Wednesday, April 28, 2010

ಉಳಿಸಲು ನೀರು, ಹೊರಟಿದೆ ಭಾವಜಾಗರಣದ ತೇರು

ಲ್ಲಿ ಅದೆಂಥಾ ಸಂಭ್ರಮವಿರುತ್ತದೆ ಎಂದರೆ ಒಬ್ಬೊಬ್ಬರೂ ಮೈಮೇಲೆ ಪರಿವೆಯೇ ಇಲ್ಲದಂತೆ ಹುಚ್ಚೆದ್ದು ಕುಣಿಯುತ್ತಿರುತ್ತಾರೆ. ಭಾಜಾ ಭಜಂತ್ರಿಯ ಲಯಕ್ಕೆ ತಕ್ಕಂತೆ ಅವರ ಹೆಜ್ಜೆಗಳು ಆಡುತ್ತಿರುತ್ತದೆ. ಹೆಂಗಸರು ಮಕ್ಕಳೆನ್ನದೆ ಎಲ್ಲರೂ ಅಲ್ಲಿ ನೃತ್ಯದಲ್ಲಿ ಪಾಲುದಾರರೇ. ವೃದ್ಧರಿಗೂ ಇದರಿಂದ ರಿಯಾಯಿತಿ ಇಲ್ಲ. ಅವರೂ ಹೆಜ್ಜೆ ಹಾಕಬೇಕು. ಗಂಡಸರಂತೂ ತಂತಮ್ಮ ಪೌರುಷಕ್ಕನುಗುಣವಾಗಿ ಸಾಹಸಗಳನ್ನು ಮೆರೆಯುತ್ತಿರುತ್ತಾರೆ. ಬಹುತೇಕ ಗಂಡಸರ ತಲೆಯ ಮೇಲೆ ಹಳದಿ, ಕೆಂಪು, ಬಿಳಿ... ಹೀಗೆ ಒಂದಿಲ್ಲೊಂದು ಗಾಢ ಬಣ್ಣದ ರುಮಾಲು ವಿಜೃಂಭಿಸಿರುತ್ತದೆ. ಪಕ್ಕಾ ಸಾಂಪ್ರದಾಯಿಕ ಬಿಳಿಯ ಧೋತಿ, ಉದ್ದದ ಕುರ್ತಾ ಎಲ್ಲರ ಸಾಮಾನ್ಯ ಉಡುಗೆ. ಮಹಿಳೆಯರ ಗುಂಪಂತೂ ಬಣ್ಣದ ಚಿಟ್ಟೆಗಳ ಸಮೂಹದಂತೆ ಕಂಗೊಳಿಸುತ್ತಿರುತ್ತದೆ. ಬಣ್ಣ ಬಣ್ಣದ ರಾಜಸ್ಥಾನೀ ಉಡುಗೆ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ...

ಊರ ಜಹಗೀರದಾರ ಲಕ್ಷ್ಮಣ್ ಸಿಂಗ್ ನೇತೃತ್ವದಲ್ಲಿ ಒಂದು ತಾಲಾಬ್‌ನಿಂದ ಮತ್ತೊಂದು ತಾಲಾಬ್‌ಗೆ ಹೊರಟ ಮೆರವಣಿಗೆಯದು. ಫಕ್ಕನೆ ನೋಡಿದರೆ ಯಾವುದೇ ಜಾತ್ರೆಯನ್ನು ನೆನಪಿಗೆ ತರಬಲ್ಲ ಸನ್ನಿವೇಶ ಅಲ್ಲಿ ನಿರ್ಮಾಣವಾಗಿರುತ್ತದೆ. ತೇರೆಳೆಯಲು ಪೈಪೋಟಿಯಿಂದ ಮುನ್ನುಗ್ಗುವ ಯುವಕರ ಪಡೆಯೇ ಅಲ್ಲಿದೆ. ಹೌದು, ಅದೂ ಒಂದು ರೀತಿಯ ತೇರಿನ ಮೆರವಣಿಗೆಯೇ. ಅಲ್ಲಿನ ದೇವರು ನೀರು. ಅದು ‘ಜಲತೇರು’ ರಾಜಸ್ಥಾನದ ಒಂದು ಕಾಲದ ತೀವ್ರ ಬರಪೀಡಿತ ಗ್ರಾಮ ಲಾಪೋಡಿಯಾದಲ್ಲಿ ಪುನರ್ ಸ್ಥಾಪನೆಯಾದ ಸಮೃದ್ಧಿಯ ಸೂಚಕವಾಗಿ ಹೊರಟ ತೇರದು. ಸಾಂಸ್ಕೃತಿಕ ಪುನರುಜ್ಜೀವನದ ಪ್ರತೀಕವಾದ ತೇರದು. ಶಾಂತಿ, ಸುಭಿಕ್ಷವನ್ನು ಸಂಕೇತಿಸುವ ತೇರದು.


ಲಕ್ಷ್ಮಣ್ ಸಿಂಗ್ ಅವರ ಪಾಲಿಗೆ ಸಾಂಸ್ಕೃತಿಕ ಪುನರುಜ್ಜೀವನವೆಂದರೆ ಅದು ಕೇವಲ ಭೌತಿಕ ಆಚರಣೆಗಳಲ್ಲ. ಒಂದಿಡೀ ಜೀವನದ ಅವಿಭಾಜ್ಯ ಅಂಗವಾದ ನೀರು ಮತ್ತದರ ಶುದ್ಧತೆ, ಸಮೃದ್ಧಿಯ ಸಂರಕ್ಷಣೆಗೆ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಪಾರಂಪರಿಕ ಭಾರತದಲ್ಲಿ ಪ್ರಕೃತಿಯ ಆರಾಧನೆಯ ಹಿಂದೆ ಇಂಥದ್ದೇ ಉದ್ದೇಶಗಳಿದ್ದವು. ಸಮುದಾಯ ಸ್ವಯಂಪ್ರೇರಿತವಾಗಿ ಆಚರಿಸುವ ಹಬ್ಬಗಳು, ಅದರ ಸಿದ್ಧತೆಯ ನೆಪದಲ್ಲಿ ನಡೆಸುವ ಕೆಲಸಗಳು ಜಲತಾಣಗಳಿಗೆ ಪೂರಕವಾಗಿರುತ್ತಿದ್ದವು. ಅದನ್ನೇ ಹೊಸ ಸಂಪ್ರದಾಯವಾಗಿ ಲಾಪೋಡಿಯಾದಲ್ಲಿ ಚಾಲ್ತಿಗೆ ತರಲಾಯಿತಷ್ಟೇ ಅಲ್ಲ, ಅದಕ್ಕೊಂದಿಷ್ಟು ವೈಭವದ ಮೆರುಗು ಬರುವಂತೆ ನೋಡಿಕೊಳ್ಳಲಾಯಿತು.


ಇಂಥ ಹಬ್ಬಾಚರಣೆಯ ಹಿಂದೆ ಲಕ್ಷ್ಮಣ್ ಗಮನಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ನಿಟ್ಟಿನಲ್ಲಿ ಆ ವರೆಗೆ ಲಾಪೋಡಿಯಾದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಆಚರಣೆಗಳು ನೀರಿನ ಪೋಲು ತಡೆಯುವಲ್ಲಿ ಮತ್ತು ಸುಸ್ಥಿರ ವ್ಯವಸ್ಥಾಪನೆಯಲ್ಲಿ ವಿಫಲವಾಗಿದ್ದವು. ಅವರೇ ಹೇಳುವಂತೆ ‘ಕೃಷಿಯೇತರ ಭೂಮಿಯ ಸದ್ಬಳಕೆ ಹಾಗೂ ಜಲ ಸಂರಕ್ಷಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಈ ನೆಲದ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಸೂಕ್ತ ಅಸ್ತ್ರವಾಗಬಲ್ಲುದು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಏಕೆಂದರೆ ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಕೆಲಸಗಳಿಗೆ ಜನ ಬಹಳ ಶ್ರದ್ಧೆಯಿಂದ ಬರುತ್ತಿದ್ದರು. ಸಂಘಟನಾ ದೃಷ್ಟಿಯಿಂದ ಇದು ಅನುಕೂಲಕಾರಿ ಮಾತ್ರವಲ್ಲ, ನಿರೀಕ್ಷಿತ ಪಾಲ್ಗೊಳ್ಳುವಿಕೆಯೂ ಇಂಥ ಕೆಲಸಗಳಲ್ಲಿ ಹೆಚ್ಚಿರುತ್ತಿದ್ದುದು ಯಶಸ್ಸನ್ನು ಹೆಚ್ಚಿಸುತ್ತಿತ್ತು. ಹೀಗಾಗಿ ಪರಿಸರದ ಪಾವಿತ್ರ್ಯ ಕಾಪಾಡುವ ಭಾರವನ್ನು ದೇವರ ಮೇಲೆಯೇ ಹೊರಿಸಿ ಅದಕ್ಕೊಂದು ಉತ್ಸವದ ಸ್ವರೂಪವನ್ನು ಕೊಡಲಾಯಿತು.’


ಹಾಗೆ ನೋಡಿದರೆ ನಿಸರ್ಗಾರಾಧನೆ ಭಾರತೀಯರಾದ ನಮ್ಮ ಪಾಲಿಗೆ ಹೊಸತೇನೂ ಆಗಿರಲಿಲ್ಲ. ನಿತ್ಯಾಹ್ನಿಕ ಮತ್ತು ವಾರ್ಷಿಕ ಆಚರಣೆಗಳ ಸ್ವರೂಪದಲ್ಲಿ ಜಲತಾಣಗಳನ್ನು ಪೂಜಿಸುವುದು ಲಾಗಾಯ್ತಿನಿಂದಲೂ ನಡೆದುಕೊಂಡೇ ಬಂದಿದೆ. ನೀರೆಂದರೆ ಅದು ಜೀವದಾಯಿ ಎಂಬುದೂ ಇದಕ್ಕೆ ಪ್ರಮುಖ ಕಾರಣ. ಇದನ್ನೇ ಪ್ರೋತ್ಸಾಹಿಸಿದ ಲಾಪೋಡಿಯಾದ ಜಲಯೋಧರ ಪಡೆ, ಅದಕ್ಕೆ ಇನ್ನಷ್ಟು ಒತ್ತು ಕೊಟ್ಟಿತು. ಪರಿಣಾಮ ಪ್ರತಿ ಜಲಾಗಾರದ ಸಮೀಪವೂ ಪುಟ್ಟ ಪುಟ್ಟ ದೇಗುಲಗಳು ಲಾಪೋಡಿಯಾದಲ್ಲಿ ತಲೆ ಎತ್ತಿದವು. ಶಿವ, ದುರ್ಗೆಯರಿಗೆ ಹೆಚ್ಚಿನ ಪ್ರಾತಿನಿಧ್ಯ. ಹೀಗೇಕೆ ಎಂದರೆ ಮತ್ತೆ ಭಾವ ಜಾಗರಣದ ಮಾತುಗಳನ್ನಾಡುತ್ತಾರೆ ಲಕ್ಷ್ಮಣ್‌ಜಿ. ‘ಶಿವ ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವವ. ಅದರಲ್ಲೂ ಪಂಚ ಭೂತಗಳ ಅದೇವತೆ. ಮಾತ್ರವಲ್ಲ ಲಯಕ್ಕೆ ಆತನೇ ಕಾರಣಕರ್ತ. ನೀರಿನ ಪ್ರತಿರೂಪಿ ಗಂಗೆ ಆತನ ಅಡಿಯಾಳು. ಹೀಗಾಗಿ ಜಲತಾಣಗಳಲ್ಲಿ ಶಿವಾರಾಧನೆ ಅರ್ಥಪೂರ್ಣ. ಇನ್ನು ದುರ್ಗೆ ವಿಜಯ ಸ್ವರೂಪಿಣಿ ಎಂಬುದಕ್ಕಿಂತ ಹೆಚ್ಚಾಗಿ ಸ್ತ್ರೀ ಶಕ್ತಿಯ ಪ್ರತೀಕ. ಹೆಣ್ಣಿಗೂ ನೀರಿಗೂ ಅವಿನಾಭಾವ ಸಂಬಂಧ. ಈ ಹಿನ್ನೆಲೆಯಲ್ಲಿ ಶಿವ-ದುರ್ಗೆಯರು ತಾಲಾಬ್‌ಗಳ ಆವರಣದಲ್ಲಿ ಸ್ಥಾನ ಪಡೆದರು’ ಎಂಬುದು ಲಕ್ಷ್ಮಣ್ ವಿವರಣೆ.


ಅಚ್ಚರಿಯ ಸಂಗತಿಯೆಂದರೆ ನೀರ ಸನ್ನಿಯಲ್ಲಿ ಪಾವಿತ್ರ್ಯ, ಸ್ವಚ್ಛತೆ ರಕ್ಷಣೆಗೆ ಇದು ತೀರಾ ಸಹಕಾರಿಯಾಯಿತು. ದೇಗುಲಗಳು ತಲೆ ಎತ್ತಿದ ಮೇಲೆ ನೀರಿನ ಮಾಲಿನ್ಯ ತನ್ನಿಂದ ತಾನೆಯೇ ನಿಯಂತ್ರಣಕ್ಕೆ ಬಂತು ಎನ್ನುವ ಜಲಯೋಧರು ಇದಕ್ಕೆಂದೇ ಪ್ರತೀ ವರ್ಷ ಅದ್ಧೂರಿ ಉತ್ಸವವನ್ನೂ ನಿಗದಿಗೊಳಿಸಿದರು. ಅದು ೧೯೯೦ರ ದೀಪಾವಳಿಯ ಬೆಳಗು. ಊರಿನ ಜೀವ ಸೆಲೆಯೆಂದೇ ಗುರುತಿಸಲಾಗಿದ್ದ ‘ಅನ್ನ ಸಾಗರ’(ಲಾಪೋಡಿಯಾದ ಪ್ರಮುಖ ತಾಲಾಬ್)ದ ಪುನಶ್ಚೇತನ ಕಾರ್ಯ ಆರಂಭಗೊಂಡಿತ್ತು. ಸ್ವಯಂಸೇವಕರ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ನೀರ ಕೆಲಸಕ್ಕೆಂದು ಕರೆದರೆ ಬರುವ ಮನೋಭಾವ ಇನ್ನೂ ಊರ ಮಂದಿಯಲ್ಲಿ ಮೊಳೆತಿರಲಿಲ್ಲ. ವಾರ್ಷಿಕ ಜಲತೇರಿನ ಯೋಜನೆ ಹೊಳೆದದ್ದು ಅದೇ ಸನ್ನಿವೇಶದಲ್ಲಿ. ಪ್ರತೀವರ್ಷ ನವೆಂಬರ್ ಡಿಸೆಂಬರ್‌ನ ಅವಯಲ್ಲಿ ಊರೊಟ್ಟಿನ ಉತ್ಸವ ಪುಟ್ಟದಾಗಿ ನಡೆದುಕೊಂಡು ಬಂದಿತ್ತು. ಅದಕ್ಕೆ ಹೊಸ ಸ್ವರೂಪ ಕೊಡಲು ನಿರ್ಧರಿಸಿದ ಲಕ್ಷ್ಮಣ್‌ಜಿ, ದೀಪಾವಳಿ ಮುಗಿದ ೧೧ನೇ ದಿನ ‘ದೇವ್ನು ಇಗ್ಯಾರಾಸ್’ ಎಂಬ ವಿಶಿಷ್ಟ ಉತ್ಸವವನ್ನು ಆಯೋಜಿಸಲು ನಿರ್ಧರಿಸಿದರು. ಅಂದುಕೊಂಡಂತೆಯೇ ಅದು ಅದ್ಧೂರಿಯಾಗಿ, ಬಹು ವಿಜೃಂಭಣೆಯಿಂದ ಜರುಗಿತು. ಅನ್ನ ಸಾಗರದಿಂದ ಆರಂಭಗೊಂಡ ಉತ್ಸವ ಸುತ್ತಮುತ್ತಲಿನ ಹದಿಮೂರು ನೀರ ತಾಣಗಳನ್ನು ಸಂದರ್ಶಿಸಿ ತೆರೆಕಂಡಿತು. ಮುಂದಿನ ವರ್ಷಗಳಲ್ಲಿ ಅದು ಹೊಸ ಕೆಲಸದ ಆರಂಭದ ದಿನವಾಗಿಯೇ ಗುರುತಿಸಲ್ಪಟ್ಟದ್ದು ವಿಶೇಷ. ಅದರಲ್ಲೂ ವಿಶೇಷವಾಗಿ ಹೂಳೆತ್ತುವುದು, ಕೃಷಿ ಭೂಮಿಯ ಅಭಿವೃದ್ಧಿ ಮತ್ತಿತರ ಮಣ್ಣಿಗೆ ಸಂಬಂಸಿದ ಚಟುವಟಿಕೆಗಳಿಗೆ ಅಂದು ನಾಂದಿ ಹಾಡಿತು. ನಿಗದಿತ ದಿನದಂದು ಊರ ಮಂದಿಯೆಲ್ಲ ಸೇರಿ ದುರ್ಗಾ ಮಾತೆಯ ವಿಗ್ರಹವನ್ನು ಹೊತ್ತು ಪೂರ್ಣಕುಂಭದೊಂದಿಗೆ ಕೃಷಿ ಭೂಮಿಗೆ ಮೆರವಣಿಗೆ ಹೊರಡುತ್ತಾರೆ. ಹಾಗೆ ಹೊರಟ ಮರವಣಿಗೆ ಎಲ್ಲ ಪ್ರಮುಖ ಜಲತಾಣಗಳನ್ನೂ ಸಂದರ್ಶಿಸಿ ಬರುತ್ತದೆ. ನೀರ ಪ್ರೇಮವನ್ನು ಮೂಡಿಸುವುದರೊಂದಿಗೆ ಜಲಜಾಗೃತಿ ಹೆಚ್ಚಿಸುವುದು ಉತ್ಸವದ ಮೂಲ ಉದ್ದೇಶ. ಇಂದಿಗೂ ವರ್ಷದಿಂದ ವರ್ಷಕ್ಕೆ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಲೇ ಈ ಜಲತೇರು ಸಾಗುತ್ತಿದೆ.


ದೀಪಾವಳಿ ಉತ್ಸವವಲ್ಲದೆ ಗಮನ ಸೆಳೆಯುವ ಹಾಗೂ ಪರಿಣಾಮಕಾರಿ ಎನಿಸಿದ ಇನ್ನೊಂದು ಹಬ್ಬ ರಕ್ಷಾಬಂಧನದ್ದು. ಭಾರತೀಯ ಪರಂಪರೆಯಲ್ಲಿ ರಕ್ಷಾಬಂಧನಕ್ಕೆ ಮಹತ್ವದ ಸ್ಥಾನವಿದೆ. ಸೋದರತೆಯ ಪ್ರತೀಕವಾದ ಈ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಗಂಡಸರಿಗೆ ರಾಖಿ ಕಟ್ಟುವ ಸಂಪ್ರದಾಯ ಗೊತ್ತಿದ್ದದ್ದೇ. ಇಲ್ಲಿ ರಾಖಿ ಕಟ್ಟಿಸಿಕೊಂಡವ ಅದನ್ನು ಕಟ್ಟಿದ ಹೆಣ್ಣಿನ ಸೋದರನಾಗಿ ನಿಂತು ಆಕೆಯ ರಕ್ಷಣೆಯ ಎಲ್ಲ ಹೊಣೆಯನ್ನೂ ಅಂದಿನಿಂದ ಹೊರುತ್ತಾನೆ ಎಂಬುದು ನಂಬಿಕೆ. ಮಹಿಳೆಯರೂ ಅಷ್ಟೇ ತಾವು ರಾಖಿ ಕಟ್ಟಿದ ವ್ಯಕ್ತಿಯ ಹಿತರಕ್ಷಣೆಯನ್ನು ಸದಾ ಬಯಸುತ್ತಾರೆ. ಇದನ್ನೇ ಲಾಪೋಡಿಯಾದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆಗೆ ತರಲಾಯಿತು. ಶ್ರಾವಣ ಹುಣ್ಣಿಮೆಯ ದಿನ ಊರಿನ ಎಲ್ಲರೂ ಸೇರಿ ಸುತ್ತಮುತ್ತಲಿನ ಮರಗಿಡಗಳಿಗೆ ರಕ್ಷಾಬಂಧನ ನೆರವೇರಿಸುತ್ತಾರೆ.


ಮರಗಿಡಗಳೆಲ್ಲವೂ ನಮ್ಮ ಸೋದರಿಯರಿದ್ದಂತೆ ಇವೆಲ್ಲವುಗಳ ಸಂರಕ್ಷಣೆಯ ಹೊಣೆಗಾರಿಕೆ ನಮ್ಮದು ಎಂಬ ಪ್ರತಿಜ್ಞೆಯನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ. ಇಲ್ಲಿ ಸ್ತ್ರೀ ಸ್ವರೂಪಿಣಿಯಾದ ಪ್ರಕೃತಿ ಸಹಜವಾಗಿಯೇ ಎಲ್ಲರ ಹಿತರಕ್ಷಣೆಯನ್ನು ಮಾಡುತ್ತದೆ ಎಂಬ ವಿಶಾಲಾರ್ಥವನ್ನು ಗ್ರಹಿಸಲಾಗುತ್ತದೆ. ಅಂದು ಮರಗಳನ್ನು ಹೂವು ಕುಂಕುಮಗಳಿಂದ ಅರ್ಚಿಸಲಾಗುತ್ತದೆ. ಸುಮಾರು ೩೦೦ ಅಡಿ ಉದ್ದದ ಎಳೆಯನ್ನು ರಕ್ಷಾಬಂಧನಕ್ಕಾಗಿಯೇ ಊರಿನ ಎಲ್ಲರೂ ಸೇರಿ ತಯಾರಿಸುತ್ತಾರೆ. ಮಕ್ಕಳು ವೃದ್ಧರು ಎನ್ನದೇ ಈ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಒಟ್ಟಾರೆ ಭಾವನಾತ್ಮಕ ನೆಲೆಯಲ್ಲಿ ಆಚರಣೆಗೆ ಬಂದ ಇಂಥ ಹಬ್ಬ- ಉತ್ಸವಗಳು ಕ್ರಮೇಣ ಜನಜೀವನದ ಭಾಗವಾಯಿತು. ಮಾತ್ರವಲ್ಲ ನೀರೆಚ್ಚರದ, ಪ್ರಕೃತಿ ಸಂರಕ್ಷಣೆಯ ಅರಿವು ಮೂಡಿಸುವ ಅತ್ಯುತ್ತಮ ನೆಲೆಯಾಗಿ ನಿಂತಿತು. ಕಾನೂನು-ಶಿಕ್ಷೆಯಂಥ ಶುಷ್ಕ ಕ್ರಮಗಳಿಗಿಂತ ಊರೊಟ್ಟಿನ ಸಂಭ್ರಮ, ಸಮುದಾಯದ ಉತ್ಸವವಾಗಿ ನಡೆದ ಪರಿಸರ ಸಂರಕ್ಷಣೆಯ ಚಳವಳಿ ಮಾದರಿಯಾಗಿ ನಿಂತಿದೆ. ಭಯಕ್ಕಿಂತಲೂ ಪ್ರೇಮ-ಭಕ್ತಿಗಳೇ ಮೇಲು ಎಂಬುದನ್ನು ಲಕ್ಷ್ಮಣ್‌ಜಿ ಆ ಮೂಲಕ ತೋರಿಸಿಕೊಟ್ಟಿದ್ದಾರೆ. ಭಾವ ಬಂಧುರದೊಂದಿಗೆ ಪ್ರಕೃತಿ ಲಾಪೋಡಿಯಾದಲ್ಲಿಂದು ಆರಾಧನೆಗೊಳಪಡುತ್ತಿದೆ. ಊರು ಸುಭಿಕ್ಷವಾಗಲು ಇನ್ನೇನು ಬೇಕು ?

‘ಲಾಸ್ಟ್’ಡ್ರಾಪ್: ದೀಪಾವಳಿ ಉತ್ಸವ ಆರಂಭವಾದ ಬಳಿಕ ಲಾಪೋಡಿಯಾದಲ್ಲಿ ಕೃಷಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಇಮ್ಮಡಿಸುತ್ತಿದೆ. ಮೊದಲು ೫೦೦ರಿಂದ ೭೦೦ ರೂ. ಇದ್ದ ಕುಟುಂಬದ ಆದಾಯ ೧೯೯೬ರ ವೇಳೆಗೆ ೧೭ ಸಾವಿರವನ್ನು ದಾಟಿತ್ತು.

No comments: