಿಬಿಟ್ಟಿತ್ತಲ್ಲಾ ಅದಕ್ಕೆ ಕಾರಣವೇ ನೀರು. ಹಾಗೆಂದು ಅಲ್ಲಿನ ಕೃಷಿಗೆ ನೀರನ್ನು ಹೊರಗಿನಿಂದ ತರುವ ಅನಿವಾರ್ಯತೆ ಇದ್ದೇ ಇರಲಿಲ್ಲ. ಆದರೂ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತೆಂದರೆ ಕೇವಲ ನಿರ್ಲಕ್ಷ್ಯದಿಂದ. ‘ಸೌಹಾರ್ದ ಅಭಿವೃದ್ಧಿ’ಯ ಪರಿಕಲ್ಪನೆ ನಮ್ಮ ಗಾಮೀಣ ಜನಮಾನಸದಿಂದ ಯಾವತ್ತು ದೂರಾಯಿತೋ ಅವತ್ತೇ ನೀರು ಊರಿಗೆ ಊರನ್ನೇ ಬಹಿಷ್ಕರಿಸಿ ಹೊರನಡೆಯಿತು. ಹೋಗುವಾಗ ಒಂಟಿಯಾಗಿ ಹೋಗಲಿಲ್ಲ. ಊರವರ ಸುಖವನ್ನು, ಕೃಷಿಯ ಸಮೃದ್ಧಿಯನ್ನು, ಪಾರಿಸಾರಿಕ ಸೌಂದರ್ಯವನ್ನು, ಜೈವಿಕ ನೆಮ್ಮದಿಯನ್ನು ...ಹೀಗೆ ಒಂದರ ಹಿಂದೆ ಒಂದರಂತೆ ಎಲ್ಲವನ್ನೂ ಕರೆದುಕೊಂಡೇ ಹೊರಟಿತ್ತು...ಅವೆಲ್ಲವೂ ಮತ್ತೆ ಊರಿನತ್ತ ಮುಖ ಮಾಡುವುದೇ ನೈಜ ಅಭಿವೃದ್ಧಿ ಎಂದು ನಿರ್ಧರಿಸಿದೆವು. ಮೊದಲು ಹೋದವರು ಮೊದಲು ವಾಪಸಾಗಬೇಕು; ಅವರು ಬಂದರೆ ಉಳಿದೆಲ್ಲರೂ ವಾಪಸಾಗುತ್ತಾರೆ ಎಂದುಕೊಳ್ಳುವ ಹಾಗೆಯೇ ಇಲ್ಲ. ಮೊದಲು ಹೋದ ನೀರನ್ನು ಕರೆತರುವ ಮೊದಲು, ಮೊದಲಿದ್ದ ಎಲ್ಲರನ್ನೂ ಮೊದಲಿನಂತೆಯೇ ಸುಸ್ಥಿತಿಗೆ ತಂದಿಡಬೇಕಾದ ಅಗತ್ಯವಿತ್ತು. ಇದಕ್ಕೆ ತಗುಲಿದ ಸಮಯ ಬರೋಬ್ಬರಿ ೩೦ ವರ್ಷಗಳು. ಯಾವುದು ಮೊದಲು ಬಂತು, ಯಾವುದು ಕೊನೆಗೆ ಎಂಬುದಕ್ಕಿಂತ ಎಲ್ಲವನ್ನೂ ಮರಳಿ ಕರೆ ತರುವ ಹೊತ್ತಿಗೆ ಊರಿನ ಕೃಷಿ ಉತ್ಪಾದನೆ ಎಂಬುದು ಸ್ವತಃ ಕೃಷಿಕರ ಅರಿವಿಗೇ ಬಾರದಂತೆ ಐದು ಪಟ್ಟು ಹೆಚ್ಚಾಗಿತರ್‍ತು....’
ಸುಮಾರು ಎರಡು ತಿಂಗಳ ಹಿಂದೆ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆವರಣದ ಕಾಫೀ ಡೆ ಮುಂದಿನ ಅರಳೀ ಕಟ್ಟೆಯ ನೆರಳಲ್ಲಿ ಲಕ್ಷ್ಮಣ್‌ಜೀ ನಿರರ್ಗಳವಾಗಿ ನೀರಿನ ಬಗೆಗೆ ಮಾತನಾಡುತ್ತಿದ್ದರೆ, ಎದುರಿಗಿದ್ದ ನಾನು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಗ್ರಾಹಕ ಮಹೇಶ್‌ಭಟ್ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇದೇನು ಈ ಮನುಷ್ಯನ ಕೈಲಿ ಮಾಯಾದಂಡವಿದೆಯೇ ? ಮನದಲ್ಲಿ ಮೂಡಿದ ಪ್ರಶ್ನೆಯನ್ನು ಎದುರಿದ್ದ ಅವರಿಗೇ ಎಸೆದರೆ ತೊಟ್ಟ ಅಂಗಿಯಷ್ಟೇ ಅಚ್ಚ ಬಿಳಿಯ ನಗು ನಕ್ಕು ಮಾತ್ತೆ ಮಾತಿಗೆ ಶುರುವಿಟ್ಟುಕೊಂಡರು ಲಕ್ಷ್ಮ ಣ್‌ಜೀ...
ಅನ್ನ ಸಾಗರ್ (ಲಾಪೋಡಿಯಾದಲ್ಲಿ ಜಲಯೋಧರಿಂದ ಪುನರುಜ್ಜೀವನಗೊಂಡ ಬೃಹತ್ ತಾಲಾಬ್) ಅಭಿವೃದ್ಧಿಯಿಂದಲೇ ಆರಂಭಗೊಂಡದ್ದು ಊರಿನ ಅಭಿವೃದ್ಧಿಯ ಶಖೆ. ಇಪ್ಪತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಊರಿನ ಹೊಲಗಳಲ್ಲಿ ಗೋ ತೆನೆಯೊಡೆಯಿತು. ನೀರಾವರಿ ಜಮೀನಿನ ಪ್ರಮಾಣ ೩೦೦ ಹೆಕ್ಟೇರ್‌ನಿಂದ ೧೫೦೦ ಹೆಕ್ಟೇರ್‌ಗೆ ಏರಿತು. ಕೃಷಿ ಉತ್ಪಾದನೆ ಏನಿಲ್ಲವೆಂದರೂ ಐದುಪಟ್ಟು ಹೆಚ್ಚಳ ಕಂಡಿತು. ಒಂದು ಕಾಲದಲ್ಲಿ ಅತ್ಯುತ್ತಮ ಮಳೆಯಾದರೆ ಮಾತ್ರ ನೇಗಿಲು ಹಿಡಿಯುತ್ತಿದ್ದ ಮಂದಿ ಆಟ ಆಡಿಕೊಂಡು ವರ್ಷಕ್ಕೆ ಎರಡು ನೀರಾವರಿ ಬೆಳೆ ತೆಗೆಯಲಾರಂಭಿಸಿದರು. ಕುಟುಂಬದ ಆದಾಯ ಹೆಚ್ಚೆಂದರೆ ೫೦೦ರೂ. ಇದ್ದದ್ದು ೧೭ ಸಾವಿರ ದಾಟಿತು. ಇದೆಲ್ಲ ಮಂತ್ರದಂಡದಿಂದ ಆಗುವಂಥದ್ದಲ್ಲ. ಹಾಗಾಗಿಯೂ ಇಲ್ಲ. ಆದದ್ದೆಲ್ಲ ಸಂಘಟಿತ ಪರಿಶ್ರಮದಿಂದ. ಸಾಮೂಹಿಕ ಹೊಣೆ ನಿರ್ವಹಣೆಯಿಂದ...
ಇನ್ನೂ ಲಕ್ಷ್ಮಣ್ ಮಾತು ಮುಗಿದಿರಲಿಲ್ಲ. ಮಹೇಶ್ ಭಟ್‌ಗೆ ಏನೋ ನೆನಪಾದಂತಾಗಿ ಕಳೆದ ವರ್ಷ ಲಾಪೋಡಿಯಾದಲ್ಲಿ ಸುತ್ತಾಡಿದ ಸಂದರ್ಭದಲ್ಲಿ ಕಂಡ ನುಣುಪಾದ ಹುಲ್ಲೊಂದರ ಬಗ್ಗೆ ಕೇಳಿದರು. ಇವರಿಗೆ ಅದರ ಹೆಸರು ಮರೆತು ಹೋಗಿತ್ತು. ಅವರಿಗೆ ಯಾವುದೆಂಬುದು ತಟ್ಟನೆ ಹೊಳೆಯಲಿಲ್ಲ. ಕೊನೆಗೆ ಲಕ್ಷ್ಮಣ್‌ಸಿಂಗ್‌ರಂತೆ ವಿಭಿನ್ನ ಕ್ಷೇತ್ರದಲ್ಲಿ ಹಲವು ಬಗೆಯ ಸಾಧನೆ ಮಾಡಿದವರ ಬಗೆಗೆ ಹೊರತಂದಿರುವ, ತಮ್ಮದೇ ಸಂಪಾದಕತ್ವದ ನುಡಿಚಿತ್ರಗಳ ಸಂಕಲನ ‘ಅನ್‌ಸಂಗ್’ ಅನ್ನು ಹೊರತೆಗೆದರು. ಕಪ್ಪು ಬಿಳುಪು ಸುಂದರಿಯಂತೆ ಕಂಗೊಳಿಸುತ್ತಿದ್ದ ಮುದ್ದಾದ ಆ ಪುಸ್ತಕದ ಯಾವುದೋ ಪುಟವೊಂದನ್ನು ತಿರುಗಿಸಿ ಮುಂದೆ ಹಿಡಿದರು ಮಹೇಶ್ ಭಟ್. ‘ವೋ ದೂಬ್ ಹೈ’ ಲಕ್ಷ್ಮಣ್ ಇಮ್ಮಡಿಯ ಉತ್ಸಾಹದೊಂದಿಗೆ ಅದರ ಬಗೆಗೆ ಹೇಳಲಾರಂಭಿಸಿದರು.
ಬರಡು ನೆಲವೂ ಹಸಿರಾಗಬೇಕು. ಊರಿನ ಜಾನುವಾರುಗಳ ಹಸಿವೂ ಇಂಗಬೇಕು. ಇದಕ್ಕೆ ಪರಿಹಾರವಾಗಿ ಕಂಡದ್ದು ದೂಬ್. ಅತ್ಯಂತ ಸಣ್ಣ ಎಳೆಯ, ಪುಟ್ಟ ಹುಲ್ಲಿನ ಜಾತಿಯ ಈ ಗಿಡ, ಅತ್ಯಂತ ಕಡಿಮೆ ನೀರಿನಲ್ಲಿ ಚಿಗುರೊಡೆಯಬಲ್ಲುದು. ಲಾಪೋಡಿಯಾದಲ್ಲಿ ಚೌಕಾಪದ್ಧತಿಯನ್ನು ಪರಿಚಯಿಸಿದ ಮೇಲೆ ಅದರ ನಡುವೆಲ್ಲ ಇಂಥ ಗರಿಕೆ ಹುಲ್ಲು ಯಥೇಚ್ಛವಾಗಿ ಬೆಳೆಯಲಾರಂಬಿಸಿತು. ಜಾನುವಾರುಗಳನ್ನು ಅಲ್ಲಿ ಸ್ವತಂತ್ರವಾಗಿ ಮೇಯಲು ಬಿಡಲಾಯಿತು. ಇದರಿಂದ ಮೇವಿನ ಸಮಸ್ಯೆ ನಿವಾರಣೆಯಾದದ್ದು ಮಾತ್ರವಲ್ಲ, ಹೈನುಗಾರಿಕೆ ನಿರೀಕ್ಷಿದ್ದಕ್ಕಿಂತ ವೇಗವಾಗಿ ಅಭಿವೃದ್ಧಿ ಕಂಡಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಐದೇ ವರ್ಷಗಳಲ್ಲಿ ಗೋತ್ಯಾಜ್ಯಗಳಿಂದ ಬರಡು ಭೂಮಿ ಹಸನಾಯಿತು. ಊರಲ್ಲಿ ವೇಸ್ಟ್ ಲ್ಯಾಂಡ್ ಎನ್ನುವ ಮಾತೇ ಮರೆತು ಹೋಯಿತು. ಇದೇ ರೀತಿ ಸ್ವಾಭಾವಿಕ ಅರಣ್ಯಕ್ಕೆ ಇಂಬು ನೀಡಿದ ಇನ್ನೊಮದು ಬೆಳೆ ‘ಕರೆಂಡಾ’ಕಾಯಿಯದ್ದು. ತೀರಾ ಹೆಮ್ಮರವಾಗೇನೂ ಬೆಳೆಯದ, ಅತ್ಯಂತ ಕಡಿಮೆ ನೀರನ್ನು ಬೇಡುವ ಕರೆಂಡಾ ನೀರನ ಮಟ್ಟವನ್ನು ಹೆಚ್ಚಿಸಿದ್ದಲ್ಲದೇ ಕೃಷಿಗೆ ನೆರಳಾಗಿಯೂ ನಿಂತಿತು. ಸೌಹಾರ್ದ ಅಭಿವೃದ್ಧಿಯೆಂದರೆ ಇದೇ. ಒಂದಕ್ಕೊಂದು ಪೂರವಾಗಿ ಸಾಗುವುದೇ ನಿಜವಾದ ಅಭಿವೃದ್ಧಿ. ಅದೇ ಲಾಪೋಡಿಯಾದ ಪರಿವಥ್ನೆಯ ವಿಶೇಷ.
ಮತ್ತೆ ಲಕ್ಷ್ಮಣ್‌ರ ಮಾತು ಕೃಷಿಯತ್ತ ಹೊರಳಿತು. ಮನಸ್ಸು ನೆನೆಪಿನಾಳಕ್ಕೆ ಜಿಗಿದಿದ್ದಿರಬೇಕು. ಮುಖದಲ್ಲಿ ಒಮ್ಮೆಲೆ ಹೊಳಪು ನುಗ್ಗಿ ಬಂತು....‘ಅದು ೧೯೯೬ನೇ ಇಸವಿ. ಲಾಪೋಡಿಯಾದ ಪಾಲಿಗೆ ಅದು ಸುವರ್ಣ ವರ್ಷ. ಗ್ರಾಮದ ಮನೆಮನೆಗಳಲ್ಲಿನ ಕಣಜ ಮೇವು-ಧಾನ್ಯಗಳಿಂದ ಆ ವರ್ಷ ಅಕ್ಷರಶಃ ತುಂಬಿ ತುಳುಕಿತು. ನೀರೆಚ್ಚರದ ಕೆಲಸಗಳ ನಿಜವಾದ ಫಲ ರಿವಿಗೆ ಬಂದದ್ದು ಆ ವರ್ಷವೇ. ತೀರಾ ಕಡಿಮೆ ಮಳೆ ಸರಾಸರಿಯಲ್ಲಿ ಅವತ್ತು ಅತ್ಯಕ ಕೃಷಿ ಉತ್ಪಾದನೆಯನ್ನು ಊರಿನ ರೈತ ಕಂಡಿದ್ದ. ಅದಕ್ಕೂ ವಿಶೇಷವೆಂದರೆ ಇಷ್ಟಾಗುವ ಹೊತ್ತಿಗೆ ಇಡೀ ರಾಜ್ಯ ಸತತ ಮುರು ವರ್ಷಗಳ ತೀವ್ರ ಬರವನ್ನು ಕಂಡಿತ್ತು. ಆದರೆ ಅದು ಒಂದಿನಿತೂ ಲಾಪೋಡಿಯಾವನ್ನು ಬಾಸಲಿಲ್ಲ. ಅಷ್ಟರ ಮಟ್ಟಿಗಿನ ಜಲ ಸಮೃದ್ಧಿಯನ್ನು ನೀರೆಚ್ಚರದ ಕ್ರಮಗಳಿಂದ ಊರು ಕಂಡಿತ್ತು. ೨೦೦೧ ನೇ ಇಸ್ವಿಯಲ್ಲಂತೂ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯ ಹೆಡ್‌ಲೈನ್‌ಗಳಲ್ಲಿ ಲಾಪೋಡಿಯಾದ ಹೆಸರು ಕಂಗೊಳಿಸಿತ್ತು. ನೀರು ಅಂಥದ್ದೊಂದು ಅವಕಾಶವನ್ನು ಸೃಷ್ಟಿ ಮಾಡಿತ್ತು ಅದುವರೆಗೆ ಲಾಪೋಡಿಯಾದ ಬಗೆಗೆ ಇದ್ದ ಕಳಂಕವೆಲ್ಲಆದೊಂದುೠರಗಾಲ ತೊಳೆದು ಹಾಕಿಬಿಟ್ಟಿತ್ತು. ಇಡೀ ಜಿಲ್ಲೆಯಲ್ಲಿ ಆ ವರ್ಷದ ಬೇಸಿಗೆಯಲ್ಲಿ ಟ್ಯಾಂಕರ್ ನೀರನ್ನು ಮುಟ್ಟದೇ ಜೀವನ ಸಾಗಿಸಿದ್ದರೆ ಅದು ಲಾಪೋಡಿಯನ್ನರು ಮಾತ್ರ. ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟೂ ಮಳೆ ೩೪೮ ಮಿ.ಮೀ. ಮಾತ್ರ. ಹಾಗಿದ್ದರೂ ಊರಿನ ಬಾವಿಗಳಲ್ಲಿ ಕೇವಲ ೪೫ ಅಡಿಗಳಿಗೇ ನೀರು ಸಿಕ್ಕುತ್ತಿತ್ತು. ನಂತರದ ದಿನಗಳಲ್ಲಿ ಲಾಪೋಡಿಯಾದ ಈ ಮಾದರಿ ಸುತ್ತಲಿನ ೯೦ ಹಳ್ಳಿಗಳಿಗೆ ವಿಸ್ತಾರಗೊಂಡಿತು. ತೋಂಕ್, ಜೈಪುರ ಮತ್ತು ಪಾಲಿ ಸೇರಿದಂತೆ ಹಲವು ಜಿಲ್ಲೆಗಳ ೪೦ ಸಾವಿರ ಕುಟುಂಬಗಳಿಗೀಗ ನೀರ ನೆಮ್ಮದಿ. ೩೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಸಿರು ಬೆಳೆ ನಳನಳಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಪ್ರತಿ ಹೆಣ್ಣು ಮಗಳೂ ಸ್ವಾವಲಂಬಿಯಾಗಿದ್ದಾಳೆ...’
ಲಕ್ಷ್ಮಣ್ ಇನ್ನೂ ಅದೆಷ್ಟೋ ಸಂಗತಿಗಳನ್ನು ಹೇಳುವವರಿದ್ದರು. ಆದರೆ ಸಮಯ ಸಂಕೋಚ ಅದಕ್ಕೆ ಅವಕಾಶ ಕೊಡಲಿಲ್ಲ. ಲಾಪೋಡಿಯಾದ ನೀರ ಬ್ರಹ್ಮನ ಮರು ಸೃಷ್ಟಿಯನ್ನು ಕಣ್ಣಾರೆ ಕಂಡು ಬರುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವರ್ಷದ ದೀಪಾವಳಿ ಬೆಳಗಿನಲ್ಲಿ ನಡೆಯುವ ಜಲ ತೇರಿಗೆ ತಮ್ಮೂರಿಗೆ ಅತ್ಯಂತ ಆತ್ಮೀಯವಾಗಿ ಆಹ್ವಾನಿಸಿದ್ದಾರೆ ಲಕ್ಷ್ಮಣ್‌ಜೀ. ಆ ದಿನಕ್ಕಾಗಿ ಕಾತರ ಹೆಚ್ಚುತ್ತಿದೆ. ಸದ್ಯಕ್ಕೆ ಕಳೆದ ಹತ್ತು ವಾರಗಳಿಂದ ನಡೆಸಿದ್ದ ಲಾಪೋಡಿಯಾದ ಅಕ್ಷರ ಯಾತ್ರೆಗೆ ವಿರಾಮ.
1 comment:
ರಾಧಾಕೃಷ್ಣರೇ...ನಿಮ್ಮ ಲೇಖನವನ್ನೂ ನಾನು ಬಿಟ್ಟ ಬಾಯಿಯಿಂದ ಮನಸಿನೊಳಗೇ ನಾನ್ ಸ್ಟಾಪ್ ಓದಿದೆ...ಬಹಳ ಚನ್ನಾಗಿ ಓದಿಸಿಕೊಂಡು ಹೋಗುವ ಕೃಷಿಕ ಛಲಯೋಗಿಯ ಬಗ್ಗೆಯ ಈ ಕಥೆ...ನನ್ನನ್ನು ಹಾಗೇ ಕಟ್ಟಿ ಹಾಕಿತು...ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ (ಈಗಿನ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಪದವೀಧರ ನಾನು) ಸಂಬಂಧಿಯಾದ ನಾನು ಹಾಗೂ ಬಾಲ್ಯದಲ್ಲಿ ಕೃಷಿಯ ಅನುಭವದಿಂದಲೇ ಬೆಳೆದ ನನಗೆ ಇಂದಿನ ಕೃಷಿಕನ ಸಮಸ್ಯೆಗಳಲ್ಲೊಂದಾದ ನೀರಾವರಿ ಸಮಸ್ಯೆಯ ಜಾಡು ಹಿಡಿದು ಬರೆದ ಈ ಲೇಖನ ಹಿಡಿಸಿತು...ಸಮಯ ಸಿಕ್ಕಾಗಲೆಲ್ಲ ನಿಮ್ಮ ಬ್ಲಾಗಿನತ್ತ ಬಾಗುವೆ..ದಿಟ!
Post a Comment